ಸರಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ತಡೆಗಟ್ಟಲು ನೀಡುವ ERIG ಇಂಜೆಕ್ಷನ್ ಕಳಪೆ ಗುಣಮಟ್ಟದ ಔಷಧವಲ್ಲ -ಡಿಎಂಒ ಡಾ. ಶಿವಪ್ರಕಾಶ್ ಸ್ಪಷ್ಟನೆ. ಅದು ಓಕೆ, ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಬೆಲೆ ಬಾಳುವ ರಿಸ್ಕ್ ರಹಿತ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಗಳ ಬಳಕೆಗೆ mpmlasnewstv ಒತ್ತಾಯ
ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಸಲಾಗುವ Equine Rabies Immunoglobulin (ERIG) ಯಾವುದೇ ರೀತಿಯ ಕಳಪೆ ಗುಣಮಟ್ಟದ ಔಷಧವಲ್ಲ. ಇದು ಭಾರತ ಸರ್ಕಾರದ ನಿಯಮಾನುಸಾರ ಗುಣಮಟ್ಟ ಪರೀಕ್ಷೆಗೊಳಪಟ್ಟು ಅನುಮೋದಿತವಾಗಿರುವ ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧವಾಗಿದೆ.ERIG ನೀಡಿದ ನಂತರ ಅಪರೂಪದಲ್ಲಿ ಅಲರ್ಜಿ ಅಥವಾ ತೀವ್ರ ಅಲರ್ಜಿ (Anaphylaxis) ಉಂಟಾಗುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ರೋಗಿಯನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಕೆಲವು ಸಮಯ ಇರಿಸುವುದು ಉತ್ತಮ ವೈದ್ಯಕೀಯ ಪದ್ಧತಿಯಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚಿನ ಅವಧಿಯ ನಿಗಾ ವಹಿಸುವ ನಿರ್ಧಾರವನ್ನು ರೋಗಿಯ ಆರೋಗ್ಯ ಸ್ಥಿತಿ ಹಾಗೂ ವೈದ್ಯರ ವೈದ್ಯಕೀಯ ನಿರ್ಧಾರದ ಆಧಾರದ ಮೇಲೆ ಕೈಗೊಳ್ಳಲಾಗುತ್ತದೆ. ರೋಗಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬೆಳಗಿನ ವೇಳೆಯಲ್ಲಿ ERIG ಪಡೆದ ರೋಗಿಗೆ ಮೇಲ್ವಿಚಾರಣೆಯ ನಂತರ ಯಾವುದೇ ತೊಂದರೆ ಇಲ್ಲದಿದ್ದರೆ ಅದೇ ದಿನ ಮನೆಗೆ ತೆರಳಲು ಅವಕಾಶ ನೀಡಲಾಗುತ್ತದೆ. ಆದರೆ ಸಂಜೆಯ ವೇಳೆಯಲ್ಲಿ ERIG ಪಡೆದ ರೋಗಿಗಳಲ್ಲಿ, ವಿಶೇಷವಾಗಿ ಮಕ್ಕಳಲ್ಲಿ, ರಾತ್ರಿ ವೇಳೆ ಯಾವುದೇ ತುರ್ತು ತೊಂದರೆ ಉಂಟಾದರೆ ತಕ್ಷಣ ಚಿಕಿತ್ಸೆ ನೀಡಲು ಅನುಕೂಲವಾಗುವ ದೃಷ್ಟಿಯಿಂದ ವೈದ್ಯರ ವಿವೇಚನೆಯಂತೆ ಮರುದಿನದವರೆಗೆ ಆಸ್ಪತ್ರೆಯಲ್ಲೇ ಮೇಲ್ವಿಚಾರಣೆಯಲ್ಲಿ ಇರಿಸಬಹುದು. ಇದು ರೋಗಿಯ ಸುರಕ್ಷತೆಯನ್ನು ಹೆಚ್ಚಿಸುವ ಮುನ್ನೆಚ್ಚರಿಕಾ ಕ್ರಮವಾಗಿದ್ದು, ಔಷಧದ ಗುಣಮಟ್ಟಕ್ಕೆ ಸಂಬಂಧಪಟ್ಟ ವಿಷಯವಲ್ಲ.ಆದ್ದರಿಂದ, ERIG ನೀಡಿದ ನಂತರ ರೋಗಿಯನ್ನು ವೈದ್ಯಕೀಯ ನಿಗಾದಲ್ಲಿ ಇರಿಸುವುದು ಔಷಧದ ಗುಣಮಟ್ಟ ಕಳಪೆಯಾಗಿದೆ ಎಂಬುದಕ್ಕೆ ಸಾಕ್ಷಿಯಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವ ERIG ಸುರಕ್ಷಿತ, ಪರಿಣಾಮಕಾರಿ ಮತ್ತು ರೇಬಿಸ್ ತಡೆಗಟ್ಟುವಲ್ಲಿ ಅತ್ಯಂತ ಪ್ರಮುಖವಾದ ಚಿಕಿತ್ಸೆಯಾಗಿದೆ ಎಂದು ವೆನ್ ಲಾಕ್ ಆಸ್ಪತ್ರೆ ಡಿಎಂಒ ಡಾ. ಶಿವಪ್ರಕಾಶ್ ಅವರು ಸ್ಪಷ್ಟನೆ ನೀಡಿದ್ದಾರೆ.