ಮಂಗಳೂರು: ಆತ್ಮೀಯರೇ , ಈಗಾಗಲೇ ತಮಗೆಲ್ಲರಿಗೂ ತಿಳಿದಿರುವಂತೆ ಉಡುಪಿ-ಕಾಸರಗೋಡು 400 KV ವಿದ್ಯುತ್ ಲೈನ್ ಯೋಜನೆ (UKTL ) ಹೆಸರಿನಲ್ಲಿ ಕಳೆದ 5 ವರ್ಷಗಳಿಂದ ಈ ಯೋಜನೆ ಗುತ್ತಿಗೆದಾರ ಕಂಪನಿಯೆನಿಸಿಕೊಂಡಿರುವ UKTL-ಸ್ಟೆರ್ ಲೈಟ್ ಪವರ್ (Sterlite Power) ಕಂಪನಿಯವರು ಉಡುಪಿ, ದ.ಕ. ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವಿದ್ಯುತ್ ಮಾರ್ಗ ಕಾಮಗಾರಿ ನೆಪದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಇಂಧನ ಸಚಿವಾಲಯದ ಸ್ಪಷ್ಟ ನೀತಿ-ನಿಯಮ, ಕಾನೂನಾತ್ಮಕ ಮಾರ್ಗಸೂಚಿಗಳನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆನೇ ಕಾನೂನು ಬಾಹಿರ ಕಾರ್ಯ ನಡೆಸುತ್ತಾ ಬರುತ್ತಿದ್ದಾರೆ. ಇದೇ ಮಾದರಿಯಲ್ಲಿ, ಪಾಲಡ್ಕ-ಕಡಂದಲೆ 400/220KV KPTCL ವಿದ್ಯುತ್ ಪ್ರಸರಣ ಮಾರ್ಗ (KPTCL) ಕಾಮಗಾರಿಯಲ್ಲಿಯೂ ಸ್ಪಷ್ಟ ಕಾನೂನಾತ್ಮಕ ಮಾನದಂಡಗಳನ್ನು ಗಾಳಿಗೆ ತೂರಿ ದಬ್ಬಾಳಿಕೆ, ಬಲಾತ್ಕಾರ ತಂತ್ರಗಳ ಮೂಲಕ ಕಾಮಗಾರಿ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತಾವಿತ ಯೋಜನೆಗಳ ಬಗ್ಗೆ ಪ್ರಾಥಮಿಕ ಮಾಹಿತಿಗಾಗಿ ಯಾವುದೇ ಸಾರ್ವಜನಿಕ ಸಮಾಲೋಚನಾ ಸಭೆಗಳನ್ನೇ ನಡೆಸದೇ, ಉದ್ದೇಶಿತ ಯೋಜನಾ ಮಾರ್ಗದ ಭೂಮಾಲಕರುಗಳಿಗೆ ಯಾವುದೇ ಕಾನೂನು ಮಾನ್ಯತಾ ನೋಟಿಸು, ತಿಳುವಳಿಕೆ ಪತ್ರಗಳನ್ನು ನೀಡದೆಯೇ, ಭೂಮಾಲಕರುಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ, ಭೂಮಾಲಕರು, ಸಾರ್ವಜನಿಕರು ಮತ್ತು ಯೋಜನಾ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ತೀವ್ರ ವಿರೋಧವನ್ನು ದಿಕ್ಕರಿಸಿ, ಸೌಜನ್ಯ ಮೀರಿ ದಬ್ಬಾಳಿಕೆ ಹಾಗೂ ಅಮಾನವೀಯ ವರ್ತನೆ ಮೂಲಕ ಕಾಮಗಾರಿ ನಡೆಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ.
ನಮ್ಮ ಫಲವತ್ತಾದ ಕೃಷಿ ಭೂಮಿ, ಸಮೃದ್ಧ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು, ಬೃಹತ್ ಗಾತ್ರದ ವಿವಿಧ ಅಪರೂಪದ ಜಾತಿಯ ಮರಗಳನ್ನೊಳಗೊಂಡ ಸಂರಕ್ಷಿತ ಅರಣ್ಯ ಸಂಪತ್ತನ್ನು ಸರ್ವನಾಶಗೊಳಿಸುವ ಈ ಯೋಜನಾ ಮಾರ್ಗಕ್ಕೆ ನಮ್ಮೆಲ್ಲರ ತೀವ್ರ ವಿರೋಧವಿದ್ದು ಪರ್ಯಾಯ ಮಾರ್ಗಗಳಾದ ಸಮುದ್ರ ಮಾರ್ಗ, ಹೆದ್ದಾರಿ, ಸಾರ್ವಜನಿಕ ರಸ್ತೆ ಅಥವಾ ರೈಲ್ವೆ ಹಳಿ ಪಕ್ಕ, ಇಲ್ಲವೇ ಭೂಗತ ಮಾರ್ಗದ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ, ನಮ್ಮೆಲ್ಲರ ಹಕ್ಕೋತ್ತಾಯ, ಪ್ರತಿಭಟನೆ, ಕಾನೂನು ಹೋರಾಟ ಕಳೆದ 5 ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಾ ಬಂದಿದೆ. ಈಗಲೂ ನಮ್ಮ ಈ ಸ್ಪಷ್ಟ ಬೇಡಿಕೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ.
