ರಾಜ್ಯದಲ್ಲಿ ವಿಘ್ನ ವಿನಾಯಕನಿಗೆ ವಿಘ್ನ. ಸರಕಾರದ ಕ್ರಮವನ್ನು ಪ್ರಶ್ನಿಸಿ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರಿಂದ ಸುದ್ದಿಗೋಷ್ಠಿ.

118.4K Views 4 Sep 2024

ಮಂಗಳೂರು :1.ರಾಜ್ಯದಲ್ಲಿ ವಿಘ್ನ ವಿನಾಯಕನಿಗೇ ವಿಘ್ನ:- ದೇಶದ ಅತ್ಯಂತ ದೊಡ್ಡ ಹಬ್ಬ ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಇದ್ದು ಮಂಗಳೂರು ನಗರದ ಅನೇಕ ಕಡೆ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಕೋರಲು ಹೋಗಿರುವ ಆಯೋಜಕರಿಗೆ “ನಿಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರ-ಅತಿಥಿಗಳ, ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ನೀಡಬೇಕು. ಭಾಗವಹಿಸುವ ಟ್ಯಾಬ್ಲೋಗಳ ತಂಡ ಯಾವುದು? ಯಾವ ವಾಹನದಲ್ಲಿ ಬರುತ್ತಾರೆ? ಅದರ ದಾಖಲೆ ನೀಡಬೇಕು, ಲೈಸೆನ್ಸ್ ನೀಡಬೇಕು,” ಎಂಬಿತ್ಯಾದಿ ಚಿತ್ರ ವಿಚಿತ್ರ ಅರ್ಥವಿಲ್ಲದ ನೀತಿ ನಿಯಮಗಳನ್ನು ಹೇರುವ ಮೂಲಕ ಗೊಂದಲ ಸೃಷ್ಟಿಸಿ, ಹಿಂದೂ ಬಾಂಧವರು ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಿಸುವುದನ್ನೇ ನಿಲ್ಲಿಸಬೇಕು ಎನ್ನುವ ವ್ಯವಸ್ಥಿತ ಹುನ್ನಾರವನ್ನು ರಾಜ್ಯ ಸರ್ಕಾರ ನಡೆಸುತ್ತಿದೆ. ವಿಘ್ನ ವಿನಾಯಕ ಇಡೀ ಬ್ರಹ್ಮಾಂಡದಲ್ಲೇ ತುಂಬಿಕೊಂಡಿದ್ದಾನೆ. ವೈಯಕ್ತಿಕ, ಸಾರ್ವಜನಿಕ, ಸರ್ಕಾರ ಹೀಗೆ ಯಾವುದೇ ಶುಭ ಕಾರ್ಯಗಳಲ್ಲೂ ಅವನಿಗೇ ಮೊದಲ ಪೂಜೆ. ಅಂತಹ ಪೂಜೆಗೆ ಇನ್ನಿಲ್ಲದ ಅಡೆತಡೆಗಳನ್ನು ಒಡ್ದುವ ಪ್ರಯತ್ನವೇಕೆವೆಂದು ಇಂದು ಸುದ್ದಿಗೋಷ್ಠಿ ಕರೆದ ಮಂಗಳೂರು ದಕ್ಷಿಣದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರು ಸರಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.
