ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

“ತುಳು ಭಾಷೆ ಉಳಿವಿಗೆ ಯುವಕರ ಶ್ರಮ ಶ್ಲಾಘನೀಯ” -ಯು.ಟಿ. ಖಾದರ್. ರೂಪೇಶ್ ಶೆಟ್ಟಿ ಹೊಸ ತುಳು ಚಿತ್ರ “ಜೈ” ಟೈಟಲ್ ಅನಾವರಣ ಕಾರ್ಯಕ್ರಮ

ಮಂಗಳೂರು: ಬಿಗ್ ಬಾಸ್ ರೂಪೇಶ್ ಶೆಟ್ಟಿ ಹಾಗೂ ತಂಡದ ತುಳು ಚಲನ ಚಿತ್ರ “ಜೈ” ಇದರ ಟೈಟಲ್ ಅನಾವರಣ ಕಾರ್ಯಕ್ರಮ ಆದಿತ್ಯವಾರ ಸಂಜೆ ಸಿಟಿ ಸೆಂಟರ್ ಮಾಲ್ ನಲ್ಲಿ ಜರುಗಿತು. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಮಂಗಳೂರು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಬಳಿಕ ಮಾತಾಡಿದ ಸ್ಪೀಕರ್ ಯು.ಟಿ.ಖಾದರ್ ಅವರು, “ಹಿಂದೆ ತುಳು ಭಾಷೆ ನಮ್ಮ ಜಿಲ್ಲೆಗೆ ಮಾತ್ರ ಸೀಮಿತ ಎಂಬ ಮಾತಿತ್ತು. ಆದರೆ ಇಂದು ತುಳು ರಂಗಭೂಮಿ ಮತ್ತು ಸಿನಿಮಾರಂಗದಿಂದಾಗಿ ವಿದೇಶಗಳಲ್ಲೂ ತುಳು ಭಾಷೆ ಪ್ರಚಾರವಾಗುತ್ತಿದೆ. ರೂಪೇಶ್ ಶೆಟ್ಟಿ ಅವರಂತಹ ಯುವಕರು ಇಂದು ತುಳು ಭಾಷೆಯ ಬೆಳವಣಿಗೆಗೆ ಶ್ರಮಪಡುತ್ತಿದ್ದಾರೆ ಅವರಿಗೆ ಶುಭಾಶಯಗಳು. ಸಿನಿಮಾ ಒಳ್ಳೆಯ ರೀತಿಯಲ್ಲಿ ಮೂಡಿಬಂದು ಜನರ ಮನ ಗೆಲ್ಲಲಿ“ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.ಸಂಸದ ಬೃಜೇಶ್ ಚೌಟ ಮಾತನಾಡಿ, ”ತುಳು ಭಾಷೆಯ ಮೇಲೆ ಮಮತೆ ಇಟ್ಟು ಸಿನಿಮಾ ಮಾಡಿದ್ದಾರೆ. ಇಂದು ಬಿಡುಗಡೆಯಾದ ಟೈಟಲ್ ಟೀಸರ್ ಭರವಸೆ ಹುಟ್ಟಿಸುವಂತಿದೆ, ಎಲ್ಲರಿಗೂ ಶುಭವಾಗಲಿ“ಎಂದರು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ”ಸಿನಿಮಾದ ಟೀಸರ್ ಅದ್ಭುತವಾಗಿ ಮೂಡಿಬಂದಿದೆ. ಇವತ್ತು ಒನ್ಸ್ ಮೋರ್ ಎಂದರೆ ಪ್ರಯೋಜನವಿಲ್ಲ ಸಿನಿಮಾ ಬಂದಾಗ ತುಳುವರು ಸಿನಿಮಾ ಥಿಯೇಟರ್ ಹೋಗಿ ಸಿನಿಮಾ ನೋಡಿ ಜೈ ಹೇಳಬೇಕು ಆಗ ಅವರ ಶ್ರಮ ಸಾರ್ಥಕ“ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತೆಲಿಕೆದ ಬೊಳ್ಳಿ ದೇವದಾಸ ಕಾಪಿಕಾಡ್, ಪ್ರಕಾಶ್ ಪಾಂಡೇಶ್ವರ್, ಪಮ್ಮಿ ಕೊಡಿಯಾಲ್ ಬೈಲ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಭೋಜರಾಜ ವಾಮಂಜೂರು, ಶರ್ಮಿಳಾ ಕಾಪಿಕಾಡ್, ತಮ್ಮ ಲಕ್ಷ್ಮಣ್, ಲಕ್ಷ್ಮಣಕುಮಾರ್ ಮಲ್ಲೂರು, ತಾರಾನಾಥ ಶೆಟ್ಟಿ ಬೋಳಾರ, ಪ್ರೇಮ್ ಶೆಟ್ಟಿ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ‌ ನಿರ್ವಹಿಸಿದರು.ಜೈ ತುಳು ಸಿನಿಮಾ ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿದೆ. ರೂಪೇಶ್ ಶೆಟ್ಟಿ ನಿರ್ದೇಶನದ ಸಿನಿಮಾಕ್ಕೆ ಪ್ರಸನ್ನ ಶೆಟ್ಟಿ ಬೈಲೂರು ಕತೆ, ಸಂಭಾಷಣೆ ರಚಿಸಿದ್ದಾರೆ. ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನೃತ್ಯ ನವೀನ್ ಶೆಟ್ಟಿ ಆರ್ಯನ್ಸ್, ನಿರ್ಮಾಪಕರು ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ, ಸಹ ನಿರ್ಮಾಪಕರು ದೀಕ್ಷಿತ್ ಆಳ್ವ, ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ನವೀನ್ ಶೆಟ್ಟಿ.‘ಜೈ ಒಯಿಕ್ಲಾ ಸೈ” ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮೊದಲಾದವರು ಅಭಿನಯಿಸಲಿದ್ದು, ಉಳಿದ ತಾರಾಗಣದ ಆಯ್ಕೆ ನಡೆಯಲಿದೆ. ಅಕ್ಟೋಬರ್ ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ.

