ಸಂದರ್ಶನ

ಸಂದರ್ಶನ

ಮುಂಬೈ ಯಕ್ಷಲೋಕದ ಶಿಲ್ಪಿ , ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ

‘ಉದರ ನಿಮಿತ್ತಂ ಬಹುಕೃತ ವೇಷಂ’ ಎಂಬಂತೆ ಮಾನವನು ತನ್ನ ಉದರ ಪೋಷಣೆಗಾಗಿ ನಿಂತಲ್ಲಿ ನಿಲ್ಲದೆ ಜಂಗಮನಾಗಿ ಊರೂರು ಸುತ್ತಿ ಆವಿಷ್ಕಾರ ಮಾಡಿ ಹೊಸ ಜೀವನವನ್ನು ಅಳವಡಿಸಿಕೊಂಡು ಅಲ್ಲಿಯೇ ನೆಲೆಸಿ ಉದರ ಪೋಷಣೆಯೊಂದಿಗೆ ಇತರ ಪೋಷಣೆಗಳನ್ನು ಮಾಡಿ ತನ್ನ ಹೊಟ್ಟೆಪಾಡು ಮಾತ್ರವಲ್ಲದೆ ಇತರರ ಅಂದರೆ ಸಮಾಜಕ್ಕೂ ಉಣಬಡಿಸಿ ಪರೋಪಕಾರದ ಕೃತ್ಯಗಳನ್ನು ಮಾಡಿ ಸಮಾಜ ಜೀವಿ ಎನಿಸಿಕೊಳ್ಳುತ್ತಾನೆ.ಅಸನ ವಸನ ವಸತಿಗಳು ತನ್ನ ಮತ್ತು ತನ್ನ ಕುಟುಂಬದ ಪೋಷಣೆಗಳಿಗಾದರೆ ಕಲೆ, ಸಂಗೀತ, ನಾಟ್ಯ, ಪ್ರವಚನ ಮುಂತಾದ ಸಾಮಾಜಿಕ ಸೇವೆಗಳು ಸಮಾಜ ಸುಧಾರಣೆಯ ಏಳಿಗೆಯ ಪ್ರತೀಕಗಳು. ತಾನು ಉಂಡು ಇತರರಿಗೂ ಉಣಿಸಿ ಸಂತಸಪಡುವ ಪ್ರವೃತ್ತಿಯೇ ಸಾರ್ಥಕ ಜೀವನ. ಅಂಥಾ ಉದಾರ ಜೀವಿಗಳೇ ಸಮಾಜ ಸೇವಕರು. ಅಜೆಕಾರು ಶ್ರೀ ಬಾಲಕೃಷ್ಣ ಶೆಟ್ಟಿಯವರು ಅಜೆಕಾರು ಕಲಾಭಿಮಾನಿಗಳ ಬಳಗವನ್ನು 2002ರಲ್ಲಿ ಮುಂಬೈ ಮಹಾನಗರಿಯಲ್ಲಿ ಕಟ್ಟಿ ಬೆಳೆಸಿದ ರೋಚಕ ಬೆಳವಣಿಗೆಯು ರೋಮಾಂಚನವೇ ಸರಿ. ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಗೆಜ್ಜೆ ಕಟ್ಟಿ ಕುಣಿದ ಬಾಲಕೃಷ್ಣ ಶೆಟ್ಟಿಯವರು ಹಂತ ಹಂತವಾಗಿ ವಿವಿಧ ಸಂಘಟನೆಗಳನ್ನು ಮಾಡಿ ಮುಂಬೈಯಲ್ಲಿ 2002ರಲ್ಲಿ ಅಜೆಕಾರು ಕಲಾಭಿಮಾನಿಗಳ ಬಳಗವನ್ನು ಸ್ಥಾಪಿಸಿ ಪುಣೆ ಮತ್ತು ಮುಂಬೈಯಲ್ಲಿ ಕರಾವಳಿಯ ಗಂಡುಕಲೆಯಾಟ ಯಕ್ಷಗಾನವನ್ನು ವಿವಿಧ ಸಂಘ ಸಂಸ್ಥೆಗಳ ಮೂಲಕ ತರಿಸಿ ಮುಂಬೈಯಲ್ಲಿ ವಿವಿಧೆಡೆ ಪ್ರದರ್ಶಿಸಿ ಅಜೆಕಾರು ಯಕ್ಷಗಾನ ಬಳಗವನ್ನು ಪ್ರಸಿದ್ದಿಗೆ ತಂದರು. ಸುಮಾರು ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ಮತ್ತು 24 ಸಂಘ- ಸಂಸ್ಥೆಗಳಲ್ಲಿ ಯಕ್ಷಗಾನದ ತರಬೇತಿಯನ್ನು ನಡೆಸಿ ಯಕ್ಷಗಾನ ಪ್ರದರ್ಶಿಸಲಾಗಿರುವುದು. ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ 10 ಯಕ್ಷಗಾನ ಅರ್ಥ ಸಹಿತ ಪುಸ್ತಕವನ್ನು ಪ್ರಕಟಿಸಿದೆ. ಅಜೆಕಾರು ಕಲಾರಂಗವು ಪ್ರತಿವರ್ಷ ‘ಯಕ್ಷರಕ್ಷಾ ಪ್ರಶಸ್ತಿ’ -50,000/-, 25,000/-, 10,000/- ನಗದು ಪ್ರಶಸ್ತಿ ಹೀಗೆ ಒಟ್ಟು ವರ್ಷಕ್ಕೆ 20 ಲಕ್ಷಗಳಷ್ಟು ಸಮಾಜ ಸೇವೆಯ ರೂಪದಲ್ಲಿ ಸಂಘದ ವತಿಯಿಂದ ದಾನ ಮಾಡುತ್ತಾರೆ. ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕಾಟಿಪಳ್ಳ, ಸುರತ್ಕಲ್ ಇವರು ‘ಯಕ್ಷ ರಕ್ಷಕ’ ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ.ಯಕ್ಷಗಾನ ಕಲಾವಿದ, ಕಲಾಪೋಷಕ, ಸಂಘಟಕ, ಯಕ್ಷ ನಾಟ್ಯ ಗುರು ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಅಜೆಕಾರು ಕಲ್ಕುಡಮಾರ್ ಮನೆಯ ದಿ. ಸುಬ್ಬಯ್ಯ ಶೆಟ್ಟಿ ಮತ್ತು ಸಂಪಾ ಶೆಟ್ಟಿ ದಂಪತಿಯ ಮಗನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಅಜೆಕಾರು ಇಲ್ಲಿ ಮುಗಿಸಿ, 1977ರಲ್ಲಿ ಮುಂಬಯಿ ಸೇರಿ ಕ್ಯಾಂಟೀನ್, ಹೊಟೇಲುಗಳಲ್ಲಿ ದುಡಿದು ರಾತ್ರಿ ಹೊತ್ತು ಬಂಟರ ಸಂಘ ಸಂಚಾಲಿತ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸದೊಂದಿಗೆ ಯಕ್ಷಗಾನ ತರಬೇತಿಯನ್ನು ಯಕ್ಷಗುರು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಇವರಿಂದ ಪಡೆದುಕೊಂಡರು. ಶ್ರೀ ಗೀತಾಂಬಿಕಾ ಕೃಪಾ ಪೋಷಿತ ಯಕ್ಷಗಾನ ಕಲಾಮಂಡಳಿಯಲ್ಲಿ ಮೊದಲ ಗೆಜ್ಜೆ ಕಟ್ಟಿದರು. ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟರ ಪ್ರೋತ್ಸಾಹದೊಂದಿಗೆ ವಿವಿಧ ಪಾತ್ರಗಳನ್ನು ಯಕ್ಷಗಾನದಲ್ಲಿ ಅಭಿನಯಿಸಿ ಪರಿಣತಿ ಪಡೆದರು. ಸದ್ಯ ಮಂಡಳಿಯ ಗೌರವ ಸದಸ್ಯರಾಗಿದ್ದಾರೆ. 2001ರಲ್ಲಿ ಪುರುಷೋತ್ತಮ ಪೂಂಜರು ಯಕ್ಷಗಾನ ತಾಳಮದ್ದಳೆ ಕಾರ್ಯವನ್ನು ಆರಂಭ ಮಾಡಿದಾಗ ಬಾಲಕೃಷ್ಣ ಶೆಟ್ಟಿ ಅವರು ಅವರೊಂದಿಗೆ ಕಾರ್ಯಕ್ರಮ ಸಂಯೋಜಿಸಿದ್ದರು. ಈ ಅನುಭವಗಳಿಂದ 2002ರಲ್ಲಿ ತಾನೇ ಅಭಿಮಾನಿಗಳನ್ನು ಒಟ್ಟುಗೂಡಿಸಿ ಅಜೆಕಾರು ಕಲಾಭಿಮಾನಿ ಬಳಗ ಹೆಸರಲ್ಲಿ ಯಕ್ಷಗಾನ ಸಂಯೋಜಿಸಿ, ಇಂದಿಗೂ ಹದಿನೇಳು ವರ್ಷಗಳಿಂದ ಸತತ ವಿವಿಧ ಸಂಘ ಸಂಸ್ಥೆಗಳಿಂದ ಕಾರ್ಯಕ್ರಮಗಳು ಜರಗುತ್ತಿವೆ. ಯಕ್ಷಗಾನದೊಂದಿಗೆ ಊರಿನಿಂದ ಪ್ರಸಿದ್ಧ ಅರ್ಥಧಾರಿಗಳನ್ನು ಮುಂಬೈಗೆ ಕರೆಸಿ ತಾಳಮದ್ದಳೆಗಳನ್ನು ಸಂಯೋಜಿಸಿ ತಾಳಮದ್ದಳೆಯ ಅಭಿರುಚಿಯನ್ನು ಮುಂಬೈಗರಿಗೆ ಹುಟ್ಟಿಸಿದರು. ‘ನಾದಲೋಲ’ ಅಭಿನಂದನ ಗ್ರಂಥಗಳ ಬಿಡುಗಡೆ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಚೆನ್ನಪ್ಪ ಶೆಟ್ಟಿ, ಉಜಿರೆ ಅಶೋಕ್ ಶೆಟ್ಟಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಮುಂತಾದ ಅನೇಕ ಗಣ್ಯ ಯಕ್ಷಗಾನ ಕಲಾವಿದರನ್ನು ರೂ. 1,00,000/- ಹಾಗೂ 50,000/- ನಗದುವಿನೊಂದಿಗೆ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಸನ್ಮಾನಿಸುವ ಕೆಲಸ ಮಾಡಿದವರು. ಇದು ಬಾಲಕೃಷ್ಣ ಶೆಟ್ಟಿಯವರ ಅವಿರತ ಶ್ರಮ ಹಾಗೂ ಸಂಯೋಜನಾ ಶಕ್ತಿಯ ಫಲ. ಜನಪ್ರಿಯ ಯಕ್ಷಗಾನ ಗುರುಗಳಾದ ಇವರಲ್ಲಿ ತರಬೇತಿ ಪಡೆದು ಪಳಗಿದ ಶಿಷ್ಯದಿಂದಿರು ಹೆಸರುವಾಸಿ. ಇದಕ್ಕೆ ಸಂಘಗಳ ಸಂಖ್ಯೆಯೇ ಸಾಕ್ಷಿ. ಮುಂಬಯಿ ಬಂಟರ ಸಂಘ ಕುರ್ಲಾ, ಬೋಂಬೆ ಬಂಟ್ಸ್ ಎಸೋಸಿಯೇಶನ್, ದತ್ತಾತ್ರೇಯ ದುರ್ಗಾಂಬಿಕಾ ಮಂದಿರ ಫಾಸ್ಕೋಪರ್, ವಿ. ಪಿ. ಎಂ. ಕಾಲೇಜು ಮುಲುಂಡು, ಕನ್ನಡ ಸಂಘ ಥಾಣೆ ಕಿಸನ್ ನಗರ, ವಿ. ಪಿ. ಎಂ. ಕಾಲೇಜು ಮತ್ತು ಅನೇಕ ಸಂಘ ಸಂಸ್ಥೆಗಳಿಗೆ ಶಿಕ್ಷಣವಿತ್ತಿದ್ದಾರೆ. ಒಟ್ಟು ಎರಡು ಸಾವಿರ ಮಕ್ಕಳಿಗೆ ತರಬೇತಿ ಕೊಟ್ಟು ಪಳಗಿಸಿದರು. ಶಿಷ್ಯ ವರ್ಗದಲ್ಲಿ ಚಿಣ್ಣರ ಬಿಂಬದ ಬಯಲಾಟ ಪ್ರದರ್ಶನ, ಪತ್ತನಾಜೆ ಸಿನೇಮಾದ ನಾಯಕಿ ನಟಿ ರೇಷ್ಮಾ ಶೆಟ್ಟಿ ಬಾಲಕೃಷ್ಣ ಶೆಟ್ಟಿಯವರಿಂದ ತರಬೇತಿ ಪಡೆದು ಪ್ರಸಿದ್ದಿ ಪಡೆದಿದ್ದಾರೆ.