ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಬಂಟರ ಯಾನೆ ನಾಡವರ ಮಾತೃ ಸಂಘ: ಅಧ್ಯಕ್ಷರಾಗಿ ಕೆ ಅಜಿತ್ ಕುಮಾರ್ ರೈ ಮಾಲಾಡಿ ಪುನರಾಯ್ಕೆ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ವಿದೇಶಗಳಲ್ಲೂ ಸದಸ್ಯರನ್ನು ಒಳಗೊಂಡ ಬಂಟರ ಯಾನೆ ನಾಡವರ ಮಾತೃ ಸಂಘದ 2026 -29ರ ಸಾಲಿಗೆ ಮಾಲಾಡಿ ಅಜಿತ್‌ ಕುಮಾರ್ ರೈ ಕೊಡಿಯಾಲ್ ಗುತ್ತು ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಂಘದ ಮಹತ್ವಾಕಾಂಕ್ಷೆ ಯೋಜನೆಯಾದ ಶತಮಾನೋತ್ಸವ ಕಟ್ಟಡ ಸಂಕೀರ್ಣ, ವಿಶ್ವವ್ಯಾಪಿ ಸಮಾಜ ಬಾಂಧವರನ್ನು ಒಂದೇ ಸೂರಿನಡಿ ತರ ಬಯಸುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವುದು ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ ಎಂದು ಕೆ ಅಜಿತ್ ಕುಮಾರ್ ರೈ ಹೇಳಿದರು.ಮುಖ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ವಕೀಲರಾದ ಉಮೇಶ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಅವರು ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಉಪ ಚುನಾವಣಾಧಿಕಾರಿ, ವಕೀಲರಾದ ನವೀನ್ ಶೆಟ್ಟಿ ಹಾಗೂ ಚುನಾವಣಾಧಿಕಾರಿ ಸದಾಶಿವ ಶೆಟ್ಟಿಯವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

