ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮದಲ್ಲಿ ಹಿರಿಯ ಶಸ್ತ್ರಚಿಕಿತ್ಸಕ ಡಾ. ಶ್ರೀರಾಮ್ ಭಟ್ ಎಂ. ಅವರಿಗೆ ‘ವೈದ್ಯರತ್ನ’ ಪ್ರಶಸ್ತಿ ಪ್ರದಾನ

103.5K Views 4 Jul 2025

ಮಂಗಳೂರು: ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮವು ಜೂನ್ 24ರ ಮಂಗಳವಾರ ಸಂಜೆ ಗಂಟೆ 4.00ರಿಂದ 9.00ರ ತನಕ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ (ಟೌನ್‍ಹಾಲ್)ನಲ್ಲಿ ನಡೆಯಿತು.
ಸೌಹಾರ್ದ ಸಂಗಮವನ್ನು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಇದರ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರುರವರು ಉದ್ಘಾಟಿಸಿ, ನಮ್ಮ ಜಿಲ್ಲೆಗೆ ಸೌಹಾರ್ದತೆಯ ಕೊರತೆ ಇದ್ದು ಇಂತಹ ಸೌಹಾರ್ದ ಸಂಗಮಗಳು ಹೆಚ್ಚು ಮಹತ್ವಪೂರ್ಣ ಮತ್ತು ಅರ್ಥಪೂರ್ಣವಾಗಿ ಸಮಾಜವನ್ನು ತಲುಪುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವ ಬಿ. ರಮಾನಾಥ ರೈಯವರು ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು ಕೊರತೆಯಿರುವುದು ಸೌಹಾರ್ದತೆಯಲ್ಲಿ ಎಂದರು. ಇಂತಹ ಕೊರತೆಯನ್ನು ಸೌಹಾರ್ದ ಸಂಗಮದಂತಹ ಜನಪರ ಕಾರ್ಯಕ್ರಮಗಳು ನೀಗಿಸಬಲ್ಲದು ಎಂದು ಸೌಹಾರ್ದ ಸಂಗಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೌಹಾರ್ದತೆ ಎನ್ನುವುದು ಈ ಸಮಾಜಕ್ಕೆ ಬೀಜಮಂತ್ರವಾಗಲಿ. ಶಾಂತಿ ಸಾಮರಸ್ಯ, ಸಹಬಾಳ್ವೆ, ಸೌಹಾರ್ದ ಸಂಗಮದ ಮೂಲಕ ರಾಷ್ಟ್ರವ್ಯಾಪ್ತಿ ಪಸರಿಸಲಿ ಎಂದು ದೇವರಾಜ ಅರಸು ರಾಜ್ಯಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನಿ ಡಾ. ಅಣ್ಣಯ್ಯ ಕುಲಾಲ್‍ರವರು ಹೇಳಿದರು. ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ಜೂಲಿಯಾನ ಸಲ್ಡಾನ ಅವರು ಸೌಹಾರ್ದ ಸಂಗಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಮನುಷ್ಯ-ಮನುಷ್ಯರ ನಡುವೆ ಸೌಹಾರ್ದತೆ, ಭಾೃತತ್ವ ಅತ್ಯಗತ್ಯವಾಗಿದ್ದು ಜಾತಿ, ಮತ, ಪಕ್ಷ-ಭೇದವಿಲ್ಲದೆ ಸಾಧಕರುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸೌಹಾರ್ದ ಸಂಗಮ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಲ್ಲಿ ಸಂಘಟಕರ ಪ್ರಯತ್ನ ಮೆಚ್ಚತಕ್ಕದ್ದು ಎಂದು ಸೌಹಾರ್ದ ಸಂಗಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಕೆ. ದಯಾನಂದ ರೈಯವರು ತಿಳಿಸಿದರು.
ಸಮಾರಂಭದಲ್ಲಿ ವಾರ್ತಾ ಇಲಾಖೆಯ ದಿವ್ಯ ಆರ್. ಶೆಟ್ಟಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ., ಎಂ.ಸಿ.ಸಿ. ಬ್ಯಾಂಕ್‍ನ ಅಧ್ಯಕ್ಷ ಅನಿಲ್ ಲೋಬೊ, ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂಚಲಾಕ್ಷಿ ತೇಜೋಮಯ ಮೊದಲಾದವರು ಉಪಸ್ಥಿತರಿದ್ದರು.
