Author name: editor

ಪ್ರಾದೇಶಿಕ ವಾರ್ತೆಗಳು

ನ.11-17: ಯಕ್ಷಾಂಗಣ ತಾಳಮದ್ದಳೆ ಸಪ್ತಾಹ-ವಿವಿಧ ತಂಡಗಳ ಸಂಯೋಜನೆಯಲ್ಲಿ ವಿಭಿನ್ನ ಪ್ರಯೋಗ

ಮಂಗಳೂರು: ‘ಯಕ್ಷಾಂಗಣ ಮಂಗಳೂರು’ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಎಂದಿನಂತೆ ಈ ಬಾರಿಯೂ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸಲಿರುವ 12ನೇ ವರ್ಷದ ನುಡಿಹಬ್ಬ ಯಕ್ಷಗಾನ ತಾಳಮದ್ದಳೆ ಸಪ್ತಾಹ ‘ದ್ವಾದಶ ಸರಣಿ’ಯು ಇದೇ 2024 ನವೆಂಬರ್ ತಿಂಗಳ 11ರಿಂದ 17ರವರೆಗೆ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯ ವಿವಿಧ ತಂಡಗಳ ಸಂಯೋಜನೆಯಲ್ಲಿ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ’ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಇತ್ತೀಚೆಗೆ ಕದ್ರಿ ದೇವಳದ ವಠಾರದಲ್ಲಿ ಜರಗಿದ ಯಕ್ಷಾಂಗಣದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿ ಮಾತನಾಡಿದರು. ‘ನವಂಬರ 11 ರಂದು ಸೋಮವಾರ ಸಂಜೆ ಗಂಟೆ 4ಕ್ಕೆ ಉದ್ಘಾಟನೆ ಯೊಂದಿಗೆ ಆರಂಭವಾಗುವ ಸಪ್ತಾಹದಲ್ಲಿ ಜಿಲ್ಲೆಯ ಹೆಸರಾಂತ ಏಳು ಯಕ್ಷಗಾನ ಕಲಾಸಂಘಗಳು ಭಾಗವಹಿಸಲಿದ್ದು, ಈಗಾಗಲೇ ತಾಳಮದ್ದಳೆ ಕ್ಷೇತ್ರದಲ್ಲಿ ಖ್ಯಾತರಾದ ಹಿರಿಯ ಯಕ್ಷಗಾನ ಕಲಾವಿದರನ್ನು ಬಳಸಿಕೊಂಡು ವಿವಿಧ ಪ್ರಸಂಗಗಳನ್ನು ಪ್ರಸ್ತುತಪಡಿಸಲಿವೆ’ ಎಂದವರು ತಿಳಿಸಿದರು.ಭಾಗವಹಿಸುವ ಕಲಾ ಸಂಘಗಳು:‘ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಮೂಡಿ ಬರುವ ದ್ವಾದಶ ಸರಣಿಯಲ್ಲಿ ಕ್ರಮವಾಗಿ ಹವ್ಯಾಸಿ ಬಳಗ ಕದ್ರಿ, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ, ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾಸಂಘ ಉಪ್ಪಿನಂಗಡಿ ,ಯಕ್ಷಲಹರಿ ಕಿನ್ನಿಗೋಳಿ, ಅಂಬುರಹ ಯಕ್ಷ ಸದನ ಬೊಟ್ಟಿಕೆರೆ, ಶ್ರೀ ಚಾಮುಂಡೇಶ್ವರಿ ಯಕ್ಷಕೂಟ ಕಣಿಯೂರು ಕನ್ಯಾನ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ತಂಡಗಳು ಭಾಗವಹಿಸಲಿವೆ. ಸಪ್ತಾಹದಲ್ಲಿ ಪ್ರತಿವರ್ಷದಂತೆ ಅಗಲಿದ ಹಿರಿಯ ಕಲಾವಿದರ ಸಂಸ್ಮರಣೆ, ಸಾಧಕರ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನಗಳೂ ಜರಗಲಿವೆ’ ಎಂದು ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಮಾಹಿತಿ ನೀಡಿದರು.ಯಕ್ಷಾಂಗಣದ ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಂಚಾಲಕ ಕೆ.ರವೀಂದ್ರ ರೈ ಕಲ್ಲಿಮಾರ್, ಕೋಶಾಧಿಕಾರಿ ಸುಮಾ ಪ್ರಸಾದ್, ಕಾರ್ಯದರ್ಶಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ನಿವೇದಿತಾ ಎನ್. ಶೆಟ್ಟಿ ಉಪಸ್ಥಿತರಿದ್ದು ಸೂಕ್ತ ಸಲಹೆ ನೀಡಿದರು.

