ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಮೂಳೆ ಖನಿಜಾಂಶ ಸಾಂದ್ರತೆ ಉಚಿತ ತಪಾಸಣಾ ಶಿಬಿರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ಸೋಮವಾರ ಪತ್ರಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಮೂಳೆ ಖನಿಜಾಂಶ ಸಾಂದ್ರತೆ ಉಚಿತ ತಪಾಸಣಾ ಶಿಬಿರ ನಗರದ ಪತ್ರಿಕಾ ಭವನದಲ್ಲಿ ನಡೆಯಿತು.ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ನಿಯೋಜಿತ ಅಧ್ಯಕ್ಷ ರವೀಂದ್ರ ಬಿ.ಎನ್. ಶಿಬಿರ ಉದ್ಘಾಟಿಸಿದರು. ಆಯುರ್ವೇದ ತಜ್ಞೆ ಡಾ.ಜ್ಯೋತಿ ಕೆ. ಮಾತನಾಡಿ ” ಮೂಳೆ ಖನಿಜ ಸಾಂದ್ರತೆ ಕುರಿತು ಜಾಗೃತಿ ಮೂಡಿಸುವುದು ಅಗತ್ಯ. ನಿಯಮಿತ ತಪಾಸಣೆಯಿಂದ ಯಾವುದೇ ಅರೋಗ್ಯ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ’ ಎಂದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್,ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ,ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಬೆಂಗಳೂರಿನ ಮೆಡಿಲ್ಯಾಬ್ ಇಂಡಿಯಾ ಫಾರ್ಮಾ ಸಂಸ್ಥೆಯ ಪ್ರತಿನಿಧಿ ಅರುಣ್ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಪ್ರಭಾವಿಗಳ ಹಿತ ಕಾಪಾಡಲು ಬಡ ಬೀದಿಬದಿ ವ್ಯಾಪಾರಿಗಳ ಮೇಲೆ ಪಾಲಿಕೆಯ ದಬ್ಬಾಳಿಕೆ ಖಂಡನೀಯ – ಸಿಪಿಐಎಂ

ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಡ ಬೀದಿಬದಿ ವ್ಯಾಪಾರಸ್ಥರ ಮೇಲೆ ನಗರಾಡಳಿತ ನಡೆಸುತ್ತಿರುವ ದಾಳಿಗಳು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಡಳಿತವನ್ನೇ ನಾಚಿಸುವಂತಿದೆ. ನಗರದಲ್ಲಿ ಸಂಡೇ ಬಜಾರ್ ವ್ಯಾಪಾರಸ್ಥರ ವಿರುದ್ದ ಪ್ರಾರಂಭವಾದ ದಬ್ಬಾಳಿಕೆಗಳು ನಗರದ ಎಲ್ಲಾ ಭಾಗಗಳಲ್ಲಿಯೂ ವಿಸ್ತರಿಸಿದೆ. ಇದು ತನ್ನ ಬಡಜನ ವಿರೋದಿ ಮನೋಭಾವವನ್ನು ತೋರಿಸುತ್ತದೆ ಎಂದು CPIM ನಗರ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.Jun20ರ ಶನಿವಾರ ಪಡೀಲ್–ಬಜಾಲ್ ಮುಖ್ಯ ರಸ್ತೆಯಲ್ಲಿ ಜೀವನೋಪಾಯಕ್ಕಾಗಿ ಹಲವು ವರ್ಷಗಳಿಂದ ಹೂವಿನ ವ್ಯಾಪಾರ ನಡೆಸುತ್ತಿದ್ದ ಅಂಗವಿಕಲ ಬೀದಿಬದಿ ವ್ಯಾಪಾರಿಗಳಾದ ಚಂದ್ರಹಾಸ ಪೂಜಾರಿ ಮತ್ತು ಸುನೀತಾ ಪೂಜಾರಿ ಅವರ ವ್ಯಾಪಾರ ಕೇಂದ್ರಗಳನ್ನು ಜೆಸಿಬಿ ಬಳಸಿ ಧ್ವಂಸಗೊಳಿಸಿರುವ ಮಂಗಳೂರು ಮಹಾನಗರ ಪಾಲಿಕೆಯ ಅಮಾನವೀಯ ಕ್ರಮವನ್ನು ಸಿಪಿಐಎಂ ಮಂಗಳೂರು ನಗರ ಸಮಿತಿ ತೀವ್ರವಾಗಿ ಖಂಡಿಸುತ್ತದೆ.ತಮ್ಮ ಶ್ರಮವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಬಡ ಕಾರ್ಮಿಕ ವರ್ಗದ ಮೇಲೆ ಅಧಿಕಾರ ಯಂತ್ರವನ್ನು ಬಳಸಿಕೊಂಡು ದಾಳಿ ನಡೆಸಿರುವುದು ಕೇವಲ ಆಡಳಿತಾತ್ಮಕ ಕ್ರಮವಲ್ಲ; ಇದು ಬಂಡವಾಳಶಾಹಿ ವ್ಯವಸ್ಥೆಯ ವರ್ಗಪಕ್ಷಪಾತದ ಮುಖವನ್ನು ಮತ್ತೊಮ್ಮೆ ಬಯಲಿಗೆಳೆದಿರುವ ಘಟನೆಯಾಗಿದೆ. ದೊಡ್ಡ ವ್ಯಾಪಾರ ಮಳಿಗೆಗಳು, ಪ್ರಭಾವಿ ಮಾಲಕರು ಮತ್ತು ಹಣದ ಶಕ್ತಿಯ ಮುಂದೆ ತಲೆಬಾಗುವ ಆಡಳಿತವು ಬದುಕಿಗಾಗಿ ಹೋರಾಡುತ್ತಿರುವ ಬಡ ಬೀದಿಬದಿ ವ್ಯಾಪಾರಿಗಳ ಮೇಲೆ ಮಾತ್ರ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿದೆ.ರಾಜ್ಯದ ಆಡಳಿತ ಯಂತ್ರವು ಹೆಚ್ಚಾಗಿ ಆಳುವ ವರ್ಗದ ಹಿತಾಸಕ್ತಿಯನ್ನು ಕಾಪಾಡುವ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದಕ್ಕೆ ಈ ಘಟನೆ ಜೀವಂತ ಉದಾಹರಣೆಯಾಗಿದೆ. ನಗರದ ರಸ್ತೆ, ಸಾರ್ವಜನಿಕ ಸ್ಥಳಗಳು ಮತ್ತು ಸಂಪನ್ಮೂಲಗಳೆಲ್ಲವೂ ಎಲ್ಲಾ ನಾಗರಿಕರಿಗೂ ಸೇರಿದ್ದಾಗಿದೆ, ದುಡಿಯುವ ಜನರಿಗೆ ಅದರ ಮೇಲೆ ಸಂಪೂರ್ಣ ಹಕ್ಕು ಇದೆ. ಆದರೆ ಇಂದು ನಗರಾಭಿವೃದ್ಧಿ ಎಂಬ ಹೆಸರಿನಲ್ಲಿ ಬಡವರನ್ನು ನಗರದಿಂದಲೇ ಹೊರದಬ್ಬುವ ನೀತಿಗಳನ್ನು ಅನುಸರಿಸಲಾಗುತ್ತಿದೆ.ಶೇಕಡಾ 75 ರಷ್ಟು ಅಂಗವೈಕಲ್ಯ ಹೊಂದಿರುವ ಬೀದಿ ಬದಿ ವ್ಯಾಪಾರಿಗಳನ್ನು ಬಿಡದೆ ಅವರ ಬದುಕಿನ ಮೇಲೆ ಪಾಲಿಕೆ ಬುಲ್ಡೋಜರ್ ಹರಿಸಿರುವುದು ಅಮಾನವೀಯ ಕೃತ್ಯವಾಗಿದೆ. ಇವರ ಅಂಗಡಿ ಸಾಮಗ್ರಿಗಳನ್ನು ಧ್ವಂಸಗೊಳಿಸಿ, ವಶಪಡಿಸಿ ಕೊಂಡಿರುವ ಕ್ರಮವು ಸಂವಿಧಾನಬದ್ಧ ಜೀವನೋಪಾಯದ ಹಕ್ಕಿನ ಮೇಲಿನ ನೇರ ದಾಳಿಯಾಗಿದೆ. ಬಡವರ ಗುಡಿಸಲುಗಳು, ಸಣ್ಣ ವ್ಯಾಪಾರ ಕೇಂದ್ರಗಳು ಮತ್ತು ಬೀದಿಬದಿ ವ್ಯಾಪಾರಗಳು ಮಾತ್ರ ಅಧಿಕಾರಿಗಳಿಗೆ ಕಾಣುತ್ತವೆ. ಆದರೆ ಸಾರ್ವಜನಿಕ ಜಾಗಗಳನ್ನು ಅತಿಕ್ರಮಿಸುವ ಪ್ರಭಾವಿಗಳ ವಿರುದ್ಧ ಇದೇ ರೀತಿಯ ಕ್ರಮ ಕೈಗೊಳ್ಳಲು ಆಡಳಿತ ಹಿಂದೇಟು ಹಾಕುವುದು ಏಕೆ? ಈ ದ್ವಂದ್ವ ನೀತಿಯೇ ಆಡಳಿತ ಯಾರ ಪರವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.