ಆದಿಚುಂಚನಗಿರಿ ಶ್ರೀಗಳಿಗೆ ಗೌರವ ಫೆಲೋಶಿಪ್ – ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ACCE(I) ಅಧ್ಯಕ್ಷರ ಘೋಷಣೆ

116.5K Views 16 Sep 2026

ಮಂಗಳೂರು, ಸೆ. 15:* ಎಂಜಿನಿಯರಿಂಗ್, ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಗೆ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಇಂಡಿಯಾ)- ACCE(I) ವತಿಯಿಂದ ಪ್ರತಿಷ್ಠಿತ ಗೌರವ ಫೆಲೋಶಿಪ್ ನೀಡಿ ಗೌರವಿಸಲಾಗುವುದು ಎಂದು ACCE(I )ರಾಷ್ಟ್ರೀಯ ಅಧ್ಯಕ್ಷ Er. ರಾಜೇಂದ್ರ ಕಲ್ಬಾವಿ ರಾವ್ ಹೇಳಿದ್ದಾರೆ. ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು
ಸೆಪ್ಟೆಂಬರ್ 17 ರಂದು ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿರುವ ಎಂಜಿನಿಯರ್ಸ್ ಡೇ ಆಚರಣೆ ಕಾರ್ಯಕ್ರಮದಲ್ಲಿ ಈ ಫೆಲೋಶಿಪ್ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು.


ACCE(I) ದೇಶದ ಪ್ರಮುಖ ವೃತ್ತಿಪರ ಸಿವಿಲ್ ಎಂಜಿನಿಯರ್‌ಗಳ ಸಂಘಟನೆಯಾಗಿದ್ದು, ದೇಶಾದ್ಯಂತ 54 ಕೇಂದ್ರಗಳು ಹಾಗೂ 9,500ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಕಳೆದ 41 ವರ್ಷಗಳಿಂದ ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದ ಅಭಿವೃದ್ಧಿಗಾಗಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು Er. ರಾಜೇಂದ್ರ ಕಲ್ಬಾವಿ ರಾವ್ ತಿಳಿಸಿದರು.
“ಎಂಜಿನಿಯರಿಂಗ್ ಜ್ಞಾನವನ್ನು ಶಿಕ್ಷಣ ಹಾಗೂ ಸಮಾಜದ ಅಭಿವೃದ್ಧಿಯೊಂದಿಗೆ ಸಮ್ಮಿಲನಗೊಳಿಸಿ ಹಲವು ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಶ್ರಮಿಸಿರುವ ಮಹಾಸ್ವಾಮೀಜಿಯವರ ನಿಸ್ವಾರ್ಥ ಮತ್ತು ಶ್ಲಾಘನೀಯ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ” ಎಂದು ಅವರು ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಪದ್ಮಶ್ರೀ ಪುರಸ್ಕೃತ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಭಾಗವಹಿಸಲಿದ್ದಾರೆ.
ಮಹಾಸ್ವಾಮೀಜಿಯವರು ಸಿವಿಲ್ ಎಂಜಿನಿಯರಿಂಗ್ ಪದವೀಧರರಾಗಿದ್ದು, ಐಐಟಿ ಬಾಂಬೆಯಿಂದ ಸ್ಟ್ರಕ್ಚರಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
*ಸುದ್ದಿಗೋಷ್ಠಿಯಲ್ಲಿ ACCE(I) ರಾಷ್ಟ್ರೀಯ ಅಧ್ಯಕ್ಷ Er. ರಾಜೇಂದ್ರ ಕಲ್ಬಾವಿ ರಾವ್ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಹಿಂದೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರಿಗೂ ACCE(I) ಫೆಲೋಶಿಪ್ ನೀಡಲಾಗಿತ್ತು ಎಂದು Er. ರಾಜೇಂದ್ರ ಕಲ್ಬಾವಿ ರಾವ್ ಹೇಳಿದ್ದಾರೆ

Read More News

Scroll to Top