ಪ್ರಾದೇಶಿಕ ವಾರ್ತೆಗಳು

“ಕಾಂಗ್ರೆಸ್ ಗೂಂಡಾ ರಾಜಕಾರಣ ಹೊಸದೇನೂ ಅಲ್ಲ“-ಡಾ.ವೈ.ಭರತ್ ಶೆಟ್ಟಿ

ಮಂಗಳೂರು: ”ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೂಂಡಾ ಸಂಸ್ಕೃತಿ ರಾಜಕಾರಣ ಹೊಸದೇನೂ ಅಲ್ಲ. ಅದರ ಮುಂದುವರಿದ ಭಾಗವಾಗಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಬಸ್ಸಿಗೆ ಕಲ್ಲು ತೂರಾಟ ಮಾಡುವುದು, ಟೈರ್ ಗೆ ಬೆಂಕಿ ಹಚ್ಚುವುದು ಮಾಡಿದ್ದಾರೆ. ಇದು ರಾಜ್ಯದಲ್ಲಿ ಪಶ್ಚಿಮ ಬಂಗಾಲ ಮಾದರಿಯಲ್ಲಿ ಹಿಂಸಾಕೃತ್ಯ ನಡೆಸುವುದರ ಪೂರ್ವಸೂಚನೆಯಾಗಿದೆ“ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.”ಸಾರ್ವಜನಿಕರು ಸಂಚರಿಸುವ ಬಸ್ಸಿಗೆ ಕಲ್ಲು ತೂರಾಟ ನಡೆಸಿ ಪ್ರಯಾಣಿಕರಿಗೆ ಗಾಯವಾಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಘಟನೆಯಲ್ಲಿ ಒಬ್ಬ ನಾಮ ನಿರ್ದೇಶಿತ ಮನಪಾ ಕಾರ್ಪೋರೇಟರ್ ಮತ್ತೊಬ್ಬ ಗ್ರಾಮ ಪಂಚಾಯತ್ ಸದಸ್ಯ ಸೇರಿದ್ದಾರೆ. ಅವರು ಪೊಲೀಸ್ ಠಾಣೆಯಲ್ಲಿ ತಾವೇ ಕಲ್ಲು ಎಸೆದಿದ್ದೇವೆ ನೀವೇನು ಮಾಡುತ್ತೀರಿ ಎಂದು ಬೆದರಿಕೆ ಹಾಕಿದ್ದರೂ ಪೊಲೀಸರು ಸುಮ್ಮನಿರುವುದೇಕೆ” ಎಂದು ಭರತ್ ಶೆಟ್ಟಿ ಕಿಡಿಕಾರಿದ್ದಾರೆ. “ಇಲ್ಲಿ ಕಲ್ಲು ತೂರಾಟ ಮಾಡಲು ಕಲ್ಲು ಎಲ್ಲಿಂದ ಬಂತು? ನಾಲ್ಕೈದು ಟೈರ್ ಎಲ್ಲಿಂದ ತಂದರು? ಐವನ್ ಡಿಸೋಜ ನಾಯಕತ್ವದಲ್ಲಿ ಗಲಾಟೆ ಆಯ್ತು ಎಂದು ಪೊಲೀಸರು ಸುಮ್ಮನಾದ್ರಾ? ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಇಂತಹ ಕೃತ್ಯಗಳಿಗೆ ಪೊಲೀಸರು ಕಡಿವಾಣ ಹಾಕದೇ ಇದ್ದರೆ ಮುಂದೆ ಬೇರೆ ಪಕ್ಷ, ಸಾಮಾಜಿಕ ಸಂಘಟನೆಗಳು ಕೂಡ ಇದೇ ತರಾ ಕಲ್ಲು ತೂರಾಟ, ಟೈರ್ ಬೆಂಕಿ ಹಚ್ಚಬಹುದು. ಇದು ಗಲಭೆ ಸೃಷ್ಟಿಗೆ ಪೂರ್ವಯೋಜಿತ ಕೃತ್ಯ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಐವನ್ ಡಿಸೋಜ ಮತ್ತು ಇತರರ ಮೇಲೆ ಕ್ರಮ ಯಾಕೆ ಕೈಗೊಂಡಿಲ್ಲ? ಬಾಂಗ್ಲಾ ದೇಶದಲ್ಲಿ ಆದಂತೆ ಇಲ್ಲೂ ಆಗುತ್ತದೆ ಎಂದಿರುವ ಐವನ್ ರಾಷ್ಟ್ರ ದ್ರೋಹದ ಮಾತಾಡಿದ್ದಾರೆ. ಅವರ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಲಿದ್ದೇವೆ“ ಎಂದು ಭರತ್ ಶೆಟ್ಟಿ ಆರೋಪಿಸಿದ್ದಾರೆ.ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಣ್ ದೀಪ್ ಕಾಂಚನ್, ಸಂದೀಪ್ ಪಚ್ಚನಾಡಿ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ, ಮಂಡಲ ಮಾದ್ಯಮ ಪ್ರಮುಖ್ ಶ್ರವಣ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

“ಪಡುಬಿದ್ರೆ-ಕಾರ್ಕಳ ಟೋಲ್ ನಿರ್ಮಾಣದ ವಿರುದ್ಧ ಪ್ರತಿಭಟನೆಗೆ ಬಸ್ ಮಾಲಕರ ಸಂಘ ಬೆಂಬಲ“-ಸುದೇಶ್ ಮರೋಳಿ

ಮಂಗಳೂರು: ”ಪಡುಬಿದ್ರೆ-ಕಾರ್ಕಳ ಹೆದ್ದಾರಿಯಲ್ಲಿ ಕಂಚಿನಡ್ಕ ಬಳಿ ಟೋಲ್ ನಿರ್ಮಾಣ ಮಾಡಲು ಮುಂದಾಗಿರುವ ಕ್ರಮವನ್ನು ಕೆನರಾ ಬಸ್ ಮಾಲಕರ ಅಸೋಸಿಯೇಷನ್ ಖಂಡಿಸುತ್ತಿದ್ದು ಇದರ ವಿರುದ್ಧ ಯಾವುದೇ ರೀತಿಯ ಪ್ರತಿಭಟನೆಗೆ ಸಂಘಟನೆ ಸಿದ್ಧವಾಗಿದೆ“ ಎಂದು ಸಂಘಟನೆಯ ಕಾರ್ಯದರ್ಶಿ ಸುದೇಶ್ ಮರೋಳಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.”ಕೇಂದ್ರ ಸರಕಾರದ ನಿಯಮಗಳ ಅನ್ವಯ ಹೆದ್ದಾರಿಯಲ್ಲಿ 60 ಕಿಮೀ ಅಂತರದಲ್ಲಿ ಟೋಲ್ ಗೇಟ್ ನಿರ್ಮಾಣ ಮಾಡಲು ಅವಕಾಶವಿಲ್ಲ. ಆದರೆ ಹೆಜಮಾಡಿ ಟೋಲ್ ಗೇಟ್ ಇಲ್ಲಿಂದ 6 ಕಿಮೀ ದೂರದಲ್ಲಿದ್ದು ಇದರಿಂದ ಸಾರ್ವಜನಿಕರಿಗೆ ಭಾರೀ ಹೊರೆ ಬೀಳಲಿದೆ. 2018ರಲ್ಲಿ ಬೆಳ್ಮಣ್ ಬಳಿ ಇದೇ ರೀತಿ ಟೋಲ್ ನಿರ್ಮಾಣಕ್ಕೆ ಮುಂದಾದಾಗ ನಾವು ಉಗ್ರ ಪ್ರತಿಭಟನೆ ನಡೆಸಿದ್ದೆವು. ಆಗ ಇಲ್ಲಿಂದ ಹೋಗಿದ್ದ ಟೋಲ್ ಮತ್ತೆ ಕಂಚಿನಡ್ಕ ಬಳಿ ತೆರೆಯಲು ಮುಂದಾಗಿದೆ. ಇದು ರಾಜ್ಯ ಹೆದ್ದಾರಿ ಆಗಿರುವ ಕಾರಣ ಜನರನ್ನು ಯಾಮಾರಿಸಲು ಸರಕಾರ ಮುಂದಾಗಿದೆ” ಎಂದವರು ಆರೋಪಿಸಿದರು.“ಮುಂದೆ ಬರಲಿರುವ ಟೋಲ್ ನಲ್ಲಿ ದ್ವಿಚಕ್ರ ವಾಹನಗಳಿಗೆ 30 ರೂ. ಮತ್ತು ಕಾರ್ ಗಳಿಗೆ 50 ರೂ., ಬಸ್ ಗಳಿಗೆ 100 ರೂ. ಸುಂಕ ವಸೂಲಿ ಮಾಡಲು ಮುಂದಾಗಿದೆ. ಇದರ ವಿರುದ್ಧ ಆಗಸ್ಟ್ 24ರಂದು ಪ್ರತಿಭಟನೆ ನಡೆಯಲಿದ್ದು ಇದಕ್ಕೆ ಬಸ್ ಮಾಲಕರ ಸಂಘ ಬೆಂಬಲ ನೀಡುತ್ತದೆ” ಎಂದು ಅವರು ಹೇಳಿದ್ದಾರೆ.ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಕೋಶಾಧಿಕಾರಿ ಪ್ರಸಾದ್ ಹೆಗ್ಡೆ, ಸದಸ್ಯ ಜಯರಾಮ ಶೆಟ್ಟಿ, ಉಪಾಧ್ಯಕ್ಷ ಜೀವಂಧರ್ ಅಧಿಕಾರಿ, ದುರ್ಗಾ ಪ್ರಸಾದ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.ಚಿತ್ರ: ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಆಗೋಸ್ಟ್ 23 ರಂದು “ಅನರ್ಕಲಿ” ತುಳು ಸಿನಿಮಾ ತೆರೆಗೆ

