ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ ಮೆದುಳಿನ ದಿನಾಚರಣೆ. ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿ, ಬೆಂಗಳೂರಿನ ನಿಮಾನ್ಸ್ ಸಹಯೋಗದ ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಸಿಬ್ಬಂದಿಗಳ ವತಿಯಿಂದ ವಿಶ್ವಮೆದುಳಿನ ದಿನದ ಅಂಗವಾಗಿ ಮೆದುಳಿನ ಆರೋಗ್ಯದ ಬಗ್ಗೆ ಸಾರ್ವಜನಿಕರಿಗೆ ವಿಶೇಷ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಯಿತು.

ಮಂಗಳೂರು: ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಷ್ಠ ರೋಗ ನಿರ್ಮೂಲನಾಧಿಕಾರಿಗಳ ಕಚೇರಿ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮೆದುಳು ದಿನ  ಕಾರ್ಯಕ್ರಮವನ್ನು ಜುಲೈ 22ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ನಿವಾಸಿ ವೈದ್ಯಧಿಕಾರಿಗಳಾದ ಡಾ. ಸುಧಾಕರ ಟಿ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ವಿಶ್ವ ಮೆದುಳು ದಿನ ಆಚರಿಸುವ ಉದ್ದೇಶವನ್ನು ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಹಿರಿಯ ವೈದ್ಯಧಿಕಾರಿಗಳಾದ ಮತ್ತು ಜಿಲ್ಲಾ ಆಸ್ಪತ್ರೆಯ ಮಟ್ಟದಲ್ಲಿ ಬ್ರೈನ್ ಹೆಲ್ತ್ ಕ್ಲಿನಿಕ್ ನ ನೋಡೆಲ್ ಆಫೀಸರ್ ಆದ ಡಾ. ಗಿರೀಶ್ ಕುಮಾರ್ ರವರು ಮಾತನಾಡಿ ನಮ್ಮ ದೇಹದಲ್ಲಿ ಮೆದುಳು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಮತ್ತು ಮೆದುಳಿನ ಆರೋಗ್ಯವನ್ನು ನಾವು ಕಾಪಾಡಿಕೊಂಡು ಬರದಿದ್ದರೆ ಯಾವ ರೀತಿಯ ನರಕೋಶದ ತೊಂದರೆಗಳು ಬರುತ್ತದೆ ಎನ್ನುವುದನ್ನು ವಿವರಿಸಿದರು. Palliative care ನ Incharge ಮತ್ತು ಐಎಂಎ ಕುಟುಂಬ ವೈದ್ಯರ ವಿಭಾಗದ ರಾಜ್ಯಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ರವರು, ಮೂಳೆರೋಗ ವಿಭಾಗದ ಮುಖ್ಯಸ್ಥರಾದ ಡಾ. ಕೆ. ಆರ್ ಕಾಮತ್ ರವರು, ಮನೋವೈದ್ಯಕೀಯ ರೋಗ ವಿಭಾಗದ ಮುಖ್ಯಸ್ಥರಾದ ಡಾ. ಸುನಿಲ್ ಕುಮಾರ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಅದೇ ರೀತಿ ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧಿಕಾರಿಗಳಾದ ಡಾ. ಮನೀಶ್, ಡಾ. ಅಶ್ವಿನ್, ಡಾ. Thafsiya ರವರು ಮತ್ತು ಬ್ರೈನ್ ಹೆಲ್ತ್ ಕ್ಲಿನಿಕ್ ನ ವೈದ್ಯರಾದ ಡಾ. ವಂಶಿ ಕೃಷ್ಣ ರೆಡ್ಡಿ ಯವರು ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಬ್ರೈನ್ ಹೆಲ್ತ್ ಕ್ಲಿನಿಕ್ ನ ಮನಶಾಸ್ತ್ರಜ್ಞಾರಾದ ಕುಮಾರಿ ನಿಶ್ಚಿತ ಬಿ ಎಲ್ ರವರು ಪ್ರಾರ್ಥಿಸಿದರು. ಜಿಲ್ಲಾ ಸಂಯೋಜಕರಾದ ಶ್ರೀಮತಿ ಸೌಮ್ಯ ಆರ್ ಕೆ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. Physiotherapist ಆದ ಕುಮಾರಿ ಐಶ್ವರ್ಯ ಎಮ್ ಬಿ ಮತ್ತು ಸ್ಟಾಫ್ ನರ್ಸ್ ಆದ ಶ್ರೀಮತಿ ದಿವ್ಯ ಕುಮಾರಿ ಜಿ ಯವರು ಕಾರ್ಯಕ್ರಮ ಆಯೋಜಿಸುವಲ್ಲಿ ಸಹಕರಿಸಿದರು. NTCP ಯ ಆಪ್ತಸಮಾಲೋಚಕರಾದ ವಿಜಯ್ ಕುಮಾರ್ ರವರು ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಗುರು ಪೂರ್ಣಿಮಾ ಉತ್ಸವ.