2030ರೊಳಗೆ ಕರ್ನಾಟಕವನ್ನು ಜೂಡೋ ಶಕ್ತಿಕೇಂದ್ರವನ್ನಾಗಿಸುವ ಗುರಿ: ಯತೀಶ್‌ ನಾರಾಯಣ್ ಬಂಗೇರ

ಮಂಗಳೂರು,ಎ.30: 2030ರ ವೇಳೆಗೆ ಕರ್ನಾಟಕವನ್ನು ಭಾರತದಜೂಡೋ ಪ್ರಧಾನ ಕೇಂದ್ರವನ್ನಾಗಿ ರೂಪಿಸುವ ಗುರಿಯೊಂದಿಗೆ ‘ವಿಷನ್ 2030′ ನೀಲನಕ್ಷೆ ಆರಂಭಿಸಲಾಗಿದೆ’ ಎಂದು ಕರ್ನಾಟಕ ಸ್ಟೇಟ್ ಜೂಡೋ ಸ್ಪೋರ್ಟ್ಸ್ ಅಸೊಸಿಯೇಶನ್ ಪ್ರಮುಖರಾದ ಯತೀಶ್ ನಾರಾಯಣ್ ಬಂಗೇರ ತಿಳಿಸಿದ್ದಾರೆ.ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಸೇರಿದಂತೆ ರಾಜ್ಯದ ಜೂಡೋ ಕ್ರೀಡೆಯ ಗತವೈಭವವನ್ನು ಮರುಸ್ಥಾಪಿಸಲು ಈ ದೂರದೃಷ್ಟಿಯ ಯೋಜನೆ ರೂಪಿಸಲಾಗಿದೆ ಎ೦ದರು. 2030ರ ಕಾಮನ್‌ವೆಲ್ತ್ ಕ್ರೀಡಾಕೂಟ ಭಾರತದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ಕ್ರೀಡಾಪಟುಗಳು ರಾಷ್ಟ್ರಕ್ಕೆ ಗರಿಷ್ಠ ಪದಕಗಳನ್ನು ತಂದುಕೊಡುವ ಗುರಿ ಹೊಂದಲಾಗಿದೆ ಎ೦ದು ತಿಳಿಸಿದರು. ‘ಗ್ರಾಸ್‌ರೂಟ್ಸ್ ಟು ಗೋಲ್ಡ್’ ಕಾರ್ಯಕ್ರಮದಡಿ ಗ್ರಾಮೀಣ ಮಟ್ಟದ ಪ್ರತಿಭೆಗಳನ್ನು ಗುರುತಿಸಿ ಬೆಳೆಸಲಾಗುವುದು. ಉಡುಪಿ, ಮಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ಅತ್ಯಾಧುನಿಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.ಕ್ರೀಡಾ ಸಂಸ್ಥೆಗಳ ಪ್ರಸ್ತುತ ಸ್ಥಿತಿಗತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ನಾಯಕತ್ವವು ಕ್ರೀಡಾಪಟುಗಳ ಪ್ರಗತಿಗಿಂತ ವೈಯಕ್ತಿಕ ಲಾಭಕ್ಕೆ ಆದ್ಯತೆ ನೀಡುತ್ತಿದೆ. ಆಡಳಿತಾತ್ಮಕ ವೈಫಲ್ಯಗಳಿಂದ ಸಂಸ್ಥೆಗಳು ಹಿನ್ನಡೆಯಾಗುತ್ತಿವೆ” ಎಂದು ಹೇಳಿದರು. ಇದನ್ನು ಸರಿಪಡಿಸಲು ಡಿಜಿಟಲ್ ಪೋರ್ಟಲ್ ಮೂಲಕ ಪಾರದರ್ಶಕ ನೋಂದಣಿ ವ್ಯವಸ್ಥೆ ಹಾಗೂ ಮೂರನೇ ವ್ಯಕ್ತಿಯಿಂದ ಹಣಕಾಸು ಲೆಕ್ಕಪರಿಶೋಧನೆ ಜಾರಿಗೆ ತರಲಾಗುವುದು ಎಂದು ಘೋಷಿಸಿದರು. ಶಾಲೆಗಳಲ್ಲಿ ಆತ್ಮರಕ್ಷಣೆಗಾಗಿ ಜೂಡೋವನ್ನು ಕಡ್ಡಾಯ ಆಯ್ಕೆಯಾಗಿ ಪರಿಚಯಿಸುವುದರ ಜೊತೆಗೆ, ಪದಕ ವಿಜೇತರಿಗೆ ಪೊಲೀಸ್ ಮತ್ತು ಆಡಳಿತಾತ್ಮಕ ಸೇವೆಗಳಲ್ಲಿ ರದ್ದುಗೊಂಡಿರುವ ಕ್ರೀಡಾ ಕೋಟಾವನ್ನು ಪುನಃಸ್ಥಾಪಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು. “ಭ್ರಷ್ಟಾಚಾರದ ಯುಗ ಕೊನೆಗೊಳ್ಳಬೇಕು; ಕ್ರೀಡಾಪಟುಗಳ ಯುಗ ಆರಂಭವಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು. ಪತ್ರಿಕಾಗೋಷ್ಠಿಯಲ್ಲಿ ಅಡ್ವಕೇಟ್ ಎ.ಪಿ ಮೊಂತೆರೋ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರಿಗೆ ಮಾಧ್ಯಮ ಶ್ರೇಷ್ಠತಾ ಪ್ರಶಸ್ತಿ ಪ್ರದಾನ. *ಮಾಧ್ಯಮ ಸಮಾವೇಶ ಸಮಾರೋಪ