ಮಂಗಳೂರು: ಲಕುಮಿ ಸಿನಿ ಕ್ರಿಯೇಷನ್ ಮತ್ತು ಲೋ ಬಜೆಟ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಹರ್ಷಿತ್ ಸೊಮೇಶ್ವರ ನಿರ್ದೇಶನದಲ್ಲಿ ತಯಾರಾದ “ಅನರ್ ಕಲಿ” ತುಳು ಸಿನಿಮಾದ ಪತ್ರಿಕಾಗೋಷ್ಠಿ ಸೋಮವಾರ ಸಂಜೆ ನಗರದಲ್ಲಿ ನಡೆಯಿತು.ಮಾಧ್ಯಮವನ್ನುದ್ದೇಶಿಸಿ ಮಾತಾಡಿದ ಲಯನ್ ಕಿಶೋರ್ ಡಿ ಶೆಟ್ಟಿ ಅವರು, “ಅನರ್ಕಲಿ ಸಿನಿಮಾ ಈಗಾಗಲೇ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ನಮ್ಮ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಿನಿಮಾ ಕುರಿತು ತುಳುನಾಡಿನಲ್ಲಿ ಒಳ್ಳೆಯ ಮಾತು ಕೇಳಿಬರುತ್ತಿದೆ. ಇದು ನಮ್ಮ ಚಿತ್ರತಂಡಕ್ಕೆ ಖುಷಿ ತಂದಿದೆ. ನಾಡಿದ್ದು ಆಗಸ್ಟ್ 23ರಂದು ಸಿನಿಮಾ ಬಿಡುಗಡೆಯಾಗಲಿದ್ದು ತುಳುವರು ಸಿನಿಮಾ ನೋಡಿ ನಮ್ಮನ್ನು ಗೆಲ್ಲಿಸಬೇಕು” ಎಂದರು.ನಟ ಶೋಭರಾಜ್ ಪಾವೂರು ಮಾತನಾಡಿ, “ಇದೊಂದು ಪರಿಶುದ್ಧವಾದ ತುಳು ಸಿನಿಮಾ. ಈ ಸಿನಿಮಾ ಹಿಂದೆ ಬಂದಿಲ್ಲ ಹಾಗಿದೆ ಹೀಗಿದೆ ಎಂದು ಸುಮ್ಮನೆ ಹೇಳುವುದಿಲ್ಲ. ಆದರೆ ಈ ಸಿನಿಮಾ ನೋಡಿದ ಬಳಿಕ ಎರಡು ದಿನಗಳಾದರೂ ನಿಮ್ಮನ್ನು ಕಾಡುತ್ತದೆ. ನಿಮ್ಮ ಹಣಕ್ಕೆ ಖಂಡಿತಾ ಲಾಸ್ ಆಗುವುದಿಲ್ಲ“ ಎಂದರು.ನಟಿ ಆರ್ ಜೆ ಮಧುರಾ ಮಾತನಾಡಿ, ”ಸಿನಿಮಾ ನೋಡಿದವರು ತುಂಬಾ ಚೆನ್ನಾಗಿದೆ ಎಂದು ಬೆನ್ನುತಟ್ಟಿದ್ದಾರೆ. ತುಳುವರು ಥಿಯೇಟರ್ ಗೆ ಬಂದು ಸಿನಿಮಾ ನೋಡಿದಲ್ಲಿ ನಾವು ಇನ್ನಷ್ಟು ಕಡಿಮೆ ಬಜೆಟ್ ನಲ್ಲಿ ಸಿನಿಮಾ ಮಾಡಲು ಸಾಧ್ಯ. ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು“ ಎಂದರು.ನಿರ್ದೇಶಕ ಹರ್ಷಿತ್ ಸೋಮೇಶ್ವರ ಮಾತನಾಡಿ, ”ನೀವು ತಲೆ ಖಾಲಿ ಇಟ್ಟುಕೊಂಡು ಸಿನಿಮಾ ನೋಡಲು ಬನ್ನಿ. ಯಾಕೆಂದರೆ ಈ ಸಿನಿಮಾದಲ್ಲಿ 2 ಗಂಟೆ 10 ನಿಮಿಷಗಳ ಕಾಲ ನಿಮ್ಮನ್ನು ರಂಜಿಸಲು ಏನೆಲ್ಲಾ ಬೇಕೋ ಅದೆಲ್ಲವನ್ನು ತೋರಿಸಿದ್ದೇವೆ. ಹೀಗಾಗಿ ತುಳು ಭಾಷೆ ತುಳು ಸಿನಿಮಾವನ್ನು ಉಳಿಸಲು ಎಲ್ಲರೂ ಒಂದಾಗಿ ನಮ್ಮ ಸಿನಿಮಾ ನೋಡಿ ಬೆಂಬಲಿಸಿ“ ಎಂದು ಹೇಳಿದರು.ವೇದಿಕೆಯಲ್ಲಿ ಅರುಣ್ ರೈ ಪುತ್ತೂರು, ವಾತ್ಸಲ್ಯ, ಲಂಚುಲಾಲ್, ರಜನೀಶ್ ಕೋಟ್ಯಾನ್, ರೋಹಿತ್, ಮೋಹನ್ ಕೊಪ್ಪಲ ಮತ್ತಿತರರು ಉಪಸ್ಥಿತರಿದ್ದರು. “ಅನರ್ ಕಲಿ” ಸಿನಿಮಾ ಒಂದೇ ಹಂತದಲ್ಲಿ 18 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಪೊಳಲಿ, ಕಟೀಲು, ಸೋಮೇಶ್ವರ, ಉಳ್ಳಾಲ, ಉಳಿಯ, ನೀರ್ ಮಾರ್ಗ, ಹಾಗೂ ಕಳಸದಲ್ಲಿ ಸಿನಿಮಾಕ್ಕೆ ಚಿತ್ರೀಕರಣ ನಡೆದಿದೆ.ಮುಖ್ಯವಾಗಿ ಸಿನಿಮಾದಲ್ಲಿ ಒಂದು ಕಥಾಹಂದರವನ್ನು ಇಟ್ಟುಕೊಂಡು ಸಂಪೂರ್ಣ ಹಾಸ್ಯಭರಿತವಾಗಿ ಸಿನಿಮಾ ಸಾಗಿದೆ. ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ದೀಪಕ್ ಪಾಣಾಜೆ, ರವಿ ರಾಮಕುಂಜ, ಪುಷ್ಪರಾಜ್ ಬೊಳ್ಳೂರು, ಸುಜಾತ ಶಕ್ತಿನಗರ, ನಮಿತಾ ಕುಳೂರು ಮುಖ್ಯ ಭೂಮಿಕೆಯಲ್ಲಿದ್ದಾರೆ. ನಾಯಕ ನಟನಾಗಿ ವಿಜಯ್ ಶೋಭರಾಜ್ ಪಾವೂರು, ನಾಯಕಿಯಾಗಿ ಮಧುರ ಆರ್ ಜೆ ಅಭಿನಯಿಸಿದ್ದಾರೆ. ಇನ್ನುಳಿದಂತೆ ಮೋಹನ್ ಕೊಪ್ಪಲ, ಹರ್ಷಿತ್ ಸೋಮೇಶ್ವರ, ಮಂಜು ರೈ ಮುಳೂರು, ರಂಜನ್ ಬೋಳೂರು ಶರಣ್ ಕೈಕಂಬ, ಪ್ರಕಾಶ್ ಶೆಟ್ಟಿ ಧರ್ಮನಗರ, ಮಧುರ ಆರ್.ಜೆ ವಾತ್ಸಲ್ಯ ಸಾಲಿಯಾನ್ , ವಿನಾಯಕ್ ಜೆಪ್ಪು ತಾರಾಗಣದಲ್ಲಿದ್ದಾರೆ.ಛಾಯಾಗ್ರಹಣ ಅನಿಲ್ ಕುಮಾರ್, ಅರುಣ್ ರೈ ಪುತ್ತೂರು, ಸಹಾಯಕ ಛಾಯಾಗ್ರಹಣ ಚರಣ್ ಆಚಾರ್ಯ, ಪ್ರಜ್ವಲ್ ಸುವರ್ಣ, ಸಂಗೀತ ರೋಹಿತ್ ಪೂಜಾರಿ, ಕಾರ್ಯಕಾರಿ ನಿರ್ಮಾಪಕರು ಮಹೇಶ್ ಪುತ್ತೂರು, ವೀರ ಕೇಸರಿ, ನಿರ್ಮಾಣ ನಿರ್ವಹಣೆ ವಾತ್ಸಲ್ಯ ಸಾಲಿಯಾನ್, ವರ್ಣಾಲಂಕಾರ ಚೇತನ್ ಕಲ್ಲಡ್ಕ, ಸಹಾಯಕ ವರ್ಣಾಲಂಕಾರ ಸವ್ಯರಾಜ್ ಕಲ್ಲಡ್ಕ, ಚರಣ್ ರಾಜ್ ಪಚ್ಚಿನಡ್ಕ, ಕಲಾ ನಿರ್ದೇಶನ ಭರತ್ ತುಳುವ, ಸಹ ನಿರ್ದೇಶಕವೀರಕೇಸರಿ, ಭರತ್ ತುಳುವ, ವಿವೇಕ್ ಶೆಟ್ಟಿ, ಸಹಾಯಕ ನಿರ್ದೇಶಕರು ಸುದೇಶ್ ಪೂಜಾರಿ, ಮೋಕ್ಷಿತ್ ಕನಕಮಜಲು ಪವಿತ್ರಪ್ರಭು, ಅಮಿತ್, ಕೀರ್ತನ್ ರೈ ಸುಳ್ಯ, ವಸ್ತ್ರ ವಿನ್ಯಾಸ ಸವಿತ ಶೇಖರ್ ವಿದ್ಯಾ ಉಚ್ಚಿಲ್, ನೃತ್ಯ ನಿರ್ದೇಶನ ಶಶಾಂಕ್ ಸುವರ್ಣ, ಸಾಹಿತ್ಯ ಸುದೇಶ್ ಪೂಜಾರಿ, ಹರ್ಷಿತ್ ಸೋಮೇಶ್ವರ, ಹಿನ್ನಲೆ ಗಾಯನ ನಕುಲ್ ಅಭಯಂಕರ್, ಅರ್ಫಾಜ್ ಉಳ್ಳಾಲ್, ಸತೀಶ್ ಪಟ್ಲ, ಸೃಜನ್ ಕುಮಾರ್ ತೋನ್ಸೆ, ರೋಹಿತ್ ಪೂಜಾರಿ, ವಾತ್ಸಲ್ಯ ಸಾಲಿಯಾನದ, ಸೌಜನ್ಯ. ಪ್ರಚಾರ ವಿನ್ಯಾಸ ಪವನ್ ಆಚಾರ್ಯ ಬೋಳೂರು,ರಚನೆ ಮತ್ತು ನಿರ್ದೇಶನ ಹರ್ಷಿತ್ ಸೋಮೇಶ್ವರ, ನಿರ್ಮಾಣ ಲಂಚ್ ಲಾಲ್, ಲೋಬಜೆಟ್ ಪ್ರೊಡಕ್ಷನ್, ಸಹ ನಿರ್ಮಾಣ: ಕಿಶೋರ್ ಡಿ ಶೆಟ್ಟಿ, ರಜನೀಶ್ ಕೋಟ್ಯಾನ್.“ಅನರ್ ಕಲಿ” ಸಿನಿಮಾ ಆಗೋಸ್ಟ್ 23 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.

