ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ 5 ವರ್ಷಗಳ ಅವಧಿಗೆ ನಿರ್ದೇಶಕರುಗಳ ಆಯ್ಕೆ.

ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಗೆ ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆ ಇತ್ತೀಚೆಗೆ ನಡೆಯಿತು. ಇದರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ, ದಕ್ಷಿಣ ಕನ್ನಡ, ಮಂಗಳೂರು ಇದರ ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಗಳಿಗೆ ನ.16ರಂದು11 ಇಲಾಖೆಯ 14 ಕ್ಷೇತ್ರಗಳ ಚುನಾವಣೆಯಲ್ಲಿ ನಿರ್ದೇಶಕರುಗಳು ಚುನಾಯಿತರಾಗಿದ್ದಾರೆ. ನಿರ್ದೇಶಕರುಗಳಾಗಿ ನವೀನ್ ಕುಮಾರ್ ಎಂ.ಎಸ್., ಸುರೇಶ್, ಪದ್ಮನಾಭ ಜೋಗಿ, ಜಗದೀಶ್ ಪಿ, ಕಾರ್ತಿಕ, ಮಹಾಲಕ್ಷ್ಮಿ ಮತ್ತು ಸಿದ್ದಪ್ಪ, ಪ್ರಸನ್ನ ಕುಮಾರ್ ಪಕ್ಕಳ, ಡಾ. ಆನಂದ್ ಬಂಜನ್, ಉಮೇಶ್ ನಾಯಕ್, ಉಮೇಶ್ ಕೆ.. ಜಯಲಕ್ಷ್ಮಿ, ಡಾ.ಅಜಿತ್, ಸುರೇಶ್ ಮೋರಸ್, ಒಟ್ಟು 66 ಸ್ಥಾನಗಳ ಪೈಕಿ 52 ಅಭ್ಯರ್ಥಿಗಳು ಈಗಾಗಲೇ ವಿವಿಧ ಇಲಾಖೆಯಿಂದ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ. ಜಗಜೀವನ್ ದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಆಳ್ವಾಸ್ ಕಾಲೇಜಿನಲ್ಲಿ ಸಂಸ್ಥೆಯ ಆವರಣದಲ್ಲಿ ‘ಜವಾಬ್ದಾರಿಯುತ ಸಂಸ್ಕೃತಿಯ ನಿರ್ಮಾಣ’ ಕಾರ್ಯಾಗಾರ

ವಿದ್ಯಾಗಿರಿ: ದೌರ್ಜನ್ಯ ಕುರಿತು ಕೇವಲ ನೊಂದ ಮಹಿಳೆ ಮಾತ್ರವಲ್ಲ, ಅವರ ಪರವಾಗಿ ಯಾರು ಬೇಕಾದರೂ ದೂರು ನೀಡಬಹುದು. ಮಹಿಳೆ ಮೇಲೆ ಮಹಿಳೆಯೇ ದೌರ್ಜನ್ಯ ಎಸಗಿದರೂ ಅಪರಾಧ ಎಂದು ಹೊಳ್ಳ ಆ್ಯಂಡ್ ಹೊಳ್ಳ ಅಸೋಸಿಯೇಟ್ಸ್ನ ಮೇಘನಾ ಆರ್. ಬಲ್ಲಾಳ್ ಹೇಳಿದರು.ಆಳ್ವಾಸ್ (ಸ್ವಾಯತ್ತ) ಕಾಲೇಜು ಆಂತರಿಕ ಗುಣಮಟ್ಟ ಮೌಲ್ಯಮಾಪನ ಘಟಕ (ಐಕ್ಯೂಎಸಿ), ಲೈಂಗಿಕ ದೌರ್ಜನ್ಯ ತಡೆ ಘಟಕ, ಸಮಾಜಕಾರ್ಯ ವಿಭಾಗವು ಬೋಧನಾಂಗ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ‘ ಸಂಸ್ಥೆಯ ಆವರಣದಲ್ಲಿ ಜವಾಬ್ದಾರಿಯುತ ಸಂಸ್ಕೃತಿಯ ನಿರ್ಮಾಣ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಮೂಡುಬಿದಿರೆ ಮನೆತನದ ಅಬ್ಬಕ್ಕ ನಮ್ಮ ಹೆಮ್ಮೆ. ಆಕೆಯ ಸಾಧನೆ ಎಲ್ಲರಿಗೂ ಮಾದರಿಯಾಗಬೇಕು ಎಂದರು.ದೇಶದಲ್ಲಿ 1990 ಬಳಿಕ ಮಹಿಳೆಯರು ಕೆಲಸಕ್ಕೆ ಬರುವ ಸಂಖ್ಯೆ ಹೆಚ್ಚಾಯಿತು. ರಾಜಸ್ಥಾನದ ಭವಾರಿ ದೇವಿ ಅತ್ಯಾಚಾರಕ್ಕೆ ಒಳಗಾದ ಸಂದರ್ಭದಲ್ಲಿ ವಿಶಾಖ ಸಂಸ್ಥೆಯ ಹೋರಾಟದ ಫಲವಾಗಿ ಕಾಯಿದೆ ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಹೀಗಾಗಿ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆ, ಮುಂಜಾಗ್ರತೆ ಹಾಗೂ ಪುನರ್ವಸತಿ) ಕಾಯಿದೆ -2013′ ಜಾರಿಗೆ ಬಂತು ಎಂದರು.