ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

‘ಕಲಾ ಪರ್ಬ’ದ ಲಾಂಛನ ಬಿಡುಗಡೆ

ಮಂಗಳೂರು: ಶರಧಿ ಪ್ರತಿಷ್ಠಾನದ ವತಿಯಿಂದ ಜ.11 ಮತ್ತು 12 ರಂದು ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆಯಲಿರುವ ‘ಕಲಾ ಪರ್ಬ’ದ ಲಾಂಛನ ಮತ್ತು ಕರಪತ್ರವನ್ನು ಬುಧವಾರ ನಗರದ ವಿಷ್ಣು ವೈಭವ ಹೊಟೇಲ್‌ನಲ್ಲಿ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.ಎಳೆಯ ಕಲಾವಿದರಿಗೆ ಸ್ಪೂರ್ತಿ ನೀಡಲು ‘ಕಲಾ ಪರ್ಬ’ ಆಯೋಜಿಸಿರುವುದು ಶ್ಲಾಘನೀಯ. ಕದ್ರಿ ಪಾರ್ಕ್‌ನ ಒಟ್ಟು ಅಭಿವೃದ್ದಿ ಹಾಗೂ ಪಾರ್ಕ್‌ನ ಒಳಗೆ ವಿವಿಧ ಕಲಾ ಚಟುವಟಿಕೆಗೆ ಅವಕಾಶ ಕಲ್ಪಿಸಲು 1 ಕೋಟಿ ರೂ. ಮೀಸಲಿಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಕಲಾಪರ್ಬ ಸಹಿತ ವಿವಿಧ ಕಲಾ ಚಟುವಡಿಕೆಗಳಿಗೆ ಪೂರಕವಾಗುವ ಕಾರ್ಯ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಈ ಸಂದರ್ಭ ತಿಳಿಸಿದರು.ಸಂಘಟಕ ಪುನೀಕ್ ಶೆಟ್ಟಿ ಮಾತನಾಡಿ, ಕಲಾವಿದರೆಲ್ಲರನ್ನೂ ಒಗ್ಗೂಡಿಸಿ ವಿವಿಧ ಕಲಾ ಪ್ರಕಾರಗಳನ್ನು ಒಂದೇ ಕಡೆ ಅಭಿವ್ಯಕ್ತ ಪಡಿಸುವ ಹಾಗೂ ತನ್ಮೂಲಕ ಕಲಾ ಕ್ಷೇತ್ರ ಇನ್ನಷ್ಟು ವಿಕಸನವಾಗುವ ಉದ್ದೇಶದಿಂದ ಕಲಾ ಪರ್ಬ ಆಯೋಜಿಸಲಾಗುತ್ತಿದೆ .ಸುಮಾರು 200 ಮಳಿಗೆಗಳಲ್ಲಿ ಕಲಾಕೃತಿ, ಛಾಯಾ ಚಿತ್ರ, 30 ಮಳಿಗೆಗಳಲ್ಲಿ ಶಿಲ್ಪ ಕಲಾ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಶರಧಿ ಪ್ರತಿಷ್ಟಾನದ ಮಾರ್ಗದರ್ಶಕ ರಮೇಶ್ ನಾಯಕ್, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಚಿತ್ರ ಕಲಾವಿದರಾದ ಕೋಟಿಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ, ರಾಜೇಂದ್ರ ಕೇದಿಗೆ, ಶ್ರೀಧರ ಹೊಳ್ಳ, ರಾಧಾಕೃಷ್ಣ ಭಟ್ ಮುಂತಾದವರು ಉಪಸ್ಥಿತರಿದ್ದರು. ಚಿತ್ರ ಕಲಾವಿದ ದಿನೇಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ

ಪಡುಬಿದ್ರಿ: ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ ಗುರುವಾರ ಬೆಳಗ್ಗೆ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾತಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು, “ತುಳು ಭಾಷೆ, ಸಂಸ್ಕೃತಿ, ಆಹಾರ ಪದ್ಧತಿಯನ್ನು ವಿಶ್ವದಗಲ ಮೆಚ್ಚಿಕೊಂಡ ಅಸಂಖ್ಯ ಜನರಿದ್ದಾರೆ. ತುಳು ಭಾಷೆಯ ಬೆಳವಣಿಗೆಗೆ ತುಳು ನಾಟಕ, ಸಿನಿಮಾ ಮತ್ತು ತುಳು ಕಲಾವಿದರು ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ. ಪಡುಬಿದ್ರಿಯ ಮಹಾಗಣಪತಿ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿದರೆ ನಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಈ ಸಿನಿಮಾ ಯಶಸ್ಸು ಕಾಣಲಿ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅತೀವ ಸಂತಸವಾಗುತ್ತಿದೆ“ ಎಂದು ಶುಭ ಹಾರೈಸಿದರು.ಹಿರಿಯ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, ”ತುಳು ಚಿತ್ರರಂಗಕ್ಕೆ ಈಗ ಪರ್ವಕಾಲ. ಮಂಗಳೂರಿನಲ್ಲಿ 9 ಸಿನಿಮಾಗಳಿಗೆ ಚಿತ್ರೀಕರಣ ನಡೆಯುತ್ತಿವೆ. ಒಳ್ಳೊಳ್ಳೆ ಸಿನಿಮಾಗಳನ್ನು ಜನರು ಖಂಡಿತ ಸ್ವೀಕರಿಸುತ್ತಾರೆ. ಸಿನಿಮಾ ತಂಡದ ಪ್ರಯತ್ನಕ್ಕೆ ತುಳುವರು ಬೆಂಬಲ ನೀಡಬೇಕು, ಚಿತ್ರತಂಡಕ್ಕೆ ಶುಭವಾಗಲಿ“ ಎಂದರು.ಕುಸೆಲ್ದರಸೆ ನವೀನ್ ಡಿ. ಪಡೀಲ್ ಮಾತನಾಡಿ, ”ಸಿನಿಮಾ ಯಶಸ್ಸು ಕಾಣಲಿ. ತುಳುನಾಡಿನಲ್ಲಿ ಸಿನಿಮಾ ಒಳ್ಳೆಯ ಹೆಸರು ಮಾಡಲಿ“ ಎಂದರು. ನಾಯಕ ನಟ ಶೋಧನ್ ಶೆಟ್ಟಿ ಮಾತನಾಡಿ, ”2019ರಲ್ಲಿಯೇ ಸಿನಿಮಾ ಮಾಡಲು ತಯಾರಿ ಮಾಡಿದ್ದೆ. ಆದರೆ ಕಾರಣಾಂತರದಿಂದ ವಿಳಂಬವಾಯಿತು. ಈಗ ಕಾಲ ಕೂಡಿಬಂದಿದೆ. ನಿಮ್ಮೆಲ್ಲರ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬರಲಿದೆ. ಭಾಗ 1ರ ಚಿತ್ರೀಕರಣ ಮುಗಿದ ಬಳಿಕ ಟೈಟಲ್ ಲಾಂಚ್ ಮಾಡಲಿದ್ದೇವೆ“ ಎಂದರು.ದೇವಸ್ಥಾನದ ಮೊಕ್ತೇಸರ ಭವಾನಿ ಶಂಕರ್ ಹೆಗ್ಡೆ, ಉಮೇಶ್ ಶೆಟ್ಟಿ, ನಟ ಶೋಧನ್ ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಡಾ ಪ್ರತೀಕ್ಷಾ, ಡಾ ನಿಖಿಲ್ ಶೆಟ್ಟಿ, ಸಂಜಯ್ ಶೆಟ್ಟಿ ಗೋಣಿಬೀಡು, ಡಾ ವೈಎನ್ ಶೆಟ್ಟಿ, ಮಿಥುನ್, ನವೀನ್ ಚಂದ್ರ ಶೆಟ್ಟಿ, ಜಗನ್ನಾಥ ಶೆಟ್ಟಿ ಕುಳಾಯಿ, ವಿಠಲ್ ಶೆಟ್ಟಿ, ಶಾಂತಾರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಉದ್ಯಮಿ ಪಲ್ಲವಿ ಸಂತೋಷ್ ಶೆಟ್ಟಿ ಕೆಮರಾ ಚಾಲನೆ ಮಾಡಿದರು.ಶಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.ಸಿನಿಮಾ ಕುರಿತು:ಶುಭಾ ಶೆಟ್ಟಿ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಧನರಾಜ್ ಶೆಟ್ಟಿ, ಉಮೇಶ್ ಶೆಟ್ಟಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶರತ್ ಪೂಜಾರಿ ಬಗ್ಗತೋಟ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು ಸಂದೀಪ್ ಉಡುಪಿ ಕೆಮರಾ ಕಣ್ಣಲ್ಲಿ ಸಿನಿಮಾ ಮೂಡಿಬರಲಿದೆ.ರವಿರಾಜ್ ಗಾಣಿಗ ಎಡಿಟರ್, ಪ್ರಸಾದ್ ಕೆ.ಶೆಟ್ಟಿ ಸಂಗೀತ ಸಂಯೋಜನೆ ಸಿನಿಮಾಕ್ಕಿರಲಿದೆ.ಕಲಾವಿದರಾಗಿ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ರಮೇಶ್ ಶೆಟ್ಟಿ, ಸೂರಜ್ ಸನಿಲ್, ನಿತೇಶ್ ಶೆಟ್ಟಿ, ಕೀರ್ತನಾ ಸಾಲಿಯಾನ್, ಶೋಭಾ ಪ್ರಿಯಾ ನಾಯರ್, ಸಂದೀಪ್ ಪೂಜಾರಿ ಬಣ್ಣ ಹಚ್ಚಲಿದ್ದಾರೆ.ಕಟೀಲು, ಪಡುಬಿದ್ರಿ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಪ್ರಾದೇಶಿಕ ವಾರ್ತೆಗಳು

