Author name: editor

ಪ್ರಾದೇಶಿಕ ವಾರ್ತೆಗಳು

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಮಾರ್ಚ್ 22,24, 26 ರಂದು ಆಗೇಲು ಸೇವೆ ಇರುವುದಿಲ್ಲ

ಬಂಟ್ವಾಳ: ಇದೇ ಬರುವ ದಿನಾಂಕ 22, 24, 26 ಮಾರ್ಚ್ 2024 ರಂದು ಸಜೀಪ ಮಾಗಣೆ “ಪಡ್ಡೆರಮಾಡ ಜಾತ್ರೆಯ” ಪ್ರಯುಕ್ತ ಪಣೋಲಿ ಬೈಲ್ ಕಲ್ಲುರ್ಟಿ ಕ್ಷೇತ್ರದಲ್ಲಿ “ಆಗೇಲು ಸೇವೆ” ಇರುವುದಿಲ್ಲವೆಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಕ್ರೈಂ

ಉಡುಪಿ ಜಿಲ್ಲಾ ಸರ್ಜನ್ ರವರ ಬದಲಾವಣೆ: ಸರಕಾರದ ಅನುಮಾನಾಸ್ಪದ ಕ್ರಮವನ್ನು ಪ್ರಶ್ನಿಸಿ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಉಡುಪಿ: ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯದ ಕಾಂಗ್ರೆಸ್ ಸರಕಾರ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ರವರನ್ನು ಬದಲಾವಣೆ ಮಾಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆಂದು ಪತ್ರಕರ್ತ, ಸಾಮಾಜಿಕ ಕಾರ್ಯಕರ್ತರಾಗಿರುವ ಶ್ರೀರಾಮ ದಿವಾಣ ಉಡುಪಿಯವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.ಚುನಾವಣೆ ಘೋಷಣೆಯಾಗುವ ಕೆಲವೇ ಕೆಲವು ದಿನ ಮೊದಲು ರಾಜ್ಯ ಸರಕಾರ ಮಾಡಿರುವ ಈ ಬದಲಾವಣೆ ಸೂಕ್ತವಾದುದಲ್ಲ. ರಾಜ್ಯ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಈ ಬದಲಾವಣೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಶ್ರೀರಾಮ ದಿವಾಣರು ದೂರಿನಲ್ಲಿ ಒತ್ತಾಯಿಸಿದ್ದಾರೆ.ನಿನ್ನೆ ಮೊನ್ನೆಯವರೆಗೂ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಸರ್ಜನ್ ಆಗಿದ್ದವರು ಡಾ. ವೀಣಾ ಕುಮಾರಿ. ಇವರು ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದವರು. ಜನಪರ ಕಾಳಜಿಯ ಜನಸೇವಕರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಯಾವುದೇ ರೀತಿಯ ಭ್ರಷ್ಟಾಚಾರಕ್ಕೂ ಅವಕಾಶ ನೀಡದೆ ಕರ್ತವ್ಯ ಪಾಲಿಸುತ್ತಿದ್ದ ಡಾ. ವೀಣಾ ಕುಮಾರಿ ಅವರನ್ನು ಬದಲಾಯಿಸಿರುವ ಸರಕಾರದ ಕ್ರಮ ಅಸ್ವೀಕಾರಾರ್ಹ ಮತ್ತು ಶಂಕಾಸ್ಪದ ನಿರ್ಧಾರವಾಗಿದೆಂದು ದಿವಾಣ ಅವರು ದೂರಿದ್ದಾರೆ.ಸೇವಾ ಹಿರಿತನದಲ್ಲೂ ಡಾ. ವೀಣಾಕುಮಾರಿ ಸೀನಿಯರ್ ಆಗಿದ್ದು, ಇದೀಗ ನಿಯುಕ್ತಿಗೊಂಡ ಡಾ. ಅಶೋಕ್ ಜೂನಿಯರ್ ಆಗಿದ್ದಾರೆ. ಎಂಡಿ ಆಗಿರುವ ಡಾ. ವೀಣಾ ಪರಿಶಿಷ್ಟ ಜಾತಿಯವರಾಗಿದ್ದು, ಇವರ ಬದಲಾವಣೆ ಮಹಿಳೆಯರಿಗೆ ಮತ್ತು ದಲಿತ ಸಮುದಾಯಕ್ಕೆ ಕಾಂಗ್ರೆಸ್ ಸರಕಾರ ಮಾಡಿದ ಅನ್ಯಾಯವಾಗಿದೆಂದು ದಿವಾಣ ಅವರು ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.ಡಾ. ಅಶೋಕ್ ವಿರುದ್ಧ ಹಲವು ದೂರುಗಳಿವೆ. ಸಿಬ್ಬಂದಿಗಳಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಅಮಾನತುಗೊಂಡವರೂ ಆಗಿದ್ದಾರೆ. ಪ್ರಕರಣಗಳ ತನಿಖೆ ಮುಕ್ತಾಯಗೊಳ್ಳುವ ಮೊದಲೇ ಜಿಲ್ಲಾ ಸರ್ಜನ್ ಆಗಿ ನಿಯುಕ್ತಿ ಮಾಡಿರುವುದು ಸರಿಯಾದ ಕ್ರಮವಲ್ಲ. ಮೂರು ತಿಂಗಳ ಹಿಂದೆಯಷ್ಟೇ ಹೆಬ್ರಿಗೆ ವರ್ಗಾವಣೆಯಾಗಿದ್ದ ಡಾ. ಅಶೋಕ್ ರನ್ನು ಇದೀಗ ಇಷ್ಟು ಅವಸರವಾಗಿ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಆಗಿ ನಿಯುಕ್ತಿಗೊಳಿದ್ದು ಖಂಡನೀಯವಾಗಿದೆಂದು ದಿವಾಣ ಅವರು ದೂರಿನಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.ಚುನಾಣಾ ಆಯೋಗ ಈ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸುವ ಮೂಲಕ ರಾಜ್ಯ ಸರಕಾರ ಮಾಡಿದ ನೇಮಕವನ್ನು ಹಿಂತೆಗೆದುಕೊಂಡು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಮಾಡಬೇಕಾಗಿದೆ ಎಂಬುದು ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಮುಂದೆ ತನ್ನ ಒತ್ತಾಯವಾಗಿದೆಂದು ದಿವಾಣ ಅವರು ದೂರಿನಲ್ಲಿ ಹೇಳಿದ್ದಾರೆ.