ಆದ್ದರಿಂದ ಚಂದ್ರಹಾಸ ಪೂಜಾರಿ ಮತ್ತು ಸುನೀತಾ ಪೂಜಾರಿ ಅವರಿಗೆ ಕೂಡಲೇ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು,ಧ್ವಂಸಗೊಳಿಸಿದ ವಸ್ತುಗಳಿಗೆ ಸಂಪೂರ್ಣ ಪರಿಹಾರ ನೀಡಬೇಕು.ಬೀದಿಬದಿ ವ್ಯಾಪಾರಿಗಳ ವಿರುದ್ಧದ ದಬ್ಬಾಳಿಕೆ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕು. ಬೀದಿಬದಿ ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಿಸುವ ಕೇಂದ್ರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.ಈ ಅಮಾನವೀಯ ಕ್ರಮಕ್ಕೆ ಹೊಣೆಗಾರರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಂದು ನಗರ ಪಾಲಿಕೆ ಅಧಿಕಾರಿಗಳನ್ನು CPIMಒತ್ತಾಯಿಸಿದೆ. ದುಡಿಯುವ ಜನರ ಬದುಕಿನ ಮೇಲೆ ನಡೆಯುವ ಇಂತಹ ವರ್ಗದಾಳಿಗಳನ್ನು ಸಿಪಿಐಎಂ ಪಕ್ಷ ಎಂದಿಗೂ ಸಹಿಸುವುದಿಲ್ಲ. ಬಡವರ ಬದುಕನ್ನು ಬುಲ್ಡೋಜರ್‌ನಿಂದ ನಾಶಮಾಡುವ ಆಡಳಿತದ ವಿರುದ್ಧ ಜನಾಂದೋಲನವನ್ನು ಕಟ್ಟಲು ಮತ್ತು ಸಂತ್ರಸ್ತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲು ಸಿಪಿಐಎಂ ಬದ್ಧವಾಗಿದೆ ಎಂದುಯೋಗೀಶ್ ಜಪ್ಪಿನಮೊಗರು,ನಗರ ಕಾರ್ಯದರ್ಶಿ– ಸಿಪಿಐಎಂ ಮಂಗಳೂರು ನಗರ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಯುವ ಸಿಂಚನ ಪತ್ರಿಕೆಯ ಸಂಪಾದಕ, ಎನ್ ಎಸ್ ಸಿಡಿಎಫ್ ನ ಪ್ರಧಾನ ಕಾರ್ಯದರ್ಶಿ ದಿನಕರ್ ಡಿ. ಬಂಗೇರ ಅವರಿಗೆ ಮಾತೃ ವಿಯೋಗ.

ಮಂಗಳೂರು -ಮಂಗಳೂರಿನ ಸ್ಟೇಟ್ ಬ್ಯಾಂಕ್ ಹಾಮಿಲ್ಟನ್ ಕಾಂಪ್ಲೆಕ್ಸ್ ನಲ್ಲಿರುವ ಹೆಸರಾಂತ ಸಂಸ್ಥೆ ಹಾನಾ ಪಬ್ಲಿಶರ್ ನ ಸಿಎಂಡಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸಂಘಟನೆಯಿಂದ ಪ್ರಕಾಶಿತಗೊಳ್ಳುವ ಯುವ ಸಿಂಚನ ಪತ್ರಿಕೆಯ ಸಂಪಾದಕ,ಸಾಮಾಜಿಕ ಮತ್ತು ಜನಪರ ಚಿಂತನೆಯ ಎನ್ ಎಸ್ ಸಿಡಿಎಫ್ ನ ಪ್ರಧಾನ ಕಾರ್ಯದರ್ಶಿ, ಎಂಪಿಎಂಎಲ್ ಎ ನ್ಯೂಸ್, ಬ್ಯಾರಿ ವಾರ್ತೆ, ಬ್ಯಾರಿ ಮಿತ್ರ, ಚಾಲುಕ್ಯ, ಕಚ್ಚೂರುವಾಣಿ,ಹೊಸಂಗಣ ಕರಾವಳಿ ಕೇಸರಿ. ಕರಾವಳಿ ನ್ಯೂಸ್. ಬಂಟ್ಸ್ ನ್ಯೂಸ್, ಸಿಟಿ ನ್ಯೂಸ್ ಸೇರಿದಂತೆ ದಕ್ಷಿಣ ಕನ್ನಡ -ಉಡುಪಿ ಜಿಲ್ಲೆಯ ಜನಪ್ರಿಯ ನಿಯತಾಕಾಲಿಕೆಗಳ ಪ್ರಖ್ಯಾತ ಡಿಸೈನರ್ ದಿನಕರ್ ಡಿ.ಬಂಗೇರ ಅವರ ಮಾತೃಶ್ರೀ,ಕಿರೋಡಿಯನ್ ಕುಟುಂಬದ ಹಿರಿಯ ಸದಸ್ಯೆ, ದಿ. ದೇವಣ್ಣ ಪೂಜಾರಿಯವರ ಧರ್ಮಪತ್ನಿ ರಮಣಿ ಡಿ. ಬಂಗೇರ (80)ಅವರು ಇಂದು ಬೆಳಿಗ್ಗೆ 5ಗಂಟೆಗೆ ಬೈಕಂಪಾಡಿ ಮೀನಕಳಿಯದ ಎಂ.ವಿ. ಸದನ ಸ್ವಗೃಹದಲ್ಲಿ ವಯೋಸಹಜ ಅಸ್ವಸ್ಥದಿಂದ ದೈವಾಧೀನರಾದರು. ಮೃತರ ಅಂತಿಮ ವಿಧಿಯನ್ನು ಇಂದು ಬೆಳಿಗ್ಗೆ 10.30 ಕ್ಕೆ ಬೈಕಂಪಾಡಿಯ ಎಂ. ವಿ. ಸದನದಲ್ಲಿ ನೆರವೇರಿಸಿ ಬೆಳ್ಳಿಗೆ 11ಗಂಟೆಗೆ ಸುರತ್ಕಲ್ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಯುವ ವಾಹಿನಿ ಕೇಂದ್ರ ಸಮಿತಿ ಸೇರಿದಂತೆ ಊರ-ಪರವೂರ ಗಣ್ಯರನೇಕರು, ಎನ್ ಎಸ್ ಸಿಡಿಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ,ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಪ್ರತಿಷ್ಠಾನದ ಆಜೀವ ಸದಸ್ಯೆ ಯೋಗೇಶ್ವರಿ, ಸ್ಥಳೀಯರು ಮೃತರ ಅಂತಿಮ ದರ್ಶನ ಪಡೆದರು. ಎಂಪಿ ಎಂಎಲ್ ಎ ನ್ಯೂಸ್ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಎಂ. ವಿ. ಸದನಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದರು. ಮೃತರು ದಿನಕರ್ ಡಿ. ಬಂಗೇರ, ಮೋಹನ್ ಡಿ. ಬಂಗೇರ ಮತ್ತು ಶ್ರೀಮತಿ ಶೀಲಾವತಿ ಕೆ.ಸೇರಿದಂತೆ ಮೂವರು ಮಕ್ಕಳು, ಐವರು ಮೊಮ್ಮಕ್ಕಳು, ಬಂಧು ಮಿತ್ರರನ್ನು ಅಗಲಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಹಿರಿಯ ಸಾಹಿತಿ ಪತ್ರಕರ್ತ ಶ್ರೀ ಪರಮಾನಂದ ಸಾಲ್ಯಾನ್ ರಿಗೆ ರಂಗಭಾಸ್ಕರ- 2026 ಪ್ರಶಸ್ತಿ ಪ್ರದಾನ