ಪ್ರಾದೇಶಿಕ ವಾರ್ತೆಗಳು

ಸುಭಾಷಿತನಗರದಲ್ಲಿ ಸ್ವಚ್ಛತಾ ಅಭಿಯಾನ

ಸುರತ್ಕಲ್ :ಗಾಂಧಿ ಜಯಂತಿ ದಿನದಂದು ಸುರತ್ಕಲ್ ಸುಭಾಷಿತ ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು. ಸ್ವಚ್ಛತಾ ಕಾರ್ಯಕ್ರಮ ಬೆಳಿಗ್ಗೆ ನಡೆಯಿತು. ಸುಭಾಷಿತ ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ನಡೆಯಿತು. ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ನ ಅಧ್ಯಕ್ಷ ರಮೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಅಸೋಸಿಯೇಶನ್ ನ ಉಪಾಧ್ಯಕ್ಷ ತಾರಾನಾಥ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ನರಸಿಂಹ ಸುವರ್ಣ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಕುಡುಂಬೂರು, ಜೊತೆ ಕಾರ್ಯದರ್ಶಿ ಲಕ್ಷ್ಮೀ ಚಂದ್ರಶೇಖರ ಹಾಗೂ ಅಸೋಸಿಯೇಶನ್ ನ ಸದಸ್ಯರು ಪಾಲ್ಗೊಂಡಿದ್ದರು.ಬಳಿಕ ಅಸೋಶಿಯನ್ ನ ಸರ್ವ ಸದಸ್ಯರ ಸಭೆ ರಮೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಗಾಂಧೀಜಿಯವರ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ.

ಮಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಮೂಲಮಂತ್ರಗಳು ವಿಶ್ವದಾದ್ಯಂತದ ಮಾಧ್ಯಮ ವ್ಯಕ್ತಿಗಳಿಗೆ ಮಾತ್ರವಲ್ಲ ಎಲ್ಲಾ ಮನುಷ್ಯರಿಗೆ ಕತ್ತಲಲ್ಲಿ ಮುನ್ನಡೆಸುವ ದಾರಿದೀಪಗಳಾಗಿವೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ ಹೇಳಿದರು. ಅವರು ಮಂಗಳೂರಿನ ಸಿಒಡಿಪಿಯಲ್ಲಿ ನಡೆದ ಇಂಡಿಯನ್ ಕ್ಯಾಥೋಲಿಕ್ ಪ್ರೆಸ್ ಅಸೋಸಿಯೇಷನಿನ 29 ನೇ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಗಾಂಧೀಜಿಯವರು ನಮಗೆ ಅನ್ಯರ ಅಭಿಪ್ರಾಯಗಳನ್ನು ಗೌರವಿಸುವ ಪರಂಪರೆಯನ್ನು ಪಾಲಿಸಲು ಕರೆ ನೀಡಿದ್ದಾರೆ. ಆ ಕೋರಿಕೆಯಂತೆ ನಾವೆಲ್ಲರೂ ಜವಾಬ್ದಾರಿಯಿಂದ ಮುಂದುವರೆಯಬೇಕೆಂದು ಹಾಗೂ ಗಾಂಧೀಜಿಯವರಂತೆ ಇಂದಿನ ಎಲ್ಲಾ ಪತ್ರಕರ್ತರು ನಿರ್ಭೀತರೂ ಸತ್ಯಪಕ್ಷಪಾತಿಗಳಾಗಬೇಕೆಂದು ಕರೆ ನೀಡಿದರು. ಮಾಧ್ಯಮಗಳ ಮೂಲಕ ಸತ್ಯದ ಹುಡುಕಾಟ ನಡೆಯುತ್ತಿದೆಯೇ? ಸತ್ಯ ನೋವು ನೀಡುತ್ತದೆ. ಆದರೆ ಅದು ನಿರ್ಗತಿಕರಿಗೆ ಬಲ ನೀಡುತ್ತದೆ ಎಂದು ಅವರು ತಿಳಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಹೆನ್ರಿ ಡಿಸೋಜಾರವರು ಮಾತನಾಡಿ ವಿವಿಧ ಒತ್ತಡಗಳ ನಡುವೆ ಸಿಲುಕಿ ಹೋಗಿರುವ ಇಂದಿನ ಮಾಧ್ಯಮ ಜಗತ್ತಿನಲ್ಲಿ ಗಾಂಧೀಜಿಯವರ ಚಿಂತನೆಗಳು ಅಪ್ರಸ್ತುತ ಎನ್ನುವಂತೆ ಕಾಣುತ್ತಿದೆಯಾದರೂ ವಾಸ್ತವವಾಗಿ ಬೆಳಕಿನ ಅಗತ್ಯವಿರುವುದು ಕತ್ತಲಿನ ನಡುವೆಯೇ ಎನ್ನುವುದನ್ನು ಮರೆಯಬಾರದು. ಇಂತಹ ಗೊಂದಲದ ನಡುವೆಯೇ ಪ್ರಜಾತಂತ್ರದ ಹಾಗೂ ಭಾರತೀಯತೆಯ ಬಲವನ್ನು ಹೆಚ್ಚಿಸಲು ಮಾಧ್ಯಮಗಳ ಪಾತ್ರದ ಕುರಿತು ಗಾಂಧೀಜಿಯವರ ಚಿಂತನೆಗಳನ್ನು ಪುನಃ ನಮ್ಮ ಪತ್ರಿಕೋದ್ಯಮದ ಕೇಂದ್ರ ಭಾಗವಾಗಿಸುವ ಅಗತ್ಯವಿದೆ ಎಂದು ಹೇಳಿದರು.ಸನ್ಮಾನ್ಯ ವಿಧಾನ ಪರಿಷತ್ತಿನ ಸದಸ್ಯರಾದ ಐವನ್ ಡಿಸೋಜಾ ಸಮಾವೇಶದ ಉದ್ಘಾಟಕರಾಗಿ ಉಪಸ್ಥಿತರಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ಬಹು ವಂದನೀಯ ಮ್ಯಾಕ್ಸಿಮ್ ಎಲ್ ನರೊನ್ಹಾ, ಐಸಿಪಿಎ ಅಧ್ಯಕ್ಷರಾದ ಇಗ್ನೇಷಿಯಸ್ ಗೊನ್ಸಾಲ್ವಿಸ್, ಕಾರ್ಯದರ್ಶಿ ಫಾ. ಸುರೇಶ್ ಮ್ಯಾಥ್ಯೂ, ಕಾರ್ಯಕ್ರಮದ ಸಂಯೋಜಕರಾದ ರಾಕ್ಣೊ ವಾರಪತ್ರಿಕೆಯ ಸಂಪಾದಕರಾದ ವಂದನೀಯ ಫಾದರ್ ರೂಪೇಶ್ ಮಾಡ್ತಾ, ಸಿಒಡಿಪಿ ನಿರ್ದೇಶಕರಾದ ವಂದನೀಯ ಫಾದರ್ ವಿನ್ಸೆಂಟ್ ಡಿಸೋಜಾ ವೇದಿಕೆಯಲ್ಲಿ ಹಾಜರಿದ್ದರು.

