ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪಾಜಕಕ್ಷೇತ್ರಕ್ಕೆ ಬರುವ ರಸ್ತೆಯನ್ನು ತಕ್ಷಣ ಸರಿಪಡಿಸುವ ಬಗ್ಗೆ ಉಡುಪಿ ಡಿಸಿಯವರಿಗೆ ಸಾರ್ವಜನಿಕರ ಮನವಿ.

ಉಡುಪಿ :ಉಡುಪಿ ಜಿಲ್ಲೆಯ ಪಾಜಕ ಕ್ಷೇತ್ರ ಪ್ರೇಕ್ಷಣೀಯ ಸ್ಥಳ ಮತ್ತು ಇತಿಹಾಸ ಪ್ರಸಿದ್ಧ ಶ್ರೀಮನ್ ಮಧ್ವಾಚಾರ್ಯರ ಜನ್ಮಸ್ಥಳವಾಗಿದೆ. ಅನಂತ ಪದ್ಮನಾಭ ದೇವರ ಸನ್ನಿಧಿ ಇರುವ ಪಾಜಕಕ್ಷೇತ್ರಕ್ಕೆ ದೇವರ ದರ್ಶನ ಮಾಡಲು ದೇಶದ ಹಲವೆಡೆಯಿಂದ, ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಬಸ್ಸು , ಟೆಂಪೋ, ಕಾರುಗಳಲ್ಲಿ ದಿನ ನಿತ್ಯ ಆಗಮಿಸುತ್ತಿದ್ದಾರೆ. ಅಲ್ಲದೆ, ಪೇಜಾವರ ಮಠದ ವತಿಯಿಂದ ಆನಂದ ತೀರ್ಥ ವಿದ್ಯಾ ಸಂಸ್ಥೆ ಸಹ ಕಾರ್ಯ ನಿರ್ವಹಿಸುತ್ತಿದೆ. ಈ ರಸ್ತೆಯಲ್ಲಿ ದಿನಕ್ಕೆ ಕನಿಷ್ಠ ಪಕ್ಷ 50ರಿಂದ 70ರಷ್ಟು ಬೃಹತ್ ಮತ್ತು ಮಧ್ಯಮ ಗಾತ್ರದ ವಾಹನಗಳು ಸಂಚರಿಸುತ್ತವೆ. ಇದೀಗ ಸಮಸ್ಯೆ ಏನೆಂದರೆ, ಕಾಪು ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇರುವ ಕಾರಣ, ಬೆಳ್ಳೆಯ ನದಿಯಿಂದ ನೀರನ್ನು ಕುಂಜಾರುಗಿರಿ ದೇವಸ್ಥಾನದ ಬಳಿ ಬೃಹತ್ ಟ್ಯಾಂಕ್ ನಿರ್ಮಿಸಿಕೊಂಡು, ಅಲ್ಲಿಂದ ನೀರನ್ನು ಕಾಪು ಗೆ ಪಂಪ್ ಮಾಡುವ ವ್ಯವಸ್ಥೆಯ ಕಾಮಗಾರಿ ಹಲವು ಸಮಯದಿಂದ ನಡೆಯುತ್ತಿದೆ. ಹಿಂದೊಮ್ಮೆ ರಸ್ತೆ ಅಗೆದು ಪೈಪ್ ಲೈನ್ ಹಾಕಿದ್ದು, ಇದೀಗ ಮತ್ತೊಮ್ಮೆ ಡಾಮರೀಕರಣಗೊಂಡ ರಸ್ತೆ ಅಗೆದು ಪೈಪ್ ಲೈನ್ ಹಾಕುವ ಕಾರ್ಯ ನಡೆದಿದೆ.ಆದರೆ,ಮಾರ್ಗದ ಮಧ್ಯೆ ಅಗೆದು ಪೈಪ್ ಲೈನ್ ಹಾಕುವ ಕಾಮಗಾರಿ ಮುಗಿದಿದ್ದರೂ, ಕಾಮಗಾರಿ ನಡೆಸಿದ ಗುತ್ತಿಗೆದಾರರು ರಸ್ತೆ ಅಗೆದ ನಂತರ ಅದನ್ನು ಪುನಃ ಸರಿ ಪಡಿಸುವ ಗೋಜಿಗೆ ಹೋಗಲಿಲ್ಲ. ಈ ರಸ್ತೆಯಲ್ಲಿ ಪ್ರತಿನಿತ್ಯ ಹಲವಾರು ವಾಹನಗಳು ಸಂಚರಿಸುತ್ತಿದ್ದು,ಪ್ರಸಕ್ತ ಅಡ್ಡಾದಿಡ್ಡಿ ರಸ್ತೆ ಅಗೆತದಿಂದ ದಿನಂಪ್ರತಿ ಎನ್ನುವಂತೆ ಅಪಘಾತಗಳು ಸಂಭವಿಸುತ್ತಿದೆ. ಯಾತ್ರಾರ್ಥಿಗಳು ದೂರದ ಊರುಗಳಿಂದ ಬರುತ್ತಿರುವ ಕಾರಣ ,ಅಪಘಾತ ನಡೆದರೂ ಪೊಲೀಸರಿಗೆ ಮಾಹಿತಿ ನೀಡದೆ ರಾಜಿ ಪಂಚಾಯಿತಿ ಮೂಲಕ ಪ್ರಕರಣವನ್ನು ಮುಗಿಸಿ ಹೋಗುತ್ತಿದ್ದಾರೆ. ರಸ್ತೆ ರಿಪೇರಿ ನಡೆಸುವ ಬಗ್ಗೆ ಸ್ಥಳೀಯ ಗುತ್ತಿಗೆದಾರರ ಬಳಿ ವಿಚಾರಿಸಿದರೆ, ಅದು ಪಂಚಾಯತ್ ನವರ ಕೆಲಸ ಅಂತ ಹೇಳಿ ನುಣುಚಿಕೊಳ್ಳುತ್ತಾರೆ.ಅಲ್ಲದೆ,ಅಪಘಾತ ನಡೆದ ಸಂದರ್ಭ ಯಾತ್ರಿಕರ ಬಳಿ ಸಹ ಉಡಾಫೆ ಹೇಳಿಕೆ ನೀಡುತ್ತಾರೆ. ಸದ್ರಿ ವಿಷಯಕ್ಕೆ ಸಂಬಂದ ಪಟ್ಟಂತೆ ದಯಾಳುಗಳಾದ ತಾವು ಒಮ್ಮೆ ಗಮನ ಹರಿಸಿ ಸುಭಾಸ್ ನಗರದಿಂದ ಪಾಜಕಕ್ಷೇತ್ರ ಕ್ಕೆ ಹೋಗುವ ರಸ್ತೆಯನ್ನು ಸರಿಪಡಿಸಿ ಕೊಡಬೇಕೆಂದು ಸರ್ವ ನಾಗರಿಕರ ಪರವಾಗಿ ಕೇಳಿಕೊಳ್ಳುತ್ತೇವೆ. ಪೇಜಾವರ ಮಠದ ಆನಂದ ತೀರ್ಥ ವಿಧ್ಯಾಲಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಓದುತಿದ್ದಾರೆ. ಹಾಗಾಗಿ ಇಲ್ಲಿ ಏನಾದರೂ ಅವಘಡ ಸಂಭವಿಸಿದರೆ ಇಡೀ ಊರಿಗೆ ಕಳಂಕ ಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಗಮನ ಹರಿಸಿ ತಕ್ಷಣ ರಸ್ತೆಯನ್ನು ಸರಿಪಡಿಸಿ ಕೊಡಬೇಕೆಂದು ಕೇಳಿ ಕೊಳ್ಳುತ್ತೇವೆಂದು ಸಾರ್ವಜನಿಕರು ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಡಾ.ಅಗರಿ ನವೀನ್ ಭಂಡಾರಿಯವರಿಂದ‌ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಶ್ರೀ ಅಯ್ಯಪ್ಪ ದೇವಾಲಯದ ಶಿವಗುಡಿ ನಿರ್ಮಾಣಕ್ಕೆ 10 ಲಕ್ಷ ರೂ ದೇಣಿಗೆ.

ಬೆಂಗಳೂರು : ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉತ್ತರ ವಲಯದ ಮಾಜಿ ನಿರ್ದೇಶಕ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿರುವ ಪುತ್ತೂರು ಮೂಲದ ಡಾ.ಅಗರಿ ನವೀನ್ ಭಂಡಾರಿಯವರು ಬೊಮ್ಮನ ಹಳ್ಳಿಯಲ್ಲಿರುವ ಶ್ರೀ‌ ಆಯ್ಯಪ್ಪ ದೇವಾಲಯದ ಶಿವನ ಗುಡಿ ಸ್ಥಾಪನೆಗೆ 10 ಲಕ್ಷ‌ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಡಾ. ಅಗರಿ ನವೀನ್ ಭಂಡಾರಿಯವರ ಪುತ್ರಿ ಅನುಷ್ಕಾ ಶೆಟ್ಟಿ, ಸಹೋದರ ಕರ್ನಲ್ ಜಗಜೀವನ್ ಭಂಡಾರಿ ಉಪಸ್ಥಿತರಿದ್ದರು. ಡಾ. ಅಗರಿ ನವೀನ್ ಭಂಡಾರಿಯವರು ಈಗಾಗಲೇ ಬೆಂಗಳೂರು ನಗರದ ಬೊಮ್ಮನಹಳ್ಳಿ ಯಲ್ಲಿ ಸುಸಜ್ಜಿತವಾದ ಮೂಲ್ಕಿ ಸುಂದರರಾಮ್ ಶೆಟ್ಟಿ ಬಡಾವಣೆ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.ಇದು ಬೆಂಗಳೂರಿನಲ್ಲೇ ಮಾದರಿ ಬಡಾವಣೆಯಾಗಿ ಬೆಳೆದಿದೆ. ಇದರ ಬೆಳವಣಿಗೆ, ಅಭಿವೃದ್ಧಿ ಹಿಂದೆ ಡಾ. ಅಗರಿ ನವೀನ್ ಭಂಡಾರಿ ಮತ್ತವರ ತಂಡದ ಸದಸ್ಯರ ಪರಿಶ್ರಮವಿದೆ. ಇಲ್ಲಿ ಅಯ್ಯಪ್ಪ ದೇವಸ್ಥಾನ ನಿರ್ಮಿಸಲು ಮತ್ತು ಇದರ ಅಭಿವೃದ್ಧಿಗೆ ಇವರ ಕೊಡುಗೆ ಹಿರಿದಾದದು.ಆಧುನಿಕ ಜೀವನ ಶೈಲಿಯ ಅತ್ಯಾಧುನಿಕತೆಯ ರೂಪವನ್ನು ಮೂಲ್ಕಿ ಸುಂದರರಾಮ್ ಶೆಟ್ಟಿ ಬಡಾವಣೆಗೆ ನೀಡಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಿಥುನ ಕೊಡೆತ್ತೂರ್‌ಗೆ ‘ಬ್ರ‍್ಯಾಂಡ್ ಮಂಗಳೂರು’ ಪ್ರಶಸ್ತಿ

