ಪುತ್ತಿಲ ವಿರುದ್ಧ ಕಟೀಲು ಬ್ರಹ್ಮಾಸ್ತ್ರ ಪ್ರಯೋಗಿಸಿದರೆ?

105.7K Views 6 Sep 2024

ಸ್ಪೆಷಲ್ ಸ್ಟೋರಿ: ಡಾ. ಅಶೋಕ್ ಶೆಟ್ಟಿ ಬಿ. ಎನ್.
ಮಂಗಳೂರು: ಕಳೆದ ಒಂದು ವಾರದಿಂದ ಪ್ರಬಲ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲರ ಮೇಲೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯರೊಬ್ಬರಿಂದ ದೂರು ನೀಡಲ್ಪಟ್ಟು ಐಪಿಸಿ ಸೆಕ್ಷನ್ 354 (ಎ),417, 506ರಂತೆ ದಾಖಲಾದ ಲೈಂಗಿಕ ದೌರ್ಜನ್ಯದ ಕೇಸಿನ ಬಗ್ಗೆ ಜನರು ಕುತೂಹಲದಿಂದ ಮಾತನಾಡುತ್ತಿದ್ದಾರೆ.
ಇದರ ಹಿಂದೆ ಪುತ್ತಿಲರ ವಿರೋಧಿಗಳ ಷಡ್ಯಂತ್ರವಿದೆಯೆಂದು ಸುದ್ದಿಯಾಗುತ್ತಿದೆ.
ಏನದು ಕೇಸು?
ಕಳೆದ ವರ್ಷ ಜೂನ್ 3ರಂದು ಬೆಂಗಳೂರಿನ ಖಾಸಗಿ ಲಾಡ್ಜ್ವೊಂರಲ್ಲಿ ಪುತ್ತೂರು ಮೂಲದ 47ರ ಹರೆಯದ ವಿವಾಹಿತ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪುತ್ತೂರು ಮಹಿಳಾ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ.
ದೂರು ನೀಡಿದ ಮಹಿಳೆ ಮೂಲತಃ ಆಂಧ್ರ ಮೂಲದವರಾಗಿದ್ದು, ಪುತ್ತೂರಿನಲ್ಲಿ ಸಂಸಾರ ಹೂಡಿದ್ದರು. ಆಕೆಗೆ ಮಗಳೊಬ್ಬಳಿದ್ದಾಳೆ.
ಆಕೆ ಪುತ್ತಿಲರ ವರ್ಚಸ್ಸಿನಿಂದ ಪ್ರಭಾವಿತರಾಗಿ ಪುತ್ತಿಲರ ಜೊತೆ ಪರಿಚಯ ಬೆಳೆಸಿದ್ದರು. ಆದರೆ, ಪುತ್ತಿಲ ತನ್ನನ್ನು ಬೆಂಗಳೂರಿನ ಖಾಸಗಿ ಲಾಡ್ಜ್ ನ ಕೊಠಡಿಗೆ ಕರೆಯಿಸಿ ಲೈಂಗಿಕ ದೌರ್ಜನ್ಯವೆಸಗಿದರೆಂದು ಘಟನೆ ನಡೆದ ಒಂದು ವರ್ಷದ ಬಳಿಕ ತಡವಾಗಿ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಆ ದಿವಸ ಪುತ್ತಿಲ ಬೆಂಗಳೂರಿನ ಆ ಖಾಸಗಿ ಲಾಡ್ಜ್ ನಲ್ಲಿದ್ದಾರಾ? ದೂರು ನೀಡಿದ ಮಹಿಳೆ ಪುತ್ತಿಲರ ರೂಮಿಗೆ ಹೋಗಿದ್ದು ನಿಜನಾ? ಎಂಬುವುದು ಪೊಲೀಸ್ ತನಿಖೆಯಿಂದ ಇನ್ನಷ್ಟೇ ಸ್ಪಷ್ಟವಾಗಬೇಕಾಗಿದ್ದು, ಯಾರೂ ಬಂದು ದೂರು ನೀಡಿದರೂ ದೂರು ದಾಖಲಿಸಿ ಎಫ್‌ಐಆರ್ ದಾಖಲಿಸಬೇಕಾದದ್ದು ಪೊಲೀಸರ ಮೊದಲ ಕರ್ತವ್ಯವಾಗಿರುವುದ್ದರಿಂದ ಸಹಜವಾಗಿಯೇ ಪುತ್ತೂರು ಮಹಿಳಾ ಠಾಣಾ ಪೊಲೀಸರು ಪುತ್ತಿಲರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಇದು ಅತ್ಯಾಚಾರವಲ್ಲ. ಲೈಂಗಿಕ ದೌರ್ಜನ್ಯದ ಕೇಸು. ಪೊಲೀಸ್ ಠಾಣೆಯಲ್ಲಿ ಜಾಮೀನು ಸಿಗಬಹುದಾದ ಪ್ರಕರಣ. ಅದರಂತೆ ಪುತ್ತಿಲರು ಪುತ್ತೂರಿನ ನ್ಯಾಯಾಲಯದಿಂದ ಜಾಮೀನು ಪಡೆದು ಪ್ರಕರಣದ ಬಗ್ಗೆ ಕಾನೂನು ಸಮರ ನಡೆಸುವುದಾಗಿ ಹೇಳಿದ್ದಾರೆ.
ತನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ಸತ್ಯ ಯಾವತ್ತೂ ಸಾಯುವುದಿಲ್ಲವೆಂದು ಕೋರ್ಟು ಮೂಲಕ ಜಾಮೀನು ಪಡೆದಿರುವ ಪುತ್ತಿಲರು ಈ ಪ್ರಕರಣದ ಬಗ್ಗೆ ವಿರೋಧಿಗಳ ಷಡ್ಯಂತ್ರವೆಂದು ಭಾವಿಸಿದ್ದಾರೆ.
ಪುತ್ತಿಲರ ವಿರೋಧಿಗಳ್ಯಾರು? ಕಟೀಲ್ ಬ್ರಹ್ಮಾಸ್ತ್ರ ಪ್ರಯೋಗಿಸಿದರೆ?
ಆರ್‌ಎಸ್‌ಎಸ್ ಸಂಘಟನೆಯಲ್ಲಿದ್ದು ಬಿಜೆಪಿ ಸೇರಿದ ಅರುಣ್ ಪುತ್ತಿಲರು ಕಳೆದ ವರ್ಷ ಬಿಜೆಪಿಯಲ್ಲಿ ಎಂಎಲ್‌ಎ ಟಿಕೇಟು ಸಿಗದಿದ್ದಾಗ ಸ್ವತಂತ್ರವಾಗಿ ಸ್ಪರ್ಧಿಸಿ 62,458 ಮತಗಳನ್ನು ಪಡೆದಿದ್ದರು.66,607 ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್‌ಕುಮಾರ್ ರೈ ಅವರು 4,148 ಮತಗಳಂತರದಿಂದ ಗೆದ್ದಿದ್ದರು. ಪುತ್ತಿಲರ ಕಾರಣದಿಂದ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನೆಲಕಚ್ಚಿ ಒಂದು ಎಂಎಲ್ಎ ಸ್ಥಾನ ಕಳೆದುಕೊಂಡಿತ್ತು.
ನಂತರ, ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಪುತ್ತೂರಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ನೀಡಿ ಗೆಲುವು ಸಾಧಿಸಿತ್ತು. ಬಿಜೆಪಿಯಿಂದ 4ನೇ ಬಾರಿಗೆ ನಳಿನ್‌ಕುಮಾರ್ ಕಟೀಲು ಅವರು ಸ್ಪರ್ಧಿಸಿದರೆ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಲಾಯಿತು.