ಕರ್ನಾಟಕ ವಾರ್ತೆಗಳು

ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರ ನೇಮಕ

ಕರ್ನಾಟಕ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ತಾರನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಉಮ್ಮರ್ ಯು.ಎಚ್.,ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಜೋಂಕಿ ಸ್ಟಾಸ್ಟ್ಯಾನ್ಲಿ ಅಲ್ವಾರಿಸ್, ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿ ಮಂಡೆಕೋಲಿನ ಸದಾನಂದ ಮಾವಜಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಜಾನಪದ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ ನೇಮಕಗೊಂಡಿದ್ದಾರೆ.

ಹೊರ ರಾಜ್ಯ ವಾರ್ತೆಗಳು

ಡಾ. ಸುಧಾಕರ ಶೆಟ್ಟಿ ಮಾಲಕತ್ವದ ಪುಣೆಯ ಬೇಬಿ ಫ್ರೆಂಡ್ ಕ್ಲಿನಿಕ್‌ಗೆ ಇದೀಗ ಯಶಸ್ವಿ 3೦ ವರ್ಷ ತುಂಬಿದೆ.

ಪುಣೆ: ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಮಾಲಕತ್ವದ ಪುಣೆಯ ಪ್ರತಿಷ್ಠಿತ ಬೇಬಿ ಫ್ರೆಂಡ್ ಕ್ಲಿನಿಕ್ ಮಾರ್ಚ್ 4 ರಂದು ಯಶಸ್ವಿ ಮೂರು ದಶಕಗಳನ್ನು ಪೂರೈಸಿದ ಹಿರಿಮೆ, ಮಹತ್ಸಾಧನೆಗೆ ಪಾತ್ರವಾಗಿದೆ. ಇದಕ್ಕೆ ಕಾರಣ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಮೂಲದ ಪ್ರತಿಷ್ಠಿತ ಬಂಟ ಮನೆತನದ ಹಿನ್ನಲೆ ಹೊಂದಿರುವ ಪುಣೆಯ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿಯವರ ಕಠಿಣ ಪರಿಶ್ರಮ, ವೃತ್ತಿ ಬದುಕಿನಲ್ಲಿ ಅವರು ತೋರಿದ ಏಕಾಗ್ರತೆ, ತಲ್ಲೀನತೆ, ಜನಪ್ರಿಯತೆ, ಜನಮನ್ನಣೆ ಕಾರಣವಾಗಿದೆ. ಕಳೆದ 36 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಮಕ್ಕಳ ತಜ್ಞರಾಗಿ ಪುಣೆಯಲ್ಲಿ ತನ್ನ ಪರಿಣತ ವೈದ್ಯಕೀಯ ಸಮಾಜಸೇವೆ ಮೂಲಕ ವಿಶೇಷ ಛಾಪು ಮೂಡಿಸಿರುವ ಡಾ. ಸುಧಾಕರ ಶೆಟ್ಟಿಯವರು ಮಾರ್ಚ್ 4, 1994 ರಂದು ಪುಣೆಯಲ್ಲಿ ಬೇಬಿ ಫ್ರೆಂಡ್ ಕ್ಲಿನಿಕ್ ಎಂಬ ಸುಸಜ್ಜಿತವಾದ ಮಕ್ಕಳ ಕ್ಲಿನಿಕ್ ಆರಂಭಿಸಿ ಅದರಲ್ಲಿ ಯಶಸ್ಸು ಸಾಧಿಸಿ ಇದೀಗ 3೦ ವರ್ಷಗಳನ್ನು ಪೂರೈಸಿದೆಂಬುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಇದರ ಜೊತೆ, ಪುಣೆಯ ಪೊಲೀಸ್ ಹಾಸ್ಪಿಟಲ್, ಸ್ಟೇಟ್ ರಿಸರ್ವ್ ಪೊಲೀಸ್ ಪೋರ್ಸ್ ಹಾಸ್ಪಿಟಲ್, ರೆಡ್‌ಕ್ರಾಸ್ ಸೊಸೈಟಿ ಮತ್ತು ಭಾರತೀಯ ವಿದ್ಯಾಪೀಠ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಅವರು ಮಕ್ಕಳ ಆರೈಕೆ ಮತ್ತು ಕೋವಿಡ್ ಪಿಡುಗು ಸಂದರ್ಭದಲ್ಲಿ 15೦೦ಕ್ಕೂ ಹೆಚ್ಚು ಕನ್ನಡಿಗರಿಗೆ ತನ್ನ ವೈದ್ಯಕೀಯ ತಂಡದ ಮೂಲಕ ಅತ್ಯುತ್ತಮ ಚಿಕಿತ್ಸೆ ನೀಡುವುದರೊಂದಿಗೆ ಇಡೀ ರಾಷ್ಟ್ರದ ಗಮನ ಸೆಳೆದಿದ್ದಾರೆ. ಬೇಬಿ ಫ್ರೆಂಡ್ ಕ್ಲಿನಿಕ್ ಆರಂಭವಾದಂದಿನಿಂದ ಮಕ್ಕಳಿಗಾಗಿ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಾ ಬಂದಿರುವ ಅವರು ಮೂಡಬಿದ್ರೆಯಲ್ಲಿ ಕಳೆದ ವರ್ಷದಿಂದ ಮೊಬೈಲ್ ಪಿಡಿಯಾಟ್ರಿಕ್ ಕ್ಲಿನಿಕ್ ಆರಂಭಿಸಿದ್ದಾರೆ.ಡಾ. ಸುಧಾಕರ ಶೆಟ್ಟಿ ಮತ್ತು ಮತ್ತವರ ಪುಣೆಯ ವೈದ್ಯಕೀಯ ತಂಡಕ್ಕೆ ಸತತ 3 ಬಾರಿ ಕೇಂದ್ರ ಸರಕಾರದ ಕಂಟೋನ್ಮೆಂಟ್ ಬೋರ್ಡ್ ನಿಂದ ಶ್ರೇಷ್ಠತೆಯ ಪ್ರಮಾಣ ಪತ್ರ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸಿ, ಚಾರ್ ಸಹಿ ಬಜಾದೆ ಅವಾರ್ಡ್ ದೊರಕಿರುತ್ತದೆ.