ಕರಾವಳಿ ಸುದ್ದಿ

‘ಪ್ಲಾಸ್ಟಿಕ್ ನಿರ್ಮೂಲನೆಗೆ ಸಮುದಾಯದ ಸಹಭಾಗಿತ್ವ ಅಗತ್ಯ’ ದ.ಕ. ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ .ಕೆ.

ಮಂಗಳೂರು: ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳನ್ನು ಹೆಚ್ಚು ಬಳಸುವ ಮೂಲಕ  ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಹಾಕಬಹುದು. ಪ್ಲಾಸ್ಟಿಕ್ ನಿರ್ಮೂಲನೆಗೆ ಸ್ಥಳೀಯಾಡಳಿತ ಸಂಸ್ಥೆಗಳು ಶ್ರಮಿಸಿಸುತ್ತಿದ್ದು, ಇದರ ಯಶಸ್ವಿಗೆ  ಸಮುದಾಯದ ಸಹಭಾಗಿತ್ವ ಅಗತ್ಯ. ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರತಿನಿಧಿಗಳಾಗಿ ವಿದ್ಯಾರ್ಥಿಗಳು  ಕಾರ್ಯ ನಿರ್ವಹಿಸಬೇಕು ಎಂದು ದ.ಕ.ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ .ಕೆ. ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ದ.ಕ.ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯಿತಿ ಮತ್ತು ಬಲ್ಮಠದ ಸರ್ಕಾರಿ  ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಭಾಗಿತ್ವದಲ್ಲಿ ಮಂಗಳವಾರ ಬಲ್ಮಠದ ಸರ್ಕಾರಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆದಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಣೆ ಮಾಡದೆ ನೀಡುವ ಕಾರಣ ಸ್ಥಳೀಯಾಡಳಿತ ಸಂಸ್ಥೆಗಳಿಗೆ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿ ಪರಿಣಮಿಸಿದೆ. ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಮಾಡಿದರೆ ಸಮರ್ಪಕ ವಿಲೇವಾರಿ ಸಾಧ್ಯ. ಪ್ಲಾಸ್ಟಿಕ್ ಬಳಕೆ ಕಡಿತಗೊಳಿಸುವುದರ ಜತೆಗೆ  ಮರುಬಳಕೆ ಮಾಡುವ ಉತ್ಪನ್ನಗಳ  ಬಗ್ಗೆ ಗಮನಹರಿಸಿದರೆ ಪರಿಸರಕ್ಕೆ ಹಾನಿಯಾಗುವುದನ್ನು ತಡೆಗಟ್ಟಬಹುದು ಎಂದು ಅವರು ಹೇಳಿದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ  ಪ್ರಾಂಶುಪಾಲ ಡಾ ಜಗದೀಶ ಬಾಳ ಅಧ್ಯಕ್ಷತೆ ವಹಿಸಿದ್ದರು.