ಮಂಗಳೂರು- ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹದಿನೆಂಟನೆಯ ವಾರ್ಷಿಕೋತ್ಸವದ ಪರವಾಗಿ ರಂಗಭಾಸ್ಕರ-2026 ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ನಾಟಕಕಾರ, ಸಾಹಿತಿ ಮತ್ತು ಸಂಘಟಕ ಶ್ರೀ ಪರಮಾನಂದ ಸಾಲ್ಯಾನ್‌ರವರಿಗೆ ಇಂದು (21-6-2026) ಸಸಿಹಿತ್ಲುವಿನ ಶ್ರೀಯುತರ ಸ್ವಗೃಹದಲ್ಲಿ ನಡೆದ ಸರಳ ಮತ್ತು ಆಪ್ತ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಲ್ಷತೆ ವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಡಾ.ನಾ.ದಾಮೋದರ ಶೆಟ್ಟಿಯವರು ಮಾತನಾಡಿ, ರಂಗಭಾಸ್ಕರ ಪ್ರಶಸ್ತಿಗೆ ಅತ್ಯಂತ ಸೂಕ್ತ ವ್ಯಕ್ತಿಯನ್ನು ಆರಿಸಿದ್ದಕ್ಕೆ ಸಂತೋಷವಾಗಿದೆ ಎಂದರು. ಹಿರಿಯ ಜನಪದ ತಜ್ಞ ಕೆ.ಕೆ.ಪೇಜಾವರರವರು ತಮ್ಮ ಮತ್ತು ಪರಮಾನಂದರ ದೀರ್ಘ ಕಾಲದ ಗೆಳೆತನದ ದಿನಗಳನ್ನು ಮೆಲುಕು ಹಾಕಿದರು. ಜನಪ್ರಿಯ ಸಿನೆಮಾ ರಂಗಭೂಮಿ ನಟ ನವೀನ್ ಡಿ ಪಡೀಲ್ ಮಾತನಾಡಿ ಪರಮಾನಂದ ಸಾಲ್ಯಾನ್‌ರವರ ಸಹೃದತೆ ಮತ್ತು ಕಲೆಯ ಬಗೆಗಿನ ಅಭಿಮಾನವನ್ನು ನೆನಪಿಸಿ ಶುಭಹಾರೈಸಿದರು. ಸಂಘಟಕ, ನಟ ಯತೀಶ್ ಬೈಕಂಪಾಡಿಯವರು ಪರಮಾನಂದರು ಲವಲವಿಕೆಯಿಂದ ಇದ್ದಾರೆ ಆದರೆ ಇನ್ನಷ್ಟು ಆತ್ಮಸ್ತೈರ್ಯದಿಂದ ಇದ್ದು ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ರಂಗ ಭಾಸ್ಕರ ಪ್ರಶಸ್ತಿ- ವರ್ಷಂಪ್ರತಿ ಹಿರಿಯ ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಕೊಡುವ ಪ್ರಶಸ್ತಿಯಾಗಿದೆ. ಬಹುಮುಖ ಪ್ರತಿಭೆ ದಿವಂಗತ ಭಾಸ್ಕರ ನೆಲ್ಲಿತೀರ್ಥರವರ ನೆನಪಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಉಡುಪಿಯ ಕಲಾಪೋಷಕ ಉಡುಪಿ ವಿಶ್ವನಾಥ ಶೆಣೈಯವರು ಪ್ರಾಯೋಜಿಸುತ್ತಿದ್ದಾರೆ. ಪ್ರಶಸ್ತಿಯು ಸನ್ಮಾನ ಪತ್ರ, ಶಾಲು, ಹಾರ, ಸ್ಮರಣಿಕೆ ಮತ್ತು ಪ್ರಶಸ್ತಿ ಮೊತ್ತ 15,000 ಹಾಗೂ ರಂಗಸಂಗಾತಿ ಗೆಳೆಯರ ಬಳಗ ಕೊಡಮಾಡಿದ 20,000/- ಒಟ್ಟು 35,000/- ಮೊತ್ತವನ್ನು ಒಳಗೊಂಡಿತ್ತು. ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್, ಹಿರಿಯ ನಟರುಗಳಾದ ಸಂತೋಷ್ ಶೆಟ್ಟಿ, ಮುರಳೀಧರ ಕಾಮತ್, ಉಡುಪಿಯ ರವಿರಾಜ್ ಹೆಚ್.ಪಿ., ರಾಜೇಶ್ ಭಟ್ ಪಣಿಯಾಡಿ, ಮೈಮ್ ರಾಮದಾಸ್, ಜಯಶೀಲ್, ಜಯದೇವ್, ಹರಿಪ್ರಸಾದ್ ಕುಂಪಲ, ರಂಜನ್ ಬೋಳೂರು, ಪ್ರಮೀಳಾ ದೀಪಕ್, ಯಶೋಧರ ಕೋಟ್ಯಾನ್, ಉಪನ್ಯಾಸಕ ಕರುಣಾಕರ ಬಳ್ಕೂರು, ರಂಗಸಂಗಾತಿಯ ವಿಶ್ವಸ್ಥ ಮಂಡಳಿ ಸದಸ್ಯರಾದ ಕರುಣಾಕರ ಶೆಟ್ಟಿ, ನಾಗೇಶ್ ಬಜಾಲ್, ಚಂದ್ರಶೇಖರ ಕೂಳೂರು ಮುಂತಾದವರು ಮತ್ತು ಪರಮಾನಂದರ ಶಿಷ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು. ರಂಗಸಂಗಾತಿ ಕಾರ್ಯದರ್ಶಿ ಶಶಿರಾಜ್ ರಾವ್ ಕಾವೂರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಪ್ರಾದೇಶಿಕ ವಾರ್ತೆಗಳು

ಮೇರು ಕವಿಗಳ ಸ್ಮರಣೆ ಸ್ತುತ್ಯಾರ್ಹ – ಡಾ. ಆನಂದ್ ಬಂಜನ್

ಕೆ ಎಸ್ ನಿಸಾರ್ ಅಹಮದ್ ಅವರು ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಕರ್ನಾಟಕದ ಸೌಂದರ್ಯವನ್ನು ಅತ್ಯಂತ ಶ್ರೀಮಂತವಾಗಿ ಮತ್ತು ಅತ್ಯಂತ ಸುಂದರವಾಗಿ ವರ್ಣಿಸುವುದರಲ್ಲಿ ಕೆ ಎಸ್ ನಿಸಾರ್ ಅಹ್ಮದ್ ತನ್ನ ಸಾಹಿತ್ಯದ ಪ್ರಖರತೆಯನ್ನು ತೋರಿಸಿದ್ದಾರೆ. ಈ ಕಾರಣದಿಂದಾಗಿಯೇ ಬಹುತೇಕ ಕನ್ನಡ ಕಾರ್ಯಕ್ರಮಗಳಲ್ಲಿ ನಿತ್ಯೋತ್ಸವ ಗೀತೆಗಳು ಮೂಡಿಬರುವುದು ಕೆ ಎಸ್ ನಿಸಾರ್ ಅಹಮದರ ಸಾಹಿತ್ಯದ ಔನ್ನತ್ಯ ಎಂದು ಲೋಕೋಪಯೋಗಿ ಅಭಿಯಂತರ, ಕವಿ,ಲೇಖಕ ಡಾಕ್ಟರ್ ಆನಂದ್ ಬಂಜನ್ ಅಭಿಪ್ರಾಯಪಟ್ಟರು. ಅವರು ಮಂಗಳೂರಿನ ಕದ್ರಿ ಬಾಲ ಭವನದಲ್ಲಿ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಆಯೋಜಿಸಿದ ಕೆ ಎಸ್ ನಿಸಾರ್ ಅಹ್ಮದ್ ನಿತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಕೆ ಎಸ್ ನಿಸಾರ ಅಹ್ಮದರ ಹೆಸರು ಸರ್ವಕಾಲಕ್ಕೂ ಅಜರಾಮರ. ಇಂತಹ ಮೇರು ಕವಿಯ ನೆನಪಿನಲ್ಲಿ ನಿತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ ರಾಣಿ ಪುಷ್ಪಲತಾದೇವಿ ಮತ್ತು ಬಳಗ ಅಭಿನಂದನಾರ್ಹರು ಎಂದರು.ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದರೆ ಹಿರಿ-ಕಿರಿ ಕವಿಗಳಿಗೆ ತಮ್ಮ ಸಾಹಿತ್ಯ ಪ್ರಕಾರವನ್ನು ಸಾದರಪಡಿಸುವುದಕ್ಕೆ ಅವಕಾಶ ಸಿಗುತ್ತದೆ ಎಂದ ಅವರು ಇಂತಹ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಸಾಮಾಜಿಕ ಚಿಂತಕ ರಂಜನ್ ಕುಮಾರ್ ಹಾಗೂ ಎನ್ ಎಸ್ ಸಿ ಡಿ ಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ ಉಪಸ್ಥಿತರಿದ್ದರು ಡಾಕ್ಟರ್ ಸುರೇಶ್ ನೆಗಳಗುಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿಜಯಂತಿ ನಂದಲಿಕೆ ಕಾರ್ಕಳ, ಆಂಟೋನಿ ಲೂಯಿಸ್ ಮಣಿಪಾಲ,ಶರಣ್ಯ ಬೆಳುವಾಯಿ, ಮಂಜುನಾಥ ಗುಂಡ್ಮಿ, ವಿನೋದ ಪ್ರಕಾಶ್ ಪಡುಬಿದ್ರಿ, ಶಾಲಿನಿ ಕೆಮ್ಮಣ್ಣು, ಆಕೃತಿ ಐ ಎಸ್ ಭಟ್ ಮಂಗಳೂರು, ಅಶ್ವಿನಿ ಕೊಂಜಾಡಿ, ಪೂರ್ಣಿಮಾ ಕೋಟ್ಯಾನ್ ಮಾರ್ನಾಡ್, ಕೆ. ವಾಣಿಶ್ರೀ ಅಶೋಕ್ ಐತಾಳ್, ಪ್ರಶಾಂತ್ ಆಚಾರ್ಯ ಎಡಪದವು, ನಿರೀಕ್ಷಿತಾ ಮಂಗಳೂರು, ಗಿರೀಶ್ ಪೆರಿಯಡ್ಕ, ಮಂಡ್ಯ ಅನಾರ್ಕಲಿ ಸಲೀಂ, ಸುಮಯ್ಯಾ ಎಂ ಪಾಟೀಲ್ ದೇರಳಕಟ್ಟೆ, ಸುಲೋಚನ ನವೀನ್, ಡಾ.ಪ್ಲಾವಿಯಾ ಕ್ಯಾಸ್ಟಲಿನೊ ಮಣಿಪಾಲ, ಸಿಹಾನ ಬಿ.ಎಂ., ಅವನೀಶ್ ಐತಾಳ್.ಪಿ ಶಂಶೀರ್ ಬುಡೋಳಿ, ಆಯಿಷಾ ಪೆರ್ನೆ, ರೇಖಾ ಸುದೇಶ್ ರಾವ್, ಸುಖಲತಾ ಶೆಟ್ಟಿ ಬೋಂದೆಲ್ ತಮ್ಮ ಸ್ವರಚಿತ ಕವನ ವಾಚನ ಮಾಡಿದರು. ರೇಖಾ ಸುದೇಶ್ ರಾವ್ ಪ್ರಾರ್ಥಿಸಿದರು, ಶರಣ್ಯ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ.

ಸುರತ್ಕಲ್, ಜೂ. 20:ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮತ್ತು ಅವರ ಕುಟುಂಬ ಸದಸ್ಯರಿಗಾಗಿ ಮುಕ್ಕದ ಶ್ರೀನಿವಾಸ ಆಸ್ಪತ್ರೆಯಲ್ಲಿಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಯಿತು.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಡೇವಿಡ್ ರೊಸಾರಿಯೊ ಅವರು ಮಾತನಾಡುತ್ತಾ,ಈ ಸಂದರ್ಭದಲ್ಲಿ ಆಸ್ಪತ್ರೆಯ ಪ್ರಮುಖರು ಮಾತನಾಡಿ, “ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಕರ್ತರ ಆರೋಗ್ಯ ಕಾಪಾಡುವುದು ನಮ್ಮ ಸಾಮಾಜಿಕ ಜವಾಬ್ದಾರಿ. ಅವರ ಸಂಘದ ಜೊತೆ ಸೇವಾ ಕಾರ್ಯ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ನಮಗೆ ಅತೀವ ಸಂತಸವಿದೆ. ಮುಂದೆಯೂ ಪತ್ರಕರ್ತರ ಆರೋಗ್ಯದ ವಿಷಯದಲ್ಲಿ ಅವರಿಗೊಂದು ವಿಶೇಷ ಆರೋಗ್ಯ ಕಾರ್ಡ್ ಒದಗಿಸಿ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ,” ಎಂದು ಭರವಸೆ ನೀಡಿದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ಮೊದಲ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಾ,“ಪತ್ರಕರ್ತರು, ಛಾಯಾಗ್ರಾಹಕರು, ಟಿವಿ ಮಾಧ್ಯಮದ ಕ್ಯಾಮೆರಾಮನ್‌ಗಳು ಸೇರಿದಂತೆ ಬಹುತೇಕರು ಸಮಯ-ಸಂದರ್ಭ ನೋಡದೆ, ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸುದ್ದಿಯ ಬೆನ್ನುಹತ್ತಿ ಓಡುವ ಈ ನಿತ್ಯ ಜಂಜಾಟದ‌ ನಡುವೆ ನಮ್ಮ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸದೆ ಅನಾರೋಗ್ಯಕ್ಕೆ ಈಡಾಗುವ ಸಂದರ್ಭ ಎದುರಾಗುತ್ತಿವೆ ಈ ಹಿನ್ನೆಲೆಯಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಪತ್ರಕರ್ತರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ಶ್ರೀನಿವಾಸ ಆಸ್ಪತ್ರೆಯ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಅವರಿಗೆ ಸಂಘದ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ ಮಾತನಾಡಿ, ಎ. ಶ್ಯಾಮ ರಾವ್ ಫೌಂಡೇಶನ್ ಸೇವಾ ಮನೋಭಾವದಿಂದ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಅದನ್ನು ಯಾರೂ ಮರೆಯುವಂತಿಲ್ಲ. ಇದೀಗ ಪತ್ರಕರ್ತರ ಸಂಘದೊಂದಿಗೆ ಶ್ರೀನಿವಾಸ ಆಸ್ಪತ್ರೆ ಕೈಜೋಡಿಸಿ ನಮ್ಮ ಸದಸ್ಯರ ಮತ್ತು ಅವರ ಕುಟುಂಬದ ಉಚಿತ ಆರೋಗ್ಯ ತಪಾಸಣೆಗೆ ಎಲ್ಲಾ ರೀತಿಯ ಸಹಕಾರ ನೀಡಿರುವುದು ನಿಜಕ್ಕೂ ಶ್ಲಾಘನೀಯ,ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಘದಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ,ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ,ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ. ಸತ್ಯನಾರಾಯಣ ರೆಡ್ಡಿವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲ್ ಕುಮಾರ್, ಶ್ರೀನಿವಾಸ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಉದಯ್ ಕುಮಾರ್ ರಾವ್, ಮೂಲ್ಕಿ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಸುರತ್ಕಲ್,ಸೇರಿದಂತೆ ಆಸ್ಪತ್ರೆಯ ಹಿರಿಯ ವೈದ್ಯರು, ಆಡಳಿತ ವರ್ಗದವರು ಉಪಸ್ಥಿ ತರಿದ್ದರು.