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ಹೊಸದಿಗಂತ ದಿನಪತ್ರಿಕೆಯ ಮೂಲ್ಕಿ ವರದಿಗಾರ ಮಿಥುನ ಕೊಡೆತ್ತೂರ್‌ ಆಯ್ಕೆಯಾಗಿದ್ದಾರೆ.ಹೊಸದಿಗಂತ ಪತ್ರಿಕೆಯಲ್ಲಿ 2023 ನವೆಂಬರ್‌ 7ರಂದು ಪ್ರಕಟವಾದ ಮಿಥುನ್‌ ಅವರ “‌ಬಾರಾಡಿಯಲ್ಲಿ ಬೆಳೆದಿದೆ 840 ತಳಿ ಭತ್ತʼ’ ಎಂಬ ವರದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು 5,001 ರು., ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿದೆ. ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ಮಂಗಳೂರು ಸುದ್ದಿವಿಭಾಗ ಮುಖ್ಯಸ್ಥ ಹರ್ಷ ಮತ್ತು ಆಳ್ವಾಸ್‌ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್‌ ಶೆಟ್ಟಿ ನೇತೃತ್ವದ ಸಮಿತಿಯು ಈ ವರದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೊಸದಿಗಂತ ದೈನಿಕದಲ್ಲಿ ಬಿಡಿ ಸುದ್ದಿ ಸಂಗ್ರಹಕಾರರಾಗಿ, ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ವರದಿಗಾರರಾಗಿ, ಅನಂತ ಪ್ರಕಾಶ ಮಾಸಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸುವ ಮಿಥುನ್‌, 2022ರ ಪಗೋ ಪ್ರಶಸ್ತಿ ಪುರಸ್ಕೃತರು, ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ಅಧ್ಯಕ್ಷರು.ಪ್ರಶಸ್ತಿ ಪ್ರದಾನ ಸಮಾರಂಭ: ಜೂ.27ರಂದು ಬೆಳಗ್ಗೆ 11 ಗಂಟೆಗೆ ಪತ್ರಿಕಾಭವನದಲ್ಲಿ ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರವಾಲ್‌ ಪ್ರಶಸ್ತಿ ಪ್ರದಾನ ಮಾಡುವರು. ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೊ, ಜಿಲ್ಲಾ ಆಯುಷ್‌ ಅಧಿಕಾರಿ ಇಕ್ಬಾಲ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಅಧ್ಯಕ್ಷತೆ ವಹಿಸುವರು. ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ.ಹರೀಶ್‌ ರೈ, ಪತ್ರಿಕಾಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್.‌ ಉಪಸ್ಥಿತರಿರುವರು.

ಪ್ರಾದೇಶಿಕ ವಾರ್ತೆಗಳು

ಕಾಂಕ್ರೀಟೀಕರಣಗೊಂಡ ರಸ್ತೆಯನ್ನು ಮತ್ತೆ ಮತ್ತೇ ಅಗೆಯುವುದು ಭ್ರಷ್ಟಾಚಾರದ ವಿರಾಟ್ ಸ್ವರೂಪ – CPIM ಗಂಭೀರ ಆರೋಪ.

ಮಂಗಳೂರು : ಮಂಗಳೂರು ನಗರದಾದ್ಯಂತ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಒಂದೆರಡು ತಿಂಗಳಲ್ಲಿ ಮತ್ತೆ ಅಗೆಯುವುದು ಬಿಜೆಪಿ ಆಡಳಿತದ ಭ್ರಷ್ಟಾಚಾರದ ವಿರಾಟ್ ಸ್ವರೂಪವಾಗಿದೆ ಎಂದು CPIM ದ.ಕ.ಜಿಲ್ಲಾ ಸಮಿತಿಯು ಗಂಭೀರ ಆರೋಪವನ್ನು ವ್ಯಕ್ತಪಡಿಸಿದೆ. ವಿವಿಧ ಯೋಜನೆಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಯನ್ನು ಅಭಿವೃದ್ದಿಯ ಹೆಸರಿನಲ್ಲಿ ಕೇವಲ ರಸ್ತೆ ಕಾಮಗಾರಿಗಾಗಿಯೇ ವಿನಿಯೋಗಿಸಲಾಗುತ್ತದೆ.40 ಪರ್ಸೆಂಟ್ ಕಮಿಷನ್ ಹೆಸರಿನಲ್ಲಿ ಕೋಟ್ಯಾಂತರ ಹಣವನ್ನು ನುಂಗಿ ಹಾಕಲು ಏಕೈಕ ಸಾಧನ ರಸ್ತೆ ಅಭಿವೃದ್ಧಿಯಾಗಿದೆ .ರಸ್ತೆಗೆ ಕಾಂಕ್ರೀಟ್ ಮಾಡುವ ಸಂದರ್ಭದಲ್ಲಿ ರಸ್ತೆಯ ಅಡಿ ಭಾಗದಲ್ಲಿರುವ ಕೇಬಲ್,ನೀರಿನ ಪೈಪ್ ಲೈನ್,ಚರಂಡಿ ಸೇರಿದಂತೆ ಎಲ್ಲವುಗಳನ್ನು ರಸ್ತೆಯ ಬದಿಗೆ ಸರಿಸಿದ ಬಳಿಕವೇ ಕಾಂಕ್ರೀಟ್ ಮಾಡಬೇಕೆಂಬ ನಿಯಮವಿದ್ದರೂ, ಅವೆಲ್ಲವುಗಳನ್ನು ಗಾಳಿಗೆ ತೂರಿ, ಕಾಮಗಾರಿಗಾಗಿ ಮೀಸಲಿಟ್ಟ ಕೋಟ್ಯಾಂತರ ಹಣ ನಿಗದಿತ ಅವಧಿಯಲ್ಲಿ ಕಾಮಗಾರಿ ನಡೆಯದಿದ್ದರೆ ವಾಪಸ್ ಹೋಗುವ ಭೀತಿಯಿಂದ ತರಾತುರಿಯಲ್ಲಿ ಇದ್ದ ರಸ್ತೆಗೆ ಕಾಂಕ್ರೀಟ್ ಮಾಡಲಾಗುತ್ತದೆ. ಬಳಿಕ ನೀರಿನ ಪೈಪ್ ಸೋರಿಕೆ ಕಂಡಾಗ,ಕೇಬಲ್ ಹಾಕುವಾಗ ಹಾಗೂ ಒಳಚರಂಡಿ ದುರಸ್ತಿಯ ಹೆಸರಿನಲ್ಲಿ ಅಗಿಂದ್ದಾಗೆ ಅಗೆಯಲಾಗುತ್ತದೆ.ಒಟ್ಟಿನಲ್ಲಿ ರಸ್ತೆಯ ಕಾಂಕ್ರೀಟೀಕರಣಗಿಂತಲೂ ಅಗೆಯುವ ಹೆಸರಿನಲ್ಲಿ ದುಪ್ಪಟ್ಟು ಹಣವನ್ನು ನುಂಗಿ ಹಾಕಲಾಗುತ್ತದೆ.ಇದರಿಂದ ಬಿಜೆಪಿ ಆಡಳಿತದ ಬ್ರಹ್ಮಾಂಡ ಭ್ರಷ್ಟಾಚಾರದ ವಿರಾಟ್ ಸ್ವರೂಪ ಬಹಿರಂಗಗೊಂಡಿದೆ ಎಂದು CPIM ಅಕ್ರೋಶ ವ್ಯಕ್ತಪಡಿಸಿದೆ. ಬೋಳಾರ ಮುಳಿಹಿತ್ಲು ಪ್ರದೇಶದ ಅತ್ಯಂತ ಪ್ರಮುಖ ರಸ್ತೆಯ ಕಾಂಕ್ರೀಟೀಕರಣ ಕಳೆದ ತಿಂಗಳಷ್ಟೇ ಮುಗಿದಿದ್ದು ಈಗ ಮತ್ತೆ ಕ್ಷುಲ್ಲಕ ಕಾರಣಗಳನ್ನೊಡ್ಡಿ ಮತ್ತೆ ಅಗೆಯಲಾಗಿದೆ.ಇಂತಹ ಅವೈಜ್ಞಾನಿಕ ಕ್ರಮಗಳಿಂದ ಜನತೆಯ ತೆರಿಗೆಯ ಹಣ ವಿಪರೀತ ವಾಗಿ ಪೋಲಾಗುತ್ತಿದ್ದು ಈ ಬಗ್ಗೆ ಮಂಗಳೂರಿನ ಜನತೆ ತೀರಾ ಎಚ್ಚರದಿಂದಿರಬೇಕೆಂದು CPIM ದ.ಕ‌.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ತಿಳಿಸಿದ್ದಾರೆ. ಈ ಬಗ್ಗೆ ಈ ವಿಡಿಯೋ ಲಿಂಕ್ ಗಮನಿಸಿ. https://drive.google.com/file/d/1_bEqWAkP0clmuRCerZnxq9cGGlnvNNeG/view?usp=sharing