ರಾಜಕೀಯ ವಾರ್ತೆಗಳು

ಯಡಿಯೂರಪ್ಪ ಬಿಜೆಪಿ ಪಕ್ಷದ ಕುತ್ತಿಗೆ ಹಿಸುಕುತ್ತಿದ್ದಾರೆಂದ ಕೆ.ಎಸ್. ಈಶ್ವರಪ್ಪ.ತಂದೆ-ಮಗನ ರಾಜಕೀಯದ ವಿರುದ್ಧ ದಂಗೆ ಎದ್ದು ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

ಶಿವಮೊಗ್ಗ: ಯಡಿಯೂರಪ್ಪನವರು ಬಿಜೆಪಿ ಪಕ್ಷದ ಕುತ್ತಿಗೆ ಹಿಸುಕುವ ಕೆಲಸ ಮಾಡುತ್ತಿದ್ದಾರೆ. ಪಕ್ಷದ ನಿಷ್ಠಾವಂತ ಕಾರ‍್ಯಕರ್ತರಿಗೆ,ಪಕ್ಷಕ್ಕಾಗಿ ದುಡಿದವರಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.ಇವರದ್ದೇನಿದ್ದರೂ, ತಂದೆ-ಮಗನ ರಾಜಕೀಯ. ತಾನು ಅರ್ಹನಾಗಿದ್ದರೂ, ಹಿಂದುಳಿದ ವರ್ಗಕ್ಕೆ ಸೇರಿದ್ದರೂ, ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದರೂ ತನಗೆ ರಾಜ್ಯಾಧ್ಯಕ್ಷ ಸ್ಥಾನಮಾನ ನೀಡಲಿಲ್ಲ ಯಾಕೆ?ಎಲ್ಲವನ್ನು ಲಿಂಗಾಯಿತರಿಗೆ ಕೊಡಬೇಕೆನ್ನುವ ಇವರು ಹಿರಿಯ ಲಿಂಗಾಯಿತ ನಾಯಕರಾದ ಬಸವ ಗೌಡ ಯತ್ನಾಳ್ ಪಾಟೀಲ್ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಬಹುದಿತ್ತಲ್ಲ? ಬದಲಾಗಿ ತನ್ನ ಮಗನಿಗೇಕೆ ನೀಡಿದರು ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.ಒಕ್ಕಲಿಗರ ನಾಯಕ ಸಿ.ಟಿ. ರವಿಯವರನ್ನು ರಾಜ್ಯಾಧ್ಯಕ್ಷ ಮಾಡಲಿಲ್ಲ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸೀಟು ಕೂಡಾ ಕೊಡಲಿಲ್ಲ.ಕೊಡುಗು-ಮೈಸೂರಿನಲ್ಲಿ ಪ್ರತಾಪ ಸಿಂಹ, ದಕ್ಷಿಣ ಕನ್ನಡದಲ್ಲಿ ನಳಿನ್‌ಕುಮಾರ್ ಕಟಿಲ್, ಬೆಂಗಳೂರು ಉತ್ತರದಲ್ಲಿ ಡಿ.ವಿ. ಸದಾನಂದ ಗೌಡರಿಗೆ ಎಂಪಿ ಟಿಕೇಟ್ ನೀಡದೆ ಸೇಡು ತೀರಿಸಿಕೊಂಡರು.ಹೆಚ್ಚೇಕೆ? ಹಾವೇರಿಯಲ್ಲಿ ತನ್ನ ಮಗ ಕಾಂತೇಶ್‌ಗೆ ಟಿಕೇಟ್ ನೀಡಲಿಲ್ಲ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬ ಮಾತ್ರ ಇರಬೇಕು. ಉಳಿದವರೆಲ್ಲ ನಗಣ್ಯ ಎಂದು ಈಶ್ವರಪ್ಪ ಕಿಡಿ ಕಾರಿದ್ದಾರೆ.ಇದನ್ನೆಲ್ಲ ಪ್ರತಿಭಟಿಸಿ ನಾನು ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಇದು ಕೇಂದ್ರದ ನಾಯಕರಿಗೆ ಗೊತ್ತಾಗಬೇಕು. ಇಡೀ ರಾಜ್ಯದ ಜನ ನನ್ನನ್ನು ಬೆಂಬಲಿಸಿದ್ದಾರೆ.ಮೋದಿ ನನ್ನ ದೇವರು. ನಾನು ಗೆದ್ದು ಎಂಪಿಯಾಗಿ ಮೋದಿಯನ್ನು ಭೇಟಿಯಾಗುತ್ತೇನೆ. ಯಡಿಯೂರಪ್ಪನವರು ಬಿಜೆಪಿ ಪಕ್ಷವನ್ನು ತನ್ನ ಸ್ವಂತದ ಆಸ್ತಿ ಎಂದು ಭಾವಿಸಿದ್ದಾರೆ. ಅದು ಅವರ ಸ್ವಾರ್ಥ ಎಂದು ಈಶ್ವರಪ್ಪ ರೇಗಿದ್ದಾರೆ.ಶಿವಮೊಗ್ಗಕ್ಕೆ ಮೋದಿ ಬರಲಿರುವ ಹಿನ್ನಲೆಯಲ್ಲಿ ಈಶ್ವರಪ್ಪವರ ಬಂಡಾಯವನ್ನು ಶಮನಗೊಳಿಸಲು ರಾಜ್ಯ ಬಿಜೆಪಿ ನಾಯಕರಾದ ಆರ್. ಅಶೋಕ್ ಸೇರಿದಂತೆ ನಾಯಕರನೇಕರು ಅವರ ನಿವಾಸಕ್ಕೆ ತೆರಳಿ ಮನವೊಲಿಸಿದರು. ಫಲಪ್ರದವಾಗಲಿಲ್ಲ.ಕೇವಲ ತನಗೆ ಬೇಕಾದವರಿಗೆ ಎಂಪಿ ಟಿಕೇಟ್ ಕೊಟ್ಟು ತನಗಾದವರಿಗೆ ಕೊಕ್ ಕೊಟ್ಟ ಯಡಿಯೂರಪ್ಪನವರ ಧೋರಣೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈಶ್ವರಪ್ಪ ದಂಗೆ ಎದ್ದಿರುವುದು ಇದನ್ನು ಇನ್ನಷ್ಟು ರೋಚಕ ಹಂತಕ್ಕೆ ತಲುಪುವಂತೆ ಮಾಡಿದೆ.