ಈ ಕಾಯಿದೆ ಎಲ್ಲಾ ಮಹಿಳೆಯರಿಗೆ ಅನ್ವಯಿಸುತ್ತದೆ. ಪುರುಷರು ಮಾತ್ರವಲ್ಲ, ಯಾರೇ ದೌರ್ಜನ್ಯ ನಡೆಸಿದರೂ ಶಿಕ್ಷೆಗೆ ಒಳಗಾಗುತ್ತಾರೆ. ದೌರ್ಜನ್ಯ ತಿಳಿದರೆ ತಕ್ಷಣವೇ ದೂರು ನೀಡಿ ಎಂದರು. ಭೌತಿಕ ಸಂಪರ್ಕ ಮಾತ್ರವಲ್ಲ ಮಾನಸಿಕವಾಗಿ ಎಸಗುವ ಲೈಂಗಿಕ ದೌರ್ಜನ್ಯವೂ ಶಿಕ್ಷೆಗೆ ಅರ್ಹ ಎಂದರು.ಸಹೋದ್ಯೋಗಿಗಳ ಕುರಿತು ಗಾಸಿಪ್ ಮಾಡುವುದೂ ದೌರ್ಜನ್ಯ. ಭಾವನಾತ್ಮಕ ಮತ್ತು ಮಾನಸಿಕ ನೋವು ನೀಡುವುದೂ ದೌರ್ಜನ್ಯ. ಭೌತಿಕ, ನೋಟ, ಮಾತು, ಆನ್ ಲೈನ್ ಸಂದೇಶ- ಕರೆ ಇತ್ಯಾದಿಗಳೂ ದೌರ್ಜನ್ಯದ ಭಾಗ ಎಂದರು.ಪ್ರತಿ ಸಂಸ್ಥೆಯಲ್ಲಿ ಮಹಿಳಾ ದೌರ್ಜನ್ಯ ತಡೆ ಘಟಕ ಕಡ್ಡಾಯವಾಗಿ ಇರಬೇಕು. ಸಾರ್ವಜನಿಕವಾಗಿಯೂ ಘಟಕಗಳಿವೆ. ಈ ಬಗ್ಗೆ ಕಾರ್ಮಿಕ ನ್ಯಾಯಾಲಯದಲ್ಲೂ ದೂರು ದಾಖಲಿಸಬಹುದು ಎಂದರು.ದೌರ್ಜನ್ಯ ಪ್ರಕರಣದಲ್ಲಿ ಸಂಧಾನ ಒಳ್ಳೆಯದಲ್ಲ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕಾಯಿದೆ ಪ್ರಕಾರ ವಿದ್ಯಾರ್ಥಿನಿಯರೂ ದೂರು ನೀಡಬಹುದು ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟ್ ವಿವೇಕ್ ಆಳ್ವ ಮಾತನಾಡಿ, ಮಹಿಳೆಯರ ಭೌತಿಕ ಸುರಕ್ಷತೆಯಷ್ಟೇ ಮಾನಸಿಕ ಸುರಕ್ಷತೆಯು ಮುಖ್ಯ. ಭಾರತವು ಸೇರಿದಂತೆ ಪ್ರಪಂಚದ ವಿವಿಧ ದೇಶಗಳಲ್ಲಿ ಮಹಿಳೆ, ಪುರುಷರಿಗೆ ಸಮನಾಂತರವಾಗಿ ಕೆಲಸ ನಿರ್ವಹಿಸುತ್ತಿದ್ದು, ಸಹಜವಾಗಿ ಆ ದೇಶಗಳ ಒಟ್ಟು ದೇಶಿಯ ಉತ್ಪನ್ನ(ಜಿಡಿಪಿ)ದ ವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಅಪಾರ. ಯಾವ ದೇಶ ಮಹಿಳೆಯರನ್ನು ನಿರ್ಲಕ್ಷಿಸುತ್ತಿದೆಯೋ ಅಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ ಎಂದರು.ಸಮಾಜದಲ್ಲಿ ಉಸಿರುಗಟ್ಟುವಿಕೆ ವಾತಾವರಣ ದೂರವಾಗಬೇಕು. ಸಮಸ್ಯೆಗಳ ಬಗ್ಗೆ ಮಾತನಾಡಿ, ಜಾಗೃತರಾಗಿ, ಸಮಾಜವನ್ನು ಎಚ್ಚರಿಸಿ. ಮಹಿಳೆಯರಿಗೆ ಗೌರವ ನೀಡುವ ಮೌಲ್ಯಯುತ ಸಂಸ್ಕೃತಿಯ ಸಮಾಜದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ತಾಯಿಯ ಅಸುರಕ್ಷಿತ ಭಯವು ಒಂದು ಸಮುದಾಯವನ್ನೇ ಹಲವು ಶತಮಾನಗಳ ಹಿಂದೆ ಕೊಂಡೊಯ್ಯಬಹುದು ಎಂದರು.ಮಹಿಳೆ ರಾತ್ರಿ ಅಡ್ಡಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಪುರುಷರು ಯೋಚಿಸಬೇಕಾಗಿದೆ ಎಂದರು. ಸುರಕ್ಷತೆಯ ಪಟ್ಟಿಯಲ್ಲಿ ಭಾರತವು 190 ರಾಷ್ಟ್ರಗಳ ಪೈಕಿ 134ನೇ ಸ್ಥಾನದಲ್ಲಿದೆ. ಮಹಿಳೆಯ ಸುರಕ್ಷತೆ ನಿಟ್ಟಿನಲ್ಲಿ ಪುರುಷರು ಜವಾಬ್ದಾರಿ ವಹಿಸಬೇಕು ಎಂದರು.ಘಟಕ ಸಂಯೋಜಕಿ ಡಾ ಸ್ವಪ್ನಾ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು. ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರೆಹಮಾನ್ ಸ್ವಾಗತಿಸಿದರು. ಇಂಶಾ ವಂದಿಸಿದರು.Greetings,