ತಾಳಮದ್ದಳೆ ಸಪ್ತಾಹ ಸಮಾರೋಪ – ಕೆ.ಎಸ್.ಮಂಜುನಾಥರಿಗೆ ಯಕ್ಷಾಂಗಣ ಪ್ರಶಸ್ತಿ. ‘ಕಲೆಯಿಂದ ಬದುಕಿಗೆ ಮೌಲ್ಯ’: ಚಿತ್ತರಂಜನ್ ಬೋಳಾರ

ಮಂಗಳೂರು: ‘ಕಲಾವಿದ ತನ್ನ ನೈಪುಣ್ಯವನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡದೆ ಕಲೆಯ ಶ್ರೀಮಂತಿಕೆ ಹೆಚ್ಚಿಸಲು ಪ್ರಯತ್ನಿಸಬೇಕು. ಕಲೆ ತನ್ನ ಬದುಕಿಗೆ ಮೌಲ್ಯ ತಂದು ಕೊಟ್ಟಿದೆ ಎಂಬ ವಿನಯದಿಂದ ಅದನ್ನು ಆರಾಧಿಸಿದರೆ ಹೆಸರು, ಖ್ಯಾತಿ ತಾನಾಗಿ ಬರುತ್ತದೆ’ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ ಹೇಳಿದ್ದಾರೆ. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆಯುತ್ತಿದ್ದ 12ನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದ ಸಮಾರೋಪ ಸಮಾರಂಭದಲ್ಲಿ ನವೆಂಬರ್ 17ರಂದು ದೀಪ ಪ್ರಜ್ವಲನೆ ಮಾಡಿ ಅವರು ಮಾತನಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಬ್ಯಾಂಕ್ ಮಹಾಪ್ರಬಂಧಕಿ ಸುಮನಾ ಘಾಟೆ ‘ಗಾನ,ನೃತ್ಯ, ಮಾತು, ಬಣ್ಣ ಗಾರಿಕೆ ಹಾಗೂ ವೇಷಭೂಷಣಗಳಿಂದ ರಂಜಿಸುವ ಯಕ್ಷಗಾನ ಕಲೆ ಕರಾವಳಿಯ ಹೆಮ್ಮೆ. ಅದರಲ್ಲೂ ತಾಳಮದ್ದಳೆಗೆ ಮಾತೇ ಬಂಡವಾಳ. ಶಾಸ್ತ್ರಾರ್ಥ ಮತ್ತು ಪುರಾಣ ಜ್ಞಾನಗಳಿಂದ ಮೇಳೈಸಿ ಕಲಾವಿದರು ತಮ್ಮ ಗತ್ತು, ಗಾಂಭೀರ್ಯ ಮತ್ತು ಸ್ವರ ಸಾಮರ್ಥ್ಯದಿಂದ ಪುರಾಣ ಜಗತ್ತನ್ನು ಸಾಕಾರಗೊಳಿಸುತ್ತಾರೆ’ ಎಂದರು. ಉದ್ಯಮಿ ಎ.ಕೆ.ಜಯರಾಮ ಶೇಖ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರಶಸ್ತಿ ಪ್ರದಾನ :ಹವ್ಯಾಸಿ ಯಕ್ಷಗಾನ ಭಾಗವತ, ಪ್ರಸಂಗಕರ್ತ ಹಾಗೂ ವಚನ ಸಾಹಿತಿ ಕೆ.ಎಸ್. ಮಂಜುನಾಥ ಶೇರಿಗಾರ್ ಹರಿಹರಪುರ ಅವರಿಗೆ 2024ನೇ ಸಾಲಿನ ಯಕ್ಷಾಂಗಣ ಗೌರವ ಪ್ರಶಸ್ತಿ – 2024 ನೀಡಿ ಸತ್ಕರಿಸಲಾಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಶಸ್ತಿ ಪ್ರದಾನ ಮಾಡಿದರು. ‘ತಾಳಮದ್ದಳೆ ಸಪ್ತಾಹವನ್ನು ಒಂದು ಜ್ಞಾನಸತ್ರದಂತೆ ವರ್ಷಂಪ್ರತಿ ನವೆಂಬರ್ ತಿಂಗಳಲ್ಲಿ ನಡೆಸುತ್ತಿರುವ ಯಕ್ಷಾಂಗಣ ನಿಜವಾದ ಕನ್ನಡದ ನುಡಿ ಸೇವೆ ಮಾಡುತ್ತಿದೆ’ ಎಂದವರು ಶ್ಲಾಘಿಸಿದರು.ಯಕ್ಷಾಂಗಣದ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಯಕ್ಷ ಭಾರತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಮ್ಮ ಸ್ವಾಗತ ಭಾಷಣದಲ್ಲಿ ದ್ವಾದಶ ಸರಣಿಯ ನುಡಿಹಬ್ಬ ತಾಳಮದ್ದಳೆ ಸಪ್ತಾಹದ ಯಶಸ್ಸಿನಲ್ಲಿ ವಿಶೇಷ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿ ಸನ್ಮಾನಿತ ಮಂಜುನಾಥರನ್ನು ಅಭಿನಂದಿಸಿ ಮಾತನಾಡಿದರು. ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ರವೀಂದ್ರ ರೈ ಕಲ್ಲಿಮಾರು ವಂದಿಸಿದರು. ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಕಾರ್ಯದರ್ಶಿಗಳಾದ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಸುಮಾ ಪ್ರಸಾದ್, ಸಂಚಾಲಕಿ ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ ಹಾಗೂ ಪದಾಧಿಕಾರಿಗಳಾದ ಸಿದ್ಧಾರ್ಥ ಅಜ್ರಿ, ರಾಜಾರಾಮ ಶೆಟ್ಟಿ, ದಾಸಪ್ಪ ಶೆಟ್ಟಿ ಬೆಳ್ಳಾರೆ ಉಪಸ್ಥಿತರಿದ್ದರು. ‘ಸತೀ ಶಕುಂತಳೆ’ ತಾಳಮದ್ದಳೆ :ಸಪ್ತಾಹದ ಕೊನೆಯ ಕಾರ್ಯಕ್ರಮವಾಗಿ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಇವರಿಂದ ‘ಸತೀ ಶಕುಂತಳೆ’ ಯಕ್ಷಗಾನ ತಾಳಮದ್ದಳೆ ಜರಗಿತು. ಕೂಡ್ಲು ಮಹಾಬಲ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಗಣರಾಜ ಕುಂಬಳೆ, ಹರೀಶ ಬಳಂತಿಮೊಗರು, ರಮೇಶ ಸಾಲ್ವಣ್ಕರ್, ಉಮೇಶ ಆಚಾರ್ಯ ಗೇರುಕಟ್ಟೆ, ದಿನೇಶ್ ಶೆಟ್ಟಿ ಅಳಿಕೆ, ಕೆ‌.ಎಸ್. ಮಂಜುನಾಥ್, ವಿಜಯಶಂಕರ ಆಳ್ವ ಮಿತ್ತಳಿಕೆ, ಆಜ್ಞಾ ಸೋಹಂ ವರ್ಕಾಡಿ ವಿವಿಧ ಪಾತ್ರಗಳಲ್ಲಿ ಅರ್ಥವಾದಿಗಳಾಗಿ ಭಾಗವಹಿಸಿದರು. ಪ್ರಶಾಂತ ರೈ ಪುತ್ತೂರು ಅವರ ಭಾಗವತಿಗೆ ಕೋಳ್ಯೂರು ಭಾಸ್ಕರ, ಹರಿಶ್ಚಂದ್ರ ನಾಯಗ ಮಾಡೂರು ಮತ್ತು ಸತ್ಯಜಿತ್ ರಾವ್ ರಾಯಿ ಹಿಮ್ಮೇಳದಲ್ಲಿ ಸಹಕರಿಸಿದರು.