ಊರಿಂಗೆ ದಾರಿಯನು ಆರು ತೋರಿದಡೇನು । ಸಾರಾಯದ ನಿಜವ ತೋರುವವನೇ ನಿಜಗುರು’ ಎಂಬಂತೆ ಯಕ್ಷ ವಿದ್ಯೆಯಲ್ಲಿ ಮೋಕ್ಷದ ತನಕ ಅಂದರೆ ಪರಿಪೂರ್ಣ ವಿದ್ಯೆಯನ್ನು ಕಲಿಸಿ ಪರಿಪೂರ್ಣ ಗುರು ಎಂದೆನಿಸಿಕೊಂಡವರು ಅಜೆಕಾರು ಬಾಲಕೃಷ್ಣ ಶೆಟ್ಟಿಯವರು. ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಯಕ್ಷಲೋಕಕ್ಕೆ ಸಮರ್ಪಿಸಿದ ಧನ್ಯರು ಗುರುಗಳಾದ ಅಜೆಕಾರರು. ಬೆಂಕಿಯಲ್ಲಿ ಬೆಂದ ಚಿನ್ನದಂತೆ ಅಜೆಕಾರು ಬಾಲ್ಯದಲ್ಲಿ ಕಷ್ಟಪಟ್ಟು ಕಲಾರಂಗದ ಸ್ವಾನುಭವದಲ್ಲಿ ಬೆಂದು ಪಳಗಿದವರು. ಚಿನ್ನಕ್ಕೆ ಪುಟವಿಟ್ಟಂತೆ ಅವರ ಅನುಭವವು ಅವರನ್ನು ಪರಿಪೂರ್ಣ ಯಕ್ಷಗಾನ ಕಲಾವಿದ ಹಾಗೂ ಸಂಯೋಜಕನಾಗಿ ಮಾಡಿ ಅವರ ಅನುಭವವು ನೀರಿನಲ್ಲಿ ಎಣ್ಣೆ ಪಸರಿಸಿದಂತೆ ಯಕ್ಷಗಾನ ಕಲೆಯು ಕಲಾಭಿಮಾನಿಗಳಿಗೆ ಅವರ ಅನುಭವದ ಉತ್ತಮ ಕಲಾರಸವು ದೊರೆಯುವಂತೆ ಮಾಡಿದ್ದಾರೆ.ಹಾಲು- ಮೊಸರು- ಬೆಣ್ಣೆಗಳಿಂದ ಬಂದ ತುಪ್ಪವು ಅವುಗಳಿಗಿಂತ ಹೆಚ್ಚು ಪರಿಮಳಯುಕ್ತವಾಗಿ ಬರುವಂತೆ ಯಕ್ಷ ಕಲೆಯು ಅನುಭವದ ಮಥನದ ಕತೆಯಾದುದರಿಂದ ಅವರ ಯಕ್ಷಕಲೆಯು ಸಮುದ್ರ ಮಥನದಿಂದ ಎದ್ದು ಬಂದ ಅಮೃತದಂತೆ ಅವರು ಯಕ್ಷಕಲೆಯನ್ನು ಕರಗತ ಮಾಡಿಕೊಂಡು ತಾನು ಸಂಭ್ರಮಿಸಿ ಇತರರನ್ನು ಸಂಭ್ರಮಿಸಿ ಸಾರ್ಥಕತೆಯ ಜೀವನ ನಡೆಸಿ ಉತ್ತಮ ಯಕ್ಷಗುರು, ಕಲಾ ಸಂಘಟಕ ಎನಿಸಿಕೊಂಡರು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ನುಡಿಯಂತೆ ತನ್ನ ವೃತ್ತಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ಧನ್ಯತಾ ಭಾವನೆಯಿಂದ ತಾನೂ ಸಂತೃಪ್ತರಾಗಿ ಶಿಷ್ಯವರ್ಗ, ಶೋತೃವರ್ಗಗಳನ್ನು ಸಂತೃಪ್ತರಾಗುವಂತೆ ಮಾಡಿ ಆದರ್ಶ ಗುರು ಎನಿಸಿ ಸಾರ್ಥಕ ಜೀವನ ನಡೆಸಿದರು. ಅವರ ಸಾರ್ಥಕ ಜೀವನ ಎಲ್ಲರಿಗೂ ಆದರ್ಶ. ಅವರಿಗೆ ಇನ್ನೂ ಪ್ರೋತ್ಸಾಹ ದೊರೆತು ಯಕ್ಷ ಕಲೆಯು ಉನ್ನತಕ್ಕೇರಲಿ. ಅವರ ಜೀವನವು ಬರುವ ಪೀಳಿಗೆಗೆ ಆದರ್ಶವಾಗಿ ಅಜೆಕಾರು ಅವರ ಯಕ್ಷಕಲೆಯ ಶ್ರೇಯೋಭಿವೃದ್ಧಿ ಹೊಂದಲಿ, ದೇವರು ಅವರಿಗೆ ಆಯುರಾರೋಗ್ಯವನ್ನಿತ್ತು ಯಕ್ಷ ವಿದ್ಯೆಯು ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂದು ಪ್ರಾರ್ಥಿಸಿ ‘ಯಕ್ಷಗಾನಂ ಗೆಲ್ಗೆ ಎನ್ನೋಣ. ಜೈಹಿಂದ್, ಜೈ ಭಾರತ್ ಮಾತೆ.— ಕೃಷ್ಣ ಎ. ಶೆಟ್ಟಿ ವಿಶ್ರಾಂತ ಸೀನಿಯರ್ ಬ್ಯಾಂಕ್ ಮ್ಯಾನೇಜರ್ ಉಪಾಧ್ಯಕ್ಷರು, ಯಕ್ಷಕಲಾರಂಗ ಕಾರ್ಕಳ ಸಂತೃಪ್ತಿ, ತೆಳ್ಳಾರು ರಸ್ತೆ, ಕಾರ್ಕಳ : 9611474445

ಸಂದರ್ಶನ

ಸರ್ವಧರ್ಮದವರನ್ನು ಸಮಾನರನ್ನಾಗಿ ಕಾಣುವ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.

ಮಂಗಳೂರು : ಇವರು ಸದಾ ಹಸನ್ಮುಖಿ… ಎಲ್ಲರಲ್ಲೂ ನಗುಮುಖದಿಂದಲೇ ಮಾತನಾಡಿಸುತ್ತ ಸಮಸ್ಯೆ ಆಲಿಸುವ ಸರಳ ಸಜ್ಜನಿಕೆಯ ಗುಣಹೊಂದಿದವರು. ನೇರ ನಡೆನುಡಿಯ ಧೀಮಂತ ವ್ಯಕ್ತಿತ್ವದ ಪದ್ಮರಾಜ್ ಆರ್. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ, ಸಮಾಜಸೇವೆಯನ್ನು ಮೈಗೂಡಿಸಿಕೊಂಡು, ಕುದ್ರೋಳಿ ಗೋಕರ್ಣನಾಥ ದೇವಳದ ಬಗ್ಗೆ ಅಪಾರ ಶ್ರದ್ಧೆ ಭಕ್ತಿ ಹೊಂದಿ ಕಿರಿಯ ವಯಸ್ಸಿನಲ್ಲೇ ದೇವಳದ ಬಹು ದೊಡ್ಡ ಜವಾಬ್ದಾರಿ ವಹಿಸಿಕೊಂಡು ಕ್ಷೇತ್ರದ ಏಳಿಗೆಗಾಗಿ ಸದಾ ಹಗಲಿರುಳು ದುಡಿಯುತ್ತಿರುವವರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಎಂಬ ಪುಟ್ಟ ಗ್ರಾಮದಲ್ಲಿ ಮಂಗಳೂರು ಮೂಲದ ಎಚ್.ಎಂ.ರಾಮಯ್ಯ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಪದ್ಮರಾಜ್ ರಾಮಯ್ಯರವರು ತನ್ನ ಅಣ್ಣ ಮಂಗಳೂರಿನ ಹೆಸರಾಂತ ಹೃದಯ ರೋಗ ತಜ್ಞ ಡಾ. ಪುರುಷೋತ್ತಮ ಆರ್ ರವರಂತೆ ಬಾಲ್ಯದಿಂದಲೇ ಪ್ರತಿಭಾನ್ವಿತ. ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಗಿಸಿ ಮುಂದೆ ಬಿ.ಎ ಪದವಿಯನ್ನು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ಹಾಗೂ ಕಾನೂನು ಪದವಿಯನ್ನು ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮುಗಿಸಿದರು. 1995ರಿಂದ ಕಾನೂನು ವೃತ್ತಿಯ ಚೊಚ್ಚಲ ಅಭ್ಯಾಸವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿಯವರೊಂದಿಗೆ ಪ್ರಾರಂಭಿಸುವ ಅವಕಾಶ ದೊರೆತ್ತಿರುವುದು ಇವರ ಭಾಗ್ಯವೇ ಸರಿ. ನಾಲ್ಕು ವರ್ಷಗಳ ಬಳಿಕ ಬಳ್ಳಾಲ್‌ಬಾಗ್‌ನಲ್ಲಿ ಸ್ವಂತ ಕಚೇರಿ ಪ್ರಾರಂಭಿಸಿದರು. ವೃತ್ತಿ ಜೀವನದ ಆರಂಭದ ಸಮಯದಲ್ಲಿ ಹಿರಿಯ ವಕೀಲರಾದ ಪಿ.ಗಂಗಾಧರ್ ಸಲಹೆಯಂತೆ ಆಗಿನ ಬಿಲ್ಲವರ ಯೂನಿಯನ್‌ನ ಸದಸ್ಯನಾಗುವ ಸುಯೋಗವೂ ದೊರೆಯಿತು. ತಾನು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದಿದ್ದರೂ ಶುದ್ಧಹಸ್ತದ, ನೇರ ನಡೆನುಡಿಯ, ಬಿಲ್ಲವ ಸಮಾಜದ ಹೆಮ್ಮೆಯ ನಾಯಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿಯವರ ಎಲ್ಲ ಚುನಾವಣೆ ಸಂದರ್ಭದಲ್ಲೂ ಅವರಿಗಾಗಿ ದುಡಿದಿದ್ದಾರೆ ಮತ್ತು ಪೂಜಾರಿಯವರ ಪಟ್ಟ ಶಿಷ್ಯರಾಗಿ ಗುರುತಿಸಿಕೊಂಡಿದ್ದಾರೆ. ಕುದ್ರೋಳಿ ದೇವಳದ ಸಖ್ಯ:ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಸಭೆಯಲ್ಲಿ ಆಡಳಿತ ಸಮಿತಿಗೆ ಹೊಸ ಸದಸ್ಯರ ಸೇರ್ಪಡೆ ಬಗೆಗಿನ ಚರ್ಚೆ ನಡೆಯುತ್ತಿದ್ದ ಸಂದರ್ಭ ಪ್ರಸ್ತುತ ಇರುವ ಸದಸ್ಯರಿಗಿಂತ ಅತೀ ಕಿರಿಯ ವಯಸ್ಸಿನ ಪದ್ಮರಾಜ್ ಆರ್. ಹೆಸರನ್ನು ಹಿರಿಯರು ಸೂಚಿಸಿದಾಗ ತಾನು ಈ ಹುದ್ದೆ ನಿಭಾಯಿಸಬಲ್ಲೆನೇ ಎಂಬ ಸಂಶಯ ಹಾಗೂ ಗೊಂದಲ ಪದ್ಮರಾಜ್‌ರನ್ನು ಆವರಿಸಿದ ಸಂದರ್ಭ ತನ್ನ ಹೆಸರನ್ನು ಸೂಚಿಸಿದ ಅಲ್ಲಿದ್ದ ಹಿರಿಯರು ಇದು ನಿನಗೆ ಸಿಕ್ಕಿರುವ ಸುಯೋಗ, ಶ್ರೀ ಗೋಕರ್ಣನಾಥ ಹಾಗೂ ಗುರುಗಳ ಆಶೀರ್ವಾದದಿಂದ ಎಲ್ಲ ಸುಗಮವಾಗಿ ಸಾಗುವುದು ಎಂದು ಧೈರ್ಯ ನೀಡಿದುದರಿಂದ ಅವರಿಗೆ ತನ್ನ ಮೇಲಿದ್ದ ನಂಬಿಕೆಗೆ ಗೌರವ ನೀಡಿ ಮರು ಮಾತಾಡದೆ ಈ ಹುದ್ದೆಯನ್ನು ಒಪ್ಪಿಕೊಂಡರು. ಕಳೆದ 25 ವರ್ಷದಿಂದ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಬಿ.ಜನಾರ್ದನ ಪೂಜಾರಿಯವರ ಅಪ್ಪಟ ಅನುಯಾಯಿಯಾಗಿರುವ ಪದ್ಮರಾಜ್ ರಾಮಯ್ಯರವರು ದೇವಸ್ಥಾನಗಳು ಸಮಾಜಮುಖಿ ಚಟುವಟಿಕೆಗಳಲ್ಲೂ ಮುಂದೆ ಬರಬೇಕೆಂದು ತೋರಿಸಿಕೊಟ್ಟವರು. ಇಡೀ ನವರಾತ್ರಿ ಉತ್ಸವ ವಿಶ್ವ ಪ್ರಸಿದ್ಧಿ ಪಡೆಯಲು ಇವರ ಶ್ರಮವೂ ಪ್ರಮುಖವಾದುದು ಎನ್ನುವುದರಲ್ಲಿ ತಪ್ಪಾಗಲಾರದು. ಬಡವರ ಕಣ್ಣೀರೊರೆಸುವ ಕಾರ್ಯ:ಕರೊನಾ ಮಹಾಮಾರಿಯಿಂದಾಗಿ 4೦ ದಿನಗಳ ಲಾಕ್‌ಡೌನ್ ಸಂದರ್ಭ ಬಡವರ ಪಾಲಿನ ಕಣ್ಣೊರೆಸುವ ದೇವರಾಗಿ ಕಂಡು ಬಂದರು. ಬಿ.ಜನಾರ್ದನ ಪೂಜಾರಿಯವರ ಆದೇಶದಂತೆ ಈ ಸಂದರ್ಭ ದಿನಂಪ್ರತಿ ದೇವಸ್ಥಾನ ವತಿಯಿಂದ ಸುಮಾರು 1೦೦೦ ಬಡವರು, ನಿರಾಶ್ರಿತರಿಗೆ ಹಾಗೂ ವಲಸೆ ಕೂಲಿ ಕಾರ್ಮಿಕರಿಗೆ ಅನ್ನದಾನ ನಡೆಯುತ್ತಿತ್ತು. Vಈ ಸಂದರ್ಭ ಪದ್ಮರಾಜ್ ಅವರೇ ಖುದ್ದಾಗಿ ಸೇವಾದಳದವರೊಂದಿಗೆ ವಿವಿಧ ಪ್ರದೇಶಗಳಿಗೆ ತೆರಳಿ ಅನ್ನದಾನ ವಿತರಣೆಯಲ್ಲಿ ಭಾಗಿಯಾಗುತ್ತಿದ್ದುದು, ನಿಜಕ್ಕೂ ಅವರಿಗೆ ಬಡವರ ಬಗೆಗಿನ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಇಷ್ಟೇ ಅಲ್ಲದೆ, ಪದ್ಮರಾಜ್ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ದೇವಸ್ಥಾನದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 3೦೦ ಕ್ವಿಂಟಾಲ್ ಅಕ್ಕಿದಾನ ಮಾಡಲಾಗಿತ್ತು. ಎರಡನೇ ಲಾಕ್‌ಡೌನ್ ಸಂದರ್ಭದಲ್ಲೂ ಗುರುಬೆಳದಿಂಗಳು ಫೌಂಡೇಶನ್ ಮೂಲಕ ಸಹಸ್ರಾರು ನೊಂದವರಿಗೆ ದಿನಸಿ, ಆಹಾರ ಸಾಮಗ್ರಿ ತಲುಪಿಸುವ ಮೂಲಕ ನೊಂದವರ ಪಾಲಿಗೆ ಕಾಮಧೇನುವಾದವರು. ಧರ್ಮದ ದಾರಿಯೊಂದೇ ಮಾರ್ಗ:ಮಧ್ಯಮ ಕುಟುಂಬದಲ್ಲಿ ಜನಿಸಿದರೂ ಅವರ ಹೆತ್ತವರು ತಮ್ಮ ಮೂರು ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಸದುದ್ದೇಶ ಇಟ್ಟುಕೊಂಡು ಉತ್ತಮ ಶಿಕ್ಷಣ ನೀಡಿದಲ್ಲದೆ, ಸತ್ಯ ಧರ್ಮದ ದಾರಿಯಲ್ಲಿ ಗುರುಗಳ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗುವಂತೆ ಮತ್ತೆ ಮತ್ತೆ ಹೇಳಿಕೊಟ್ಟಿದ್ದಾರೆ. ಅದರಂತೆ ಮೂವರೂ ಮಕ್ಕಳನ್ನು ರಾಮಯ್ಯ ದಂಪತಿಗಳು ಬೆಳೆಸಿದ್ದಾರೆ ಹಾಗೆಯೇ ಬಿ.ಜನಾರ್ದನ ಪೂಜಾರಿಯವರ ಒಳ್ಳೆಯ ಕಾರ್ಯಗಳನ್ನು ನೋಡಿ ಅವರಂತೆಯೇ ಸಮಾಮುಖಿ ಸೇವೆ ಮಾಡಬೇಕು ಎನ್ನುವ ಚಿಂತನೆಯೂ ಪದ್ಮರಾಜ್ ಅವರಲ್ಲಿ ಬೆಳೆಯಿತು. ಈ ರೀತಿ ಶ್ರೀ ಗೋಕರ್ಣನಾಥನ ಆಶೀರ್ವಾದ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರೇರಣೆ, ಅಪ್ಪ ಅಮ್ಮ ಹಾಗು ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಂತೆ ಸಮಾಜಸೇವೆ ಮಾಡುತ್ತ ಬರುತ್ತಿದ್ದಾರೆ ಪದ್ಮರಾಜ್. ಇವರ ಸಹೋದರ ಆರ್.ಪುರುಷೋತ್ತಮ್ ಹೃದ್ರೋಗ ತಜ್ಞರಾಗಿದ್ದು ಪ್ರಸ್ತುತ ಎ.ಜೆ.ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಅಣ್ಣ ಆರೋಗ್ಯ ಸೇವೆಯತ್ತ ಗಮನಹರಿಸಿದರೆ, ತಮ್ಮ ಸದಾ ಸಮಾಜಮುಖಿ ಚಿಂತನೆಯೊಂದಿಗೆ ಬಡವರ ಬಗ್ಗೆ ಕಾಳಜಿ ವಹಿಸುತ್ತಿರುವುದನ್ನು ಶ್ಲಾಘನೀಯವಾದುದು. ನೊಂದ ಮನಸ್ಸುಗಳಿಗೆ ಆಸರೆಯಾದ ಪದ್ಮಣ್ಣ:ಅಣ್ಣ ಇರೆಗ್ ಏರ್ ಇಜ್ಜಿಂಡಲ ಮಲ್ಲೆಜ್ಜಿ ಯಾನುಲ್ಲೆ, ಎಂಕ್ಲೆನಾ ಗುರುಬೆಳದಿಂಗಳು ಸಂಸ್ಥೆ ಉಂಡು… ಎಂದು ಪದ್ಮರಾಜ್ ನೀಡಿದ ಭರವಸೆಯ ಮಾತಿನಂತೆ ಆಟೋ ಕುಕ್ಕರ್‌ ಬಾಂಬ್ ಸ್ಪೋಟದ ಸಂತ್ರಸ್ತ ಉಜ್ಜೋಡಿಯ ಪುರುಷೋತ್ತಮ ಪೂಜಾರಿಯವರಿಗೆ ಸುಸಜ್ಜಿತವಾಗಿ ಮನೆ ನವೀಕರಣಗೊಳಿಸುವ ಮೂಲಕ ಇಡೀ ಕುಟುಂಬ ಸದಸ್ಯರ ಮೊಗದಲ್ಲಿ ವಿಶ್ವಾಸದ ಬೆಳಕು ಮೂಡಿಸಿದರು.. ಇಂತಹ 4-5 ಮಂದಿ ಬಡವರಿಗೆ ಜಾತಿಮತದ ತಾರತಮ್ಯ ನೋಡದೆ ಸುಸಜ್ಜಿತವಾಗಿ ಮನೆ ನಿರ್ಮಿಸಿಕೊಡುವ ಮೂಲಕ ನೊಂದವರಿಗೆ ಆಸರೆಯಾದವರು. ಗುರುಬೆಳದಿಂಗಳು ಫೌಂಡೇಶನ್ ಮೂಲಕ ಆರೋಗ್ಯ, ಆಸರೆ, ಶಿಕ್ಷಣ ಎನ್ನುವ ಧ್ಯೇಯದೊಂದಿಗೆ ಈವರೆಗೆ ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ಬಡವರ ಸೇವೆಗೆ ವಿನಿಯೋಗಿಸುವ ಮೂಲಕ ನೊಂದ ಮನಸ್ಸಿನಲ್ಲಿ ಗೆಲುವಿನ ನಗೆ ಬೀರಲು ಕಾರಣಕರ್ತರಾದರು. ಸಮಾಜಮುಖಿ ಸೇವೆಗೆ ಗೌರವ:ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರು, ಜೆ.ಪಿ.ಪ್ರತಿಷ್ಠಾನ ದ ಕ ಜಿಲ್ಲಾ ಗೌರವಸಂಚಾಲಕ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಅನೇಕ ಸಂಘ ಸಂಸ್ಥೆಗಳಿಂದ ಇವರ ಸಮಾಜಮುಖಿ ಸೇವೆಗೆ ಗೌರವ ಸಂದಿದೆ. ನಮ್ಮ ಕುಡ್ಲ ವಾಹಿನಿಯು ಪ್ರತಿ ವರ್ಷ ನೀಡುವ ನಮ್ಮ ಕುಡ್ಲ ಪ್ರಶಸ್ತಿಗೂ ಬಾಜನರಾಗಿದ್ದಾರೆ. ಬಡವರಿಗೆ ಉಚಿತ ಸೇವೆ:ನೋಟರಿ ವಕೀಲರಾದ ಇವರು ತನ್ನ ನೋಟರಿ ಸಹಿಯನ್ನು ಬಡವರು, ವಿದ್ಯಾರ್ಥಿಗಳ ದೃಢೀಕರಣಕ್ಕೆ ಉಚಿತವಾಗಿ ನೀಡುವ ಮೂಲಕ ಸಮಾಜಕ್ಕೊಬ್ಬ ಮಾದರಿ ವಕೀರಾಗಿ ಮಿಂಚುತ್ತಿದ್ದಾರೆ. ಬೆಳದಿಂಗಳೆಂಬ ಕನಸು ನನಸು:ನಾವಿದ್ದಷ್ಟು ದಿನ ಇನ್ನೊಬ್ಬರ ಸೇವೆಯಲ್ಲಿ ತೊಡಗಬೇಕು ಎನ್ನುವ ಬ್ರಹ್ಮಶ್ರೀ ನಾರಾಯಣಗುರುಗಳು ಹಾಗು ತಮ್ಮ ಹೆತ್ತವರ ನುಡಿಯಂತೆ ಪದ್ಮರಾಜ್‌ರವರ ಕನಸಿನ ಯೋಜನೆ ಸಾಕಾರಗೊಂಡು ಒಂದು ವರ್ಷ ಪೂರೈಸಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶೀರ್ವಾದ, ಬ್ರಹ್ಮಶ್ರೀ ನಾರಾಯಣಗುರುವರ್ಯರ ತತ್ತ್ವಾದರ್ಶಗಳ ಬೆಳಕಿನಲ್ಲಿ, ಜನಾರ್ದನ ಪೂಜಾರಿಯವರ ಮಾರ್ಗದರ್ಶನ, ದಿ.