ಈ ಕುರಿತು ಉಭಯ ಜಿಲ್ಲೆಗಳನ್ನು ಪ್ರತಿನಿಧಿಸುತ್ತಿರುವ ಎಲ್ಲಾ ಶಾಸಕರುಗಳು, ಸಂಸದರುಗಳು, ಜಿಲ್ಲಾಧಿಕಾರಿಗಳು, ಗೌರವಾನ್ವಿತ ರಾಷ್ಟ್ರಪತಿಯವರು, ಮಾನ್ಯ ಪ್ರಧಾನ ಮಂತ್ರಿಯವರು, ಘನತೆವೆತ್ತ ರಾಜ್ಯಪಾಲರು, ಮುಖ್ಯಮಂತ್ರಿಯವರು, ರಾಜ್ಯ ಮತ್ತು ಕೇಂದ್ರದ ಇಂಧನ ಸಚಿವರುಗಳು, ವಿರೋಧ ಪಕ್ಷಗಳ ನಾಯಕರುಗಳಯಾದಿಯಾಗಿ ಈ ಯೋಜನೆಯಿಂದ ಆಗುತ್ತಿರುವ ಮತ್ತು ಮುಂದೆ ಆಗಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ನಮ್ಮ ಸ್ಪಷ್ಟ ವಿರೋಧದ ಹಕ್ಕೋತ್ತಾಯ ಮನವಿಗಳನ್ನು ಹಲವಾರು ಬಾರಿ ಸಲ್ಲಿಸಿ, ನ್ಯಾಯಯುತ ನಮ್ಮ ಬೇಡಿಕೆ ಈಡೇರಿಸುವಂತೆ ಅಂಗಲಾಚಿಕೊಂಡಿದ್ದೇವೆ. ಆದರೆ ಈವರೆಗೂ ಯಾರಿಂದಲೂ ಪರಿಣಾಮಕಾರೀ ಸ್ಪಂದನೆ ಶೂನ್ಯವಾಗಿರುವ ಜೊತೆಗೆ ಮತ್ತೆ ಮತ್ತೆ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಮತ್ತು ರಾಜ್ಯ ಸರಕಾರ, ಉಭಯ ಜಿಲ್ಲಾಡಳಿತ, ಜನಪ್ರತಿನಿದಿಗಳ ಕೃಪಾ ಕಟಾಕ್ಷದಿಂದ UKTL-Sterlite ಕಂಪನಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಹಾಗೂ ಪಾಲಡ್ಕ-ಕಡಂದಲೆ (KPTCL) ಯೋಜನೆಯ ಗುತ್ತಿಗೆದಾರರಿಂದ ದಿನಕ್ಕೊಂದು ಕಡೆ ಸಮಸ್ಯೆಯನ್ನು ನಮ್ಮ ಜನ ಅನುಭವಿಸುತ್ತಿದ್ದಾರೆ.
ಈ ಪ್ರಕೃತಿ ವಿರೋಧಿ ಯೋಜನೆಯಿಂದಾಗಲಿರುವ ಜ್ವಲಂತ ಸಮಸ್ಯೆಗಳು
1) ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಎಲ್ಲೂರಿನಿಂದ ದ.ಕ. ಜಿಲ್ಲೆಯ ಪುಣಚದ ವರೆಗಿನ 27 ಗ್ರಾಮಗಳ ಮತ್ತು ಕಾಸರಗೋಡು ಜಿಲ್ಲೆಯವರೆಗಿನ 115 ಕಿ ಮೀ ಉದ್ದ ಮತ್ತು 46 ಮೀಟರ್ ಅಗಲದ ಪ್ರಸ್ತಾವಿತ ಯೋಜನಾ ಮಾರ್ಗಕ್ಕಾಗಿ ನೇರವಾಗಿ 1150 ಎಕರೆ ಸಮೃದ್ಧ ಕೃಷಿ ಭೂಮಿ ಜೊತೆಗೆ ಈ ಲೈನ್ ಇಕ್ಕೆಲಗಳಲ್ಲಿ ಯಾವುದೇ ಮನೆ, ಕೊಟ್ಟಿಗೆ, ಗೋಡೌನ್,ಇನ್ನಿತರ ಯಾವುದೇ ಕಟ್ಟಡಗಳನ್ನು ಕಟ್ಟಿಕೊಳ್ಳಲು ಕೂಡಾ ಅವಕಾಶವಾಗದೆ, ಸುಮಾರು 2300 ಎಕರೆ ಜಮೀನು ಸೇರಿ ಒಟ್ಟು 3450 ಕ್ಕಿಂತ ಹೆಚ್ಚು ಜಮೀನು ಈ ಯೋಜನೆಗೆ ಸರ್ವನಾಶವಾಗಲಿದೆ.