ಪ್ರಾದೇಶಿಕ ವಾರ್ತೆಗಳು

ಮಂಗಳೂರು ವಿ ವಿ ಅಂತರ್ ಕಾಲೇಜು ಕುಸ್ತಿ ಪಂದ್ಯಾಟ : ಆಳ್ವಾಸ್‌ಗೆ ಸತತ 14 ನೇ ಬಾರಿ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇವರ ಆಶ್ರಯದಲ್ಲಿ ಜರುಗಿದ ಮಂಗಳೂರು ವಿ ವಿ ಮಟ್ಟದ ಅಂತರ್ ಕಾಲೇಜು ಕುಸ್ತಿ ಸ್ಪರ್ಧೆಯ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ 14 ಚಿನ್ನ, 03 ಬೆಳ್ಳಿ ಹಾಗೂ 02 ಕಂಚಿನ ಪದಕದೊಂದಿಗೆ ಮೂಡುಬಿದಿರೆಯ ಆಳ್ವಾಸ್ ಕುಸ್ತಿಪಟುಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಫಲಿತಾಂಶ :ಪುರುಷರ ವಿಭಾಗದಲ್ಲಿ : ನಿಖಿಲ್ – 61 ಕೆಜಿ ವಿಭಾಗದಲ್ಲಿ (ದ್ವಿತೀಯ), ಗುಡ್ಡಪ್ಪ – 61 ಕೆಜಿ ವಿಭಾಗದಲಿ (ತೃತೀಯ), ರಾಕೇಶ್ – 65 ಕೆಜಿ ವಿಭಾಗದಲ್ಲಿ (ಪ್ರಥಮ), ಶಿವರಾಜು – 70 ಕೆಜಿ ವಿಭಾಗದಲ್ಲಿ (ಪ್ರಥಮ), ಸುರೇಂದ್ರ – 74 ಕೆಜಿ ವಿಭಾಗದಲ್ಲಿ (ದ್ವಿತೀಯ), ಚೇತನ್ – 79 ಕೆಜಿ ವಿಭಾಗದಲ್ಲಿ (ಪ್ರಥಮ), ಕೀರ್ತಿ – 86 ಕೆಜಿ ವಿಭಾಗದಲ್ಲಿ (ಪ್ರಥಮ), ಪ್ರಜ್ವಲ್ – 92 ಕೆಜಿ ವಿಭಾಗದಲ್ಲಿ (ಪ್ರಥಮ), ಕಾರ್ತಿಕ್ – 97 ಕೆಜಿ ವಿಭಾಗದಲ್ಲಿ (ಪ್ರಥಮ), ಬಸವರಾಜು – 97+ ಕೆಜಿ ವಿಭಾಗದಲ್ಲಿ (ಪ್ರಥಮ) ಬಹುಮಾನ ಗಳಿಸಿದ್ದಾರೆ.ಮಹಿಳೆಯರ ವಿಭಾಗದಲ್ಲಿ : ಶಾಮಲ – 50 ಕೆಜಿ ವಿಭಾಗದಲ್ಲಿ (ಪ್ರಥಮ), ಚಂದ್ರಿಕಾ – 53 ಕೆಜಿ ವಿಭಾಗದಲಿ (ಪ್ರಥಮ), ಮನ್ವಿತಾ – 57 ಕೆಜಿ ವಿಭಾಗದಲ್ಲಿ (ತೃತೀಯ), ಚೈತ್ರಾ – 59 ಕೆಜಿ ವಿಭಾಗದಲ್ಲಿ (ಪ್ರಥಮ), ದೀಪಾ – 62 ಕೆಜಿ ವಿಭಾಗದಲ್ಲಿ (ಪ್ರಥಮ), ಮಾನ್ಯ – 65 ಕೆಜಿ ವಿಭಾಗದಲ್ಲಿ (ಪ್ರಥಮ), ನೇಹಾ – 68 ಕೆಜಿ ವಿಭಾಗದಲ್ಲಿ (ಪ್ರಥಮ), ವೈಶಾಲಿ – 72 ಕೆಜಿ ವಿಭಾಗದಲ್ಲಿ (ದ್ವಿತೀಯ), ಧನ್ಯಾ- 76 ಕೆಜಿ ವಿಭಾಗದಲ್ಲಿ (ಪ್ರಥಮ) ಬಹುಮಾನ ಗಳಿಸಿದ್ದಾರೆ.ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವರು ಅಭಿನಂದಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬೋಳೂರು ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ತ್ರಿಕಾರ್ತಿಕಾ ಪೂಜಾ ಸಂಭ್ರಮ

