ಹಿರಿಯ ಪತ್ರಕರ್ತರು, ನಿವೃತ್ತ ಪ್ರಾಂಶುಪಾಲ ಪ್ರೊ.ಕೆ. ಬಾಲಕೃಷ್ಣ ಗಟ್ಟಿ ವಿಧಿವಶ

94K Views 12 Jun 2026

ಮಂಗಳೂರು, ಜೂ.12: ಕರ್ನಾಟಕ ಕರಾವಳಿಯಲ್ಲಿನ ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ಬಾಲಕೃಷ್ಣ ಗಟ್ಟಿ (83) ಅವರು ಇಂದಿಲ್ಲಿ ನಿಧನರಾದರು.
ಬಂಟ್ವಾಳ ಎಸ್‌.ವಿ.ಎಸ್ ಕಾಲೇಜ್‌ನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಅವರು 1998-2003ರ ಅವಧಿಯಲ್ಲಿ ‘ಜನವಾಹಿನಿ’ ದೈನಿಕ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.
ವೃತ್ತಿಯಿಂದ ನಿವೃತ್ತರಾದ ಬಳಿಕ ಅವರು ಮಂಗಳೂರಿನಲ್ಲಿ ನೆಲೆಸಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಒಬ್ಬಳು ಪುತ್ರಿ ಮತ್ತು ಬಂಧು ಬಳಗವನ್ನು ಆಗಲಿದ್ದಾರೆ.
ಮೂಲತಃ ಕುಂಬಳೆಯವರಾದ ಬಾಲಕೃಷ್ಣ ಗಟ್ಟಿ ಅವರು ಕುಂಬಳೆಯ ಹಿರಿಯ ಸಾಮಾಜಿಕ ಧುರೀಣ ದಿವಂಗತ ಮಹಾಲಿಂಗ ಗಟ್ಟಿ ಅವರ ಪುತ್ರ .
ಕೇರಳದ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ
ಅವರು ಬಂಟ್ವಾಳ ಎಸ್ .ವಿ. ಎಸ್ .ಕಾಲೇಜಿನಲ್ಲಿ ಸುದೀರ್ಘ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.
ಬಂಟ್ವಾಳ ತಾಲೂಕಿನಿಂದ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಗಾರರಾಗಿ ಅವರು ದೀರ್ಘಕಾಲ ಕಾರ್ಯನಿರ್ವಹಿಸಿದ್ದರು.
ನೇತ್ರಾವತಿ ವಾರ್ತೆ ದೈನಿಕವನ್ನು ಪ್ರಾರಂಭಿಸಿ ಅನೇಕ ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು. ಜನವಾಹಿನಿ ದೈನಿಕದ ಕಾರ್ಯನಿರ್ವಾಹಕ ಸಂಪಾದಕರಾಗಿ ಪತ್ರಿಕೆಯನ್ನು ಮುನ್ನಡೆಸಿದ್ದ ಬಾಲಕೃಷ್ಣ ಗಟ್ಟಿ ಸರಳ ನಿಷ್ಠುರ ಬರೆವಣಿಗೆ ಮೂಲಕ ಪತ್ರಿಕಾರಂಗದಲ್ಲಿ ಗುರುತಿಸಲ್ಪಟ್ಟಿದ್ದರು. ಬಂಟ್ವಾಳ ತಾಲೂಕು ಪತ್ರಕರ್ತರ ಸಂಘ ಸ್ಥಾಪನೆ ಮಾಡಿ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2024 ನವಂಬರ 12ರಂದು ನಡೆದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

Read More News

Scroll to Top