ಪ್ರಾದೇಶಿಕ ವಾರ್ತೆಗಳು

ಕಲ್ಜಿಗ ಚಿತ್ರದ ಟ್ರೇಲರ್ ಬಿಡುಗಡೆ. ಸೆ.13 ರಂದು ಸಿನಿಮಾ ತೆರೆಗೆ

ಮಂಗಳೂರು: ಕರಾವಳಿ ಸೀಮೆಯಿಂದ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಅನೇಕರು ಆಗಮಿಸಿದ್ದಾರೆ. ಗೆಲುವನ್ನೂ ದಾಖಲಿಸಿದ್ದಾರೆ. ಇದೀಗ ಕಲ್ಜಿಗ’ ಎಂಬ ಚಿತ್ರದ ಮೂಲಕ ಮತ್ತೊಂದು ತಂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಶೀರ್ಷಿಕೆಯಲ್ಲಿಯೇ ಕೌತುಕ ಬೆರೆತ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಂತಿರುವ ಈ ಚಿತ್ರದ ಟ್ರೇಲರ್ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಅನಾವಣಗೊಂಡಿದೆ. ಚಿತ್ರತಂಡ, ನಾನಾ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಕಲ್ಜಿಗದ ಟ್ರೇಲರ್ ಬಿಡುಗಡೆಗೊಂಡಿದೆ. ಹಿಮಾನಿ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಕಲ್ಜಿಗ ಚಿತ್ರವನ್ನು ಸುಮನ್ ಸುವರ್ಣ ನಿರ್ದೇಶನ ಮಾಡಿದ್ದಾರೆ. ಶರತ್ ಕುಮಾರ್ ವಿ.ಕೆ ನಿರ್ಮಾಪಕರಾಗಿದ್ದಾರೆ. ಭಾರತ್ ಸಿನಿಮಾಸ್ ನಲ್ಲಿ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಅಶೋಕ್ ರೈ, ಮಾಜಿ ಸಚಿವ ಬಿ ರಮಾನಾಥ ರೈ, ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಗೋಪಿನಾಥ್ ಭಟ್, ಮಾನಸಿ ಸುಧೀರ್, ಅರ್ಜುನ್ ಕಾಪಿಕಾಡ್, ಪ್ರಸಾದ್ ಶೆಟ್ಟಿ, ಸಚಿನ್ ಶೆಟ್ಟಿ, ಮುನೀರ್ ಕಾಟಿಪಳ್ಳ, ಜ್ಯೋತಿಷ್ ಶೆಟ್ಟಿ, ರೂಪ ವರ್ಕಾಡಿ, ನಿರ್ಮಾಪಕ ಶರತ್ ಕುಮಾರ್, ಸುಮನ್ ಸುವರ್ಣ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೈವ ನರ್ತಕರಾದ ಮಾಯಿಲ ಕುತ್ತಾರು, ರಾಘವ ಕುತ್ತಾರು ಹಾಗೂ ಜನಪದ ಪಾಡ್ದನ ಗಾಯಕರಾದ ಕುತ್ತಾರು ತಿಮ್ಮಕ್ಕ ಇವರನ್ನು ಚಿತ್ರತಂಡದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ವಿಶೇಷವೆಂದರೆ, ಬಹು ಕಾಲದ ನಂತರ ನಾದಬ್ರಹ್ಮ ಹಂಸಲೇಖ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶನಕ್ಕೆ ಮರಳಿದ್ದಾರೆ. ಗೀತರಚನೆಯತ್ತಲೂ ಕೈಯಾಡಿಸಿದ್ದಾರೆ. ಇನ್ನುಳಿದಂತೆ ಗಿರ್ ಗಿಟ್, ಸರ್ಕಸ್, ಗಮ್ಜಾಲ್ ಮುಂತಾದ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಸುಮನ್ ಸುವರ್ಣ ಕಲ್ಜಿಗ’ದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತುಳು ಚಿತ್ರರಂಗದಲ್ಲಿ ಕಿಂಗ್ ಆಫ್ ಆಕ್ಷನ್ ಎಂಬ ಬಿರುದಾಂಕಿತರಾಗಿರುವ ನಟ ಅರ್ಜುನ್ ಕಾಪಿಕಾಡ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಅಪ್ಪಟ ಕನ್ನಡತಿ ಸುಶ್ಮಿತಾ ಭಟ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಎಸ್. ಕೆ ಗ್ರೂಪ್ ಎಂಬ ಮಾರ್ಕೆಟಿಂಗ್ ಸಂಸ್ಥೆಯ ಮಾಲೀಕರಾಗಿರುವ ಶರತ್ ಕುಮಾರ್ ಎ.ಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಟರಾದ ಗೋಪಿನಾಥ್ ಭಟ್ , ಜ್ಯೋತಿಷ್ ಶೆಟ್ಟಿ , ಮಾನಸಿ ಸುಧೀರ್ , ವಿಜಯ್ ಶೋಭರಾಜ್ ಪಾವೂರ್ , ಶ್ಲಾಘಾ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ .ಸದ್ಯದ ಮಟ್ಟಿಗೆ ಕಲ್ಜಿಗದ ಆಂತರ್ಯವನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಉಡುಪಿ, ಮಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆಪ್ಟಂಬರ್ 13 ರಂದು ಕಲ್ಜಿಗ ರಾಜ್ಯಾದ್ಯಂತ ತೆರೆಕಾಣಲಿದೆ. ಮಂಗಳೂರು ಸೀಮೆಯ ಕನ್ನಡ ಭಾಷಾ ಶೈಲಿಯಲ್ಲಿ ಚಿತ್ರ ತಯಾರಾಗಿದೆ. ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರದಲ್ಲಿ ಘಟಿಸುವ ರೋಚಕ ಕಥನ ಕಲ್ಜಿಗದಲ್ಲಿದೆ. ಹಂಸಲೇಖ ಸಂಗೀತ- ಸಾಹಿತ್ಯ , ಸಚಿನ್ ಶೆಟ್ಟಿ ಛಾಯಾಗ್ರಹಣ , ಪ್ರಸಾದ್ ಕೆ ಶೆಟ್ಟಿ ಹಿನ್ನೆಲೆ ಸಂಗೀತ , ಯಶ್ವಿನ್ ಕೆ ಶೆಟ್ಟಿಗಾರ್ ಸಂಕಲನ ಈ ಚಿತ್ರಕ್ಕಿದೆ. ಕಾಂತಾರ ಖ್ಯಾತಿಯ ಸನೀಲ್ ಗುರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ , ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಂದೀಪ್ ಶೆಟ್ಟಿ `ಕಲ್ಜಿಗ’ಕ್ಕೆ ಕೈ ಜೋಡಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಪುರಭವನದಲ್ಲಿ ಶ್ರಾವಣ ಸಂಭ್ರಮ

