ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಡಾ. ಎಂ. ಎನ್. ರಾಜೇಂದ್ರ ಕುಮಾರ್ ನಿರ್ಮಾಣದ ವಾದಿರಾಜ ವಾಲಗ ಮಂಡಳಿ ಚಲನಚಿತ್ರಕ್ಕೆ ಮುಹೂರ್ತ

ಮಂಗಳೂರು: ಎಂ.ಎನ್.ಆರ್. ಪ್ರೊಡಕ್ಷನ್ ಲಾಂಛನದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನಿರ್ಮಾಣದ “ವಾದಿರಾಜ ವಾಲಗ ಮಂಡಳಿ’ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ನಾಳೆ ಬೆಳಿಗ್ಗೆ 9 ಗಂಟೆಗೆ ಉರ್ವಾ ಮಾರಿಯಮ್ಮ ದೇವಸ್ಥಾನದ ಸಾನಿಧ್ಯದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ಮಾಪಕರಾದ ಎಂ. ಎನ್. ರಾಜೇಂದ್ರ ಕುಮಾರ್ ಅವರು ಪತ್ರಿಕಾಗೋಷ್ಠಿ ಹೇಳಿದರುಎಂ.ಎನ್.ಆರ್ ಪ್ರೊಡಕ್ಷನ್ ಸಂಸ್ಥೆಯು 2009ರಲ್ಲಿ ಆರಂಭಗೊಂಡಿದ್ದು, “ಜೋಗುಳ” ಎಂಬ ಮೆಗಾ ಧಾರಾವಾಹಿಯನ್ನು ಕಿರುತೆರೆಗೆ ಅರ್ಪಿಸಿದೆ. ವಿನು ಬಳಂಜ ಅವರ ನಿರ್ದೇಶನದಲ್ಲಿ ಸುಮಾರು 600 ಕಂತುಗಳಲ್ಲಿ “ಕನ್ನಡ” ವಾಹಿನಿಯಲ್ಲಿ ಪ್ರಸಾರಗೊಂಡ ಈ ಧಾರಾವಾಹಿಯು ಜನಮೆಚ್ಚುಗೆಯನ್ನು ಪಡೆದಿರುತ್ತದೆ. ಹಾಗೇ ಪ್ರತಿಭಾವಂತ ನಿರ್ದೇಶಕ ಎಂ.ಡಿ.ಶ್ರೀಧರ್ ಅವರ ನಿರ್ದೇಶನದಲ್ಲಿ “ಗಲಾಟೆ” ಎಂಬ ಸಿನೆಮಾ ನಟ ಪ್ರಜ್ವಲ್ ದೇವರಾಜ್ ಹಾಗೂ ಬಹುತಾರಾಗಣದಲ್ಲಿ ನಿರ್ಮಾಣವಾಗಿದ್ದು, ಇದು ಬಹುಪಾಲು ವಿದೇಶದಲ್ಲಿ ಚಿತ್ರೀಕರಣಗೊಂಡಿದೆ. ಈ “ಗಲಾಟೆ” ಚಲನಚಿತ್ರ “ಎಂ.ಎನ್.ಆರ್ ಪ್ರೊಡಕ್ಷನ್’ ಸಂಸ್ಥೆಯ ಮೊದಲ ಚಲನಚಿತ್ರವಾಗಿದೆ. ಎಂ.ಎನ್.ಆರ್ ಪ್ರೊಡಕ್ಷನ್’ ಸಂಸ್ಥೆ ತುಳುನಾಡಿನ ಸಂಸ್ಥೆಯಾಗಿರುವುದರಿಂದ ತುಳುಭಾಷೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈಗಾಗಲೇ ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದ “ಡಾಕ್ಟ್ರಾ..ಭಟ್ರಾ?” ಎನ್ನುವ ತುಳು ಸಿನೆಮಾ ಮುಹೂರ್ತ ಮಾಡಲಾಗಿದ್ದು, ಈ ಸಿನೆಮಾ ಮುಂದಿನ ವರ್ಷ ತೆರೆಕಾಣಲಿದೆ ಎಂದರು.ಈ ಮಧ್ಯೆ ಯುವ ನಿರ್ದೇಶಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ನಿರ್ದೇಶಕ, ಕಾಂತಾರ ಸಿನೆಮಾದ “ವರಾಹ ರೂಪಂ” “ಕಾಂತಾರ-I” ರ “ಗೊತ್ತಿಲ್ಲಾ ಶಿವನೇ ಭಕ್ತಿ ದಾರಿಯು” ಹಾಡುಗಳನ್ನು ರಚಿಸಿರುವ ಶಶಿರಾಜ್ ರಾವ್ ಕಾವೂರು ರಚಿಸಿರುವ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಇರುವ “ವಾದಿರಾಜ ವಾಲಗ ಮಂಡಳಿ” ಎಂಬ ಕನ್ನಡ ಸಿನೆಮಾವನ್ನು ತೆರೆಗೆ ಸಿದ್ಧಪಡಿಸುತ್ತಿದ್ದೇವೆ.ಈ ಸಿನೆಮಾ ಉತ್ತಮ ಕಥಾ ಹಂದರದಿಂದ ಸಂಪೂರ್ಣ ಹಾಸ್ಯ ಪ್ರಧಾನವಾಗಿದ್ದು, ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೂಡಾ ನೀಡುತ್ತದೆ. ಸಿನೆಮಾದಲ್ಲಿ ನವೀನ್ ಡಿ ಪಡೀಲ್, ಲಕ್ಷ್ಮಣ ಕುಮಾರ್ ಮಲ್ಲೂರು, ಪ್ರಕಾಶ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳೂರ್, ಮೈಮ್ ರಾಮದಾಸ್, ಶೋಭರಾಜ್ ಪಾವೂರು, ತನ್ವಿ ರಾವ್, ವೇನ್ಯ ರೈ, ಚೈತ್ರಾ ಶೆಟ್ಟಿ, ಕೀರ್ತನಾ ಮುಂತಾದವರು ನಟಿಸಲಿದ್ದಾರೆ.ಚಿತ್ರಕ್ಕೆ ಎಸ್. ಚಂದ್ರಶೇಖರನ್ ಅವರ ಛಾಯಾಗ್ರಹಣ, ಮಣಿಕಾಂತ್ ಕದ್ರಿಯವರ ಸಂಗೀತ ನಿರ್ದೇಶನ, ಸಹ ನಿರ್ಮಾಪರಾಗಿ ಜಯಪ್ರಕಾಶ್ ತುಂಬೆ, ಕಾರ್ಯಕಾರಿ ನಿರ್ಮಾಪಕರಾಗಿ ಸಂತೋಷ್ ಶೆಟ್ಟಿ, ಸಹಕರಿಸಲಿದ್ದಾರೆ, ಕಾಸರಗೋಡು, ಮಂಗಳೂರು, ಉಡುಪಿ, ಕುಂದಾಪುರ ಮುಂತಾದ ಕಡೆ 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಶಶಿರಾಜ್ ಕಾವೂರ್, ಗೋಪಿನಾಥ್ ಭಟ್,ಎಸ್. ಚಂದ್ರಶೇಖರ್, ಜಯಪ್ರಕಾಶ್ ತುಂಬೆ, ಲಕ್ಷ್ಮಣ್ ಕುಮಾರ್ ಮಲ್ಲೂರು, ಸಂತೋಷ್ ಶೆಟ್ಟಿ, ಸುನೀಲ್ ಬಜಗೋಳಿ,ಉಪಸ್ಥಿತರಿದ್ದರು.ಚಿತ್ರಗಳು-ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಶಾಸಕ ವೇದವ್ಯಾಸ ಕಾಮತ್ ರವರು ಇಂದು ಅಟಲ್ ಸೇವಾ ಕೇಂದ್ರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯ ವಿವರಗಳು.

1.ನಗರ ಭಾಗಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ಕೊಳವೆ ಒಡೆದು ಹೋಗಿ ಮೂರ್ನಾಲ್ಕು ದಿನಗಳು ಕಳೆದು ಜನಸಾಮಾನ್ಯರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಖಂಡನೀಯ. ನಗರದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ನೀರಿಲ್ಲದ ವಾತಾವರಣ ಸೃಷ್ಟಿಯಾಗಿದ್ದರೂ ಪರ್ಯಾಯ ವ್ಯವಸ್ಥೆ ಮಾಡದೇ ಇರುವುದಂತೂ ಈ ಸರ್ಕಾರದ ಬೇಜವಾಬ್ದಾರಿಯ ಪರಮಾವಧಿಯಾಗಿದೆ. 2.ಮಂಗಳೂರು ಆಯುಷ್ ನಲ್ಲಿ ಔಷಧ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ಅಧಿಕಾರಿಗಳು ಹಣದ ಆಸೆಗೆ ಅವಧಿ ಮೀರಿದ ಔಷಧ ಪೂರೈಕೆ ಮಾಡಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದ್ದು ತಿಳಿದ ಕೂಡಲೇ ದಾಖಲೆಗಳ ಸಮೇತ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ. ಇದು ಸಾರ್ವಜನಿಕರ ಆರೋಗ್ಯದ ವಿಷಯವಾಗಿದ್ದರೂ ಗಂಭೀರವಾಗಿ ಪರಿಗಣಿಸದ ಇಲಾಖೆಯ ನಿರ್ಲಕ್ಷ್ಯ ಖಂಡನೀಯ. ಯಾರನ್ನು ರಕ್ಷಿಸಲು ಇಲ್ಲಿ ಹುನ್ನಾರ ನಡೆಯುತ್ತಿದೆ? ಇದರ ಹಿಂದೆ ಯಾರಿದ್ದಾರೆ? ಯು.ಟಿ ಖಾದರ್, ಐವನ್ ಡಿಸೋಜ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಜನಪ್ರತಿನಿಧಿಗಳ ಮೇಲೆಯೇ ಸಾರ್ವಜನಿಕರ ಸಂಶಯ ಮೂಡುವಂತಾಗಿದೆ. ಇದೀಗ ಅಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು ಆರೋಪಕ್ಕೆ ಪೂರಕವಾಗಿ ಕೆಲವು ದಾಖಲೆಗಳು ಲಭಿಸಿದೆ ಎಂದು ವರದಿಯಾಗಿದ್ದು, ಯಾವುದೇ ಒತ್ತಡಕ್ಕೆ ಒಳಗಾಗದೇ ಸೂಕ್ತ ತನಿಖೆ ಮುಂದುವರಿದರೆ ಮತ್ತಷ್ಟು ವಿಷಯಗಳು, ಕಾಣದ ಕೈಗಳು ಹೊರಗೆ ಬರುವ ನಿರೀಕ್ಷೆ ಇದೆ. 3.ಯಕ್ಷಗಾನ ಕಲಾವಿದರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರ ಕ್ಷಮೆ ಮಾತ್ರವಲ್ಲ, ಈ ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಅವರನ್ನು ಆ ಸ್ಥಾನದಿಂದಲೇ ಕಿತ್ತೆಸೆಯಬೇಕು. ಕರಾವಳಿ ಕರ್ನಾಟಕದ ಗಂಡು ಕಲೆಯಾದ ಯಕ್ಷಗಾನವು ಇಲ್ಲಿನ ಜನರ ಭಕ್ತಿ ಭಾವದಿಂದ ಕೂಡಿದ ಸಂಸ್ಕೃತಿಯ ಭಾಗವಾಗಿದೆ. ಯಕ್ಷಗಾನ ಕಲಾವಿದರನ್ನು ಗೌರವಯುತವಾಗಿ ಕಾಣುವ ಸಮಾಜ ನಮ್ಮದು. ಅಂತಹ ಪರಂಪರೆಗೆ ಎಡಪಂಥೀಯ ಬುದ್ದಿಜೀವಿಗಳು ಅವಮಾನ ಮಾಡುವ ಮೂಲಕ ಇಡೀ ಹಿಂದೂ ಸಮಾಜಕ್ಕೆ ನೋವಾಗಿದೆ. ಸದಾ ಕಾಲ ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವವರನ್ನೇ ಹುಡುಕಿ ಪ್ರಮುಖ ಸ್ಥಾನದಲ್ಲಿ ಕೂರಿಸುವ ಕಾಂಗ್ರೆಸ್ಸಿನ ಹೀನ ಚಾಳಿ ಇನ್ನಾದರೂ ಬದಲಾಗಬೇಕು. 4.ನಗರದ ಕದ್ರಿ ಪಾರ್ಕ್ ರಸ್ತೆಯಲ್ಲಿ ಜನವರಿಯಿಂದ ವಾಹನಗಳಿಗೆ ಟೋಲ್‌ ವಿಧಿಸಲು ಚಿಂತನೆ ನಡೆಸಿರುವುದು ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಹೊರೆಯಾಗಿ ಪರಿಣಮಿಸಲಿದ್ದು ಇದಕ್ಕೆ ನಮ್ಮ ಆಕ್ಷೇಪವಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಇಲ್ಲಿನ ರಸ್ತೆಯ ನಿರ್ವಹಣೆಯ ಜವಾಬ್ದಾರಿಯನ್ನು ಪಾಲಿಕೆಗೆ ವಹಿಸಲಾಗಿತ್ತು. ಇದೀಗ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಅವಧಿ ಅಂತ್ಯವಾಗಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ಮೂಲಕ ಆಡಳಿತ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕದ್ರಿ ಪಾರ್ಕ್ ರಸ್ತೆಗೆ ಟೋಲ್‌ ಕಡ್ಡಾಯ ಮಾಡಲಾಗುತ್ತಿದೆ.ಈಗಾಗಲೇ ರಾಜ್ಯದಲ್ಲಿ ಜನಸಾಮಾನ್ಯರು ಬೆಲೆ ಏರಿಕೆ ಯಿಂದ ತತ್ತರಿಸಿ ಹೋಗಿದ್ದಾರೆ. ಇದೀಗ ಈ ವ್ಯವಸ್ಥೆಯೂ ಸಹ ಜಾರಿಗೆ ಬಂದರೆ ಇಲ್ಲಿನ ಜನರು ರೊಚ್ಚಿಗೇಳುವುದು ಗ್ಯಾರಂಟಿ. 5.ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಕದ್ರಿ ಪಾರ್ಕ್ ಬಳಿಯ ಗೂಡಂಗಡಿಗಳಿಗೆ ಯಾವುದೇ ತೊಂದರೆಯಾಗಿರಲಿಲ್ಲ. ಇದೀಗ ಕಾಂಗ್ರೆಸ್ ನೇತೃತ್ವದ ಪಾಲಿಕೆಯು ಇಲ್ಲಿನ ದುಡಿಯುವ ವರ್ಗದ ಜನತೆಗೆ ನಾವು ಯಾವುದೇ ತೊಂದರೆ ಮಾಡುವುದಿಲ್ಲ ಎನ್ನುತ್ತಲೇ, ಪರ್ಯಾಯ ವ್ಯವಸ್ಥೆ ಕೂಡಾ ಮಾಡದೇ, ಏಕಾಏಕಿ ಗೂಡಂಗಡಿಗಳನ್ನು ತೆರವುಗೊಳಿಸಿದ್ದು ದುಡಿಯುವ ವರ್ಗದ ಮೇಲಿನ ಪ್ರಹಾರವಾಗಿದ್ದು ಖಂಡನೀಯವಾಗಿದೆ. 6.