ಪ್ರಾದೇಶಿಕ ವಾರ್ತೆಗಳು

ಮಾಜಿ ಸಚಿವ ಬಿ. ರಮಾನಾಥ ರೈಯವರ ನೇತೃತ್ವದಲ್ಲಿ ಪಾಣೆ ಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಜನ್ಮ ದಿನಾಚರಣೆ.

ಪಾಣೆಮಂಗಳೂರು: ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ರವರ ನೇತೃತ್ವದಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿರವರ ಜನ್ಮದಿನಾಚರಣೆಯು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು. ಜನ್ಮದಿನಾಚರಣೆಯ ಅಂಗವಾಗಿ ಮಾಜಿ ಸಚಿವ ಬಿ.ರಮಾನಾಥ ರೈ ರವರು ಭಾರತ್ ಸೇವಾಶ್ರಮ ಕನ್ಯಾನ ಇಲ್ಲಿಗೆ ದಿನಬಳಕೆ ಸಾಮಗ್ರಿಯನ್ನು ಹಾಗೂ ಆರ್ಥಿಕ ಸಹಾಯವನ್ನು ಹಸ್ತಾಂತರಿಸಿದರು. ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ಪೂಜಾರಿರವರು ಅಗಮಿಸಿದ ನಾಯಕರನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತನ್ನಾಡಿದರು.ಕಾರ್ಯಕ್ರಮದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಚಂದ್ರಶೇಖರ್ ಭಂಡಾರಿ,ಸಂಜೀವ ಪೂಜಾರಿ ಬಿರ್ವ,ಅಬ್ಬಾಸ್ ಆಲಿ ,ಬೇಬಿ ಕುಂದರ್,ಚಿತ್ತರಂಜನ್ ಶೆಟ್ಟಿ, ವಾಸು ಪೂಜಾರಿ,ಐಡಾ ಸುರೇಶ್,ಮಲ್ಲಿಕಾ ಶೆಟ್ಟಿ, ಜೋಸ್ಪನ್ ಡಿ.ಸೋಜಾ ,ಪೌಝಿಯಾ,ಮಂಜುಳಾ ಕುಶಾಲ ಪೆರಾಜೆ,ರೇಷ್ಮಾ ಟೆಲ್ಲಿಸ್, ಶೈಲಜಾ ರಾಜೇಶ್,ಆಯಿಚಾ,ಆಶಿಫಾ,ವಸಂತಿ ನೆಟ್ಲ,ಉಪಸ್ಥರಿದ್ದರು.