ಪ್ರಾದೇಶಿಕ ವಾರ್ತೆಗಳು

ಯುವ ಸಮಾಜ ಸೇವಕ ಸೂರಜ್ ಸಾಗರ್ ಕುಂಪಲ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಆಯ್ಕೆ

ಮಂಗಳೂರು: ಯುವ ಸಮಾಜ ಸೇವಕ, ಉತ್ಸಾಹಿ ತರುಣ ಸೂರಜ್ ಸಾಗರ್ ಕುಂಪಲ ಅವರು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಸೂರಜ್ ಸಾಗರ್ ಕುಂಪಲ ಅವರ ಸಮಾಜ ಸೇವೆಯನ್ನು ಪರಿಗಣಿಸಿ ರಲ್ಲಿ 2020 ರಲ್ಲಿ Mp mla’s ನ್ಯೂಸ್ ಸೌಹಾರ್ದ ಸಂಗಮವು ಮಂಗಳೂರು ಪುರಭವನದಲ್ಲಿ ನಡೆದಾಗ ಸೌಹಾರ್ದ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮಂಗಳೂರು ಕೆನರಾ ಕಾಲೇಜಿನಲ್ಲಿ ಬಿ.ಎ. ಪದವೀಧರ ಶಿಕ್ಷಣ ಪಡೆದಿರುವ ಸೂರಜ್ ಸಾಗರ್ ಕುಂಪಲ ಅವರು ಬಾಲ್ಯದಿಂದಲೇ ಸಮಾಜ ಸೇವೆಯತ್ತ ಒಲವು ಹರಿಸಿದವರು. ಆಸರೆ ಬಳಗ ಕುಂಪಲ ಎಂಬ ಸಮಾಜಮುಖಿ ಯುವಕ ಸಂಘಟನೆಯ ಸಂಸ್ಥಾಪಕರಾಗಿ ಅವರು 3೦ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆ ರಿಪೇರಿ, ಆರೋಗ್ಯ, ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ಬಡ ಬಾಲಕಿಯೊಬ್ಬಳಿಗೆ ಅನಾರೋಗ್ಯ ಕಾಣಿಸಿಕೊಂಡು, ಆಕೆಯ ಚಿಕಿತ್ಸೆಗೆ 8 ಲಕ್ಷ ರೂಪಾಯಿ ಬೇಕೆಂದಾಗ ದಾನಿಗಳಿಂದ ಹಣ ಸಂಗ್ರಹಿಸಿ ಆಕೆಯ ಚಿಕಿತ್ಸೆಗೆ ಸಕಾಲಿಕ ನೆರವು ಒದಗಿಸಿ ಮಾನವೀಯತೆ ಮೆರೆದಿದ್ದರು.ಜಿ.ಪಂ.ನ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿಕಲಚೇತನರು ಮತ್ತು ಹಿರಿಯ ನಾಗರಿಕರ ವಿಭಾಗದಲ್ಲಿ ಸಮನ್ವಯ ಅಧಿಕಾರಿಯಾಗಿ ಗುತ್ತಿಗೆಯಧಾರದಲ್ಲಿ ಹಲವು ವರ್ಷಗಳ ಕಾಲ ಕಾರ‍್ಯ ನಿರ್ವಹಿಸಿದ್ದ ಅವರು ಆ ಸಂದರ್ಭ ಅನೇಕ ಮಂದಿ ವಿಕಲಚೇತನರಿಗೆ ಉಚಿತ ಗಾಲಿ ಕುರ್ಚಿಯನ್ನು ತನ್ನ ಸ್ವಂತ ಖರ್ಚಿನಲ್ಲಿ ನೀಡಿ ಸಹಾಯ ಒದಗಿಸಿದ್ದರು. ವಯೋವೃದ್ಧರಿಗಾಗಿ ಸೂರಜ್ ಸಾಗರ್ ನೇತೃತ್ವದಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ವಾತ್ಸಲ್ಯ ಛಾಯಾ ಟ್ರಸ್ಟ್ ವೃದ್ದಾಶ್ರಮವನ್ನು ಅತೀ ಶೀಘ್ರದಲ್ಲಿಯೇ ಆರಂಭಿಸಲಿದ್ದಾರೆ ಅವರು ವಿಸ್ತಾರ ಸಮಾಜ ಸೇವೆಗಾಗಿ ರಾಜಕೀಯ ಪಕ್ಷ ಸೇರುವ ನಿರ್ಧಾರ ಮಾಡಿ ಬಿಜೆಪಿ ಪಕ್ಷ ಸೇರಿ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಸಕ್ರಿಯರಾಗಿದ್ದಾರೆ. ಸೂರಜ್ ಸಾಗರ್ ಅವರ ರಾಜಕೀಯ ಭವಿಷ್ಯವು ಉಜ್ವಲವಾಗಿ ಪ್ರಜ್ವಲಿಸಲಿ ಎಂದು Mpmla:s ನ್ಯೂಸ್ ಶುಭ ಹಾರೈಸುತ್ತದೆ.