ಅದಾನಿ ಸಂಸ್ಥೆಯ ಎಜಿಎಂ ರವಿ ಜೇರಾ ವಿದ್ಯಾರ್ಥಿಗಳಿಗೆ ಬಟ್ಟೆ ಬ್ಯಾಗ್ ವಿತರಿಸಿದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ಅಧ್ಯಕ್ಷ ಬ್ರಾಯನ್ ಪಿಂಟೊ , ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ನಿರ್ದೇಶಕ ಪುಷ್ಪರಾಜ್ ಜೈನ್ , ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿಭಾಗವಹಿಸಿದ್ದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್  ಪೂರ್ವಾಧ್ಯಕ್ಷ ಸಂತೋಷ್ ಶೇಟ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ,  ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್. ಉಪಸ್ಥಿತರಿದ್ದರು.  ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಮಾತಾ ಅಮೃತಾನಂದಮಯಿ ಮಠ, ಮಂಗಳೂರು ನೂತನ ಸೇವಾ ಸಮಿತಿ 2024-26 ಪದಗ್ರಹಣ

ಮಂಗಳೂರು: ಮಾತಾ ಅಮೃತಾನಂದಮಯಿ ಮಠ, ಮಂಗಳೂರು ಇದರ ಸೇವಾ ಸಮಿತಿಯ ಪುನಾರಚನೆ ಹಾಗೂ ಪದಗ್ರಹಣ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.ಗೌರವಾಧ್ಯಕ್ಷರಾಗಿ ಮಂಗಳೂರು ವಿ.ವಿ.ಯ ವಿಶ್ರಾಂತ ಉಪಕುಲಪತಿ ಡಾ. ಪಿ. ಎಸ್. ಎಡಪಡಿತ್ತಾಯ ಇರುವರು. ಅಧ್ಯಕ್ಷರಾಗಿ ಉದ್ಯಮಿ ಸುರೇಶ್ ಅಮೀನ್,ಉಪಾಧ್ಯಕ್ಷರುಗಳಾಗಿ ಡಾ. ರಾಜೇಶ್ವರಿದೇವಿ ಹಾಗೂ ಡಾ. ಇಂದುಮತಿ ಮಲ್ಯ, ಕಾರ್ಯದರ್ಶಿಯಾಗಿ ಶ್ರೀಮತಿ ವೀಣಾ ಟಿ. ಶೆಟ್ಟಿ ಕಾರ್ಯ ನಿರ್ವಹಿಸಲಿರುವರು.ಕೋಶಾಧಿಕಾರಿಯಾಗಿ CA. ರಾಮನಾಥ ನಾಯಕ್ ಮತ್ತು ‌ಸದಸ್ಯರುಗಳಾಗಿ ಗಣೇಶ್ ಕೆ., ಅಡ್ವೊಕೇಟ್ ಪುಷ್ಪಲತಾ, ಡಾ.ದೇವಿಪ್ರಸಾದ್ ಎಸ್.ಅಶೋಕ್, ಭರತ್ ಕುಮಾರ್ ಎರ್ಮಾಳ್, ಪ್ರವೀಣ್ ಶಬರೀಶ್, ಡಾ. ಉಮ್ಮಪ್ಪ ಪೂಜಾರಿ ಪಿ., ಗಿರೀಶ್ ರೇವಣಕರ್, ಪ್ರೇಮರಾಜ್, ರವಿಕಿರಣ್, ವಾಮನ್ ಬಿ. ಮೈಂದನ್, ಡಾ. ಸುಚಿತ್ರಾ ರಾವ್, ದಿನೇಶ್ ರಾವ್, ಚಂದ್ರಹಾಸ್ ಸುವರ್ಣ ಆಯ್ಕೆಯಾಗಿದ್ದಾರೆ.ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಅಮೃತಜ್ಯೋತಿಯನ್ನು ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಗೌರವಾಧ್ಯಕ್ಷರಾದ ಡಾ. ವೈ. ಸನತ್ ಹೆಗ್ಡೆ ಪ್ರಸ್ತಾವನೆಗೈದರು. ಶ್ರೀಮತಿ ಶ್ರುತಿ ಹೆಗ್ಡೆ ಪ್ರಮಾಣ ವಚನ‌ ಬೋಧಿಸಿದರು. ಆರಂಭದ ಅಧ್ಯಕ್ಷ ಡಾ. ಜೀವರಾಜ್ ಸೊರಕೆ ಹಾಗೂ ನಿಕಟಪೂರ್ವ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ಉಪಸ್ಥಿತರಿದ್ದರು. ಡಾ. ದೇವದಾಸ್ ಪುತ್ರನ್ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