ಮಂಗಳೂರು : ಗುರುಪೂರ್ಣಿಮೆಯು ವ್ಯಕ್ತಿಯೊಳಗಿನ ದೋಷಗಳನ್ನೆಲ್ಲ ಪರಿಹರಿಸಿ ಆತನನ್ನು ಸ್ವಯಂಪೂರ್ಣ ಮತ್ತು ಸರ್ವಾಂಗೀಣ ವ್ಯಕ್ತಿಯಾಗಿ ರೂಪಿಸುವ ದಿವ್ಯದಿನವಾಗಿದೆ. ಗುರು ಮತ್ತು ಗುರಿ ಎರಡೂ ಆತನನ್ನು ಗೊಂದಲರಹಿತನನ್ನಾಗಿ ಮಾಡುತ್ತದೆ ಎಂದು ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಹೇಳಿದರು. ನಗರದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಜುಲೈ21 ರಂದು ಭಾನುವಾರ ಗುರು ಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಮಠದ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಆಶೀರ್ವಚನವಿತ್ತು ಇಂದು ಶಾಂತಿ, ಸಮಾಧಾನ ಮತ್ತು ತೃಪ್ತಿಯ ಬದುಕನ್ನು ಬಾಳಬೇಕಾದ ಅಗತ್ಯವಿದೆ. ಇಂದಿನ ಬದುಕಿನ ಅವಶ್ಯಕತೆಯನ್ನು ಮನಗಂಡು ಗುರು ಪೂರ್ಣಿಮೆಯನ್ನು ರೂಪಿಸಿದಂತಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ಶ್ರೀಗುರು ಪಾದುಕಾ ಪೂಜೆ, ದೇವೀಪೂಜೆ, ಸರ್ವೈಶ್ವರ್ಯ ಪೂಜೆ, ಆರತಿ, ಭಕ್ತರಿಂದ ಕ್ಷೀರಾಭಿಷೇಕ, ಪ್ರಸಾದ ವಿತರಣೆ ಹಾಗೂ ಮಹಾ ಪ್ರಸಾದ ವಿತರಣೆ ಜರುಗಿತು.ಗುರು ಪೂರ್ಣಿಮಾ ದಿನದ ಶುಭ ಸಂದರ್ಭದಲ್ಲಿ ಭಾಗವಹಿಸಿದ ಭಕ್ತರ ಹಾಗೂ ಸಮಾಜದ ಸ್ವಾಸ್ಥ್ಯ ಸಂರಕ್ಷಣೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಪೂರ್ವಾಹ್ನ ಬೋಳೂರಿನ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಗುರು ಹೋಮ ಮತ್ತು ಮಹಾ ಮೃತ್ಯುಂಜಯ ಹೋಮ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಲಕ್ಷ್ಮಣ ಅಮೀನ್ ಮತ್ತು ಪದಾಧಿಕಾರಿಗಳು, ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಪೂರ್ವಾಧ್ಯಕ್ಷ ಡಾ. ಜೀವರಾಜ್ ಸೊರಕೆ, ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ, ಉಪಾಧ್ಯಕ್ಷ ಸುರೇಶ್ ಅಮೀನ್, ಕಾರ್ಯದರ್ಶಿ ಡಾ. ಕೆ. ಅಶೋಕ್ ಶೆಣೈ, ಯುವಘಟಕ ಆಯುಧ್ ನ ಪದಾಧಿಕಾರಿಗಳು, ಉಡುಪಿ – ಕುಂದಾಪುರ ಘಟಕಗಳಪದಾಧಿಕಾರಿಗಳು, ಸದಸ್ಯರು, ಅಮ್ಮನ ಭಕ್ತರು, ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಸತೀಶ್ ಕಾಪಿಕಾಡ್.