ಆಷಾಡದ ಬಿರುಸಿನ ಮಳೆಯ ಸಂಕಷ್ಟಗಳನ್ನು ಮನೆಯ ಒಳಗೆ ಅನುಭವಿಸಿ ಪರಿಸರದ ಬದುಕಿಗೆ ತೆರೆದುಕೊಳ್ಳುವ ಮೂಲಕ ಹಬ್ಬ ಹರಿದಿನಗಳಲ್ಲಿ ಸಂತೋಷ ಕಂಡುಕೊಳ್ಳುವುದಕ್ಕೇ ಶ್ರಾವಣ ಬಂದಿದೆ. ಹೆಂಗಸರೆಲ್ಲ ವರಮಹಾಲಕ್ಷ್ಮಿಯನ್ನು ಪೂಜಿಸಿ, ಮನೆ ಮತ್ತು ಮನಸಿನ ಸಂಕಟಗಳನ್ನು ಕಳೆಯಲು ಉಪವಾಸ ವೃತಗಳನ್ನು ಕೈಗೊಳ್ಳುವ ಈ ತಿಂಗಳ ದಿನಗಳು ಎಲ್ಲರ ಸಂಭ್ರಮದ ದಿನಗಳಾಗಿರುತ್ತವೆ ಎಂದು ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಸುಲೋಚನ ಪಚಿನಡ್ಕ ರವರು ಹೇಳಿದರು.ಅವರು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು 16-08-2024 ರಂದು ಮಂಗಳೂರು ಪುರಭವನದಲ್ಲಿ ಆಯೋಜಿಸಿದ್ದ “ಶ್ರಾವಣ ಸಂಭ್ರಮ” ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾದರೂ ಕಲೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಇರುವವರ ಸಂಖ್ಯೆ ಕಡಿಮೆಯಾಗದು. ಯಾವುದೇ ಕಾರ್ಯಕ್ರಮವಾದರೂ ಅದನ್ನು ವಿಶಿಷ್ಟ ರೀತಿಯಲ್ಲಿ ಆಯೋಜನೆ ಮಾಡುವ KSSAP ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ಹಿರಿಯ ಗೌರವ ಉಪನ್ಯಾಸಕ ವ. ಉಮೇಶ ಕಾರಂತ್‌ರವರಿಗೆ ಶಾಲು, ಹಾರ ಪೇಟ ತೊಡಿಸಿ ಫಲತಾಂಬೂಲ ಸನ್ಮಾನ ಫಲಕದೊಂದಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಿದ್ದರು. NSCDF ನ ಅಂತರರಾಷ್ಟ್ರೀಯ ವಕ್ತಾರೆ ಮಮ್ತಾ ಕೋಟ್ಯಾನ್ ಮುಂಬೈ ಉಪಸ್ಥಿತರಿದ್ದರು.ಡಾ. ಸುರೇಶ್ ನೆಗಳಗುಳಿಯವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ವೆಂಕಟೇಶ್ ಗಟ್ಟಿ, ದೀಪಾ ಚಿಲಿಂಬಿ, ಅನಿತಾ ಶೆಣೈ, ನಿಶಾನ್ ಅಂಚನ್, ಕೊಳ್ಚಪ್ಪೆ ಗೋವಿಂದ ಭಟ್, ಶಿವಪ್ರಸಾದ್ ಕೊಕ್ಕಡ, ಗುರುರಾಜ್ ಎಂ. ಆರ್, ಡಾ. ವಾಣಿಶ್ರೀ ಕಾಸರಗೋಡು, ಉಮೇಶ್ ಕಾರಂತ್, ಸುಲೋಚನ ನವೀನ್ ಮುಂತಾದ ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು. ಗಂಗಾಧರ್ ಗಾಂಧಿ ಕಾರ್ಯಕ್ರಮ ನಿರೂಪಿಸಿದರು.ಗಡಿನಾಡ ಕನ್ನಡತಿ ಡಾ.ವಾಣಿಶ್ರೀ ಮತ್ತು ಗುರುರಾಜ್ ಕಾಸರಗೋಡು ತಂಡದಿಂದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೀತ ಗಾಯನ ಹಾಗೂ ಯಕ್ಷನೃತ್ಯ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಪ್ರಾಥಮಿಕ ವಿದ್ಯಾರ್ಥಿನಿಯರ ವಿಭಾಗದಲ್ಲಿ ಇಶಾ ಅನ್ವಿ ತಂಡ ಪ್ರಥಮ.