ಮಂಗಳೂರು,ಎ.29;ನಿಟ್ಟೆ ವಿಶ್ವವಿದ್ಯಾ ನಿಲಯದ ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಕೇಷನ್ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಅಂತರರಾಷ್ಟ್ರೀಯ ಸಮಾವೇಶ 2026 ಬುಧವಾರ ಸಮಾಪನಗೊಂಡಿತು.ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರಿಗೆ ಮಾಧ್ಯಮ ಶ್ರೇಷ್ಠತಾ ಪ್ರಶಸ್ತಿ – 2026 ಅನ್ನು ಪ್ರದಾನ ಮಾಡಲಾಯಿತು.ನಿಟ್ಟೆ ವಿಶ್ವವಿದ್ಯಾನಿಲಯದ ಉಪ ಕುಲಸಚಿವೆ ಪ್ರೊ. ಡಾ. ಸುಮಾ ಬಲ್ಲಾಳ್ ಅವರು ಸಮಾರೋಪ ಭಾಷಣ ಮಾಡಿದರು. ಮಾಧ್ಯಮವು ಸತ್ಯಾಂಶ, ದತ್ತಾಂಶಗಳನ್ನು ಆಧಾರವಾಗಿ ಇರಿಸಿಕೊಂಡು ಮಾನವ ಪರವಾದ ವರದಿಗಾರಿಕೆಯನ್ನು ಮಾಡಬೇಕಾದ್ದು ಮಾಧ್ಯಮಗಳ ಪ್ರಮುಖ ಕೆಲಸವಾಗಬೇಕು ಎಂದು ಕಿವಿಮಾತು ಹೇಳಿದರು. ಮಾಧ್ಯಮವು ಈಗ ಹಿಂದಿನಂತೆ ಉಳಿದಿಲ್ಲ; ಹೊಸ ಹೊಸ ಆಯಾಮಗಳನ್ನು ಅಳವಡಿಸಿಕೊಂಡಿದೆ. ಕೃತಕ ಬುದ್ಧಿಮತ್ತೆ ಇತ್ಯಾದಿ ತಂತ್ರಜ್ಞಾನಗಳ ಅಳವಡಿಕೆಯಾಗಿದೆ. ಆದರೆ, ಈ ಸಮಾವೇಶದ ಆಶಯವಾದ ಶಾಂತಿ, ಯುದ್ಧವಿರಾಮ ಇಂತಹ ವಿಚಾರಗಳಲ್ಲಿ ಮಾಧ್ಯಮವು ಜನಪರವಾದ ನಿಲುವುಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ರಾಯ್ಟರ್ಸ್‌ ನಿವೃತ್ತ ವರದಿಗಾರ ಸ್ಟ್ಯಾನ್ಲಿ ಕರ್ವಾಲೋ, ಕೃತಕ ಬುದ್ಧಿಮತ್ತೆ ಸುದ್ದಿಯನ್ನು ನಿರ್ಧರಿಸಬಾರದು. ಸುದ್ದಿಯನ್ನು ಪ್ರಕಟಿಸಲು ವರದಿಗಾರನಿಗೆ ಸ್ವಾತಂತ್ರ್ಯ ಇರಬೇಕು. ಅಂತೆಯೇ ಸುದ್ದಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಓದುಗನಿಗೆ ಇರಬೇಕು ಎಂದು ಹೇಳಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಿದಂಬರ ಅವರು, ಸತ್ಯಾಧಾರಿತ ವರದಿಗಾರಿಕೆಗೆ ನಾನು ಆದ್ಯತೆ ನೀಡಿದೆ. ಅದರಿಂದ ನಾನು ಸಾಕಷ್ಟು ಕಲಿತಿದ್ದೇನೆ. ವಿದ್ಯಾರ್ಥಿಗಳು ಸತ್ಯಾಂಶವನ್ನು ಸಂಶೋಧಿಸಿ, ಧೈರ್ಯದಿಂದ ವರದಿ ಮಾಡುವ ಕಲೆಯನ್ನು ಈಗಿಂದಲೇ ಕಲಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಸಹ ಪ್ರಾಧ್ಯಾಪಕ ಡಾ. ನೇಸರ ಕಾಡನಕುಪ್ಪೆ ಪ್ರಶಸ್ತಿ ಸಂದೇಶ ವಾಚಿಸಿದರು. ಹಿರಿಯ ಪತ್ರಿಕೋದ್ಯಮ ಪ್ರಾಧ್ಯಾಪಕ ಡಾ. ವರದೇಶ್‌ ಹಿರೇಗಂಗೆ ಅವರು ಸಮಾರಂಭವನ್ನು ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಭಾಗವಹಿಸಿದ್ದರು.ಕಾಲೇಜಿನ ಮುಖ್ಯಸ್ಥರಾದ ಡಾ. ಮೌಲ್ಯ ಬಾಲಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಹಾಗೂ ಸಮಾವೇಶದ ಸಂಘಟನಾ ಕಾರ್ಯದರ್ಶಿ ಡಾ. ಅನಿಶಾ ವಂದನಾರ್ಪಣೆ ಮಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಪ್ರಣಮ್ಯ ಭಟ್ ನಿರೂಪಿಸಿದರು. ಸಮಾವೇಶದಲ್ಲಿ ಆಯೋಜಿಸಿದ್ದ ಪತ್ರಿಕಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪತ್ರಕರ್ತರು, ಪೋಸ್ಟರ್‌ ಪ್ರದರ್ಶನ ಸ್ಪರ್ಧೆಯ ವಿಜೇತರು ಹಾಗೂ ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.ಸಮಾವೇಶದ ಗೋಷ್ಠಿ ಹಾಗೂ ಮಾಧ್ಯಮ ಕಾರ್ಯಾಗಾರ:ಸಮಾರೋಪ ಸಮಾರಂಭಕ್ಕೂ ಮುನ್ನ ನಡೆದ ವಿಚಾರ ಗೋಷ್ಠಿಯಲ್ಲಿ ಟೈಮ್ಸ್ ಆಫ್‌ ಇಂಡಿಯಾ ಹಿರಿಯ ಸಹಾಯಕ ಸಂಪಾದಕ ಚೇತನ್‌ ಕುಮಾರ್, ಹಿರಿಯ ಪತ್ರಕರ್ತ ಹಾಗೂ ರಾಯ್ಟರ್ಸ್‌ ನಿವೃತ್ತ ವರದಿಗಾರ ಸ್ಟ್ಯಾನ್ಲಿ ಕರ್ವಾಲೋ ವಿಚಾರ ಮಂಡಿಸಿದರು. ಮಣಿಪಾಲ್ ಸಮಾಜ ವಿಜ್ಞಾನ, ಮಾನವಿಕ ಹಾಗೂ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ವಿಗ್ನೇಶ್‌ ರಾಮ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಯನಿರತ ಪತ್ರಕರ್ತರಿಗಾಗಿ ಹಮ್ಮಿಕೊಂಡಿದ್ದ ಮಾಧ್ಯಮ ಕಾರ್ಯಾಗಾರವನ್ನು ಡೇಟಾ ಲೀಡ್ಸ್‌ ಅಕಾಡೆಮಿಯ ಎಐ ಫಾರ್‌ ಡಿಜಿಟಲ್ ರೆಡಿನೆಸ್ ಅಂಡ್ ಅಡ್ವಾನ್ಸ್‌ಮೆಂಟ್‌ (ADiRA) ಸಂಸ್ಥೆಯ ಎಸ್‌. ಕುಮಾರ್‌ ಅವರು ನಡೆಸಿಕೊಟ್ಟರು.