Mp mla’s ನ್ಯೂಸ್ 13 ನೇ ಸೌಹಾರ್ದ ಸಂಗಮ ಡಿಸೆಂಬರ್ 17 ಕ್ಕೆ ಸಂಜೆ 4 ರಿಂದ 9 ರ ತನಕ. ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ. ಗಣ್ಯ ಅತಿಥಿಗಳಿಂದ ಸೌಹಾರ್ದ ಸಂದೇಶ.

ಮಂಗಳೂರು: ವಿಧಾನಪರಿಷತ್ ಉಪ ಚುನಾವಣೆ ಪ್ರಯುಕ್ತ ಚುನಾವಣಾ ನೀತಿ ಸಂಹಿತೆ ಇರುವುದ್ದರಿಂದ ಅಕ್ಟೋಬರ್ 13 ರಂದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಿಗದಿಯಾಗಿದ್ದ Mp mla’s ನ್ಯೂಸ್ 13 ನೇ ಸೌಹಾರ್ದ ಸಂಗಮವನ್ನು ಡಿಸೆಂಬರ್ 17 ಕ್ಕೆ ಮುಂದೂಡಲಾಗಿದೆಂದು ಸೌಹಾರ್ದ ಸಂಗಮದ ಸಂಘಟಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ತಿಳಿಸಿದ್ದಾರೆ. ಸೌಹಾರ್ದ ಸಂಗಮದಲ್ಲಿ ಎಂಪಿ ಎಂ ಎಲ್ ಎಗಳು ಭಾಗವಹಿಸಲಿರುವುದ್ದರಿಂದ ಸೌಹಾರ್ದ ಸಂಗಮವನ್ನು ಮುಂದೂಡಲಾಗಿದೆಂದು ಡಾ. ಅಶೋಕ್ ಶೆಟ್ಟಿ ಬಿ. ಎನ್. ಹೇಳಿದ್ದಾರೆ. Mpmla’s news 13 ನೇ ಸೌಹಾರ್ದ ಸಂಗಮವು ಡಿಸೆಂಬರ್ 17 ರ ಸಂಜೆ 4 ರಿಂದ 9 ರ ತನಕ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಅಂದು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಗಣ್ಯ ಅತಿಥಿಗಳಿಂದ ಸೌಹಾರ್ದ ಸಂದೇಶ,ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯವಿದೆ. Mp mla’s ನ್ಯೂಸ್ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರ ಸಾರಥ್ಯದಲ್ಲಿ 12 ಸೌಹಾರ್ದ ಸಂಗಮಗಳನ್ನು ಯಶಸ್ವಿಯಾಗಿ ಸಂಘಟಿಸಿ ವಿವಿಧ ಕ್ಷೇತ್ರಗಳ 300 ಮಂದಿ ಸಾಧಕರನ್ನು ಗುರುತಿಸಿದೆ.