ಬಿಜೆಪಿಯಲ್ಲಿ ತನ್ನ ಬದಲು ಪುತ್ತೂರಲ್ಲಿ ಮಹಿಳಾ ಅಭ್ಯರ್ಥಿಗೆ ಎಂಎಲ್‌ಎ ಟಿಕೇಟ್ ಕೊಟ್ಟು ಕಟೀಲ್ ತನ್ನನ್ನು ತುಳಿದರೆಂಬ ಸಿಟ್ಟು, ಆಕ್ರೋಶ ಪುತ್ತಿಲರವರಲ್ಲಿತ್ತು.
ಈ ಕಾರಣಕ್ಕೆ ಪುತ್ತಿಲರು ಕಟೀಲ್ ಅವರಿಗೆ ಎಂಪಿ ಟಿಕೆಟ್ ಸಿಗದಂತೆ ಸರ್ವ ಪ್ರಯತ್ನವನ್ನು ಮಾಡಿ, ಯಡಿಯೂರಪ್ಪ, ಕಲ್ಲಡ್ಕ ಪ್ರಭಾಕರ ಭಟ್ ಸಹಕಾರದಿಂದ ಅದರಲ್ಲಿ ಯಶಸ್ವಿಯೂ ಆದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಟೀಲ್‌ಗೆ ಕೊಕ್ ಕೊಟ್ಟು ಪಕ್ಷದ ಹೈಕಮಾಂಡ್ ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ಎಂಪಿ ಟಿಕೆಟ್ ಕೊಟ್ಟಾಗ ಪುತ್ತಿಲ ಪರಿವಾರ ಮೋದಿ ಪರಿವಾರ ಒಗ್ಗಟ್ಟಾಗಿ ದುಡಿಯುತ್ತೇವೆಂದು ಪುತ್ತಿಲರು ಬಿಜೆಪಿ ಸೇರಿದರು. ಬ್ರಿಜೇಶ್ ಚೌಟರು ಗೆದ್ದು ಎಂಪಿಯಾದರು. ಕೈಯಲ್ಲಿ ಯಾವುದೇ ಅಧಿಕಾರವಿಲ್ಲದ ನಳಿನ್‌ಕುಮಾರ್ ಕಟೀಲ್ ಅವರು ತನಗಿನ್ನು ಅಧಿಕಾರ ಬೇಡ, ಸ್ವಲ್ಪ ಸಮಯ ಕಾದು ನೋಡೋಣ. ಜನಸೇವೆಯನ್ನು ಮುಂದುವರಿಸುತ್ತೇನೆಂದು ಹಿತೈಷಿಗಳಲ್ಲಿ ಹೇಳಿಕೊಂಡರು. ಮೂರು ಬಾರಿ ಎಂಪಿಯಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಒಂದೇ ಒಂದು ಕಪ್ಪುಚುಕ್ಕೆಯಿಲ್ಲದೆ ದಣಿವರಿಯದ ಜನನಾಯಕನಾಗಿ ಜನರ ಹೃದಯ ಗೆದ್ದಿದ್ದ ನಳಿನ್‌ಕುಮಾರ್ ಕಟೀಲು ಅವರ ಸದ್ಯದ ಪರಿಸ್ಥಿತಿಗೆ ಅವರ ಅಭಿಮಾನಿಗಳು, ಹಿತೈಷಿಗಳು ಪುತ್ತಿಲರೇ ಕಾರಣ ಎನ್ನುತ್ತಿದ್ದು, ಪ್ರಸ್ತುತ ಪುತ್ತಿಲರ ಪ್ರಕರಣ ಸದ್ದಾಗುತ್ತಿರುವ ಹಿನ್ನಲೆಯಲ್ಲಿ ಇದರ ಹಿಂದೆ ಕಟೀಲ್ ಅವರು ಬ್ರಹ್ಮಾಸ್ತ್ರ ಪ್ರಯೋಗಿಸಿದರೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.