ಝರೀನಾ ಕಾರ್ಯ ಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಸಭೆ

ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆ ಕಾಸ್ಸಿಯಾ, ಜೆಪ್ಪು ಮಂಗಳೂರು ಇಲ್ಲಿ 2026-27ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆಯು ದಿನಾಂಕ: 20.06.2026 ರಂದು ರೆ ಫಾ. ರಿತೇಶ್ ರೊಡ್ರಿಗಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಂಡು ಮಕ್ಕಳನ್ನು ನಮ್ಮ ಆಸ್ತಿಯನ್ನಾಗಿ ಮಾಡೋಣ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ಧರ್ಮ ಅಧ್ಯಯನ ಪೀಠದ ಮುಖ್ಯಸ್ಥರು ವಂದನೀಯ ಗುರುಗಳು ಡಾ|| ಸುನಿಲ್ ಜಾರ್ಜ್ ಡಿಸೋಜಾ ರವರು ಮಾತನಾಡಿದರು.ದೀಪ ಬೆಳಗಿಸುವುದರ ಮೂಲಕ 2026 – 27 ನೇ ಸಾಲಿನ ಸಭೆಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯವನ್ನು ಪ್ರಸ್ತುತಪಡಿಸಲಾಯಿತು. 2025-26 ನೇ ಸಾಲಿನ ಶಿಕ್ಷಕ – ರಕ್ಷಕ ಸಂಘದ ಕಾರ್ಯ ಚಟುವಟಿಕೆಗಳ ಒಂದು ಸಂಕ್ಷಿಪ್ತ ಪ್ರಸ್ತುತಿಯನ್ನು ಹೆತ್ತವರಿಗೆ ಪ್ರದರ್ಶಿಸಲಾಯಿತು. 2025 – 26 ನೇ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ 16 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಂತರ ಮುಖ್ಯ ಅತಿಥಿಗಳು ಹೆತ್ತವರಿಗೆ ಮಕ್ಕಳನ್ನು ಯಾವ ರೀತಿ ಭಾವನಾತ್ಮಕವಾಗಿ ಬೆಳೆಸಬಹುದು ಎಂದು ಮಾರ್ಗದರ್ಶನ ನೀಡಿದರು. ಮುಖ್ಯ ಶಿಕ್ಷಕಿ ಮೆಟಿಲ್ಡಾ ಡಿಕೋಸ್ತಾರವರು ಶಾಲಾ ನಿಯಮ ನಿರ್ಬಂಧನೆಗಳ ಬಗ್ಗೆ ಪೋಷಕರಿಗೆ ವಿವರಿಸಿದರು. ಪ್ರಸ್ತುತ 2026-27ನೇ ಸಾಲಿನ ಶಿಕ್ಷಕ – ರಕ್ಷಕ ಸಂಘದ ಕಾರ್ಯಕಾರಿ ಸಮಿತಿಗೆ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.ಹಾಗೂ ಹೂ ನೀಡಿ ಅವರನ್ನು ಅಭಿನಂದಿಸಲಾಯಿತು ತದನಂತರ ವಂದನೀಯ ಗುರುಗಳಾದ ರಿತೇಶ್ ರೊಡ್ರಿಗಸ್ ಅಧ್ಯಕ್ಷೀಯ ಭಾಷಣವನ್ನು ಮಾಡಿದರು.ಶಾಲಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.ಶಿಕ್ಷಕ – ರಕ್ಷಕ ಸಂಘದ ಕೋಶಾಧಿಕಾರಿಯಾಗಿರುವ ಮೊಹಮ್ಮದ್ ಇಮ್ರಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಿಕ್ಷಕಿಯಾದ ಶ್ರೀಮತಿ ಶಾಂತಿ ಡಿಸೋಜರವರು ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ರೈನಾ ಫ್ಲೋರ ಡಿಸೋಜರವರು ವಂದಿಸಿದರು. ಶ್ರೀಮತಿ ಚೈತ್ರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ರಂಗಭಾಸ್ಕರ ಪ್ರಶಸ್ತಿಗೆ ಹಿರಿಯ ನಾಟಕಕಾರ, ತುಳು ಸಾಹಿತಿ, ಸಂಘಟಕ ಶ್ರೀ ಪರಮಾನಂದ ಸಾಲ್ಯಾನ್ ಆಯ್ಕೆ. ರಂಗಸಂಗಾತಿ ಹದಿನೆಂಟನೆಯ ವಾರ್ಷಿಕೋತ್ಸವ

ಮಂಗಳೂರು: ಮಂಗಳೂರಿನ ಪ್ರಸಿದ್ಧ ಕ್ರಿಯಾಶೀಲ ರಂಗತಂಡ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ವರ್ಷಂಪ್ರತಿ ಕೊಡಮಾಡುವ ರಂಗಭಾಸ್ಕರ ಪ್ರಶಸ್ತಿಯನ್ನು ಈ ಬಾರಿ ಪ್ರತಿಭಾನ್ವಿತ ಹಿರಿಯ ನಾಟಕಕಾರ, ತುಳು ಸಾಹಿತಿ, ಸಂಘಟಕ ಶ್ರೀ ಪರಮಾನಂದ ಸಾಲ್ಯಾನ್ ಅವರಿಗೆ ಘೋಷಿಸಲಾಗಿದೆ.ಶ್ರೀ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ, ರಂಗಕರ್ಮಿ ದಿವಂಗತ ಭಾಸ್ಕರ ನೆಲ್ಲಿತೀರ್ಥ ನೆನಪಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಹಿರಿಯ ನಾಟಕಕಾರ, ತುಳು ಸಾಹಿತಿ, ಸಂಘಟಕ, ರಂಗ ಸುದರ್ಶನ ತಂಡದ ಸಂಸ್ಥಾಪಕ ಶ್ರೀ ಪರಮಾನಂದ ಸಾಲ್ಯಾನ್ ಅವರನ್ನು ಡಾ.ನಾ.ದಾಮೋದರ ಶೆಟ್ಟಿ, ಡಾ.ಮೀನಾಕ್ಷಿ ರಾಮಚಂದ್ರ ಮತ್ತು ಮೆಗಾಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್‌ರವರನ್ನು ಒಳಗೊಂಡ ಸಮಿತಿ ಆಯ್ಕೆ ಮಾಡಿದೆ.