ಮಂಗಳೂರು ಪತ್ರಿಕೋದ್ಯಮದ ಭೀಷ್ಮ ಮನೋಹರ್ ಪ್ರಸಾದ್ ನಿಧನದಿಂದ ಒಬ್ಬ ಪ್ರಬುದ್ಧ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ. | ಕಂಬನಿ |

101.1K Views 6 Mar 2024

ಮಂಗಳೂರು: ಪತ್ರಿಕೋದ್ಯಮದ ಭೀಷ್ಮ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ನಮ್ಮನ್ನು ಅಗಲಿದ್ದಾರೆ. ಇದು ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ.
ಅಲ್ಪಕಾಲದ ಅನಾರೋಗ್ಯದಿಂದ ಮಾರ್ಚ್. 1ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದ ಅವರು ಪತ್ರಕರ್ತ ಮಾತ್ರವಾಗಿರದೆ, ವಾಗ್ಮಿ, ಬರಹಗಾರ, ಸಂಸ್ಕೃತಿ, ಕ್ರೀಡೆ, ಸಾಹಿತ್ಯ, ಲಲಿತಕಲೆ, ರಂಗಭೂಮಿ, ಚಲನಚಿತ್ರ, ಸಾಮಾಜಿಕ ಜಾಗೃತಿ, ಸಂಘಟನೆ, ಶಿಕ್ಷಣ ಹೀಗೇ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.


ತನ್ನ ಅಧ್ಯಯನ ಶೀಲತೆಯಿಂದ ಸಂಪನ್ಮೂಲ ಶಕ್ತಿಯಾಗಿ ಬೆಳೆದ ಅವರು ಎಲ್ಲ ವಿಚಾರಗಳ ಬಗ್ಗೆಯೂ ಪರಿಪಕ್ವತೆಯಿಂದ ಮಾತಾಡುವ ಹಾಗೂ ಅಪೂರ್ವ ನೆನಪಿನ ಶಕ್ತಿಯನ್ನು ಹೊಂದಿದ್ದರು.
ಯಕ್ಷಗಾನ, ಕಂಬಳ, ತುಳುನಾಡಿನ ಇತಿಹಾಸ, ಜಾನಪದ ಆಚರಣೆ, ಪರಂಪರೆ, ಸಾಹಿತ್ಯ ಎಲ್ಲ ವಿಷಯಗಳ ಬಗ್ಗೆ ಚೆನ್ನಾಗಿ ಬರೆಯಬಲ್ಲವರಾಗಿದ್ದರು . ಅಷ್ಟೇ ಚೆನ್ನಾಗಿ ಮಾತನಾಡಬಲ್ಲವರಾಗಿದ್ದರು.
‘ಉದಯವಾಣಿ’ ದೈನಿಕದ ವಿಶ್ರಾಂತ ಸಹಾಯಕ ಸಂಪಾದಕರಾಗಿದ್ದ ಅವರು ಸಮಸ್ತ ಪತ್ರಕರ್ತ ಮಿತ್ರರ ಅಚ್ಚುಮೆಚ್ಚಿನ ‘ಮನೋಹರಣ್ಣ’ ಆಗಿದ್ದರು.
3೦ ಸಣ್ಣ ಕಥೆಗಳನ್ನು ಬರೆದಿರುವ ಅವರು ಉದಯವಾಣಿಯಲ್ಲಿ 3 ಸಾವಿರಕ್ಕೂ ಅಧಿಕ ವಿಶೇಷ ವರದಿ, ಸಂದರ್ಶನ, ತನಿಖಾ ವರದಿ, ನುಡಿಚಿತ್ರಗಳನ್ನು ಬರೆದಿದ್ದಾರೆ.


ಮದರ್ ಥೆರೇಸಾ, ಅಮಿತಾಭ್ ಬಚ್ಚನ್, ಜೇಸುದಾಸ್, ಅಬ್ದುಲ್ ಕಲಾಂ, ವಾಜಪೇಯಿ, ಸಚಿನ್ ತೆಂಡುಲ್ಕರ್, ಐಶ್ಚರ್ಯ ರೈ ಸಹಿತ ದೇಶದ ಬಹುತೇಕ ಗಣ್ಯರನ್ನು ಅವರು ಸಂದರ್ಶನ ನಡೆಸಿದ್ದರು.
ಆರಂಭದಲ್ಲಿ ‘ನವಭಾರತ’ ದೈನಿಕದಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಬಳಿಕ ‘ಉದಯವಾಣಿ’ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡು ಮುಖ್ಯ ವರದಿಗಾರರಾಗಿ, ಬ್ಯುರೋ ಮುಖ್ಯಸ್ಥರಾಗಿ, ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.


ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ವರದಿಗಾರಿಕೆಯಿಂದ ಜನಪ್ರಿಯತೆ ಪಡೆದಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ಸತತ 25 ಸಂಶೋಧನಾ ಲೇಖನ ಪ್ರಕಟಿಸಿದ್ದಾರೆ. ಕರ್ನಾಟಕ ಕರಾವಳಿಯ ಇತಿಹಾಸ ಕುರಿತಾಗಿ 608 ಸಂಶೋಧನಾ ಲೇಖನಗಳು ‘ನಮ್ಮೂರು’ ಎಂಬ ಹೆಸರಿನಲ್ಲಿ ಉದಯವಾಣಿಯಲ್ಲಿ ಪ್ರಕಟವಾಗಿದೆ. ‘ನೇರ ನೋಟ’ ಎಂಬ ಸಾಪ್ತಾಹಿಕ ಅಂಕಣ ಮತ್ತು ಇತ್ತೀಚೆಗೆ ‘ತೀರ ಯಾನ’ ಅಂಕಣವನ್ನು ‘ಉದಯವಾಣಿ’ಯಲ್ಲಿ ಬರೆಯುತ್ತಿದ್ದರು.


1986ರಲ್ಲಿ ಸಕಲೇಶಪುರ ಬಳಿ ಪಶ್ಚಿಮ ಘಟ್ಟದಲ್ಲಿ ಬಿಎಸ್‌ಎಫ್ ಹೆಲಿಕಾಫ್ಟರ್ ಪತನಗೊಂಡು ಇಬ್ಬರು ಫೈಲಟ್‌ಗಳು ಮೃತರಾದಾಗ ಸ್ಥಳಕ್ಕೆ ತೆರಳಿ ವರದಿ ಮಾಡಿದ್ದರು.
ಅವರು ‘ಬದ್‌ಕ್‌ದ ಬಂಡಿ’ ಎಂಬ ತುಳು ಕಥಾ ಸಂಕಲನ ಪ್ರಕಟಿಸಿದ್ದರು. ಅವರ ‘ಬಂಡಿ’ ಎಂಬ ಕಾದಂಬರಿಗೆ ಪಣಿಯಾಡಿ ಪುರಸ್ಕಾರ ದೊರಕಿದೆ.


ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಸೇರಿದಂತೆ ನೂರಕ್ಕೂ ಅಧಿಕ ಪ್ರಶಸ್ತಿಗಳು, ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕಾರ, ಸನ್ಮಾನಗಳು ಅವರಿಗೆ ದೊರಕಿವೆ.


ಮಂಗಳೂರಿನ ಸ್ವಗೃಹದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಲೇಡಿಹಿಲ್‌ನಲ್ಲಿರುವ ಪ್ರೆಸ್‌ಕ್ಲಬ್‌ನಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿತು.
ಮನೋಹರ ಪ್ರಸಾದ್ ಅವರ ನಿಧನಕ್ಕೆ ಗಣ್ಯರನೇಕರು ಸಂತಾಪ ಸೂಚಿಸಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಎಂಎಂಎನ್‌ಎಲ್ ಕಾರ‍್ಯನಿರ್ವಾಹಕ ಅಧ್ಯಕ್ಷ ಸತೀಶ್ ಯು.ಪೈ., ಕಾರ‍್ಯನಿರ್ವಾಹಕ ಅಧ್ಯಕ್ಷ ಗೌತಮ್ ಎಸ್. ಪೈ., ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ, ಸಂಸದ ನಳಿನ್‌ಕುಮಾರ್ ಕಟೀಲ್, ಎಂ. ವೀರಪ್ಪ ಮೊಯ್ಲಿ ,ಮಾಜಿ ಸಂಸದ ವಿನಯಕುಮಾರ್ ಸೊರಕೆ, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಮೇಯರ್ ಶಶಿಧರ್ ಹೆಗ್ಡೆ , ಕಾರ್ಪೋರೇಟರ್ ನವೀನ್ ಆರ್.ಡಿ ‘ಸೋಜ,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ದ.ಕ. ಜಿಲ್ಲಾ ಕಾರ‍್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಸಹಿತ ಪತ್ರಕರ್ತ ಮಿತ್ರರು, ಮಂಗಳೂರು ಪತ್ರಿಕಾಭವನ ಟ್ರಸ್ಟ್ ನ ಅಧ್ಯಕ್ಷ ರಾಮಕೃಷ್ಣ ಆರ್., ಜಗನ್ನಾಥ ಶೆಟ್ಟಿ ಬಾಳ ಸೇರಿದಂತೆ ಪತ್ರಕರ್ತ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ..


ಮನೋಹರ ಪ್ರಸಾದ್ ನಿಧನದಿಂದ ಮಂಗಳೂರು ಪತ್ರಿಕೋದ್ಯಮ ಒಬ್ಬ ಪ್ರಬುದ್ಧ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು MPMLA’s ನ್ಯೂಸ್ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ.ಎನ್. ಅವರು ಸಂತಾಪ ಸೂಚಿಸಿದ್ದಾರೆ.

Read More News

Scroll to Top