ಪ್ರಾದೇಶಿಕ ವಾರ್ತೆಗಳು

ಜೂನ್ 29 ರಂದು ಪಾಲಿಕೆವತಿಯಿಂದ ಕುದ್ಮುಲ್ ರಂಗರಾವ್ ದಿನಾಚರಣೆಯ ಪ್ರಯುಕ್ತ ಮೇಯರ್ ಸುಧೀರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಮಂಗಳೂರು: ಜೂನ್ 29ರ ಪೂವಾ೯ಹ್ನದಂದು ಮಹಾನಗರಪಾಲಿಕೆಯ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿ. ಕುದ್ಮುಲ್ ರಂಗ ರಾವ್ ರವರ ದಿನಾಚರಣೆಯನ್ನು ಮಂಗಳೂರು ಮಹಾನಗರಪಾಲಿಕೆಯ ವತಿಯಿಂದ ಆಚರಿಸಲು ನಿಧ೯ರಿಸಲಾಗಿದ್ದು, ಮೇಯರ್ ಸುಧೀರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಪೂವ೯ ತಯಾರಿಯ ಕುರಿತು ಚಚಿ೯ಸಲಾಯಿತು. ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲಿಕೆಯ ಉಪಮೇಯರ್ ಸುನೀತ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭರತ್ ಕುಮಾರ್ ಸದಸ್ಯರಾದ ಸಂಧ್ಯಾ ಆಚಾರ್, ಮನೋಜ್ ಕುಮಾರ್ ಮತ್ತು ಮಹಾನಗರಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

13ನೇ ಸೌಹಾರ್ದ ಸಂಗಮದ ಉದ್ಘಾಟನೆಗೆ ಡಾ.ಎ. ಸದಾನಂದ ಶೆಟ್ಟಿಯವರಿಗೆ ಆಹ್ವಾನ.

ಮಂಗಳೂರು : Mp mla’s ನ್ಯೂಸ್ 13ನೇ ಸೌಹಾರ್ದ ಸಂಗಮವು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಅಕ್ಟೋಬರ್ 13ನೇ ಆದಿತ್ಯವಾರ ಸಂಜೆ ಗಂಟೆ 4 ರಿಂದ 9 ರವರೆಗೆ ನಡೆಯಲಿದ್ದು, ಶ್ರೀದೇವಿ ಎಜುಕೇಶನ್ ಟ್ರಸ್ಟ್(ರಿ)ನ ಅಧ್ಯಕ್ಷರಾದ ಡಾ.ಎ. ಸದಾನಂದ ಶೆಟ್ಟಿ ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಪ್ರಯುಕ್ತ ಸೌಹಾರ್ದ ಸಂಗಮದ ಮೊದಲ ಆಮಂತ್ರಣ ಪತ್ರಿಕೆಯನ್ನು ಕುಡ್ಲದ ಕಛೇರಿಯಲ್ಲಿ ಡಾ.ಎ. ಸದಾನಂದ ಶೆಟ್ಟಿಯವರಿಗೆ ಸೌಹಾರ್ದ ಸಂಗಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ. ಎನ್ ಅವರು ನೀಡಿ, ಸೌಹಾರ್ದ ಸಂಗಮದ ಉದ್ಘಾಟಕರಾಗಿ ಆಗಮಿಸುವಂತೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಪ್ರಾದೇಶಿಕ ವಾರ್ತೆಗಳು

