ಮಂಗಳೂರು, ಫೆ, 26 : ಶ್ರೀ ಭದ್ರಕಾಳಿ ದೇವಸ್ಥಾನ ಕದ್ರಿ ಪದವು ಇಲ್ಲಿನ ಭದ್ರಕಾಳಿ ಅಮ್ಮನ ಗುಡಿಯ ಪುನ: ಪ್ರತಿಷ್ಠೆ ಅಷ್ಟ ಬಂಧ ಬ್ರಹ್ಮಕಲಶೋತ್ಸವವು ಫೆಬ್ರವರಿ ತಿಂಗಳ 28/02/2024 ಬುಧವಾರದಿಂದ ಆರಂಭ ಗೊಂಡು 01/03/2024 ಶುಕ್ರವಾರದವರೆಗೆ ಕದ್ರಿ ಯೋಗೀಶ್ವರ ಮಠಾಧಿಪತಿ ಶ್ರೀ. ಶ್ರೀ.ಶ್ರೀ. ರಾಜ ನಿರ್ಮಲ್ನಾಥ್ ಜಿ ಯವರ ಉಪಸ್ಥಿತಿಯೊಂದಿಗೆ ಶ್ರೀ.ಭದ್ರಕಾಳಿ ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ ಶ್ರೀ ಉಮೇಶ್ ನಾಥ್ ಜಿ ಯವರ ನಿರ್ದೇಶನದಂತೆ ಅಘೋರ ತಾಂತ್ರಿಕ್ ಬ್ರಹ್ಮಶ್ರೀ ದೇರೆಬೈಲ್ ವಿಠಲ ದಾಸ್ ತಂತ್ರಿ ಯವರ ಧಾರ್ಮಿಕ ವಿಧಿ ವಿಧಾನಗಳ ನಿಯಮಾನುಸಾರ ನೆರವೇರಲಿದೆ.
ಕರಾವಳಿ ಜಿಲ್ಲೆಯಲ್ಲಿರುವ ಪುರಾತನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ.ಭದ್ರಕಾಳಿ ದೇವಸ್ಥಾನ ನಾಥ ಸಂಪ್ರದಾಯದ ಕದ್ರಿ ಯೋಗೀಶ್ವರ ಮಠಾಧಿಪತಿಗಳಿಂದ ಪೂಜೆಗೊಳಪಟ್ಟು ಗತದ ಪರಂಪರೆಯ ಪ್ರಭಾವವನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಇಲ್ಲಿನ ವಿಶೇಷತೆ.



ಭದ್ರಕಾಳಿ ಸಾನಿಧ್ಯದ ಹಿನ್ನಲೆ
ವರದಹಳ್ಳಿಯ ಮಹಾನ್ ಸಂತ ಶ್ರೀ.ಶ್ರೀಧರ ಸ್ವಾಮೀಜಿಗಳು ದಟ್ಟ ಕಾಡಿನಿಂದ ಆವ್ರತವಾಗಿರುವ ಈ ಭಾಗದಲ್ಲಿ ತಮ್ಮ ಭಕ್ತರೊಂದಿಗೆ ಸಂಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಇಲ್ಲೊಂದು ಅಗೋಚರ ಶಕ್ತಿಯು ನೆಲೆ ನಿಂತಿರುವ ಬಗ್ಗೆ ತನ್ನ ತಪೋಶಕ್ತಿಯಿಂದ ಅರಿತುಕೊಳ್ಳುತ್ತಾರೆ.ಮುಂದೆ ಅವರು ಇದೇ ಸ್ಥಳದಲ್ಲಿ ತನ್ನ ಶಿಷ್ಯ ವೃಂದ ದೊಂದಿಗೆ ಚಾತುರ್ಮಾಸ ವ್ರತ ಕೈಗೊಂಡ ಸಂದರ್ಭದಲ್ಲಿ ತಾಯಿ ಭದ್ರಕಾಳಿಯು ಕನಸಿನಲ್ಲಿ ಬಂದು ಗುಡಿ ನಿರ್ಮಿಸಲು ಆಜ್ಞಾಪಿಸಿದಾಗ ಸ್ವಾಮೀಜಿಗಳು ಊರ ಗ್ರಾಮಸ್ಥರ ಸಹಾಯದಿಂದ ಈ ಸ್ಥಳದಲ್ಲೊಂದು ಗುಡಿ ನಿರ್ಮಿಸಿ ಮಂಗಳವಾರ ಮತ್ತು ಶುಕ್ರವಾರದಂದು ಪೂಜೆ ನೆರವೇರುವಂತೆ ಮಾಡಿದರೆಂಬ ಐತಿಹ್ಯಇದೆ.
ತದನಂತರ 29 ಮೇ 1967 ನೇ ಇಸವಿಯಲ್ಲಿ ಕದ್ರಿ ಯೋಗೀಶ್ವರ ಮಠದ ಅಂದಿನ ಪೀಠಾಧಿಪತಿಗಳಾಗಿದ್ದ ಶ್ರೀ.ಶ್ರೀ ಶ್ರೀ ಶಾಂತಿನಾಥ್ ಜಿ ಅವರು ಇಲ್ಲಿ ಸುಂದರವಾದ ಗುಡಿಯೊಂದನ್ನು ನಿರ್ಮಾಣ ಮಾಡಿದರೆಂದು ದಾಖಲೆಗಳಿಂದ ತಿಳಿಯುತ್ತದೆ.
ಇದೀಗ ಸುಮಾರು ಐವತ್ತೇಳು ವರ್ಷಗಳ ನಂತರ ತಾಯಿ ಭದ್ರಕಾಳಿಯನ್ನು ತನ್ನ ಪೂಜೆ ಮಾತ್ರದಿಂದಲೇ ಒಲಿಸಿಕೊಂಡಿರುವ ದೇವಳದ ಪ್ರಧಾನ ಅರ್ಚಕರಾಗಿರುವ ಶ್ರೀ ಉಮೇಶ್ ನಾಥ್ ಜಿ ಅವರು ಬಹು ವರ್ಷಗಳ ತನ್ನ ಕನಸಿನಂತೆ ಸರಿ ಸುಮಾರು 2.5 ಕೋಟಿ ರೂಪಾಯಿಗೂ ಮಿಕ್ಕಿದ ವೆಚ್ಚದಲ್ಲಿ ಭಕ್ತರು ಹಾಗೂ ದಾನಿಗಳ ನೆರವಿನ ಸಹಾಯದಿಂದ ಅದ್ಭುತವಾದ ದೇವಾಲಯ ನಿರ್ಮಾಣ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.
ಶಿರಾ ಎಂಬ ಊರಿನಿಂದ ತರಿಸಿದ ಕಲ್ಲು, ಶುದ್ಧ ತಾಮ್ರ ಹಾಗೂ ಮರಗಳನ್ನು ಬಳಸಿ ದೇವಳದ ಪುನ:ನಿರ್ಮಾಣ ಕಾರ್ಯ ನಡೆದಿದ್ದು,ಕುಡುಪು ಕೃಷ್ಣರಾಜ ತಂತ್ರಿಯವರ ವಾಸ್ತು ವಿನ್ಯಾಸ ಅತ್ಯಂತ ಮನಮೋಹಕವಾಗಿದೆ.
✍️ ಡಾ. ರಾಜೇಶ್ ಕದ್ರಿ
























































































































































