ನಗರದ ಜೈಲ್ ಜಾಮರ್ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಿ ಆಯ್ತು, ಸಚಿವರ ಗಮನಕ್ಕೆ ತಂದೂ ಆಯ್ತು, ಕೊನೆಗೆ ಅನಿವಾರ್ಯವಾಗಿ ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಯಿತು. ಆದರೂ ಇಲ್ಲಿನ ಜನರ ಸಮಸ್ಯೆಗೆ ಮುಕ್ತಿ ಸಿಕ್ಕಿರಲಿಲ್ಲ. ಇದೀಗ ಇಲ್ಲಿನ ವಕೀಲರ ಮೂಲಕ ಸ್ವತಃ ರಾಜ್ಯ ಹೈಕೋರ್ಟ್ ಮಧ್ಯ ಪ್ರವೇಶಿಸಿದ್ದು, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶ ನೀಡಿದೆ. ಇನ್ನಾದರೂ ಈ ದಪ್ಪ ಚರ್ಮದ ಸರ್ಕಾರ ಎಚ್ಚೆತ್ತುಕೊಳ್ಳಲಿ. 7.ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ–ಖಾತಾಕ್ಕಾಗಿ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆ ಮುಂದುವರಿದಿದ್ದು ಇನ್ನೂ ಸಹ ಅದನ್ನು ಸರಿಪಡಿಸುವ ಗೋಜಿಗೆ ಹೋಗದ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ಖಂಡನೀಯ. ಮೊನ್ನೆಯವರೆಗೆ ಇದ್ದ ಬದ್ದ ಅಧಿಕಾರಿಗಳನ್ನೆಲ್ಲಾ ಅವೈಜ್ಞಾನಿಕ ಸಮೀಕ್ಷೆಗೆ ನಿಯೋಜಿಸಿಕೊಂಡ ಪರಿಣಾಮ ಎಷ್ಟೇ ತುರ್ತು ಪರಿಸ್ಥಿತಿಯಿದ್ದರೂ ಸಾರ್ವಜನಿಕರಿಗೆ ಇ-ಖಾತಾ ಲಭಿಸಿರಲಿಲ್ಲ. ಇದೀಗ ಸಮೀಕ್ಷೆ ಮುಗಿದು ಅಧಿಕಾರಿಗಳು ಬಂದಿದ್ದಾರೆ. ಆದರೆ ಸರ್ವರ್ ಇಲ್ಲ. ಹೀಗಾದರೆ ಸಾರ್ವಜನಿಕರ ತಾಳ್ಮೆಯ ಕಟ್ಟೆಯೊಡೆಯುತ್ತದೆ. ಕಳೆದ ಎರಡು ವರ್ಷಗಳಿಂದಲೂ ಇರುವ ಈ ಸಮಸ್ಯೆಯ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ, ಸಂಬಂಧಪಟ್ಟ ಸಚಿವರಿಗೂ ಮನವಿ ಮಾಡಿದ್ದೇನೆ. ಆದರೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ನಾಗರಿಕರಿಗೆ ತೊಂದರೆ ತಪ್ಪಿಲ್ಲ. 8.ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಹೊಂಡಗಳಿಂದಾಗಿ ವಾಹನಗಳು ಅಪಘಾತಕ್ಕೀಡಾಗಿ ಸಾರ್ವಜನಿಕರು ತೊಂದರೆ ಅನುಭವಿಸಿರುವ ಅನೇಕ ಪ್ರಕರಣಗಳು ನಡೆದಿದೆ. ಆದರೂ ಆಳುವ ಸರ್ಕಾರ ದುರಸ್ಥಿಗೆ ಅನುದಾನ ನೀಡದೇ ಕಣ್ಣು ಮುಚ್ಚಿ ಕೂತಿದೆ. ನಗರದಲ್ಲಿ ಕಸದ ಸಮಸ್ಯೆಯಂತೂ ಹೇಳತೀರದಾಗಿದ್ದು ಗಾಂಧಿನಗರದ ಶಾಲೆಯ ಹತ್ತಿರ, ಮರೋಳಿಯ ಬಸ್ ನಿಲ್ದಾಣ, ಹೀಗೆ ಅನೇಕ ಕಡೆಗಳಿಂದ ದೂರುಗಳು ಬರುತ್ತಿವೆ. ಒಂದು ಕಾಲದಲ್ಲಿ ಇಡೀ ದೇಶಕ್ಕೆ ಸ್ವಚ್ಛತೆಗೆ ಬ್ರಾಂಡ್ ಆಗಿದ್ದ ಮಂಗಳೂರಿನಲ್ಲೇ ಇಂದು ರಸ್ತೆಗಳ ಎಲ್ಲೆಡೆ ಕಸ ಬಿದ್ದಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದರೂ ಅದನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. 9.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಭಿವೃದ್ಧಿ ವಿಷಯಗಳು ಪಾತಾಳಕ್ಕಿಳಿದಿದ್ದರೂ, ಬೆಲೆ ಏರಿಕೆ, ಭ್ರಷ್ಟಾಚಾರಗಳು ಮಾತ್ರ ನಿರಂತರವಾಗಿ ಎಗ್ಗಿಲ್ಲದೇ ನಡೆಯುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದಿಂದ ಬರಬೇಕಿದ್ದ ಅನುದಾನ, ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ಸೇರಿದಂತೆ ಯಾವುದೇ ಅನುದಾನಗಳು ಬರುತ್ತಿಲ್ಲ. ಹೀಗಾದರೆ ಕ್ಷೇತ್ರದಲ್ಲಿ ಆಗಬೇಕಿರುವ ತುರ್ತು ಕಾಮಗಾರಿಗಳು, ಅಭಿವೃದ್ಧಿ ಕಾರ್ಯಗಳು ನಡೆಯುವುದಾದರೂ ಹೇಗೆ?ಕಾಂಗ್ರೆಸ್ ಸರ್ಕಾರ ರಾಜ್ಯದ ಆಡಳಿತದಲ್ಲಿ ವೈಫಲ್ಯ ಅನುಭವಿಸಿದ್ದು ಮಾತ್ರವಲ್ಲದೇ ನಮ್ಮ ಮಂಗಳೂರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವುದು ಅಕ್ಷಮ್ಯವಾಗಿದೆ. ಮಂತ್ರಿಗಳು ಜಿಲ್ಲೆಗೆ ಬಂದಾಗ ಕಾಟಾಚಾರಕ್ಕೆ ಕೋಟಿ ಕೋಟಿ ರೂ. ಗಳನ್ನು ಘೋಷಣೆ ಮಾಡಿ ಹೋಗುತ್ತಾರೆ. ಆ ನಂತರ ಅದು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಕೇವಲ ಪತ್ರಿಕಾ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿರುವ ಸುಳ್ಳು ಘೋಷಣೆಗಳು, ಸುಳ್ಳು ಭರವಸೆಗಳು ನಮ್ಮ ಕ್ಷೇತ್ರಕ್ಕೆ ಜಿಲ್ಲೆಗೆ ಅಗತ್ಯವಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಸಂಯೋಜನೆಯಲ್ಲಿ ನಡೆದ ಸ್ವಚ್ಚ ಭಾರತ್ ಅಭಿಯಾನಕ್ಕೆ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಜೈ ಶಂಕರ್ ಉದ್ಘಾಟಿಸಿ ಮಾತನಾಡಿದರು. ಸ್ವಚ್ಚತೆ ಪ್ರತೀ ನಾಗರಿಕನ ಕರ್ತವ್ಯ : ಜೈ ಶಂಕರ್