ಮಂಗಳೂರು ನಗರದ ಬೋಳೂರು ಅಮೃತ ವಿದ್ಯಾಲಯಂ ಆವರಣದಲ್ಲಿರುವ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ವಿಶೇಷ ಕೃತ್ತಿಕಾ ಪೂಜೆ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ಸಂಜೆ ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಜ್ಯೋತಿ ಬೆಳಗಿಸಿ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.ಮಂಗಳೂರಿನ ಕಲಾಮೃತ ತಂಡದವರು ನಡೆಸಿಕೊಟ್ಟ ಸುಮಧುರ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಮಾಲಿನಿ ಕೇಶವ ಪ್ರಸಾದ್ ರವರ ಸುಶ್ರಾವ್ಯ ಕಂಠದ ಹಾಡುಗಳು ,ವೈಷ್ಣವಿಯವರ ಸ್ಯಾಕ್ಸೋಫೋನ್ ,ಅಭಿಷೇಕ್ ಸುರತ್ಕಲ್, ಪೂರ್ವಿ ಕಾಮತ್,ದೀಕ್ಷಿತಾ ಮತ್ತು ತಂಡದವರಿಂದ ಮೂಡಿಬಂದ ಭಕ್ತಿ ಭಾವದ ಸ್ವರಮಾಧುರ್ಯ ಜನಮಾನಸದ ಮೆಚ್ಚುಗೆ ಗಳಿಸಿತು.ಬ್ರಹ್ಮಚಾರಿ ರತೀಶ್ ಇವರು ಕೃತ್ತಿಕಾ ನಕ್ಷತ್ರದ ಪ್ರಯುಕ್ತ ಜರುಗುವ ಜ್ಯೋತಿ ಪೂಜೆ ಹಾಗೂ ಭಗವತಿ ಸೇವೆಯ ವಿಧಿ ವಿಧಾನಗಳನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿ, ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿ ,ಅಮೃತ ಯುವ ಧರ್ಮಧಾರದ ಪದಾಧಿಕಾರಿಗಳು, ಅಮ್ಮನವರ ಭಕ್ತರು ಮತ್ರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಆಗಮಿಸಿದ ಎಲ್ಲರಿಗೂ ಮಹಾಪ್ರಸಾದ ವಿತರಣೆ ಮಾಡಲಾಯಿತು.

ಪ್ರಾದೇಶಿಕ ವಾರ್ತೆಗಳು

ಪಾಲ್ದನೆ ಸಂತ ಮದರ್‌ ತೆರೆಸಾ ಚರ್ಚಿನಲ್ಲಿ ಅಂತರ್‌ ವಾರ್ಡ್ ಕ್ರಿಕೆಟ್‌ ಟೂರ್ನಮೆಂಟ್‌

ಮಂಗಳೂರು: ಮಂಗಳೂರಿನ ಪಾಲ್ದನೆಯ ಸಂತ ಮದರ್‌ ತೆರೆಸಾ ಚರ್ಚಿನಲ್ಲಿ ಅಂತರ್‌ ವಾರ್ಡ್ ಕ್ರಿಕೆಟ್‌ ಟೂರ್ನಮೆಂಟ್‌ ರವಿವಾರ ನಡೆಯಿತು.ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಆಲ್ಬನ್‌ ಡಿ’ಸೋಜಾ ಅವರು ಪಂದ್ಯಾಟ ಉದ್ಘಾಟಿಸಿದರು. ಉಪಾಧ್ಯಕ್ಷ ಎಲಿಯಾಸ್‌ ಫೆರ್ನಾಂಡಿಸ್‌, ಕಾರ್ಯದರ್ಶಿ ಆಸ್ಟಿನ್‌ ಮೊತೇರೊ, ಸರ್ವ ಆಯೋಗಗಳ ಸಂಯೋಜಕ ಜೊಸ್ಲಿನ್‌ ಲೋಬೊ, ವೀಕ್ಷಕ ವಿವರಣೆಗಾರ ಮಾರಿಯೋ ರೇಗೊ, ಸಾಂಸ್ಕೃತಿಕ ಸಮಿತಿಯ ಸಂಯೋಜಕಿ ಪ್ಯಾಟ್ಸಿ ಮೊಂತೇರೊ, ಸದಸ್ಯರಾದ ಸುನಿತಾ ಫೆರ್ನಾಂಡಿಸ್‌, ಸೆಲಿನ್‌ ಡಿ’ಸೋಜಾ, ಕ್ಲಿಫರ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಹರ್ಷ ಮತ್ತು ಪುನೀತ್‌ ಕಾರ್ಯನಿರ್ವಹಿಸಿದರು.ವಿಜೇತ ತಂಡದಲ್ಲಿ ಜೋಯೆಲ್‌ ಡಿ’ಸೋಜಾ, (ನಾಯಕ), ಸ್ಠೀಫನ್‌ ಡಿ’ಸೋಜಾ, ರೋಶನ್‌ ಫೆರ್ನಾಂಡಿಸ್‌, ವಿಲ್ಸನ್‌ ಪಿಂಟೊ, ಶೋನ್‌ ಡಿ’ಸೋಜಾ, ಆ್ಯಶ್ಲಿ ಡಿ’ಸೋಜಾ, ವಿಲ್ಸನ್‌ ಡಿ’ಸೋಜಾ, ಅನಿಲ್‌ ಮೆಲ್ವಿನ್‌ ಡಿ’ಸೋಜಾ, ಲ್ಯಾನಿಶ್ ಪಿಂಟೊ, ರಿಶಾಲ್‌ ಡಿ’ಸೋಜಾ, ಸೆಲಿನ್‌ ಡಿ’ಸೋಜಾ, ಗ್ಯಾವಿನ್‌ ಡಿ’ಸೋಜಾ, ಶರ್ಲಿನ್‌ ಡಿ’ಸೋಜಾ ಇದ್ದರು.ಕ್ರಿಕೆಟ್‌ ಪಿಚ್‌ ತಯಾರಿಸಿ ಕೊಟ್ಟ ಸಂತ ತೆರೆಜಾ ವಾರ್ಡಿನ ಕಿರಣ್‌ ಮೊಂತೇರೊ ಮತ್ತು ಸಂತ ಸೆಬಾಸ್ಟಿಯನ್‌ ವಾರ್ಡಿನ ಸ್ಟೀಫನ್‌ ಡಿ’ಸೋಜಾ ಅವರನ್ನು ಸನ್ಮಾನಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಬಡವರಿಗೆ ಮಾಡುವ ದಾನದಿಂದ ತೃಪ್ತನಾಗಿದ್ದೇನೆ: ಕನ್ಯಾನ ಸದಾಶಿವ ಶೆಟ್ಟಿ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಸಮ್ಮಾನ.