ಪ್ರಾದೇಶಿಕ ವಾರ್ತೆಗಳು

“ಸ್ವಚ್ಛ ಪರಿಸರವಿದ್ದಲ್ಲಿ ಸ್ವಚ್ಛಂದ ಬದುಕು ಸಾಧ್ಯ“ -ಕರುಣಾಕರ ಎಂ.ಶೆಟ್ಟಿ. ಸುರತ್ಕಲ್ ಬಂಟರ ಸಂಘದಲ್ಲಿ ಸಸಿ ವಿತರಣೆ, ಸಾಧಕರಿಗೆ ಸನ್ಮಾನ

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್, ರೋಟರಿ ಕ್ಲಬ್ ಬೈಕಂಪಾಡಿ ಹಾಗೂ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಸುರತ್ಕಲ್ ಇದರ ಸಹಯೋಗದಲ್ಲಿ ಮೇಬೈಲು ಸದಾಶಿವ ಶೆಟ್ಟಿ ನೇತೃತ್ವದಲ್ಲಿ 15ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ ಕಾರ್ಯಕ್ರಮ ಆದಿತ್ಯವಾರ ಇಲ್ಲಿನ ಬಂಟರ ಭವನದಲ್ಲಿ ಜರುಗಿತು.ಉದ್ಘಾಟನೆಯನ್ನು ನೆರವೇರಿಸಿ ಮಾತಾಡಿದ ವಿ.ಕೆ ಸಮೂಹ ಸಂಸ್ಥೆ ಮುಂಬಯಿ ಇದರ ಸಿಎಂಡಿ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಅವರು, “ಸಸಿ ವಿತರಣೆ ಬರೀ ಕಾಟಾಚಾರದ ಕಾರ್ಯಕ್ರಮವಾಗಬಾರದು. ಮನೆಗೆ ಕೊಂಡೊಯ್ದ ಗಿಡವನ್ನು ಮಕ್ಕಳ ಕೈಯಲ್ಲಿ ನೆಡುವಂತೆ ಸಲಹೆ ನೀಡಬೇಕು. ಇದರಿಂದ ಅವರಿಗೂ ಪ್ರಕೃತಿ ಮತ್ತು ಪರಿಸರ ರಕ್ಷಣೆಯ ಕಾಳಜಿ ಮತ್ತು ಪ್ರೀತಿ ಬೆಳೆಯುತ್ತದೆ. ಯಾವ ಗಿಡವೂ ಸಾಯದಂತೆ ನೋಡಿಕೊಳ್ಳಬೇಕು. ಮರಗಳನ್ನು ಬೇಕಾಬಿಟ್ಟಿ ಕಡಿಯುತ್ತಿರುವ ಈ ವೇಳೆಯಲ್ಲಿ ಇದೊಂದು ಸಾರ್ಥಕ ಕಾರ್ಯಕ್ರಮವಾಗಿದೆ. ಸ್ವಚ್ಛ ಪರಿಸರ ಇದ್ದಲ್ಲಿ ನಾವೆಲ್ಲರೂ ಸ್ವಚ್ಛಂದವಾಗಿ ಬದುಕಲು ಸಾಧ್ಯ. ಎಲ್ಲರೂ ಈ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ“ ಎಂದರು. ದಿಕ್ಸೂಚಿ ಮಾತನ್ನಾಡಿದ ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ್ ಶೆಟ್ಟಿ ಅವರು, “ಸುರತ್ಕಲ್ ಬಂಟರ ಸಂಘದ ಆಶ್ರಯದಲ್ಲಿ ಹತ್ತು ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇಂದಿನ ಈ ಕಾರ್ಯಕ್ರಮ ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಹಣ್ಣುಗಳ ಗಿಡಗಳನ್ನು ನೆಡುವ ಮೂಲಕ ಪ್ರಾಣಿ ಪಕ್ಷಿಗಳ ಬದುಕಿಗೆ ನಾವು ಸಹಕಾರ ನೀಡಿದಂತಾಗುತ್ತದೆ. ಇದರಿಂದ ಅವುಗಳು ಬೆಳೆ ನಾಶ ಮಾಡುವುದಿಲ್ಲ. ಇಂತಹ ಕಾರ್ಯಕ್ರಗಳು ಹೆಚ್ಚೆಚ್ಚು ನಡೆಯುವ ಮೂಲಕ ಪರಿಸರಸ್ನೇಹಿಗಳಾಗಿ ಬದುಕೋಣ” ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ಸುರತ್ಕಲ್ ಇದರ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ವಹಿಸಿದ್ದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ, ರೋಟರಿ ಕ್ಲಬ್ ಬೈಕಂಪಾಡಿ ಇದರ ಅಧ್ಯಕ್ಷ ಹರೀಶ್ ಶೆಟ್ಟಿ, ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಇದರ ಅಧ್ಯಕ್ಷ ರಮೇಶ್ ಶೆಟ್ಟಿ, ಕೃಷಿ ಸಮಿತಿ ಸಂಚಾಲಕ ಮೇಬೈಲು ಸದಾಶಿವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಭಾರತೀಯ ವಾಯುಸೇನೆ ಮಾಜಿ ಯೋಧ ಜೆಡಬ್ಲ್ಯೂ ಮಹಾಬಲ ಭಂಡಾರಿ, ಅರಣ್ಯ ಇಲಾಖೆ ಎಸಿಎಫ್ಓ ಪಿ. ಶ್ರೀಧರ್, ನಾಗರಿಕ ಸಮಿತಿ (ರಿ) ಮಂಗಳೂರು ತಾಲೂಕು ಇದರ ಅಧ್ಯಕ್ಷ ಶುಭಾಶ್ಚಂದ್ರ ಶೆಟ್ಟಿ ಹೊಸಬೆಟ್ಟು, ಮೂಡಬಿದ್ರಿಯ ಸಸ್ಯ ಸಾಮ್ರಾಜ್ನಿ ಅಸ್ಮಭಾನು, ಸಮಾಜ ಸೇವಕ ಸತೀಶ್ ಸದಾನಂದ, ಕೃಷಿಕ ಸತೀಶ್ ಎಂ ಶೆಟ್ಟಿ ಪಂಜ ಬೈಲಗುತ್ತು ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕೃಷಿ ಸಮಿತಿ ಸಂಚಾಲಕ ಮೇಬೈಲು ಸದಾಶಿವ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿದರು. ಹರೀಶ್ ಶೆಟ್ಟಿ ಇಡ್ಯ ವಂದಿಸಿದರು. ಅರ್ಪಿತಾ ಶಿಶಿರ್ ಶೆಟ್ಟಿ ಕಾರ್ಯಕ್ರಮ‌ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

ಜು.28ರಂದು ಕಿನ್ನಿಗೋಳಿಯಲ್ಲಿ “ಮುದುಕನ ಮದುವೆ” ಶ್ರೀ ನಂದಿಕೇಶ್ವರ ನಾಟಕ ಸಂಘದ 40ನೇ ವಾರ್ಷಿಕೋತ್ಸವ ಸಂಭ್ರಮ

ಮಂಗಳೂರು: ಜುಲೈ 28ರಂದು ಭಾನುವಾರ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಶ್ರೀ ನಂದಿಕೇಶ್ವರ ನಾಟಕ ಸಂಘದ 40ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಯಿಂದ ರಾತ್ರಿ 10ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಬಳಿಕ “ಮುದುಕನ ಮದುವೆ” ತುಳು ಕನ್ನಡ ಮಿಶ್ರಿತ ಹಾಸ್ಯ ನಾಟಕದ ಉಚಿತ ಪ್ರದರ್ಶನ ನಡೆಯಲಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಯುಗಪುರುಷ ಪತ್ರಿಕೆ ಸಂಪಾದಕ ಭುವನಾಭಿರಾಮ ಉಡುಪ ಮಾತನಾಡಿ, “ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ರಾಜ್ಯದಾದ್ಯಂತ ಹೆಸರುವಾಸಿಯಾಗಿರುವ ಶ್ರೀ ನಂದಿಕೇಶ್ವರ ನಾಟಕ ಸಂಘವು ದಿ. ಪಿ.ಬಿ. ರೈ ಅವರ ಸವಿನೆನಪಿಗಾಗಿ 40ನೇ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮುದುಕನ ಮದುವೆ ಅನ್ನುವ ನಾಟಕವನ್ನು ಆಯೋಜಿಸಿದ್ದಾರೆ. ಹಿಂದೆ ಈ ನಾಟಕ ಜನರ ಮನಸ್ಸನ್ನು ಗೆದ್ದಿದ್ದು ಈಗ ಮತ್ತೊಮ್ಮೆ ಗ್ರಾಮೀಣ ಭಾಗದಲ್ಲಿ ಜನರನ್ನು ಸೆಳೆಯುವಲ್ಲಿ ಯಾವುದೇ ಸಂಶಯವಿಲ್ಲ. ಈ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಸಹಕಾರ ಖಂಡಿತ ಬೇಕು“ ಎಂದರು.