ಮೂಲ್ಕಿ: ಸ್ವಚ್ಚತೆ ಪ್ರತೀ ನಾಗರಿಕನ ಕರ್ತವ್ಯವಾಗಿದೆ. ಪರಿಸರವನ್ನು ಸ್ವಚ್ಚವಾಗಿಟ್ಟಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು, ಪ್ಲಾಸ್ಟಿಕ್ ವಸ್ತುಗಳನ್ನು ದೂರಮಾಡಿಕೊಂಡು ಪರಿಸರ ಸ್ನೇಹಿಯಾಗಿ ಬಾಳೋಣ ಎಂದು ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಜೈ ಶಂಕರ್ ಹೇಳಿದರು. ಅವರು ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಸಂಯೋಜನೆಯಲ್ಲಿ ನಡೆದ ಸ್ವಚ್ಚ ಭಾರತ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಈ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾ ಸಂಜೀವಿನಿ ಆಸ್ಪತ್ರೆಯಿಂದ ಕಟೀಲು ದೇವಸ್ಥಾನದವರೆಗೆ ಕಟೀಲು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳೊಂದಿಗೆ ಕಾಲ್ನಡಿಗೆ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಕಟೀಲು ಬಸ್ ನಿಲ್ದಾಣದಲ್ಲಿ ಬೀದಿ ನಾಟಕ, ಕಿನ್ನಿಗೋಳಿ ಸಂತೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮತ್ತು ಉಚಿತ ಬಟ್ಟೆಯ ಕೈಚೀಲಗಳನ್ನು ವಿತರಿಸಲಾಯಿತು.ಆರೋಗ್ಯಾಧಿಕಾರಿ ಬ್ರಹ್ಮಾನಂದ, ಕಂದಾಯ ನಿರೀಕ್ಷಕ ರಾಘವೇಂದ್ರ, ಇಂಜಿನಿಯರಿಂಗ್ ವಿಭಾಗದ ಪವನ್ ಕುಮಾರ್ ಹಾಗೂ ಸಿಬ್ಬಂದಿ ವರ್ಗ, ಪ್ರಮುಖರಾದ ಈಶ್ವರ್ ಕಟೀಲ್, ಪ್ರಕಾಶ್ ಆಚಾರ್ಯ, ಪ್ರೇಮ್‌ರಾಜ್ ಶೆಟ್ಟಿ, ಕಾರ್ಯಕ್ರಮದ ಸಹ ಸಂಯೋಜನೆಯ ಮೂಲ್ಕಿ ಸುಧಾಮ ಫೌಂಡೇಶನ್‌ನ ಶೈಲೇಶ್ ಕುಮಾರ್, ನವೀನ್ ರಾಜ್, ವೀರಣ್ಣ, ರಮೇಶ್, ಶಿಕ್ಷಣ ಸಂಸ್ಥೆಯ ಪ್ರಮುಖರು, ಮತ್ತಿತರರು ಇದ್ದರು.

