ಮಂಗಳೂರು, ಸೆ. 30: ದಕ್ಷಿಣ ಕನ್ನಡ ಜಿಲ್ಲೆಯ ಜೋಕಟ್ಟೆ ಸಮೀಪದ ಕುತ್ತೆತ್ತೂರುನಲ್ಲಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ 3ನೇ ಹಂತದ ಘಟಕದಲ್ಲಿ ಇಂದು ಮಧ್ಯಾಹ್ನ 12.25 ರ ಸುಮಾರಿಗೆ ಭೀಕರ ಸ್ಫೋಟ ಸಂಭವಿಸಿ, ಬಳಿಕ ಭಾರಿ ಬೆಂಕಿ ಕಾಣಿಸಿಕೊಂಡಿದೆ. ದಟ್ಟ ಕಪ್ಪು ಹೊಗೆ ಆಕಾಶವನ್ನೇ ಆವರಿಸಿದ್ದು, ಬೆಂಕಿಯ ಜ್ವಾಲೆ ಘಟಕದ ಒಳಭಾಗದಲ್ಲಿ ಕಾಣುತ್ತಿದೆ.ಬೆಂಕಿ ಈಗ ನಿಯಂತ್ರಣದಲ್ಲಿದೆ. ಯಾವುದೇ ರೀತಿಯ ಆತಂಕ, ಗಾಬರಿ ಬೇಡವೆಂದು ಸಂಬಂಧ ಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ
ಸ್ಥಳೀಯರಲ್ಲಿ ಆತಂಕ:
ಸ್ಫೋಟದ ಶಬ್ದವು ಜೋಕಟ್ಟೆ, ಬಜ್ಪೆ, ಕಳವಾರು, ಬೈಕಂಪಾಡಿ, ಸುರತ್ಕಲ್, ಕಾವೂರು ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಕೇಳಿಸಿದೆ. ಜೋಕಟ್ಟೆ ಗ್ರಾಮ ಪಂಚಾಯತ್ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಮನೆಗಳು ನಡುಗಿದ ಅಂದರೆ ಲಘು ಭೂಕಂಪದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಧಿಕೃತ ಮಾಹಿತಿ:
ಎಂಆರ್ಪಿಎಲ್ ಜನಸಂಪರ್ಕಾಧಿಕಾರಿ ಡಾ. ರುಡಾಲ್ಫ್ ಅವರು ನೀಡಿದ ಮಾಹಿತಿಯ ಪ್ರಕಾರ
“ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಘಟಕವನ್ನು ಖಾಲಿ ಮಾಡಲಾಗಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ. ರಾಜೇಶ್ ಬ್ಯಾಪ್ಟಿಸ್ಟ್ ಎಂಬ ಕಾರ್ಮಿಕರಿಗೆ ಶೇ.35 ರಷ್ಟು ಸುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತರ 6 ಜನ ಸಣ್ಣ ಗಾಯಗಳಿಗೆ ಹೊರರೋಗಿ ಚಿಕಿತ್ಸೆ ಪಡೆದಿದ್ದಾರೆ.”
ಮಂಗಳೂರು, ಪಾಂಡೇಶ್ವರ, ಪಣಂಬೂರು ಭಾಗದಿಂದ ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
ಘಟನೆಯ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.


















































































































































