ಮಂಗಳೂರು: ಪ್ರಾಥಮಿಕ ಮತ್ತು ಪಂದ್ಯಾವಳಿಯಲ್ಲಿ ಹೈಸ್ಕೂಲ್ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿಎಸ್.ವಿ.ಎಸ್ ದೇವಳ ಆಂಗ್ಲ‌ ಮಾಧ್ಯಮ ಶಾಲೆ ಬಂಟ್ವಾಳ ಎಲ್ಲಾ 4 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ.ಪ್ರಾಥಮಿಕ ಹುಡುಗಿಯರ ಪ್ರಥಮ,ಪ್ರಾಥಮಿಕ ಹುಡುಗರ ಪ್ರಥಮ,ಹೈಸ್ಕೂಲ್ ಹುಡುಗರ ಪ್ರಥಮ,ಹೈಸ್ಕೂಲ್ ಹುಡುಗಿಯರ ದ್ವಿತೀಯದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಸೇಕ್ರೆಡ್ ಹಾಟ್ಸ್ ೯ ಹಿ. ಪ್ರಾ. ಆಂಗ್ಲ ಮಾಧ್ಯಮ ಶಾಲೆ ಕುಲಶೇಖರ ಮಂಗಳೂರು ದಕ್ಷಿಣ ವಲಯ ಅವರ ಸಂಯುಕ್ತಾಶ್ರಯದಲ್ಲಿ ನಡೆದ ಪಂಧ್ಯಾವಳಿಸ್ಥಳ: ಸೇಕ್ರೆಡ್ ಹಾಟ್ಸ್೯ ಹಿ. ಪ್ರಾ. ಆಂಗ್ಲ ಮಾಧ್ಯಮ ಶಾಲೆ ಕುಲಶೇಖರ ಮಂಗಳೂರುಪ್ರಾಥಮಿಕ ವಿದ್ಯಾರ್ಥಿನಿಯರ ವಿಭಾಗದಲ್ಲಿ ಇಶ ಅನ್ವಿ, ದೃಷ್ಯ, ಸುಶ್ಮಿತ, ಆರಾಧ್ಯ, ಸಿದಿಕ್ಷ : ಪ್ರಥಮಪ್ರಾಥಮಿಕ ವಿದ್ಯಾರ್ಥಿಗಳ ವಿಭಾಗ ದಕ್ಷತ್, ರೋಹನ್, ಅನಂತ್ ರಾಮ್, ದಿಶಾಂತ್, ಸಮನ್ವಿತ್ : ಪ್ರಥಮಹೈಸ್ಕೂಲ್ ವಿದ್ಯಾರ್ಥಿಗಳ ವಿಭಾಗದಲ್ಲಿ ಯಶ್ ರಾಜ್, ಚಿನ್ಮಯಿ, ವಿಷ್ಣು, ಧ್ಯಾನ್, ಜಸ್ವಿನ್: ಪ್ರಥಮಹೈಸ್ಕೂಲ್ ವಿದ್ಯಾರ್ಥಿನಿಯರ ವಿಭಾಗದಲ್ಲಿ ವೈಭವಿ, ಮನ್ಮಿತ, ಆತ್ಮಿಕ, ನಿಷ್ಮಿತ, ಲಾಸ್ಯ: ದ್ವಿತೀಯಇವರುಗಳು ಆಟಗಾರರಾಗಿ ಭಾಗವಹಿಸಿದ್ದರುದೈಹಿಕ ಶಿಕ್ಷಕರುಗಳಾದ ವೇದಾವತಿ , ಮುರುಳೀಧರ್, ಚಂದ್ರಹಾಸ ಇವರುಗಳು ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಪರರ ಜೀವ ರಕ್ಷಣೆ ಶ್ರೇಷ್ಠ ಕಾರ್ಯ-ಸಿಎ ಶಾಂತಾರಾಮ ಶೆಟ್ಟಿ

ಮಂಗಳೂರು: ಪರರ ಜೀವ ರಕ್ಷಣೆಗೆ ನೆರವಾಗುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಅಂತಹ ಜೀವ ರಕ್ಷಕರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯ ಎಂದು ಭಾರತೀಯ ರೆಡ್ ‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಸಮಿತಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.ಜೀವ ರಕ್ಷಣೆಗೆ ನೆರವಾದ ಖಾಸಗಿ ಬಸ್ ಸಿಬ್ಬಂದಿಯನ್ನು ಜಿಲ್ಲಾ ರೆಡ್ ಕ್ರಾಸ್ ವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು ” ಬಸ್ ಸಿಬ್ಬಂದಿ ಪ್ರಯಾಣಿಕರ ಜೀವದ ಬಗ್ಗೆ ವಹಿಸಿದ ಕಾಳಜಿ ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ” ಎಂದರು.ಖಾಸಗಿ ಬಸ್ ಸಿಬ್ಬಂದಿ ಗಜರಾಜ ಕುಂದರ್, ಸಂದೀಪ್, ಸುರೇಶ್, ಮೆಹಬೂಬ್ ಮತ್ತು ಮಹೇಶ್ ಪೂಜಾರಿ ಇವರುಗಳನ್ನು ರೆಡ್ ಕ್ರಾಸ್ ಕಚೇರಿಯಲ್ಲಿ ಸನ್ಮಾನಿಸಲಾಯಿತು.ಹಿರಿಯ ಸಮಾಜ ಸೇವಕ ಟಿ.ಜಿ.ಶೆಣೈ , ರೆಡ್ ಕ್ರಾಸ್ಸಮಿತಿಯ ಉಪಾಧ್ಯಕ್ಷ ಡಾ.ಸತೀಶ್ ರಾವ್, ನಿರ್ದೇಶಕರಾದ ಡಾ.ಸಚ್ಚಿದಾನಂದ ರೈ , ಗುರುದತ್ ಕಾಮತ್, ಪಿ.ಬಿ.ಹರೀಶ್ ರೈ, ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ , ಮ್ಯಾನೇಜರ್ ಸುಧಾಕರ್, ಒಝಾಸ್ ಟ್ರಸ್ಟ್ ನ ಅಧ್ಯಕ್ಷೆ ಮಂಗಳಾ.ಎನ್ಕೆ., ಗೌರವಾಧ್ಯಕ್ಷ ನಂದಕುಮಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ದಿನಮಣಿ ರಾವ್ ಕಾರ್ಯಕ್ರಮ ನಿರೂಪಿಸಿದರು.ಫೋಟೋ : ರೆಡ್ ಕ್ರಾಸ್

ಪ್ರಾದೇಶಿಕ ವಾರ್ತೆಗಳು

ದ.ಕ. ಜಿಲ್ಲಾ ನಾಮಫಲಕ ಕಲಾಕಾರರ ಸಂಘದ ಸದಸ್ಯರಿಗೆ ಅಪಘಾತ ವಿಮಾ ಪ್ರಮಾಣ ಪತ್ರ ವಿತರಣೆ.

ಮಂಗಳೂರು: ದ.ಕ. ಜಿಲ್ಲಾ ನಾಮಫಲಕ ಕಲಾಕಾರರ ಸಂಘದ ಸದಸ್ಯರಿಗೆ ಅಪಘಾತ ವಿಮಾ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವು ದಿನಾಂಕ ಆಗಸ್ಟ್ 12 ರಂದು ಬಬ್ಬುಸ್ವಾಮಿ ದೈವಸ್ಥಾನ ಕೊಪ್ಪಳ ಹಿತ್ಲು ಕುದ್ರೋಳಿಯಲ್ಲಿ ಜರಗಿತು.ಈ ಅಪಘಾತ ವಿಮಾ ಸೌಲಭ್ಯವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಅಪಘಾತ ಯಾವಾಗ ಸಂಭವಿಬಹುದು ಎಂಬುವುದು ತಿಳಿಯದು, ಆರೋಗ್ಯ ವಿಮೆಯ ಸೌಲಭ್ಯವು ಆಸ್ಪತ್ರೆಯ ವೆಚ್ಚವನ್ನು ಭರಿಸಬಹುದು. ಆದರೆ ಅಪಘಾತ ಸಂಭವಿಸಿ ದುಡಿಯಲಾಗದಿದ್ದರೆ ಅಥವಾ ಮರಣ ಸಂಭವಿಸಿದರೆ ಈ ಅಂಚೆ ಇಲಾಖೆಯ ವಿಮಾ ಸೌಲಭ್ಯವು ತಮ್ಮ ಅವಲಂಬಿತರಿಗೆ ಪ್ರಯೋಜನವಾಗಬಹುದು ಎಂದು ಪ್ರಾಸ್ತಾವಿಕ ಮಾತಿನಲ್ಲಿ ಕೆ.ಮಾಧವ ಕೋಟ್ಯಾನ್‌ರವರು ನುಡಿದರು.ಉದ್ಯಮಿ ಚಂಪಾಲಾಲ್ (ಮಹಾಲಕ್ಷ್ಮಿ ಸ್ಟಿಕ್ಕರ್ಸ್) ವಿಮಾ ಪ್ರಮಾಣ ಪತ್ರ ವಿತರಿಸಿದರು. ಕಿರಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗಣೇಶ್ ಆಚಾರ್ಯ ಪ್ರಾರ್ಥಿಸಿದರು. ದಯಾನಂದ್ ಕಾರ್ಯಕ್ರಮ ನಿರೂಪಿಸಿಸಿದರು.

