ಮಂಗಳೂರು :ಸೇವಾ ಭಾರತಿ(ರಿ) ಮಂಗಳೂರು ಕಳೆದ 33 ವರ್ಷಗಳಿಂದ ದಿವ್ಯಾಂಗರ ಜೀವನ ಸ್ತರ ಸುಧಾರಿಸಲು ಶ್ರಮಿಸುತ್ತಿದೆ. ತನ್ನ ಅಂಗಸಂಸ್ಥೆಗಳ ಮೂಲಕ ಅವರಿಗೆ ಅವಶ್ಯವಿರುವ ಶಿಕ್ಷಣ, ತರಬೇತಿ, ಚಿಕಿತ್ಸೆ ಇತ್ಯಾದಿ ಸೌಕರ್ಯಗಳನ್ನು ಒದಗಿಸಿಕೊಟ್ಟು ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಈ ಪೈಕಿ,1998 ರಲ್ಲಿ ಆರಂಭವಾದ “ಆಶಾ ಜ್ಯೋತಿ”ಯೂ ಒಂದು. ಆಶಾಜ್ಯೋತಿಯು ದಿವ್ಯಾಂಗರು ಮತ್ತು ಅವರ ಹೆತ್ತವರ ಒಂದು ವೇದಿಕೆ. ಅದು ಈ ಕೆಳಗಿನ ಚಟುವಟಿಕೆಗಳನ್ನು ನಡೆಸುವ ಉದ್ದೇಶ ಹೊಂದಿದೆ.
ದಿವ್ಯಾಂಗರಲ್ಲಿರುವ ಸುಪ್ತ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ, ಅರಳಿಸುವುದು.
ಅವರನ್ನು ಯಥಾಸಾಧ್ಯ ಸ್ವಾವಲಂಬಿಗಳನ್ನಾಗಿ ಮಾಡುವುದು.
ದಿವ್ಯಾಂಗರಲ್ಲಿ ಹಾಗೂ ಪೋಷಕರಲ್ಲಿರುವ ಅಸಹಾಯಕತೆಯ ವಾತಾವರಣವನ್ನು ನೀಗಿಸಿ ಅವರಲ್ಲಿ ವಿಶ್ವಾಸ ತುಂಬಿಸುವುದು.
ಅಂಗವಿಕಲತೆಯ ಗುರುತುಚೀಟಿಯನ್ನು ಪಡೆಯಲು ಸಹಕರಿಸುವುದು.
ಅವರಿಗಾಗಿ ವೈದ್ಯಕೀಯ ತಪಾಸಣಾ ಶಿಬಿರ/ಆಪ್ತ ಸಲಹಾ ಶಿಬಿರಗಳನ್ನು ನಡೆಸುವುದು.
ಸರಕಾರಿ ಹಾಗೂ ಅರೆಸರಕಾರಿ ಸಂಸ್ಥೆಗಳಿಂದ ದಿವ್ಯಾಂಗರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಒದಗಿಸುವುದು.
ದಿವ್ಯಾಂಗರಿಗಾಗಿ ವರ್ಷಕ್ಕೊಂದು ಬಾರಿ ಪ್ರವಾಸ ಹಾಗೂ ಮೇಳ ಆಯೋಜಿಸುವುದು.
ವಿಶೇಷ ಸಾಧನೆ ಮಾಡಿದ ದಿವ್ಯಾಂಗರನ್ನು ಸನ್ಮಾನಿಸುವುದು.