2) ಯೋಜನಾ ವ್ಯಾಪ್ತಿಯ ಸುಮಾರು 2.65 ಲಕ್ಷದಷ್ಟು ಅಡಿಕೆ ಮರ ಗನ್ನು ಬುಡ ಸಮೇತ ಕಡಿದು ಹಾಕಲಾಗುತ್ತದೆ.
3) ಸುಮಾರು 1 ಲಕ್ಷಕ್ಕಿಂತ ಹೆಚ್ಚಿನ ತೆಂಗಿನ ಮರಗಳ ಮಾರಣ ಹೋಮವಾಗಲಿದೆ.
4) ಸುಮಾರು 4.5 ಲಕ್ಷದಷ್ಟು ಕಾಳು ಮೆಣಸಿನ ಬಳ್ಳಿಗಳು ನಾಶವಾಗಲಿದೆ.
5) ಸುಮಾರು 1.5 ಲಕ್ಷ ರಬ್ಬರ್ ಮರಗಳು ನೆಲಸಮವಾಗಲಿವೆ.
6) ಸುಮಾರು 25 ಸಾವಿರ ಹಲಸಿನ ಮರ, 28 ಸಾವಿರ ಮಾವಿನ ಮರ 2.5 ಲಕ್ಷಕ್ಕಿಂತ ಹೆಚ್ಚು ಬೃಹತ್ ಗಾತ್ರದ ವಿವಿಧ ಜಾತಿಯ ಕಾಡು ಮರಗಳು ಮತ್ತು ಔಷಧೀಯ ಗುಣವುಳ್ಳ ಸಹಸ್ರಾರು ವೈವಿದ್ಯಮಯ ಅರಣ್ಯ ಸಂಪತ್ತು ನಿರ್ನಾಮವಾಗಲಿದೆ.
7) ಲಕ್ಷಾಂತರ ಸಂಖ್ಯೆಯ ಬಾಳೆ, ಪೇರಳೆ, ಸಪೋಟ ಮುಂತಾದ ತೋಟಗಾರಿಕಾ ಬೆಳೆ ತೋಟಗಳು ಸರ್ವ ನಾಶವಾಗಲಿದೆ.
8) ಬಹುಮುಖ್ಯವಾಗಿ 328 ವಾಸ್ತವ್ಯದ ಮನೆಗಳು, 26 ದೈವಸ್ಥಾನ, 16 ದೇವಸ್ಥಾನ, 8 ಮಸೀದಿ, 14 ಶಾಲೆಗಳು, ಮತ್ತು 13 ಕ್ರೈಸ್ತ ಧರ್ಮದ ಇಗರ್ಜಿ-ಪ್ರಾರ್ಥನಾ ಮಂದಿರಗಳು ಈ ಯೋಜನಾ ಮಾರ್ಗಕ್ಕಾಗಿ ಬಲಿಯಾಗಲಿವೆ.
9) ಇವೆಲ್ಲದರ ಜೊತೆಗೆ ಈ ಪ್ರಾಕೃತಿಕ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿರುವ ಕೋಟ್ಯಂತರ ಪಶು-ಪಕ್ಷಿಗಳು, ಜಲಚರ ಜೀವಿಗಳು, ಜೀವ ವೈವಿದ್ಯ ಸಂಕುಲಗಳನ್ನೆಲ್ಲಾ ಸರ್ವ ನಾಶಗೊಳಿಸಲಿದೆ.
