ಶಿವಮೊಗ್ಗ: ಯಡಿಯೂರಪ್ಪನವರು ಬಿಜೆಪಿ ಪಕ್ಷದ ಕುತ್ತಿಗೆ ಹಿಸುಕುವ ಕೆಲಸ ಮಾಡುತ್ತಿದ್ದಾರೆ. ಪಕ್ಷದ ನಿಷ್ಠಾವಂತ ಕಾರ‍್ಯಕರ್ತರಿಗೆ,ಪಕ್ಷಕ್ಕಾಗಿ ದುಡಿದವರಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.
ಇವರದ್ದೇನಿದ್ದರೂ, ತಂದೆ-ಮಗನ ರಾಜಕೀಯ. ತಾನು ಅರ್ಹನಾಗಿದ್ದರೂ, ಹಿಂದುಳಿದ ವರ್ಗಕ್ಕೆ ಸೇರಿದ್ದರೂ, ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದರೂ ತನಗೆ ರಾಜ್ಯಾಧ್ಯಕ್ಷ ಸ್ಥಾನಮಾನ ನೀಡಲಿಲ್ಲ ಯಾಕೆ?
ಎಲ್ಲವನ್ನು ಲಿಂಗಾಯಿತರಿಗೆ ಕೊಡಬೇಕೆನ್ನುವ ಇವರು ಹಿರಿಯ ಲಿಂಗಾಯಿತ ನಾಯಕರಾದ ಬಸವ ಗೌಡ ಯತ್ನಾಳ್ ಪಾಟೀಲ್ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಬಹುದಿತ್ತಲ್ಲ? ಬದಲಾಗಿ ತನ್ನ ಮಗನಿಗೇಕೆ ನೀಡಿದರು ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಒಕ್ಕಲಿಗರ ನಾಯಕ ಸಿ.ಟಿ. ರವಿಯವರನ್ನು ರಾಜ್ಯಾಧ್ಯಕ್ಷ ಮಾಡಲಿಲ್ಲ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸೀಟು ಕೂಡಾ ಕೊಡಲಿಲ್ಲ.
ಕೊಡುಗು-ಮೈಸೂರಿನಲ್ಲಿ ಪ್ರತಾಪ ಸಿಂಹ, ದಕ್ಷಿಣ ಕನ್ನಡದಲ್ಲಿ ನಳಿನ್‌ಕುಮಾರ್ ಕಟಿಲ್, ಬೆಂಗಳೂರು ಉತ್ತರದಲ್ಲಿ ಡಿ.ವಿ. ಸದಾನಂದ ಗೌಡರಿಗೆ ಎಂಪಿ ಟಿಕೇಟ್ ನೀಡದೆ ಸೇಡು ತೀರಿಸಿಕೊಂಡರು.
ಹೆಚ್ಚೇಕೆ? ಹಾವೇರಿಯಲ್ಲಿ ತನ್ನ ಮಗ ಕಾಂತೇಶ್‌ಗೆ ಟಿಕೇಟ್ ನೀಡಲಿಲ್ಲ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬ ಮಾತ್ರ ಇರಬೇಕು. ಉಳಿದವರೆಲ್ಲ ನಗಣ್ಯ ಎಂದು ಈಶ್ವರಪ್ಪ ಕಿಡಿ ಕಾರಿದ್ದಾರೆ.
ಇದನ್ನೆಲ್ಲ ಪ್ರತಿಭಟಿಸಿ ನಾನು ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಇದು ಕೇಂದ್ರದ ನಾಯಕರಿಗೆ ಗೊತ್ತಾಗಬೇಕು. ಇಡೀ ರಾಜ್ಯದ ಜನ ನನ್ನನ್ನು ಬೆಂಬಲಿಸಿದ್ದಾರೆ.ಮೋದಿ ನನ್ನ ದೇವರು. ನಾನು ಗೆದ್ದು ಎಂಪಿಯಾಗಿ ಮೋದಿಯನ್ನು ಭೇಟಿಯಾಗುತ್ತೇನೆ. ಯಡಿಯೂರಪ್ಪನವರು ಬಿಜೆಪಿ ಪಕ್ಷವನ್ನು ತನ್ನ ಸ್ವಂತದ ಆಸ್ತಿ ಎಂದು ಭಾವಿಸಿದ್ದಾರೆ. ಅದು ಅವರ ಸ್ವಾರ್ಥ ಎಂದು ಈಶ್ವರಪ್ಪ ರೇಗಿದ್ದಾರೆ.
ಶಿವಮೊಗ್ಗಕ್ಕೆ ಮೋದಿ ಬರಲಿರುವ ಹಿನ್ನಲೆಯಲ್ಲಿ ಈಶ್ವರಪ್ಪವರ ಬಂಡಾಯವನ್ನು ಶಮನಗೊಳಿಸಲು ರಾಜ್ಯ ಬಿಜೆಪಿ ನಾಯಕರಾದ ಆರ್. ಅಶೋಕ್ ಸೇರಿದಂತೆ ನಾಯಕರನೇಕರು ಅವರ ನಿವಾಸಕ್ಕೆ ತೆರಳಿ ಮನವೊಲಿಸಿದರು. ಫಲಪ್ರದವಾಗಲಿಲ್ಲ.
ಕೇವಲ ತನಗೆ ಬೇಕಾದವರಿಗೆ ಎಂಪಿ ಟಿಕೇಟ್ ಕೊಟ್ಟು ತನಗಾದವರಿಗೆ ಕೊಕ್ ಕೊಟ್ಟ ಯಡಿಯೂರಪ್ಪನವರ ಧೋರಣೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈಶ್ವರಪ್ಪ ದಂಗೆ ಎದ್ದಿರುವುದು ಇದನ್ನು ಇನ್ನಷ್ಟು ರೋಚಕ ಹಂತಕ್ಕೆ ತಲುಪುವಂತೆ ಮಾಡಿದೆ.
























































































































































































