ಡಿ.20ರಂದು ಉಡುಪಿಯಲ್ಲಿ ದೇವಾಡಿಗ ಮಹಾಧಿವೇಶನ-2026: ಪೂರ್ವಭಾವಿ ಸಭೆ *ದೇವಾಡಿಗ ಮಹಾಧಿವೇಶನದಿಂದ ಭೌಗೋಳಿಕ ಅಸ್ತಿತ್ವ ಸಾಧ್ಯ: ಧರ್ಮಪಾಲ್ ಯು. ದೇವಾಡಿಗ

8.2K Views 2h ago

ಮುಂಬಯಿ: ಒಗ್ಗಟ್ಟು ಮತ್ತು ಜಾಗೃತಿಯಿಂದ ಸಮುದಾಯದ ಇಂತಹ ಅಧಿವೇಶನದಿಂದ ಭೌಗೋಳಿಕವಾಗಿ ಹಂಚಿ ಹೋಗಿರುವ ಸಮುದಾಯ ಬಾಂಧವರನ್ನು ಒಂದೇ ಸೂರಿನಡಿ ತರಲು ಸಾಧ್ಯವಿದೆ. ನಮ್ಮಲ್ಲಿನ ಹಕ್ಕುಗಳು ಮತ್ತು ಅಸ್ತಿತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ತರ ಬದಲಾವಣೆಗೆ ಪೂರಕವಾಗುತ್ತವೆ. ತಳಮಟ್ಟದಿಂದಲೇ ಸಭೆಗಳನ್ನು ನಡೆಸಿ ಸಂಘಟನೆ ಬಲಪಡಿಸುವುದರಿಂದ ಸಮುದಾಯದ ಕಟ್ಟಕಡೆಯ ವ್ಯಕ್ತಿಯೂ ಧ್ವನಿಯಾಗುತ್ತಾನೆ ಮತ್ತು ತಳಮಟ್ಟದ ಸಮಸ್ಯೆಗಳನ್ನು ನೇರವಾಗಿ ಚರ್ಚಿಸಲು ಮಹಾಧಿವೇಶನಗಳಿಂದ ಸಾಧ್ಯವಾಗುತ್ತದೆ. ಆ ಮೂಲಕ ತಳಮಟ್ಟದ ಸಶಕ್ತೀಕರಣದಿಂದ ಸಮುದಾಯ ಅಧಿವೇಶನದ ಅಗತ್ಯತೆ ಮತ್ತು ಇದರಿಂದ ಆಗುವ ಪ್ರಯೋಜನಕ್ಕೆ ದೇವಾಡಿಗರೆಲ್ಲರ ಸಹಕಾರ ಅತ್ಯಾವಶ್ಯ ಎಂದು ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ತಿಳಿಸಿದರು.


