ಮುಂಬಯಿ ಯಕ್ಷಗಾನ ಸಮ್ಮೇಳನದ ಕರೆಯೋಲೆ ಬಿಡುಗಡೆ. ಸಮ್ಮೇಳನ ಸಾಂಗವಾಗಲಿ: ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ

119.3K Views 2w ago

ಮಂಗಳೂರು: ‘ಕರಾವಳಿಯ ಜನಪ್ರಿಯ ಕಲೆಯಾದ ಯಕ್ಷಗಾನವನ್ನು ಮುಂಬೈಯಲ್ಲಿ ಬಹುವಿಧವಾಗಿ ಮೆರೆಸಿದ ಅಜೆಕಾರು ಕಲಾಭಿಮಾನಿ ಬಳಗವು ತನ್ನ ರಜತ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಈ ಸಂಬಂಧವಾಗಿ ಕಲಾಪೋಷಕರಾದ ಡಾ. ಟಿ.ಶ್ಯಾಮ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಮುಂಬಯಿ ಯಕ್ಷಗಾನ ಸಮ್ಮೇಳನವು ಸಾಂಗವಾಗಿ ನೆರವೇರಲಿ ‘ ಎಂದು ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶುಭ ಹಾರೈಸಿದ್ದಾರೆ. ಅಜೆಕಾರು ಕಲಾಭಿಮಾನಿ ಬಳಗದ ರಜತ ಪರ್ವದ ಅಂಗವಾಗಿ ಅಕ್ಟೋಬರ 3, 4 ರಂದು ಮುಂಬೈಯಲ್ಲಿ ನಡೆಯುವ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.
ಸಮ್ಮೇಳನ ಸಮಿತಿ ಸಲಹೆಗಾರರಾದ ಹಿರಿಯ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿಯವರು ಈ ಸಂದರ್ಭದಲ್ಲಿ ಮಾತನಾಡಿ, ‘ವಿಷ್ಣುಸಾಯುಜ್ಯವನ್ನೈದಿದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಕಾಲದಲ್ಲಿ ಯಕ್ಷಗಾನದ ತವರುಮನೆಯೆನಿಸಿಕೊಂಡಿದ್ದ ಎಡನೀರು ಮಠದಲ್ಲಿ ಅದೇ ಆಸಕ್ತಿಯಿಂದ ಯಕ್ಷಗಾನ ಕಾರ್ಯಕ್ರಮಗಳಿಗೆ ವಿಪುಲಾಶ್ರಯ ನೀಡುತ್ತಿರುವ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳಿಂದ ಸಮ್ಮೇಳನದ ಕರಪತ್ರ ಲೋಕಾರ್ಪಣೆಗೊಳ್ಳುತ್ತಿರುವುದು ಕಲಾಸಂವರ್ಧನೆಯ ದೃಷ್ಟಿಯಿಂದ ಬಹಳ ಮಹತ್ವದ್ದು ‘ ಎಂದರು.
ಅಜೆಕಾರು ಕಲಾಭಿಮಾನಿ ಬಳಗದ ಪರವಾಗಿ ಸಮ್ಮೇಳನದ ಪ್ರಧಾನ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಸ್ವಾಮೀಜಿಯವರಿಗೆ ಫಲಕಾಣಿಕೆಯಿತ್ತು ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಸ್ವಾಮೀಜಿಯವರು ಮಂತ್ರಾಕ್ಷತೆಯೊಂದಿಗೆ ಆಮಂತ್ರಣ ಪತ್ರಿಕೆಯನ್ನು ಸಮ್ಮೇಳನ ಸಮಿತಿಗೆ ಹಸ್ತಾಂತರಿಸಿದರು.

ಗಣ್ಯರಿಗೆ ಆಹ್ವಾನ ಪತ್ರಿಕೆ ವಿತರಣೆ :
ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟರ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು ವಿವಿಧ ಕ್ಷೇತ್ರದ ಗಣ್ಯರಿಗೆ ಕರೆಯೋಲೆ ನೀಡಿ ಆಮಂತ್ರಿಸಿದರು.
ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ಡಿ.ಹೆಗ್ಗಡೆಯವರು, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರನ್ನು ಭೇಟಿಯಾದ ಸಂಘಟಕರು ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಸಮ್ಮೇಳನಾಧ್ಯಕ್ಷರಿಗೆ ಆಮಂತ್ರಣ:
ಅಜೆಕಾರು ಕಲಾಭಿಮಾನಿ ಬಳಗದ ಆಶ್ರಯದಲ್ಲಿ ಎರಡು ದಿನ ನಡೆಯುವ ಮುಂಬಯಿ ಯಕ್ಷಗಾನ ಸಮ್ಮೇಳನದ ಸರ್ವಾಧ್ಯಕ್ಷರು ಯಕ್ಷಗಾನ ಕಲಾ ಪೋಷಕರು ಮತ್ತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್. ಸೆಪ್ಟೆಂಬರ 26 ರಂದು ಕಾಸರಗೋಡಿನ ಎಡನೀರು ಮಠದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಅವರನ್ನು ಭೇಟಿ ಮಾಡಿದ ಮುಖ್ಯ ಸಲಹೆಗಾರ ಡಾ.ಎಂ ಪ್ರಭಾಕರ ಜೋಶಿ ಮತ್ತು ಪ್ರಧಾನ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ವಿಧ್ಯುಕ್ತವಾಗಿ ಸಮ್ಮೇಳನಕ್ಕೆ ಆಹ್ವಾನ ನೀಡಿದರು. ಸಮಿತಿ ಸದಸ್ಯ ಹಾಗೂ ಹನುಮಗಿರಿ ಮೇಳದ ಪ್ರಬಂಧಕ ಹರೀಶ್ ಭಟ್ ಬಳಂತಿಮೊಗರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More News

Scroll to Top