ನರೇಶ್‍ಕುಮಾರ್ ಸಸಿಹಿತ್ಲು ಇವರು ಸ್ವಾಗತಿಸಿ, ಎಸ್.ಆರ್. ಪ್ರದೀಪ್ ವಂದಿಸಿದರು, ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಅಶೋಕ್ ಶೆಟ್ಟಿ ಬಿ.ಎನ್.ರವರು ಪ್ರಸ್ತಾವನೆಗೈದರು. ದಿನಕರ ಡಿ. ಬಂಗೇರ, ಸನ್ಮಾನ ಪತ್ರ ವಾಚಿಸಿದರು. ಕನ್ನಡ-ತುಳು ಚಲನಚಿತ್ರ ಹಿನ್ನಲೆ ಗಾಯಕ ರವೀಂದ್ರ ಪ್ರಭು ಬಳಗದವರಿಂದ ರಾಗ್ ರಂಗ್ ಸೌಹಾರ್ದ ಸುಗಮ ಸಂಗೀತ ರಸಮಂಜರಿ ಮತ್ತು ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗ ಚಲನ ಕಲಾವಿದರು ಮಂಗಳೂರು ಇವರಿಂದ ಯುವಜಾಗೃತಿ ಹಾಡುಗಳ ಮಿಶ್ರಣ ನಾಟಕ ವಿನೂತನ ಕಾರ್ಯಕ್ರಮ ನಡೆಯಿತು.
ಈ ಸೌಹಾರ್ದ ಸಂಗಮದಲ್ಲಿ ಮಂಗಳೂರಿನ ಹಿರಿಯ ಶಸ್ತ್ರಚಿಕಿತ್ಸಕ ಡಾ. ಶ್ರೀರಾಮ್ ಭಟ್ ಎಂ. ಅವರಿಗೆ ‘ವೈದ್ಯರತ್ನ’ ಪ್ರಶಸ್ತಿ ಸೇರಿದಂತೆ ಆರು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಡಾ. ಶ್ರೀರಾಮ್ ಭಟ್ ಎಂ:
ಇವತ್ತು ಮಂಗಳೂರಲ್ಲಿ ಅತ್ಯಂತ ಅನುಭವಿ ಮತ್ತು ಪರಿಣತ, ಜನಪ್ರಿಯ ವೈದ್ಯರುಗಳಲ್ಲಿ ಡಾ. ಶ್ರೀರಾಮ್ ಭಟ್ ಎಂ. ಅವರ ಹೆಸರು ಮುಂಚೂಣಿಯಲ್ಲಿದೆ.
ಬಡರೋಗಿಗಳಿಗೆ ಆಪದ್ಬಾಂಧವ ಎಂಥ ಕ್ಲಿಷ್ಟಕರವಾದ ಸರ್ಜರಿಯಿದ್ದರೂ ಅದನ್ನು ಲೀಲಾಜಾಲವಾಗಿ ಮಾಡಿ ಸಾವಿರಾರು ರೋಗಿಗಳಿಗೆ ಪುನರ್ಜನ್ಮ ನೀಡಿದ ಯಶಸ್ವಿ ಶಸ್ತ್ರ ಚಿಕಿತ್ಸಕ ತಜ್ಞರಾಗಿ ಡಾ. ಶ್ರೀರಾಮ್ ಭಟ್ ಅವರು ವೈದ್ಯಕೀಯ ಜಗತ್ತಿನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಹೈಸ್ಕೂಲ್ ಶಿಕ್ಷಕರಾಗಿದ್ದ ದಿ. ಕೃಷ್ಣ ಭಟ್ ಎಂ. ಮತ್ತು ದಿ. ಶ್ರೀಮತಿ ದೇವಕಿ ಅವರ ಸುಪುತ್ರರಾಗಿ ಜನಿಸಿದ ಡಾ. ಶ್ರೀರಾಮ್ ಭಟ್ ಎಂ. ಅವರು ಸುಳ್ಯದ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಸುಳ್ಯ ಸರಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು, ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದು, 1986ರಲ್ಲಿ ಕಸ್ತೂರ್‍ಬಾ ಮೆಡಿಕಲ್ ಕಾಲೇಜ್ ಮಂಗಳೂರಿನಲ್ಲಿ ಎಂಬಿಬಿಎಸ್ ವೈದ್ಯಕೀಯ ಪದವಿ, 1990ರಲ್ಲಿ ಜನರಲ್ ಸರ್ಜರಿಯಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ, 2021ರಲ್ಲಿ ಇಂಗ್ಲೆಂಡ್‍ನ ಗಾಸ್ಕೋದಲ್ಲಿ FRCS ಉನ್ನತ ಪದವಿ ಪಡೆದಿರುತ್ತಾರೆ.