ಪ್ರಾದೇಶಿಕ ವಾರ್ತೆಗಳು

ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಅಕ್ಟೋಬರ್ 3 ರಿಂದ 14 ರವರೆಗೆ ವೈಭವದ ಮಂಗಳೂರು ದಸರಾ. ಅಕ್ಟೋಬರ್ 13 ರಂದು ಭವ್ಯ ಶೋಭಾಯಾತ್ರೆ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವ ಅ. 3 ರಿಂದ 14 ರವರೆಗೆ ವೈಭವದಿಂದ ನಡೆಯಲಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದರು.ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದಸರಾ ಅಂಗವಾಗಿ ಪ್ರತಿನಿತ್ಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾನ ಸೇವೆಗಳು ನಡೆಯಲಿದೆ. ಈ ಬಾರಿಯ ದಸರಾಕ್ಕೂ ದೇಶ-ವಿದೇಶದಿಂದ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಮಾತನಾಡಿ, ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ಅವರು ವೈಭವದ ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ. ಅ.3ರಂದು ಬೆಳಗ್ಗೆ 8.3೦ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ ಧರ್ನುಲಗ್ನö, ಕಲಶ ಪ್ರತಿಷ್ಠೆ, ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ, ದಸರಾ ಉದ್ಘಾಟನೆ, ಬಳಿಕ ಪುಷ್ಪಾಲಂಕಾರ ಮಹಾಪೂಜೆ, 12.3೦ರಿಂದ ಅನ್ನಸಂತರ್ಪಣೆ. ಭಜನಾ ಕಾರ್ಯಕ್ರಮ, ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ ಉತ್ಸವ ನಡೆಯಲಿದೆ. ಅ.4ರಂದು ಬೆಳಗ್ಗೆ 1೦.೦೦ಕ್ಕೆ ದುರ್ಗಾಹೋಮ, 12.3೦ರಿಂದ ಅನ್ನಸಂತರ್ಪಣೆ. ಅ.5ರಂದು ಬೆಳಗ್ಗೆ ಗಂಟೆ 1೦.೦೦ಕ್ಕೆ ಪಂಚ ದುರ್ಗಾಹೋಮ, 12.3೦ರಿಂದ ಅನ್ನಸಂತರ್ಪಣೆ, ಅ.6ರಂದು ಬೆಳಗ್ಗೆ ಗಂಟೆ 1೦.೦೦ಕ್ಕೆ ಆರ್ಯ ದುರ್ಗಾಹೋಮ, 12.3೦ರಿಂದ ಅನ್ನಸಂತರ್ಪಣೆ. ಅ.7ರಂದು ಬೆಳಗ್ಗೆ 1೦.೦೦ಕ್ಕೆ ಅಂಬಿಕಾ ದುರ್ಗಾ ಹೋಮ, 12.3೦ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದರು. ಅ. 8ರಂದು ಬೆಳಗ್ಗೆ ಗಂಟೆ 1೦.೦೦ಕ್ಕೆ ಭಗವತೀ ದುರ್ಗಾ ಹೋಮ (ಲಲಿತಾ ಪಂಚಮಿ) 12.3೦ರಿಂದ ಅನ್ನಸಂತರ್ಪಣೆ, ಅ. 9ರಂದು ಬೆಳಗ್ಗೆ ಗಂಟೆ 9.೦೦ಕ್ಕೆ ಸಾಮೂಹಿಕ ಚಂಡಿಕಾ ಹೋಮ, ಕುಮಾರಿ ದುರ್ಗಾ ಹೋಮ, ಪುಷ್ಪಾಲಂಕಾರ ಮಹಾಪೂಜೆ, 12.3೦ರಿಂದ ಅನ್ನಸಂತರ್ಪಣೆ. ಅ.1೦ರಂದು ಬೆಳಗ್ಗೆ ಗಂಟೆ 1೦.೦೦ಕ್ಕೆ ಮಹಿಷರ್ದಿನಿ ದುರ್ಗಾ ಹೋಮ, 12.3೦ರಿಂದ ಅನ್ನಸಂತರ್ಪಣೆ. ಅ.11ರಂದು ಬೆಳಗ್ಗೆ ಗಂಟೆ 1೦.೦೦ಕ್ಕೆ ಚಂಡಿಕಾಹೋಮ ಹಗಲೋತ್ಸವ,12.3೦ರಿಂದ ಅನ್ನಸಂತರ್ಪಣೆ.ಅ.12ರಂದು ಬೆಳಗ್ಗೆ ಗಂಟೆ 1೦.