ಮಂಗಳೂರು: ಸಮಾಜ ಸೇವೆ ಮಾಡಲು ಬದುಕಿನಲ್ಲಿ ಸಿಕ್ಕಿದ ಯೋಗ ಎಂದು ಭಾವಿಸಿದ್ದೇನೆ. ಬಡವರಿಗೆ ಮಾಡುವ ದಾನದಿಂದ ತೃಪ್ತನಾಗಿದ್ದೇನೆ. ನನ್ನ ಸಾಧನೆಗೆ ಸಮಾಜದ ಸರ್ವರ ಸಹಕಾರ ಇದೆ ಎಂದು ಉದ್ಯಮಿ, ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತ ಕನ್ಯಾನ ಸದಾಶಿವ ಕೆ. ಶೆಟ್ಟಿ ಹೇಳಿದರು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.ಸಮಾಜದಲ್ಲಿ ನೊಂದ ಬಹಳಷ್ಟು ಮಂದಿ ಸಹಾಯ ಕೇಳಿಕೊಂಡು ಬರುತ್ತಾರೆ. ಅನೇಕ ಸಂಘ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳಿಗೆ ನನ್ನಿಂದಾದ ಸಹಾಯ ಮಾಡುತ್ತಿದ್ದೇನೆ. ಆರ್ಥಿಕವಾಗಿ ಕೆಳಸ್ತರದ ಕುಟುಂಬದಿಂದ ಬಂದು ಶಿಕ್ಷಣದ ಮೂಲಕ ಹಂತ ಹಂತವಾಗಿ ಉದ್ಯಮ ಕ್ಷೇತ್ರದಲ್ಲಿ ಬೆಳೆದು ನಿಂತಿದ್ದೇನೆ. ಹಲವಾರು ಮಂದಿ ಸಹಾಯ ಮಾಡಿದ್ದಾರೆ. ಬಂದ ಹಾದಿಯನ್ನು ಮರೆಯುವುದಿಲ್ಲ. ಪಟ್ಲ ಫೌಂಡೇಶನ್ ಟ್ರಸ್ಟ್ ಹೊಸ ಪರಿಕಲ್ಪನೆಯೊಂದಿಗೆ ಅಧ್ಬುತವಾಗಿ ಸನ್ಮಾನ ಮಾಡಿದ್ದಾರೆ. ಇದರಿಂದ ಪರಮಾನಂದವಾಗಿದೆ. ಜೀವನ ಪಾವನವಾಯಿತು ಎಂದವರು ಸಂತಸ ವ್ಯಕ್ತಪಡಿಸಿದರು.ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅತಿಥಿಯಾಗಿ ಮಾತನಾಡಿ, ಕನ್ಯಾನ ಸದಾಶಿವ ಶೆಟ್ಟಿಯವರ ವ್ಯಕ್ತಿತ್ವದ ಪೂಜೆ ನಡೆದಿದೆ. ದೇವರು ಕೊಟ್ಟ ಸಂಪತ್ತನ್ನು ಭಗವಂತನ ಪ್ರಸಾದ ಎಂದು ಊರಿಗೆ ಹಂಚುವ ಅವರ ಮನಸ್ಸು ವಿಶಾಲವಾದುದು ಎಂದು ಬಣ್ಣಿಸಿದರು.ಪಟ್ಲ ಫೌಂಡೇಶನ್‌ನ ಪ್ರಧಾನ ಸಂಚಾಲಕ, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮಾತನಾಡಿ, ಸದಾಶಿವ ಶೆಟ್ಟಿಯವರು 150 ಕೋಟಿ ರೂ.ಗಿಂತಲೂ ಅಧಿಕ ಸಮಾಜಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ ಎಂದರು.ದಾನ ಮಾಡಿದಾಗ ಸಮಾಜ ಗುರುತಿಸುತ್ತದೆ: ಐಕಳ.ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಅಪಾರ ಸಂಪತ್ತು ಇದ್ದರೂ ಅದನ್ನು ದಾನ ಮಾಡುವ ಮನಸ್ಸು ಎಲ್ಲರಿಗೂ ಇರುವುದಿಲ್ಲ. ದಾನ ಮಾಡಿದಾಗ ಸಮಾಜ ಅವರನ್ನು ಗುರುತಿಸುತ್ತದೆ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಕನ್ಯಾನ ಸದಾಶಿವ ಶೆಟ್ಟಿ ಅವರು ಸಮಾಜಸೇವೆಯ ಮೂಲಕ ಈಗ ಮನೆಮಾತಾಗಿದ್ದಾರೆ.‌ ಬಡವರ, ಕಲಾವಿದರ ಬದುಕಿಗೆ ಅವರು ಆಸರೆಯಾಗಿದ್ದಾರೆ ಎಂದರು.ಶಾಸಕ ರಾಜೇಶ್ ನಾಯ್ಕ್ ಉಳೇಪಾಡಿ, ಉದ್ಯಮಿಗಳಾದ ಸಿ.ಎ.ದಿವಾಕರ ರಾವ್, ಕೆ.ಎಂ. ಶೆಟ್ಟಿ ಮಧ್ಯಗುತ್ತು, ಕೋಶಾಧಿಕಾರಿ   ಸುದೇಶ್ ಕುಮಾರ್ ರೈ, ಪಟ್ಲ ಫೌಂಡೇಶನ್‌ನ ಪದಾಧಿಕಾರಿಗಳಾದ  ರಾಜೀವ ಪೂಜಾರಿ ಕೈಕಂಬ, ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಆರತಿ ಆಳ್ವ,  ರವಿಚಂದ್ರ ಶೆಟ್ಟಿ ಅಶೋಕನಗರ, ಪಟ್ಲ ಮಹಾಬಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಪಟ್ಲ ಫೌಂಡೇಶನ್‌ನ ಸರ್ವ ಘಟಕಗಳ ವತಿಯಿಂದ ಸದಾಶಿವ ಶೆಟ್ಟಿ ಅವರನ್ನು ಗೌರವಿಸಲಾಯಿತು.*ವಿನೂತನ ಶೈಲಿಯಲ್ಲಿ ಸನ್ಮಾನ*ಕನ್ಯಾನ ಸದಾಶಿವ ಶೆಟ್ಟಿ ಅವರನ್ನು ಚಂದ್ರಹಾಸ ಶೆಟ್ಟಿ ಅವರ ಪರಿಕಲ್ಪನೆಯಲ್ಲಿ ವಿನೂತನವಾಗಿ ಸನ್ಮಾನಿಸಲಾಯಿತು. ಸನ್ಮಾನದ ಪೇಟ, ಶಾಲು, ಸ್ಮರಣಿಕೆ, ತೈಲಚಿತ್ರವನ್ನೊಳಗೊಂಡ ವಸ್ತುಗಳನ್ನು ಸಭಾಂಗಣದ ಮೂಲಕ ಪಲ್ಲಕ್ಕಿಯಲ್ಲಿ ತರಲಾಯಿತು. ಜತೆಗೆ ಗೆಂದಾಳೆ ಸಿಯಾಳ, ಅಡಕೆ ಗೊನೆ, ತರಕಾರಿ, ಹಣ್ಣು ಹಂಪಲು, ಅಕ್ಕಿ ಹಾಗೂ ಭತ್ತದ ಮುಡಿ, ಹಿಂಗಾರ ಮೊದಲಾದ ಬುಟ್ಟಿಗಳನ್ನು 6 ಜತೆ ಪತಾಕೆ, ಬಣ್ಣದ ಕೊಡೆ, ಕೊಂಬು, ವಾಲಗದೊಂದಿಗೆ ವೇದಿಕೆಗೆ ಮೆರವಣಿಗೆ ಮೂಲಕ ತರಲಾಯಿತು. ವೇದಿಕೆಯಲ್ಲಿದ್ದ ಅತಿಥಿಗಳು ವ್ಯವಸ್ಥಿತವಾಗಿ ಒಂದೊಂದು ವಸ್ತುಗಳನ್ನು ಸದಾಶಿವ ಶೆಟ್ಟಿ ಅವರಿಗೆ ಅರ್ಪಿಸಿ, ಗೌರವ ಸಲ್ಲಿಸಿದರು. ಈ ಸಂದರ್ಭ ಸೌಮ್ಯಾ ಅವರ ಹಾಡಿನೊಂದಿಗೆ ಮಂಜುಶ್ರೀ ಚಂದ್ರಹಾಸ್ ಶೆಟ್ಟಿ ಅವರು ಆರತಿ ಬೆಳಗಿದರು. ಬಳಿಕ ಸತೀಶ್ ಶೆಟ್ಟಿ ಪಟ್ಲ ಅಭಿನಂದನಾ ಗೀತೆಯ ಮೂಲಕ ಗೌರವ ಸಲ್ಲಿಸಿದರು. ಈ ವೇಳೆ ಸದಾಶಿವ ಶೆಟ್ಟಿಯವರಿಗೆ ಮೇಲ್ಗಡೆಯಿಂದ ಪುಷ್ಪವೃಷ್ಠಿ ದೃಶ್ಯ ಅಮೋಘವಾಗಿತ್ತು. ಬೃಹತ್ ಗಾತ್ರದ ಹೂವಿನ ಹಾರ ಹಾಗೂ ಆ್ಯಪಲ್ ಹಾರ ಹಾಕಿ ಗೌರವಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಸಹಕಾರ ಕ್ಷೇತ್ರದ ಸಾಧನೆಗಾಗಿ ಡಾ.ಅಗರಿ ನವೀನ್ ಭಂಡಾರಿಯವರಿಗೆ ‘ರಾಜ್ಯ ಸಹಕಾರ ರತ್ನ’ ಪುರಸ್ಕಾರ.

