ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪಾಜಕಕ್ಷೇತ್ರಕ್ಕೆ ಬರುವ ರಸ್ತೆಯನ್ನು ತಕ್ಷಣ ಸರಿಪಡಿಸುವ ಬಗ್ಗೆ ಉಡುಪಿ ಡಿಸಿಯವರಿಗೆ ಸಾರ್ವಜನಿಕರ ಮನವಿ.

104.5K Views 27 Jun 2024

ಉಡುಪಿ :ಉಡುಪಿ ಜಿಲ್ಲೆಯ ಪಾಜಕ ಕ್ಷೇತ್ರ ಪ್ರೇಕ್ಷಣೀಯ ಸ್ಥಳ ಮತ್ತು ಇತಿಹಾಸ ಪ್ರಸಿದ್ಧ ಶ್ರೀಮನ್ ಮಧ್ವಾಚಾರ್ಯರ ಜನ್ಮಸ್ಥಳವಾಗಿದೆ. ಅನಂತ ಪದ್ಮನಾಭ ದೇವರ ಸನ್ನಿಧಿ ಇರುವ ಪಾಜಕಕ್ಷೇತ್ರಕ್ಕೆ ದೇವರ ದರ್ಶನ ಮಾಡಲು ದೇಶದ ಹಲವೆಡೆಯಿಂದ, ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಬಸ್ಸು , ಟೆಂಪೋ, ಕಾರುಗಳಲ್ಲಿ ದಿನ ನಿತ್ಯ ಆಗಮಿಸುತ್ತಿದ್ದಾರೆ. ಅಲ್ಲದೆ, ಪೇಜಾವರ ಮಠದ ವತಿಯಿಂದ ಆನಂದ ತೀರ್ಥ ವಿದ್ಯಾ ಸಂಸ್ಥೆ ಸಹ ಕಾರ್ಯ ನಿರ್ವಹಿಸುತ್ತಿದೆ. ಈ ರಸ್ತೆಯಲ್ಲಿ ದಿನಕ್ಕೆ ಕನಿಷ್ಠ ಪಕ್ಷ 50ರಿಂದ 70ರಷ್ಟು ಬೃಹತ್ ಮತ್ತು ಮಧ್ಯಮ ಗಾತ್ರದ ವಾಹನಗಳು ಸಂಚರಿಸುತ್ತವೆ. ಇದೀಗ ಸಮಸ್ಯೆ ಏನೆಂದರೆ, ಕಾಪು ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇರುವ ಕಾರಣ, ಬೆಳ್ಳೆಯ ನದಿಯಿಂದ ನೀರನ್ನು ಕುಂಜಾರುಗಿರಿ ದೇವಸ್ಥಾನದ ಬಳಿ ಬೃಹತ್ ಟ್ಯಾಂಕ್ ನಿರ್ಮಿಸಿಕೊಂಡು, ಅಲ್ಲಿಂದ ನೀರನ್ನು ಕಾಪು ಗೆ ಪಂಪ್ ಮಾಡುವ ವ್ಯವಸ್ಥೆಯ ಕಾಮಗಾರಿ ಹಲವು ಸಮಯದಿಂದ ನಡೆಯುತ್ತಿದೆ. ಹಿಂದೊಮ್ಮೆ ರಸ್ತೆ ಅಗೆದು ಪೈಪ್ ಲೈನ್ ಹಾಕಿದ್ದು, ಇದೀಗ ಮತ್ತೊಮ್ಮೆ ಡಾಮರೀಕರಣಗೊಂಡ ರಸ್ತೆ ಅಗೆದು ಪೈಪ್ ಲೈನ್ ಹಾಕುವ ಕಾರ್ಯ ನಡೆದಿದೆ.