ಈ ಕಾಂಗ್ರೆಸ್ಸಿಗರಿಗೆ ಗಣೇಶನ ಮೇಲೆ, ಹಿಂದೂ ಹಬ್ಬಗಳ ಮೇಲೆ ಯಾಕಿಷ್ಟು ಕೋಪ? ಕೂಡಲೇ ಇದನ್ನೆಲ್ಲ ಬಿಟ್ಟು ಹಿಂದೂ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತೇನೆಂದಿದ್ದಾರೆ


2.ನಗರದಲ್ಲಿ ಧಿಡೀರ್ ಸಂಚಾರ ಬದಲಾವಣೆಯಿಂದ ಸಾರ್ವಜನಿಕರ ಪರದಾಟ:- ಯಾವುದೇ ಮಾಹಿತಿ ನೀಡದೇ ನಗರದಲ್ಲಿ ಧಿಡೀರ್ ಸಂಚಾರ ಬದಲಾವಣೆ ಮಾಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದ್ದು ಆಡಳಿತ ವ್ಯವಸ್ಥೆಯ ಏಕಪಕ್ಷೀಯ ನಿರ್ಧಾರದಿಂದ ಆಟೋರಿಕ್ಷಾ ಚಾಲಕರು ಸಹ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಸ್ಸುಗಳು ಸ್ಟೇಟ್ ಬ್ಯಾಂಕ್ ನಿಂದ ಹಂಪನಕಟ್ಟೆಯವರೆಗೆ ಎಲ್ಲಿಯೂ ನಿಲ್ಲಿಸದೇ ಬಲ ಬದಿಯಲ್ಲಿಯೇ ಹೋಗಬೇಕು ಎಂದು ಸೂಚನೆ ನೀಡಿ ಉದ್ದಕ್ಕೂ ಬ್ಯಾರಿಕೇಡ್ ಅಳವಡಿಸಿರುವುದರಿಂದ ಲೇಡಿಗೋಷನ್ ಆಸ್ಪತ್ರೆಯ ಬಳಿ ಇರುವ ಬಸ್ ನಿಲ್ದಾಣ, ಹಾಗೂ ಬಸ್ ಗಳ ಮಧ್ಯದಲ್ಲೇ ಬ್ಯಾರಿಕೇಡ್ ಬಂದಿದೆ!.
ಆದ್ದರಿಂದ ಪ್ರಯಾಣಿಕರು ರಸ್ತೆಯ ಒಂದು ಬದಿಯನ್ನು ಅಪಾಯಕಾರಿಯಾಗಿ ದಾಟಿ ಓಡಿ ಬಂದು ಬ್ಯಾರಿಕೇಡ್ ಸರಿಸಿ ಬಸ್ ಹತ್ತುತ್ತಿರುವ ದೃಶ್ಯ ಪತ್ರಿಕೆಗಳಲ್ಲೂ ವರದಿಯಾಗಿದೆ. ಇಲ್ಲಿ ದುರದೃಷ್ಟವಶಾತ್ ಒಬ್ಬೇ ಒಬ್ಬ ನಾಗರಿಕನ ಅಮೂಲ್ಯ ಜೀವಕ್ಕೆ ಹಾನಿಯಾದರೂ ಅದರ ನೇರ ಹೊಣೆಯನ್ನು ಇಂತಹ ಅವೈಜ್ಞಾನಿಕ ನಿಯಮ ರೂಪಿಸಿದವರೇ ಹೊರಬೇಕೆಂದು ಶಾಸಕರು ಹೇಳಿದ್ದಾರೆ.
“ಜಿಲ್ಲೆಯ ಕಾಂಗ್ರೆಸ್ ನಾಯಕರ ಒತ್ತಡ, ಸಚಿವರ ಮೌಖಿಕ ಆದೇಶವೆಂದು” ಏಕಾಏಕಿ ವಾಸ್ತವವನ್ನೇ ಅರಿಯದೇ ಸಂಚಾರ ಬದಲಾವಣೆ ಮಾಡುವ ಮೊದಲು ಕ್ಷೇತ್ರದ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯುವ ಸೌಜನ್ಯವೂ ಇಲ್ಲವೇ? ಹಲವಾರು ಕಡೆಗಳಲ್ಲಿ ಯೂ-ಟರ್ನ್‌, ಡಿವೈಡರ್‌ ಬಂದ್‌ ಮಾಡಲಾಗಿದೆ. ನಮಗಂತೂ ಈ ಬಗ್ಗೆ ಯಾವುದೇ ಮಾಹಿತಿಯೇ ಇಲ್ಲ. ಕೊನೆಪಕ್ಷ ದಿನನಿತ್ಯ ಇಲ್ಲೇ ಸಂಚರಿಸುವ ಸಾರ್ವಜನಿಕರಿಗಾದರೂ ತಿಳಿಸಬೇಡವೇ? ವೆಂಬುದು ಶಾಸಕರ ಪ್ರಶ್ನೆಯಾಗಿದೆ.