ಪ್ರಾದೇಶಿಕ ವಾರ್ತೆಗಳು

ಸಹಕಾರ ರತ್ನ ಡಾ| ಅಗರಿ ನವೀನ್ ಭಂಡಾರಿಯವರಿಗೆ ‘ಪ್ರೈಡ್ ಆಫ್ ಕರ್ನಾಟಕ’ ಅವಾರ್ಡ್

ಭಾರತೀಯ ವ್ಯಾಪಾರ ನಿಯತಕಾಲಿಕದ ಐಕಾನ್‌ಗಳು ವತಿಯಿಂದ ೩೭ ನೇ ಆವೃತ್ತಿಯ ಪ್ರೈಡ್ ಆಫ್ ಕರ್ನಾಟಕ ಅವಾರ್ಡ್ ೨೦೨೫ ಅನ್ನು ಅತ್ಯುತ್ತಮ ಸಾಮಾಜಿಕ ಸೇವೆಗಳಿಗಾಗಿ ಸಹಕಾರ ರತ್ನ ಡಾ| ಅಗರಿ ನವೀನ್ ಭಂಡಾರಿಯವರಿಗೆ ಪ್ರಧಾನ ಮಾಡಲಾಯಿತು. ಅಗರಿ ನವೀನ್ ಭಂಡಾರಿಯವರು ಆರ್‌ಬಿಐಯ ಉತ್ತರ ವಲಯದ ಮಾಜಿ ನಿರ್ದೇಶಕರಾಗಿದ್ದು, ಬೆಂಗಳೂರು ಸುಂದರ್ ರಾಮ್ ಶೆಟ್ಟಿ ನಗರ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ವರದಿ: ಉಮಾಪ್ರಸಾದ್ ರೈ

ಪ್ರಾದೇಶಿಕ ವಾರ್ತೆಗಳು

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಮಾಧ್ಯಮ ರಂಗದ ಸಾಧಕ ಪುರಸ್ಕಾರ

ಮಂಗಳೂರು,ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪತ್ರಕರ್ತರ ಗ್ರಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ, ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಮಾಧ್ಯಮ ರಂಗದ ಸಾಧಕ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಡೆಯಿತು..ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ ಎಂ. ಎನ್. ರಾಜೇಂದ್ರ ಕುಮಾರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ಕೆ ಎಂ ಎಫ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಕಾಪು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿ ಕುಮಾರ್ ರೈ ಬಲ್ಯೊಟ್ಟು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಬಿಹಾರ ಚುನಾವಣೆ ಎನ್ ಡಿ ಎ ಮೈತ್ರಿಕೂಟಕ್ಕೆ ಪ್ರಚಂಡ ಗೆಲುವು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಸಂದ ಜಯ: ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು, ಬಿಹಾರದಲ್ಲಿ ಚುನಾವಣಾ ಫಲಿತಾಂಶದ ಕುರಿತು ಮಂಗಳೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರ ವೋಟ್ ಚೋರಿ ಸುಳ್ಳು ಆರೋಪಕ್ಕೆ ಬಿಹಾರ ರಾಜ್ಯದ ಜನತೆ ತಕ್ಕ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯವನ್ನು ಜನರು ನೆಚ್ಚಿಕೊಂಡಿದ್ದಾರೆ. ಹೀಗಾಗಿ ಬಿಹಾರದಲ್ಲಿ ಎನ್ ಡಿ ಎ ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಕ್ಕಿದೆ ಎಂದು ಹೇಳಿದರು.ದೇಶದಲ್ಲಿ ಪಕ್ಷ ಇನ್ನೂ ಬಲಿಷ್ಠ ವಾಗಿ ಸಂಘಟನೆ ಯಾಗಲಿದೆ ಎಂದು ಹೇಳಿದರು. ಈ ಚುನಾವಣಾ ಫಲಿತಾಂಶ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೂ ಧಕ್ಕೆ ತರಲಿದೆ ಎಂದು ಅಭಿಪ್ರಾಯ ಪಟ್ಟರು.

ಪ್ರಾದೇಶಿಕ ವಾರ್ತೆಗಳು

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ. ಎನ್.

