ಮಂಗಳೂರು: ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾಲಯ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಈ ಬಾರಿ ನಡೆಸಲಿರುವ 14ನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – ಚತುರ್ದಶ ಸರಣಿ’ಯನ್ನು ಇದೇ 2026 ನವೆಂಬರ್ ತಿಂಗಳ ತಾರೀಕು 22 ರಿಂದ 28 ರವರೆಗೆ ನಿಗದಿ ಮಾಡಲಾಗಿದೆ. ನಿರಂತರ ಏಳು ದಿನಗಳ ಕಾರ್ಯಕ್ರಮವನ್ನು ನಗರದ ವಿಶ್ವವಿದ್ಯಾಲಯ ಕಾಲೇಜೀನ ರವೀಂದ್ರ ಕಲಾ ಭವನದಲ್ಲಿ ಏರ್ಪಡಿಸಲಾಗಿದೆ. ಸಂಘಟನಾ ಪರ್ವ ಎಂಬ ಹೆಸರಿನ ಸಪ್ತಾಹದಲ್ಲಿ ಜಿಲ್ಲೆಯ ಆಯ್ದ ತಂಡಗಳಿಂದ ಅಪರೂಪವೆನಿಸಿದ ಕೆಲವು ಯಕ್ಷಗಾನ ಪ್ರಸಂಗಗಳು ಪ್ರಸ್ತುತಿಗೊಳ್ಳಲಿವೆ. ಈಗಾಗಲೇ ತಾಳಮದ್ದಳೆ ಕ್ಷೇತ್ರದಲ್ಲಿ ಖ್ಯಾತರಾದ ಹಿರಿಯ ಯಕ್ಷಗಾನ ಕಲಾವಿದರನ್ನು ಅವುಗಳಲ್ಲಿ ಸಾಂದರ್ಭಿಕವಾಗಿ ಬಳಸಿಕೊಳ್ಳಲಾಗುವುದು’ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಇತ್ತೀಚೆಗೆ ಮಂಗಳೂರು ಬಲ್ಮಠದ ಕುಡ್ಲ ಪೆವಿಲಿನ್ ನಲ್ಲಿ ಜರಗಿದ ಯಕ್ಷಾಂಗಣದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ನವೆಂಬರ 22 ರಂದು ಆದಿತ್ಯವಾರ ಸಂಜೆ ಗಂ.4 ಕ್ಕೆ ಸಪ್ತಾಹದ ಉದ್ಘಾಟನಾ ಸಮಾರಂಭ ಜರಗುವುದು. ಯಕ್ಷಾಂಗಣದ ಗೌರವಾಧ್ಯಕ್ಷ ಡಾ| ಎ.ಜೆ.ಶೆಟ್ಟರ ಅಧ್ಯಕ್ಷತೆಯಲ್ಲಿ ಮಂಗಳೂರು ವಿ.ವಿ.ಕುಲಪತಿ ಪ್ರೊ| ಪಿ.ಎಲ್.ಧರ್ಮ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಮಾರಂಭದಲ್ಲಿ ಹಿರಿಯ ಕಲಾಪೋಷಕರೊಬ್ಬರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ನೀಡಲಾಗುವುದು’ ಎಂದವರು ತಿಳಿಸಿದರು.
ಸಂಸ್ಮರಣೆ – ಪ್ರಶಸ್ತಿ ಪ್ರದಾನ:
‘ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಮೂಡಿ ಬರುವ ಚತುರ್ದಶ ಸರಣಿಯಲ್ಲಿ ಪ್ರತಿದಿನದ ತಾಳಮದ್ದಳೆಯೊಂದಿಗೆ ಅಗಲಿದ ಹಿರಿಯ ಕಲಾವಿದರ ಸಂಸ್ಮರಣೆ, ಸಾಧಕರ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನಗಳೂ ಜರಗಲಿವೆ. ನ.28 ರಂದು ಶನಿವಾರ ಯಕ್ಷಗಾನ ಆಟ – ಕೂಟಗಳ ಪ್ರಸಿದ್ಧ ಕಲಾವಿದರೊಬ್ಬರನ್ನು ಆಯ್ದು ಸೂಕ್ತ ನಿಧಿ ಸಮರ್ಪಣೆಯೊಂದಿಗೆ ಯಕ್ಷಾಂಗಣ ಗೌರವ ಪ್ರಶಸ್ತಿಯನ್ನು ನೀಡಲಾಗುವುದು. ಸಮಾರಂಭದಲ್ಲಿ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸ್ಥಾಪಕ, ಉದ್ಯಮಿ ಕೆ.ಕೆ.ಶೆಟ್ಟಿ ಅಹ್ಮದ್ ನಗರ, ಶಿಕ್ಷಣ ಮತ್ತು ಸಾಮಾಜಿಕ ಧುರೀಣ ರವೀಂದ್ರಶೆಟ್ಟಿ ಉಳಿದೊಟ್ಟು ಮೊದಲಾದ ಗಣ್ಯರುಭಾಗವಹಿಸುವರು’ ಎಂದು ಸಮಿತಿ ಸಂಚಾಲಕ ರವೀಂದ್ರ ರೈ ಕಲ್ಲಿಮಾರು ಮಾಹಿತಿ ನೀಡಿದರು.
ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಸಂಚಾಲಕಿ ನಿವೇದಿತಾ ಎನ್.ಶೆಟ್ಟಿ ಬೆಳ್ಳಿಪ್ಪಾಡಿ, ಕಾರ್ಯದರ್ಶಿಗಳಾದ ಕೆ.ಲಕ್ಷೀನಾರಾಯಣ ರೈ ಹರೇಕಳ, ಸುಮಾ ಪ್ರಸಾದ್, ಕಾರ್ಯಕಾರಿಣಿ ಸದಸ್ಯರುಗಳಾದ ಸುಧಾಕರ ರಾವ್ ಪೇಜಾವರ, ಕರುಣಾಕರ ಶೆಟ್ಟಿ ಪಣಿಯೂರು, ಸಿದ್ಧಾರ್ಥ ಅಜ್ರಿ ಮೊದಲಾದವರು ಹಾಜರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.


















































































































































