10) ಈ ಯೋಜನೆಯಿಂದ ಹರಿದಾಡಲಿರುವ ಬೃಹತ್ ಪ್ರಮಾಣದ ವಿದ್ಯುತ್ಶಕ್ತಿಯಿಂದ ಸೃಷ್ಟಿಯಾಗಲಿರುವ ವಿಕಿರಣ, ವಿದ್ಯುತ್ ಕಾಂತೀಯ ಅಲೆಗಳಿಂದ ಜನ, ಜಾನುವಾರುಗಳ ಆರೋಗ್ಯದ ಮೇಲಾಗಲಿರುವ ಕ್ಯಾನ್ಸರ್, ಬಂಜೆತನ ಮುಂತಾದ ಹಲವಾರು ಮಾರಣಾoತಿಕಾ ಕಾಯಿಲೆಗಳಿಂದ ಆಗಲಿರುವ ಸಾವು ನೋವುಗಳು.
ಇನ್ನೂ ಹತ್ತು ಹಲವು ಕಾರಣಗಳಿಂದಾಗಿ ಪ್ರಕೃತಿ ವಿರೋಧಿಯಾಗಲಿರುವ ಇಂತಹ ವಿನಾಶಕಾರೀ ಯೋಜನೆಯ ಪ್ರಸ್ತಾವಿತ ಮಾರ್ಗವನ್ನು ಬದಲಾವಣೆ ಮಾಡಿ ಅತೀ ಕಡಿಮೆ ಸಮಸ್ಯೆಯಾಗುವ ಪರ್ಯಾಯ ಮಾರ್ಗಗಳ ಮೂಲಕ ಯೋಜನೆ ಅನುಷ್ಠಾನಗೊಳಿಸುವರೇ ಒತ್ತಾಯಿಸಿ “ಬೃಹತ್ ಹಕ್ಕೋತ್ತಾಯ ಜಾಥಾ ಮತ್ತು ಪ್ರತಿಭಟನೆಯನ್ನು” ಮಂಗಳೂರು ಕೇಂದ್ರ ಭಾಗದಲ್ಲಿ ನಡೆಸಲು ತೀರ್ಮಾನ ಮಾಡಿದ್ದೇವೆ. ದಿನಾಂಕ: 20-02-2025ನೇ ಗುರುವಾರ ಬೆಳಿಗ್ಗೆ ಗಂಟೆ 9.30ಕ್ಕೆ ಸರಿಯಾಗಿ ಮಂಗಳೂರಿನ ಬಲ್ಮಠದಿಂದ ಮಿನಿ ವಿಧಾನ ಸೌಧದವರೆಗೆ “ಹಕ್ಕೋತ್ತಾಯ ಜಾಥಾ” ನಡೆಸಿ ನಂತರ 11.00 ಗಂಟೆಗೆ “ಬೃಹತ್ ಪ್ರತಿಭಟನಾ ಸಭೆ”ಯನ್ನು ಮಿನಿ ವಿಧಾನ ಸೌಧದ ಎದುರು ಸುಮಾರು 15 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಯೋಜನಾ ಸಂತ್ರಸ್ತರು, ಕೃಷಿಕರು ಹಾಗೂ ರೈತ ಪರ, ಪರಿಸರಪರ ಕಾಳಜಿ ಉಳ್ಳ ಸಮಾನ ಮನಸ್ಕ ಸಂಘ ಸಂಸ್ಥೆ ಪ್ರತಿನಿಧಿಗಳು ಹಾಗೂ ಸಾರ್ವಜನಿಕ ಬಂಧುಗಳೆಲ್ಲರನ್ನು ಜೊತೆಯಾಗಿಸಿಕೊಂಡು ಘನ ಸರಕಾರಗಳನ್ನು, ಜನಪ್ರತಿನಿಧಿಗಳನ್ನು, ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತವನ್ನು ಎಚ್ಚರಿಸುವ ಕಾರ್ಯ ನಡೆಸಲಾಗುವುದು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಮುಂದೆ ನಮ್ಮ ಪ್ರಮುಖ ಹಕ್ಕೋತ್ತಾಯಗಳು:
1) ಈಗಾಗಲೇ ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡಿರುವ ಕೃಷಿ ಭೂಮಿ ಮತ್ತು ಸಮೃದ್ಧ ಕೃಷಿ ಸಂಪತ್ತು, ಅರಣ್ಯ ಸಂಪತ್ತು ಸರ್ವ ನಾಶವಾಗುವುದನ್ನು ತಪ್ಪಿಸಿ ಯೋಜನೆ ಅನಿವಾರ್ಯವೇ ಆಗಿದ್ದಲ್ಲಿ “ಪರ್ಯಾಯ ಮಾರ್ಗದ” ಮೂಲಕ ಮಾತ್ರವೇ ಅನುಷ್ಠಾನಗೊಳಿಸುವುದು. 2) ಬ್ರಿಟಿಷರ ಕಾಲದ ಟೆಲಿಗ್ರಾಫ್ ಕಾಯ್ದೆ-1885ನ್ನು ಸಂಪೂರ್ಣ ರದ್ದುಗೊಳಿಸಿ, 2003ರ ಎಲೆಕ್ಟ್ರಿಸಿಟಿ ಕಾಯ್ದೆಯನ್ನು ಮಾತ್ರ ವಿದ್ಯುತ್ ಪ್ರಸರಣ ಮಾರ್ಗ ಯೋಜನೆಗಳಿಗೆ ಅನ್ವಯಗೊಳಿಸುವುದು.