ಆದರೆ,ಮಾರ್ಗದ ಮಧ್ಯೆ ಅಗೆದು ಪೈಪ್ ಲೈನ್ ಹಾಕುವ ಕಾಮಗಾರಿ ಮುಗಿದಿದ್ದರೂ, ಕಾಮಗಾರಿ ನಡೆಸಿದ ಗುತ್ತಿಗೆದಾರರು ರಸ್ತೆ ಅಗೆದ ನಂತರ ಅದನ್ನು ಪುನಃ ಸರಿ ಪಡಿಸುವ ಗೋಜಿಗೆ ಹೋಗಲಿಲ್ಲ. ಈ ರಸ್ತೆಯಲ್ಲಿ ಪ್ರತಿನಿತ್ಯ ಹಲವಾರು ವಾಹನಗಳು ಸಂಚರಿಸುತ್ತಿದ್ದು,ಪ್ರಸಕ್ತ ಅಡ್ಡಾದಿಡ್ಡಿ ರಸ್ತೆ ಅಗೆತದಿಂದ ದಿನಂಪ್ರತಿ ಎನ್ನುವಂತೆ ಅಪಘಾತಗಳು ಸಂಭವಿಸುತ್ತಿದೆ. ಯಾತ್ರಾರ್ಥಿಗಳು ದೂರದ ಊರುಗಳಿಂದ ಬರುತ್ತಿರುವ ಕಾರಣ ,ಅಪಘಾತ ನಡೆದರೂ ಪೊಲೀಸರಿಗೆ ಮಾಹಿತಿ ನೀಡದೆ ರಾಜಿ ಪಂಚಾಯಿತಿ ಮೂಲಕ ಪ್ರಕರಣವನ್ನು ಮುಗಿಸಿ ಹೋಗುತ್ತಿದ್ದಾರೆ. ರಸ್ತೆ ರಿಪೇರಿ ನಡೆಸುವ ಬಗ್ಗೆ ಸ್ಥಳೀಯ ಗುತ್ತಿಗೆದಾರರ ಬಳಿ ವಿಚಾರಿಸಿದರೆ, ಅದು ಪಂಚಾಯತ್ ನವರ ಕೆಲಸ ಅಂತ ಹೇಳಿ ನುಣುಚಿಕೊಳ್ಳುತ್ತಾರೆ.ಅಲ್ಲದೆ,ಅಪಘಾತ ನಡೆದ ಸಂದರ್ಭ ಯಾತ್ರಿಕರ ಬಳಿ ಸಹ ಉಡಾಫೆ ಹೇಳಿಕೆ ನೀಡುತ್ತಾರೆ. ಸದ್ರಿ ವಿಷಯಕ್ಕೆ ಸಂಬಂದ ಪಟ್ಟಂತೆ ದಯಾಳುಗಳಾದ ತಾವು ಒಮ್ಮೆ ಗಮನ ಹರಿಸಿ ಸುಭಾಸ್ ನಗರದಿಂದ ಪಾಜಕಕ್ಷೇತ್ರ ಕ್ಕೆ ಹೋಗುವ ರಸ್ತೆಯನ್ನು ಸರಿಪಡಿಸಿ ಕೊಡಬೇಕೆಂದು ಸರ್ವ ನಾಗರಿಕರ ಪರವಾಗಿ ಕೇಳಿಕೊಳ್ಳುತ್ತೇವೆ. ಪೇಜಾವರ ಮಠದ ಆನಂದ ತೀರ್ಥ ವಿಧ್ಯಾಲಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಓದುತಿದ್ದಾರೆ. ಹಾಗಾಗಿ ಇಲ್ಲಿ ಏನಾದರೂ ಅವಘಡ ಸಂಭವಿಸಿದರೆ ಇಡೀ ಊರಿಗೆ ಕಳಂಕ ಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಗಮನ ಹರಿಸಿ ತಕ್ಷಣ ರಸ್ತೆಯನ್ನು ಸರಿಪಡಿಸಿ ಕೊಡಬೇಕೆಂದು ಕೇಳಿ ಕೊಳ್ಳುತ್ತೇವೆಂದು ಸಾರ್ವಜನಿಕರು ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

Read More News

Scroll to Top