ಮಂಗಳೂರು, ಜೂನ್ 5:
ಭಾರತೀಯ ಮಜ್ದೂರ್ ಸಂಘದ (BMS) ದಕ್ಷಿಣ ಹಾಗೂ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಗಳಾದ *ಶ್ರೀ ವಿ. ರಾಧಾಕೃಷ್ಣನ್* ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದರು. ಜೂನ್ 7ರಂದು ನಡೆಯಲಿರುವ ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವುದರ ಜೊತೆಗೆ ಜಿಲ್ಲೆಯ ವಿವಿಧ ಸಂಯೋಜಿತ ಯೂನಿಯನ್ಗಳಿಗೆ ಭೇಟಿ ನೀಡಿ ಸಂಘಟನಾ ಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.
ಜಿಲ್ಲೆಗೆ ಆಗಮಿಸಿದ ಶ್ರೀ ರಾಧಾಕೃಷ್ಣನ್ ಅವರನ್ನು ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಕಾರ್ಯವಾಹರಾದ *ಶ್ರೀ ಪ್ರಕಾಶ್ ಪಿ.ಎಸ್.* , ಭಾರತೀಯ ಮಜ್ದೂರ್ ಸಂಘದ ರಾಜ್ಯ ಉಪಾಧ್ಯಕ್ಷರಾದ *ಶ್ರೀ ಸತೀಶ್ ಶೆಟ್ಟಿ,* ಜಿಲ್ಲಾ ಅಧ್ಯಕ್ಷರಾದ *ಶ್ರೀ ಅನಿಲ್ ಕುಮಾರ್ ಯು.,* ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ *ಶ್ರೀ ಗೋಪಾಲ ಕೃಷ್ಣ* ಹಾಗೂ ಜಿಲ್ಲಾ ಉಪಾಧ್ಯಕ್ಷರಾದ *ಶ್ರೀ ರೋಹಿತಾಶ್ವ* ಉಪಸ್ಥಿತರಿದ್ದರು.
ತಮ್ಮ ಜಿಲ್ಲಾ ಭೇಟಿಯ ಸಂದರ್ಭದಲ್ಲಿ ಶ್ರೀ ರಾಧಾಕೃಷ್ಣನ್ ಅವರು ಭಾರತೀಯ ಮಜ್ದೂರ್ ಸಂಘದ ಸಂಯೋಜಿತ ಯೂನಿಯನ್ಗಳ ಕಚೇರಿಗಳಿಗೆ ಭೇಟಿ ನೀಡಿ ಅವುಗಳ ಆಡಳಿತಾತ್ಮಕ ಹಾಗೂ ಸಂಘಟನಾ ಚಟುವಟಿಕೆಗಳ ಪರಿಶೀಲನೆ ನಡೆಸಲಿದ್ದಾರೆ. ಯೂನಿಯನ್ಗಳ ದಾಖಲಾತಿಗಳ ಸಮರ್ಪಕ ನಿರ್ವಹಣೆ, ಸದಸ್ಯತ್ವ ನೋಂದಣಿ, ರಿಜಿಸ್ಟರ್ಗಳ ಪಾಲನೆ, ಲೆಕ್ಕಪತ್ರಗಳ ನಿರ್ವಹಣೆ, ವಾರ್ಷಿಕ ವರದಿಗಳ ಸಲ್ಲಿಕೆ, ಅಫಿಲಿಯೇಷನ್ ನವೀಕರಣ ಹಾಗೂ ಭಾರತೀಯ ಮಜ್ದೂರ್ ಸಂಘದ ನಿಯಮಾವಳಿಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಸಂಘಟನೆಯ ಬಲವರ್ಧನೆ ಹಾಗೂ ಕಾರ್ಯಕ್ಷಮತೆಯ ವೃದ್ಧಿಗಾಗಿ ಎಲ್ಲಾ ಸಂಯೋಜಿತ ಯೂನಿಯನ್ಗಳು ಕಾನೂನುಬದ್ಧ ಹಾಗೂ ಸಂಘಟನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮಹತ್ವವನ್ನು ಅವರು ಒತ್ತಿ ಹೇಳಲಿದ್ದಾರೆ.
ಜೂನ್ 7ರಂದು ಜಿಲ್ಲಾ ಕಾರ್ಯಾಲಯದ *“ಪ್ರಭಾಕರ ಘಾಟೆ”* ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲೆಯ ಸಂಘಟನಾ ಬೆಳವಣಿಗೆ, ಕಾರ್ಮಿಕರ ಸಮಸ್ಯೆಗಳು, ಸಂಯೋಜಿತ ಯೂನಿಯನ್ಗಳ ಕಾರ್ಯವೈಖರಿ ಹಾಗೂ ಮುಂದಿನ ಸಂಘಟನಾ ಕಾರ್ಯಕ್ರಮಗಳು ಮತ್ತು ಕಾರ್ಯತಂತ್ರಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ.





















































































































































































