ವಿಶೇಷ ಲೇಖನ: ಡಾ. ಅಶೋಕ್ ಶೆಟ್ಟಿ. ಬಿ. ಎನ್. ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ ಪ್ರಧಾನ ಕಾರ‍್ಯದರ್ಶಿಯಾಗಿ ಶ್ಲಾಘನೀಯ ಸೇವೆ ಸಲ್ಲಿಸಿದ್ದ, ಹಿರಿಯ, ಅನುಭವೀ ಮುಖಂಡ, ಯಶಸ್ವೀ ಸಂಘಟಕ ವಸಂತ ಶೆಟ್ಟಿಯವರು ಜೆಪ್ಪು ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಬಂಟ ಸಮಾಜಕ್ಕೆ ಸಂತಸದ ಸಂಗತಿಯಾಗಿದೆ.

ಮಾಲಾಡಿ ಅಜಿತ್ ಕುಮಾರ್ ರೈಯವರು ಅಧ್ಯಕ್ಷರಾಗಿರುವ ಪ್ರತಿಷ್ಠಿತ ಬಂಟರ ಯಾನೆ ನಾಡವರ ಮಾತೃ ಸಂಘದಲ್ಲಿ 2016 ರಿಂದ 2019ರವರೆಗೆ ಪ್ರಧಾನ ಕಾರ‍್ಯದರ್ಶಿಯಾಗಿ ಬಂಟ ಸಮಾಜದ ಶ್ರೇಯೋಭಿವೃದ್ಧಿಗಾಗಿ ದುಡಿದಿದ್ದ ವಸಂತ ಶೆಟ್ಟಿಯವರು ಬಂಟ ಸಮಾಜದ ಹೆಮ್ಮೆಯ ಸುಪುತ್ರರಾಗಿದ್ದಾರೆ.
ಸಮಾಜಸೇವಕರಾಗಿ, ಸಂಘಟಕರಾಗಿ ಇವರ ಸೇವೆ ಅನನ್ಯ. ಪರರ ಕಷ್ಟಗಳಿಗೆ ಸದಾ ಸ್ಪಂದಿಸುವ ಇವರು ನಿಸ್ವಾರ್ಥಿ ಮತ್ತು ನೇರ ನಡೆನುಡಿಯ ಬಂಟನಾಯಕರಾಗಿದ್ದಾರೆ.
ಎಲ್ಲೂರು ಮಾಣೇರು ದಿ. ಬಾಬು ಶೆಟ್ಟಿ ಮತ್ತು ಕಾಪು ಕಲ್ಯ ದೇವಸ್ಯ ಗೋಪಿ ಶೆಟ್ಟಿಯವರ ಮಗನಾಗಿ ನವೆಂಬರ್ 26,, 1956 ರಲ್ಲಿ ಜನಿಸಿದ ವಸಂತ ಶೆಟ್ಟಿಯವರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಅದಮಾರಿನಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ಶಿಕ್ಷಣವನ್ನು ಓದಿದರು.

ಮುಲ್ಕಿ ವಿಜಯ ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನು ಪಡೆದ ಅವರು ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಪಡೆದರು.
ತದನಂತರ, ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಎಕೌಂಟ್ಸ್ ಆಫ್ ಇಂಡಿಯಾದಲ್ಲಿ ಮೂರು ವರ್ಷದ ಆರ್ಟಿಕಲ್ ಶಿಪ್ ಪೂರೈಸಿ ಎರಡು ವರ್ಷಗಳ ಕಾಲ ಎರ್ಮಾಳ್ ಪಡುಬಿದ್ರಿ, ಮೂಲ್ಕಿ ಸರಕಾರಿ ಜ್ಯೂನಿಯರ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗಳಲ್ಲಿ ವಿವಿಧ ಮಹತ್ವದ ಹುದ್ದೆಗಳನ್ನು ಅಲಂಕರಿಸಿ ಅಧಿಕಾರಿಯಾಗಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ವ್ಯವಸ್ಥಾಪಕರಾಗಿ ಪದೋನ್ನತಿ ಹೊಂದಿ, ಬಳಿಕ ನಿವೃತ್ತರಾಗಿದ್ದಾರೆ.
ಲಯನ್ಸ್ ಇಂಟರ್‌ನ್ಯಾಷನಲ್, 317-ಸಿ.ಯ ಲಯನ್ಸ್ ಕ್ಲಬ್ ಮುದರಂಗಡಿಯ ಅಧ್ಯಕ್ಷರಾಗಿ 317 ಸಿ.ಯ ವಲಯಾಧ್ಯಕ್ಷರಾಗಿ, ಸಂಪುಟ ಸದಸ್ಯರಾಗಿ ಎಂಜೆಎಫ್ ಮತ್ತು ಪಿಎಮ್‌ಜೆಎಫ್ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದು.
ಇದಕ್ಕೆ ಮೊದಲು ಪಡುಬಿದ್ರೆ ಜ್ಯೂನಿಯರ್ ಚೇಂಬರ್ ಆಫ್ ಇಂಟರ್‌ನ್ಯಾಷನಲ್ ಪಡುಬಿದ್ರಿ ಕ್ಲಬ್‌ನ ಅಧ್ಯಕ್ಷರಾಗಿ ಜನಪರ, ಸಮಾಜಮುಖಿ ಸೇವೆ ಗೈದ ಸಾಧನೆ, ಹಿರಿಮೆ ಇವರಿಗೆ ಸಲ್ಲುತ್ತದೆ.