ಪ್ರಾದೇಶಿಕ ವಾರ್ತೆಗಳು

ಚಿನ್ನ ಸೇರಿದಂತೆ ಖನಿಜ ಸಂಪತ್ತಿನ ಅಗರ, ವನ್ಯ ಜೀವಿಗಳ ನೆಚ್ಚಿನ ತಾಣ, ಪ್ರವಾಸಿಗರ ಸ್ವರ್ಗ “ಕಪ್ಪತ್ತಗುಡ್ಡ” ರಕ್ಷಿಸೋಣ ಅಭಿಯಾನಕ್ಕೆ ಚಾಲನೆ

ಗದಗ : ತೋಂಟದಾರ್ಯ ಮಠದ ಶ್ರೀಗಳಾದ ಡಾ.ಸಿದ್ದರಾಮ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದಂತಹ ಪತ್ರಕರ್ತರಿಂದ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೆ ಪ್ರಖ್ಯಾತವಾಗಿರುವ ಗದಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಕಪ್ಪತ್ತಗುಡ್ಡ ಉಳಿಸಿ, ರಕ್ಷಿಸೋಣ ಎಂಬ ಅಭಿಯಾನ ಆಗಸ್ಟ್ 11ರಂದು ಬಾನುವಾರ ಕಪ್ಪತ್ತಗುಡ್ಡದ ಮೇಲೆ ನಡೆಯಿತು.ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೆ ಪ್ರಖ್ಯಾತವಾಗಿರುವ ಕಪ್ಪತಗುಡ್ಡ ಗದಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರವಾಸಿಗರನ್ನು ಕೈಬೀಸಿ ಕರೆವ ಕಪ್ಪತ್ತಗುಡ್ಡಕ್ಕೆ ದಿನನಿತ್ಯ ನೂರಾರು ಪ್ರವಾಸಿಗರು ಆಗಮಿಸಿ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮೈಮರೆಯುತ್ತಾರೆ. ನೈಋತ್ಯ ಮುಂಗಾರು ಮಳೆ ಅವಧಿಯಲ್ಲಿ ಸಾವಿರಾರು ಜನರು ಕಪ್ಪತಗುಡ್ಡ ಪ್ರವಾಸಕ್ಕೆ ಹೋಗುತ್ತಾರೆ. ಕಪ್ಪತಗುಡ್ಡ ಚಾರಣಕ್ಕೆ ನೂರಾರು ಮಂದಿ ಆಗಮಿಸುತ್ತಿದ್ದು, ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.ಗದಗ ಜಿಲ್ಲೆಯಲ್ಲಿ ಉತ್ತರ ಕರ್ನಾಟಕದ ಪಶ್ಚಿಮಘಟ್ಟ ಮತ್ತು ಮಧ್ಯ ಕರ್ನಾಟಕದ ಹೃದಯ ಭಾಗ ಎಂದು ಖ್ಯಾತಿ ಪಡೆದ ಗದಗ ತಾಲೂಕು ಬಿಂಕದ ಕಟ್ಟೆ ಗ್ರಾಮದಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರ ಕ್ಷೇತ್ರ – ಬಳ್ಳಾರಿ ಜಿಲ್ಲಾ ಹೋವಿನ ಹಡಗಲಿಯವರೆಗೆ ಉತ್ತರದಿಂದ ದಕ್ಷಿಣಕ್ಕೆ 80 ಸಾವಿರ ವಿಸ್ತಿರ್ಣದ 63 ಕಿಲೋ ಮೀಟರ್ ಉದ್ದದ ಸುತ್ತಲೂ ಹಸಿರಿನಿಂದ ಕೂಡಿರುವ ಚಿಕ್ಕ-ದೊಡ್ಡ ಗುಡ್ಡದ ಸಾಲುಗಳೇ ಕಪ್ಪತ್ತಗುಡ್ಡಗಳು. ಡೋಣಿ ಗ್ರಾಮದಿಂದ 4 ಕಿ.ಮೀ ಗಳಷ್ಟು ಅಂತರದಲ್ಲಿ ಬೃಹದಾಕಾರದ ಶಿಖರಗಳನ್ನೊಳಗೊಂಡು ಬೆಟ್ಟಗಳ ಸಮ್ಮುಚ್ಛಯವಾದ ಕಪ್ಪತಗುಡ್ಡ ಖನಿಜ ಸಂಪತ್ತಿನ ಅಗರ. ಈ ಮಣ್ಣಿನಲ್ಲಿ ಚಿನ್ನವಿದೆ. ಮ್ಯಾಂಗನೀಜ್ , ಕಬ್ಬಿಣದ ಅದಿರು, ತಾಮ್ರ, ಕ್ಯಾಲ್ಸಿಯಂ ಮುಂತಾದ 18 ಪ್ರಕರದ ಅಮೂಲ್ಯವಾದ ಖನಿಜ ಸಂಪತ್ತು ಇದೆ. ಇಂತಹ ಖನಿಜ ಭರಿತ ಭೂಮಿಯಲ್ಲಿ 300ಕ್ಕೂ ಹೆಚ್ಚು ಜಾತಿಯ ಔಷಧಿ ಸಸ್ಯಗಳು ಇವೆ. ಇದನ್ನು ರಾಷ್ಟ್ರೀಯ ಅಯುರ್ವೇದಿಕ ಸಂಶೋಧನ ಸಂಸ್ಥೆ ಜಯನಗರ, ಬೆಂಗಳೂರು ಇದು ವರದಿ ಮಾಡಿದೆ. ಆದರೇ ಸ್ಥಳಯರ ಪ್ರಕಾರ ಇಲ್ಲಿ 800ಕ್ಕೂ ಹೆಚ್ಚು ಜಾತಿಯ ಔಷಧಿ ಸಸ್ಯಗಳು ಇವೆ ಎನ್ನಲಾಗಿದೆ.ಮಾತ್ರವಲ್ಲದೇ ಕೆರೆಗಳು, ಹಳ್ಳಗಳು, ಝರಿಗಳು, ಕೊಳ್ಳಗಳು ಇಲ್ಲಿ ಜನ್ಮ ತಾಳಿದ್ದು, ಇವುಗಳು ಅಂತ್ಯದಲ್ಲಿ ತುಂಗಭದ್ರ ನದಿ ಸೇರುತ್ತವೆ. ಈ ಗುಡ್ಡದಲ್ಲಿ ವಿವಿಧ ಪ್ರಭೇಧದ ಪ್ರಾಣಿ ಪಕ್ಷಿಗಳು ಸೇರಿದಂತೆ ಕೃಷ್ಣ ಮೃಗ, ಕಾಡುಕುರಿ, ಚುಕ್ಕೆ ಜಿಂಕೆ, ಕರಡಿ, ತೋಳ, ನರಿ, ಕತ್ತೆ ಕಿರುಬ, ಕಾಡ ಬೆಕ್ಕು, ಈ ರೀತಿ ಅನೇಕ ರೀತಿಯ ವನ್ಯ ಜೀವಿಗಳು ಇವೆ. ಮಾತ್ರವಲ್ಲದೇ ಈ ಭಾಗದಲ್ಲಿ 700 ರಿಂದ 1000 ವರೆಗೆ ನವಿಲುಗಳು, ಹೈನಾ, ಸಾರಾಂಗ, ಮತ್ತು ಅಸಂಖ್ಯಾತ ದನಕರುಗಳು, ಕುರಿಗಳು ಇರುತ್ತವೆ. ಮುಖ್ಯವಾಗಿ ಇಲ್ಲಿ ವಿದ್ಯುತ್ ಇದೆ. ಇಡೀ ರಾಜ್ಯದಲ್ಲೇ ಈ ಗುಡ್ಡದಲ್ಲಿ ಮಾತ್ರ ಶುದ್ಧ ಗಾಳಿ ಇದೆ ಎಂದು ಪ್ರಮಾಣೀಕರಿಸಲಾಗಿದೆ.