ಪುತ್ತೂರಿನ ಖ್ಯಾತ ನ್ಯಾಯವಾದಿ ಬೆಳ್ಳಿಪ್ಪಾಡಿ ಲಕ್ಷ್ಮಿನಾರಾಯಣ ರೈ (94) ಅವರು ಡಿಸೆಂಬರ್ 25ರಂದು ಗುರುವಾರ ರಾತ್ರಿ 10.3೦ರ ಸುಮಾರಿಗೆ ಮಂಗಳೂರಿನ ಕರಂಗಲ್ಪಾಡಿಯಲ್ಲಿರುವ ತಮ್ಮ ಹಿರಿಯ ಮಗಳ ನಿವಾಸದಲ್ಲಿ ವಯೋಸಹಜ ಸಾವನ್ನಪ್ಪಿದರು.
ವೃತ್ತಿಪರವಾಗಿ ಬಿ. ಎಲ್. ಎನ್. ರೈ ಎಂದೇ ಪರಿಚಿತರಾಗಿದ್ದ ಅವರು ಮದ್ರಾಸ್ ಲಾ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದಿದ್ದು, ಬಿ.ಎ. ಬಿ.ಎಲ್. ಪದವಿ ಪಡೆದ ನಂತರ 1962 ರಲ್ಲಿ ಪುತ್ತೂರಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದರು. ಅವರು ತಮ್ಮ 64ವರ್ಷಗಳ ಸುಧೀರ್ಘ ಸೇವಾವಧಿಯಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಕೈಗೊಂಡು ವೃತ್ತಿಪರ ನಿಷ್ಠೆ, ಪ್ರಾಮಾಣಿಕತೆ ಮತ್ತು ಸಮರ್ಪಣೆಯಿಂದ ಹೆಸರು ಪಡೆದಿದ್ದರು. ನಿವೃತ್ತಿಯ ನಂತರ ಕೆಲವು ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ಸ್ಥಾಪಿಸಲಾದ ಹೊಸ ನ್ಯಾಯಾಲಯಕ್ಕೆ ತಮ್ಮ ಸಂಪೂರ್ಣ ಕಾನೂನು ಪುಸ್ತಕ ಸಂಗ್ರಹವನ್ನು ದಾನವಾಗಿ ನೀಡಿದ್ದರು. ಅವರು ಬಾರ್ ಅಸೋಸಿಯೇಷನ್ ನ ಸಕ್ರಿಯ ಸದಸ್ಯರಾಗಿದ್ದರು ಮತ್ತು ಈ ಹಿಂದೆ ಲಯನ್ಸ್ ಕ್ಲಬ್‌ನ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಮೃತರು ಇಬ್ಬರು ಪುತ್ರರು (ಉದಯಭಾನು ರೈ ಮತ್ತು ಸುದೇಶ್ ರೈ), ಇಬ್ಬರು ಪುತ್ರಿಯರು (ಪ್ರೊ. ಶರ್ಮಿಳಾ ರೈ ಮತ್ತು ಡಾ. ಸಪ್ನಾ ಸಂದೀಪ್) ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅವರ ಪತ್ನಿ ಶ್ರೀಮತಿ ನಳಿನಿ ರೈ ಅವರು 2022 ರಲ್ಲಿ ನಿಧನರಾಗಿದ್ದರು. ಡಿಸೆಂಬರ್ 26, ಶುಕ್ರವಾರ ಮಧ್ಯಾಹ್ನ 2.30ಕ್ಕೆ ಕದ್ರಿ ಸ್ಮಶಾನದಲ್ಲಿ ಅಂತ್ಯಕ್ರಿಯೆಗಳನ್ನು ನೆರವೇರಿಸಲಾಯಿತು.


























































































































































































