ನಾಳೆ(ನ. 24) ಯುಎಇ ಗಲ್ಫ್ ಬಂಟೋತ್ಸವ: ಡಾ| ಕೆ ಪ್ರಕಾಶ್ ಶೆಟ್ಟಿಯವರಿಗೆ ಬಂಟ ವಿಭೂಷಣ ಪ್ರಶಸ್ತಿ ಪ್ರದಾನ.

103.2K Views 23 Nov 2024

ಯುಎಇ ಬಂಟ್ಸ್ ಆಶ್ರಯದಲ್ಲಿ ಇದೇ ಬರುವ 24 ರಂದು ಭಾನುವಾರ 47 ನೇ ವರ್ಷದ ಬಂಟರ ಸ್ನೇಹ ಸಮ್ಮಿಲನ “ಗಲ್ಫ್ ಬಂಟೋತ್ಸವ” ಆಯೋಜಿಸಲ್ಪಟ್ಟಿದ್ದು, ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ರ ತನಕ ನಡೆಯಲಿರುವ ಕಾರ್ಯಕ್ರಮ ವೈವಿಧ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಗಣ್ಯರಿಂದ ಭಾಷಣ, ಸಭಾ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ, ಮನರಂಜನಾ ಕಾರ್ಯಕ್ರಮ, ನಂತರ ಪ್ರೀತಿ ಭೋಜನ ವ್ಯವಸ್ಥೆ ಮಾಡಲಾಗಿದ್ದು ಅಂದು ಗಲ್ಫ್ ರಾಷ್ಟ್ರಗಳಲ್ಲಿ ನೆಲೆ ನಿಂತ ಬಂಟ ಬಾಂಧವರು ಒಂದು ಕಡೆ ಸಮಾವೇಶಗೊಳ್ಳುವ ಸಂಭ್ರಮಕ್ಕೆ ಸ್ನೇಹ ಸಮ್ಮಿಲನ ಸಾಕ್ಷಿಯಾಗಲಿದೆ.

ಅಲ್ ನಝೀರ್ ಲೀಝರ್ ಲ್ಯಾಂಡ್ ಐಸ್ ಪಾರ್ಕ್ ಇಲ್ಲಿ ನಡೆಯಲಿರುವ ಅದ್ದೂರಿ ಸ್ನೇಹ ಕೂಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮಧ್ಯಂತರ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಎಂ ಆರ್ ಜಿ ಗ್ರೂಪ್ ಬೆಂಗಳೂರು ಇದರ ಫೌಂಡರ್ ಛೇರ್ಮನ್ ಡಾ| ಕೆ ಪ್ರಕಾಶ್ ಶೆಟ್ಟಿ ಅವರಿಗೆ ಗಣ್ಯಾತಿ ಗಣ್ಯ ಆಹ್ವಾನಿತರ ಸಮ್ಮುಖದಲ್ಲಿ ಬಂಟ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಗಲ್ಫ್ ಬಂಟ ಬಾಂಧವರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಸಮಾರಂಭಕ್ಕೆ ಕಳೆಯೇರಿಸಲಿದ್ದು, ಮುಖ್ಯ ಅತಿಥಿಯಾಗಿ ನಟ ಪ್ರಮೋದ್ ಶೆಟ್ಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ, ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆ ನಿರೂಪಣೆಗಳಿಗೆ ವಿಶೇಷ ಆಹ್ವಾನಿತರಾಗಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಡಾ| ಪ್ರಿಯಾ ಹರೀಶ್ ಶೆಟ್ಟಿ ಮತ್ತು ನಿತೀಶ್ ಶೆಟ್ಟಿ ಎಕ್ಕಾರ್ ಅವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಮಸ್ತ ಬಂಟ ಬಾಂಧವರ ಪ್ರೋತ್ಸಾಹ ಹಾಗೂ ಹೆಚ್ಚಿನ ಸಂಖ್ಯೆಯ ಉಪಸ್ಥಿತಿಯನ್ನು ನಿರೀಕ್ಷಿಸಲಾಗಿದೆ ಎಂದು ಯುಎಇ ಬಂಟ್ಸ್ ನ ಅಧ್ಯಕ್ಷ ಸರ್ವೋತ್ತಮ ಶೆಟ್ಟಿಯವರು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿಕೊಂಡಿದ್ದಾರೆ.

Read More News

Scroll to Top