ಮಂಗಳೂರಿನ ಕಸ್ತೂರ್‍ಬಾ ಮೆಡಿಕಲ್ ಕಾಲೇಜ್ ಕೆಎಂಸಿಯಲ್ಲಿ ಪ್ರೊಫೆಸರ್ ಆಗಿ ಸರ್ಜರಿ ಯುನಿಟ್‍ನ ಮುಖ್ಯಸ್ಥರಾಗಿ ಸೇವೆ, ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ 1990ರಿಂದ ಗೌರವಾನ್ವಿತ ವೈದ್ಯಾಧಿಕಾರಿಯಾಗಿ ಮತ್ತು ಶಸ್ತ್ರಚಿಕಿತ್ಸಕರಾಗಿ ಕರ್ತವ್ಯ ಸಲ್ಲಿಸುತ್ತಾ ಬಂದಿದ್ದಾರೆ.
ಬಾವುಟಗುಡ್ಡೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜ್ ಎದುರುಗಡೆಯಿರುವ ಲೈಟ್‍ಹೌಸ್ ಪಾಲಿಕ್ಲಿನಿಕ್‍ನಲ್ಲಿ ಪ್ರತಿದಿನ ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ಹೊರರೋಗಿಗಳಿಗೆ ಲಭ್ಯರಿರುವ ಶ್ರೀಯುತರು ಜನರಲ್ ಸರ್ಜರಿ, ಲಾಪ್ರೋಸ್ಕೋಫಿಕ್ ಮತ್ತು ಗ್ಯಾಸ್ಟ್ರೋ ಇಟೆಸ್ಟಿನಲ್ ಸರ್ಜರಿಯಲ್ಲಿ ತರಬೇತಿ ಪಡೆದು, ಅಪಾರ ಅನುಭವ ಹೊಂದಿರುತ್ತಾರೆ.
ಸರ್ಜರಿಗೆ ಸಂಬಂಧಿಸಿದಂತೆ ಶ್ರೀಯುತರು ಬರೆದ ಹಲವಾರು ಪುಸ್ತಕಗಳು ಉಪಯುಕ್ತವಾಗಿದ್ದು, ಜನಪ್ರಿಯಗೊಂಡಿವೆ.
SRBS Manual of surgery ,SRBS clinical methods on surgery,SRBS surgical operations,SRBS surgery for Dental students,SRBs surgery for nursing students,SRBS atlas of tissue approximation ಮೊದಲಾದ ಹಲವಾರು ಸರ್ಜರಿಗೆ ಸಂಬಂಧಿಸಿದ ವೈದ್ಯಕೀಯ ಪುಸ್ತಕಗಳನ್ನು ಬರೆದಿದ್ದಾರೆ.
ಸರ್ಜರಿಗೆ ಸಂಬಂಧಿಸಿದಂತೆ ಸನ್ಮಾನ್ಯರ ಹಲವಾರು ಲೇಖನಗಳು ಸರ್ಜಿಕಲ್ ಜರ್ನಲ್‍ನಲ್ಲಿ ಪ್ರಕಟಗೊಂಡಿವೆ.SRBS surgical insights ಎನ್ನುವ ಜನಪ್ರಿಯ ವೆಬ್‍ಸೈಟನ್ನು ಹೊಂದಿರುವ ಇವರು ಸರ್ಜರಿಗೆ ಸಂಬಂಧಿಸಿದಂತೆ ವಿಶೇಷ ವೈದ್ಯಕೀಯ ಮಾಹಿತಿ, ವಿವರಗಳ ಉಪನ್ಯಾಸವನ್ನು ಈ ವೆಬ್‍ಸೈಟ್ ಮೂಲಕ ಪ್ರತಿದಿನ ಪ್ರಸರಿಸಿ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದಿರುತ್ತಾರೆ.
ಡಾ. ಶ್ರೀರಾಮ್ ಭಟ್ ಎಂ. ಇವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸಮಾಜಸೇವೆಯನ್ನು ಪರಿಗಣಿಸಿ ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮದಲ್ಲಿ ‘ವೈದ್ಯರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.

Read More News

Scroll to Top