3) ಕೇಂದ್ರ ಮತ್ತು ರಾಜ್ಯ ಸರಕಾರಗಳ ಸ್ಪಷ್ಟ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡುವುದು.
4) ಉಡುಪಿ-ಕಾಸರಗೋಡು 400 KV ವಿದ್ಯುತ್ ಪ್ರಸರಣ ಮಾರ್ಗ ಯೋಜನೆ ಅನುಷ್ಠಾನಕ್ಕಾಗಿ ಗುತ್ತಿಗೆದಾರರಾದ UKTL -STERLITE ಕಂಪನಿಗೆ ನೀಡಲಾದ ಏಕ ಸ್ವಾಮ್ಯ ಪರಮಾಧಿಕಾರವನ್ನು ರದ್ದುಪಡಿಸಿ ಸರಕಾರವೇ ಜವಾಬ್ದಾರಿಯುತ ಪ್ರಮುಖ ಭಾಗಿದಾರರಾಗುವುದು.
ಆತ್ಮೀಯರೇ, ನಮ್ಮೆಲ್ಲರ ಉಸಿರಾಗಿರುವ ನೆಲ-ಜಲ-ಪ್ರಕೃತಿ-ಪರಿಸರ ಮತ್ತು ಅಗಾಧ ಕೃಷಿ ಸಂಪತ್ತನ್ನು ಜಾಗ್ರತೆಯಿಂದ ಉಳಿಸಿ, ಬೆಳೆಸಿ ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸುವ ಘನ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಈ ನಿಟ್ಟಿನಲ್ಲಿ ನಮ್ಮ ಈ ನ್ಯಾಯಯುತ, ರಾಜಕೀಯ ರಹಿತ, ಧರ್ಮಾತೀತ, ಜಾತ್ಯತೀತವಾದ ಪ್ರತಿರೋಧವನ್ನು ಅರ್ಥೈಸಿಕೊಂಡು ಬೆಂಬಲಿಸಿ.
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರು:
- ಆಲ್ವಿನ್ ಡಿಸೋಜಾ, ಪಾನೀರ್ – ಅಧ್ಯಕ್ಷರು, ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.)
- ಪಾವ್ಲ್ ರೋಲ್ಫಿ ಡಿ ಕೋಸ್ತಾ – ಮಾಜಿ ಕೇಂದ್ರಿಯ ಅಧ್ಯಕ್ಷರು, ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.)
- ರೊಯ್ ಕ್ಯಾಸ್ತಲಿನೊ – ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ
- ಸ್ಟ್ಯಾನಿ ಲೋಬೊ – ನಿಕಟ ಪೂರ್ವ ಅಧ್ಯಕ್ಷರು, ಕಥೊಲಿಕ್ ಸಭಾ ಮಂಗಳೂರು ಪ್ರ ಪ್ರದೇಶ (ರಿ.)
- ಸಂತೋಷ್ ಕರ್ನೆಲಿಯೊ – ಕಥೊಲಿಕ್ ಸಭಾ ಉಡುಪಿ ಪ್ರದೇಶ (ರಿ.)
- ಆಲ್ವಿನ್ ಪ್ರಶಾಂತ್ ಮೊಂತೇರೊ – ಪ್ರಧಾನ ಕಾರ್ಯದರ್ಶಿಗಳು, ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.)
- ವಿಕ್ಟರ್ ಕಡಂದಲೆ – ಹೋರಾಟ ಸಮಿತಿ ಸದಸ್ಯರು
- ಚಂದ್ರಹಾಸ ಶೆಟ್ಟಿ
- ಕೃಷ್ಣ ಪ್ರಸಾದ್ ತಂತ್ರಿ



















































































































































