ಮಂಗಳೂರು-ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-28 ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪುಷ್ಪರಾಜ್ ಬಿ.ಎನ್ ಮಂಗಳೂರು ವಾರ್ತಾಭಾರತಿ ದಿನ ಪತ್ರಿಕೆಯ ಬ್ಯೂರೋ ಮುಖ್ಯಸ್ಥನಾಗಿ ಕಳೆದ 22ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು,ಈ ಹಿಂದೆ ಜನವಾಹಿನಿ ಪತ್ರಿಕೆಯ ಉಪ ಸಂಪಾದಕನಾಗಿ,ಪುತ್ತೂರು ವರದಿಗಾರನಾಗಿ, ಕೊಡಗು ಜಿಲ್ಲಾ ಪ್ರಧಾನ ವರದಿಗಾರನಾಗಿ ಪೂರ್ಣಾವಧಿಯಾಗಿ ಕಾರ್ಯ ನಿರ್ವಹಿ ಸಿರುತ್ತಾರೆ. ನಿರಂತರ ಶಿಕ್ಷಣ ಪತ್ರಿಕೆ, ನಿಯತಕಾಲಿಕಗಳಲ್ಲಿ ಸುದ್ದಿ ಬಿಡುಗಡೆ ಸೇರಿದಂತೆ ಪತ್ರಿಕೆಗಳಲ್ಲಿ ಒಟ್ಟು ಮೂರು ದಶಕಗಳಿಗೂ ಅಧಿಕ ಕಾಲ ಕಾರ್ಯ ನಿರ್ವಹಿಸಿರುತ್ತಾರೆ.1990-91ರ ದಕ್ಷಿಣ ಕನ್ನಡ ಜಿಲ್ಲಾ ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ, ನಿರಂತರ ಶಿಕ್ಷಣ ಯೋಜನೆಯಲ್ಲಿ ಸಂಯೋಜಕನಾಗಿ ಕಾರ್ಯನಿರ್ವ ಹಿಸಿರು ವುದು.ಈ ನಡುವೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು,1997-98ರಲ್ಲಿ ಉಪ್ಪಿನಂಗಡಿ ಜೇಸೀಸ್ (ಇಂಟರ್ ನ್ಯಾಶನಲ್ ) ಘಟಕದ ಅಧ್ಯಕ್ಷ ನಾಗಿ,ಅಂತರಾಷ್ಟ್ರೀಯ ಜೇಸೀಸ್ ಸಂಸ್ಥೆಯ ವಲಯ ತರಬೇತು ದಾರನಾಗಿ ಕೊಯಿಲದ ಕರ್ನಾಟಕ ಜಾಗೃತಿ ಸಭಾದ ಅಧ್ಯಕ್ಷನಾಗಿ, ಕೊಯಿಲ ರಾಮಕುಂಜ ರೋಟರಿ ಗ್ರಾಮೀಣ ದಳದ ಅಧ್ಯಕ್ಷನಾಗಿ ,ಕೊಡಗು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ರುವುದು. ಪುತ್ತೂರು ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅರೆ ಕಾಲಿಕ ಅತಿಥಿ ಉಪನ್ಯಾಸಕನಾಗಿ ಕಡಬ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವುದು. ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿ ನೀಡಿರುವುದು, ಸೇರಿದಂತೆ ಜಿಲ್ಲೆಯ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿ, ಪತ್ರಿಕೋದ್ಯಮ ದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿರುವುದು.ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಯಾಗಿ,ಪ್ರಸ್ತುತ ಮಂಗಳೂರು ಪ್ರೆಸ್ ಕ್ಲಬ್‌ ನ ಕಾರ್ಯದರ್ಶಿ ಯಾಗಿ,ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘದ ನಿರ್ದೇಶಕ ನಾಗಿ,ಪತ್ರಿಕಾ ಭವನ ಟ್ರಸ್ಟ್ ನ ಕಾರ್ಯ ದರ್ಶಿಯಾಗಿ ,ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆ ಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.*ಶೈಕ್ಷಣಿಕ ಅರ್ಹತೆ :-ರಾಮಕುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು,ರಾಮಕುಂಜ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದು ಬಳಿಕ ಕುವೆಂಪು ವಿಶ್ವ ವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮ ಪದವಿ, ಪತ್ರಿಕೋದ್ಯಮದಲ್ಲಿ ( ಎಂಸಿಜೆ ) ಸ್ನಾತಕೋತ್ತರ ಪದವಿ ಹಾಗೂ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ.*ಪದವಿ ಪುರಸ್ಕಾರ:-ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುಶಸ್ತಿ 2024,ಟ್ಯಾಲೆಂಟ್‌ ರೀಸರ್ಚ್ ಫೌಂಡೇಶನ್ ಪ್ರಶಸ್ತಿ,ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ಪುರಸ್ಕಾರ, ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪುರಸ್ಕಾರ 2023 ಸೇರಿದಂತೆ ಗೌರವ ಪಡೆದಿರುತ್ತಾರೆ.*ಇತರ ಚಟುವಟಿಕೆ ಗಳು :-ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಕೊಡಗು,ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಾಹಿತ್ಯ ,ಕವಿಗೋಷ್ಠಿಯಲ್ಲಿ ಕವಿತಾ ವಾಚನ,ಅಧ್ಯಕ್ಷತೆವಹಿಸಿರುವುದು ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವುದು.ವೈಯಕ್ತಿಕ ವಿವರ:-ಮೂಲತಃ ಪುತ್ತೂರು ತಾಲೂಕಿನ (ಈಗಿನ ಕಡಬ ತಾಲೂಕಿನ) ರಾಮಕುಂಜ ಗ್ರಾಮದ ನೀರಾಜೆ ನಿವಾಸಿ.ಹಾಲಿ ಉಳ್ಳಾಲ ತಾಲೂಕಿನಪಿಲಾರು ದಾರಂದ ಬಾಗಿಲಿನಲ್ಲಿ ವಾಸವಾ ಗಿದ್ದು, ಮಂಗಳೂರಿನ ವೆಲೆನ್ಸಿಯಾದ ವಾರ್ತಾಭಾರತಿ ಕಚೇರಿಯಲ್ಲಿ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಅಟಲ್ ಬಿಹಾರಿ ವಾಜಪೇಯಿ ಅವರ ಚಾಲಕರಾಗಿದ್ದ ಬಿ.ಸಿ. ಕುಶಾಲಪ್ಪರನ್ನು ಅಭಿನಂದಿಸಲು NSCDF ರಾಷ್ಟ್ರೀಯ ಅಧ್ಯಕ್ಷ ಗಂಗಾಧರ ಗಾಂಧಿ ಮನವಿ.

