ಮಂಗಳೂರು: ಕೊರೋನಾ ಸಾಂಕ್ರಾಮಿಕದ ಸಂದರ್ಭ ಮಳಿಗೆಯೊಂದಕ್ಕೆ ಮಾಸ್ಕ್ ಧರಿಸದೆ ಪ್ರವೇಶಿಸಿದ ಆರೋಪದಲ್ಲಿ ನಗರದ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯರ ವಿರುದ್ಧ ದಾಖಲಿಸಲಾಗಿದ್ದ ಆರೋಪಪಟ್ಟಿಗಳನ್ನು ರದ್ದುಪಡಿಸಿ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶಿಸಿದೆ.
2021ರ ಮೇ 18ರಂದು ನಗರದ ಮಳಿಗೆಯೊಂದಕ್ಕೆ ಡಾ. ಶ್ರೀನಿವಾಸ ಕ್ಕಕಿಲ್ಲಾಯರು ಭೇಟಿ ನೀಡಿದ್ದ ವೇಳೆ ಮಾಸ್ಕ್ ಧರಿಸಿಲ್ಲ ಎಂದು ಆರೋಪಿಸಿ, ಅವರ ವಿರುದ್ಧ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಮಂಗಳೂರಿನ 6ನೇ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, 2021ರ ಜೂ. 18ರಂದು ಈ ಪ್ರಕರಣ ಕರ್ನಾಟಕ ಉಚ್ಚ ನ್ಯಾಯಾಯಲಯ ಆರೋಪ ಪಟ್ಟಿಗಳನ್ನು ರದ್ದುಪಡಿಸಿ ಆದೇಶಿಸಿದೆ.


ತನ್ನ ಮೇಲೆ ಹೊರಿಸಲಾಗಿದ್ದ ಮೊಕದ್ದಮೆಯನ್ನು ರದ್ದುಪಡಿಸುವಂತೆ ಕೋರಿ ಡಾ. ಶ್ರೀನಿವಾಸ ಕಕ್ಕಿಲ್ಲಾಯ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ 2021ರ ಆ. 3ರಂದು ಸಲ್ಲಿಸಿದ್ದ ರಿಟ್ ಅರ್ಜಿಯ ಮೇಲೆ ನ್ಯಾಯಮೂರ್ತಿ ನಟರಾಜನ್‍ರ ನ್ಯಾಯಪೀಠವು 2021ರ ಆ. 31ರಂದು ಮಧ್ಯಂತರ ತಡೆಯಾಜ್ಞೆಯನ್ನು ನೀಡಿತ್ತು. ನಂತರ ನ್ಯಾಯಮೂರ್ತಿಗಳಾದ ನಾಗಪ್ರಸನ್ನ ಹಾಗೂ ಆರ್. ನಟರಾಜ್ ಅವರ ನ್ಯಾಯಪೀಠಕ್ಕೆ ಈ ತಡೆಯಾಜ್ಞೆಯನ್ನು ವಿಸ್ತರಿಸಲಾಗಿತ್ತು. ಇದೀಗ ನ್ಯಾಯಮೂರ್ತಿ ರವಿ ಹೊಸಮನಿ ಅವರ ನ್ಯಾಯಪೀಠವು ಈ ಮೊಕದ್ದಮೆಯನ್ನು ಸಂಪೂರ್ಣವಾಗಿ ರದ್ದುಪಡಿಸುವಂತೆ ಅಂತಿಮ ಆದೇಶವನ್ನು ನೀಡಿದೆ.
ಹೆಚ್ಚೆಂದರೆ 200ರೂ. ದಂಡವನ್ನಷ್ಟೇ ವಿಧಿಸಬಹುದಾದ ಈ ಪ್ರಕರಣವನ್ನು ನ್ಯಾಯಾಂಗದ ವಿಚಾರಣೆಗೊಳಪಡಿಸಲು ಅಥವಾ ಶಿಕ್ಷಿಸಲು ಕಾನೂನಿನಲ್ಲಿ ಅವಕಾಶಗಳೇ ಇಲ್ಲ. ಮಾತ್ರವಲ್ಲ, ಸಾಂಕ್ರಾಮಿಕ ರೋಗಗಳ ಕಾಯ್ದೆಯ ಅಡಿಯಲ್ಲಿ ಕೊರೋನಾ ಸಾಂಕ್ರಾಮಿಕದ ವಾದವನ್ನು ಮಾನ್ಯ ಉಚ್ಚನ್ಯಾಯಾಲಯವು ಪುರಸ್ಕರಿಸಿದೆ. ಪ್ರತಿವಾದಿಗಳಾಗಿದ್ದ ಮೂಲ ದೂರುದಾರರಾಗಲಿ, ಸರಕಾರವಾಗಲಿ ಯಾವುದೇ ಪ್ರತಿವಾದಗಳನ್ನು ಸಲ್ಲಿಸಲಿಲ್ಲ. ಡಾ. ಶ್ರೀನಿವಾಸ ಕಕ್ಕಿಲ್ಲಾಯರ ಪರವಾಗಿ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಸಚಿನ್ ಬಿ.ಎಸ್. ಮತ್ತು ಅನಿಕೇತ್ ಕೆ.ವಿ. ವಾದಿಸಿದ್ದರು. ಮಂಗಳೂರಿನ ನ್ಯಾಯವಾದಿಗಳಾದ ಚಿದಾನಂದ ಕೆದಿಲಾಯ ಹಾಗೂ ಶಿವಪ್ರಸಾದ್ ಎ. ಸಹಕರಿಸಿದ್ದಾರೆ.
ಈ ಪ್ರಕರಣವನ್ನು ದೇಶ-ವಿದೇಶಗಳ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿಸಿ, ನಿರಾಧಾರ, ಉತ್ಪ್ರೇಕ್ಷಿತ ಹೇಳಿಕೆಗಳನ್ನೂ, ವೈಯಕ್ತಿಕ ನಿಂದನೆಗಳನ್ನೂ ಮಾಡಿ ಡಾ. ಶ್ರೀನಿವಾಸ ಕಕ್ಕಿಲ್ಲಾಯರ ತೇಜೋವಧೆಗೆ ಪ್ರಯತ್ನಿಸಲಾಗಿತ್ತು. ಅದಕ್ಕಾಗಿ ಸೂಪರ್ ಮಾರ್ಕೆಟ್‍ನ ಮಾಲಕರ ಮೇಲೂ, ಮಂಗಳೂರಿನ ಐಎಂಎ ಮತ್ತು ಎಂಎಂಸಿ ಎಂಬ ವೈದ್ಯಕೀಯ ಸಂಘಟನೆಗಳ ಪದಾಧಿಕಾರಿಗಳ ಮೇಲೂ, ಇನ್ನಿತರ ವ್ಯಕ್ತಿಗಳ ಮೇಲೂ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರಿನ ಜೆಎಂಎಫ್‍ಸಿ ನ್ಯಾಯಾಲಯಗಳಲ್ಲಿ ಆಗಲೇ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದು, ಈ ಪ್ರಕರಣದ ನ್ಯಾಯಾಂಗ ಪ್ರಕ್ರಿಯೆ ಮುಂದುವರಿದಿದೆ.








































































































































































































