ಆ.31: ತುಳುಭವನದಲ್ಲಿ “ಸುವರ್ಣ ಸ್ಮರಣೆ”

113.1K Views 28 Aug 2024

ಮಂಗಳೂರು: “ದಿ. ಸದಾನಂದ ಸುವರ್ಣ ಅವರದ್ದು ತುಳು, ಕನ್ನಡ ರಂಗಭೂಮಿ, ಸಾಹಿತ್ಯ, ಚಲನ ಚಿತ್ರ, ಕಿರುತೆರೆ ಮಾಧ್ಯಮಗಳಲ್ಲಿ ಚಿರಸ್ಥಾಯಿಯಾದ ಹೆಸರು. 1977 ರಲ್ಲಿ ಅವರ ನಿರ್ಮಾಣದ ಘಟಶ್ರಾದ್ಧ ಸ್ವರ್ಣಕಮಲ ಪಡೆದರೆ, 1991ರಲ್ಲಿ ಅವರು ನಿರ್ಮಿಸಿ ನಿರ್ದೇಶಿಸಿದ ದೂರದರ್ಶನ ಸರಣಿ ಗುಡ್ಡದ ಭೂತ ಕರ್ನಾಟಕದ ಜನಮನಕ್ಕೆ ಲಗ್ಗೆ ಇಡುವುದರ ಜೊತೆ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಇವಲ್ಲದೆ ಅವರು ರಾಜ್ಯ ಪ್ರಶಸ್ತಿ ವಿಜೇತ ಕುಬಿ ಮತ್ತು ಇಯಾಲ ಚಲನಚಿತ್ರವನ್ನೂ ಕಾರಂತ ದರ್ಶನವೆನ್ನುವ ಸರಣಿ ಹಾಗೂ ಶ್ರೀ ನಾರಾಯಣ ಗುರುಗಳ ಬಗ್ಗೆ ಸಾಕ್ಷಚಿತ್ರವೊಂದನ್ನೂ ನಿರ್ದೇಶಿಸಿದ್ದಾರೆ. 1997ರ ನಂತರ ಮುಂಬೈ ತೊರೆದು ಮಂಗಳೂರಲ್ಲಿ ನಲೆಸಿದ ಅವರು ಇಲ್ಲಿ ನಿರ್ದೇಶಿಸಿದ ಉರುಳು, ಕೋರ್ಟ್‌ ಮಾರ್ಷಲ್, ಮಳೆ ನಿಲ್ಲುವವರೆಗೆ ನಾಟಕಗಳು ಬಹಳ ಪ್ರದರ್ಶನಗಳನ್ನು ಕಂಡಿವೆ. ಕಲಂಕ್‌ದಿ ನೀರ್ ಎಂಬ ತುಳು ನಾಟಕವನ್ನೂ ಮಂಗಳೂರಲ್ಲಿ ಅವರು ನಿರ್ದೇಶಿಸಿದ್ದಾರೆ. ಹೀಗಾಗಿ ಅವರ ಸ್ಮರಣೆಯಲ್ಲಿ ಆಗಸ್ಟ್ 31ರಂದು ಉರ್ವಾ ಸ್ಟೋರ್ ಬಳಿಯ ತುಳುಭವನದಲ್ಲಿ ಒಂದು ದಿವಸದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ“ ಎಂದು ರಂಗಕರ್ಮಿ ಚಂದ್ರಹಾಸ ಉಳ್ಳಾಲ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಬಳಿಕ ಮಾತಾಡಿದ ನಟೇಶ್ ಉಳ್ಳಾಲ್, ”ಆ ದಿನ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಅವರ ಸಿನಿಮಾ, ಸರಣಿಗಳು, ತುಳು ಕನ್ನಡ ರಂಗಭೂಮಿಗೆ ಅವರ ಕೊಡುಗೆಗಳ ಬಗ್ಗೆ ಉಪನ್ಯಾಸ, ಸಂವಾದ ಗೋಷ್ಠಿ ಮತ್ತು ಸಮಾರೋಪದಲ್ಲಿ ಸಂಜೆ 6.30ಕ್ಕೆ ಅವರು ನಿರ್ದೇಶಿಸಿದ ಕೋರ್ಟ್‌ ಮಾರ್ಷಲ್ ನಾಟಕ ಪ್ರದರ್ಶಿಸುತ್ತಿದ್ದೇವೆ. ವಿವಿಧ ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜರ್ನಿ ಥೇಟರ್‌ಗ್ರೂಪ್ (ರಿ) ಮಂಗಳೂರು, ಅಸ್ತಿತ್ವ (ರಿ)ಮಂಗಳೂರು, ಕಲಾಸಂಗಮ (ರಿ) ಮಂಗಳೂರು, ಸಂಕೇತ್ ಕಲಾವಿದರು (ರಿ) ಮಂಗಳೂರು, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಮಂಗಳೂರು, ಅರೆಹೊಳ ಪ್ರತಿಷ್ಠಾನ (ರಿ) ಮಂಗಳೂರು, ಸಮುದಾಯ ಮಂಗಳೂರು, ಆಯನ ನಾಟಕದ ಮನೆ ಮಂಗಳೂರು, ಭೂಮಿಕಾ (ರಿ) ಮಂಗಳೂರು ಮತ್ತು ಕಾರಂತೋತ್ಸವ ಸಮಿತಿ ಮುಂಬೈ ಇದರಲ್ಲಿ ಪಾಲ್ಗೊಳುತ್ತಿದೆ“ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಲಕ್ಷ್ಮಣ್ ಕುಮಾರ್ ಮಲ್ಲೂರು, ಗೋಪಿನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು

Read More News

Scroll to Top