ಮಂಗಳೂರು-ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆಯಲಿರುವ ದೇಶ ಕಂಡ ಸಜ್ಜನ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನದ ಅಟಲ್ ವಿರಾಸಾತ್ ಕಾರ್ಯಕ್ರಮದಲ್ಲಿ ಅವರೊಂದಿಗೆ 2 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿದ್ದ ಕೊಡಗು ಮದೆನಾಡು ಮೂಲದ ಬಟ್ಯನ ಚಿನ್ನಪ್ಪ ಕುಶಾಲಪ್ಪ ಅವರನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಆಗಬೇಕಿದೆ ಎಂದು NSCDF ಅಧ್ಯಕ್ಷ ಗಂಗಾಧರ್ ಗಾಂಧೀ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ದ.ಕ. ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ ಅವರ ಸುದ್ದಿ ಗೋಷ್ಠಿಯ ವಿಷಯ ತಿಳಿದು ಗಂಗಾಧರ್ ಗಾಂಧೀ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ ಮತ್ತು ಬಟ್ಯಾನ ಚಿನ್ನಪ್ಪ ಕುಶಾಲಪ್ಪ ಕುರಿತಾದ ಸಣ್ಣ ಬರಹ ನೀಡಿದ್ದು ಈ ಮಹತ್ವ ಪೂರ್ಣ ಕಾರ್ಯಕ್ರಮದಲ್ಲಿ ವಾಜಪೇಯಿ ಅವರೊಂದಿಗೆ ಕೆಲಸ ಮಾಡಿರುವ ಕುಶಾಲಪ್ಪರನ್ನು ಗುರುತಿಸಿದರೆ ಕಾರ್ಯಕ್ರಮಕ್ಕೆ ಇನ್ನಷ್ಟು ಮಹತ್ವ ಬರುತ್ತದೆ ಮತ್ತು ಶೋಭೆ ತರಬಲ್ಲದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಿ.ಸಿ.ಕುಶಾಲಪ್ಪ,ಬಟ್ಯನ ಚಿನ್ನಪ್ಪ ಕುಶಾಲಪ್ಪಅವರ ಬಗ್ಗೆ ಒಂದಿಷ್ಟು….ಅದು 1984 ಸಮಯ. ದೇಶ ಕಂಡ ಪ್ರಭುದ್ದ, ಸಜ್ಜನ ರಾಜಕಾರಣಿ,ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಆಗಮಿಸುತ್ತಾರೆ, ಅಗ ಅವರನ್ನು ಕರೆತರಲು ಹೋಗುವ ಚಾಲಕರೇ ಕೊಡಗಿನ ಮದೆನಾಡು ಮೂಲದ ಬಿ.ಸಿ. ಕುಶಾಲಪ್ಪ.!!!ಬಟ್ಯಾನ ಚೆನ್ನಪ್ಪ ಕುಶಾಲಪ್ಪ ಅವರ ಕಾರು ಚಾಲನ ಪ್ರಭುದ್ಧತೆ ಕಂಡು ಬೆರಗಾದವರೇ ದೇಶ ಕಂಡ ಸಜ್ಜನ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ.ಮಾತ್ರವಲ್ಲ ನೇರವಾಗಿ ದೆಹಲಿಗೆ ಕರೆಸಿಕೊಂಡು ಎರಡು ವರ್ಷಗಳ ತನ್ನ ಚಾಲಕರಾಗಿ ನೇಮಿಸಿಕೊಳ್ಳುತ್ತಾರೆ ಇದು ಕುಶಾಲಪ್ಪ ನಿಷ್ಠೆಗೆ ವಾಜಪೇಯಿ ನೀಡಿದ ಗೌರವ ಎಂದೇ ವ್ಯಾಖ್ಯಾನಿಸಬಹುದಾಗಿದೆ.ಬಳಿಕ ನಡೆದದ್ದೆಲ್ಲ ಪವಾಡವೇ ಎನ್ನಬಹುದು.ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಂದಿನ ಸಚಿವ ವಿ.ಎಸ್. ಆಚಾರ್ಯ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ, ಕೊಡಗಿನ ಅಂದಿನ ಉಸ್ತುವಾರಿ ಸಚಿವ ರಾಮಚಂದ್ರ ಗೌಡರಿಗೆ, ಯುವ ರಾಜಕಾರಣಿ ವಿಜೇಯೇಂದ್ರ ಹಾಗೂ ಅನೇಕ ರಾಜಕಾರಣಿಗಳಿಗೆ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ ಹೆಮ್ಮೆ ಇವರದು.ಇಷ್ಟೆಲ್ಲ ಪ್ರಭುದ್ದ ರಾಜಕಾರಣಿಗಳ ಒಡನಾಟವಿದ್ದರೂ ತನ್ನ ಪಾಡಿಗೆ ತಾನು ಎಂಬಂತೆ ಬದುಕುತ್ತಿರುವ ಬಟ್ಯನ ಚೆನ್ನಪ್ಪ ಕುಶಾಲಪ್ಪ ಅವರನ್ನು ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅಭಿನಂದಿಸವುದು ನಮ್ಮ ಜವಾಬ್ದಾರಿ ಎಂದು ಭಾವಿಸಿದ್ದೇನೆಂದು ಗಂಗಾಧರ ಗಾಂಧಿ ತಿಳಿಸಿದ್ದಾರೆ.ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿಗಂಗಾಧರ್ ಗಾಂಧೀ ಮೊಬೈಲ್ ಸಂಖ್ಯೆ9663593596 ವನ್ನು ಆಸಕ್ತರು ಸಂಪರ್ಕಿಸಬಹುದಾಗಿದೆ

ಪ್ರಾದೇಶಿಕ ವಾರ್ತೆಗಳು

ವೆನ್ಲಾಕ್ ನಲ್ಲಿ ಐಸಿಯು ಘಟಕಗಳ ಇಳಿಕೆಯಿಂದಾಗಿ ರೋಗಿಗಳ ಪರದಾಟ:- ಶಾಸಕ ಕಾಮತ್

ರಾಜ್ಯ ಕಾಂಗ್ರೆಸ್ ಸರ್ಕಾರವು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿರುವುದರಿಂದ ರೋಗಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಕೂಡಲೇ ಈ ಬಗ್ಗೆ ಆರೋಗ್ಯ ಸಚಿವರು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ವೇದವ್ಯಾಸ ಕಾಮತ್ ರವರು ಪತ್ರದ ಮೂಲಕ ಆಗ್ರಹಿಸಿದರು.ನಾನು ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಾದ ವೆನ್ಲಾಕ್ ನಲ್ಲಿ ಕೇವಲ 16 ತೀವ್ರ ನಿಗಾ ಘಟಕಗಳಿದ್ದವು. ಆ ನಂತರ ರೋಗಿಗಳಿಗೆ ಅನುಕೂಲವಾಗಲು ಹಂತ ಹಂತವಾಗಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಅಂತಿಮವಾಗಿ ಜನರು ಕೊರೋನ ಸಂಕಷ್ಟದಲ್ಲಿ ಸಿಲುಕಿದ್ದಾಗ, ಬಿಜೆಪಿ ಸರ್ಕಾರದ ವಿಶೇಷ ಸಹಕಾರದೊಂದಿಗೆ 115 ಕ್ಕೂ ಅಧಿಕ ತೀವ್ರ ನಿಗಾ ಘಟಕ ಹಾಗೂ 250 ಕ್ಕೂ ಹೆಚ್ಚು ಆಕ್ಸಿಜನ್ ಬೆಡ್ ಗಳನ್ನು ಸಜ್ಜುಗೊಳಿಸಲಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಸರ್ಕಾರವು ಅತ್ಯಂತ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದು ತೀವ್ರ ನಿಗಾ ಘಟಕಗಳ ಸಂಖ್ಯೆಯನ್ನು ಗಣನೀಯವಾಗಿ ಇಳಿಸಿ ರೋಗಿಗಳು ಈ ಹಿಂದಿನಂತೆ ಪರದಾಡುವಂತೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ವೆನ್ಲಾಕ್ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ಸುತ್ತಮುತ್ತಲಿನ ಅನೇಕ ಜಿಲ್ಲೆಗಳಿಂದಲೂ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಅಲ್ಲದೇ ಮಂಗಳೂರು ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಜನರ ಅಗತ್ಯಕ್ಕನುಗುಣವಾಗಿ ತೀವ್ರನಿಗಾ ಘಟಕಗಳನ್ನು ಹೆಚ್ಚಿಸಬೇಕೇ ಹೊರತು ಕಡಿಮೆಗೊಳಿಸಬಾರದು. ಸ್ಟಾಫ್ ನರ್ಸ್ ಗಳ ಕೊರತೆಯಿದ್ದರೆ ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳಿ. ಅದು ಬಿಟ್ಟು ಜನಸಾಮಾನ್ಯರ ಆರೋಗ್ಯದ ವಿಷಯದಲ್ಲಿ ಚೆಲ್ಲಾಟವಾಡುವುದು ಬೇಡ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರೇ ರಾಜ್ಯದ ಆರೋಗ್ಯ ಸಚಿವರಾಗಿದ್ದರೂ ಇಂತಹ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಶಾಸಕರು ಹೇಳಿದರು.