ಪ್ರಾದೇಶಿಕ ವಾರ್ತೆಗಳು

ಸಂದೀಪ್ ವಾಗ್ಲೆ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬೀಳ್ಕೊಡುಗೆ

ಮಂಗಳೂರು-ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಕನ್ನಡಪ್ರಭ ದೈನಿಕದ ಮಂಗಳೂರು ಪ್ರಧಾನ ವರದಿಗಾರ ,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಸಂದೀಪ್ ವಾಗ್ಲೆ ಅವರನ್ನು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಏಪ್ರಿಲ್ 28ರಂದು ಅಧ್ಯಕ್ಷ ಪುಷ್ಪರಾಜ್ ಬಿ. ಎನ್ ಅವರ ನೇತೃತ್ವದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು,ಕಾರ್ಯಕಾರಿ ಸಮಿತಿ ಸದಸ್ಯರು,ಮಾಧ್ಯಮ ಮಿತ್ರರ ಉಪಸ್ಥಿತಿಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಬೀಳ್ಕೊಡುಗೆ ಸಮಾರಂಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ. ಎನ್.,ಪತ್ರಿಕಾಭವನ ಟ್ರಸ್ಟ್ ನ ಅಧ್ಯಕ್ಷ ಅನ್ನು ಮಂಗಳೂರು,ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರಿಫ್ ಪಡುಬಿದ್ರಿ,ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್,ಕಾರ್ಯದರ್ಶಿ ಸಿದ್ದಿಕ್ ನೀರಾಜೆ,ಮಹಾರಾಷ್ಟ್ರ ಕನ್ನಡಿಗರ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ವಿಜಯ ಕೋಟ್ಯಾನ್,ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಶೆಟ್ಟಿ ಬಿ.ಎನ್,ಸುರೇಶ್ ಪಳ್ಳಿ, ಕಿರಣ್ ಸಿರ್ಸಿಕರ್, ಲಕ್ಷ್ಮೀ ನಾರಾಯಣ ರಾವ್,ಹರೀಶ್ ಕೆ. ಅದ್ದೂರು, ಅಭಿಷೇಕ್ ಹೆಚ್.ಎಸ್ , ಜಯಶ್ರೀ,ಮಾಧ್ಯಮ ಮಿತ್ರರಾದ ವಿನೋದ್ ಕುಮಾರ್ ಕೆ, ನಮ್ಮ ಟಿವಿಯ ಪ್ರಸನ್ನ ಪೂಜಾರಿ,ಕರಾವಳಿ ತರಂಗಿಣಿ ಪತ್ರಿಕೆಯ ಪ್ರೀತಮ್ ರೈ, ಲಲಿತಶ್ರೀ ಮೊದಲಾದವರು ಉಪಸ್ಥಿತರಿದ್ದರು. ಸಂದೀಪ್ ವಾಗ್ಲೆಯವರು ಮಂಗಳೂರು ವಿ. ವಿ.ಯಿಂದ ಪತ್ರಿಕೋದ್ಯಮದಲ್ಲಿ ಪಿಹೆಚ್ ಡಿ ಪದವಿ ಪಡೆದವರು. ಕಳೆದ 22 ವರ್ಷಗಳಲ್ಲಿ ಮಂಗಳೂರು ಪತ್ರಿಕೋದ್ಯಮದಲ್ಲಿ ಅಧ್ಯಯನಶೀಲ ಪತ್ರಕರ್ತರಾಗಿ ಗುರುತಿಸಿಕೊಂಡವರು. ಪ.ಗೋ .ಪ್ರಶಸ್ತಿ ಗೆ ಪಾತ್ರರಾಗಿರುವ ಅವರು ಉತ್ತಮ ಪತ್ರಕರ್ತರೆಂದು ಅಧ್ಯಕ್ಷ ಪುಷ್ಪರಾಜ್ ಬಿ. ಎನ್.ಹೇಳಿದರು. ಆರಿಫ್ ಪಡುಬಿದ್ರಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು. ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಾ ಗೌರವಿಸುವ ಸಂದೀಪ್ ವಾಗ್ಲೆಯವರು ಭವಿಷ್ಯ ದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ.ಅವರಿಗೆ ಶುಭವಾಗಲೆಂದುmpmlas news ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಶುಭ ಹಾರೈಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಅಡ್ವೊಕೇಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್: ಬಾರ್ ಟೈಗರ್ ತಂಡಕ್ಕೆ ಚಾಂಪಿಯನ್‌ಶಿಪ್