ಜಯ ಸಿ.ಸುವರ್ಣರ ಆಶೋತ್ತರಗಳ ಸ್ಫೂರ್ತಿಯ ನೆಲೆಯಲ್ಲಿ, ಹಿರಿಯರ ಜತೆ ಕ್ರಿಯಾಶೀಲ ಯುವಕ ತಂಡ ಕಟ್ಟಿಕೊಂಡು ಜಾತಿ- ಮತ- ಪಕ್ಷ ಭೇದ ರಹಿತವಾಗಿ ಸಮಾಜ ಸೇವೆಗೆ ಕಟಿಬದ್ಧರಾಗುವ ನಿಟ್ಟಿನಲ್ಲಿ, ಶಿಕ್ಷಣ, ಆರೋಗ್ಯ, ಆಸರೆ ಎಂಬ ಮೂರು ಮುಖ್ಯ ಧ್ಯೇಯಗಳೊಂದಿಗೆ ಗುರುಬೆಳದಿಂಗಳು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಸರಸ್ವತಿಯಾಗಿ ಬದುಕಿನ ನಡೆ ಜ್ಞಾನದ ಹಾದಿಯಾಗಲು ಸಹಾಯ ನೀಡುವ ಶೈಕ್ಷಣಿಕ ನಿಧಿ, ರೋಗಿಗಳಿಗೆ ಸಂಜೀವಿನಿಯಾಗಿ ಆರೋಗ್ಯ ನಿಧಿ, ನೊಂದವರಿಗೆ ಕರುಣಾಮಯಿಯಾಗಿ ಆಸರೆ ನಿಧಿಯನ್ನು ಅರ್ಹರಿಗೆ ತಲುಪಿಸುವ ಯೋಜನೆಯೇ ಗುರು ಬೆಳದಿಂಗಳು. ಈಗಾಗಲೇ ಗುರುಬೆಳದಿಂಗಳು ಫೌಂಡೇಶನ್ ಮೂಲಕ ನೊಂದವರಿಗೆ ಮನೆ ನಿರ್ಮಾಣ, ಬಡ ಹೆಣ್ಣುಮಕ್ಕಳ ಮದುವೆ, ನೂರಾರು ರೋಗಿಗಳಗೆ ಔಷಧಕ್ಕೆ ನೆರವು, ನೂರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೇರಿ ಫೌಂಡೇಶನ್ ಮೂಲಕ ಲಕ್ಷಾಂತರ ರೂಪಾಯಿ ಸಹಾಯಹಸ್ತ ನೀಡಲಾಗಿದೆ. ಮುಂಚೂಣಿ ಹೋರಾಟಗಾರ:ಪದ್ಮರಾಜ್‌ರವರು ನಾರಾಯಣ ಗುರುಗಳ ಬಗ್ಗೆ ಅಪಾರ ಕಾಳಜಿ ಹೊಂದಿದವರು ಮತ್ತು ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂದವರು. ಇತ್ತೀಚೆಗೆ ನಡೆದ ನಾರಾಯಣ ಗುರುಗಳ ಟ್ಯಾಬ್ಲೋ ನಿರಾಕರಣೆ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ ಮೊದಲಿಗರು. ಇವರ ಮುಂದಾಳತ್ವದಲ್ಲಿ ಗುರುಗಳಿಗೆ ಆದ ಅವಮಾನದ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಿದ್ದರು. ಇತ್ತೀಚೆಗೆ 1೦ನೇ ತರಗತಿಯ ಪಠ್ಯಪುಸ್ತಕದ ಸಮಾಜ ವಿಜ್ಞಾನದಲ್ಲಿ ನಾರಾಯಣ ಗುರುಗಳ ಪಠ್ಯ ಕೈಬಿಟ್ಟದ್ದರ ವಿರುದ್ಧ ಮೊದಲು ಖಂಡನೆ ವ್ಯಕ್ತಪಡಿಸಿ, ರಾಜ್ಯಾದ್ಯಂತ ಹೋರಾಟ ಮಾಡುವ ಮೂಲಕ ಗುರುಗಳ ಪಠ್ಯವನ್ನು ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾದರು. ಜಾತಿ, ಮತ, ಭೇದವಿಲ್ಲದೆ ನೊಂದವರ ಪರವಾಗಿ ನಿಂತು, ಅನ್ಯಾಯವನ್ನು ಖಂಡಿಸಿ ಸದಾ ನೊಂದವರ ಪರವಾಗಿ ನಿಲ್ಲುವ ಮೂಲಕ ಎಲ್ಲ ಸಮಾಜದ ಆಸ್ತಿಯಾಗಿ ಪದ್ಮರಾಜ್ ಅವರು ಬೆಳೆಯುತ್ತಿದ್ದಾರೆ. ಯುವಕರ ಬಗ್ಗೆ ಕಾಳಜಿ:ಯುವಕರು ವಿದ್ಯಾವಂತರಾಗಬೇಕು ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಸದಾ ಯುವಜನತೆ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಸಮಾಜದಲ್ಲಿ ಯಾವುದೇ ಅಂತರ್ ಕಲಹವಿದ್ದರೂ ಸಮಾಜದ ಬಗ್ಗೆ ಅಕ್ಕರೆಯಿರುವ ವಕೀಲರಾದ ಪದ್ಮರಾಜ್ ಬಳಿ ಊರ ಪರವೂರ ಸಮಾಜ ಬಾಂಧವರು ದೂರನ್ನು ತರುವುದು ಸಾಮಾನ್ಯ. ಈ ವೇಳೆ ಗೋಕರ್ಣನಾಥನಲ್ಲಿ ಪ್ರಾರ್ಥಿಸಿ ಎರಡೂ ಪಕ್ಷದ ದೂರನ್ನು ಆಲಿಸಿ ಸೂಕ್ಷ್ಮವಾಗಿ ಪರಿಹರಿಸಿ ಎಲ್ಲರೂ ಅನ್ಯೋನ್ಯತೆ ಯಿಂದ ಬಾಳುವಂತೆ ಮಾಡುವ ಚಾಣಾಕ್ಷತೆ ಉಳ್ಳವರು. ಮನುಷ್ಯ ಒಳ್ಳೆಯವನಾದರೆ ಸಾಕು:ನಾರಾಯಣಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು, ಪ್ರತಿಯೊಂದು ಜಾತಿಯವರನ್ನು ಸಮಾನವಾಗಿ ನೋಡಿಕೊಳ್ಳುತ್ತಾ, ಜಾತಿ ಯಾವುದಾದರೇನು ಮನುಷ್ಯ ಒಳ್ಳೆಯವನಾದರೆ ಸಾಕು ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಯಾರೇ ಸಮಸ್ಯೆ ಹೇಳಿಕೊಂಡು ಬಂದರೂ ಜಾತಿ, ಮತ, ಪಂಗಡ ನೋಡದೆ ನೊಂದವರ ಪಾಲಿನ ಕಾಮಧೇನುವಾಗುತ್ತಾರೆ ಪದ್ಮರಾಜ್ . ಅನೇಕ ಮಂದಿ ಕುಡಿತ ಅಥವಾ ಇನ್ನಿತರ ಮಾದಕ ವ್ಯಸನಿಗಳನ್ನು ತಮ್ಮ ಬಳಿ ಕರೆಸಿಕೊಂಡು ಅವರ ಮನಪರಿವರ್ತನೆಗೊಳಿಸಿ, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳುವಂತೆ ಮಾಡಿದ ಕೀರ್ತಿ ಇವರದ್ದು. ತಾನು ದುಡಿದ ಹಣದಲ್ಲೂ ತನಗೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎನ್ನುವಂತೆ ದುಡಿಮೆಯ ಹಣವನ್ನು ಜಾತಿ ಮತ ಭೇದ ನೋಡದೆ ನೊಂದವರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಇವರ ಸೇವಾ ಮನೋಭಾವಕ್ಕೆ ಉತ್ತಮ ನಿದರ್ಶನ. ಸಂಘ ಸಂಸ್ಥೆಗಳ ಪ್ರೀತಿ:ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯದೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರಾಗಿದ್ದಾರೆ. ಜೆಪಿ ನಾರಾಯಣ ಸ್ವಾಮಿ ಪ್ರತಿಷ್ಠಾಪನ ಬೆಂಗಳೂರು ಇದರ ದ.ಕ. ಜಿಲ್ಲಾ ಸಂಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸದಾ ಕ್ರೀಯಾಶೀಲತೆಯಲ್ಲಿದ್ದಾರೆಹೀಗೆ ಸಾಮಾನ್ಯರಲ್ಲೊಬ್ಬ ಅಸಾಮಾನ್ಯ ವ್ಯಕ್ತಿಯಾಗಿರುವ ಪದ್ಮರಾಜ್ ಅವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು, ಬಿಲ್ಲವ ಸಮುದಾಯದ ಮುಂದಾಳು ಪದ್ಮರಾಜ್ ಅವರು ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವುದು ಸ್ಪಷ್ಟವಾಗಿದೆ

ಸಂದರ್ಶನ

8ನೇ ತರಗತಿ ಫೇಲಾದ ಹುಡುಗ ಇವತ್ತು 1೦೦೦ ಉದ್ಯೋಗಿಗಳ ಅನ್ನದಾತ. ಇದು ರಾಜೇಂದ್ರ ವಿ. ಶೆಟ್ಟಿ ಯಶಸ್ವಿ ಹೊಟೇಲ್ ಉದ್ಯಮಿಯಾದ ಸಾಹಸಗಾಥೆ. ಇವರು ಶ್ರೀ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ ಮತ್ತು ಹೊಟೇಲ್ ಲೀಲಾವತಿ ಪ್ಯಾಲೇಸ್‌ನ ಸಂಸ್ಥಾಪಕ. ಇವರಿಗೆ ಮೇ.19 ರಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆಯಿಂದ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಮಂಗಳೂರು ಪುರಭವನದಲ್ಲಿ ನಡೆಯುವ ತ್ರಿಪಂಚಕ ಸಂಭ್ರಮದಲ್ಲಿ ‘ಬಂಟ ವಿಭೂಷಣ ಪ್ರಶಸ್ತಿ’ ಘೋಷಣೆ.