ಡಿ. 20ರಂದು ಉಡುಪಿಯಲ್ಲಿ ಆಯೋಜಿಸಲಾಗಿರುವ ದೇವಾಡಿಗ ಮಹಾಧಿವೇಶನ-2026 ಇದರ ಪೂರ್ವಭಾವಿ ಸಭೆಯು ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ಇದರ ಸಭಾಂಗಣದಲ್ಲಿ ಜೂ. 21ರಂದು ನಡೆದಿದ್ದು ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಪಾಲ ದೇವಾಡಿಗ ಅವರು, ಅಧಿವೇಶನಗಳ ಮೂಲಕ ಮಹಿಳೆಯರಿಗೆ ಮತ್ತು ಯುವಕರಿಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸೂಕ್ತ ವೇದಿಕೆ ದೊರೆಯಲಿದೆ. ಯುವಶಕ್ತಿ ಸಮುದಾಯ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುತ್ತದೆ. ಮಾತ್ರವಲ್ಲದೆ ಸ್ವಸಮುದಾಯದ ಸಾಂಸ್ಕøತಿಕ ಮತ್ತು ಸಾಮಾಜಿಕ ಗುರುತು, ವಿಶಿಷ್ಟ ಸಂಸ್ಕøತಿ, ಆಚಾರ-ವಿಚಾರ ಹಾಗೂ ಪರಂಪರೆಯನ್ನು ಉಳಿಸಿಕೊಂಡು, ಮುಂದಿನ ಪೀಳಿಗೆಗೆ ಅದನ್ನು ಹಸ್ತಾಂತರಿಸಲು ಇಂತಹ ಮಹಾಸಭೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷ ರವಿ ಎಸ್. ದೇವಾಡಿಗ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಜನಾರ್ದನ ಪಡುಪಣಂಬೂರು ಮಾತನಾಡಿ, ಸಂಘಟನೆ ದೃಢವಾಗಿ ಕೆಲಸ ಮಾಡಲು ವಿವಿಧ ಉಪಸಮಿತಿಗಳನ್ನು ರಚಿಸಬೇಕಾದ ಅಗತ್ಯತೆಯನ್ನು ತಿಳಿಸಿದರು. ಉಡುಪಿ ನಗರಸಭೆ ಮಾಜಿ ಸದಸ್ಯ ವಿಜಯ ಕೊಡವೂರು ಮಾತನಾಡಿ ಗ್ರಾಮ ಸಭೆಗಳನ್ನು ರಚಿಸಿ ತಳಮಟ್ಟದಿಂದಲೇ ಸಂಘಟನೆ ಬಲಪಡಿಸುವ ಬಗ್ಗೆ ವಿವರಿಸಿ ಎಲ್ಲರ ಸಹಕಾರ ಬಯಸಿದರು.
ದೇವಾಡಿಗ ಸಂಘ ಪಾವಂಜೆ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮೀ ಜನಾರ್ಧನ್ ಹಾಗೂ ಉಡುಪಿ ಉದ್ಯಾವರ, ಕಟಪಾಡಿ, ಕಾಪು, ಉಚ್ಚಿಲ, ಪಡುಬಿದ್ರೆ, ಎರ್ಮಾಳು, ಎಲ್ಲೂರು, ಬೆಳ್ಮಣ್, ಬಂಟಕಲ್ಲು, ಪಲಿಮಾರು, ಹೆಜಮಾಡಿ, ಮೂಲ್ಕಿ, ಪಾವಂಜೆ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದರು. ದೇವಾಡಿಗ ಸಂಘ ಪಾವಂಜೆ ಅಧ್ಯಕ್ಷ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ, ದೇವಾಡಿಗ ಸಂಘ ಉಡುಪಿ ಅಧ್ಯಕ್ಷ ರತ್ನಾಕರ್ ಜಿ.ಎಸ್., ದೇವಾಡಿಗ ಸಂಘ ಮಂಗಳೂರು ಅಧ್ಯಕ್ಷ ಅಶೋಕ್ ಮೊಯಿಲಿ ಹಾಗೂ ಉಪಸ್ಥಿತ ಸಂಘದ ಅಧ್ಯಕ್ಷರುಗಳು ತಮ್ಮ ತಮ್ಮ ಅನಿಸಿಕೆಗಳನ್ನು ಮಂಡಿಸಿದರು.
ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಜಯಶ್ರೀ ಯಾದವ್ ಅವರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು. ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು ಇದರ ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷ ಯಾದವ ದೇವಾಡಿಗ ಸ್ವಾಗತಿಸಿದರು. ಸಭೆಯಲ್ಲಿ ದೇವಾಡಿಗ ಸಮಾಜ ಸೇವಾ ಸಂಗ ಪಾವಂಜೆ ಪರವಾಗಿ ಧರ್ಮಪಾಲ್ ಯು. ದೇವಾಡಿಗ ಇವರನ್ನು ಗೌರವಿಸಲಾಯಿತು. ವಿಶ್ವ ದೇವಾಡಿಗ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ದೇವಾಡಿಗ ಅಂಬಲಪಾಡಿ ಪ್ರಸ್ತಾವನೆಗೈದರು. ಸಂಘದ ನಿಕಟಪೂರ್ವ ಅಧ್ಯಕ್ಷ ರಾಮದಾಸ್ ಪಾವಂಜೆ ಕಾರ್ಯಕ್ರಮ ನಿರ್ವಹಿಸಿದರು. ಪಾವಂಜೆ ಸಂಘದ ಉಪಾಧ್ಯಕ್ಷ ಸತೀಶ್ ಇಂದಿರಾನಗರ ವಂದಿಸಿದರು.

Read More News

Scroll to Top