ಮAಗಳೂರು : ಮಂಗಳೂರು ವಕೀಲರ ಸಂಘದ ವತಿಯಿಂದ ಪಣಂಬೂರಿನ ಎನ್‌ಎಂಪಿಎ ಕ್ರೀಡಾಂಗಣದಲ್ಲಿ ನಡೆದ ಅಡ್ವೊಕೇಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ನ್ಯಾಯವಾದಿ ರಾಘವೇಂದ್ರ ರಾವ್ ಅವರ ಮಾಲೀಕತ್ವದ ಬಾರ್ ಟೈಗರ್ ತಂಡ ಅಗ್ರ ಪ್ರಶಸ್ತಿ ಪಡೆಯಿತು. ಒಟ್ಟು ೮ ತಂಡಗಳು ಭಾಗವಹಿಸಿದ್ದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿರವಿಕುಮಾರ್ ಅವರ ಅವರ ಮಾಲೀಕತ್ವದ ತಂಡ ಬಾರ್ ಪ್ಯಾಂಥರ್ಸ್ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು.

ಪ್ರಾದೇಶಿಕ ವಾರ್ತೆಗಳು

BREAKING NEWS. ರಾಮಚಂದ್ರ ಬೈಕಂಪಾಡಿ ನಿಧನ

ಮಂಗಳೂರು- ಬಿಜೆಪಿಯ ಹಿರಿಯ ನಾಯಕ ರಾಮಚಂದ್ರ ಬೈಕಂಪಾಡಿ ಅವರು ನಿಧನರಾಗಿದ್ದಾರೆ. ಅವರಿಗೆ 75ವರ್ಷ ವಯಸ್ಸಾಗಿತ್ತು . ಆರಂಭದಲ್ಲಿ ನಾಟಕಕಾರರಾಗಿ ಜನ ಮನ ಗೆದ್ದಿದ್ದ ರಾಮಚಂದ್ರ ಬೈಕಂಪಾಡಿ ಅವರು ಸಾಹಿತಿ , ಮೇಧಾವಿ, ಎಂ.ಎ ಪದವೀಧರರಾಗಿದ್ದರುಯಾರೂ ಸಿಕ್ಕರೂ ದಾನೆ ಎಂಚ ಉಲ್ಲರ್ ಎಂದು ಆತ್ಮೀಯತೆಯಿಂದ ಮಾತಾಡುವ ಅವರು ಬಿಜೆಪಿ ಪಕ್ಷದ ಹಿರಿಯ ನಾಯಕರಾಗಿದ್ದರು. ಬಿ.ಎಸ್.ಯಡಿ ಯೂರಪ್ಪನವರ ಆತ್ಮೀಯರಾಗಿದ್ದ ರಾಮಚಂದ್ರ ಬೈಕಂಪಾಡಿ ಯವರು 2013ರಲ್ಲಿ ಬಿಎಸ್ ವೈಯವರ ಸ್ವತಂತ್ರ ರಾಜಕೀಯ ಪಕ್ಷ ಕೆಜೆಪಿಯಲ್ಲಿ ಮಂಗಳೂರು ಉತ್ತರದಲ್ಲಿ ಎಂಎಲ್ ಎ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಹಿಂದೊಮ್ಮೆ,ಅವರು ಹೃದಯದ ಶಸ್ತ್ರ ಚಿಕಿತ್ಸೆಗೊಳಗಾಗಿದ್ದಾಗ ಆಸ್ಪತ್ರೆಗೆ ಪಾವತಿಸಬೇಕಾಗಿದ್ದ ಚಿಕಿತ್ಸಾ ವೆಚ್ಚವನ್ನು ಬಿ ಎಸ್ ವೈಯವರೇ ಭರಿಸಿದ್ದರು. ಬಿಎಸ್ ವೈ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದ ಅವರು ಮಾಜಿ ಎಂಪಿ, ಬಿಜೆಪಿ ಪಕ್ಷದ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಸಾದಾ ಶ್ಲಾಘನೆ ವ್ಯಕ್ತಪಡಿಸುತ್ತಿದ್ದರು. ಮೊಗವೀರ ಸಮಾಜದ ಪ್ರಬಲ ನಾಯಕರಾಗಿದ್ದ ಅವರು ಕರ್ನಾಟಕ ಮೀನುಗಾರಿಕಾಭಿವೃದ್ದಿ ನಿಗಮ KFDC ನ ಅಧ್ಯಕ್ಷರಾಗಿಯೂ ಗಮನಾರ್ಹ ಸೇವೆ ಸಲ್ಲಿಸಿದ್ದರು. ಬಿಎಸ್ ವೈ ಜತೆಗೆ ,ಮತ್ತೆ ಮಾತೃಪಕ್ಷ ಬಿಜೆಪಿ ಸೇರಿದ ಅವರು ಹಿರಿಯ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಕರ್ನಾಟಕ ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಪರಿಸರ ಪ್ರೇಮಿ , ಪರಿಸರ ಹಿತರಕ್ಷಣಾ ಹೋರಾಟಗಾರರಾಗಿದ್ದರು. ಈ ಹಿನ್ನೆಲೆಯಲ್ಲಿ 2021ರಲ್ಲಿ ಅವರಿಗೆ ಕರ್ನಾಟಕ ಸರಕಾರದಿಂದ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ.ಹಲವು ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಪೂರ್ಣಕಾಲಿಕಾ ರಾಜಕಾರಣಿಯಾಗಿ ನಿಸ್ವಾರ್ಥ ಸಮಾಜಸೇವಕರಾಗಿದ್ದ ರಾಮಚಂದ್ರ ಬೈಕಂಪಾಡಿ ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಈ ನಾಡು ಪರಿಸರ ಪ್ರೇಮಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ನಿತ್ಯಶ್ರೀ ಬಿ.ವಿ.ಗೆ ಪಿಎಚ್ ಡಿ ಪದವಿ

ಮಂಗಳೂರು: ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಯೆನೆಪೋಯ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ನಿತ್ಯಶ್ರೀ ಬಿ.ವಿ. ಇವರು ಮಂಗಳೂರಿನ ಆಯ್ದ ಶಾಲೆಗಳ ಹದಿಹರೆಯದ ಬಾಲಕಿಯರಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಉದ್ದೇಶದಿಂದ ಅರಿವು, ದೃಢವಾದ ನಡವಳಿಕೆ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುವ ಸಾಮರ್ಥ್ಯವರ್ಧನಾ ಕಾರ್ಯಕ್ರಮದ ಪರಿಣಾಮಕಾರಿತ್ವದ ಕುರಿತು ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಯೆನೆಪೋಯ ಪರಿಗಣಿತ ವಿ.ವಿ. ಪಿಎಚ್ ಡಿ ಪದವಿ ನೀಡಿದೆ. ಯೆನೆಪೋಯ ನರ್ಸಿಂಗ್ ಕಾಲೇಜಿನ ಡೀನ್ ಡಾ. ಲೀನಾ ಕೆ.ಸಿ. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಪೂರೈಸಿದ್ದರು. ಯೆನೆಪೋಯ ಪರಿಗಣಿತ ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್ಅಧಿಕಾರಿಯಾಗಿರುವ ನಿತ್ಯಶ್ರೀ ಬಿ.ವಿ. ಇವರು ಸುಳ್ಯದ ನಿವೃತ್ತ ಸರ್ವೆ ಮೇಲ್ವಿಚಾರಕ ವಿಠಲ ಬಿ.ಕೆ.- ರುಕ್ಮಿಣಿ ಬಿ.ವಿ. ದಂಪತಿ ಪುತ್ರಿ .ಗಣೇಶ್ ಮಾಣಿಬೆಟ್ಟು ಅವರ ಪತ್ನಿ.

