ಕೊಣಾಜೆ,ಆ.13: ಪ್ರಾಮಾಣಿಕತೆ,
ವಿನಯತೆ ಹಾಗೂ ಸರಳ ವ್ಯಕ್ತಿತ್ವದ ಸಹೃದಯಿ ಪ್ರಾಧ್ಯಾಪಕಿಯಾಗಿದ್ದ ಡಾ.ವಹಿದಾ ಸುಲ್ತಾನ ಮಂಗಳೂರು ವಿ.ವಿ.ಯಲ್ಲಿ ಅನೇಕ ಜವಾಬ್ಧಾರಿಯೊಂದಿಗೆ ಉತ್ತಮ ಆಡಳಿತಗಾರರೂ ಆಗಿದ್ದರು. ವಿದ್ಯಾರ್ಥಿಗಳಿಗೆ, ಬಡಮಕ್ಕಳಿಗೆ ಸಂಕಷ್ಟಗಳು ಎದುರಾದಾಗ ಸಹಾಯ ಮಾಡುವ ತಾಯಿ ಹೃದಯ ಅವರದ್ದಾಗಿತ್ತು. ಅವರ ಕೊಡುಗೆ, ನೆನಪುಗಳು ಸದಾ ಶಾಶ್ವತವಾಗಿರಲಿ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ .ಧರ್ಮ ಹೇಳಿದ್ದಾರೆ.
ಇತ್ತೀಚೆಗೆ ಮೈಸೂರಿನಲ್ಲಿ ನಿಧನರಾದ ಮಂಗಳೂರು ವಿ.ವಿ. ವಿಶ್ರಾಂತ ಪ್ರಾಧ್ಯಾಪಕಿ ಡಾ.ವಹಿದಾ ಸುಲ್ತಾನ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಎಂಸಿಜೆ ವಿಭಾಗದ ವತಿಯಿಂದ ಗುರುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.
ಸಮಾಭದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್.ಅವರು ಮಾತನಾಡಿ, ಪ್ರಾಧ್ಯಾಪಕಿ ವಹಿದಾ ಸುಲ್ತಾನ ಅವರು ತಮ್ಮ ಸ್ವಪ್ರಯತ್ನದಿಂದ ಜ್ಞಾನ ಸಂಪಾದಿಸಿ ಜೀವನದಲ್ಲಿ ಹಂತ ಹಂತವಾಗಿ ಸಾಧನೆ ಮಾಡಿದವರು. ಮಂಗಳೂರು ವಿವಿಯಲ್ಲಿ ಅವರಿಂದ ವಿದ್ಯೆ ಕಲಿತ ಅನೇಕ ವಿದ್ಯಾರ್ಥಿಗಳು ಮಂಗಳೂರು , ಬೆಂಗಳೂರು ಸೇರಿದಂತೆ ವಿದೇಶಗಳಲ್ಲಿಯೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮಂಗಳೂರು ವಿವಿ ಕುಲಸಚಿವ ಸಂತೋಷ್ ಬಿ ಜಗಲಸಾರ ಶ್ರದ್ಧಾಂಜಲಿ ಸಲ್ಲಿಸಿದರು.ಪ್ರಾಧ್ಯಾಪಕರಾದ ಪ್ರೊ.ಪರಿಣಿತ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ಅವರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಮಂಗಳೂರು ವಿವಿ ಎಂಸಿಜೆ ವಿಭಾಗದ ಮುಖ್ಯಸ್ಥ ಉಮೇಶ್ಚಂದ್ರ ಅವರು ಡಾ.ವಹಿದಾ ಸುಲ್ತಾನ ವಿಭಾಗಕ್ಕೆ ನೀಡಿದ ಕೊಡುಗೆ ಸ್ಮರಿಸಿ, ಸ್ವಾಗತಿಸಿ, ನಿರೂಪಿಸಿದರು.
ಮೌನ ಪ್ರಾರ್ಥನೆಯೊಂದಿಗೆ ಡಾ.ವಹೀದ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.


















































































































































