ಹುಬ್ಬಳ್ಳಿ :ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಬಡ ಕುಟುಂಬವೊಂದರಲ್ಲಿ ಜನಿಸಿದ ರಾಜೇಂದ್ರ ಶೆಟ್ಟಿ ಬಾಲ್ಯದಲ್ಲೇ ಬಡತನದ ಬೇಗೆ ಅನುಭವಿಸಿದವರು. ಅವರ ತಂದೆ ತಾಯಿ ಕುಟುಂಬದೊಂದಿಗೆ ಉಡುಪಿಯಿಂದ ಹುಬ್ಬಳ್ಳಿಗೆ ವಲಸೆ ಬಂದಾಗ ರಾಜೇಂದ್ರ ಶೆಟ್ಟಿಯವರು ಬಾಲಕನಾಗಿದ್ದರು. ಹೇಗೋ ಕಷ್ಟಪಟ್ಟು 8ನೇ ತರಗತಿಯವರೆಗೆ ಓದಿದರು. ಆದರೆ, ಫೇಲ್ ಆದರು. ಮುಂದೆ,ಅವರು ಉದ್ಯೋಗಕ್ಕಾಗಿ ಮನೆಯಲ್ಲಿ ಯಾರಿಗೂ ಹೇಳದೆ ರೈಲು ಹತ್ತಿದರು. ಅದು ಹೋಗಿ ನಿಂತದ್ದು ಮುಂಬೈಯಲ್ಲಿ, ಅಲ್ಲಿ ರೈಲ್ವೇ ಸ್ಟೇಷನ್ ಅಕ್ಕಪಕ್ಕದಲ್ಲಿ ಚಹಾ ಮಾರುವ ಕೆಲಸ ಮಾಡಿದರು. ಆರಂಭದಲ್ಲಿ ಬೀದಿ ಬದಿಯಲ್ಲಿ ಮಲಗಿ ಕೆಲಸ ಹುಡುಕುತ್ತಾ ಅಲ್ಲಿನ ಹೊಟೇಲ್‌ಗಳಿಗೆ ಕೆಲಸಕ್ಕಾಗಿ ಅಲೆದಾಡಿದರು. ಮುಂದೆ, ಅವರಿಗೆ ಹೊಟೇಲ್‌ನಲ್ಲಿ ಕ್ಲೀನರ್ ಕೆಲಸ ಸಿಗುತ್ತದೆ. ವಿವಿಧ ಹೋಟೆಲ್‌ಗಳಲ್ಲಿ ಅಡುಗೆ ಮನೆಯ ಕೆಲಸ, ಕ್ಲೀನರ್, ವೇಟರ್, ಕ್ಯಾಪ್ಟನ್ ನಂತಹ ನಾನಾ ತರಹದ ಕೆಲಸಗಳನ್ನು ಮಾಡಿದರು. ಆ ಬಳಿಕ ದೇವತಾ ಮನುಷ್ಯರಂಥ ಮಾಲಕರೊಬ್ಬರು ಸಿಕ್ಕಿದ್ದರಿಂದ ಅವರ ಹೊಟೇಲ್‌ನಲ್ಲಿ 12 ವರ್ಷಗಳ ಕಾಲ ಮೆನೇಜರ್ ಆಗಿ ದುಡಿದರು. ಮುಂಬೈಗೆ ಬಂದಾಗ ಅವರಿಗೆ 13 ರಿಂದ 14 ವರ್ಷ ಆಗಿತ್ತು. ಅಲ್ಲಿ 18 ವರ್ಷಗಳ ತನಕ ಒಟ್ಟು 45 ಹೊಟೇಲ್‌ಗಳಲ್ಲಿ ದುಡಿದರು. ಅಪಾರ ಅನುಭವ ಗಳಿಸಿದರು.ತದನಂತರ, ಅವರು ತಾಯಿಯವರಿಗೆ ಫೋನ್ ಮಾಡಿ ಮುಂಬೈಯಲ್ಲಿ ಮನೆ ಮಾಡುತ್ತೇನೆ. ಬಂದು ನೆಲೆಸಿ ಎಂದಾಗ ಅವರ ತಾಯಿಯವರು ತಾನು ಸತ್ತರೂ ಬರೋಲ್ಲ ಎಂದರು. ತಾಯಿ ಲೀಲಾವತಿ ಅವರ ಮೇಲೆ ರಾಜೇಂದ್ರ ಶೆಟ್ಟಿಯವರಿಗೆ ಅತೀವ ಪ್ರೀತಿ. ತಾಯಿಯೆಂದರೆ ಪಂಚಪ್ರಾಣ. ಅವರ ಪಾಲಿಗೆ ಪ್ರತ್ಯಕ್ಷ ದೇವರು. ಈ ಕಾರಣಕ್ಕಾಗಿಯೇ ತನ್ನ ತಾಯಿಗಾಗಿ ಮುಂಬೈ ಬಿಟ್ಟು ಅಲ್ಲಿನ ಅಸಂಖ್ಯಾತ ಸ್ನೇಹಿತರ ಫ್ರೆಂಡ್ಸ್ ಸರ್ಕಲ್ ತೊರೆದರು. ಹುಬ್ಬಳ್ಳಿಯಲ್ಲಿಯೇ ಹೊಟೇಲ್ ಉದ್ಯಮ ಆರಂಭಿಸಿದ ಅವರು ನವೀನ್ ಕಾಮತ್ ಅವರು ಕೊಟ್ಟ 5೦ ಸಾವಿರ ರೂಪಾಯಿ ಹಣವನ್ನು ಹೊಟೇಲ್ ಉದ್ಯಮಕ್ಕೆ ತೊಡಗಿಸಿಕೊಂಡರು. ಇಂದು ಅದು ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತದೆ. ಮನೆ ದೇವರ ಹೆಸರಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾಂ, ದಾವಣಗೆರೆ ಯಲ್ಲಿ ಶ್ರೀಪಂಜುರ್ಲಿ ಗ್ರೂಪ್ ಆಪ್ ಹೊಟೇಲ್’ ಮತ್ತು ತಾಯಿ ಲೀಲಾವತಿ ಯವರ ಹೆಸರಲ್ಲಿಹೊಟೇಲ್ ಲೀಲಾವತಿ ಪ್ಯಾಲೇಸ್’ ಮತ್ತು ಪೂಜ್ಯ ತಂದೆಯವರ ಹೆಸರಲ್ಲಿ ಪುಣೆಯಲ್ಲಿ ವಿಶ್ವನಾಥ್ ಪ್ಯಾಲೇಸ್ ಸೇರಿದಂತೆ ಒಟ್ಟು 9 ಹೊಟೇಲ್‌ಗಳನ್ನು ಆರಂಭಿಸಿದರು. ದಾವಣಗೆರೆಯಲ್ಲಿ ಒಂದು ಸುಸಜ್ಜಿತ ಕಲ್ಯಾಣ ಮಂಟಪವನ್ನು ಸ್ಥಾಪಿಸಿದರು.ಇಂದು ಅದು ರಾಜ್ಯ, ರಾಷ್ಟ್ರ,ಅಂತರಾಷ್ಟೀಯ ಮಟ್ಟದಲ್ಲಿಯೇ ಖ್ಯಾತಿ ಯನ್ನು ಪಡೆದು ಗ್ರಾಹಕರ ಶ್ಲಾಘನೆಗೆ ಪಾತ್ರವಾಗಿದೆ. ತಾನೊಬ್ಬನೇ ಬೆಳೆಯ ಬೇಕು, ತಾನೊಬ್ಬನೇ ದುಡ್ಡು ಗಳಿಸಬೇಕೆಂಬ ದುರಾಸೆಗೆ ಬೀಳದೆ 2೦ ವರ್ಷಗಳ ಕಾಲ ವಿವಿಧ ಹೊಟೇಲ್‌ಗಳಲ್ಲಿ ಕೆಲಸ ಮಾಡುವಾಗ ತನ್ನ ಜೊತೆಯಲ್ಲಿ ಕೆಲಸ ಮಾಡಿದ, ಸಹಾಯ, ಸಹಕಾರ ನೀಡಿದ, ಅರ್ಹ ಹಾಗೂ ಪ್ರಾಮಾಣಿಕ, ಆತ್ಮೀಯ ಗೆಳೆಯರನ್ನು ಕರೆದು ತನ್ನ ಹೊಟೇಲ್‌ಗಳ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಟ್ಟರು. ಅವರು ಕೂಡಾ ತನ್ನೊಟ್ಟಿಗೆ ಬೆಳೆದು ತಮ್ಮ ಸುಂದರ ಬದುಕು ಕಟ್ಟಿಕೊಳ್ಳಲು ಕಾರಣರಾದರು. ಹೀಗೇ ತನ್ನ ಹೊಟೇಲ್‌ನ ಕಾರ್ಮಿಕರನ್ನೇ ಮಾಲಕರಾಗಿಸಿ ಹಿರಿತನ ಮೆರೆದರು. ಇಂದು ಪಂಜುರ್ಲಿ ಗ್ರೂಪ್ ಆಪ್ ಹೊಟೇಲ್ ಮೂಲಕ ನಾನಾ ಸಂಸ್ಥೆಗಳನ್ನು ಆರಂಭಿಸಿ ಉದ್ಯಮದಲ್ಲಿ ಬಂದ ಹಣದಲ್ಲಿ ಸಮಾಜಸೇವೆಯನ್ನು ಮಾಡುತ್ತಿದ್ದಾರೆ. ಅವರ ತಂದೆಯವರು ತನ್ನ ಮಗ ದಾನಶೂರ ಕರ್ಣನಾಗುತ್ತಾನೆ ಎನ್ನುತ್ತಿದ್ದರು. ಕೊಡುವುದೆಂದರೆ ರಾಜೇಂದ್ರ ಶೆಟ್ಟಿಯವರಿಗೆ ಎಲ್ಲಿಲ್ಲದ ಪ್ರೀತಿ, ಅವರು ಕೊಡುಗೈದಾನಿ, ಬಡವರ ಬಂಧು. ತಾಳ್ಮೆ ಮತ್ತು ಶ್ರದ್ಧೆಯೊಂದಿದ್ದರೆ ಯಶಸ್ಸು ಸಾಧಿಸಬಹುದೆಂಬುವುದಕ್ಕೆ ರಾಜೇಂದ್ರ ಶೆಟ್ಟಿಯವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಯಾವುದೇ ದುರಾಭ್ಯಾಸಗಳಿಲ್ಲದ ರಾಜೇಂದ್ರ ಶೆಟ್ಟಿಯವರು ಸದ್ಗುಣಗಳ ಸಂಪನ್ನ. ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಅಪೂರ್ವ ಸಾಧಕ. ಅವರ ಸಾಧನೆಯ ಹಿಂದೆ ಕಷ್ಟಗಳ ನೆರಳಿದೆ. ಹಠ, ಛಲ, ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠುರತೆ, ಅನುಭವ, ಮಾತೃ ವಾತ್ಸಲ್ಯ ಸೇರಿದಂತೆ ನಂಬಿಕೆ, ವಿಶ್ವಾಸದ ಗುಣವಿದೆ. ಅದೇ ಅವರನ್ನು ಹೊಟೇಲ್ ಉದ್ಯಮದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆಸಿದೆ. ತಾಯಿ, ಮಗಳು, ಹೆಂಡತಿ, ಪ್ರಾಮಾಣಿಕತೆ ಎಂಬ ನಾಲ್ಕು ಸಿದ್ಧಾಂತಗಳೇ ಅವರ ಯಶಸ್ಸಿನ ಬೆನ್ನೆಲುಬುಗಳು. ಹುಬ್ಬಳ್ಳಿ-ಧಾರವಾಡದಲ್ಲಿ ಹೊಟೇಲ್ ಎಂದರೆ ಹಸಿದವನಿಗೆ ಅನ್ನ ಹಾಕುವ ಮನೆಯಿದ್ದಂತೆ. ರಾಜೇಂದ್ರ ಶೆಟ್ಟಿಯವರು ಶ್ರೀ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್, ಹೊಟೇಲ್, ಲೀಲಾವತಿ ಪ್ಯಾಲೇಸ್ ಮೂಲಕ ಹೊಟೇಲ್ ಉದ್ಯಮದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಬಡವರ ಬಂಧುವಾಗಿ ಸಾವಿರಾರು ಜನರ ಹಸಿವು ನೀಗಿಸಿದ್ದಾರೆ. 37 ವರ್ಷಗಳ ಹೊಟೇಲ್ ಉದ್ಯಮದ ಅನುಭವವಿರುವ ಅವರು ಇಂದು ಸಾವಿರಾರು ಉದ್ಯೋಗಿಗಳಿಗೆ ಅನ್ನದಾತ. ಅವರ ಸಾಧನೆ, ಜೀವನ ಶೈಲಿ ಯುವಜನತೆಗೆ ಸ್ಪೂರ್ತಿ. ಅವರು ಕರ್ನಾಟಕದ ಹೆಮ್ಮೆಯ ಸುಪುತ್ರರಾಗಿದ್ದಾರೆ. ಸಾಧನೆಗಳ ಸರದಾರ ರಾಜೇಂದ್ರ ಶೆಟ್ಟಿ:ರಾಜೇಂದ್ರ ಶೆಟ್ಟಿಯವರು ನವೆಂಬರ್ 2೦, 1973 ರಂದು ಉಡುಪಿ ಜಿಲ್ಲೆಯ ಮೂಡುಬೆಟ್ಟು ಮಣಿಪುರ ಗ್ರಾಮದ ದೆಂದೂರುನಲ್ಲಿ ಜನಿಸಿದರು. ಅವರ ತಂದೆ ದಿ. ವಿಶ್ವನಾಥ ಶೆಟ್ಟಿ ಮತ್ತು ತಾಯಿ ಲೀಲಾವತಿ. ಹರೀಶ್ ಮತ್ತು ಅಜಯ್ ಅವರು ರಾಜೇಂದ್ರ ಶೆಟ್ಟಿಯವರ ಸಹೋದರರಾಗಿದ್ದು, ದೀಪಾ ಮತ್ತು ವಿದ್ಯಾ ಸಹೋದರಿಯರು.ರಾಜೇಂದ್ರ ಶೆಟ್ಟಿಯವರ ಧರ್ಮಪತ್ನಿ ಹರಿಣಿ. ಕುಮಾರಿ ವೈಷ್ಣವಿ ಮತ್ತು ಕುಮಾರಿ ವೈಭವಿ ಇವರ ಸುಪುತ್ರಿಯರು.