ಪ್ರಸ್ತುತ, ಬಂಟರ ಯಾನೆ ನಾಡವರ ಮಾತೃ ಸಂಘದಲ್ಲಿ ಕಾರ‍್ಯಕಾರಿ ಸಮಿತಿ ಸದಸ್ಯರಾಗಿ ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿ ಸಂಚಾಲಕರಾಗಿ ಜವಾಬ್ದಾರಿ ಹೊತ್ತಿರುವ ಜೊತೆಗೆ, ಜೆಪ್ಪು ಬಂಟರ ಸಂಘದ ಅಧ್ಯಕ್ಷರಾಗಿ ಸದ್ರಿ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಮಾದರಿ ಬಂಟರ ಸಂಘವಾಗಿ ಮುನ್ನಡೆಸುವ ಹೊಣೆಗಾರಿಕೆ ಹೊತ್ತಿದ್ದಾರೆ.
ನಂದಿಗುಡ್ಡೆ ಸ್ಮಶಾನದ ಅಭಿವೃದ್ಧಿಗಾಗಿ ಶ್ರಮಿಸಿರುವ ಇವರು ಹಿಂದೂ ರುದ್ರಭೂಮಿ ಸಂರಕ್ಷಣಾ ವೇದಿಕೆ (ರಿ)ಯ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಜೊತೆಗೆ, ಹಿಂದೂ ಜಾಗರಣಾ ವೇದಿಕೆ ಮಂಗಳೂರು ಘಟಕದ ಗೌರವ ಅಧ್ಯಕ್ಷರಾಗಿದ್ದಾರೆ.
ಮಂಗಳಾದೇವಿ ಮತ್ತು ಬೋಳಾರ ಘಟಕದ ಶನಿ ಪೂಜಾ ಸಮಿತಿಯ ಗೌರವ ಅಧ್ಯಕ್ಷರಾಗಿ, ಮಂಗಳೂರು ಬೋಳಾರ ಹಳೇಕೋಟೆ, ಮುಖ್ಯಪ್ರಾಣ ದೇವಸ್ಥಾನದ ಆಡಳಿತ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಎಲ್ಲೂರು ಯುವಕ ಮಂಡಲ, ರಾಮಕೃಷ್ಣ ವಿದ್ಯಾಸಂಸ್ಥೆಯಲ್ಲಿ ಸಕ್ರಿಯರಾಗಿರುವ ಇವರು ಮಂಗಳೂರಿನ ಜಯಾಂಬಿಕಾ ಚಿಟ್ ಪ್ರೈ.ಲಿ.ನ ಆಡಳಿತ ನಿರ್ದೇಶಕರಾಗಿದ್ದಾರೆ.

ಇವರ ಧರ್ಮಪತ್ನಿ ಶ್ರೀಮತಿ ಶಾಂತಾ ವಿ.ಶೆಟ್ಟಿ, ಸುಪುತ್ರಿ ಆಶ್ರಯ, ಸುಪುತ್ರ ಸಿ.ಎ. ಅಕ್ಷಯ ಶೆಟ್ಟಿ.
ಇವರ ಮಗಳು ಆಶ್ರಯ ಅವರು ಇಂಟೆಲ್ ಸಾಫ್ಟ್ವೇರ್ ಕಂಪೆನಿಯಲ್ಲಿ ಕರ್ತವ್ಯದಲ್ಲಿದ್ದು, ಅಳಿಯ ಚಿರಾಗ್ ಜಿ. ಶೆಟ್ಟಿಯವರು ಅಮೇರಿಕಾದ ಆಲ್ ಸ್ಟೇಟ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ವಸಂತ್ ಶೆಟ್ಟಿಯವರ ಮೊಮ್ಮಗ ಧ್ರುವ ಶೆಟ್ಟಿ. ಮಗ ಅಕ್ಷಯ ಶೆಟ್ಟಿಯವರು ಸಿ.ಎ. ಆಗಿದ್ದು,ಲೆಕ್ಕ ಪರಿಶೋಧಕರಾಗಿ ಕಾಮತ್ & ರಾವ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಸೊಸೆ ಡಾ. ಪವಿತ್ರಾ ಅಕ್ಷಯ ಶೆಟ್ಟಿಯವರು ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ನಲ್ಲಿ ಉನ್ನತ ವೈದ್ಯಕಿಯ ಶಿಕ್ಷಣ ಪಡೆಯುತ್ತಿದ್ದಾರೆ.
ಬಂಟ ಸಮಾಜ ಕಂಡಿರುವ ಅಪೂರ್ವ ಸಮಾಜಸೇವಕ ವಸಂತ ಶೆಟ್ಟಿಯವರು ಬಂಟ ಸಮಾಜದ ಅಮೂಲ್ಯ ಬಂಟ ರತ್ನರಾಗಿದ್ದಾರೆ ಎಂಬುವುದು ಜನಮಾನಸದಲ್ಲಿ ಕೇಳಿಬರುತ್ತಿರುವ ಸುದ್ಧಿ. 47 ವರ್ಷಗಳ ಇತಿಹಾಸ ಹೊಂದಿರುವ ಜೆಪ್ಪು ಬಂಟರ ಸಂಘವು ಇವರ ಅಧ್ಯಕ್ಷತೆಯ ಅಧಿಕಾರ ಅವಧಿಯಲ್ಲಿ ಮಾದರಿ ಬಂಟರ ಸಂಘವಾಗಿ ರೂಪುಗೊಳ್ಳಲಿಲೆಂದು Mp mla’s ನ್ಯೂಸ್ ಶುಭ ಹಾರೈಸುತ್ತದೆ



























































































































































































