ಮಂಗಳೂರು: ಕಲಿಯುಗದಲ್ಲಿ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು ನಾಗ. ಅದರ ಮಹಿಮೆಯ ಬಗ್ಗೆ ಕವಿ, ಸಾಹಿತಿ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರು ಬರೆದ ‘ನಾಗದೇವನೆ.. ಪ್ರೇಮಸ್ವರೂಪನೆ..’ ಭಕ್ತಿಯ ಹಾಡು ನಾಗರಪಂಚಮಿಯ ಶುಭಾವಸರದಲ್ಲಿ ‘ನಮ್ಮ ಕೊಂಬಾರು ಯೂ ಟ್ಯೂಬ್ ಚ್ಯಾನಲ್ ನಲ್ಲಿ ಬಿಡುಗಡೆಗೊಂಡಿದೆ.
ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಮಾಡಿ ಹಾಡಿದವರು ಗಾಯಕ ತೋನ್ಸೆ ಪುಷ್ಕಳ ಕುಮಾರ್. ಸಹಗಾಯನದಲ್ಲಿ ನಯನಾ ರಾಜಗೋಪಾಲ್ ಅವರಿದ್ದಾರೆ. ಧ್ವನಿಸುರುಳಿಯ ನಿರ್ಮಾಣ ಬಜ್ಪೆ ಶ್ರೀ ಶನೈಶ್ಚರ ದೇವಸ್ಥಾನದ ಧರ್ಮದರ್ಶಿ ಆನಂದ ಪೂಜಾರಿಯವರದು. ವಿಡಿಯೋ ನಿರ್ಮಾಣ ಮಾಡಿ ಪ್ರಸ್ತುತಪಡಿಸಿದವರು ಬೆಂಗಳೂರಿನ ಹಿರಿಯ ವಕೀಲ ಮತ್ತು ‘ನಮ್ಮ ಕೊಂಬಾರು – ಸಂಸ್ಕೃತಿಯ ತೇರು’ ಯೂ ಟ್ಯೂಬ್ ವಾಹಿನಿಯ ಪ್ರವೀಣ್ ಕುಮಾರ್ ಕಟ್ಟೆ. ಸಂಸ್ಕೃತಿ ಪ್ರಿಯರು ನಾಗದೇವತೆಯನ್ನು ಸ್ತುತಿಸುವ ಈ ಭಕ್ತಿ ಗೀತೆಯನ್ನು ತಮ್ಮ ವಾಹಿನಿಯ ಮೂಲಕ ನೋಡಿ ಪ್ರೋತ್ಸಾಹಿಸಬೇಕೆಂದು ಅವರು ವಿನಂತಿಸಿದ್ದಾರೆ.




ನಾಗದೇವನೆ .. ಪ್ರೇಮಸ್ವರೂಪನೆ..
ನಾಗದೇವನೆ ಪ್ರೇಮ ಸ್ವರೂಪನೆ
ನಿಗಮಾಗಮ ಗೋಚರನೆ |
ಸುಗುಣ ದಿವ್ಯ ಸಂತಾನ ಪ್ರದಾಯಕ
ಝಗಝಗಿಸುವ ಮಣಿ ಭೂಷಿತನೆ ||೧||
ಹರನಾ ಕಂಠದ ಸಿರಿ ವರ್ಧಿತನೆ
ಹರಿಗೆ ಹಾಸಿಗೆ ಮಿದು ಮೈಯವನೆ ||
ಉರಗ ರೂಪಿಯೆ ನಾಗಬ್ರಹ್ಮನೆ
ವರವಿಶ್ವಂಭರ ಸುಬ್ರಹ್ಮಣ್ಯನೆ ||೨||
ನಾರಿಕೇಳ ಜಲ ಕ್ಷೀರಾಭಿಷೇಕ
ಸಾರಸ ಫಲ ಶುಭ ತಾಂಬೂಲ ||
ಅರಿಶಿಣ ಸಂಪಿಗೆ ಸಿಂಗಾರ ಕೇದಗೆ
ವರ ಪುಷ್ಪಾರ್ಚನೆ ಸಮರ್ಪಣೆ ||೩||
ಅಶ್ವತ್ಥ ಮೂಲದಿ ವಲ್ಮೀಕ ತಾಣವು
ವಿಶ್ವಾಧಾರನು ಫಣಿಪತಿ ಮಹಿಮ |
ಐಶ್ವರ್ಯ ನಿಧಿಯ ಕಾಯುವ ದೇವ
ನಶ್ವರರೆಲ್ಲರ ಪೊರೆ ಸಂಜೀವ ||೪||
*ಭಾಸ್ಕರ ರೈ ಕುಕ್ಕುವಳ್ಳಿ


















































































































































