೦೦ಕ್ಕೆ ಸರಸ್ವತಿ ದುರ್ಗಾಹೋಮ, 11.3೦ರಿಂದ ಶತ ಸೀಯಾಳಾಭಿಷೇಕ, ಶಿವಪೂಜೆ (ಮಹಾನವಮಿ), ಮಹಾಅನ್ನಸಂತರ್ಪಣೆ.ವೈಭವದ ಮೆರವಣಿಗೆ: ಅ.13ರಂದು ಬೆಳಗ್ಗೆ ಗಂಟೆ 1೦.೦೦ರಿಂದ ವಾಗೀಶ್ವರಿ ದುರ್ಗಾಹೋಮ, 12.3೦ಕ್ಕೆ ಶಿವಪೂಜೆ. ಸಂಜೆ 4.೦೦ರಿಂದ ಮಹಾಗಣಪತಿ, ನವದುರ್ಗೆ, ಆದಿಶಕ್ತಿಯೊಂದಿಗೆ ಶ್ರೀ ಶಾರದ ಮಾತೆಯ ಶೋಭಾಯಾತ್ರೆ ನಡೆಯಲಿದೆ. ಅ.14ರಂದು ಬೆಳಗ್ಗೆ ಪ್ರಾತಃಕಾಲ ಮಂಟಪ ಪೂಜೆ ಬಳಿಕ ಶಾರದಾ ವಿಸರ್ಜನೆ, ರಾತ್ರಿ 7.೦೦ರಿಂದ ಭಜನಾ ಕಾರ್ಯಕ್ರಮ, 8.೦೦ರಿಂದ ಗುರುಪೂಜೆ ನಡೆಯಲಿದೆ ಎಂದರು.ಅ.6ರಂದು ಹಾಫ್ ಮ್ಯಾರಥಾನ್: ಅ.6ರಂದು ಬೆಳಗ್ಗೆ 5.3೦ಕ್ಕೆ ಹಾಫ್ ಮ್ಯಾರಥಾನ್ ನಡೆಯಲಿದ್ದು, 2ಸಾವಿರಕ್ಕೂ ಅಧಿಕ ಮಂದಿ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿನಿತ್ಯ ಸಂಜೆ ಸಂತೋಷಿ ಕಲಾ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ರವಿಶಂಕರ್ ಮಿಜಾರು, ಎಂ. ಶೇಖರ್ ಪೂಜಾರಿ, ಜಗದೀಪ್ ಡಿ. ಸುವರ್ಣ, ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ-ಉಪಾಧ್ಯಕ್ಷ ಡಾ. ಅನಸೂಯ ಬಿ.ಟಿ. ಸಾಲ್ಯಾನ್, ಉಪಾಧ್ಯಕ್ಷರಾದ ಬಿ.ಜಿ. ಸುವರ್ಣ, ದೇವಳ ಅಭಿವೃದ್ಧಿ ಸಮಿತಿ ಸದಸ್ಯರಾದ ಕಿಶೋರ್ ದಂಡೆಕೇರಿ, ವಾಸುದೇವ ಕೋಟ್ಯಾನ್, ಎಚ್.ಎಸ್. ಜೈರಾಜ್, ಲತೀಶ್ ಎಂ. ಸುವರ್ಣ,ರಾಧಾಕೃಷ್ಣ , ಲೀಲಾಕ್ಷ ಕರ್ಕೇರಾ, ಚಂದನ್‌ದಾಸ್, ಗೌರವಿ ರಾಜಶೇಖರ್, ಕೃತಿನ್ ದೀರಾಜ್ ಅಮೀನ್ ಉಪಸ್ಥಿತರಿದ್ದರು.ಅಕ್ಟೋಬರ್ 13 ರಂದು ಭವ್ಯ ಶೋಭಾಯಾತ್ರೆ: ಸಾಯಿರಾಂಅ.13ರ ಭಾನುವಾರ ಸಂಜೆ 4.೦೦ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಮಂಗಳೂರು ದಸರಾ ಬೃಹತ್ ಶೋಭಾಯಾತ್ರೆ ಆರಂಭವಾಗಲಿದೆ. ಕೇರಳದ ಮೈನವಿರೇಳಿಸುವ ಚೆಂಡೆ ವಾದ್ಯ, ರಾಜ್ಯದ ನಾನಾ ಕಡೆಯಿಂದ ಆಗಮಿಸುವ ಜಾನಪದ, ಸಾಂಸ್ಕೃತಿಕ ಹಿನ್ನಲೆಯ ನೃತ್ಯ ತಂಡಗಳು ನಾನಾ ಜಿಲ್ಲೆö, ರಾಜ್ಯಗಳ ಕಲಾ ತಂಡಗಳು, ಸ್ತಬ್ದ ಚಿತ್ರಗಳು ಭಾಗವಹಿಸಲಿವೆ ಎಂದು ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಹೇಳಿದರು.ದೇವಳ ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಮಂಗಳೂರು ದಸರಾ ಮಹೋತ್ಸವ ಹಾದು ಹೋಗುವ ರಸ್ತೆ ಸೇರಿದಂತೆ ನಗರದ ಕಟ್ಟಡಗಳನ್ನು ಅಲಂಕರಿಸುವ ಮೂಲಕ ಮಹೋತ್ಸವಕ್ಕೆ ಮತ್ತಷ್ಟು ವೈಭವ ತುಂಬಬೇಕು ಎಂದರು.ಚಿತ್ರಗಳು:ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಬಂಟ್ಸ್ ಹಾಸ್ಟೆಲ್: ಬಂಟ ಕ್ರೀಡೋತ್ಸವ ಉದ್ಘಾಟನೆ

