ಸಚಿವ ಸಂಪುಟ ಸಭೆ ಪಕ್ಷಾತೀತವಾಗಿ ನಡೆಯಲಿ: ರಮಾನಾಥ ರೈ

113.8K Views 4w ago

ಮಂಗಳೂರು: ಕರಾವಳಿ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಸಚಿವ ಸಂಪುಟ ಸಭೆಯನ್ನು ಎಲ್ಲರೂ ಪಕ್ಷಬೇಧ ಮರೆತು ಸ್ವಾಗತಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಕರೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಜಾಮರ್ ವಿಚಾರ ಮುಂದಿಟ್ಟುಕೊಂಡು ಸಭೆಗೆ ಅಡಚಣೆ ಮಾಡಲು ಯತ್ನಿಸುತ್ತಿರುವುದು ಸರಿಯಲ್ಲ. ಇದು ಕರಾವಳಿಯ ಅಭಿವೃದ್ಧಿಗೆ ಸಂಬಂಧಿಸಿದ ಸಭೆ ಎಂದು ಹೇಳಿದರು.
ಕೊರಗ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಈ ಸಭೆಯಲ್ಲಿ ಮಹತ್ವದ ನಿರ್ಧಾರಗಳು ಹೊರಬರುವ ನಿರೀಕ್ಷೆ ಇದೆ. ಮುಹಮ್ಮದ್ ಪೀರ್ ವರದಿ ಆಧರಿಸಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.
ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು. ಜೊತೆಗೆ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಬಿಜೆಪಿ ಸಂಸದರು, ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ದೈವಾರಾಧಕರು, ಭೂತಾರಾಧನೆ ಮಾಡುವವರಿಗೂ ಅರ್ಚಕರ ಮಾದರಿಯಲ್ಲಿ ಗೌರವಧನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಪ್ಪಿ ಶಾಹುಲ್ ಹಮೀದ್, ಮೊಹಮ್ಮದ್ ಮೋನು, ಪೃಥ್ವಿರಾಜ್, ನೀರಜ್ ಪಾಲ್ ಉಪಸ್ಥಿತರಿದ್ದರು.

Read More News

Scroll to Top