ಬಳಿಕ ಮಾತಾಡಿದ ಶೋಭಾ ರೈ ಅವರು, ”ಹಿಂದೆ ಮುದುಕನ ಮದುವೆ ನಾಟಕದಲ್ಲಿ ಅಭಿನಯಿಸಿದ್ದ ಬಹುತೇಕ ಕಲಾವಿದರು ನಾಡಿದ್ದು ನಡೆಯಲಿರುವ ನಾಟಕದಲ್ಲಿ ಬಣ್ಣ ಹಚ್ಚಲಿದ್ದಾರೆ. ದೀಪಕ್ ರೈ ಪಾಣಾಜೆ, ರಾಘವೇಂದ್ರ ರೈ, ಕವಿತಾ ಚನ್ನಪಟ್ಟಣ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ“ ಎಂದರು.ಪತ್ರಿಕಾಗೋಷ್ಟಿಯಲ್ಲಿ ರಾಘವೇಂದ್ರ ರೈ, ಶಿಲ್ಪಾ, ಪತ್ರಕರ್ತ ಶರತ್ ಶೆಟ್ಟಿ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ರೆಡ್‌ಕ್ರಾಸ್‌ನ ಸೇವಾ ಕಾರ್ಯಗಳಿಗೆ ಸಹಕಾರ-ಸಂಸದ ಕ್ಯಾ.ಬ್ರಿಜೇಶ್ ಚೌಟ

ಮಂಗಳೂರು : ಮಾನವೀಯ ಸೇವೆ ಮತ್ತು ಸಮಾಜ ಸೇವಾ ಕಾರ್ಯದಲ್ಲಿ ಪರಿಪೂರ್ಣವಾಗಿ ತೊಡಗಿಸಿ ಕೊಂಡಿರುವ ರೆಡ್‌ಕ್ರಾಸ್ ಸೊಸೈಟಿಯ ಬಲವರ್ಧನೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ವತಿಯಿಂದ ಸಂಸದರ ಕಚೇರಿಯಲ್ಲಿ ಶನಿವಾರ ಗೌರವ ಸ್ವೀಕರಿಸಿದ ಅವರುರೆಡ್‌ಕ್ರಾಸ್ ಸೊಸೈಟಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.ದ.ಕ.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 6 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡಕ್ಕೆ ಅಗತ್ಯ ನೆರವು ಒದಗಿಸಲಾಗುವುದು. ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿ ಅವರನ್ನು ಅಥವಾ ಕೇಂದ್ರದ ಆರೋಗ್ಯ ಸಚಿವರನ್ನು ಆಹ್ವಾನಿಸಲು ಪ್ರಯತ್ನಿಸುವುದಾಗಿ ಸಂಸದರು ತಿಳಿಸಿದರು.ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅವರು ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಗೌರವಿಸಿದರು. ಆಡಳಿತ ಮಂಡಳಿ ನಿರ್ದೇಶಕರಾದ ಡಾ.ಬಿ.ಸಚ್ಚಿದಾನಂದ ರೈ, ಪುಷ್ಪರಾಜ್ ಜೈನ್, ಪಿ.ಬಿ.ಹರೀಶ್ ರೈ, ಗುರುದತ್ತ್ ಎಂ.ನಾಯಕ್, ವಿಠಲ ಎ. , ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ಸಂತೋಷ್‌ಕುಮಾರ್ ರೈ ಬೋಳಿಯಾರ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಗುಡ್ಡ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತ, ತುರ್ತಾಗಿ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಪತ್ರ ಬರೆದ ಕ್ಯಾಪ್ಟನ್ ಬ್ರಿಜೇಶ್ ಚೌಟ.

