ಪ್ರಧಾನಿ ಮೋದಿ ಪ್ರಮಾಣ ವಚನ ದಿವಸ ಬೊಳಿಯಾರಿನಲ್ಲಿ ನಡೆದ ವಿಜಯೋತ್ಸವದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ ಮೇಲಿನ ಮಾರಣಾoತಿಕ ಹಲ್ಲೆ ಖಂಡಿಸಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ ಸುದ್ದಿ ಗೋಷ್ಠಿ. ಹಲ್ಲೆ ನಡೆಸಿದವರ ವಿರುದ್ದ ಸೂಕ್ತ ಕ್ರಮ ಮತ್ತು ಹಲ್ಲೆ ಗೊಳಗಾದವರ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡುವಂತೆ ರಾಜ್ಯ ಸರಕಾರಕ್ಕೆ ಒತ್ತಾಯ.

118.3K Views 11 Jun 2024

ಮಂಗಳೂರು : ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಿನ ಬೊಳಿಯಾರಿನಲ್ಲಿ ನಡೆದ ವಿಜಯೋತ್ಸವದಲ್ಲಿ ಭಾಗವಹಿಸಿದ ಇಬ್ಬರು ಬಿಜೆಪಿ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ತುಘಲಕ್ ಆಡಳಿತ ನಡೆಯುತ್ತಿದೆಯೇ ಎಂಬ ಅನುಮಾನ ಹುಟ್ಟುತ್ತಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದರು.
ನಗರದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಹಲ್ಲೆಗೊಳಗಾದ ಹರೀಶ್ ಮತ್ತು ನಂದಕುಮಾರ್ ಮಸೀದಿ ಬಳಿ ಭಾರತ್ ಮಾತೆಗೆ ಜೈಕಾರ ಹಾಕಿದ್ದ ಒಂದೇ ಕಾರಣಕ್ಕೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ದೇಶದಲ್ಲಿ ಭಾರತ್ ಮಾತಾಕಿ ಜೈ ಹೇಳುವುದು ಅಪರಾಧವೇ? ಮುಖ್ಯಮಂತ್ರಿಯವರು, ಗೃಹಸಚಿವರು ಉತ್ತರಿಸಬೇಕು? ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮತಾಂಧ ಶಕ್ತಿಗಳ ವರ್ತನೆ ಅತಿರೇಕಕ್ಕೆ ಹೋಗಿದೆ. ಈ ಪ್ರಕರಣದ ಹಿಂದಿರುವ ಎಲ್ಲ ದುಷ್ಟಶಕ್ತಿಗಳನ್ನು ಪತ್ತೆಹಚ್ಚಿ ಬಂಧಿಸಬೇಕು. ಗಾಯಗೊಂಡವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದರು.
ಬಿಜೆಪಿ ವಿಜಯೋತ್ಸವ ಸಂದರ್ಭ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದು, ಅಲ್ಲಿರುವ ಯುವಕರು ಈ ಘಟನೆಯಲ್ಲಿ ಶಾಮೀಲಾಗಿದ್ದರೆಂದು ಹೇಳಲಾಗುತ್ತಿದೆ. ಹಾಗಾದರೆ ಪ್ರಾರ್ಥನೆಗೆ ಬಂದವರಿಗೆ ಚೂರಿ ಸಿಕ್ಕಿದಾದರೂ ಹೇಗೆ? ಎಲ್ಲಿಂದ ಬಂತು ಈ ಮಾರಕಾಸ್ತ್ರಗಳು?ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರ ದಾಳಿ, ರಸ್ತೆಯಲ್ಲೇ ನಮಾಜು, ಭಾರತ ಮಾತೆಗೆ ಜೈಕಾರ ಹಾಕುವವರ ಮೇಲೆ ಕೇಸು ಹಾಕಲಾಗುತ್ತದೆ. ಹಾಗಾದರೆ ನಾವು ಎಲ್ಲಿದ್ದೇವೆ ಎಂಬ ಅನುಮಾನ ಬರುತ್ತಿದೆ. ಕೂಡಲೇ ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಹಾಗೂ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕು ಎಂದರು.
ಈ ಸಂದರ್ಭ ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು.

ಚಿತ್ರ : ಸತೀಶ್ ಕಾಪಿಕಾಡ್

Read More News

Scroll to Top