ಪ್ರಾದೇಶಿಕ ವಾರ್ತೆಗಳು

“45“ ಸಿನಿಮಾದ ”ಅಫ್ರೋ ಟಪಂಗ್“ ಹಾಡಿನ ಪ್ರಮೋಷನ್ ನಲ್ಲಿ ಮೋಡಿ ಮಾಡಿದ ಚಿತ್ರತಂಡ. ಅರ್ಜುನ್ ಜನ್ಯ, ರಾಜ್ ಬಿ ಶೆಟ್ಟಿಗೆ ಅನುಶ್ರೀ ಸಾಥ್!

ಮಂಗಳೂರು: ಬಹುನಿರೀಕ್ಷಿತ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ “45” ಸಿನಿಮಾದ ಆಫ್ರೋ ಟಪಂಗ್ ಹಾಡಿನ ಪ್ರಮೋಷನ್ ಗಾಗಿ ಆಗಮಿಸಿದ್ದ ಚಿತ್ರತಂಡ  ಫೋರಂ ಫಿಜಾ ಮಾಲ್ ನಲ್ಲಿ ನೆರೆದಿದ್ದ ಸಿನಿಮಾ ಪ್ರೇಮಿಗಳು ಮತ್ತು ಅಭಿಮಾನಿಗಳನ್ನು ಮೋಡಿ ಮಾಡಿತು. ನಿರ್ದೇಶಕ ಅರ್ಜುನ್ ಜನ್ಯ, ರಾಜ್ ಬಿ ಶೆಟ್ಟಿ, ಗಾಯಕರಾದ ನಿಶಾನ್ ರೈ, ಎಂ.ಸಿ.ಬಿಜು ಅವರಿಗೆ ಅನುಶ್ರೀ ಶೆಟ್ಟಿ ಸಾಥ್ ನೀಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಹಾಡಿನ ನೃತ್ಯ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು. ಹಾಡಿಗೆ ರಾಜ್ ಬಿ ಶೆಟ್ಟಿ ಟಪಾಂಗುಚ್ಚಿ ಕುಣಿಯುವ ಮೂಲಕ ಆಕರ್ಷಣೆ ಹೆಚ್ಚಿಸಿದ್ದು ವಿಶೇಷವಾಗಿತ್ತು.ಬಳಿಕ ಮಾಧ್ಯಮಗಳ ಜೊತೆಗೆ ಮಾತಾಡಿದ ಅರ್ಜುನ್ ಜನ್ಯ ಅವರು, “ಮಂಗಳೂರಿನ ಜನ ಬಹಳ ಒಳ್ಳೆಯವರು. ಇಲ್ಲಿಗೆ ಪ್ರತೀ ಬಾರಿ ಬಂದಾಗಲೂ ಒಳ್ಳೆಯ ಫೀಲ್ ಉಂಟಾಗುತ್ತೆ. ಹಾಗಾಗಿ ಸಿನಿಮಾದಲ್ಲಿ ನಿಶಾನ್ ರೈ ಬರೆದಿರುವ ತುಳು ಸಾಹಿತ್ಯವಿರುವ ಹಾಡನ್ನು ಅಳವಡಿಸಲಾಗಿದೆ. ಈಗಾಗಲೇ ಹಾಡು 25 ಮಿಲಿಯನ್ ವೀಕ್ಷಣೆ ಪಡೆಯುವ ಸನಿಹದಲ್ಲಿಯುವುದು ಖುಷಿ ಎನಿಸುತ್ತಿದೆ. ಚಿತ್ರವು ಡಿಸೆಂಬರ್ 25ರಂದು ಬಿಡುಗಡಯಾಗುತ್ತಿದೆ ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ“ ಎಂದರು.ನಟ ರಾಜ್ ಬಿ ಶೆಟ್ಟಿ ಮಾತಾಡಿ, ”45 ಸಿನಿಮಾದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಅವರೊಂದಿಗೆ ನಟಿಸಿರುವುದು ರೋಮಾಂಚನಕಾರಿ ಅನುಭವ. ಸಿನಿಮಾ ಚೆನ್ನಾಗಿ ಮೂಡಿಬಂದಿದ್ದು ಆಫ್ರೋ ಟಪಂಗ್ ಹಾಡಿಗೆ ಒಳ್ಳೇ ರೆಸ್ಪಾನ್ಸ್ ಬರುತ್ತಿದೆ. ತುಳುವರು ಸಿನಿಮಾ ನೋಡಿ“ ಎಂದರು.ಫೋರಂ ಫಿಜಾ ಮಾಲ್ ನ ಬಿ.ಎಂ.ಫಾರೂಕ್ ಮಾತಾಡಿ, ”ಚಿತ್ರತಂಡ ಒಳ್ಳೆಯ ಪ್ರಯತ್ನಕ್ಕೆ ಕೈಹಾಕಿದೆ. ತುಳು ಸಾಹಿತ್ಯವನ್ನು ಹಾಡಿನಲ್ಲಿ ಬಳಕೆ ಮಾಡಿರುವುದು ನಮಗೆ ಹೆಮ್ಮೆಯ ವಿಚಾರ“ ಎಂದರು.ಅನುಶ್ರೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.*ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಉಗಾಂಡಾ ಮಕ್ಕಳ ನೃತ್ಯ!*ರೀಲ್ಸ್ ಮೂಲಕವೇ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದ ಉಗಾಂಡಾ ದೇಶದ ಹಳ್ಳಿಯ ಮಕ್ಕಳ ತಂಡ “ಗೆಟ್ಟೋ ಕಿಡ್ಸ್” ಅನ್ನು 45 ಸಿನಿಮಾದ ಟಪಂಗ್ ಹಾಡಿನಲ್ಲಿ ಕುಣಿಸಿರುವುದು ಸಿನಿಮಾದ ವಿಶೇಷವಾಗಿದೆ. ಈ ಕುರಿತು ಮಾತಾಡಿದ ನಿರ್ದೇಶಕ ಅರ್ಜುನ್ ಜನ್ಯ ರೀಲ್ಸ್ ಮೂಲಕ ನೋಡಿದ್ದ ಮಕ್ಕಳ ಪ್ರಸಿದ್ಧ ನೃತ್ಯ ತಂಡವನ್ನು ಕರೆಸುವ ಮೂಲಕ ಸಿನಿಮಾದ ಹಾಡನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವಲ್ಲಿ ಯಶಸ್ಸು ಸಿಕ್ಕಿದೆ“ ಎಂದರು.

Scroll to Top