ಪ್ರಶಸ್ತಿ ಸ್ಮರಣಿಕೆ, ನಗದು, ಸನ್ಮಾನ ಪತ್ರ ಮುಂತಾದುವನ್ನು ಒಳಗೊಂಡಿದ್ದು 21-6-2026 ರಂದು ಶ್ರೀಯುತರ ಸ್ವಗೃಹದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ಗೋಪಾಲಕೃಷ್ಣ ಶೆಟ್ಟಿಯವರು ತಿಳಿಸಿದ್ದಾರೆ.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಗರಿ ಎಂಟರ್ಪ್ರೈಸಸ್ ನ ಶ್ರೀ ಅಗರಿ ರಾಘವೇಂದ್ರ ರಾವ್, ರಂಗಸಂಗಾತಿ ಕಲಾಪೋಷಕರು ಶ್ರೀ ಉಡುಪಿ ವಿಶ್ವನಾಥ ಶೆಣೈ, ಬಂಟರ ಸಂಘದ ಕಾರ್ಯದರ್ಶಿ ಎಂ.ಕರುಣಾಕರ ಶೆಟ್ಡಿ, ಹಿರಿಯ ನಟ ನವೀನ್ ಡಿ ಪಡೀಲ್, ಗೋಪಿನಾಥ್ ಭಟ್, ಸಂತೋಷ್ ಶೆಟ್ಟಿ, ಜಗನ್ನಾಥ ಕಲ್ಲಾಪು, ಮೈಮ್ ರಾಮದಾಸ್, ಕನ್ನಡ ಸಂಸ್ಕೃತಿ ಇಲಾಖೆಯ ಶ್ರೀ ರಾಜೇಶ್ ಬಿ, ಮುಂತಾದವರ ಉಪಸ್ಥಿತಿ ಇರಲಿದೆ.ಪರಮಾನಂದ ಸಾಲ್ಯಾನ್ ಕಿರು ಪರಿಚಯ-ಮುಂಗಾರು ಮತ್ತು ಹೊಸ ದಿಗಂತ ದಿನ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಣೆ ಮಾಡುತ್ತಾ ಬಿಲ್ಲವರ ವಿಶ್ವವಾಣಿ ಮತ್ತು ಯುವವಾಹಿನಿ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಖ್ಯಾತಿ.ರಂಗ ಸುದರ್ಶನ, ಪರಮ ಪದ್ಮ ಕಲಾವಿದರು, ಸುದರ್ಶನ್ ಕ್ರಿಯೇಶನ್ಸ್ ಎಂಬ ಸಂಸ್ಥೆಗಳ ನಿರ್ದೇಶಕರಾಗಿ ದುಬೈ, ಅಬುದಾಬಿ ಮಾತ್ರವಲ್ಲದೆ ದೇಶದ ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ನೀಡಿ ಪ್ರಸಿದ್ದಿ.ಬಾರೆರ್ ಬೀರೆರ್, ದೇಯಿ, ಅಮ್ಮ ಬತ್ತೆರ್, ಸಿರಿಗಂಧದ ಕರಿಯಜ್ಜೆರ್, ಸಸಿಬಿತ್ಲ್ ಉಳ್ಳಾಯನ ಧರ್ಮ ನಡೆ ಮುಂತಾದ ಸಾಕ್ಷ್ಯ ಚಿತ್ರಗಳು, ಸೇವೆ ಮತ್ತು ನೋವು, ನಾಯೆರ್, ಅರುವದೆ, ಬೂತಲೆ, ಮಸಣ ಮುಂತಾದ ಕಿರುಚಿತ್ರಗಳು, ಮಾಯದ ದೈಯೊಂಗುಲು, ಬಾಲೆಗೊಲಿನ ಭ್ರಾಮರಿ, ಕಡಲ್ ಉರ್ಕರ್ಂಡ್, ಸೀತೆಗ್ ಇತ್ತೆ ಅರ್ಥಾಂಡ್, ಲೀಲೆದ ಬಾಲೆ ಗೋಪಾಲೆ, ಬಲಿದಾನ, ಚೌತಿದ ಚಂದ್ರೆ, ಶನಿದೃಷ್ಟಿ, ಬೃಂದಾ ಮೂಲೆ ತುಳಸಿ, ಪುಟ್ಟುದ ಗುಟ್ಟು, ಪಾಂಚಾಲಿ, ಮಾಯಕದ ಮಾಣಿ, ವರ್ಣ ಯಾವುದು ಕರ್ಣ ನಿನ್ನ? ಶಿವಪ್ರಸಾದ ಬಬ್ಬರ್ಯೆ, ತೆಡಿಲ ಕಿಡಿ, ತಿಗಲೆ ಮಂಜಣೆ, ತಂಕದ ಪೂಂಜೆ, ಅರುವದ ಬೂತಾಲೆ, ಅಬ್ಬ ಅಬ್ಬಕ್ಕನೆ, ಮಡ್ಡಿ ಕಳೆದ್ ಮಡಿ, ಅಮರ್ ಸಿರಿಕುಲು, ಒಂಜಿ ಸಿರಿ ರಡ್ಡ್ ಬೊಂಡ, ದರ್ಪು ದಂಟಿನ ಸಿರಿ, ಉಳ್ಳಾಯೆ ಮಲ್ಲಾಯೆ, ಶಿಲುಬೆ ಮತ್ತು ಗಲಭೆ, ಶಿವದೂತೆ ಗುಳಿಗೆ (ಸಂಭಾಷಣೆ), ಮಸ್ತ್ ಮಸ್ತ್ ಮೋಕೆ, ಮೆಗ್ದಿಗಾದ್, ಸತ್ಯ ತೆರಿಯೆ, ಪುರಲ್, ಒಂಜಿ ರಾತ್ರೆ ಒಂಜಿ ಪಗೆಲ್, ದಯೆ ಪಿದಡಿಯೆ ಹೀಗೆ ನೂರಾರು ಸಾಮಾಜಿಕ, ಐತಿಹಾಸಿಕ ಮತ್ತು ಪೌರಾಣಿಕ ನಾಟಕ, ಕಿರುನಾಟಕ, ಪ್ರಹಸನಗಳನ್ನು ಬರೆದು ನಿರ್ದೇಶನ.

ಪ್ರಾದೇಶಿಕ ವಾರ್ತೆಗಳು

ಎಂ.ಆರ್.ಜಿ. ಸಮೂಹದಿಂದ ಗೋವಾದಲ್ಲಿ ಗೋಲ್ಡ್ ಫಿಂಚ್, ಆತಿಥ್ಯ ಕ್ಷೇತ್ರಕ್ಕೆ ಮತ್ತೊಂದು ಮೈಲಿಗಲ್ಲು

ಮಂಗಳೂರು: ಭಾರತದ ಪ್ರವಾಸೋದ್ಯಮ ನಕ್ಷೆಯಲ್ಲಿ ವಿಶಿಷ್ಟs ಸ್ಥಾನ ಪಡೆದಿರುವ ಗೋವಾ, ತನ್ನ ಸೂರ್ಯಕಿರಣಗಳಿಂದ ಕಂಗೊಳಿಸುವ ಕಡಲತೀರಗಳು, ಸಮೃದ್ಧ ಸಾಂಸ್ಕೃತಿಕ ಪರಂಪರೆ, ಆಹ್ಲಾದಕರ ಹವಾಮಾನ ಹಾಗೂ ಅಪರೂಪದ ನೈಸರ್ಗಿಕ ಸೌಂದರ್ಯದಿಂದ ದೇಶ-ವಿದೇಶಗಳ ಪ್ರವಾಸಿಗರನ್ನು ನಿರಂತರವಾಗಿ ಆಕರ್ಷಿಸುತ್ತಿದೆ. ಗೋವಾದ ರಾಜಧಾನಿಯಾದ ಪಣಜಿಯ ಹೃದಯಭಾಗದಲ್ಲಿ ನೆಲೆಗೊಂಡಿರುವ ‘ಗೋಲ್ಡ್ ಫಿಂಚ್ ಪಣಜಿ ಗೋವಾ’ ಅತ್ಯಾಧುನಿಕ ಆತಿಥ್ಯ ಸೇವೆಗಳನ್ನು ಗೋವಾದ ವಿಶಿಷ್ಟ ಸೊಬಗಿನೊಂದಿಗೆ ಸಂಯೋಜಿಸಿ ಪ್ರವಾಸಿಗರಿಗೆ ಹೊಸ ಅನುಭವವನ್ನು ನೀಡುತ್ತಿದೆ. ಸುಂದರ ಮಂಡೋವಿ ನದಿಯ ನೋಟವನ್ನು ಹೊಂದಿರುವ ಈ ಹೋಟೆಲ್, ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿಯ ದೇಶಾದ್ಯಂತ ಬೆಳೆಯುತ್ತಿರುವ ಹೋಟೆಲ್ ಜಾಲಕ್ಕೆ ಹೊಸ ಸೇರ್ಪಡೆಯಾಗಿದೆ. ವ್ಯಾಪಾರ ಮತ್ತು ಪ್ರವಾಸ ಉದ್ದೇಶದ ಅತಿಥಿಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಹೋಟೆಲ್, ಆರಾಮ, ಅನುಕೂಲತೆ ಮತ್ತು ಆಧುನಿಕ ಸೊಬಗನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ.ಒಟ್ಟು 98 ಸುಸಜ್ಜಿತ ಕೊಠಡಿಗಳನ್ನು ಹೊಂದಿರುವ ಈ ಹೋಟೆಲ್‌ನಲ್ಲಿ ಏಳು ವಿಶಾಲ ಸೂಟ್‌ಗಳಿವೆ. ಆಧುನಿಕ ಸೌಲಭ್ಯಗಳು, ವಿಶಾಲ ಲಾಬಿ, ಹಸಿರು ಪರಿಸರ ಹಾಗೂ ಆಕರ್ಷಕ ಒಳಾಂಗಣ ವಿನ್ಯಾಸಗಳು ಗೋವಾದ ನಿರಾಳ ಮತ್ತು ಉತ್ಸಾಹಭರಿತ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತವೆ.ಹೋಟೆಲ್‌ನ ಪ್ರಮುಖ ಆಕರ್ಷಣೆಯಾದ ‘ಬಂಜಾರಾ’ ರೆಸ್ಟೋರೆಂಟ್ ದಿನಪೂರ್ತಿ ಆಹಾರ ಸೇವೆಯನ್ನು ಒದಗಿಸುತ್ತಿದ್ದು, ಅಂತರರಾಷ್ಟ್ರೀಯ ಖಾದ್ಯಗಳ ಜೊತೆಗೆ ಸ್ಥಳೀಯ ಸುವಾಸನೆಗಳನ್ನೊಳಗೊಂಡ ವೈವಿಧ್ಯಮಯ ಪಾಕಶೈಲಿಯನ್ನು ಅತಿಥಿಗಳಿಗೆ ಪರಿಚಯಿಸುತ್ತದೆ. ಗೋವಾದ ಶ್ರೀಮಂತ ಮತ್ತು ವೈವಿಧ್ಯಮಯ ಆಹಾರ ಸಂಸ್ಕೃತಿಯ ಸೊಗಡನ್ನು ಇಲ್ಲಿ ಸವಿಯಬಹುದು. ಈ ಕುರಿತು ಎಂ.ಆರ್.ಜಿ. ಸಮೂಹದ ಸ್ಥಾಪಕಾಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, “ದೀರ್ಘಕಾಲ ಸಮಾಜಕ್ಕೆ ಉಪಯುಕ್ತವಾಗುವ ಸಂಸ್ಥೆಗಳು ಮತ್ತು ಯೋಜನೆಗಳನ್ನು ನಿರ್ಮಿಸುವುದೇ ಎಂ.ಆರ್.ಜಿ. ಸಮೂಹದ ಆಶಯವಾಗಿದೆ. ಗೋಲ್ಡ್‌ಫಿಂಚ್ ಪಣಜಿ ಗೋವಾದ ಆರಂಭವು ಆತಿಥ್ಯ ಕ್ಷೇತ್ರದಲ್ಲಿ ನಮ್ಮ ಬೆಳವಣಿಗೆಯ ಪಯಣದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಮುಂದೆಯೂ ಸುಸ್ಥಿರ ಬೆಳವಣಿಗೆ, ಉತ್ತಮ ಸೇವೆ ಮತ್ತು ಅತಿಥಿಗಳಿಗೆ ಮರೆಯಲಾಗದ ಅನುಭವಗಳನ್ನು ನೀಡುವ ಮೂಲಕ ನಮ್ಮೊಂದಿಗೆ ಕೈಜೋಡಿಸಿರುವ ಎಲ್ಲರಿಗೂ ದೀರ್ಘಕಾಲಿಕ ಮೌಲ್ಯವನ್ನು ಸೃಷ್ಟಿಸುವ ಪ್ರಯತ್ನವನ್ನು ನಾವು ಮುಂದುವರಿಸುತ್ತೇವೆ,” ಎಂದು ಹೇಳಿದರು.ಎಂ.ಆರ್.ಜಿ. ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಗೌರವ್ ಶೆಟ್ಟಿ ಮಾತನಾಡಿ,“ಗೋಲ್ಡ್ ಫಿಂಚ್ ಪಣಜಿ ಗೋವಾದ ಆರಂಭವು ಎಂ.ಆರ್.ಜಿ. ಸಮೂಹದ ಆತಿಥ್ಯ ಕ್ಷೇತ್ರದ ಬೆಳವಣಿಗೆಯ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ಸಂಸ್ಕೃತಿ, ಮನರಂಜನೆ ಹಾಗೂ ನೈಸರ್ಗಿಕ ಸೌಂದರ್ಯದ ಅಪೂರ್ವ ಸಂಗಮವಾಗಿರುವ ಗೋವಾ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಈ ಕ್ರಿಯಾಶೀಲ ಮಾರುಕಟ್ಟೆಯಲ್ಲಿ ನಮ್ಮ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಪಣಜಿಯ ಹೃದಯಭಾಗಕ್ಕೆ ಗೋಲ್ಡ್ ಫಿಂಚ್ ಅನುಭವವನ್ನು ತರುವ ಅವಕಾಶ ದೊರೆತಿರುವುದು ಸಂತಸದ ಸಂಗತಿಯಾಗಿದೆ. ದೇಶದ ಪ್ರಮುಖ ಪ್ರವಾಸ ಮತ್ತು ವ್ಯಾಪಾರ ಕೇಂದ್ರಗಳಲ್ಲಿ ಅರ್ಥಪೂರ್ಣ ಆತಿಥ್ಯ ಅನುಭವಗಳನ್ನು ಸೃಷ್ಟಿಸುವ ನಮ್ಮ ನಿರಂತರ ಬದ್ಧತೆಯ ಪ್ರತಿಬಿಂಬವೇ ಈ ಹೊಸ ಹೋಟೆಲ್,” ಎಂದು ಹೇಳಿದರು.ಗೋಲ್ಡ್ ಫಿಂಚ್ ಪಣಜಿ ಗೋವಾದ ಆರಂಭವು ಭಾರತದ ಆತಿಥ್ಯ ಕ್ಷೇತ್ರದಲ್ಲಿ ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿಯ ಬೆಳೆಯುತ್ತಿರುವ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ವಿಶ್ವಮಟ್ಟದ ಆತಿಥ್ಯ ಮೂಲಸೌಕರ್ಯಗಳನ್ನು ನಿರ್ಮಿಸುವ ಎಂ.ಆರ್.ಜಿ. ಸಮೂಹದ ದೂರದೃಷ್ಟಿಗೆ ಸಾಕ್ಷಿಯಾಗಿದೆ. ವಿನೂತನ ವಿನ್ಯಾಸ, ಗುಣಮಟ್ಟದ ಸೇವೆ ಮತ್ತು ಸ್ಥಳೀಯ ಸಂಸ್ಕೃತಿಯ ನೈಜ ಅನುಭವಗಳ ಮೂಲಕ ಅತಿಥಿಗಳಿಗೆ ವಿಶಿಷ್ಟ ಅನುಭವವನ್ನು ನೀಡುವುದೇ ಸಂಸ್ಥೆಯ ಪ್ರಮುಖ ಗುರಿಯಾಗಿದೆ.ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿ ಕುರಿತು ಎಂ.ಆರ್.ಜಿ. ಸಮೂಹದ ಆತಿಥ್ಯ ವಿಭಾಗವಾದ ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿ, ಬೆಂಗಳೂರು, ಮಂಗಳೂರು, ಮುಂಬೈ ಹಾಗೂ ಇದೀಗ ಗೋವಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತನ್ನ ಹೋಟೆಲ್ ಜಾಲವನ್ನು ವಿಸ್ತರಿಸಿದೆ. ಅತ್ಯಾಧುನಿಕ ವಸತಿ ವ್ಯವಸ್ಥೆ, ವೈವಿಧ್ಯಮಯ ಆಹಾರ ಸೇವೆಗಳು ಹಾಗೂ ಆತ್ಮೀಯ ಸೇವೆಯ ಮೂಲಕ ಅತಿಥಿಗಳಿಗೆ ಉತ್ತಮ ಅನುಭವವನ್ನು ನೀಡುವಲ್ಲಿ ಈ ಬ್ರ್ಯಾಂಡ್ ಹೆಸರುವಾಸಿಯಾಗಿದೆ. ಗುಣಮಟ್ಟ, ನಿರಂತರತೆ ಹಾಗೂ ಅತಿಥಿಗಳ ತೃಪ್ತಿಗೆ ಆದ್ಯತೆ ನೀಡುವ ಮೂಲಕ ವ್ಯಾಪಾರ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತಿದೆ.ಎಂ.ಆರ್.ಜಿ. ಸಮೂಹ ಕುರಿತುಆತಿಥ್ಯ, ಆರೋಗ್ಯ, ಶಿಕ್ಷಣ, ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಜಿ. ಸಮೂಹವು ಗ್ರಾಹಕ ಕೇಂದ್ರಿತ ಸೇವೆಗಳು ಮತ್ತು ದೂರದೃಷ್ಟಿಯ ಹೂಡಿಕೆಗಳ ಮೂಲಕ ಮೌಲ್ಯ ಸೃಷ್ಟಿಸುತ್ತಿದೆ.ಸ್ವಾಮ್ಯ ಹಾಗೂ ನಿರ್ವಹಣೆಯಲ್ಲಿರುವ ಆತಿಥ್ಯ ಸಂಸ್ಥೆಗಳು

ಪ್ರಾದೇಶಿಕ ವಾರ್ತೆಗಳು