ಪ್ರಾದೇಶಿಕ ವಾರ್ತೆಗಳು

ನಾಗರಿಕ ಸೇವಾ ಸಮಿತಿ (ರಿ.)ಅಂಬೇಡ್ಕರ್ ನಗರ ಕರಂಬಾರು ಇದರ 12 ನೇ ವಾರ್ಷಿಕೋತ್ಸವ

ಮಂಗಳೂರು- ನಾಗರಿಕ ಸೇವಾ ಸಮಿತಿ.ರಿ.ಅಂಬೇಡ್ಕರ್ ನಗರ, ಕರಂಬಾರು ಇದರ 12 ನೇ ವಾರ್ಷಿಕೋತ್ಸವವು ಕರಂಬಾರಿ ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಅವರು ಮಾತನಾಡುತ್ತಾ,ನಾಗರಿಕ ಸೇವಾ ಸಮಿತಿಯ ಸಮಾಜ ಸೇವೆಯನ್ನು ಪ್ರಶಂಸಿದರು. ಸಮಾಜಕ್ಕೆ ಮಾದರಿ ಸಂಘ ಎಂದು ಹೇಳಿದರು. ಬಜಪೆ ಬಂಟರ ಸಂಘದ ಅಧ್ಯಕ್ಷರಾದ ವೇಣುಗೋಪಾಲ್ ಶೆಟ್ಟಿ ರವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು . ಮಾತನಾಡಿದ ವೇಣುಗೋಪಾಲ್ ಶೆಟ್ಟಿ ರವರು ನಾಗರಿಕ ಸೇವಾ ಸಮಿತಿಯ ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು, ನಾಗರಿಕ ಸೇವಾ ಸಮಿತಿಯು ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ ಮಾಡಿ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಿದೆಂದು ಕೊಂಡಾಡಿದರು.ನಾಗರಿಕ ಸೇವಾ ಸಮಿತಿಯ ಅಧ್ಯಕ್ಷರಾದ ಭೋಜರಾಜ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಜಪೆ ಪಟ್ಟಣ ಪಂಚಾಯತ್ ಸದಸ್ಯರಾದ ರಾಜೇಶ್ ಅಮೀನ್, ದಿನೇಶ್ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ, ಮಳವೂರು ಪಂಚಾಯತ್ ಮಾಜಿ ಅಧ್ಯಕ್ಷರಾದ ನಾರಾಯಣ ಬೋಧಿ, ಎಸ್ ಡಿಯಂಸಿ ಅಧ್ಯಕ್ಷರಾದ ಗುಣಪಾಲ್ ದೇವಾಡಿಗ, ವಾಸು ಪೇಜಾವರ್, ರುಕ್ಕಯ್ಯ ಕೋಟ್ಯಾನ್, ಉಪಸ್ಥಿತರಿದ್ದರು. ಕುಮಾರಿ ಕೃತಿ ಬಿ. ಕೆ ಕಾರ್ಯಕ್ರಮ ನಿರೂಪಿಸಿದರು, ವೀಣಾ ಸಾಲ್ಯಾನ್ ಪ್ರಾಸ್ತವಿಕ ಮಾತನಾಡಿದರು, ವಿದ್ಯಾ ಮಿಥುನ್ ಸ್ವಾಗತಿಸಿ, ರಾಕೇಶ್ ಕುಂದರ್ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ವಾರ್ಷಿಕೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ

ಸುರತ್ಕಲ್: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಸುರತ್ಕಲ್ ಘಟಕದ 6 ನೇ ವರ್ಷದ ಅಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು. ಅಮಂತ್ರಣ ಪತ್ರಿಕೆಯನ್ನು ಶಕುಂತಲಾ ರಮಾನಂದ ಭಟ್ ಇಡ್ಯಾ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಗೌರವಾಧ್ಯಕ್ಷರಾದ ಸುಧಾಕರ ಪೂಂಜ, ಪಟ್ಲ ಫೌಂಡೇಶನ್ ಕೇಂದ್ರಿಯ ಘಟಕದ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಜಗನ್ನಾಥ ಶೆಟ್ಟಿ ಬಾಳ, ಸಮಿತಿಯ ಉಪಾಧ್ಯಕ್ಷೆ ಸಹನಾ ರಾಜೇಶ್ ರೈ, ಉಪಾಧ್ಯಕ್ಷ ರಮೇಶ್ ಭಟ್, ಸಂಚಾಲಕ ನಾಗರಾಜ್ ಕಡಂಬೋಡಿ, ಮುಂತಾದವರು ಉಪಸ್ಥಿತರಿದ್ದರು. ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷರಾದ ಲೀಲಾಧರ ಶೆಟ್ಟಿ ಕಟ್ಲ‌ ಸ್ವಾಗತಿಸಿ, ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ ಚೇಳೈರು ವಂದಿಸಿದರು. ಸವಿತಾ ಬಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

BREAKING NEWS. ಆಶಾ ಭೋಸ್ಲೆ ನಿಧನ

ಮುಂಬಯಿ – ಭಾರತೀಯ ವಿವಿಧ ಭಾಷೆಗಳಲ್ಲಿ 12ಸಾವಿರಕ್ಕೂ ಮಿಕ್ಕಿ ಹಾಡುಗಳಿಗೆ ಧ್ವನಿಯಾಗಿದ್ದ ಗಿನ್ನಿಸ್ ದಾಖಲೆಯ ಗಾನ ಕೋಗಿಲೆ ,ಭಾರತೀಯ ಚಿತ್ರರಂಗದ ದಂತ ಕಥೆ , ಬಾಲಿವುಡ್ ನ ಹಿರಿಯ ಗಾಯಕಿ ಆಶಾ ಭೋಸ್ಲೆ ಅವರು ಇಂದು ಮುಂಬಯಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆ ಮತ್ತು ಹೃದಯ ಸಂಬಂಧಿ ಕಾಯಿಲೆ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ಅವರ ಮಗ ಆನಂದ ಭೋಸ್ಲೆ ಅವರು ಮಾಧ್ಯಮಗಳಿಗೆ ದೃಢ ಪಡಿಸಿದ್ದಾರೆ.ಅವರಿಗೆ 92 ವರ್ಷ ವಯಸ್ಸಾಗಿತ್ತು.ನಿನ್ನೆ ಅವರನ್ನು ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಳೆ ಅವರ ಅಂತ್ಯಕ್ರಿಯೆ ನಡೆಯಲಿದೆ.ಪ್ರಧಾನಿ ಮೋದಿ ಸಹಿತ ಗಣ್ಯರನೇಕರು ಆಶಾ ಭೋಸ್ಲೆಯವರ ನಿಧಾನಕ್ಕೆ ಸಂತಾಪ ಸೂಚಿಸಿದ್ದಾರೆ. ಆಶಾ ಭೋಸ್ಲೆ ಅವರ ಹಾಡುಗಳು ಎಂದಿಗೂ ಅಮರ ಎಂದು ಮೋದಿ ಅವರು ಸಂತಾಪ ಸೂಚನೆಯಲ್ಲಿ ಹೇಳಿದ್ದಾರೆ.ಆಶಾ ಮಂಗೇಶ್ಕರ್ ಆಗಿದ್ದ ಅವರು ಸಹೋದರಿ ಲತಾ ಮಂಗೇಶ್ಕರ್ ಅವರ ಸೆಕ್ರೆಟರಿ ಅವರನ್ನೇ ಮದುವೆಯಾಗಿ ಆಶಾ ಭೋಸ್ಲೆ ಆಗಿದ್ದರು. ಉದ್ಯಮಿ ಆಗಿಯೂ ಯಶಸ್ವಿಯಾಗಿದ್ದ ಅವರು 250ಕೋಟಿ ರೂಪಾಯಿ ಆಸ್ತಿಗೆ ಒಡತಿಯಾಗಿದ್ದರು

Scroll to Top