ಮಂಗಳೂರು: ಬಂಟರು ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದು, ಕ್ರೀಡೋತ್ಸವಗಳಿಂದ ಇನ್ನಷ್ಟು ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಉದ್ಯಮಿ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕಾರ್ಯದರ್ಶಿ ಎಂ.ಸುಂದರ ಶೆಟ್ಟಿ ಹೇಳಿದರು.ಅವರು ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಡೆದ ಬಂಟ ಕ್ರೀಡೋತ್ಸವ-2024 ಉದ್ಘಾಟಿಸಿದರು. ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಟಾನದ ಟ್ರಸ್ಟಿ ಡಾ.ಆಶಾಜ್ಯೋತಿ ರೈ ಅವರು ಮಾತನಾಡಿ, ಈ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾ ಪಟುಗಳಿಗೆ ರಾಷ್ಟ್ರ -ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಅವಕಾಶ ಒದಗಿ ಬರಲಿ ಎಂದು ಹಾರೈಸಿದರು.ಉದ್ಯಮಿ ಪುರುಷೋತ್ತಮ ರೈ, ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ, ಡಾ. ಸಂಜೀವ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ ಸಿ ಎ ರಾಮ ಮೋಹನ್ ರೈ, ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಶೆಡ್ಡೆ ಮಂಜುನಾಥ್ ಭಂಡಾರಿ, ಕೃಷ್ಣ ಪ್ರಸಾದ್ ರೈ, ತಾಲೂಕು ಸಮಿತಿಯ ಅಧ್ಯಕ್ಷ ವಸಂತ ಶೆಟ್ಟಿ, ಜಯರಾಮ ಸಾಂತ, ಗಣೇಶೋತ್ಸವ ಸಮಿತಿಯ ಸಂಚಾಲಕರುಗಳಾದ ದಿವಾಕರ ಸಾಮಾನಿ, ಅಶ್ವತ್ತಾಮ ಹೆಗ್ಡೆ, ಮನೀಶ್ ರೈ ಹಾಗೂ ಸಂತೋಷ್ ಶೆಟ್ಟಿ ಶೆಡ್ಡೆ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಖ್ಯಾತ ಚಿತ್ರ ಕಲಾವಿದೆ ಆಶ್ರಿತಾ ರೈ ಅವರು ಕನ್ನಡಾಂಬೆಯ ಚಿತ್ರ ರಚಿಸಿದರು.ಕ್ರೀಡಾ ಕೂಟದ ಸಂಚಾಲಕ ಕಿರಣ್ ಪಕ್ಕಳ ಸ್ವಾಗತಿಸಿದರು. ಸಂಚಾಲಕಿ ನಿವೇದಿತಾ ಎನ್.ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ಹಾಗೂ ಪ್ರಕಾಶ್ ಮೇಲಂಟ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಅಕ್ಟೋಬರ್ 2: ಬ್ರ್ಯಾಂಡ್ ಮಂಗಳೂರು ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ

ಮಂಗಳೂರು, ಸೆಪ್ಟೆಂಬರ್ 30, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಪೊಲೀಸ್ ಕಮಿಷನರೇಟ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ಹಾಗೂ ರೋಹನ್ ಕಾರ್ಪೋರೇಶನ್ ನೇತೃತ್ವದಲ್ಲಿ ಬ್ರ್ಯಾಂಡ್ ಮಂಗಳೂರು ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಅಕ್ಟೋಬರ್ 2 ರಂದು ಬುಧವಾರ ಬೆಳಿಗ್ಗೆ 9 ಗಂಟೆಗೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮೈದಾನ ದಲ್ಲಿ ನಡೆಯಲಿದೆ.ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ತಂಡ, ಮಂಗಳೂರು ಪೊಲೀಸ್ ಆಯುಕ್ತರ ತಂಡ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳ ತಂಡ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಂಡ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರ ತಂಡ ಪಂದ್ಯಾವಳಿ ಯಲ್ಲಿ ಭಾಗವಹಿಸಲಿವೆ.ಈ ಕ್ರಿಕೆಟ್ ಪಂದ್ಯಾವಳಿ ಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಉದ್ಘಾಟಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇ0ದ್ರ ಕುಂದೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top