ಹೊರ ರಾಜ್ಯ ವಾರ್ತೆಗಳು

ಕ್ಯಾಪ್ಟನ್ ಬೃಜೇಶ್ ಚೌಟರಿಂದ ಮುಂಬೈಯ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಭೇಟಿ

ಮುಂಬೈ : ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಅವರು ನಿನ್ನೆ ಮುಂಬೈಯ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಪ್ರಾದೇಶಿಕ ವಾರ್ತೆಗಳು

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ(ಬೂಡಾ) ಅಧ್ಯಕ್ಷರಾಗಿ ಬೇಬಿ ಕುಂದರ್

ಬಂಟ್ವಾಳ: ಬಂಟ್ವಾಳ  ನಗರ ಯೋಜನಾ ಪ್ರಾಧಿಕಾರ(ಬೂಡಾ) ನೂತನ ಅಧ್ಯಕ್ಷರಾಗಿ ಬೇಬಿಕುಂದರ್‌ ಹಾಗೂ ಮೂವರು ಸದಸ್ಯರು ಶನಿವಾರ ಬಿ.ಸಿ.ರೋಡಿನಲ್ಲಿರುವ ಯೋಜನಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರುಮಾಜಿ ಸಚಿವ ಬಿ.ರಮಾನಾಥ ರೈ ಅವರು ನೂತನ ಅಧ್ಯಕ್ಷರ ಕೊಠಡಿಯನ್ನು ಉದ್ಘಾಟಿಸಿ ನೂತನ ಅಧ್ಯಕ್ಷ ಹಾಗೂ ಸದಸ್ಯರಿಗೆ ಶುಭಹಾರೈಸಿ ನಗರದ ಅಭಿವೃದ್ದಿಗೆ ಯೋಜನಾ ಪ್ರಾಧಿಕಾರ ಮಹತ್ವದ್ದಾಗಿದೆ ಎಂದರು.ಅಧಿಕಾರ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಬೇಬಿಕುಂದರ್ ಬಂಟ್ವಾಳ ನಗರದ ಅಭಿವೃದ್ದಿಗೆ ಪೂರಕವಾಗಿ ಯೋಜನೆ ರೂಪಿಸಲಾಗುವುದು,ಕಚೇರಿಗಾಗಮಿಸುವ ಜನಸಾಮಾನ್ಯರಿಗೆ ಅತ್ಯಂತ ಸರಳವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು. ನೂತನ ಸದಸ್ಯರಾದ ಮನೋಹರ ಕುಲಾಲ್ ನೇರಂಬೋಳ್, ಹರೀಶ್ ಅಜ್ಜಿಬೆಟ್ಟು ಹಾಗೂ‌ ಅಬ್ದುಲ್ ರಜಾಕ್ ಗೂಡಿನಬಳಿ, ಕಾರ್ಯದರ್ಶಿ ಅಭಿಲಾಷ್ ,ಭಾರತಿ ಬಿ.ಕುಂದರ್ ಹಾಜರಿದ್ದರು. ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಡಿ, ಬೂಡಾ ಮಾಜಿ ಅಧ್ಯಕ್ಷರಾದ ಪಿಯೂಸ್ ಎಲ್ ರೋಡ್ರಿಗಸ್,ಸದಾಶಿವ ಬಂಗೇರ, ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ಪದ್ಮಶೇಖರ ಜೈನ್, ಸಿಂಡಿಕೇಟ್ ಸದಸ್ಯ ಸುರೇಶ್ ಕುಲಾಲ್, ಪುರಸಭಾ ಸದಸ್ಯರಾದ ಜನಾರ್ದನ ಚಂಡ್ತಿಮಾರ್, ಲೋಲಾಕ್ಷ ಶೆಟ್ಟಿ,ಜೆಸಿಂತಾ ಡಿಸೋಜ,ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ,ಪಕ್ಷದ ಪ್ರಮುಖರಾದ ಅಶ್ವನಿಕುಮಾರ್ ರೈ,ಪದ್ಮನಾಭ ರೈ, ವೆಂಕಪ್ಪ ಪೂಜಾರಿ ಬಂಟ್ವಾಳ,ಸುದೀಪ್ ಕುಮಾರ್ ರೈ,ಸಂಜೀವ ಪೂಜಾರಿ ಬೊಳ್ಳಾಯಿ,ಮಲ್ಲಿಕಾ ಶೆಟ್ಟಿ,ಸುರೇಶ್ ಜೋರ,ಸುಧಾಕರ ಶೆಣೈ ಖಂಡಿಗ,ಶೈಲಜಾ ರಾಜೇಶ್,ಸುಭಾಶ್ಚಂದ್ರ ಶೆಟ್ಟಿ,ನಾರಾಯಣ ನಾಯ್ಕ್ ಮೊದಲಾದವರಿದ್ದರು.