ಮಿತ್ರಂಪಾಡಿ ಜಯರಾಮ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು ಸಹಿತ 60 ಮಂದಿ ಸಾಧಕರಿಗೆ ಬೆಂಗಳೂರಿನಲ್ಲಿ ನಾಳೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರಧಾನ.

ಬೆಂಗಳೂರು :ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು 6 ವಿದೇಶ ಗಣ್ಯರು ಸೇರಿದಂತೆ 60 ಮಂದಿ ಸಾಧಕರಿಗೆ 2024 ರ ಸಾಲಿನ 49 ನೇಯ ವಾರ್ಷಿಕ ‘ಆರ್ಯಭಟ ಅಂತರ್ ರಾಷ್ಟ್ರೀಯ ಪ್ರಶಸ್ತಿ’ಯನ್ನು ಪ್ರಕಟಿಸಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳಾದ ಡಾ| ಹೆಚ್.ಬಿ.ಪ್ರಭಾಕರ ಶಾಸ್ತ್ರಿಯವರು ನೆರವೇರಿಸಲಿದ್ದು, ಮುಖ್ಯ ಅಥಿತಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ| ಮಹೇಶ್ ಜೋಶಿಯವರು, ಖ್ಯಾತ ಚಲನಚಿತ್ರ ನಿರ್ದೇಶಕರಾದ ಡಾ. ಎಸ್.ನಾರಾಯಣ್ ರವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಆರ್ಯಭಟ ಸಂಸ್ಥೆಯ ಸಂಸ್ಥಾಪಕರಾದ ಡಾ. ಹೆಚ್.ಎಲ್.ಎನ್.ರಾವ್ ರವರು ವಹಿಸಲಿದ್ದಾರೆ.ಕಾನೂನು ಮತ್ತು ನ್ಯಾಯಾಂಗ ವಿಭಾಗದಿಂದ ಸಿ.ಕೆ. ವೀರೇಶ್‌ಕುಮಾರ್, ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ನಟ ರಕ್ಷಿತ್‌ ಶೆಟ್ಟಿ, ಪತ್ರಕರ್ತರಾದ ವೈ.ಎಸ್.ಎಲ್.ಸ್ವಾಮಿ. ಸರ್ಕಲ್ ಇನ್ಸ್‌ಪೆಕ್ಟ‌ರ್ ಆರ್.ಪಿ.ಅನಿಲ್, ಅಬುಧಾಬಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಮ ರೈ, ಕತಾರ್‌ನಿಂದ ಅನಿಲ್ ಚಂದ್ರಶೇಖರ್ ಬಾಸಗಿ, ಲಂಡನ್‌ನಿಂದ ಡಾ. ಸತ್ಯವತಿ ಮೂರ್ತಿ, ಅಮೇರಿಕಾದಿಂದ ಪ್ರದ್ಯುಮ್ನ ಕಶ್ಯಪ್, ಕೃಷ್ಣ ಆದೋನಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದಿರುವ 60 ಸಾಧಕರಿಗೆ ಆರ್ಯಭಟ ಅಂತ‌ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್ 23ರ ಸಂಜೆ 6 ಗಂಟೆಗೆ ವಿತರಿಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಹೆಚ್.ಎಲ್.ಎನ್.ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕರಾವಳಿಯ ಸಾಧಕರು: ಕರಾವಳಿ ಭಾಗದಿಂದ ರಾಜ್ಯ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು, ಪುಣೆ ಅಹ್ಮದ್ ನಗರದ ಉದ್ಯಮಿ, ಧಾರ್ಮಿಕ ಸೇವಾಕರ್ತ ಕೆ.ಕೆ.ಶೆಟ್ಟಿ, ತುಳು ಸಾಹಿತಿ ಯೋಗೀಶ್ ಕಾಂಚನ್, ಯಕ್ಷಾಂಗಣ ಮಂಗಳೂರು ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಮೂಲ್ಕಯಿಂದ ಹೊಸ ಅಂಗಣ ಪತ್ರಿಕೆ ಯ ಸಂಪಾದಕಹರಿಶ್ಚಂದ್ರ ಪಿ. ಸಾಲಿಯಾನ್, ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಸಾಧಕರ ಪಟ್ಟಿಯಲ್ಲಿದ್ದಾರೆ ಎಂದು 2006 ರಲ್ಲಿ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ, ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ. ಸಾಂಸ್ಕೃತಿಕ ರಂಜನೆ : ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಸಂಜೆ ಗಂಟೆ 4 ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ನೃತ್ಯೋತ್ಸವದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾವಳಕಟ್ಟೆ ಬಂಟ್ವಾಳದ ಶೃತಿ ಆರ್ಟ್ಸ್ ತಂಡದವರಿಂದ ಜಾನಪದ ಗೊಂಬೆ ಪ್ರದರ್ಶನ, ಪಿ.ಕೆ. ಸತೀಶ್‌ಬಾಬು ತಂಡದವರಿಂದ ‘ಬೊಂಬೆ ವೈಭವ’ ಕಾರ್ಯಕ್ರಮ, ಸುಧೀಂದ್ರ ನೃತ್ಯ ಕಲಾನಿಕೇತನ ಮಹಾನಟ ನೃತ್ಯ ಮಂದಿರ ತಂಡ ಮಾರ್ಗಂ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ತಂಡದವರಿಂದ ಭರತನಾಟ್ಯ, ಮಾಸ್ಟರ್ ತ್ರಿಧಾತ್ ತಂಡದವರಿಂದ ಸ್ಯಾಕ್ಸೋಫೋನ್, ನಾದತರಂಗ ತಂಡದವರಿಂದ ಚೆಂಡೆವಾದನ, ಚಂದ್ರಿಕ ಪೆರ್ಡೂರುರವರಿಂದ ಯಕ್ಷಗಾನ ಏರ್ಪಡಿಸಲಾಗಿದೆ.