ಚಿಣ್ಣರ ಬಿಂಬ ಮುಂಬಯಿ: ಎಸ್.ಎಂ. ಶೆಟ್ಟಿ ಶಿಬಿರ ಉದ್ಘಾಟನೆ

ಚಿಣ್ಣರ ಬಿಂಬದ ಮಕ್ಕಳಲ್ಲಿ ಶಿಸ್ತು, ಶ್ರದ್ಧೆ, ಶ್ರಮ ಹಾಗೂ ದೇಶಭಕ್ತಿ ಕಾಣಬಹುದು – ನ್ಯಾಯವಾದಿ ಆರ್.ಜಿ. ಶೆಟ್ಟಿಮುಂಬಯಿ: ಚಿಣ್ಣರ ಬಿಂಬ ಸಂಸ್ಥೆ ಪ್ರಕಾಶ್ ಭಂಡಾರಿ ಮಾರ್ಗದರ್ಶನದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಸಾವಿರಾರು ಮಕ್ಕಳು ಶಿಕ್ಷಣ ಹಾಗೂ ಸಂಸ್ಕಾರಗಳನ್ನು ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಚಿಣ್ಣರ ಬಿಂಬದ ಮಕ್ಕಳಲ್ಲಿ ಶಿಸ್ತು, ಶ್ರದ್ಧೆ, ಶ್ರಮ ಮತ್ತು ದೇಶಭಕ್ತಿಯನ್ನು ಕಾಣಬಹುದು. ಸರಕಾರ ಮಾಡಬೇಕಾದ ಅನೇಕ ಕಾರ್ಯಗಳನ್ನು ಈ ಸಂಸ್ಥೆ ಸಮರ್ಥವಾಗಿ ನಿರ್ವಹಿಸುತ್ತಿದೆ. ಮಕ್ಕಳ ಭಜನೆ ಹಾಗೂ ಗಾಯನವನ್ನು ಆಲಿಸಿ ಅಪಾರ ಸಂತೋಷವಾಯಿತು. ನನ್ನ ಮಗಳು ಕೂಡ ಚಿಣ್ಣರ ಬಿಂಬದ ವಿದ್ಯಾರ್ಥಿನಿಯಾಗಿದ್ದಾಳೆ ಎನ್ನುವುದು ಹೆಮ್ಮೆಯ ವಿಷಯ ಎಂದು ಪೊವಾೈ ಕನ್ನಡ ಸೇವಾ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್. ಜಿ. ಶೆಟ್ಟಿ ನುಡಿದರು. ಅವರು ಜೂನ್ 14ರ ಆದಿತ್ಯವಾರ ಮಧ್ಯಾಹ್ನ ಎಸ್. ಎಂ. ಶೆಟ್ಟಿ ಶಾಲೆಯಲ್ಲಿ ನಡೆದ ಮುಂಬಯಿಯ ಮಕ್ಕಳ ಸಾಂಸ್ಕೃತಿಕ ಸಂಸ್ಥೆಯಾದ ಚಿಣ್ಣರ ಬಿಂಬದ 2026-27ನೇ ಸಾಲಿನ ಕನ್ನಡ ಹಾಗೂ ಭಜನಾ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು.ಸೆಂಟ್ರಲ್ ಕಮಿಟಿಯ ಸದಸ್ಯ ರಮೇಶ್ ಡಿ. ರೈ ಮಾತನಾಡಿ, ಚಿಣ್ಣರ ಬಿಂಬವು ಯಾವುದೇ ತಾರತಮ್ಯವಿಲ್ಲದೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಕಾರ್ಯನಿರ್ವಹಿಸುತ್ತಿರುವ ಆದರ್ಶ ಸಂಸ್ಥೆಯಾಗಿದೆ. ಪ್ರತಿಯೊಬ್ಬ ಪಾಲಕರೂ ಇತರರ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲಾ ಮಕ್ಕಳಿಗೂ ಭಾಗವಹಿಸುವ ಅವಕಾಶ ದೊರೆಯಬೇಕು. ಮುಂದಿನ ವರ್ಷ ನಡೆಯಲಿರುವ 25ನೇ ವರ್ಷದ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಯೋಜನೆ ರೂಪಿಸಲಾಗಿದ್ದು ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು. ಡಾ.ಪೂರ್ಣಿಮಾ ಎಸ್. ಶೆಟ್ಟಿ ಮಾತನಾಡಿ, ಚಿಣ್ಣರ ಬಿಂಬದ ಈ ಶಿಬಿರದಲ್ಲಿ ತುಂಬಾ ಜನ ಉತ್ತಮ ಕೆಲಸ ಮಾಡಿದ್ದಾರೆ. ಈಗ ಇರುವ ಪದಾಧಿಕಾರಿಗಳು, ಸದಸ್ಯರು, ಪಾಲಕರು ನಿರಂತರವಾಗಿ ಶಿಬಿರದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಮಕ್ಕಳನ್ನು ಈ ಶಿಬಿರಕ್ಕೆ ಅಥವಾ ಮುಂಬಯಿಯ ಇತರ ಚಿಣ್ಣರ ಬಿಂಬ ಶಿಬಿರಗಳಿಗೆ ಸೇರಿಸಲು ಪ್ರೋತ್ಸಾಹಿಸಬೇಕು. ಇಲ್ಲಿ ಜಾತಿ-ಮತ-ಬೇಧವಿಲ್ಲ. ಚಿಣ್ಣರ ಬಿಂಬವು ಒಬ್ಬ ವ್ಯಕ್ತಿಯ ಅಥವಾ ಒಂದು ಶಿಬಿರದ ಜವಾಬ್ದಾರಿಯಲ್ಲ. ಇದು ಕೂಡು ಕುಟುಂಬದ ವ್ಯವಸ್ಥೆಯಂತೆ ಎಲ್ಲರ ಸಹಕಾರದಿಂದ ಸಾಗುವ ಸಂಸ್ಥೆಯಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ ಎಂದು ನುಡಿದರು. ಈ ಸಂದರ್ಭದಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬೇಬಿ ಆರ್. ಪೂಜಾರಿ ಶಿಬಿರದ ಮುಖ್ಯಸ್ಥೆಯಾಗಿ ವಿದ್ಯಾ ಎಸ್. ಶೆಟ್ಟಿ ಸಾಂಸ್ಕøತಿಕ ಮುಖ್ಯಸ್ಥೆಯಾಗಿ ಅನಿತಾ ಎಸ್. ಶೆಟ್ಟಿ, ಕನ್ನಡ ಶಿಕ್ಷಕಿಯಾಗಿ ಹಾಗೂ ವಿಮಲಾ ಎಸ್. ದೇವಾಡಿಗ ಭಜನಾ ಶಿಕ್ಷಕಿಯಾಗಿ ಆಯ್ಕೆ ಮಾಡಲಾಯಿತು. ಜೊತೆಗೆ ಸಾಂಸ್ಕøತಿಕ ಸಮಿತಿಯನ್ನೂ ರಚಿಸಲಾಯಿತು.ಅತಿಥಿ ಆರ್. ಜಿ. ಶೆಟ್ಟಿಯವರಿಗೆ ಶಾಲು ಹಾಗೂ ಹೂ ಗುಚ್ಛ ನೀಡಿ ಗೌರವಿಸಲಾಯಿತು. ನಂತರ ಹಳೆಯ ಪದಾಧಿಕಾರಿಗಳಿಗೆ ಮತ್ತು ಹೊಸ ಪದಾಧಿಕಾರಿಗಳಿಗೆ ಹೂಗುಚ್ಛ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ಸೆಂಟ್ರಲ್ ಕಮಿಟಿಯ ಸದಸ್ಯ ರಮೇಶ್ ಡಿ. ರೈ, ಕನ್ನಡ ವಿಭಾಗದ ಸಂಯೋಜಕಿ ಡಾ. ಪೂರ್ಣಿಮಾ ಎಸ್.ಶೆಟ್ಟಿ, ಕನ್ನಡ ಶಿಕ್ಷಕಿ ಅನಿತಾ ಎಸ್.ಶೆಟ್ಟಿ, ಭಜನಾ ಶಿಕ್ಷಕಿ ವಿಮಲಾ ಎಸ್. ದೇವಾಡಿಗ ಹಾಗೂ ಕಮಿಟಿಯ ಸದಸ್ಯೆಯರಾದ ಆಶಾ ಎಸ್.ಶೆಟ್ಟಿ, ದೇವಿಕಾ ಪಿ. ಶೆಟ್ಟಿ ಮತ್ತು ವಲಯ ಮುಖ್ಯಸ್ಥೆ ಸುಜಾತ ಎಸ್. ಶೆಟ್ಟಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪಾಲಕರು ಸೇರಿ ‘ವಂದೇ ಮಾತರಂ’.. ಹಾಡಿದರು. ಅನಿತಾ ಎಸ್.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Scroll to Top