ರಾಜಕೀಯ ವಾರ್ತೆಗಳು

ಕ್ಯಾಪ್ಟನ್ ಬೃಜೇಶ್ ಚೌಟ ಅವರು ಮೂರು ಲಕ್ಷಕ್ಕೂ ಅಧಿಕ ಅಂತರದ ಮತಗಳಿಂದ ಜಯಗಳಿಸಲಿದ್ದಾರೆ: ನಳಿನ್ ಕುಮಾರ್ ಕಟೀಲ್

ಮಂಗಳೂರು : ಮಂಗಳೂರಿನ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡುತ್ತಾ ಬಿಜೆಪಿ ಸಂಘಟನೆ ಹೇಳಿದಾಗ ಚುನಾವಣೆಯಲ್ಲಿ ನಿಂತುಕೊಂಡೆ .ಮೂರು ಅವಧಿ ಯಶಸ್ವಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.‌ ಇದೀಗ ಸಂಘಟನೆ ಯಾವುದೇ ಕೆಲಸ ಮಾಡು ಅಂತ ಹೇಳಿದರೆ ಅಷ್ಟೇ ಸಂತೋಷದಿಂದ ಸ್ವೀಕರಿಸುತ್ತೇನೆ. ಈಗ ಸೈನಿಕರಾಗಿ ಸೇವೆ ಸಲ್ಲಿಸಿದ್ದ ಕ್ಯಾಪ್ಟನ್ ಬೃಜೇಶ್ ಚೌಟ ಅವರು ಓರ್ವ ಸಮರ್ಥ ಅಭ್ಯರ್ಥಿ ಆಗಿದ್ದಾರೆ. ಇವರು ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸುವುದು ಶತಃಸಿದ್ದ. ನಾವೆಲ್ಲರೂ ಟೀಂ ವರ್ಕ್ ಮಾಡುವ ಮುಖೇನ ಅದನ್ನು ಸಾಧಿಸಬೇಕು. ಜಿಲ್ಲೆಯಲ್ಲಿದ್ದ ಎಲ್ಲಾ ರೀತಿಯ ಗೊಂದಲಗಳು ಅಂತ್ಯಗೊಂಡು ಪ್ರಫುಲ್ಲವಾದ ಬಿಜೆಪಿ ಪರವಾದ ವಾತಾವರಣ ನಿರ್ಮಾಣಗೊಂಡಿದೆ. ಇದೀಗ ನಮ್ಮ ಕೆಲಸ ಚುನಾವಣೆಯನ್ನು ಗೆಲ್ಲುವುದಷ್ಟೇ ಅಲ್ಲಾ, ಗೆಲುವಿನ ಅಂತರ ಹಿಂದಿನ ಎಲ್ಲಾ ರೆಕಾರ್ಡ್ ಅನ್ನು ಬ್ರೇಕ್ ಮಾಡುವಂತೆ ಆಗಬೇಕು ಎಂದು ಹೇಳಿದರು.ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಕುಂಪಲ ಅವರು ಮಾತನಾಡುತ್ತಾ ಇಲ್ಲಿಯವರೆಗೆ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆದಿರುತ್ತದೆ. ಜವಾಬ್ದಾರಿ ತೆಗೆದುಕೊಂಡಿರುವ ಎಲ್ಲಾ ಕಾರ್ಯಕರ್ತರು ಮುಖಂಡರು ಬಹಳ ಉತ್ಸಾಹದಿಂದ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಸಂತಸ ತಂದಿದೆ. ಬೃಜೇಶ್ ಚೌಟ ಅವರ ಪ್ರವಾಸದ ಸಂದರ್ಭದಲ್ಲಿ ಮತದಾರರ ಹಾಗೂ ಸಾರ್ವಜನಿಕರ ಅಭೂತಪೂರ್ವ ಸ್ಪಂದನೆ ದೊರೆತಿರುವುದು ಹರ್ಷ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದೆ ಈ ಚುನಾವಣಾ ಕಾರ್ಯವನ್ನು ಮುಂದಿನ ಹಂತಕ್ಕೆ ಪರಿಣಾಮಕಾರಿಯಾಗಿ ಬೂತ್ ಮಟ್ಟದವರೆಗೆ ತೆಗೆದುಕೊಂಡು ಹೋಗುವ ಬಗ್ಗೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ವಿವರವಾಗಿ ಚರ್ಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.ಈ ಸಭೆಯಲ್ಲಿ ನಿತಿನ್ ಕುಮಾರ್, ಗೋಪಾಲಕೃಷ್ಣ ಹೇರಳೆ, ಪ್ರಸಾದ್ ಕುಮಾರ್, ಶಾಸಕರಾದ ಡಿ. ವೇದವ್ಯಾಸ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮಂತ್ರಿ ನಾಗರಾಜ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹಾಗೂ ಪದಾಧಿಕಾರಿಗಳು ಮುಖಂಡರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು ಹಾಗೂ ಯತೀಶ್ ಆರ್ವಾರ್ ಧನ್ಯವಾದ ಸಮರ್ಪಿಸಿದರು.