ಪ್ರಾದೇಶಿಕ ವಾರ್ತೆಗಳು

ಪಿಲಿಕುಳ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಪಿಲಿಕುಳ ದಲ್ಲಿ ಎರಡು ದಿನಗಳ ಹಣ್ಣು ಹಂಪಲು ಮೇಳಕ್ಕೆ ಚಾಲನೆ

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪಿಲಿಕುಳದಲ್ಲಿ ಹಮ್ಮಿಕೊಳ್ಳಲಾಗಿರುವ ಹಣ್ಣುಗಳ ಮೇಳಕ್ಕೆ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಶನಿವಾರ ಚಾಲನೆ ನೀಡಿದರು.ಪಿಲಿಕುಳದಲ್ಲಿ ಪ್ರತಿ ಹರ್ಷ ಹಣ್ಣಿನ ಮೇಳ ನಡೆಯುತ್ತಿದೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ರೈತರಿಗೂ ತಾವು ಬೆಳೆದ ಉತ್ಪನ್ನಗಳ ಮಾರಾಟಕ್ಕೆ ಸಹಾಯವಾಗಲಿದೆ ಎಂದು ಹೇಳಿದರು ಪಿಲಿಕುಳ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಮಮತಾ ಗಟ್ಟಿ, ಮೂಡುಶೆಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಅನಿಲ್ ಕುಮಾರ್ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಪ್ರವೀಣ್ ನಾಯಕ್, ಆಡಳಿತಾಧಿಕಾರಿ ಡಾ ಅಶೋಕ್,ಪಿಲಿಕುಳ ವಿಜ್ಯಾನ ಕೇಂದ್ರ ನಿರ್ದೇಶಕ ಪ್ರೊ. ಕೆ. ವಿ. ರಾವ್ ಉಪಸ್ಥಿತರಿದ್ದರು.ಹಣ್ಣುಗಳ ಮೇಳಕ್ಕೆ ಮೊದಲ ದಿನ ಉತ್ತಮ ಸ್ಪಂದನೆ ದೊರೆತಿದೆ. ಹಣ್ಣು ಹಂಪಲು ಗಳು, ತರಕಾರಿ ಬೀಜಗಳು, ಹಣ್ಣು ಹಂಪಲು ಗಿಡಗಳು, ವಿವಿಧ ಖಾದ್ಯಗಳ ಮಳಿಗೆಗಳು ಮೇಳದಲ್ಲಿ ಗಮನ ಸೆಳೆದಿದೆ. ಭಾನುವಾರ ಸಂಜೆ ಸಮಪನಗೊಳ್ಳಲಿದೆ.