ಯಾರ ತಂಟೆಗೂ ಹೋಗದ ಸಹನಾಮೂರ್ತಿ ನಳಿನ್‌ಕುಮಾರ್ ಕಟೀಲ್:
ನಳಿನ್‌ಕುಮಾರ್ ಅವರು ಪುತ್ತಿಲರಂತೆ ಆರ್‌ಎಸ್‌ಎಸ್ ಹಿನ್ನಲೆಯಿಂದ ಬಂದವರು. ಅದ್ಬುತ ವಾಗ್ಮಿ, ಮಾತುಗಾರ, ನಿಸ್ವಾರ್ಥ ಜನಸೇವಕ, ನಿಷ್ಕಳಂಕ ರಾಜಕಾರಣಿ.
ಕಳೆದ 6 ವರ್ಷಗಳಿಂದ ಅವರ ಏಳ್ಗೆಯನ್ನು ಸಹಿಸದ ಮಂದಿ ಅವರಿಗೆ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಾ ಬಂದರು. ಟ್ರೋಲ್ ಮಾಡಿದರು.ತನ್ನ ಕೈಯಲ್ಲಿ ಅಧಿಕಾರವಿದ್ದಾಗಲೂ ಕಟೀಲ್ ಅವರು ಯಾರೊಬ್ಬರ ಮೇಲೂ ರೇಗಲಿಲ್ಲ,ದೂರು ದಾಖಲಿಸಲಿಲ್ಲ. ಸೇಡು ತೀರಿಸಲಿಲ್ಲ. ಅವರು ತಾಳ್ಮೆವಂತ. ಆದರೆ, ನೇರ ನಡೆ ನುಡಿಯ ನಿರ್ಭೀತ ಮಾತುಗಾರ.
ಕಟೀಲು ಶ್ರೀದುರ್ಗಾ ಪರಮೇಶ್ವರಿ ಅಮ್ಮನವರ ಪರಮ ಭಕ್ತರಾಗಿರುವ ಕಟೀಲು ಅವರು ದೇವರು, ಧರ್ಮದ ಬಗ್ಗೆ ಅಚಲ ಶ್ರದ್ಧೆಯಿಟ್ಟವರು. ಇಂಥ ಉನ್ನತ ವ್ಯಕ್ತಿತ್ವದ ಕಟೀಲ್ ಪುತ್ತಿಲರ ವಿರುದ್ಧ ಷಡ್ಯಂತ್ರ ನಡೆಸಿರಲಿಕ್ಕಿಲ್ಲ. ಸೇಡಿಗೆ ಪ್ರತಿಸೇಡು ಎಂದು ಮುಯ್ಯಿಗೆ ಮುಯ್ಯಿ ತೀರಿಸಿರಲಿಕ್ಕಿಲ್ಲ. ಪುತ್ತಿಲರ ವಿರುದ್ಧ ಕಟೀಲ್ ಬ್ರಹ್ಮಾಸ್ತ್ರ ಪ್ರಯೋಗಿಸಿರಲಿಕ್ಕಿಲ್ಲ ಎಂಬುವುದು ವಾಸ್ತವ ಸತ್ಯ.
ಆದರೆ ಗಾಳಿ ಬರದೆ ಎಲೆ ಅಲುಗಾಡುವುದಿಲ್ಲ ಎಂಬ ಮಾತೊಂದಿದೆ.ಸತ್ಯ ಎಂಬುವುದು ನಿಗೂಢವಾಗಿಯೇ ಇರುತ್ತದೆ. ಪುತ್ತಿಲರ ಪ್ರಕರಣದಲ್ಲಿ ಕಟೀಲು ಬ್ರಹ್ಮಾಸ್ತ್ರ ಪ್ರಯೋಗಿಸಿದರೇ ಎಂಬುವುದು ಎಲ್ಲೆಡೆ ಕೇಳಿ ಬರುತ್ತಿರುವ ಸದ್ದಾಗುತ್ತಿರುವ ಸುದ್ದಿ. ಈ ಬಗ್ಗೆ ಕಟೀಲು ಅವರು ಮೌನ ಮುರಿದು ಉತ್ತರಿಸಬೇಕಾಗಿದೆ.

Read More News

Scroll to Top