ರಾಜಕೀಯ ವಾರ್ತೆಗಳು

ಎಲ್ಲರಂಥಲ್ಲ ನಮ್ಮ ನಳಿನಣ್ಣ

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್. ಮಂಗಳೂರು: ಮೂರು ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಎಂಪಿಯಾಗಿ ಒಂದು ಲಕ್ಷ ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತದ ಅನುದಾನವನ್ನು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ತಂದು ಕೊಟ್ಟ ನಳಿನ್‌ಕುಮಾರ್ ಕಟೀಲು ಅವರನ್ನು ಎಲ್ಲರೂ ಆತ್ಮೀಯತೆಯಿಂದ ಕರೆಯುವುದು ನಳಿನಣ್ಣರೆಂದೇ.ದಣಿವರಿಯದ ನಾಯಕ, ನಿಷ್ಕಳಂಕ, ಹಗರಣ ರಹಿತ ಭ್ರಷ್ಟಾಚಾರ ವಿರೋಧಿ, ಹಿಂದೂತ್ವದ ಜೊತೆಗೆ ಸೌಹಾರ್ದತೆಗೆ ಒತ್ತು ಕೊಟ್ಟ ನಳಿನಣ್ಣ ತನ್ನ ಬಳಿಗೆ ಸಹಾಯ ಕೇಳಿ ಬಂದ ಜನರಿಗೆ ಬರಿಗೈಲಿಯಲ್ಲಿ ವಾಪಾಸ್ಸು ಕಳುಹಿಸಿದವರಲ್ಲ.ನುಡಿದಂತೆ ನಡೆದ ನೇರ ನಡೆನುಡಿಯ ನಿರಾಡಂಬರ ನಾಯಕ ನಳಿನಣ್ಣ ರಾಜ್ಯಾಧ್ಯಕ್ಷರಾಗಿದ್ದಾಗ ಅತೀ ಹೆಚ್ಚು ಬಾರಿ ರಾಜ್ಯ ಸುತ್ತಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಅಂದರೆ ಬೇರುಮಟ್ಟದಿಂದ ಭದ್ರಗೊಳಿಸಿ ಹೆಮ್ಮರವಾಗಿಸಿದವರು.ಅತ್ಯುತ್ತಮ ಭಾಷಣಗಾರ, ವಾಗ್ಮಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಂತೆ ನೇರ ಮಾತುಗಳಿಂದ ಅನ್ಯಾಯದ ಎದುರು ಸಮರ ಸಾರುತ್ತಾ ಬಂದಿರುವ ನಳಿನಣ್ಣ ಒಬ್ಬ ಸಾಮಾನ್ಯ ಕಾರ‍್ಯಕರ್ತನಾಗಿದ್ದವರು ಆರ್‌ಎಸ್‌ಎಸ್ ಸಂಘಟನೆಯಿಂದ ಬಿಜೆಪಿ ಪಕ್ಷಕ್ಕೆ ಬಂದು ಬಿಜೆಪಿ ಹೈಕಮಾಂಡ್‌ನ ಒತ್ತಾಯದ ಮೇರೆಗೆ ಎಂಪಿ ಅಭ್ಯರ್ಥಿಯಾಗಿ 2009 ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಭರ್ಜರಿ ಜಯಭೇರಿ ಬಾರಿಸಿ ಸಂಸದರಾಗಿ ನಂತರ ಮತ್ತೆ 2 ಅವಧಿಗೆ ಒಟ್ಟು ಮೂರು ಬಾರಿ ಲಕ್ಷ ಲಕ್ಷ ಅತ್ಯಧಿಕ ಬಹುಮತಗಳಿಂದ ಗೆದ್ದು ಬಂದಿದ್ದರು. ಅವರು ಎರಡನೇ ಬಾರಿಗೆ ಮತ್ತು ಮೂರನೇ ಬಾರಿಗೆ ಸ್ಪರ್ಧಿಸಿದಾಗ ಕೆಲ ಟಿಕೇಟ್ ಆಕಾಂಕ್ಷಿಗಳು ಅಪಪ್ರಚಾರ ನಡೆಸಿದರು. ಅಪಹಾಸ್ಯಕಾರಿಯಾಗಿ ಟ್ರೋಲ್ ಮಾಡಿಸಿದರು.ಆದರೆ, ಸತ್ಯ ಸ್ಪಷ್ಟವಾಗಿತ್ತು. ಯಾರಿಗೂ ಅನ್ಯಾಯ ಮಾಡದ ನಳಿನಣ್ಣ ಸತತ 3 ಬಾರಿ ಎಂಪಿಯಾದರು. ಜನ ಬಯಸಿದ ಉತ್ತಮ ಸಂಸದರಾಗಿ ಗುರುತಿಸಿಕೊಂಡರು.ಆದರೂ, ಅವರ ಏಳ್ಗೆಯನ್ನು ಸಹಿಸದ ಮಂದಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಾದ್ಯಂತ ಅಪಸ್ವರ ಎಬ್ಬಿಸಿ ಟ್ರೋಲ್ ಮಾಡಿಸಿ ನಳಿನಣ್ಣನ ಇಮೇಜನ್ನು ಹಾಳು ಮಾಡಲು ನೋಡಿದರು.ಈ ನಡುವೆ ಜಾತ್ಯಾತೀತ ಶಕ್ತಿಗಳು ಕೂಡಾ ಉಳಿದವರಿಗಿಂತ ನಳಿನಣ್ಣ ಪರವಾಗಿಲ್ಲ ಎಂದಿದ್ದವು.ಆದರೆ, ಬಿಜೆಪಿ ಪಕ್ಷದ ಹೈಕಮಾಂಡ್ ನಳಿನಣ್ಣನ ಒಳ್ಳೆಯ ಗುಣವನ್ನು ಅವರು ಪಕ್ಷಕ್ಕಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಲೇ ಇಲ್ಲ.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಳಿನಣ್ಣ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾಗ ತನ್ನನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಲು ನಳಿನಣ್ಣ ಅವರೇ ಕಾರಣ ಎಂದು ಯಡಿಯೂರಪ್ಪ ಭಾವಿಸಿದ್ದರು. ಅವರ ಗುರು ಬಿ.