ಇತ್ತೀಚಿಗೆ mpmlasnewstvಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಕಳಪೆ ಗುಣ ಮಟ್ಟದ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಕೊಡಲಾಗುತ್ತದೆ. ಇದರಿಂದ ಮಕ್ಕಳು 24ಗಂಟೆ ಐಸಿಯುನಲ್ಲಿ ಇರಬೇಕಾಗುತ್ತದೆ ಎಂದು ವರದಿ ಪ್ರಕಟಿಸಲಾಗಿತ್ತು. ಅದನ್ನು ಡಿಎಂಒ ಅವರು ಅಲ್ಲಗಳೆದು ಮೇಲಿನ ವಿವರಣೆ ಕಳುಹಿಸಿದ್ದಾರೆ. ಆದರೆ, ಸಂಪಾದಕರ ಮಗನಿಗೆ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಕೊಡಲು ಬಂದಾಗ 24 ಗಂಟೆ ಐಸಿಯುನಲ್ಲಿ ಇರಬೇಕಾಗುತ್ತದೆ ಎಂದು ಸರಕಾರಿ ಮಕ್ಕಳ ಆಸ್ಪತ್ರೆ ವೈದ್ಯರು ತಿಳಿಸಿದ್ದರು.ಅಲ್ಲಿ ರಿಸ್ಕ್ ಬೇಡವೆಂದು ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಮಗನಿಗೆ 4,200 ರೂಪಾಯಿ ಬೆಲೆಯ ಇಂಜೆಕ್ಷನ್ ಕೊಟ್ಟಾಗ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಕೇವಲ ಅರ್ಧ ಗಂಟೆ ಮಾತ್ರ ಆಸ್ಪತ್ರೆಯಲ್ಲಿ ಕೂರಿಸಿ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಯಿತು. ಅದು ಹೇಗೆ ಸಾಧ್ಯವೆಂದು ವಿಚಾರಿಸಿದಾಗ ಸರಕಾರಿ ಆಸ್ಪತ್ರೆಗಳಲ್ಲಿ ಇಂಥ ದುಬಾರಿ ಇಂಜೆಕ್ಷನ್ ಗಳನ್ನು ಇರಿಸಲು ಸಾಧ್ಯವಿಲ್ಲವೆಂದು ಖ್ಯಾತ ಮಕ್ಕಳ ತಜ್ಞರಾದ ಡಾ. ಸಂತೋಷ್ ಟಿ. ಸೋನ್ಸ್, ಡಾ. ಸುಧಾಕರ್ ಶೆಟ್ಟಿ ಸೇರಿದಂತೆ ಹಲವು ಮಂದಿ ವೈದ್ಯರು ಹೇಳಿದರು. ಈಗಿನ ಡಿಎಂಒ ಡಾ. ಶಿವಪ್ರಕಾಶ್ ಮತ್ತು ಜಿಲ್ಲಾ ಅರೋಗ್ಯ ಅಧಿಕಾರಿ ಡಾ. ತಿಮ್ಮಯ್ಯ ಅವರು ಪ್ರಾಮಾಣಿಕ, ಸಮರ್ಥ, ದಕ್ಷ ವೈದ್ಯಾಧಿಕಾರಿಗಳು. ಇವರ ಅವಧಿಯಲ್ಲಿ ವೆನ್ ಲಾಕ್ ಆಸ್ಪತ್ರೆ ಉತ್ತಮವಾಗಿದೆ ಮತ್ತು ಅರೋಗ್ಯ ಇಲಾಖೆ ಸಮರ್ಪಕವಾಗಿ, ಕ್ಷಿಪ್ರಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.ಈ ಇಬ್ಬರು ಅಧಿಕಾರಿಗಳು ಬರೇ ಸಂಬಳವನ್ನೇ ನಂಬಿ ಕೆಲಸ ಮಾಡುವ ನಮ್ಮ ಜಿಲ್ಲೆಯ ಹೆಮ್ಮೆ ಅಧಿಕಾರಿಗಳು ಎಂಬುದು mpmlasnewstv ಗೆ ಕಂಡು ಬಂದ ಸತ್ಯ.ಇವರಿಬ್ಬರು ಅಧಿಕಾರಿಗಳು ಇಂಜೆಕ್ಷನ್ ರಿಸ್ಕ್ ಕಡಿಮೆ ಮಾಡುವ ಹಿತದೃಷ್ಟಿಯಿಂದ ಈ ಬಗ್ಗೆ ಅರೋಗ್ಯ ಸಚಿವ ಡಾ. ಯು. ಟಿ. ಖಾದರ್ ಅವರ ಗಮನಕ್ಕೆ ತಂದು ಸರಕಾರಿ ಆಸ್ಪತ್ರೆಗಳಲ್ಲಿ ಕೂಡಾ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ದುಬಾರಿ ಬೆಲೆಯ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್ ಗೆ ಶಿಫಾರಸ್ಸು ಮಾಡಿ ಇಂಜೆಕ್ಷನ್ ರಿಸ್ಕ್ ನ್ನು ಕಡಿಮೆ ಮಾಡಿಸುವಂತೆ mpmlasnewstv ಒತ್ತಾಯಿಸುತ್ತದೆ. ಇದು ಆರೋಗ್ಯ ಸಚಿವರು ಮಕ್ಕಳ ಅರೋಗ್ಯ ಹಿತದೃಷ್ಟಿಯಿಂದ ಮೊದಲು ಮಾಡಬೇಕಾದ ಕರ್ತವ್ಯವೂ ಹೌದು.








