ಬಂಟ ಕಲಾ ಸಂಗಮ: ಸುರತ್ಕಲ್ ಬಂಟರ ಸಂಘ ರನ್ನರ್ಸ್ ಅಪ್. ಪ್ರೇಕ್ಷಕರು ಮೆಚ್ಚಿಕೊಂಡ ದಿನಪತ್ರಿಕೆಯ ಕಥಾವಸ್ತು, ಮತ್ತೆ ನೆನಪಾದ “ಉಳುವವನೇ ಭೂಮಿಯ ಒಡೆಯ”

106.8K Views 2w ago

ಸುರತ್ಕಲ್: ಬಂಟರ ಯಾನೆ ನಾಡವರ ಮಾತೃಸಂಘ, ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್ ನಲ್ಲಿ ನಡೆದ “ಬಂಟ ಕಲಾ ಸಂಗಮ” ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘ 75 ಸಾವಿರ ರೂಪಾಯಿ ನಗದಿನೊಂದಿಗೆ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಸುರತ್ಕಲ್ ಬಂಟರ ಸಂಘವು ಪ್ರಸ್ತುತ ಪಡಿಸಿದ ವಿಷಯ “ದಿನಪತ್ರಿಕೆ”. 1942 ಜುಲೈ 1 ರಂದು ಮಂಗಳೂರಿನಲ್ಲಿ ಹುಟ್ಟಿಕೊಂಡ ಮಂಗಳೂರ ಸಮಾಚಾರ ಪತ್ರಿಕೆಯ ಮೂಲಕ ಕತೆ ತೆರೆದುಕೊಳ್ಳುತ್ತದೆ. ನಿರೂಪಕರು ಪತ್ರಿಕೆಯ ಪಾತ್ರಧಾರಿಯಾಗಿ 20 ನಿಮಿಷಗಳ ಕಾಲ ಪತ್ರಿಕೆ ಆಯಾಯ ಕಾಲಘಟ್ಟದಲ್ಲಿ ನಡೆದುಕೊಂಡು ಬಂದಿರುವ ವಿಚಾರವನ್ನು ಪ್ರೇಕ್ಷಕರ ಮುಂದಿಡುತ್ತಾರೆ.
1974 ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಜಾರಿಗೆ ತಂದ ಕಾನೂನು ಉಳುವವನೇ ಭೂಮಿಯ ಒಡೆಯ, ಈ ವಿಚಾರವನ್ನು ಇಟ್ಟುಕೊಂಡು ಕತೆಗೆ ಸ್ಪರ್ಷ ನೀಡಿದರು. ಭೂಮಿಯ ಒಡೆಯ ಇಂದಿರಾಗಾಂಧಿ ತಂದ ಕಾನೂನಿಂದ ಹೇಗೆ ಹತಾಶನಾಗುತ್ತಾನೆ ಮತ್ತೆ ಹೇಗೆ ಮೈಗೆಡವಿ ನಿಲ್ಲುತ್ತಾನೆ ಎನ್ನುವ ಸಂದೇಶ, ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರ ದಬ್ಬಾಳಿಕೆ, ಬಳಿಕ ಪತ್ರಿಕೆ ಕಪ್ಪು ಬಿಳುಪಿನಿಂದ ವರ್ಣರಂಜಿತವಾದದ್ದು, ಜನವರಿ 26 ಗಣರಾಜ್ಯೋತ್ಸವದ ಸಂಭ್ರಮ, ಯುವ ಸಮುದಾಯದ ದುಖ ದುಮ್ಮಾನ, ಕೊರೊನಾದಿಂದ ಹೈರಾಣಾಗುವ ಜನರು, ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಸೋಷಿಯಲ್ ಮೀಡಿಯಾಗಳಿಂದಾಗುವ ಪರಿಣಾಮ ಹೀಗೆ ಎಲ್ಲವನ್ನೂ ಪತ್ರಿಕೆ ಪಾತ್ರಧಾರಿಯ ಮೂಲಕ ಕತೆ ಹೇಳಿರುವುದು, ಇದೊಂದು ವಿಭಿನ್ನ ಕಥಾವಸ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಥಾವಸ್ತುವಿಗೆ ಪೂರಕವಾಗಿ ನೃತ್ಯ ಸಂಯೋಜನೆ, ಮೈಮ್ ಎಲ್ಲವೂ ಒಂದಕ್ಕೊಂದು ಜೋಡಣೆಯಾಯಿತು. ಕಥಾವಸ್ತುವಿನ ನಿರ್ದೇಶಕಿ ರಾಜೇಶ್ವರಿ ಡಿ ಶೆಟ್ಟಿ ಪತ್ರಿಕೆಯ ಪಾತ್ರಧಾರಿಯಾಗಿ ಗಮನ ಸೆಳೆದರು.
ಸಂಘದ ಮಾಜಿ ಅಧ್ಯಕ್ಷರಾದ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ ಅವರ ಮಾರ್ಗದರ್ಶನದಲ್ಲಿ ರಾಜೇಶ್ವರಿ ಡಿ ಶೆಟ್ಟಿ ಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಕೆ ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು, ಪ್ರಶಸ್ತಿ ವಿತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಮಹಿಳಾ ವೇದಿಕೆಯ ಅಧ್ಯೆಕ್ಷೆ ಸರೋಜ ಟಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಮಹಿಳಾ ವಿಭಾಗದ ಸಾಂಸ್ಕೃತಿಕ ಕಾರ್ಯದರ್ಶಿ ಆಶಾಕಿರಣ್ ಪ್ರಸಾದ್ ರೈ, ನಿರ್ದೇಶಕಿ ರಾಜೇಶ್ವರಿ ಡಿ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

Read More News

Scroll to Top