ಮಂಗಳೂರು: ಸಹಕಾರ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ ರಾಜ್ಯ ಸಹಕಾರ ರತ್ನ ಪುರಸ್ಕಾರಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉತ್ತರ ವಲಯದ ಮಾಜಿ ನಿರ್ದೇಶಕ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿರುವ ಪುತ್ತೂರು ಮೂಲದ ಹಿರಿಯ ಸಮಾಜ ಸೇವಕ ಡಾ.ಅಗರಿ ನವೀನ್ ಭಂಡಾರಿರವರು ಆಯ್ಕೆಯಾಗಿದ್ದಾರೆ.ಡಾ.ಅಗರಿ ನವೀನ್ ಭಂಡಾರಿಯವರು ಬೆಂಗಳೂರು ನಗರದ ಬೊಮ್ಮನಹಳ್ಳಿಯಲ್ಲಿ 111 ಎಕ್ರೆ ಪ್ರದೇಶದಲ್ಲಿ ಸುಸಜ್ಜಿತವಾದ ಮೂಲ್ಕಿ ಸುಂದರರಾಮ್ ಶೆಟ್ಟಿ ಬಡಾವಣೆ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಇಲ್ಲಿ 535 ಅಪಾರ್ಟ್‌ಮೆಂಟ್‌ನ್ನು ಇವರ ನೇತೃತ್ವದಲ್ಲಿ ನಿರ್ಮಿಸಲಾಗಿದೆ. ಇದು ಬೆಂಗಳೂರಿನಲ್ಲೇ ಮಾದರಿ ಬಡಾವಣೆಯಾಗಿ ಬೆಳೆದಿದೆ. ಇದರ ಬೆಳವಣಿಗೆ, ಅಭಿವೃದ್ಧಿ ಹಿಂದೆ ಡಾ.ಅಗರಿ ನವೀನ್ ಭಂಡಾರಿಯವರ ಪರಿಶ್ರಮವಿದೆ. ಡಾ.ಅಗರಿ ನವೀನ್ ಭಂಡಾರಿಯವರು ಮೂಲ್ಕಿ ಸುಂದರರಾಮ್ ಶೆಟ್ಟಿ ನಗರ ಸೌಹಾರ್ದ ಸಹಕಾರಿ ಸಂಘದಲ್ಲಿ ಕಳೆದ 19 ವರ್ಷಗಳಿಂದ ಅಧ್ಯಕ್ಷರಾಗಿ, ಸಹಕಾರ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿ, ಮಾದರಿಯಾಗಿ ಬೆಳೆಸಿದ್ದಾರೆ. ಸಹಕಾರ ಕ್ಷೇತ್ರಕ್ಕೆ ತನ್ನದೇ ಅದ ಕೊಡುಗೆಯನ್ನು ನೀಡಿರುವ ಅವರು ಮೂಲ್ಕಿ ಸುಂದರರಾಮ್ ಶೆಟ್ಟಿ ನಗರ ಕ್ಷೇಮಾಭಿವೃದ್ಧಿ ಸಂಘದ ಸ್ಥಾಪಕಾಧ್ಯಕ್ಷರಾಗಿರುತ್ತಾರೆ. ಪ್ರಸ್ತುತ ಸುಂದರರಾಮ್ ಶೆಟ್ಟಿ ನಗರ ಕ್ಲಬ್ ಸಮಿತಿಯ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಬೆಂಗಳೂರು ಬೊಮ್ಮನ ಹಳ್ಳಿಯಲ್ಲಿರುವ ಮೂಲ್ಕಿ ಸುಂದರರಾಮ್ ಶೆಟ್ಟಿ ನಗರದ ವಿಜಯಾ ಬ್ಯಾಂಕ್ ಎಂಪ್ಲಾಯೀಸ್ ಲೇಟೌಟ್‌ನಲ್ಲಿ ಇರುವ ಶ್ರೀ ಆಯ್ಯಪ್ಪ ದೇವಾಲಯದಲ್ಲಿ ಶಿವನ ಗುಡಿ ಸ್ಥಾಪನೆಯ ಕಾರ್ಯದಲ್ಲೂ ಇವರು ಬಹಳಷ್ಟು ಕೊಡುಗೆಯನ್ನು ನೀಡಿರುವ ಇವರು ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಜನ ಮನ್ನಣೆ ಗಳಿಸಿದ್ದಾರೆ.ನ.17ರಂದು ಪ್ರಶಸ್ತಿ ಸ್ವೀಕಾರ:ಡಾ.ಅಗರಿ ನವೀನ್ ಭಂಡಾರಿಯವರು ನ.17ರಂದು ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಂದ ಸಹಕಾರ ರತ್ನ ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ. ಅವರಿಗೆ Mpmla’s ನ್ಯೂಸ್ ಶುಭ ಹಾರೈಸುತ್ತದೆ