ವ್ಯಾಪಕ ಮಳೆಯಿಂದಾಗಿ ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮುಖ್ಯ ಎರಡೂ ರಾಷ್ಟೀಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತದಿಂದ ವಾಹನ ಸಂಪರ್ಕ ಕಡಿತವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಮತ್ತು ಮೈಸೂರು ಡಿಆರ್‌ಎಮ್ ಅವರಿಗೆ ಮಂಗಳೂರು- ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಪ್ರಾರಂಭಿಸುವಂತೆ ಪತ್ರ ಬರೆದು ವಿನಂತಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಮಂಗಳೂರು- ಬೆಂಗಳೂರು ನಗರಗಳ ನಡುವೆ ನಿತ್ಯ ಪ್ರಯಾಣಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಇತರ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣದಿಂದ ಹೆಚ್ಚುವರಿ ರೈಲು ಸೇವೆಯನ್ನು ಒದಗಿಸುವ ಅಗತ್ಯತೆಯಿದ್ದು. ಶೀಘ್ರದಲ್ಲಿ ಹೆಚ್ಚುವರಿ ರೈಲ್ವೆ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ವಿನಂತಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಕುಟುಂಬ ವೈದ್ಯ ಪದ್ಧತಿ ಅಂದು ಇಂದು ಮುಂದೂ. ಈ ಬಾರಿಯ ಕುಟುಂಬ ವೈದ್ಯರ ರಾಜ್ಯ ಸಮ್ಮೇಳನ ಅಕ್ಟೋಬರ್ 20 ರಂದು ಮಂಗಳೂರಲ್ಲಿ ನಡೆಯಲಿದೆ -ಡಾ. ಅಣ್ಣಯ್ಯ ಕುಲಾಲ್.

ಮಂಗಳೂರು : ಹತ್ತು ವರ್ಷಗಳ ಬಳಿಕ ಮತ್ತೊಮ್ಮೆ ಕುಟುಂಬ ವೈದ್ಯರ ರಾಜ್ಯ ಸಮ್ಮೇಳನವನ್ನ ಮಾಡುವ ಅವಕಾಶ ಮಂಗಳೂರಿಗೆ ದೊರೆತಿದೆ. ಭಾರತೀಯ ವೈದ್ಯಕೀಯ ಸಂಘದ ಕುಟುಂಬ ವೈದ್ಯರ ವಿಭಾಗ ಮತ್ತು ಇಪ್ಪತ್ತನೇ ವರ್ಷದ ಸಂಭ್ರಮದಲ್ಲಿ ಇರುವ ಮಂಗಳೂರಿನ ಕುಟುಂಬ  ವೈದ್ಯರಸಂಘ ಆಶ್ರಯದಲ್ಲಿ ಈ ಬಾರಿ ರಾಜ್ಯಕುಟುಂಬವೈದ್ಯರ ಸಮ್ಮೇಳನ ಜರುಗಲಿದೆ ಎಂದು ಅಧ್ಯಕ್ಷರಾದ ಡಾ ಎಂ. ಅಣ್ಣಯ್ಯ ಕುಲಾಲ್ ಉಲ್ತೂರು ತಿಳಿಸಿದರು. ನಗರದಲ್ಲಿ ಕುಟುಂಬ ವೈದ್ಯರ ಸಂಘಟನೆಯಲ್ಲಿ ನ್ಯೂಮೋನಿಯಾ ಬಗ್ಗೆ ಜರುಗಿದ ವೈದ್ಯಕೀಯ ಕಾರ್ಯಾಗಾರದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತಾಡುತ್ತಿದ್ದರು. 