ಪ್ರಾದೇಶಿಕ ವಾರ್ತೆಗಳು

ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ 5ನೇ ಜಿಲ್ಲಾ ಸಮ್ಮೇಳನದ ಲಾಂಛನ ಬಿಡುಗಡೆ.

ಧ ರ್ಮಸ್ಥಳ:ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ 5ನೇ ಜಿಲ್ಲಾ ಸಮ್ಮೇಳನದ ಲಾಂಛನವನ್ನು ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಮತ್ತು ರಾಜ್ಯ ಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿ, ಸಮ್ಮೇಳನ ಯಶಸ್ವಿ ಆಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಧರ್ಮೋತ್ತಾನ ಟ್ರಸ್ಟ್ ಕಾರ್ಯದರ್ಶಿ ಎ. ವಿ ಶೆಟ್ಟಿ,ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ,ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ,ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್, ಕಾರ್ಯಕಾರಿ ಸಮಿತಿಯ ಸದಸ್ಯ ರಾಜೇಶ್ ದಡ್ಡಂಗಡಿ, ಸಂಘದ ಸದಸ್ಯ ಶಶಿಕಾಂತ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಜ. 5, 2025 ರಂದು ಮಂಗಳೂರು ಧರ್ಮಪ್ರಾಂತದ ಪರಮ ಪವಿತ್ರ ಪ್ರಸಾದ ಮೆರವಣಿಗೆ. ಈ ಬಗ್ಗೆ ಬಿಷಪ್ ಹೌಸ್ ನಲ್ಲಿ ನಡೆಯಿತು ಪೂರ್ವಭಾವಿ ಸಭೆ.

ಮಂಗಳೂರು ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ ತಾ. 05-01-2025 ರಂದು ನಡೆಯಲಿದ್ದು, ಇದರ ಬಗ್ಗೆ ಪೂರ್ವಬಾವಿ ಸಭೆಯನ್ನು ಬಿಷಪ್ ಹೌಸ್‌ನಲ್ಲಿ ನಡೆಸಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ ವಹಿಸಿ, ಕಾರ್ಯಕ್ರಮದ ಬಗ್ಗೆ ರೂಪು ರೇಖೆಯನ್ನು ವಿವರಿಸಿದರು. ಈ ಸಭೆಯಲ್ಲಿ ಧರ್ಮಪ್ರಾತ್ಯದ ಶ್ರೇಷ್ಠ ಗುರು ವಂ| ಪಾ| ಮ್ಯಾಕ್ಸಿಂ ನೊರೊನ್ಹಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ಟಲಿನೋ, ಕಥೋಲಿಕ್ ಸಭಾ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿ’ಸೋಜಾ ಮುಂತಾದವರು ಉಪಸ್ಥಿತರಿದ್ದರು.ರೋಯ್ ಕ್ಯಾಸ್ಟಲಿನೋ ಮೆರವಣಿಗೆಯ ಬಗ್ಗೆ ಸಂಸೇವಕರ ಸೇವೆಯ ಬಗ್ಗೆ ರೂಪು ರೇಖೆ ನೀಡಿ ಪ್ರತಿ ಚರ್ಚಿನ ಸ್ವಯಂ ಸೇವಕರು ಅವರು ನಿಲ್ಲುವ ಸ್ಥಳವನ್ನು ತಿಳಿಸಿದರು.ಈ ಪರಮ ಪ್ರಸಾದದ ಮೆರವಣಿಗೆಯು ಆ ದಿನ ಸಂಜೆ 3 ಗಂಟೆಗೆ ಮಿಲಾಗ್ರಿಸ್ ಚರ್ಚಿನಲ್ಲಿ ಬಲಿಪೂಜೆಯೊಂದಿಗೆ ಪ್ರಾರಂಭಗೊಳ್ಳಲಿದ್ದು 4.30 ಕ್ಕೆ ಮಿಲಾಗ್ರಿಸ್ ಚರ್ಚಿನಿಂದ ಪಾಂಡೇಶ್ವರದ ರೊಸಾರಿಯೊ ಚರ್ಚಿಗೆ ಮೆರವಣಿಗೆ ಮೂಲಕ ಪರಮ ಪ್ರಸಾದ ಕೊಂಡೊಯ್ಯಲಾಗುವುದು. ಚರ್ಚಿನ ತೆರೆದ ಮೈದಾನದಲ್ಲಿ ಪ್ರವಚನ ಹಾಗೂ ಇತರ ಕಾರ್ಯಕ್ರಮಗಳು ಜರಗಲಿರುವುದು.