ಎಲ್. ಸಂತೋಷ್ ಯಡಿಯೂರಪ್ಪರ ಬದ್ಧ ವೈರಿ.ಈ ಸೇಡಿನಿಂದ ಯಡಿಯೂರಪ್ಪನವರು ನಳಿನಣ್ಣನಿಗೆ ಈ ಸಲ ಎಂಪಿ ಟಿಕೇಟ್ ದೊರಕದಂತೆ ಅಡ್ಡ ಬಂದು ಅದರಲ್ಲಿ ಯಶಸ್ವಿಯಾದರು.ಸೇಡು ತೀರಿಸಿಕೊಂಡರು.ಇದೇ ಯಡಿಯೂರಪ್ಪನವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೇಟ್ ಕೊಡಬಾರದು ಎಂಬ ವಿರೋಧ ಬಂದಾಗ ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರದಲ್ಲಿ ಟಿಕೇಟ್ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು..ತನಗೆ ಟಿಕೇಟ್ ದೊರಕದಾಗ ನಳಿನಣ್ಣ ಯಾವುದೇ ರೀತಿಯ ವಿರೋಧ ಮಾಡಲಿಲ್ಲ. ಆಕ್ಷೇಪ ಮಾಡದೆ ಪಕ್ಷ ನಿಂತ ನೀರಾಗಬಾರದು. ಹೊಸಬರಿಗೆ ಅವಕಾಶ ನೀಡುತ್ತಿರುವುದು ಸ್ವಾಗತಾರ್ಹ ಎಂದಿದ್ದರು.ಇಲ್ಲಿ ಗಮನಿಸತಕ್ಕ ವಿಷಯವೊಂದಿದೆ. ನಳಿನಣ್ಣರನ್ನು ಬೆಂಬಲಿಸುವ ಲಕ್ಷಗಟ್ಟಲೆ ಅಭಿಮಾನಿ ವರ್ಗವಿದೆ. ನಳಿನಣ್ಣರ ಬ್ರಿಗೇಡ್‌ವಿದೆ. ನಳಿನಣ್ಣ ಯಾವತ್ತೂ ಅಧಿಕಾರ ಬಯಸಿದವರಲ್ಲ. 15 ವರ್ಷಗಳ ಹಿಂದೆ ಅಂದರೆ 2009 ರಲ್ಲಿ ಪಕ್ಷ ಅವರಿಗೆ ಅಧಿಕಾರಕ್ಕೆ ಒತ್ತಾಯಪೂರ್ವಕ ಕರೆ ತಂದಿತ್ತು. ಇದೀಗ ಅವರಿಗೆ ಟಿಕೇಟ್ ನೀಡದೆ ಮೆತ್ತಗೆ ಕೂರಿಸಿದೆ. ಈ ಬಗ್ಗೆ ನಳಿನಣ್ಣ ಯಾವುದನ್ನು ಮನಸ್ಸಿಗೆ ಹಚ್ಚಿ ಕೊಳ್ಳದೆ ಬಿಜೆಪಿ ಪರ, ಮೋದಿ ಪರ ತಾನು ಗೆಲುವಿಗಾಗಿ ಶ್ರಮಿಸುವುದಾಗಿ ಹೇಳಿದರು. ಇಲ್ಲಿ ನಳಿನಣ್ಣರ ಬದಲು ಬಿಜೆಪಿ ಹೈಕಮಾಂಡ್ ಕ್ಯಾಪ್ಟನ್ ಬೃಜೇಶ್ ಚೌಟ ಎಂಬ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ.ಸುಮಾರು 4 ತಿಂಗಳ ಹಿಂದೆ ಕ್ಯಾಪ್ಟನ್ ಬೃಜೇಶ್ ಚೌಟರಲ್ಲಿ Mp mla’s ನ್ಯೂಸ್ ನೀವು ಎಂಪಿ ಟಿಕೆಟ್ ಆಕಾಂಕ್ಷಿಯೇ ಎಂದು ಕೇಳಿತ್ತು. ಆವಾಗ ಅವರು “ನಳಿನಣ್ಣ ಇದ್ದಾರಲ್ಲಾ ಅವರಿಗೆ ಟಿಕೇಟು ಸಿಕ್ಕರೆ ನನ್ನದೇನೂ ವಿರೋಧವಿಲ್ಲ. ಒಂದು ವೇಳೆ ನನಗೆ ಪಕ್ಷ ಎಂಪಿ ಟಿಕೇಟ್ ಕೊಟ್ಟರೆ ಸ್ಪರ್ಧಿಸುತ್ತೇನೆ” ಎಂದಿದ್ದರು.ಕ್ಯಾಪ್ಟನ್ ಬೃಜೇಶ್ ಚೌಟ ಅವರು ಮಂಗಳೂರು ಕಂಬಳದ ರೂವಾರಿ. ನಿವೃತ್ತ ಸೇನಾನಿ. ಉತ್ತಮ ಯುವ ನಾಯಕ. ಅವರು ಯಾವತ್ತೂ ಎಂಪಿ ಟಿಕೇಟ್‌ಗಾಗಿ ಲಾಬಿ ನಡೆಸಿದವರಲ್ಲ. ಕಳೆದ ಬಾರಿಯೂ ಅವರಿಗೆ ಟಿಕೆಟ್ ಸಿಗುವುದರಲ್ಲಿತ್ತು. ಆದರೆ,ಈ ಬಾರಿ ಸಿಕ್ಕಿದೆ.ನಳಿನಣ್ಣ ಅವರು ಬೃಜೇಶ್ ಚೌಟರಿಗೆ ಸಿಹಿ ತಿನಿಸಿ ಅವರನ್ನು ಎಂಪಿಯಾಗಿ ಗೆಲ್ಲಿಸುವುದಾಗಿ ಮಾತು ಕೊಟ್ಟಿದ್ದಾರೆ. ಅವರೀಗ ಬೃಜೇಶ್ ಚೌಟರನ್ನು ಮಾತ್ರವಲ್ಲದೆ ರಾಜ್ಯದಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಶಕ್ತಿ ಮೀರಿ ದುಡಿದು ಕಿಂಗ್ ಮೇಕರ್ ಆಗಬೇಕಾಗಿದೆ.ಎಲ್ಲರಂಥಲ್ಲ ನಮ್ಮ ನಳಿನಣ್ಣ. ಅಧಿಕಾರವಿರಲಿ, ಇಲ್ಲದಿರಲಿ ನಮ್ಮ ನಳಿನಣ್ಣ ಅದ್ವಿತೀಯ ಸಂಘಟಕ. ಜನಸೇವಕ, ಜನನಾಯಕ. ಅವರ ಮುಂದಿನ ರಾಜಕೀಯ ಭವಿಷ್ಯವು ಇನ್ನಷ್ಟು ಉಜ್ವಲವಾಗಿ ಪ್ರಜ್ವಲಿಸಲಿ ಎಂದು ನಳಿನಣ್ಣರ ಅಸಂಖ್ಯಾತ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Scroll to Top