ಈಗಾಗಲೇ ಈ ಗುಡ್ಡದಲ್ಲಿ ಕೆಲವು ವರ್ಷಗಳ ಹಿಂದೆ ವಿಶಾಲವಾದ ಸ್ಥಳದಲ್ಲಿ ಮೈನಿಂಗ್ ನಡೆಸಲಾಗಿದ್ದು, ಇದರಿಂದ ಈ ಪ್ರದೇಶದ ಗುಡ್ಡವೇ ಕುಸಿದು ಬೀಳುವ ಸಾಧ್ಯತೆಗಳು ಇವೆ. ಇಂತಹ ಕಪ್ಪತ್ತಗುಡ್ಡದ ಮೇಲೆ ಇದೀಗ ಮತ್ತೊಮ್ಮೆ ದುಷ್ಕರ್ಮಿಗಳ ಕಣ್ಣು ಬಿದ್ದಿದ್ದು, ಮುಖ್ಯವಾಗಿ ರಾಜಕೀಯ ಮುಖಂಡರು ಹಾಗೂ ಕೆಲವೊಂದು ಕಂಪನಿಗಳು ಈ ಗುಡ್ಡವನ್ನು ತಮ್ಮ ವಶಕ್ಕೆ ಪಡೆದು ಇಲ್ಲಿರುವ ಖನಿಜ ಸಂಪತ್ತುಗಳನ್ನು ಲೂಟಿ ಮಾಡಿ ಈ ಅಪರೂಪದ ಗುಡ್ಡವನ್ನೇ ನಾಶ ಪಡಿಸಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿಗಳು ಲಭಿಸಿದ್ದು, ಈ ಹಿನ್ನೆಲೆಯಲ್ಲಿ ತೋಂಟದಾರ್ಯ ಮಠದ ಶ್ರೀಗಳಾದ ಡಾ.ಸಿದ್ದರಾಮ ಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ( KJU)ದ ಆಶ್ರಯದಲ್ಲಿ ಗದಗ ಜಿಲ್ಲಾ ಅರಣ್ಯ ಇಲಾಖೆಯ ಸಂಯೋಗದೊಂದಿಗೆ ಕಪ್ಪತ್ತಗುಡ್ಡ ಉಳಿಸಿ, ರಕ್ಷಿಸೋಣ ಎಂಬ ಅಭಿಯಾನ ಆಗಸ್ಟ್ 11ರಂದು ಬಾನುವಾರ ಕಪ್ಪತ್ತಗುಡ್ಡದ ಮೇಲೆ ನಡೆಯಿತು.ಇದೇ ವೇಳೆ ಅಗಮಿಸಿದಂತಹ ಎಲ್ಲಾ ಪತ್ರಕರ್ತರು ಕಪ್ಪತ್ತಗುಡ್ಡದ ಮೇಲೆ ಮಾನವ ಸರಪಣಿ ನಿರ್ಮಿಸುವ ಮೂಲಕ ಕಪ್ಪತ್ತಗುಡ್ಡ ರಕ್ಷಣೆಗೆ ತಮ್ಮ ಬೆಂಬಲವಿದೆ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರಕ್ಕೆ ನೀಡಿದರು.ಈ ವೇಳೆ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ತೋಂಟದಾರ್ಯ ಮಠದ ಶ್ರೀಗಳಾದ ಡಾ.ಸಿದ್ದರಾಮ ಸ್ವಾಮಿಜಿಯವರು, ವಿವಿಧ ಜೀವ ವೈವಿಧ್ಯತೆ ಹಾಗೂ ಪರಿಸರ ವೈವಿಧ್ಯತೆಯನ್ನು ಹೊಂದಿರುವ ಕಪ್ಪತ್ ಗುಡ್ಡವನ್ನು ರಕ್ಷಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕರ್ನಾಟಕ ಪತ್ರಕರ್ತರ ಸಂಘದಿಂದ ಇಂದು ಕಪ್ಪತ್ ಗುಡ್ಡ ವೀಕ್ಷಣೆ ಹಾಗೂ ಕಪ್ಪತ್ ಗುಡ್ಡದ ರಕ್ಷಣೆಯ ಕುರಿತಂತೆ ಆಗಮಿಸಿದಕ್ಕೆ ತುಂಬಾ ಸಂತೋಷವಾಗಿದೆ ಎಂದು ಪತ್ರಕರ್ತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಕಪ್ಪತ ಗುಡ್ಡವು ಪರಿಸರ ವೈವಿಧ್ಯತೆಯಿಂದ ಕೂಡಿದ್ದು ಪರಿಸರವನ್ನು ಉಳಿಸಲು ನಾವೆಲ್ಲರೂ ಪಣತೊಡಬೇಕು. ಪರಿಸರವನ್ನು ಉಳಿಸೋಣ ವನ್ಯಜೀವಿಗಳನ್ನು ಸಂರಕ್ಷಿಸೋಣ. ಕಪ್ಪತ್ ಗುಡ್ಡದಲ್ಲಿ ವಿಂಡ್ ಫ್ಯಾನುಗಳು ಬಂದಿರುವುದರಿಂದ ಹಾಗೂ ಗಣಿಗಾರಿಕೆಗಳು ನಡೆಯುತ್ತಿರುವುದರಿಂದ ಇಲ್ಲಿನ ಪರಿಸರ ಹಾಳಾಗುತ್ತಿದೆ ಇದನ್ನು ಗಮನಿಸಿ ಇಲ್ಲಿಯ ಪರಿಸರವನ್ನು ಹಾಳು ಮಾಡದಂತೆ ಕಾಪಾಡೋಣ. ಇಲ್ಲಿನ ಜನರು ಸಹ ಅರಣ್ಯವನ್ನು ನಂಬಿ ಜೀವನವನ್ನು ಸಾಗಿಸುತ್ತಾ ಅವಲಂಬಿಸಿದ್ದಾರೆ. ಆದ್ದರಿಂದ ಪತ್ರಕರ್ತರಾದ ನೀವು ನೆಲ ಜಲ ರಕ್ಷಣೆಗಾಗಿ ಜೀವದ ಹಂಗು ತೊರೆದು ಕೆಲಸವನ್ನು ಮಾಡುತ್ತೀರಿ. ಇಂತಹ ಕಪ್ಪತ ಗುಡ್ಡವನ್ನು ಉಳಿಸಿ ಬೆಳೆಸಲು ತಮ್ಮ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮುರುಗೇಶ್ ಶಿವಪೂಜೆ, ಗದಗ್ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ರಮೇಶ್ ಭಜಂತ್ರಿ, ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್, ಕಾರ್ಯದರ್ಶಿ ಸತೀಶ್ ಕಾಪಿಕಾಡ್, ಅರಣ್ಯ ಇಲಾಖೆಯ ಅಧಿಕಾರಿಗಳು, ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳು, ವಿವಿಧ ಜಿಲ್ಲೆಯ ವರದಿಗಾರರು, ಸಂಪಾದಕರು, ಸಿಬ್ಬಂದಿಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 85ಕ್ಕೂ ಹೆಚ್ಚು ಪತ್ರಕರ್ತರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.ವರದಿ ಹಾಗೂ ಚಿತ್ರ: ಸತೀಶ್ ಕಾಪಿಕಾಡ್

Scroll to Top