ಪ್ರಾದೇಶಿಕ ವಾರ್ತೆಗಳು

ರಾಷ್ಟ್ರೀಯ ಪತ್ರಿಕಾ ದಿನಾಚರಣೆ : ‘ಪತ್ರಕರ್ತರಿಂದ ಸಮಾಜವನ್ನು ಎಚ್ಚರಿಸುವ ಕಾರ್ಯ’ : ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಆಶಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ನಗರಾಭಿವವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಮಾತನಾಡಿ ‘ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಪತ್ರಕರ್ತರು ಸಮಾಜವನ್ನು ಕಾಲಕಾಲಕ್ಕೆ ಎಚ್ಚರಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ದಿನ ನಿತ್ಯದ ಆಗುಹೋಗುಗಳನ್ನು ಜನರಿಗೆ ತಲುಪಿಸುವ ಮಾಧ್ಯಮದ ಬಗ್ಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ ಎಂದರು.ಹಿರಿಯ ಪತ್ರಿಕಾ ವಿತರಕ ನಾಗರಾಜ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಪತ್ರಿಕಾ ವಿತರಕರಾಗಿರುವ ನಮ್ಮಂತವರನ್ನು ಗುರುತಿಸಿ ಸನ್ಮಾನಿಸಿರುವುದು ಅತೀವ ಸಂತಸ ತಂದಿದೆ ಎಂದು ಅವರು ಹೇಳಿದರು.ಮುಖ್ಯ ಅತಿಥಿಯಾಗಿದ್ದ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಮಾತನಾಡಿ ‘ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಈ ಬಾರಿ ಬದಲಾಗುತ್ತಿರುವ ಮಾಧ್ಯಮಗಳ ಸ್ವರೂಪ ವಿಷಯದ ಬಗ್ಗೆ ರಾಷ್ಟ್ರೀಯ ಪತ್ರಿಕಾ ದಿನವನ್ನು ಆಚರಿಸುತ್ತಿದೆ. ಸುದ್ದಿಯನ್ನು ಪರಿಶೀಲನೆ ನಡೆಸದೆ ನೇರವಾಗಿ ನವ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದು ಈಗ ನಡೆಯುತ್ತಿದೆ. ಕರ್ನಾಟಕ ಸರ್ಕಾರ ಇದನ್ನು ತಡೆಯಲು ಒಂದು ಹೊಸ ಕಾಯ್ದೆಯನ್ನು ಜಾರಿ ಮಾಡಿದೆ ಎಂದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದ ಪತ್ರಕರ್ತ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಭುವನೇಂದ್ರ ಪುದುವೆಟ್ಟು ಅವರಿಗೆ ಸಭೆ ಆರಂಭದ ಮೌನ ಪ್ರಾರ್ಥನೆಯೊಂದಿಗೆ ಸಂತಾಪ ಸೂಚಿಸಲಾಯಿತು.

ಪ್ರಾದೇಶಿಕ ವಾರ್ತೆಗಳು

ಭಾಸ್ಕರ ರೈ ಕುಕ್ಕುವಳ್ಳಿಯವರ ಕವನ ಸಂಕಲನ ಬಿಡುಗಡೆ – ವಿಚಾರಗೋಷ್ಠಿ. ‘ಸೀಯನ’ ತುಳು ಬದುಕಿನ ನೈಜ ಚಿತ್ರಣ: ಪ್ರೊ. ಎ.ವಿ.ನಾವಡ