ಹುಬ್ಬಳ್ಳಿ-ಧಾರವಾಡ-ಬೆಳಗಾವಿ-ದಾವಣಗೆರೆ, ಪುಣೆ ಗಳಲ್ಲಿ ಒಟ್ಟು 9 ಹೊಟೇಲ್‌ಗಳನ್ನು ಹೊಂದಿರುವ ಅವರು ದಾವಣಗೆರೆಯಲ್ಲಿ ಸುಸಜ್ಜಿತ ಕಲ್ಯಾಣ ಮಂಟಪವನ್ನು ಹೊಂದಿದ್ದಾರೆ. ಒಟ್ಟು 1೦೦೦ ಮಂದಿ ಉದ್ಯೊಗಿಗಳಿಗೆ ಇವರು ಅನ್ನದಾತರಾಗಿದ್ದಾರೆ. 2005 ರಲ್ಲಿ ಧಾರವಾಡದ ಟೋಲ್ ನಾಕಾದಲ್ಲಿ ಹೊಟೇಲ್ ಶ್ರೀ ಪಂಜುರ್ಲಿ, 2009ರಲ್ಲಿ ಹುಬ್ಬಳ್ಳಿ ಕೋರ್ಟು ಸರ್ಕಲ್‌ನ ಹತ್ತಿರ ಹೊಟೇಲ್ ಶ್ರೀ ಪಂಜುರ್ಲಿ, 2011ರಲ್ಲಿ ಹುಬ್ಬಳ್ಳಿ ವಿದ್ಯಾನಗರದ ಬಿ.ವಿ.ಬಿ. ಎದುರು ಹೊಟೇಲ್ ಶ್ರೀ ಪಂಜುರ್ಲಿ, 2012ರಲ್ಲಿ ಧಾರವಾಡ ಕೆ.ಸಿ. ಪಾರ್ಕು ಎದುರು ಹೊಟೇಲ್ ಶ್ರೀ ಪಂಜುರ್ಲಿ, 2015 ರಲ್ಲಿ ಹುಬ್ಬಳ್ಳಿ ಗೋಕುಲ್ ರಸ್ತೆಯ ನೆಹರು ನಗರದಲ್ಲಿ ಹೊಟೇಲ್ ಶ್ರೀ ಪಂಜುರ್ಲಿ, 2015 ರಲ್ಲಿ ಹುಬ್ಬಳ್ಳಿ ಗೋಕುಲ ರಸ್ತೆ ಓಯಾಸಿಸ್ ಮಾಲ್ ಎದುರು ಹೊಟೇಲ್ ಲೀಲಾವತಿ ಪ್ಯಾಲೇಸ್, 2020 ರಲ್ಲಿ ಬೆಳಗಾವಿಯ ಖಾನಾಪುರ ರಸ್ತೆಯ 3ನೇ ರೈಲ್ವೇ ಗೇಟ್ ಬಳಿ ಶ್ರೀ ಪಂಜುರ್ಲಿ ಫೈನ್ ಡೈನ್, 2022 ರಲ್ಲಿ ದಾವಣಗೆರೆ ಹಳೇ ಬಸ್ ನಿಲ್ದಾಣದ ಹತ್ತಿರ ಹೊಟೇಲ್ ಶ್ರೀ ಪಂಜುರ್ಲಿ ಪ್ಯಾಲೇಸ್, ದಾವಣಗೆರೆ ಹಳೇ ಬಸ್ ನಿಲ್ದಾಣದ ಹತ್ತಿರ 2022 ರಲ್ಲಿ ಲೀಲಾವತಿ ಕಲ್ಯಾಣ ಮಂಟಪವನ್ನು ಸ್ಥಾಪಿಸಿದ್ದಾರೆ.2023 ರಲ್ಲಿ ಪುಣೆಯಲ್ಲಿ ಹೋಟೆಲ್ ವಿಶ್ವನಾಥ್ ಪ್ಯಾಲೇಸ್ ನ್ನು ಆರಂಭಿಸಿದ್ದಾರೆ. ಹುಬ್ಬಳ್ಳಿ ಹೊಟೇಲ್ ಸಂಘದ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಹಾರ ಮಂದಿರಗಳ ಸಂಘ, ಬೆಂಗಳೂರು ಇದರ ಧಾರವಾಡ ಜಿಲ್ಲಾ ಪ್ರತಿನಿಧಿ ಸದಸ್ಯ, ಹುಬ್ಬಳ್ಳಿ-ಧಾರವಾಡ ಬಂಟರ ಸಂಘ, ಹುಬ್ಬಳ್ಳಿ ಇದರ ಸಹ ಕಾರ್ಯದರ್ಶಿ, ವಿಶ್ವ ಬಂಟರ ಸಂಘ ಮುಂಬಯಿ ಇದರ ನಿರ್ದೇಶಕರು, ಧಾರವಾಡ ಹೋಟೆಲ್ ಸಂಘ, ಬೆಳಗಾವಿ ಹೋಟೆಲ್ ಸಂಘ, ದಾವಣಗೆರೆ ಹೋಟೆಲ್ ಸಂಘ, ಪುಣೆ ಹೋಟೆಲ್ ಸಂಘ, ಹುಬ್ಬಳ್ಳಿ ರೋಟರಿ ಕ್ಲಬ್, ಹುಬ್ಬಳ್ಳಿ ಶಿರೂರ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಕಮಿಟಿ ಇವುಗಳಲ್ಲಿ ಸಮಿತಿ ಸದಸ್ಯರಾಗಿ ಗುರುತಿಸಿದ್ದಾರೆ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಹುಬ್ಬಳ್ಳಿ ಇದರ ಗೌರವ ಅಧ್ಯಕ್ಷರಾಗಿದ್ದಾರೆ. ಧಾರವಾಡ ಜಿಲ್ಲಾ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಹುಬ್ಬಳ್ಳಿ ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೋಟೆಲ್ ಉದ್ಯಮದಲ್ಲಿ ಸಾಧಿಸಿದ ಸಾಧನೆಗೆ ಮತ್ತು ಇವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಮಾಧ್ಯಮಗಳು ಇವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಿವೆ. ಬೆಂಗಳೂರಿನ ಕರ್ನಾಟಕ ಸಿರಿ ಸಂಘಟನೆಯು ಕರ್ನಾಟಕ ಉದ್ಯಮ ರತ್ನ ಪ್ರಶಸ್ತಿ ನೀಡಿದೆ.2015 ರಲ್ಲಿ ಹೊನ್ನಾವರದ ಹೊನ್ನಾವರ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ, 2016 ರಲ್ಲಿ ಹುಬ್ಬಳ್ಳಿಯ ಹುಬ್ಬಳ್ಳಿ ಹೊಟೇಲ್ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಪ್ರಶಸ್ತಿ, 2018 ರಲ್ಲಿ ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ ಆವೃತ್ತಿಯಿಂದ 2018ರಲ್ಲಿ ಅಚೀವರ್ಸ್ ಆಫ್ ಕರ್ನಾಟಕ ಪ್ರಶಸ್ತಿ, 2018 ರಲ್ಲಿ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಟಾನ ಟ್ರಸ್ಟ್ ನಿಂದ ವಿಶ್ವೇಶ್ವರಯ್ಯ ರಾಷ್ಟೀಯ ಸದ್ಭಾವನಾ ಪ್ರಶಸ್ತಿ, 2021 ರಲ್ಲಿ ಮದರ್ ಥೆರೇಸಾ ಮೆಮೋರಿಯಲ್ ನ್ಯಾಷನಲ್ ಅವಾರ್ಡ್ ನ್ನು ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಬೆಂಗಳೂರು ಇವರಿಂದ ಪಡೆದಿದ್ದಾರೆ. 2021ರಲ್ಲಿ ಕರ್ನಾಟಕ ಮಾದ್ಯಮ ಸಹಕಾರ ಮತ್ತು ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. 2021ರಲ್ಲಿ ರೆಡ್ ಎಫ್.ಎಂ. ರೇಡಿಯೋದಿಂದ ಬಿಸಿನೆಸ್ ಬ್ರಿಲಿಯನ್ಸ್ ಅವಾರ್ಡ್, 2022 ರಲ್ಲಿ ಸುವರ್ಣ ನ್ಯೂಸ್ ಟಿ.ವಿ. ಚಾನೆಲ್ ಮತ್ತು ಕನ್ನಡ ಪ್ರಭ ದಿನಪತ್ರಿಕೆಯಿಂದ ಉತ್ತರ ಕರ್ನಾಟಕ ಸಾಧಕರು ಪ್ರಶಸ್ತಿ, 2022 ರಲ್ಲಿ ಇಂದು ಸಂಜೆ ಪತ್ರಿಕೆಯಿಂದ ಉದ್ಯೋಗ ರತ್ನ ಪ್ರಶಸ್ತಿ, 2022 ರಲ್ಲಿ ರಾಜ್ ನ್ಯೂಸ್ ಟಿ.ವಿ.ಯಿಂದ ಗುರು ಅನುಗ್ರಹ ಪುರಸ್ಕಾರ, 2022 ರಲ್ಲಿ ಸರ್ಕಾಳ ಮರಾಠಿ ದಿನಪತ್ರಿಕೆಯಿಂದ ಐಡಲ್ಸ್ ಆಫ್ ಬೆಳಗಾವ, 2022 ರಲ್ಲಿ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಇವರಿಂದ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, 2023 ರಲ್ಲಿ ವಿಸ್ತಾರ ಟಿವಿಯಿಂದ ಬಿಜಿನೆಸ್ ಎಕ್ಸಲೆನ್ಸ್ ಅವಾರ್ಡ್,2023 ರಲ್ಲಿ ಪಬ್ಲಿಕ್ ನೆಸ್ಟ್ ಇಂಟರ್‌ನ್ಯಾಷನಲ್ ನ್ಯೂಸ್‌ನಿಂದ ಪಂಚರತ್ನ ಪ್ರಶಸ್ತಿ, 2023 ರಲ್ಲಿ ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸ್ ನ್ಯೂಸ್ ಫಸ್ಟ್ ಟಿವಿ ಮೊದಲಾದ ಹಲವಾರು ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳು ದೊರೆಕಿವೆ.ಇವರು ಹೊಟೇಲ್ ಉದ್ಯಮದಲ್ಲಿ ಸಾಧಿಸಿದ ಸಾಧನೆಯ ಬಗ್ಗೆ 2021ರಲ್ಲಿ ಪವರ್ ಟಿವಿಯ ‘ಹೊಟೇಲ್ ಹೀರೋ’ ಕಾರ್ಯಕ್ರಮ, 2022 ರಲ್ಲಿ ನ್ಯೂಸ್ ಫಸ್ಟ್ ಟಿವಿಯಿಂದ ‘ನಾನು ನನ್ನ ಸಾಧನೆ ಕಾರ್ಯಕ್ರಮ’, 2023 ರಲ್ಲಿ ಟಿವಿ 5 ‘ನಮ್ಮ ಬಾಹುಬಲಿ’ ಕಾರ್ಯಕ್ರಮ ಮೂಲಕ ಸುದ್ಧಿ ಬಿತ್ತರಗೊಂಡಿವೆ. ಸಮಾಜ ಕಂಡ ಸರ್ವಶ್ರೇಷ್ಠ ಸಾಧಕ ರಾಜೇಂದ್ರ ವಿಶ್ವನಾಥ ಶೆಟ್ಟಿಯವರ ವೃತ್ತಿ ಬದುಕು ಆರಂಭದಲ್ಲಿ ಕಷ್ಟಕರವಾಗಿದ್ದರೂ, ಕಠಿಣ ಪರಿಶ್ರಮ ಹಾಗೂ ನಿರಂತರ ದುಡಿಮೆ,ಪ್ರಾಮಾಣಿಕ ಪ್ರಯತ್ನಗಳಿಂದ ಹಂತ ಹಂತವಾಗಿ ಮೇಲೇರಿ ಯಶಸ್ವಿ ಸಾಧಿಸಲು ಸಾಧ್ಯ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವ ಇವರ ನಿಸ್ವಾರ್ಥ ಸೇವಾ ಮನೋಭಾವವನ್ನು ಪರಿಗಣಿಸಿ ರಂಜಿತ್ ಶೆಟ್ಟಿ ಸಾರಥ್ಯದ ಪ್ರತಿಷ್ಠಿತ ಬಂಟ್ಸ್ ನೌ ಮಾದ್ಯಮ ಸಂಸ್ಥೆಯು ಮೇ 19, 2024 ರ ಸಂಜೆ 4ಕ್ಕೆ ಮಂಗಳೂರು ಪುರಭವನದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ತ್ರಿಪಂಚಕ ಸಂಭ್ರಮದಲ್ಲಿ ಇವರಿಗೆ ‘ಬಂಟ ವಿಭೂಷಣ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದೆಂದು ಘೋಷಣೆ ಮಾಡಿದೆ.