ಆಶಾಜ್ಯೋತಿಯು ಪ್ರತಿ ವರ್ಷ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ’ ఎంబ ಕಾರ್ಯಕ್ರಮವನ್ನು ದಿವ್ಯಾಂಗರಿಗಾಗಿಯೇ ಆಯೋಜಿಸುತ್ತದೆ. ಅವರಿಗೆ ಮನರಂಜನೆ ಒದಗಿಸುವ ಜೊತೆ ಜೊತೆಗೆ ಅವರಲ್ಲಿ ಚೈತನ್ಯ, ವಿಶ್ವಾಸ ತುಂಬಿಸುವುದೂ ಇದರ ಉದ್ದೇಶ. ಆರಂಭಿಕ ಕೆಲವು ವರ್ಷಗಳಲ್ಲಿ ಕಡಿಮೆ ಪ್ರಮಾಣದಲ್ಲಿ ದಿವ್ಯಾಂಗರು ಸೇರಿದ್ದರೆ 2024ರಲ್ಲಿ ಸುಮಾರು 1200 ದಿವ್ಯಾಂಗರು ಹಾಗೂ 1600 ಹೆತ್ತವರು, ಹಿತೈಷಿಗಳು ಸೇರಿ ಸುಮಾರು 2800ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಮೇಳದಲ್ಲಿ ದಿವ್ಯಾಂಗರು ಖುಷಿ ಪಡುವುದರ ಜೊತೆಗೆ ಹಾಡುವುದು, ಕುಣಿಯುವುದು, ಸ್ಪರ್ಧೆ ಹಾಗೂ ಆಟೋಟಗಳಲ್ಲಿ ಭಾಗವಹಿಸುವುದು, ಕುದುರೆ ಸವಾರಿ ಸಹಿತ ಅನೇಕ ಮೋಜಿನ ಆಟಗಳ ವ್ಯವಸ್ಥೆ ಇರುತ್ತದೆ. ಹೆತ್ತವರನ್ನೂ ಸೇರಿಸಿದಂತೆ ಮನರಂಜನಾ ಸ್ಪರ್ಧೆಗಳು ಇರುತ್ತವೆ. ಮೇಳದಲ್ಲಿ ವಿಶಿಷ್ಟರಿಗೆ ಎಲ್ಲವೂ ಮುಕ್ತ ಮತ್ತು ಉಚಿತ. ಆಶಾಜ್ಯೋತಿಯ ಚಟುವಟಿಕೆಗಳು ಸಾರ್ವಜನಿಕರು ಹಾಗೂ ಸರ್ಕಾರಿ ಸಂಸ್ಥೆಗಳ ಆರ್ಥಿಕ ಸಹಕಾರದಿಂದಲೇ ನಡೆಯುತ್ತವೆ.


ಈ ವರ್ಷದ ಮೇಳವು ಕೆನರಾ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್‌ನ ಸಹಭಾಗಿತ್ವದಲ್ಲಿ ದಿನಾಂಕ 19.01.2025 ನೇ ಆದಿತ್ಯವಾರದಂದು ಬೆಳಿಗ್ಗೆ 8.30ರಿಂದ ಸಾಯಂಕಾಲ 4.15ರ ತನಕ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವುದು. ಅಂದು ಬೆಳಿಗ್ಗೆ 9.30 ಗಂಟೆಗೆ ಮೇಳದ ಉದ್ಘಾಟನೆಯನ್ನು ಮನೋಜ್ ಕುಮಾರ್, ಮಹಾ ಪೌರರು, ಮಂಗಳೂರು ಮಹಾನಗರಪಾಲಿಕೆ ಇವರು ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಮ್ ಕುಮಾರ್ ಬೇಕಲ್,ನಿರ್ದೇಶಕರು, M/s ಸಿಟಾಡೆಲ್ ಪ್ರೊಜೆಕ್ಟ್ ಮತ್ತು ಡೆವೆಲಪರ್ಸ್, ಲಾಂಚೂಲಾಲ್ ಕೆ.ಎಸ್., ಸಿ.ಇ.ಒ.ಅಸ್ತ್ರ ಗ್ರೂಪ್ ಇವರು ಮುಖ್ಯ ಅತಿಥಿಗಳಾಗಿರುತ್ತಾರೆ.

ಸರ್ಕಾರದಿಂದ ದಿವ್ಯಾಂಗರಿಗೆ ಲಭ್ಯವಾಗುವ ಸೌಲಭ್ಯಗಳ ಕುರಿತು ಶ್ರೀಮತಿ ಮಾಲಿನಿ ರಾಡ್ರಿಗಸ್, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ಇವರು ವಿವರಗಳನ್ನು ನೀಡಲಿದ್ದಾರೆ.
ಆಶಾಜ್ಯೋತಿಯು ದಿವ್ಯಾಂಗರು ಮತ್ತು ಅವರ ಹೆತ್ತವರಿಗೆ 22.12.2024ರಂದು ಪ್ರವಾಸವನ್ನು ಆಯೋಜಿಸಿದ್ದು, ಮುದ್ದಾಣು ಮಹಾಲಿಂಗೇಶ್ವರ ಕ್ಷೇತ್ರ, ಇನ್ನ ತಣ್ಣೀರುಬಾವಿ ಟ್ರೇ ಪಾರ್ಕ್‌ಗೆ ಕರೆದುಕೊಂಡು ಹೋಗಲಾಯಿತು. 190 ಮಂದಿ ದಿವ್ಯಾಂಗರು ಮತ್ತು ಪೋಷಕರು, ಶಿಕ್ಷಕರು ಈ ಪ್ರವಾಸದಲ್ಲಿ ಭಾಗವಹಿಸಿದ್ದರು.
18 ವರ್ಷ ಮೇಲ್ಪಟ್ಟ ಸ್ವಲೀನತೆ (Autism), ಸೆರೆಬ್ರಲ್ ಪಾಲ್ಸಿ, ಮಾನಸಿಕ ಕುಂಠಿತ(Mental Retardation) ದಿವ್ಯಾಂಗರಿಗೆ ಕಾನೂನು ಬದ್ಧ ಪೋಷಕತ್ವ ಪ್ರಮಾಣ ಪತ್ರ (Legal Guardianship Certificate) ಪಡೆಯುವ ಬಗ್ಗೆ ಮತ್ತು ನಿರಾಮಯ ಆರೋಗ್ಯ ಕಾರ್ಡ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಬಾರಿಯ ಮೇಳದಲ್ಲಿ ನೀಡಲಾಗುವುದು. ಅದೇ ರೀತಿ ‘ಸಕ್ಷಮ’ ಸಂಸ್ಥೆಯ ವತಿಯಿಂದ ದಿವ್ಯಾಂಗರ ಬಗ್ಗೆ ಮತ್ತು ನೇತ್ರದಾನದ ಬಗ್ಗೆ ಮಾಹಿತಿ ನೀಡಲಾಗುವುದು.


ನಮ್ಮ ಸುತ್ತಮುತ್ತ ಇರುವ ದಿವ್ಯಾಂಗರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಹಾಗೂ ಅವರ ಸಬಲೀಕರಣಕ್ಕಾಗಿ ಯೋಜಿಸಲಾಗಿರುವ ಈ ಕಾರ್ಯಕ್ರಮದ ಕುರಿತಾಗಿ ವಿವರವಾದ ಮಾಹಿತಿಗಳನ್ನು ತಮ್ಮ ಮುದ್ರಣ/ದೃಶ್ಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟಿಸುವ ಮೂಲಕ ಸಹಕರಿಸಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಈ ಹಿಂದಿನ ವರ್ಷಗಳಲ್ಲಿ ಕೂಡಾ ತಾವುಗಳು ಮೇಳದ ಮುನ್ನ ಮತ್ತು ಆ ಬಳಿಕವೂ ತಮ್ಮ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಕೊಟ್ಟಿರುವ ವ್ಯಾಪಕ ಪ್ರಚಾರಕ್ಕಾಗಿ ನಾವು ಕೃತಜ್ಞರು.
ಪತ್ರಿಕಾಗೋಷ್ಠಿಯಲ್ಲಿ ಆಶಾಜ್ಯೋತಿಯ ಗೌರವಾಧ್ಯಕ್ಷರಾದ ವಿ. ಮುರಳೀಧರ ನ್ಯಾಕ್, ಅಧ್ಯಕ್ಷರಾದ ಶ್ರೀಮತಿ ಗೀತಾ ಲಕ್ಷ್ಮೀಶ್, ಕಾರ್ಯದರ್ಶಿಯವರಾದ ಎಸ್. ರವಿನಾಥ ಕುಡ, ಜೊತೆ ಕಾರ್ಯದರ್ಶಿ ಗಣರಾಜ.ವೈ,ಖಜಾಂಚಿಯಾದ ಕೆ ವಿಶ್ವನಾಥ ಪೈ, ಜೊತೆ ಖಜಾಂಚಿಯಾದ ಬಿ ಅಶ್ವತ್ಥಾಮ ರಾವ್ ಮತ್ತು ಸೇವಾಭಾರತಿ (ರಿ) ಮಂಗಳೂರು ಇದರ ಗೌರವ ಕಾರ್ಯದರ್ಶಿಯಾದ ಹೆಚ್ ನಾಗರಾಜ ಭಟ್, ಖಜಾಂಚಿಯಾದ ಶ್ರೀ ಪಿ ವಿನೋದ್ ಶೆಣೈ ಇವರು ಉಪಸ್ಥಿತರಿದ್ದರು.



















































































































































