ಮಂಗಳೂರು: ‘ತುಳು ಭಾಷೆಯಲ್ಲಿ ಬರೆಯುವ ಹೆಚ್ಚಿನ ಲೇಖಕರು ಭಾಷೆಯ ಬಗ್ಗೆ ಗಂಭೀರವಾಗಿ ಯೋಚಿಸುವುದಿಲ್ಲ. ಆದರೆ ಭಾಸ್ಕರ ರೈ ಕುಕ್ಕುವಳ್ಳಿಯವರ ಸೀಯನ ಕೃತಿಯಲ್ಲಿ ವಸ್ತುವೈವಿಧ್ಯತೆಯೊಂದಿಗೆ ಭಾಷೆಯನ್ನು ಸಶಕ್ತವಾಗಿ ಬಳಸಲಾಗಿದೆ. ಸೀಯನ ಶೀರ್ಷಿಕೆಯೇ ಅಪ್ಪಟ ತುಳು ದೇಸಿ ಪದ. ಮೂರು ವಿಭಾಗಗಳಲ್ಲಿ ಪ್ರಕಟವಾಗಿರುವ ನೂರಕ್ಕೂ ಹೆಚ್ಚಿನ ಅವರ ಕವಿತೆಗಳಲ್ಲಿ ತುಳು ಬದುಕಿನ ನೈಜ ಚಿತ್ರಣವನ್ನು ವಿವಿಧ ಆಯಾಮಗಳಲ್ಲಿ ಕಟ್ಟಿ ಕೊಡಲಾಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಮತ್ತು ಹಿರಿಯ ಜಾನಪದ ಸಂಶೋಧಕ ಪ್ರೊ.ಎ.ವಿ.ನಾವಡ ಹೇಳಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಸಹಯೋಗದಲ್ಲಿ ನ. 17 ರಂದು ಕದ್ರಿ ಶ್ರೀ ಮಂಜುನಾಥ ದೇವಾಲಯದಲ್ಲಿ ಜರಗಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ನೂತನ ಕೃತಿ ‘ಸೀಯನ’ ಚೀಪೆ ಕೋಪೆದ ಪಾಕ ಪದೊಕುಲು ಕವನ ಸಂಕಲನ ಬಿಡುಗಡೆ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಆಧುನಿಕ ಕವಿತೆಗಳು ನವೋದಯ ಕಾವ್ಯದ ದಾರಿಯಲ್ಲಿ ಸಾಗುತ್ತಿವೆ. ಅಲ್ಲಿ ಕನ್ನಡ, ಸಂಸ್ಕೃತ, ಇಂಗ್ಲಿಷ್ ಪದಗಳು ಧಾರಾಳ ಬಳಕೆಯಾಗುತ್ತವೆ. ತುಳುಕವಿಗಳೂ ಅದನ್ನು ಅನುಸರಿಸುತ್ತಿರುವುದು ಖೇದಕರ. ನಮ್ಮ ಕವಿಗಳು ಹೆಚ್ಚೆಚ್ಚು ತುಳು ಪಾಡ್ದನಗಳನ್ನು ಓದಬೇಕಾದ ಅಗತ್ಯವಿದೆ. ಜೊತೆಗೆ ತುಳು ಕೃತಿಗಳ ಭಾಷಾಂತರ ಪ್ರಕ್ರಿಯೆಯೂ ಬಿರುಸಾಗಿ ನಡೆಯಬೇಕು; ಅಕಾಡೆಮಿ ಅದನ್ನು ಪ್ರಕಟಿಸಬೇಕು. ಸೀಯನದ ಹಾಡುಗಳು ಕನ್ನಡದಲ್ಲೂ ಬರಲಿ’ ಎಂದವರು ಆಶಿಸಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಕೃತಿಕರ್ತ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ರವೀಂದ್ರ ರೈ ಕಲ್ಲಿಮಾರು ಕೃತಿ ಪರಿಚಯ ನೀಡಿದರು. ಎ.ಕೆ.ಜಯರಾಮ ಶೇಖ, ರಾಜಾರಾಮ ಶೆಟ್ಟಿ ಮನವಳಿಕೆ, ಲಕ್ಷ್ಮೀನಾರಾಯಣ ರೈ ಹರೇಕಳ, ವಾಸಪ್ಪ ಶೆಟ್ಟಿ ಬೆಳ್ಳಾರೆ, ನಿವೇದಿತಾ ಎನ್. ಶೆಟ್ಟಿ, ಸುಮಾ ಪ್ರಸಾದ್ ವೇದಿಕೆಯಲ್ಲಿದ್ದರು. ಜಿಲ್ಲೆಯ ಖ್ಯಾತ ಗಾಯಕ, ಆರ್ಯಭಟ ಪ್ರಶಸ್ತಿ ಪುರಸ್ಕೃತ ತೋನ್ಸೆ ಪುಷ್ಕಳ ಕುಮಾರ್ ಮತ್ತು ತಂಡದವರು ‘ಸೀಯನ ಪದರಂಗಿತ’ ಕಾರ್ಯಕ್ರಮದಲ್ಲಿ ಕವನ ಸಂಕಲನದ ಪ್ರಮುಖ ಹಾಡುಗಳನ್ನು ಸ್ವರ ಸಂಯೋಜಿಸಿ ಹಾಡಿದರು.ಯಕ್ಷಗಾನ ‌ವಿಚಾರಗೋಷ್ಠಿ:ಇದೇ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ‘ತುಳು ಆಟೊ: ಪ್ರಸಂಗ ಬೊಕ್ಕ ಪ್ರಯೋಗ’ ಯಕ್ಷಗಾನ ವಿಚಾರಗೋಷ್ಠಿ ಜರಗಿತು. ಯಕ್ಷಗಾನ ಕಲಾವಿದ ಮತ್ತು ಪ್ರಸಂಗಕರ್ತ ತಾರಾನಾಥ ವರ್ಕಾಡಿ ‘ತುಳುಟು ಪುರಾಣ ಪ್ರಸಂಗೊಲು’ ವಿಷಯದ ಕುರಿತು ಮಾತನಾಡಿದರು. ಶಿಕ್ಷಕ,ಭಾಗವತ ಮತ್ತು ಪ್ರಸಂಗಕರ್ತ ಹರೀಶ್ ಶೆಟ್ಟಿ ಸೂಡ ‘ ತುಳು ಜಾನಪದ ಪ್ರಸಂಗೊ ಬೊಕ್ಕ ಕಲ್ಪ ಕತೆಕ್ಲು’ ವಿಚಾರವಾಗಿ ಪ್ರಬಂಧ ಮಂಡಿಸಿದರು. ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಸಮನ್ವಯಗೊಳಿಸಿದರು. ಮಹಾಬಲ ಶೆಟ್ಟಿ ಕೂಡ್ಲು ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಪ್ರತಿಕ್ರಿಯೆ ಸಲ್ಲಿಸಿದರು. ‘ರೆಂಜೆ ಬನೊತ ಲೆಕ್ಯೆಸಿರಿ’ ತಾಳಮದ್ದಳೆ:ಕಾರ್ಯಕ್ರಮದ ಅಂಗವಾಗಿ ಹರೀಶ್ ಶೆಟ್ಟಿ ಸೂಡ ವಿರಚಿತ ‘ರೆಂಜೆ ಬನೊತ ಲೆಕ್ಯೆಸಿರಿ’ ತುಳು ಯಕ್ಷಗಾನ ತಾಳಮದ್ದಳೆ ಜರಗಿತು. ಭಾಸ್ಕರ ರೈ ಕುಕ್ಕುವಳ್ಳಿ , ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಡಾ. ದಿನಕರ ಎಸ್. ಪಚ್ಚನಾಡಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಅವಿನಾಶ್ ಶೆಟ್ಟಿ ಉಬರಡ್ಕ, ಜಯರಾಮ ಪೂಜಾರಿ ನರಿಕೊಂಬು ಅರ್ಥಧಾರಿಗಳಾಗಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಹರೀಶ್ ಶೆಟ್ಟಿ ಸೂಡಾ, ಚೆಂಡೆ-ಮದ್ದಳೆಗಳಲ್ಲಿ ಕೋಳ್ಯೂರು ಭಾಸ್ಕರ ಮತ್ತು ರೋಹಿತ್ ಉಚ್ಚಿಲ್ ಸಹಕರಿಸಿದರು.