ಸಂದರ್ಶನ

ಮೂಲ್ಕಿ ಸುಂದರರಾಮ ಶೆಟ್ಟಿ ನಗರದ ರೂವಾರಿ ಹಿರಿಯ ರಾಜಕೀಯ ನೇತಾರ ಡಾ. ಅಗರಿ ನವೀನ್ ಭಂಡಾರಿ

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಗರಿ ನವೀನ್ ಭಂಡಾರಿಯವರು ಪ್ರತಿಷ್ಠಿತ ಬೆಳ್ಳಿಪ್ಪಾಡಿ, ಅಗರಿ ಮನೆತನದವರು. ಕೆಪಿಸಿಸಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು ಕಾಂಗ್ರೆಸ್‌ನಲ್ಲಿ ಸುದೀರ್ಘ ಅವಧಿಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಶ್ರೇಷ್ಠ ಸಂಘಟನಾ ಚತುರ, ಯಶಸ್ವಿ ನಾಯಕ, ಅದ್ವಿತೀಯ ಸಂಘಟಕ, ಸಮಾಜಸೇವಕರಾಗಿರುವ ಅವರು ತನ್ನ ಸಂಘಟನಾ ಸಾಮರ್ಥ್ಯದಿಂದಲೇ ಜನಮನ ಗೆದ್ದ ಸಮರ್ಥ ನೇತಾರರಾಗಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಉತ್ತರ ವಲಯದ ಮಾಜಿ ನಿರ್ದೇಶಕರಾಗಿದ್ದ ಡಾ. ಅಗರಿ ನವೀನ್ ಭಂಡಾರಿಯವರು ತನಗೆ ಕಾಂಗ್ರೆಸ್ ಪಕ್ಷ ನೀಡಿದ್ದ ಹಲವಾರು ಮಹತ್ತರ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. 2008ರಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿ ಮತ್ತು 20013ರಲ್ಲಿ ದಕ್ಷಿಣ ಕನ್ನಡದ ಪುತ್ತೂರು ವಿಧಾನಸಭಾ ಕ್ಷೇತ್ರಗಳಿಂದ ಇವರಿಗೆ ಅರ್ಹವಾಗಿ ಕಾಂಗ್ರೆಸ್ ಪಕ್ಷ ಎಂಎಲ್‌ಎ ಟಿಕೇಟ್ ನೀಡುವುದರಲ್ಲಿತ್ತು. ಆದರೆ, ಕೊನೆಕ್ಷಣದಲ್ಲಿ ಕಾರಣಾಂತರದಿಂದ ಟಿಕೇಟ್ ಕೈ ತಪ್ಪಿತ್ತು. ಪ್ರಸ್ತುತ,ಬೆಂಗಳೂರಿನಲ್ಲಿ ನೆಲೆಸಿರುವ ಡಾ. ಅಗರಿ ನವೀನ್ ಭಂಡಾರಿ, ಮತ್ತವರ ಕುಟುಂಬ ತೋರಿಸಿರುವ ಪಕ್ಷ ನಿಷ್ಠೆ ಹಾಗೂ ಡಾ.ಅಗರಿ ನವೀನ್ ಭಂಡಾರಿಯವರ ಸಾಮರ್ಥ್ಯ, ರಾಜಕೀಯ ತಂತ್ರಗಾರಿಕೆ , ಸಂಘಟನಾ ಶಕ್ತಿ ಮೊದಲಾದ ಗುಣ ವಿಶೇಷತೆಗಳನ್ನು ಗುರುತಿಸಿಕೊಂಡಿರುವ ಪಕ್ಷದ ಹೈಕಮಾಂಡ್ ಇವರಿಗೆ ಉತ್ತಮ ಹಾಗೂ ಜವಾಬ್ದಾರಿಯುತ ಸೂಕ್ತ ಹುದ್ದೆ ನೀಡಲು ನಿರ್ಧರಿಸಿರುವ ಬಗ್ಗೆ ವರದಿಯಾಗಿದೆ.ಇದು ಜನಾಶಯವೂ ಆಗಿದೆ. ಡಾ. ಅಗರಿ ನವೀನ್ ಭಂಡಾರಿಯವರ ಅಜ್ಜ ಕೂಡಾ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿದವರು. ಬೆಳ್ಳಿಪ್ಪಾಡಿ ಯಜಮಾನ ದಿ. ಸಂಕಪ್ಪ ರೈ ಮತ್ತು ದಿ. ತಾರಿಪಡ್ಪು ಮಂಜಕ್ಕೆ ಹೆಂಗ್ಸು ದಂಪತಿಗಳ ಮೊಮ್ಮಗ, ಅಗರಿ ಲಕ್ಕಪ್ಪ ಭಂಡಾರಿ ಮತ್ತು ಲೀಲಾವತಿ ಭಂಡಾರಿ ಅವರ ಸುಪುತ್ರರಾಗಿ 1952, ಜ. 17ರಂದು ಜನಿಸಿದ ಡಾ.ಅಗರಿ ನವೀನ್ ಭಂಡಾರಿಯವರು ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಚಿಕ್ಕ ಮುಡ್ನೂರು ಹಾಗೂ ಪುತ್ತೂರಿನಲ್ಲಿ ಮುಗಿಸಿರುವ ಇವರು ಕಾನೂನು ಪದವೀಧರರು. ಎಂ.ಎ, ಎಲ್‌ಎಲ್‌ಬಿ, ಪಿಜಿಡಿಐಆರ್‌ಪಿಎಂ ಪದವಿ ಹೊಂದಿರುವ ಇವರು ರಾಜ್ಯಶಾಸ್ತ್ರವನ್ನು ಮುಖ್ಯ ವಿಷಯವಾಗಿಸಿಕೊಂಡು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ.ಸ್ನಾತಕೋತ್ತರ ಪದವಿಯನ್ನು ಪಡೆದವರು. ಭಾರತೀಯ ವಿದ್ಯಾಭವನದಲ್ಲಿ ಕೈಗಾರಿಕಾ ಸಂಬಂಧಗಳು ಮತ್ತು ಸಿಬ್ಬಂದಿ ನಿರ್ವಹಣೆಯಲ್ಲಿ ಉನ್ನತ ವ್ಯಾಸಂಗವನ್ನು ಓದಿದ್ದಾರೆ. 1982ರಲ್ಲಿ ಆಪ್ಟೆಕ್ ಕಂಪ್ಯೂಟರ್ಸ್ ನಲ್ಲಿ ಕಂಪ್ಯೂಟರ್ ಸಾಫ್ಟ್ವೇರ್ ಸೈಯನ್ಸ್ ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಹಿಂದಿ ಪ್ರಬೋಧ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ನ್ಯಾಯವಾದಿಯಾಗಿಯೂ ಸೇವೆ ಸಲ್ಲಿಸಿರುವ ಇವರು ಬೆಂಗಳೂರಿನ ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್‌ನ ಸಕ್ರಿಯ ಸದಸ್ಯರಾಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಸಹಕಾರಿ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕರ್ನಲ್ ಎ. ಜಗಜೀವನ್ ಭಂಡಾರಿ, ಎ. ಮೋಹನ್‌ದಾಸ್ ಭಂಡಾರಿ (ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ), ದಿ. ಜೀವನ್ ಭಂಡಾರಿ (ಕಾಂಗ್ರೆಸ್ ನಾಯಕ), ಭಗವನ್‌ದಾಸ್ ಭಂಡಾರಿ (ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ), ಶೋಭಾ ಸಿ. ಶೆಟ್ಟಿ ಮತ್ತು ಚಂದ್ರಹಾಸ ಶೆಟ್ಟಿ (ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ) ಅವರು ಡಾ. ಅಗರಿ ನವೀನ್ ಭಂಡಾರಿಯವರ ಒಡಹುಟ್ಟಿದವರು. ಕೃಷಿ ಹಿನ್ನಲೆಯ ಕುಟುಂಬದವರಾಗಿದ್ದು, ರಾಜಕೀಯವಾಗಿಯೂ ಹೆಸರು, ಜನಪ್ರಿಯತೆ, ಉನ್ನತ ಹುದ್ದೆ ಅಲಂಕರಿಸಿದ ಹೆಗ್ಗಳಿಕೆ ಇವರದು. ಮಾನವತಾವಾದಿಯಾಗಿ, ಸೌಮ್ಯ ಸ್ವಭಾವದವರಾಗಿದ್ದು ಎಲ್ಲರೊಂದಿಗೂ ಸ್ನೇಹ ಪರತೆಯಿಂದಿದ್ದವರು. ಆದ್ದರಿಂದಲೇ ಇವರೆಂದರೆ ಎಲ್ಲರಿಗೂ ತುಂಬಾ ಪ್ರೀತಿ, ಅಚ್ಚುಮೆಚ್ಚು. ಡಾ. ಅಗರಿ ನವೀನ್ ಭಂಡಾರಿಯವರ ತಂದೆ ಅಗರಿ ಲಕ್ಕಪ್ಪ ಭಂಡಾರಿಯವರು ಸರ್ವತಂತ್ರ ಸ್ವತಂತ್ರವಾಗಿ ಹೋರಾಡಿದ ಕಾಂಗ್ರೆಸ್ ಕಾರ್ಯಕರ್ತರೆಂದರೆ ಹೆಚ್ಚು ಸಮಂಜಸ. 2002ರಲ್ಲಿ ದಿವಂಗತರಾದ ಹಿರಿಯ ಸಹೋದರ ಎ. ಜೀವನ್ ಭಂಡಾರಿಯವರು 1995ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದು, ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದರು. ಅಲ್ಲದೆ, ಪುತ್ತೂರಿನ ಬಂಟರ ಸಂಘ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿಯೂ ಜನ ಶ್ಲಾಘನೆಗೆ ಪಾತ್ರರಾಗಿದ್ದರು. 