3.ಅಕ್ರಮವಾಗಿ ಹಂಪನಕಟ್ಟೆ ವಿ.ವಿ. ಕಾಲೇಜು ಮುಂಭಾಗದ ಬಸ್ ನಿಲ್ದಾಣ ತೆರವು:- ಹಂಪನಕಟ್ಟೆಯ ವಿ.ವಿ. ಕಾಲೇಜು ಮುಂಭಾಗದಲ್ಲಿದ್ದ ಬಸ್ ನಿಲ್ದಾಣವನ್ನು ಕೇವಲ ಒಬ್ಬ ವ್ಯಕ್ತಿಯ ಅಂಗಡಿಯ ವ್ಯಾಪಾರದ ಉದ್ದೇಶಕ್ಕಾಗಿ ಯಾರಿಗೂ ಮಾಹಿತಿ ನೀಡದೇ ರಾತೋರಾತ್ರಿ ತೆರವು ಮಾಡಿದ ಪರಿಣಾಮ ಕಾಲೇಜು ವಿದ್ಯಾರ್ಥಿಗಳು, ವೆನ್ಲಾಕ್ ಆಸ್ಪತ್ರೆಗೆ ಬರುವವರು ಸೇರಿದಂತೆ ಸಾವಿರಾರು ಜನರು ಬಿಸಿಲು, ಮಳೆಯಲ್ಲಿ ನಿಲ್ಲುವಂತಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲೂ ಕೂಡಾ ಜಿಲ್ಲೆಯ ಕಾಂಗ್ರೆಸ್ ನಾಯಕರ ಒತ್ತಡ, ಸಚಿವ ದಿನೇಶ್‌ ಗುಂಡೂರಾವ್‌ ರವರ ಮೌಖಿಕ ಆದೇಶವೆನ್ನುವ ಮಾತು ಕೇಳಿ ಬಂದಿದೆ. ಹಾಗಾದರೆ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಪ್ರತಿಯೊಂದು ಅವ್ಯವಸ್ಥೆಗೂ ಅವರುಗಳೇ ನೇರ ಹೊಣೆ. ಕೂಡಲೇ ಜನಾಭಿಪ್ರಾಯದಂತೆ ಅದೇ ಜಾಗದಲ್ಲಿ ಮತ್ತೆ ಬಸ್ ನಿಲ್ದಾಣ ಮರು ನಿರ್ಮಾಣವಾಗಬೇಕು ಎಂದು ಆಗ್ರಹಿಸುತ್ತೇನೆಂದಿದ್ದಾರೆ
4.ಸರ್ಕಾರದ ಆದೇಶದಿಂದ ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ:- ರಾಜ್ಯ ಸರ್ಕಾರವು ಮಾರ್ಗಸೂಚಿ ದರವನ್ನು ಅವೈಜ್ಞಾನಿಕವಾಗಿ ಹೆಚ್ಚಿಸಿದ ಪರಿಣಾಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು ಇದು ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಬಗ್ಗೆ ನಗರ ವಾಸಿಗಳಲ್ಲಿ ನಕಾರಾತ್ಮಕ ಭಾವನೆ ಮೂಡಿಸುವ ಪ್ರಯತ್ನವಾಗಿದೆ. ಈ ಹಿಂದೆ ರಾಜ್ಯದಲ್ಲಿ ನಮ್ಮ ಆಡಳಿತದ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯ ನೀರಿನ ಶುಲ್ಕವನ್ನು ಇಳಿಸುವ ಮೂಲಕ ಜನಪರ ಆಡಳಿತ ನೀಡಲಾಗಿತ್ತು. ಈಗ ಕಾಂಗ್ರೆಸ್‌ ಸರ್ಕಾರವಿದ್ದು ಆಸ್ತಿ ತೆರಿಗೆ ಹೆಚ್ಚಳದ ಆದೇಶವನ್ನು ಕೂಡಲೇ ಹಿಂಪಡೆದು ನಗರದ ಜನಸಾಮಾನ್ಯರಿಗೆ ಹೊರೆಯಾಗುವುದನ್ನು ತಪ್ಪಿಸಿ ನ್ಯಾಯ ಕೊಡಿಸುವಂತಹ ಕೆಲಸ ಮಾಡಲಿ. ಅದು ಬಿಟ್ಟು ಅವರಿವರ ಮೇಲೆ ಆರೋಪ ಹಾಕುತ್ತಾ ಕಾಲಹರಣ ಮಾಡುವುದಲ್ಲ. ಮೊದಲೇ ಮಂಗಳೂರಿಗೆ ಸರ್ಕಾರದಿಂದ ಇದುವರೆಗೆ ಬಿಡಿಗಾಸು ಅನುದಾನವೂ ಬಂದಿಲ್ಲ. ಅಭಿವೃದ್ಧಿಯಂತೂ ಇಲ್ಲವೇ ಇಲ್ಲ. ಅದರ ನಡುವೆ ಈ ಆಸ್ತಿ ತೆರಿಗೆ ಏರಿಕೆ ಯಾವ ಪುರುಷಾರ್ಥಕ್ಕಾಗಿ?ವೆಂದು ಶಾಸಕರು ಕೇಳಿದ್ದಾರೆ.
5.ಬಂದರು ಇಲಾಖೆಯಲ್ಲಿನ ಸರ್ಕಾರಿ ಜಾಗದ ಲೀಸ್ ಹಾಗೂ ಬಾಡಿಗೆ ದರವನ್ನು ಕೂಡಲೇ ಇಳಿಸಿ:-
ರಾಜ್ಯದ ಬಂದರು ಇಲಾಖೆಯಲ್ಲಿನ ಸರ್ಕಾರಿ ಜಾಗವನ್ನು ಹಲವಾರು ವರ್ಷಗಳಿಂದ ನಿಗದಿತ ದರದಲ್ಲಿ ಬಾಡಿಗೆಗೆ ಹಾಗೂ ಲೀಸ್ ಗೆ ನೀಡಲಾಗಿದೆ. ಇದೀಗ ಆ ದರವು ಹೆಚ್ಚಾಗಿದ್ದು ಈ ಕೂಡಲೇ ಕಡಿಮೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆಂದು ಶಾಸಕರು ತಿಳಿಸಿದ್ದಾರೆ.
ಅಂತಿಮವಾಗಿ, ನಗರದಲ್ಲಿ ಈಗಾಗಲೇ ಟ್ರಾಫಿಕ್‌ ಸಮಸ್ಯೆ ಮಿತಿ ಮೀರಿದ್ದು ಅದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾಡಳಿತ-ಪೊಲೀಸ್‌ ಇಲಾಖೆ,-ಕ್ಷೇತ್ರದ ಜನಪ್ರತಿನಿಧಿಗಳು-ಸ್ಥಳೀಯರನ್ನೊಳಗೊಂಡಂತೆ ಸಂಚಾರ ಬದಲಾವಣೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಿ. ಅದು ಬಿಟ್ಟು ಏಕಪಕ್ಷೀಯವಾಗಿ, ಅವೈಜ್ಞಾನಿಕ ನಿರ್ಧಾರ ಕೈಗೊಂಡು ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಬಿಡಲಿ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಸಂಜಯ್ ಪ್ರಭು, ಪ್ರಮುಖರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್ ಉಪಸ್ಥಿತರಿದ್ದರು.

Read More News

Scroll to Top