ಪ್ರಾದೇಶಿಕ ವಾರ್ತೆಗಳು

ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮೂಲ್ಕಿಯ ಪಾಯಲ್ ಅವರಿಗೆ ಅವಳಿ ಚಿನ್ನದ ಪದಕ

ಮೂಲ್ಕಿ: ಮೂಲ್ಕಿ ಕೆ.ಎಸ್.ರಾವ್ ನಗರದ ಪಾಯಲ್ ಪಿ. ಉಡುಪಿಯ ಬುಡಕಾನ್ ಕರಾಟೆ ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್ ಕರ್ನಾಟಕ ಇದರ ಆಶ್ರಯದಲ್ಲಿ ಉಡುಪಿಯ ಶ್ರೀಕೃಷ್ಣ ಮಠದ ಮಾಧವಂಗಣದಲ್ಲಿ 17/11/2024 ರಂದು ಜರುಗಿದ ಉಡುಪಿ ಓಪನ್ ಕರಾಟೆ ಚ್ಯಾಂಪಿಯನ್ ಶಿಪ್ 2024ರ ಸ್ಪರ್ಧೆಯ 12ರ ಹರೆಯದ ಹಳದಿ ಬೆಲ್ಟ್‌ನ ವೈಯಕ್ತಿಕ ವಿಭಾಗದ ಕುಮುಟಿಯಲ್ಲಿ ಪ್ರಥಮ ಮತ್ತು ಕಟಾದಲ್ಲಿ ಪ್ರಥಮ ಸ್ಥಾನ ಪಡೆದು ಅವಳಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರು ಮೂಲ್ಕಿ ಕೆ.ಎಸ್.ರಾವ್ ನಗರದ ನಿವೃತ್ತ ಯೋಧ ಪ್ರಶಾಂತ್ ಬಿ. ಮತ್ತು ನಯನ ಪಡುಬಿದ್ರಿ ದಂಪತಿಯ ಪುತ್ರಿಯಾಗಿದ್ದು, ಪಾವಂಜೆ ಶ್ರೀ ವಾಣಿ ಸ್ಕೂಲ್‌ನ ಆರನೇ ತರಗತಿಯ ವಿದ್ಯಾರ್ಥಿನಿ, ಎಸ್.ಕೋಡಿಯ ಕರಾಟೆ ಶಿಕ್ಷಣ ಕೇಂದ್ರದ ಕರಾಟೆ ತರಬೇತುದಾರ ನಾಗರಾಜ್ ಕುಲಾಲ್ ಕುಬೆವೂರು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ವಿತ್ತೆ ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಭಾರತ @2047 ಪುಸ್ತಕವನ್ನು ಪ್ರಸ್ತುತ ಪಡಿಸಿದ ರೆಶೆಲ್ ಫೆರ್ನಾಂಡಿಸ್

ಮಂಗಳೂರಿನಲ್ಲಿ ನಡೆದ ಸಿಟಿಜನ್ ಕೌನ್ಸಿಲ್ ಕಾರ್ಯಕ್ರಮದಲ್ಲಿ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಮಂಗಳೂರಿನ ಲೇಖಕಿ ರೆಶೆಲ್ ಬಿ ಫೆರ್ನಾಂಡಿಸ್ ಅವರು ಅಮೃತಕಾಲದ ಕಾಲದಲ್ಲಿ ಯುವಕರ ಪಾತ್ರವನ್ನು ಆಧರಿಸಿದ ಭಾರತ @2047 ಯುವಜನತೆಯ ಪಾತ್ರ ಎಂಬ ಎರಡನೇ ಪುಸ್ತಕವನ್ನು ಪ್ರಸ್ತುತಪಡಿಸಿದರು.

Scroll to Top