1976ರಲ್ಲಿ ವಿಜಯಾ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದ್ದ ಡಾ. ಅಗರಿ ನವೀನ್ ಭಂಡಾರಿಯವರು 2000ದಲ್ಲಿ ಸ್ವಯಂ ನಿವೃತ್ತಿ ಪಡೆದು ಉದ್ಯಮ ಮತ್ತು ರಾಜಕೀಯವಾಗಿಯೂ ಮುಂದುವರಿದರು. ಮಾನವ ಹಕ್ಕುಗಳು ಮತ್ತು ಕಾನೂನು ಘಟಕದ ಉಪಾಧ್ಯಕ್ಷರು ಆಗಿದ್ದ ಇವರು ಡಾ. ಪರಮೇಶ್ವರ್, ದಿನೇಶ್ ಗೂಂಡೂರಾವ್ ಮತ್ತು ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು ಹಾಗೂ ಆ ಸಂದರ್ಭದಲ್ಲಿ ಪಕ್ಷದ ಹುಬ್ಬಳ್ಳಿ-ಧಾರವಾಡದ ಉಸ್ತುವಾರಿಯನ್ನು ವಹಿಸಿದ್ದರು.   ಸಮರ್ಥ ನೇತಾರ: ಡಾ. ಅಗರಿ ನವೀನ್ ಭಂಡಾರಿಯವರು ಬೆಂಗಳೂರಿನ ಬೊಮ್ಮನಹಳ್ಳಿಯ ನಗರ ಸಭೆ ವ್ಯಾಪ್ತಿಯಲ್ಲಿ ಮೂಲ್ಕಿ ಸುಂದರಾಮ ಶೆಟ್ಟಿ ಹೆಸರಲ್ಲಿ ಸುಂದರ ಬಡಾವಣೆಯನ್ನು ಸ್ಥಳೀಯರ ಸಹಕಾರದೊಂದಿಗೆ ಸೊಸೈಟಿಯ ಮೂಲಕ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲೊಂದು ಸುಂದರ ಅಯ್ಯಪ್ಪ ದೇವಸ್ಥಾನವನ್ನು ನಿರ್ಮಿಸಲು ಮುತುವರ್ಜಿ ವಹಿಸಿ ಯಶಸ್ಸು ಕಂಡಿದ್ದಾರೆ. ಈ ಬಡಾವಣೆಯಲ್ಲಿ ಆಧುನಿಕ ಜೀವನ ಶೈಲಿಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಟ್ಟು ಅದಕ್ಕೆ ಅತ್ಯಾಧುನಿಕತೆಯ ರೂಪ ನೀಡುವಲ್ಲಿ ವಿಶೇಷವಾಗಿ ಶ್ರಮಿಸಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದರೆ,ಡಾ. ಅಗರಿ ನವೀನ್ ಭಂಡಾರಿಯವರು ಮೂಲ್ಕಿ ಸುಂದರಾಮ ಶೆಟ್ಟಿ ನಗರದ ರೂವಾರಿಯಾಗಿದ್ದಾರೆ. ಬೆಂಗಳೂರು ಎಂಎಸ್‌ಆರ್‌ಎಸ್ ನಗರ ಸೌಹಾರ್ದ ಸಹಕಾರಿ ಲಿ.ನ ಅಧ್ಯಕ್ಷರಾಗಿದ್ದ ಡಾ. ಅಗರಿ ನವೀನ್ ಭಂಡಾರಿಯವರು ಎಂಎಸ್‌ಆರ್‌ಎಸ್ ನಗರ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಟ್ರಸ್ಟಿ ಮತ್ತು ಮಾಜಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ವಿಜಯಾ ಬ್ಯಾಂಕ್ ಎಂಪ್ಲಾಯೀಸ್ ಹೌಸಿಂಗ್ ಕೋ-ಅಪರೇಟಿವ್ ಸೊಸೈಟಿ ಲಿ.ನ ಮಾಜಿ ಅಧ್ಯಕ್ಷರಾಗಿ, ಎಂಎಸ್‌ಆರ್‌ಎಸ್ ನಗರ ವೆಲ್ತ್ ಅಸೋಸಿಯೇಶನ್‌ನ ಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಹಕಾರಿ ಸಂಘಗಳಲ್ಲಿ ಇವರು ತೋರಿದ್ದ ಉತ್ತಮ ಸೇವೆ, ಕಾರ್ಯವೈಖರಿ ಮತ್ತು ಕರ್ತವ್ಯ ನಿಷ್ಠೆಯನ್ನು ಗಮನಿಸಿ ಭಾರತ ಸರಕಾರವು ಅವರನ್ನು (2011-2016ರಲ್ಲಿ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉತ್ತರ ವಲಯದ ಆರ್‌ಬಿಐ ನಿರ್ದೇಶಕರಾಗಿ ನೇಮಿಸಿತ್ತು.  ಸಾಧನೆಗೆ ಅರ್ಹವಾಗಿ ದೊರೆತ ಪ್ರಶಸ್ತಿಗಳು :ಡಾ. ಅಗರಿ ನವೀನ್ ಭಂಡಾರಿ ಅವರ ನಿಸ್ವಾರ್ಥ ಸಮಾಜ ಸೇವೆಗಾಗಿ ಹಲವಾರು ಪ್ರಶಸ್ತಿಗಳು ಅವರಿಗೆ ದೊರಕಿವೆ. 2002ರಲ್ಲಿ ಇಂದಿರಾ ಗಾಂಧಿ ಸದ್ಬಾವನಾ ಅವಾರ್ಡ್, ವಿಜಯಾ ಬ್ಯಾಂಕ್ ಎಂಪ್ಲಾಯೀಸ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಯ ಶ್ರೇಷ್ಠ ಅಧ್ಯಕ್ಷ ಮತ್ತು ಶ್ರೇಷ್ಠ ನಿರ್ದೇಶಕ, 2006ರಲ್ಲಿ ಇಂಟರ್ ನ್ಯಾಷನಲ್ ಅವಾರ್ಡ್ ಫಾರ್ ಮೆರಿಟೋರಿಯಸ್ ಸರ್ವೀಸ್ ಫಾರ್ ಇಂಟರ್‌ನ್ಯಾಷನಲ್ ಕೋ-ಅಪರೇಟಿವ್ ಹೌಸಿಂಗ್, ಭಾರತೀಯ ಲಲಿತಾ ಕಲಾ ಸಂಸ್ಥೆಯಿಂದ ಕರ್ನಾಟಕ ಪದ್ಮಶ್ರೀ, 2006ರಲ್ಲಿ ಕರ್ನಾಟಕ ಪ್ರತಿಭಾವರ್ಧಕ ಅಕಾಡೆಮಿಯಿಂದ ಎಕ್ಸೆಲೆನ್ಸಿ ಅವಾರ್ಡ್, 2009ರಲ್ಲಿ ಸಮಾಜಸೇವಾ ರತ್ನ ಅವಾರ್ಡ್, 2011ರಲ್ಲಿ ಡಾ. ಟಿಪ್ಪು ಸುಲ್ತಾನ್ ಸ್ಟೇಟ್ ಅವಾರ್ಡ್, 2002ರಲ್ಲಿ ಡಾ. ರಾಜಕುಮಾರ್ ಅವಾರ್ಡ್, 2016ರಲ್ಲಿ ಡಾ.ಡಿ.ಜಿ. ಶೆಟ್ಟಿ ಎಜ್ಯುಕೇಶನಲ್ ಸೊಸೈಟಿಯಿಂದ ಗೌರವ ಪ್ರಶಸ್ತಿ,  ಸಮಾಜ ಸೇವೆಗಾಗಿ 2018 ರಲ್ಲಿ ಗೌರವ ಡಾಕ್ಟರೇಟ್, 2018ರಲ್ಲಿ ಕೆಂಪೇಗೌಡ ಪ್ರಶಸ್ತಿ ಇವರ ಸಾಧನೆಗೆ, ಶ್ಲಾಘನೀಯ ಸಮಾಜ ಸೇವೆಗಾಗಿ ಅರ್ಹವಾಗಿ ದೊರೆತ ಪ್ರಶಸ್ತಿಗಳು. ಕುಟುಂಬ ಸದಸ್ಯರ ಬಗ್ಗೆ: ನವೀನ್ ಭಂಡಾರಿಯವರ ಪತ್ನಿ ಸರೋಜ ಎನ್. ಭಂಡಾರಿ ಅವರು ಕಾರ್ಕಳದ ಇನ್ನಾದವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಸ್ವಯಂ ನಿವೃತ್ತಿ ಪಡೆದ ಇವರು ಅಕ್ಟೋಬರ್ 1, 2022 ರಂದು ಸ್ವರ್ಗಸ್ಥರಾಗಿದ್ದಾರೆ. ಬಿ.ಇ. ಮತ್ತು ಎಂಬಿಎ ಮಾಡಿರುವ ಮಗಳು ಅನುಷ್ಕಾ ಭಂಡಾರಿ ನ್ಯೂರೋ ಸರ್ಜನ್‌ರಾಗಿರುವ ಅಳಿಯ ಡಾ. ವೀಕ್ಷಿತ್ ಶೆಟ್ಟಿಯವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನ್ಯೂರೋ ಅಂಕಾಲೋಜಿಯಲ್ಲಿ ಸೈಂಟ್ ಜಾರ್ಜ್ ಆಸ್ಪತ್ರೆ ಲಂಡನ್‌ನಿಂದ ಫೆಲೋಶಿಪ್ ಪಡೆದಿರುವ ಡಾ. ವೀಕ್ಷಿತ್ ಶೆಟ್ಟಿ    ಎಡಿನ್ ಬರ್ಗ್ ನಲ್ಲಿ ಎಫ್‌ಆರ್‌ಸಿಎಸ್, ಯುನೈಟೆಡ್ ಕಿಂಗ್ ಡಮ್‌ನಲ್ಲಿ ಡಿಎನ್‌ಬಿ ಪದವಿಯನ್ನು ಪಡೆದಿದ್ದಾರೆ. ಇವರು ಪ್ರಸ್ತುತ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಮಣಿಪಾಲ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್ ನ್ಯೂರೋ ಸರ್ಜನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಸ್ವಾರ್ಥ ಜನನಾಯಕ: ಡಾ.ಅಗರಿ ನವೀನ್ ಭಂಡಾರಿಯವರು ನಿಸ್ವಾರ್ಥ ಜನಸೇವಕ, ಜನನಾಯಕರಾಗಿದ್ದು, ಪೂರ್ಣಕಾಲಿಕ ರಾಜಕಾರಣಿಯಾಗಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ, ಬೆಳವಣಿಗೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸಾಧನೆಗಳು ಮತ್ತು ಶ್ಲಾಘನೀಯ ಸೇವಾರ್ಹತೆಯನ್ನು ಮಾನದಂಡವಾಗಿ ಇಟ್ಟುಕೊಂಡು ಅವರಿಗೆ ಕಾಂಗ್ರೆಸ್ ಪಕ್ಷವು ಉನ್ನತ ಅಧಿಕಾರ ಪದವಿ ನೀಡಿ ವಿಸ್ತಾರ ಜನಸೇವೆಗೆ ಅವಕಾಶ ನೀಡಲಿ ಎಂದು Mp mla’sನ್ಯೂಸ್ ಶುಭ ಹಾರೈಸುತ್ತದೆ.

Scroll to Top