ಮಿತ್ರಂಪಾಡಿ ಜಯರಾಮ್ ರೈ ಮಹಾಪೋಷಕತ್ವದ ಗ್ರಾಮ ಸಾಹಿತ್ಯ ಸಂಭ್ರಮ: ಅಕ್ಟೋಬರ್ 25, ಪುತ್ತೂರು ಸಾಹಿತ್ಯೋತ್ಸವಕ್ಕೆ ಸಜ್ಜು, ಸಮಾರೋಪ

10K Views 1h ago

ಪುತ್ತೂರು: ಕನ್ನಡ ನಾಡು-ನುಡಿಯ ಜಾಗೃತಿಗಾಗಿ ಪುತ್ತೂರು ತಾಲೂಕಿನ ಮೂಲೆಮೂಲೆಗೂ ಸಾಹಿತ್ಯದ ಜ್ಯೋತಿ ಬೆಳಗಿಸಿದ ‘ಗ್ರಾಮ ಸಾಹಿತ್ಯ ಸಂಭ್ರಮ’ದ ಸಾರ್ಥಕ ಪಯಣ ಇದೀಗ ಸಂಭ್ರಮದ ಸಮಾರೋಪದತ್ತ ಸಾಗಿದೆ.
ಹೊರನಾಡ ಕನ್ನಡಿಗ, ಅಬುಧಾಬಿ ಉದ್ಯಮಿ ಮಿತ್ರಂಪಾಡಿ ಜಯರಾಮ್ ರೈ ಅವರ ಮಹಾಪೋಷಕತ್ವದಲ್ಲಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಹಾಗೂ ಚಿಗುರೆಲೆ ಸಾಹಿತ್ಯ ಬಳಗದ ಸಂಯೋಜನೆಯಲ್ಲಿ ಈ ವಿಶಿಷ್ಟ ಸಾಹಿತ್ಯ ಅಭಿಯಾನ ಯಶಸ್ವಿಯಾಗಿ ನಡೆದಿತ್ತು.


ತಾಲೂಕಿನ 22 ಗ್ರಾಮ ಪಂಚಾಯತ್ ವ್ಯಾಪ್ತಿಯ 32 ಗ್ರಾಮಗಳ 133 ಶಾಲೆಗಳಿಗೆ ತೆರಳಿ, ಬರೋಬ್ಬರಿ 6,150 ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬಿತ್ತಲಾಗಿದೆ. ಕವಿಗೋಷ್ಠಿ, ಕಥಾಗೋಷ್ಠಿ, ಪ್ರವಾಸ ಕಥನಗಳ ಮೂಲಕ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಿದ್ದಲ್ಲದೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 200 ಕ್ಕೂ ಅಧಿಕ ಮಂದಿ ಸಾಧಕರನ್ನು ಗುರುತಿಸಿ ಗೌರವಿಸಿದ ಹೆಮ್ಮೆ ಈ ಅಭಿಯಾನದ್ದು.
ಈ ಬೃಹತ್ ಸಾಹಿತ್ಯಾಂದೋಲನದ ಯಶಸ್ಸಿನ ಸಂಭ್ರಮವನ್ನು ಆಚರಿಸಲು *ಅಕ್ಟೋಬರ್ 25, ಭಾನುವಾರ ಬೆಳಿಗ್ಗೆ 10 ಗಂಟೆಗೆ ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆವರಣದಲ್ಲಿ ‘ಪುತ್ತೂರು ಸಾಹಿತ್ಯೋತ್ಸವ 2026 ಹಾಗೂ ಬಾಲ ಸಾಹಿತಿಗಳ ಸಮಾವೇಶ’* ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಬಾಲ ಪ್ರತಿಭೆಗೆ ಪಟ್ಟ*
ವಿಶೇಷವೆಂದರೆ ಈ ಸಮಾರೋಪದ ಸರ್ವಾಧ್ಯಕ್ಷತೆಯನ್ನು ವಿವೇಕಾನಂದ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು. ಸಾರ್ಯೇಶ್ವರಿ ವಹಿಸಿಕೊಳ್ಳಲಿದ್ದಾರೆ. ಸಾಹಿತ್ಯ ಮಹಾಪೋಷಕ ಮಿತ್ರಂಪಾಡಿ ಜಯರಾಮ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕ ಅಶೋಕ್ ಕುಮಾರ್ ರೈ, ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಟಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
16 ಮಂದಿ ಸಾಧಕರಿಗೆ ಪುರಸ್ಕಾರ*
ಸಮಾರಂಭದಲ್ಲಿ ಸಾಹಿತ್ಯ, ತುಳು ಲಿಪಿ ಸಂರಕ್ಷಣೆ, ಸಮಾಜ ಸೇವೆ, ಚಿತ್ರಕಲೆ, ಭರತನಾಟ್ಯ, ಪತ್ರಿಕೋದ್ಯಮ, ಆಯುರ್ವೇದ, ಉರಗ ಸಂರಕ್ಷಣೆ ಸೇರಿದಂತೆ 16 ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಪುತ್ತೂರು ಸಾಹಿತ್ಯೋತ್ಸವ ಸಾಧಕ ಪುರಸ್ಕಾರ’ ನೀಡಿ ಗೌರವಿಸಲಾಗುವುದು.
ಜೊತೆಗೆ, ಪುತ್ತೂರು ನಗರಸಭಾ ವ್ಯಾಪ್ತಿಯ 33 ಶಾಲೆ ಹಾಗೂ 18 ಕಾಲೇಜುಗಳ ವಿದ್ಯಾರ್ಥಿಗಳ ಬಾಲ ಸಾಹಿತ್ಯ ಸಮಾವೇಶ ನಡೆಯಲಿದ್ದು, ‘ಕನ್ನಡದಲ್ಲೂ ಐಎಎಸ್ ಬರೆಯಿರಿ’ ಎಂಬ ವಿಷಯದ ಕುರಿತು ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರವೂ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Read More News

Scroll to Top