ಪ್ರಾದೇಶಿಕ ವಾರ್ತೆಗಳು

‘ಮಹಿಳೆಯರು ಸ್ವಾಭಿಮಾನದಿಂದ ಬದುಕಲು ಸಹಕಾರಿ ಕ್ಷೇತ್ರ ಕಾರಣ’-ಸ್ಪೀಕರ್ ಯು.ಟಿ.ಖಾದರ್. ಮಂಗಳೂರಿನಲ್ಲಿ 71ನೇ ಸಹಕಾರ ಸಪ್ತಾಹ ಕಾರ್ಯಕ್ರಮ

ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ., ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ರಿ. ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು, ಎಲ್ಲಾ ವಿಧದ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆಯ ಸಹಯೋಗದೊಂದಿಗೆ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಶನಿವಾರ ಕರಾವಳಿ ಉತ್ಸವ ಮೈದಾನದಲ್ಲಿ ಜರುಗಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು, “ಕಳೆದ 71 ವರ್ಷಗಳಲ್ಲಿ ಸಹಕಾರಿ ಕ್ಷೇತ್ರ ಬಹಳಷ್ಟು ಅಭಿವೃದ್ಧಿಯನ್ನು ಕಂಡಿದೆ. ಮಹಿಳೆಯರು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಲು ಸಹಕಾರಿ ಕ್ಷೇತ್ರ ಮತ್ತು ತತ್ವ ಬಹಳಷ್ಟು ಕೊಡುಗೆಯನ್ನು ನೀಡಿದೆ. ನಮ್ಮ ದೇಶ, ರಾಜ್ಯ ಮತ್ತು ಜಿಲ್ಲೆಯ ಪ್ರಗತಿಗೆ ಸಹಕಾರಿ ಕ್ಷೇತ್ರದ ಹಿರಿಯರು ಹೆಚ್ಚಿನ ಪ್ರಯತ್ನ ಪಟ್ಟಿದ್ದಾರೆ. ನ.14ರಿಂದ ರಾಜ್ಯದ ಉದ್ದಗಲಕ್ಕೂ ಒಂದು ವಾರಗಳ ಕಾಲ ಸಹಕಾರಿ ಸಪ್ತಾಹ ನಡೆಸಲಾಗುತ್ತದೆ. ಇದಕ್ಕೆ ಕಾರಣ ನಮ್ಮ ದೇಶದ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರೂ ಅವರು. ಬ್ರಿಟಿಷರಿಂದ ನಾವು ಸ್ವಾತಂತ್ರ್ಯ ಪಡೆದಾಗ ದೇಶದಲ್ಲಿ ಇದ್ದಿದ್ದು ಬರೀ 33 ಕೋಟಿ ಜನರು. ಆಗ ಊಟಕ್ಕೆ ಪರದಾಡುವ ಸನ್ನಿವೇಶ ಇಲ್ಲಿತ್ತು. ಆದರೆ ಈಗ 140 ಕೋಟಿ ಜನರ ಮೂರು ಹೊತ್ತಿನ ಊಟಕ್ಕೆ ಯಾವುದೇ ತೊಂದರೆ ಎದುರಾಗಿಲ್ಲ. ಇದಕ್ಕೆ ಕಾರಣ ಪಂಡಿತ್ ನೆಹರೂ ಅವರ ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿಯಾಗಿದೆ. ಗ್ರಾಮೀಣ ಭಾಗದ ಜನರು ಇಂದು ಸಹಕಾರಿ ತತ್ವದ ಮೂಲಕ ಕ್ರಾಂತಿಕಾರಿ ಬದಲಾವಣೆಯನ್ನು ತಮ್ಮ ಬದುಕಿನಲ್ಲಿ ಅನುಷ್ಠಾನಗೊಳಿಸಿದ್ದಾರೆ. ಜನಾರ್ದನ ಪೂಜಾರಿಯವರ ಸಾಲಮೇಳದಿಂದ ಜನಸಾಮಾನ್ಯರು ಬ್ಯಾಂಕ್ ಬಾಗಿಲು ನೋಡುವಂತಾಯಿತು. ಇಂತಹ ಕಾರ್ಯಕ್ರಮಗಳಿಂದ ಜನರು ಸ್ವಾಭಿಮಾನಿಗಳಾಗಲಿ“ ಎಂದು ಶುಭ ಹಾರೈಸಿದರು. ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್‌ ಮಾತನಾಡಿ, ”ಸಹಕಾರಿ ಕ್ಷೇತ್ರ ಮಹಿಳೆಯರ ಅಭೂತಪೂರ್ವ ಬೆಂಬಲ ಹಾಗೂ ಸಹಕಾರದಿಂದ ನಡೆಯುತ್ತಿದೆ. ಹಳ್ಳಿ ಹಳ್ಳಿಗಳಲ್ಲೂ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಇವರೆಲ್ಲರ ಶ್ರಮದಿಂದ ಸಹಕಾರಿ ಕ್ಷೇತ್ರ ಶ್ರೀಮಂತವಾಗಿದೆ. ಮುಂದೆ ಇನ್ನಷ್ಟು ಸಂಭ್ರಮ ಸಡಗರದಿಂದ ಸಪ್ತಾಹ ಆಚರಣೆಯಾಗಬೇಕು“ ಎಂದರು.ಮಾತು ಮುಂದುವರಿಸಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು, ”ಸಹಕಾರಿ ಆಂದೋಲನದಲ್ಲಿ ಹೆಚ್ಚೆಚ್ಚು ಯುವಕರು ಯುವತಿಯರು ತೊಡಗಿಕೊಳ್ಳುವಂತಾಗಬೇಕು. ಹಳ್ಲಿಗಾಡಿನಲ್ಲಿ ಸಹಕಾರಿ ತತ್ವದ ಮೇಲೆ ನಂಬಿಕೆ ಇರಿಸಿ ಆಂದೋಲನದಲ್ಲಿ ಪಾಲು ಪಡೆಯುತ್ತಿರುವುದು ಹೆಮ್ಮೆಯ ವಿಚಾರ. ನ.14ರಿಂದ 20ರವರೆಗೆ ರಾಜ್ಯಾದ್ಯಂತ ಸಹಕಾರಿ ಸಪ್ತಾಹ ನಡೆಸಲಾಗುತ್ತಿದೆ. ಕೇಂದ್ರ ಸರಕಾರದಲ್ಲಿ ಸಹಕಾರಿ ಸಚಿವಲಾಯ ಮಾಡಬೇಕು ಎಂಬ ಬೇಡಿಕೆ ನಮ್ಮದಾಗಿತ್ತು. ಅದನ್ನು ಸರಕಾರ ನೆರವೇರಿಸಿದ್ದು ಅಮಿತ್ ಶಾ ಅದರ ನೇತೃತ್ವ ವಹಿಸಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಜಾತಿ, ಪಕ್ಷಗಳ ಆಧಾರದಲ್ಲಿ ಕಾರ್ಯ ನಿರ್ವಹಿಸಬಾರದು. ಹಳ್ಳಿಯ ಮುಗ್ಧ ವ್ಯಕ್ತಿ ಕೂಡ ಸಹಕಾರಿ ಬ್ಯಾಂಕ್ ಪ್ರಯೋಜನ ಪಡೆಯುವಂತಾಗಬೇಕು. ಆಗ ಇಂತಹ ಸಪ್ತಾಹದ ಆಚರಣೆ ಸಾರ್ಥಕವಾಗುತ್ತದೆ“ ಎಂದರು. ಬಳಿಕ ಮಾತಾಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, “ಸ್ವಾತಂತ್ರ್ಯದ ಬಳಿಕ ಪಂಚವಾರ್ಷಿಕ ಯೋಜನೆಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಬಲವನ್ನು ತುಂಬುವ ಕೆಲಸ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಸಹಕಾರಿ ಕ್ಷೇತ್ರದಲ್ಲಿ ಬಹಳಷ್ಟು ಕ್ರಾಂತಿಕಾರಿ ಬದಲಾವಣೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಾಮಾನ್ಯರು ವ್ಯವಸ್ಥಿತವಾಗಿ ಸಹಕಾರಿ ಕ್ಷೇತ್ರವನ್ನು ಕಟ್ಟಿಕೊಂಡು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ“ ಎಂದರು.ವೇದಿಕೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕಡಾ.ಭರತ್ ಶೆಟ್ಟಿ ವೈ., ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಕೆ.ಎಸ್. ನವೀನ್, ಗುರುಸ್ವಾಮಿ, ರಮೇಶ್, ಪ್ರಸಾದ್ ರೆಡ್ಡಿ, ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಪ್ರಸಾದ್ ಕೌಶಲ್ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್., ಎಸ್ ಸಿಡಿಸಿಸಿ ಬ್ಯಾಂಕ್ ಸಿಇಒ ಗೋಪಾಲಕೃಷ್ಣ ಭಟ್, ನಿರ್ದೇಶಕ ವಿನಯ್ ಕುಮಾರ್ ಸೂರಿಂಜೆ ಮತ್ತಿತರರು ಉಪಸ್ಥಿತರಿದ್ದರು.ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಟಿ.ಜಿ.ರಾಜರಾಮ ಭಟ್ ಧನ್ಯವಾದ ಸಮರ್ಪಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸಿ ”ಸಹಕಾರ ಮಾಣಿಕ್ಯ“ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಜೊತೆಗೆ 5 ಗ್ರಾಂ. ಚಿನ್ನದ ಪದಕ, 10000 ರೂ. ನಗದು ಹಾಗೂ ಪಾರಿತೋಷಕ ನೀಡಲಾಯಿತು.ಶ್ರೀನಿವಾಸ್ ಇಂದಾಜೆಗೆ ಪ್ರಶಸ್ತಿ!ಪತ್ರಿಕಾರಂಗದ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರಿಗೆ ನೀಡಲಾಯಿತು.

