ಮಂಗಳೂರು: ಮಂಗಳೂರಿನ ಕೊಡಿಯಾಲ್ ಬೈಲ್ ಬಿಷಪ್ಸ್ ಹೌಸ್ ನ ಶೋಕ ಮಾತೆಗೆ ಸಮರ್ಪಿಸಿದ ಚಾಪೆಲ್ ನವೀಕರಣಗೊಂಡಿದ್ದು, ಅದರ ಆಶೀರ್ವಚನ ಮತ್ತು ಲೋಕಾರ್ಪಣೆಯನ್ನು ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಮೇ 31 ರಂದು ನೆರವೇರಿಸಿದರು.
ಇದರ ಪ್ರಯುಕ್ತ ನಡೆದ ಸಂಭ್ರಮದ ಬಲಿ ಪೂಜೆಯಲ್ಲಿ ಹಲವಾರು ಮಂದಿ ಧರ್ಮಗುರುಗಳು, ಧರ್ಮ ಭಗಿನಿಯರು ಮತ್ತು ಕ್ಯಾಥೊಲಿಕ್ ವಿಶ್ವಾಸಿಗಳು ಭಾಗವಹಿಸಿದ್ದರು.
ಪ್ರಥಮವಾಗಿ 1857 ರಲ್ಲಿ ಆಶೀರ್ವದಿಸಲಾಗಿದ್ದ ಈ ಚಾಪೆಲ್ 1963 ರಲ್ಲಿ ನವೀಕರಣಗೊಂಡಿತ್ತು. ಬಳಿಕ ಒಂದು ದಶಕದ ಹಿಂದೆ ನೆಲಹಾಸಿನ ನವೀಕರಣ ಮಾಡಲಾಗಿತ್ತು. ಇದೀಗ ಆಕರ್ಷಕ ವಾಸ್ತು ಶಿಲ್ಪ ಶೈಲಿಯನ್ನು ಅಳವಡಿಸಿಕೊಂಡು ಛಾವಣಿಯ ದುರಸ್ತಿ, ಗೋಡೆಗಳ ಪ್ಲಾಸ್ಟರಿಂಗ್, ತಾಜಾ ಪೈಂಟಿಂಗ್, ವಿದ್ಯುದೀಕರಣ, ಧ್ವನಿ ವ್ಯವಸ್ಥೆ ಮತ್ತು ಸುಧಾರಿತ ಬೆಳಕಿನ ವ್ಯವಸ್ಥೆಯನ್ನು ಪರಂಪರೆ ಮತ್ತು ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ನವೀಕರಿಸಲಾಗಿದೆ.

ಆಶೀರ್ವಚನ ಮತ್ತು ಬಲಿ ಪೂಜೆಯ ಸಂದರ್ಭದಲ್ಲಿ ನಿವೃತ್ತ ಬಿಷಪ್ ಅತಿ ವಂ. ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜಾ, ವಿಕಾರ್ ಜನರಲ್ ಅತಿ ವಂ. ಮ್ಯಾಕ್ಸಿಮ್ ಎಲ್. ನೊರೊನ್ಹಾ, ಛಾನ್ಸಲರ್ ಅತಿ ವಂ. ಡಾ. ವಿಕ್ಟರ್ ಜಾರ್ಜ್ ಡಿ’ಸೋಜಾ, ಹಣಕಾಸು ಆಧಿಕಾರಿ ರೆ. ಫಾ. ಜಗದೀಶ್ ಪಿಂಟೊ, ರಾಕ್ಣೊ ವಾರಪತ್ರಿಕೆಯ ಸಂಪಾದಕ ರೆ. ಫಾ.ರೂಪೇಶ್ ಮಾಡ್ತಾ, ಫಾ. ಮ್ಯಾಕ್ಸಿಮ್ ರೊಸಾರಿಯೊ, ಫಾ. ತ್ರಿಶಾನ್ ಡಿ’ಸೋಜಾ ಮತ್ತು ಫಾ. ಜೇಸನ್ ಲೋಬೊ, ಫಾ. ವಲೇರಿಯನ್ ಡಿ’ಸೋಜಾ, ಮೊ. ಲೆಸ್ಲಿ ಎಫ್. ಶೆಣೈ, ರೆ. ಡಾ. ರೊನಾಲ್ಡ್ ಸೆರಾವೊ ಮತ್ತು ಎಪಿಸ್ಕೋಪಲ್ ಹಾಗೂ ಸಿಟಿ ಒಲಯದ ಗುರುಗಳು ಭಾಗವಹಿಸಿದ್ದರು. ಬಲಿ ಪೂಜೆಯ ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ದಾನಿಗಳನ್ನು ಗೌರವಿಸಲಾಯಿತು.
ಅಬುಧಾಬಿ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಮೈಕೆಲ್ ಡಿ’ಸೋಜಾ ಮತ್ತು ಮಂಗಳೂರಿನ ಸೊಡ್ಯಾಲಿಟಿ ಆಫ್ ದಿ ಇಮ್ಯಾಕ್ಯುಲೇಟ್ ಕನ್ಸೆಪ್ಷನ್ ಆಫ್ ದಿ ಬ್ಲೆಸ್ಡ್ ವರ್ಜಿನ್ ಮೇರಿಯ ಸದಸ್ಯರನ್ನು ಒಳಗೊಂಡಂತೆ ಪ್ರಮುಖ ದಾನಿಗಳನ್ನು ಹಾಗೂ ಆರ್ಥಿಕ ಬೆಂಬಲ ನೀಡಿದ ಇತರ ದಾನಿಗಳನ್ನು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸನ್ಮಾನಿಸಿದರು.








































































































































































































