ಮಂಗಳೂರು: ಮಂಗಳೂರಿನ ಜೈಲ್ ರಸ್ತೆಯಲ್ಲಿರುವ ಸೈಂಟ್ ಆ್ಯನ್ಸ್ ಫ್ರಾಯರಿಯಲ್ಲಿರುವ ಸೈಂಟ್ ಪಾದ್ರೆ ಪಿಯೋ ಪುಣ್ಯ ಕ್ಷೇತ್ರದಲ್ಲಿ ಸಂತ ಪಾದ್ರೆ ಪಿಯೋ ಅವರ ಹಬ್ಬವನ್ನು ಸೆ. 23 ರಂದು ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು.
‘ಸಂತ ಪಾದ್ರೆ ಪಿಯೋ: ಶಿಲುಬೆಯ ಯಾತ್ರಿಕ, ಭರವಸೆಯ ಸಂದೇಶವಾಹಕ’ ಎನ್ನುವುದು ಈ ವರ್ಷದ ಹಬ್ಬದ ಮುಖ್ಯ ವಿಷಯವಾಗಿದ್ದು, ಜಪ್ಪು ಸೈಂಟ್ ಜೋಸೆಫ್ ಸೆಮಿನರಿಯ ರೆಕ್ಟರ್ ವಂದನೀಯ ಫಾ. ಡಾ. ರಾಜೇಶ್ ರೊಸಾರಿಯೊ ಅಧ್ಯಕ್ಷತೆಯಲ್ಲಿ ಹಬ್ಬದ ಬಲಿ ಪೂಜೆ ನಡೆಯಿತು. 30 ಕ್ಕೂ ಹೆಚ್ಚು ಗುರುಗಳು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು. ಜೋ ರೊಡ್ರಿಗಸ್ ನೇತೃತ್ವದ ಗಾಯಕವೃಂದ ಮತ್ತು ಪಾದ್ರೆ ಪಿಯೋ ಗಾಯಕ ವೃಂದ ಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿತು.
ಬಲಿ ಪೂಜೆಯ ಬಳಿಕ ಕಾಪುಚಿನ್ ಪಬ್ಲಿಕೇಶನ್ ಟ್ರಸ್ಟ್‌ನ ಬ್ಯಾನರ್ ಅಡಿಯಲ್ಲಿ ಹೊರ ತಂದಿರುವ ಚಿಕ್ಕಮಗಳೂರು ಧರ್ಮ ಪ್ರಾಂತ್ಯದ ವಂದನೀಯ ಫಾ. ಜಾರ್ಜ್ ಡಿ’ಸೋಜಾ ಅವರು ಇಂಗ್ಲಿಷ್‌ನಿಂದ ಅನುವಾದಿಸಿದ ನಂಬಿಕೆ ಆಧಾರಿತ ಪರಿಸರ ಜಾಗೃತಿ ಸಂದೇಶ ನೀಡುವ ಕೃತಿ ‘ಟೆನ್ ಗ್ರೀನ್ ಕಮಾಂಡ್‌ಮೆಂಟ್ಸ್’, ದೈನಂದಿನ ಬೈಬಲ್ – ಕ್ಯಾಪುಚಿನ್ ಬೈಬಲ್ ಡೈರಿ- 2026 ಮತ್ತು ಡಿವೈನ್ ಮರ್ಸಿ ರಿಟ್ರೀಟ್ ಸೆಂಟರ್‌ನ ಹೊಸ 2026 ಕ್ಯಾಲೆಂಡರ್ ನ್ನು ಬಿಡುಗಡೆ ಮಾಡಲಾಯಿತು.
170 ಗಂಟೆಗಳ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ಸೈಂಟ್ ಅಲೋಶಿಯಸ್ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿ ರೆಮೋನಾ ಇವೆಟ್ ಪಿರೇರಾ ಮತ್ತು ಮಿಸ್ ಇಂಡಿಯಾ ಆಸ್ಟ್ರಲ್ 2025 ಕಿರೀಟ ಪಡೆದ ಆಶ್ನಾ ಜ್ಯುವೆಲ್ ಡಿ’ಸೋಜಾ ಅವರನ್ನು ಸನ್ಮಾನಿಸಲಾಯಿತು. ಹಬ್ಬದ ದಾನಿಗಳನ್ನು ಗೌರವಿಸಲಾಯಿತು. ಸೈಂಟ್ ಆ್ಯನ್ಸ್ ಫ್ರಾಯರಿಯ ಕಾಪುಚಿನ್ ಸಮುದಾಯದ ಗಾರ್ಡಿಯನ್ ವಂದನೀಯ ಫಾ. ಜೆರಾಲ್ಡ್ ಲೋಬೊ ಅವರು ವಂದಿಸಿದರು.









































































































































































































