ಮೂಡುಬಿದಿರೆ-ಶ್ರೀರಾಮ್ ಫೈನಾನ್ಸ್ ನಿಂದ ವಾಹನ ಖರೀದಿಗೆ ಸಾಲ ಪಡೆದು ಮರು ಪಾವತಿಸದೆ ವಂಚಿಸಿದ್ದ ಆರೋಪಿಗೆ ಜಾಮೀನು ಹಾಕಿದ್ದ ಜಾಮೀನುದಾರನ ವಿರುದ್ಧ ಹೂಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಎರಡನೇ ಆರೋಪಿಯನ್ನು ಮೂಡುಬಿದಿರೆ ನ್ಯಾಯಾಲಯವು ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ. ಪ್ರಕರಣದಿಂದ ದೋಷಮುಕ್ತಗೊಂಡು ಖುಲಾಸೆಗೊಂಡ ಆರೋಪಿ ಪರ ಮೂಡುಬಿದಿರೆಯ ಖ್ಯಾತ ಯುವ ನ್ಯಾಯವಾದಿ ಮಾರ್ವಿನ್ ಜಾನ್ಸನ್ ಲೋಬೋ ಅವರು ವಾದಿಸಿದ್ದರು.
ಪ್ರಕರಣದ ವಿವರ- ಸುಳ್ಯದ ಶ್ರೀನಿವಾಸ ಎಂಬವರು ಟಾಟಾ ಹಿಟಾಚಿ ವಾಹನ ಖರೀದಿಗೆಂದು ಶ್ರೀ ರಾಮ್ ಫೈನಾನ್ಸ್ ಮೂಡುಬಿದಿರೆ ಶಾಖೆಯಿಂದ ದೊಡ್ಡ ಮೊತ್ತದ ಸಾಲ ಪಡೆದಿದ್ದರು. ಅದರ ಮೊತ್ತ ಅಂದಾಜು 69 ಲಕ್ಷ ರೂಪಾಯಿ ಎಂದು ಶ್ರೀರಾಮ ಫೈನಾನ್ಸ್ ನವರು ದೂರು, ದಾಖಲಿಸಿದ್ದರು. ಆದರೆ, ಮುಖ್ಯ ಆರೋಪಿ ಸಾಲವನ್ನೂ ವಾಪಾಸು ಕಟ್ಟದೆ, ನ್ಯಾಯಾಲಯಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ.
ಶ್ರೀನಿವಾಸನಿಗೆ ಜಾಮೀನು ಹಾಕಿದ್ದ ಸುಳ್ಯದ ಕರುಣಾಕರ ಎಂಬವರ ವಿರುದ್ಧವೂ ಮೋಸ,ವಂಚನೆ ಪ್ರಕರಣ ದಾಖಲಾಗಿ ಮೂಡುಬಿದಿರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.
ಇದೀಗ ಹಲವು ಬಾರಿ ವಿಚಾರಣೆ ನಡೆಸಿದ ನ್ಯಾಯಾಲಯವು ವಾದ ಪ್ರತಿ ವಾದಗಳನ್ನು ಆಲಿಸಿ ಸಾಕ್ಷಿ ಗಳನ್ನು ವಿಚಾರಿಸಿ ಸದ್ರಿ ಆರೋಪವನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲ ವಾದ ಹಿನ್ನಲೆಯಲ್ಲಿ ಅಂತಿಮವಾಗಿ ಕೋರ್ಟ್ ಜಾಮೀನುದಾರ ಕರುಣಾಕರನನ್ನು ದೋಷಮುಕ್ತಗೊಳಿಸಿ ಪ್ರಕರಣದಿಂದ ಖುಲಾಸೆಗೊಳಿಸಿದೆ.
ಆರೋಪಿ ಪರ ಮೂಡುಬಿದಿರೆಯ ಯುವ ನ್ಯಾಯವಾದಿ ಮರ್ವಿನ್ ಜಾನ್ಸನ್ ಲೋಬೊ ಅವರು ವಾದಿಸಿದ್ದರು.




























































































