ಪ್ರಾದೇಶಿಕ ವಾರ್ತೆಗಳು

ರೆಡ್‌ಕ್ರಾಸ್‌ನಿಂದ ಯೋಗ ದಿನಾಚರಣೆ ನಿರಂತರ ಯೋಗಾಭ್ಯಾಸದಿಂದ ಬದುಕಿಗೆ ಸ್ಪೂರ್ತಿ-ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು

ಮಂಗಳೂರು : ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಯೋಗಗುರು ಎಂ.ಜಗದೀಶ್ ಶೆಟ್ಟಿ ಬಿಜೈ ಇವರ ನೇತೃತ್ವದಲ್ಲಿ ಕೋಡಿಕಲ್ ಗುರುನಗರದ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಮಂದಿರ (ಎಸ್‌ಎನ್‌ಡಿಪಿ)ದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು.ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಾರ್ಯಕ್ರಮ ಉದ್ಘಾಟಿಸಿದರು. ಋಷಿ ಪರಂಪರೆಯಿಂದ ಪರಿಚಿತವಾದ ಯೋಗ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಇಡೀ ವಿಶ್ವಕ್ಕೆ ಪಸರಿಸಿದೆ. ನಿರಂತರ ಯೋಗಾಭ್ಯಾಸದಿಂದ ಬದುಕಿಗೆ ಸ್ಪೂರ್ತಿ ದೊರೆಯುತ್ತದೆ ಎಂದು ಅವರು ಹೇಳಿದರು.ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ನಿವೃತ್ತ ಅಪರ ಜಿಲ್ಲಾಧಿಕಾರಿ ಎಸ್.ಎ.ಪ್ರಭಾಕರ ಶರ್ಮ, ಕೋಡಿಕಲ್ ಎಸ್‌ಎನ್‌ಡಿಪಿ ಮಂದಿರದ ಅಧ್ಯಕ್ಷ ಪದ್ಮನಾಭ ಕಾರ್ನಾಡ್, ಕಾರ್ಪೋರೇಟರ್‌ಗಳಾದ ಕಿರಣ್ ಕೋಡಿಕಲ್, ಮನೋಜ್ ಕೋಡಿಕಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ರೆಡ್ ಕ್ರಾಸ್‌ನ ಖಜಾಂಚಿ ಮೋಹನ್ ಶೆಟ್ಟಿ, ಆಡಳಿತ ಮಂಡಳಿ ನಿರ್ದೇಶಕರಾದ ಡಾ.ಸುಮನ ಬೋಳಾರ್, ಗುರುದತ್ ನಾಯಕ್, ಪಿ.ಬಿ.ಹರೀಶ್ ರೈ, ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ ಉಪಸ್ಥಿತರಿದ್ದರು. ಯೋಗಗುರು ಎಂ.ಜಗದೀಶ್ ಶೆಟ್ಟಿ ಬಿಜೈ ಅವರನ್ನು ರೆಡ್‌ಕ್ರಾಸ್ ವತಿಯಿಂದ ಸನ್ಮಾನಿಸಲಾಯಿತು. ಡಾ.ಉಮ್ಮಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಜೊತೆಯಾಗೋಣ : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದನಾಗಿ ಆಯ್ಕೆಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರನ್ನು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಗಳೂರಿನ ಯುದ್ಧ ಸ್ಮಾರಕವನ್ನು ಪಾಲಿಕೆಯ ವತಿಯಿಂದ ಅಭಿವೃದ್ಧಿಪಡಿಸಲು ಮಂಗಳೂರಿನ ಪ್ರಥಮ ಪ್ರಜೆ‌ ಮತ್ತು ನಗರದ ಜನಪ್ರತಿನಿಧಿಗಳಿಗೆ ಸಭೆಯಲ್ಲಿ ಪ್ರಸ್ತಾಪ ಮಾಡಿದರು. ಈ ಸಂದರ್ಭದಲ್ಲಿ ಮ.ನ.ಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ, ಸಚೇತಕರಾದ ಪ್ರೇಮಾನಂದ ಶೆಟ್ಟಿ, ಪ್ರತಿಪಕ್ಷ ನಾಯಕರಾದ ಪ್ರವೀಣ್ ಚಂದ್ರ ಆಳ್ವ, ಮ.ನ.ಪಾ ಆಯುಕ್ತರಾದ ಆನಂದ್, ಪಾಲಿಕೆಯ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಗಣೇಶ್ ಕುಲಾಲ್, ಲೋಹಿತ್ ಅಮೀನ್, ವರುಣ್ ಚೌಟ, ಭರತ್‌ಕುಮಾರ್, ವಿರೋಧ ಪಕ್ಷದ ನಾಯಕ ಪ್ರವೀಣಚಂದ್ರ ಆಳ್ವ, ಮ.ನ.ಪಾ ಸದಸ್ಯರು ಮತು ಅಧಿಕಾರಿಗಳು ಉಪಸ್ಥಿತರಿದ್ದರು.

Scroll to Top