ದೂರದರ್ಶನದ ಬಿ-ಗ್ರೇಡ್ ಶಾಸ್ತ್ರೀಯ ನೃತ್ಯ ಕಲಾವಿದೆಯಾಗಿ ಆಯ್ಕೆಯಾದ ರೆಮೋನಾ ಎವೆಟ್ ಪೆರೇರಾ

111.2K Views 5d ago

ಮಂಗಳೂರು: ಮಂಗಳೂರಿನ ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಬಿ.ಎ. (ಇಂಗ್ಲಿಷ್ ಸಾಹಿತ್ಯ ಮತ್ತು ಇತಿಹಾಸ) ವಿದ್ಯಾರ್ಥಿನಿ ಕುಮಾರಿ ರೆಮೋನಾ ಎವೆಟ್ ಪೆರೇರಾ ಅವರು ಪ್ರಸಾರ ಭಾರತಿ ಅಧೀನದ ದೂರದರ್ಶನ ಚಂದನ ವಾಹಿನಿ ನಡೆಸಿದ ಆಡಿಷನ್ನಲ್ಲಿ ಯಶಸ್ವಿಯಾಗಿ ಭಾಗವಹಿಸಿ, ಬಿ-ಗ್ರೇಡ್ ಶಾಸ್ತ್ರೀಯ ನೃತ್ಯ ಕಲಾವಿದೆಯಾಗಿ ಆಯ್ಕೆಯಾಗಿದ್ದಾರೆ.

ಸೌರಭ ಸಂಗೀತ ನೃತ್ಯ ಕಲಾ ಪರಿಷತ್ನ ಗುರು ಡಾ. ಶ್ರೀವಿದ್ಯಾ ಅವರ ಶಿಷ್ಯೆಯಾಗಿರುವ ರೆಮೋನಾ ಅವರು ಕಳೆದ 18 ವರ್ಷಗಳಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದು, ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ನಿರಂತರವಾಗಿ ಕಲಾ ಪ್ರತಿಭೆಯನ್ನು ಬೆಳೆಸಿಕೊಂಡಿದ್ದಾರೆ.

ಈ ಸಾಧನೆಯು ಅವರ ಹಲವು ವರ್ಷಗಳ ಕಠಿಣ ಪರಿಶ್ರಮ, ಶಿಸ್ತು, ಕಲೆಯ ಮೇಲಿನ ಬದ್ಧತೆ ಹಾಗೂ ಅಪಾರ ಆಸಕ್ತಿಯ ಫಲವಾಗಿದೆ. ಈ ಹಿಂದೆ 2025ರ ಜುಲೈ 21ರಿಂದ 28ರವರೆಗೆ ಸತತ 170 ಗಂಟೆಗಳ ಕಾಲ ನೃತ್ಯ ಪ್ರದರ್ಶಿಸುವ ಮೂಲಕ ‘ಅತ್ಯಂತ ದೀರ್ಘ ನೃತ್ಯ ಮ್ಯಾರಥಾನ್’ ಸಾಧನೆ ಮಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದ ಅವರು ರಾಷ್ಟ್ರದಾದ್ಯಂತ ಗಮನ ಸೆಳೆದಿದ್ದರು.

ದೂರದರ್ಶನದ ಮಾನ್ಯತೆ ಪಡೆದ ಕಲಾವಿದರ ಸಾಲಿನಲ್ಲಿ ಸ್ಥಾನ ಪಡೆದಿರುವುದು ಅವರ ಕಲಾ ಪಯಣದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದ್ದು, ಭರತನಾಟ್ಯದ ಕ್ಷೇತ್ರದಲ್ಲಿ ಅವರ ನಿರಂತರ ಸಾಧನೆಗೆ ಮತ್ತೊಂದು ಗರಿಮೆಯನ್ನು ತಂದಿದೆ.

ರೆಮೋನಾ ಅವರ ಈ ಸಾಧನೆಗೆ ಕುಟುಂಬದವರು, ಗುರುಗಳು, ಕಲಾಭಿಮಾನಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು, ಗೌರವ ಮತ್ತು ಸಾಧನೆಗಳು ದೊರಕಲಿ ಎಂದು ಹಾರೈಸಿದ್ದಾರೆ.

Read More News

Scroll to Top