ಪ್ರಾದೇಶಿಕ ವಾರ್ತೆಗಳು

‘ಯಕ್ಷಾಂಗಣ’ದ ತಾಳಮದ್ದಳೆ ಸಪ್ತಾಹ – ಹಿರಿಯರ ಸಂಸ್ಮರಣೆ. ‘ವಿದ್ವಾನ್ ಕಾಂತ ರೈ ಯಕ್ಷಗಾನ ಮತ್ತು ಮನೆತನಕ್ಕೆ ಕೀರ್ತಿ ತಂದವರು’: ಜಯರಾಮ ಸಾಂತ

ಮಂಗಳೂರು: ‘ಕೊಳ್ನಾಡು ಗ್ರಾಮದ ಕುಳಾಲು ಕುಟುಂಬದಲ್ಲಿ ಜನಿಸಿದ ವಿದ್ವಾನ್ ಕಾಂತ ರೈ ಮೂಡಬಿದಿರೆಯಲ್ಲಿ ವೃತ್ತಿ ಜೀವನವನ್ನು ನಡೆಸುತ್ತಾ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ. ಹಳೆಯ ತಲೆಮಾರಿನ ಅರ್ಥಧಾರಿಯಾಗಿ, ಬಹುಶ್ರುತ ವಿದ್ವಾಂಸರಾಗಿ ಯಕ್ಷಗಾನ ರಂಗದಲ್ಲಿ ಮೆರೆದ ಅವರು ಪ್ರಗತಿಪರ ಕೃಷಿಕರಾಗಿ, ಕುಟುಂಬದ ಯಜಮಾನರಾಗಿ ಹುಟ್ಟಿದ ಮನೆಗೆ ಕೀರ್ತಿ ತಂದ ಮೇರು ವ್ಯಕ್ತಿ’ ಎಂದು ಯಕ್ಷಗಾನ ಹವ್ಯಾಸಿ ಕಲಾವಿದ ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಕೆ. ಜಯರಾಮ ಸಾಂತ ಹೇಳಿದ್ದಾರೆ.‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮವಾಗಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆಯುತ್ತಿರುವ 12ನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ ಅಂಗವಾಗಿ ನ.13ರಂದು ಜರಗಿದ ವಿದ್ವಾನ್ ಕೆ.ಕಾಂತ ರೈ ಮೂಡಬಿದಿರೆ ಅವರ ಸಂಸ್ಮರಣಾ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿ ಅವರು ಮಾತನಾಡಿದರು. ಸಂಸ್ಕಾರಯುತ ಸಂಸ್ಮರಣೆ :ಹರೇಕಳ ವಿದ್ಯಾ ಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯ ಕೆ.ರವೀಂದ್ರ ರೈ ಕಲ್ಲಿಮಾರು ತಮ್ಮ ಸಂಸ್ಮರಣ ಭಾಷಣದಲ್ಲಿ ‘ಗತಿಸಿ ಹೋದ ಹಿರಿಯರನ್ನು ಸ್ಮರಿಸಿಕೊಳ್ಳುವುದು ಒಂದು ಸಂಸ್ಕಾರಯುತ ಕಾರ್ಯ. ಕಾಂತ ರೈಯವರು ಆದರ್ಶ ಅಧ್ಯಾಪಕರಾಗಿ, ಪ್ರಶಸ್ತಿ ವಿಜೇತ ಕೃಷಿಕರಾಗಿ, ಯಕ್ಷಗಾನದ ಶ್ರೇಷ್ಠ ಅರ್ಥಧಾರಿಯಾಗಿ, ಪ್ರಸಂಗ ಕರ್ತರು ಹಾಗೂ ಸಾಹಿತಿಯಾಗಿ ಉನ್ನತ ವ್ಯಕ್ತಿತ್ವವನ್ನು ಪಡೆದವರು. ಯಕ್ಷಾಂಗಣವು ಪ್ರತಿ ವರ್ಷ ಅವರ ಸಂಸ್ಮರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಿದೆ’ ಎಂದು ನುಡಿದರು.ಬೋಳಾರ ಶ್ರೀ ಮಾರಿಯಮ್ಮ ಮಹಿಷ ಮರ್ದಿನಿ ದೇವಾಲಯದ ನಿಕಟಪೂರ್ವ ಆಡಳಿತ ಮೊಕ್ತೇಸರ ತಾರಾನಾಥ ಶೆಟ್ಟಿ ಬೋಳಾರ, ಭಾರತೀಯ ರಿಸರ್ವ್ ಬ್ಯಾಂಕಿನ ನಿವೃತ್ತ ಮಹಾ ಪ್ರಬಂಧಕ ರಾಜಾರಾಮ ಶೆಟ್ಟಿ ಮನವಳಿಕೆ ಗುತ್ತು, ವಿಶ್ರಾಂತ ಏರ್ ಪೋರ್ಟ್ ಅಧಿಕಾರಿ ಆನಂದ ಶೆಟ್ಟಿ ಮಿಜಾರು, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಕಾಂತ ರೈಯವರ ಮೊಮ್ಮಗ ವಿಶಾಲಕೀರ್ತಿ ರೈ ಹೊಸಂಗಡಿ ಮೂಡಬಿದ್ರಿ, ಮಹೇಶ್ ಮೋಟರ್ಸ್ ಮಾಲಕ ಎ.ಕೆ. ಜಯರಾಮ ಶೇಖ, ಹರಿಕಥಾ ಪರಿಷತ್ ಅಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ, ಪ್ರಗತಿಪರ ಕೃಷಿಕ ಸೋಮಶೇಖರ ಚೌಟ, ಶಿಕ್ಷಕ ತ್ಯಾಗಂ ಹರೇಕಳ ಉಪಸ್ಥಿತರಿದ್ದರು.ಯಕ್ಷಾಂಗಣ ಮಂಗಳೂರು ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ವಂದಿಸಿದರು. ಸಮಿತಿ ಸಂಚಾಲಕಿ ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿಗಳಾದ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ಸುಮಾ ಪ್ರಸಾದ್ ಸಹಕರಿಸಿದರು. ‘ಸೈಂಧವ ವಧೆ’ ತಾಳಮದ್ದಳೆ:ಯಕ್ಷಗಾನ ತಾಳಮದ್ದಳೆ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮವಾಗಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ ಇವರಿಂದ ‘ಸೈಂಧವ ವಧೆ’ ತಾಳಮದ್ದಳೆ ಜರಗಿತು. ಭಾಗವತರಾಗಿ ಮಹೇಶ್ ಕನ್ಯಾಡಿ ಮತ್ತು ಹಿಮ್ಮೇಳದಲ್ಲಿ ಮುರಳೀಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ ಭಾಗವಹಿಸಿದರು. ದಿವಾಕರ ಆಚಾರ್ಯ ಗೇರುಕಟ್ಟೆ, ಅಂಬಾ ಪ್ರಸಾದ್ ಪಾತಾಳ, ಜಯರಾಮ ಭಟ್ ದೇವಸ್ಯ, ಗುಡ್ಡಪ್ಪ ಬಲ್ಯ, ಹರೀಶ್ ಆಚಾರ್ಯ ಉಪ್ಪಿನಂಗಡಿ, ಶ್ರೀಧರ ಎಸ್.ಪಿ. ಸುರತ್ಕಲ್, ಶ್ರುತಿ ವಿಸ್ಮಿತ್ ಉಪ್ಪಿನಂಗಡಿ ಅರ್ಥಧಾರಿಗಳಾಗಿದ್ದರು.

ಪ್ರಾದೇಶಿಕ ವಾರ್ತೆಗಳು

ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ. ‘ಅಂಗನವಾಡಿ ಶಿಕ್ಷಕಿಯರ ಸೇವೆಯಿಂದ ಮಕ್ಕಳ ಅಭ್ಯುದಯ’ : ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ರಶ್ಮಿ ಎಸ್.ಆರ್.

ಮಂಗಳೂರು: ಎಳೆಯ ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ನೀಡುತ್ತಿರುವ ಅಂಗನವಾಡಿ ಶಿಕ್ಷಕಿಯರ ಸೇವೆ ಮಕ್ಕಳ ಅಭ್ಯುದಯಕ್ಕೆ ಕಾರಣವಾಗಿದೆ. ಇಂತಹ ಅಂಗನವಾಡಿಗಳ ಅಭಿವೃದ್ಧಿಗೆ ಸಾರ್ವಜನಿಕ ಸಹಭಾಗಿತ್ವವೂ ಅಗತ್ಯ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ರಶ್ಮಿ ಎಸ್.ಆರ್. ಹೇಳಿದರು.ನಗರದ ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾದ ಮಕ್ಕಳ ದಿನಾಚರಣೆ ಹಾಗೂ ಪುಟಾಣಿ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ ಮಕ್ಕಳ ದಿನಾಚರಣೆಯಂದು ಎಲ್ಲ ಮಕ್ಕಳು ಸಂಭ್ರಮಿಸುವಂತಾಗಬೇಕು . ಯಾವ ಮಗು ಕೂಡಾ ಶಿಕ್ಷಣದಿಂದ ವಂಚಿತರಾಗದಂತೆ ಕಾಳಜಿ ವಹಿಸುವುದು ಮುಖ್ಯ ಎಂದು ಅವರು ಹೇಳಿದರು.ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ‘ ಮಕ್ಕಳಲ್ಲಿ ದೇವರನ್ನು ಕಾಣುವ ಸಂಸ್ಕಾರ ನಮ್ಮದು. ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿರುವ ಚಟುವಟಿಕೆ ಉತ್ತಮವಾಗಿದೆ ಎಂದರು.ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಕಾಮತ್ ಕ್ಯಾಟರರ್ಸ್ ಮಾಲೀಕ ಸುಧಾಕರ ಕಾಮತ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ಪತ್ರಕರ್ತರಾದ ಕೇಶವ ಕುಂದರ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್., ಪತ್ರಕರ್ತರಾದ ಪ್ರೀತಂ ರೈ, ಲಲಿತಾಶ್ರೀ , ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಶಿಕ್ಷಕಿ ನಂದಾ, ಸಹಾಯಕಿ ಲಕ್ಷ್ಮಿ,ಆಶಾ ಕಾರ್ಯ ಕರ್ತೆ ಪ್ರಭಾ ಉಪಸ್ಥಿತರಿದ್ದರು.ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ನಿರಂತರ ಶ್ರಮವಹಿಸಿದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಅವರನ್ನು ಅಂಗನವಾಡಿ ಕೇಂದ್ರದ ಪರವಾಗಿ ಇದೇ ಸಂದರ್ಭ ಸನ್ಮಾನಿಸಲಾಯಿತು.

Scroll to Top