2024 ರ ಅಕ್ಟೋಬರ್ ತಿಂಗಳ 20 ರಂದು ಮಂಗಳೂರಲ್ಲಿ ಜರುಗುವ ರಾಜ್ಯ ಕುಟುಂಬ ವೈದ್ಯರ ಸಮ್ಮೇಳನಕ್ಕೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಐಎಂಎ ಹಾಗೂ ಕುಟುಂಬ ವೈದ್ಯರ ಸಂಘಟನೆಯ ಹಿರಿಯ ಹಾಗೂ ತಜ್ಞ ನಾಯಕರುಗಳು ಭಾಗವಹಿಸುತ್ತಿದ್ದಾರೆ. ನಶಿಸುತ್ತಿರುವ ಕುಟುಂಬ ವೈದ್ಯಪದ್ಧತಿ( ಫ್ಯಾಮಿಲಿ ಮೆಡಿಸಿನ್) ಉಳಿಯಬೇಕಾದರೆ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳ ಹಾಗೂ ಇಂಟರ್ನ್ ಗಳ ಗಮನ ಸೆಳೆದು ಅವರಿಗೆ ಫ್ಯಾಮಿಲಿ ಮೆಡಿಸಿನ್ ಅಗತ್ಯ ಬಗ್ಗೆ ತಿಳಿಹೇಳಲು ಸಿದ್ಧತೆ ಮಾಡಿಕೊಂಡಿದ್ದು. ಕಳೆದ ಹತ್ತು ವರ್ಷಗಳಲ್ಲಿ ಕುಟುಂಬ ವೈದ್ಯರ ಅಂದರೆ ಎಂಬಿಬಿಎಸ್ ಮಾಡಿ ಪ್ರಾಕ್ಟೀಸ್ ಮಾಡುವವರ ಸಂಖ್ಯೆ ತುಂಬಾ ಕ್ಷೀಣಿಸಿದೆ. ಅದಕ್ಕೆ ಈ ಬಾರಿ ಕುಟುಂಬ ವೈದ್ಯ ಪದ್ದತಿ ಅಂದು ಇಂದು ಹಾಗೂ ಮುಂದು ಎಂಬ ಶೀರ್ಷಿಕೆ ಯ ಮೂಲಕ ಒಂದು ದಿನದ ಚಿಂತನ ಮಂಥನದ ಗೋಷ್ಠಿಗಳು ಜರುಗಲಿದ್ದು, ಹಿರಿಯ ತಜ್ಞ ಕುಟುಂಬ ವೈದ್ಯರ ಜೊತೆ ಜಿಲ್ಲಾ ಆರೋಗ್ಯ ವಿಭಾಗ, ಮೆಡಿಕಲ್ ಕಾಲೇಜ್ ಶಿಕ್ಷಕರು, ಜಿಲ್ಲಾಡಳಿತ, ಪೊಲೀಸ್ ವಿಭಾಗ, ಕಾನೂನುವಿಭಾಗ, ಮಾಧ್ಯಮ ಮಂದಿ, ಪ್ರಜ್ಞಾವಂತ ನಾಗರಿಕರನ್ನ ಚರ್ಚೆಯಲ್ಲಿ ಭಾಗವಹಿಸುವಂತೆ ಮಾಡಿ ಕುಟುಂಬ ವೈದ್ಯಪದ್ಧತಿಯಬಗ್ಗೆ ಜನಜಾಗೃತಿಯ ಮೂಡಿಸಿ ಒಂದು ಶ್ರೇಷ್ಠ  ಹಾಗೂ ಅವಶ್ಯ ವೈದ್ಯಪದ್ಧತಿಯನ್ನ ಉಳಿಸುವ ಪ್ರಯತ್ನ ಮಾಡಲಾಗುವುದು. ಐಎಂಎ ಕುಟುಂಬ ವೈದ್ಯರ ವಿಭಾಗದ ರಾಜ್ಯ ಅದ್ಯಕ್ಷರೂ, ವಿಂಶತಿ ಸಂಭ್ರಮದಲ್ಲಿ ಇರುವ ಮಂಗಳೂರು ಕುಟುಂಬ ವೈದ್ಯರ ಸಂಘಟನೆಯ ಅಧ್ಯಕ್ಷರಾಗಿರುವ ಡಾ.ಎಂ ಅಣ್ಣಯ್ಯ ಕುಲಾಲ್ ಉಲ್ತೂರು ಅವರ ಅದ್ಯಕ್ಷತೆಯಲ್ಲಿ ಜರುಗುವ ಈ ಸಮ್ಮೇಳನ ಹಾಗೂ ಗೋಷ್ಠಿಗೆ ಹಿರಿಯ ತಜ್ಞ ಕುಟುಂಬ ವೈದ್ಯರಾದ ಡಾ ಸದಾಶಿವ ಪೊಳನಾಯ ಗೌರವ ಅಧ್ಯಕ್ಷರಾಗಿ, ಇನ್ನೊಬ್ಬ ಹಿರಿಯ ಕುಟುಂಬ ವೈದ್ಯರಾದ ಡಾ ಜಿಕೆ ಭಟ್ ಸಂಕಬಿತ್ತಿಲು ಸಂಘಟನಾ ಕಾರ್ಯದರ್ಶಿಆಗಿ, ಡಾ ಜೆ ಎನ್ ಭಟ್ ಗೋಷ್ಠಿಗಳ ಸಂಚಾಲಕರಾಗಿ, ಡಾ ಶೇಖರ್ ಪೂಜಾರಿ ಅವರನ್ನು ಸಮ್ಮೇಳನದ ಕೋಶಾದಿಕಾರಿಯನ್ನಾಗಿ ಆರಿಸಲಾಯಿತು. ಎಲ್ಲಾ ಮಾಜಿ ಅದ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳ ಸಹಯೋಗದೊಂಡಿದೆ ಸ್ವಾಗತ ಹಾಗೂ ಪ್ರಚಾರ ಸಮಿತಿಯನ್ನ ರಚಿಸಲಾಯಿತು. ಸಮ್ಮೇಳನದಲ್ಲಿ ಮಂಗಳೂರಿನ ಕುಟುಂಬ ವೈದ್ಯರ ಸಂಘಟನೆಯ ಸ್ಥಾಪಕರಲ್ಲಿ ಪ್ರಮುಖರಾದ ಈಗ ನಮ್ಮ ಜೊತೆ ಇಲ್ಲದಿದ್ದರೂ ಸಂಘಟನೆಗೆ ಪ್ರೇರಣೆ ಆಗಿದ್ದ ಡಾ. ಕೆ ಮೋಹನದಾಸ್ ಭಂಡಾರಿ, ಡಾ ಎಂ ಎ ಅರ್ ಕುಡ್ವಾ, ಹಾಗೂ ಡಾ ಜಯಪ್ರಕಾಶ್ ಖಂಡಿಗೆಯವರ ಹೆಸರಲ್ಲಿ ಗೋಷ್ಠಿಗಳನ್ನು ಏರ್ಪಡಿಸಲು ಚರ್ಚಿಸಲಾಯಿತು. ಶೈಕ್ಷಣಿಕ ಕಾರ್ಯಾಗಾರದಲ್ಲಿ ನ್ಯೂಮೋನಿಯಾ ಕಾಯಿಲೆಬಗ್ಗೆ ಪರಿಣಾಮಕಾರಿಯಾಗಿ ಉಪನ್ಯಾಸನೀಡಿದ ಡಾ ಅಲ್ಕಾ ಭಟ್ ಅವರನ್ನು ಗೌರವಿಸಲಾಯಿತು. ನಗರದ ಯುನಿಟಿ ಆಸ್ಪತ್ರೆಯವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಲ್ತೂರು ಸ್ವಾಗತಿಸಿ ಪರಿಚಯಿಸಿದರು. ಕಾರ್ಯದರ್ಶಿ ಡಾ ಶೇಖರ್ ಪೂಜಾರಿ ನಿರ್ವಹಿಸಿ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ. ಕ್ಯಾಪ್ಟನ್ ಚೌಟರ ಪರ ವ್ಯಾಪಕ ಜನ ಶ್ಲಾಘನೆ

ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಇಂದಿನ ಸಭೆಯಲ್ಲಿ ಸಂಸದರ ವಿಶೇಷ ಕೋರಿಕೆಯ ಮೇರೆಗೆ ಸಚಿವರು ತುರ್ತಾಗಿ ಬಿಸಿ ರೋಡ್ ರೈಲ್ವೆ ಸ್ಟೇಷನ್ ಗೆ ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಮತ್ತು ಡಿವಿಷನಲ್ ರೈಲ್ವೆ ಮ್ಯಾನೇಜರ್ ಅವರನ್ನು ಕಳುಹಿಸಿ ನಿಧಾನಗತಿಯ ಹಾಗೂ ಕಳಪೆ ಕಾಮಗಾರಿಯ ಬಗ್ಗೆ ವೀಕ್ಷಿಸಿ ರಿಪೋರ್ಟ್ ನೀಡಲು ಆದೇಶಿಸಿದ್ದರು.ಅದರಂತೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.ಸಂಸದರ ಈ ರೀತಿಯ ತುರ್ತು ಕಾರ್ಯವೈಖರಿಗೆ ಎಲ್ಲ ಕಡೆಯಿಂದಲೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತಿದ್ದಾರೆ

ಪ್ರಾದೇಶಿಕ ವಾರ್ತೆಗಳು

ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ಕ್ಷೇತ್ರದಲ್ಲಿ ಗಲಾಟೆ ಸಂಸಾರ ಧಾರಾವಾಹಿಯ ಸಾಮಾಜಿಕ ನೆರವಿನೊಂದಿಗೆ ಶುಭ ಮುಹೂರ್ತ

ಮೂಲ್ಕಿ : ಇಲ್ಲಿನ ಬಳ್ಕುಂಜೆ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಸ್ಥಾನದಲ್ಲಿ ನಡೆದ ಶ್ರೀಗುರುನಮನಸಂತೃಪ್ತಿ ಫಿಲ್ಮ್ಸ್‌ನ ಗಲಾಟೆ ಸಂಸಾರದ ಶುಭ ಮುಹೂರ್ತದಂದು ಕಲಾವಿದರಿಗೆ ಸನ್ಮಾನ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಯನ್ನು ನಡೆಸಲಾಯಿತು.ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಸ್ಥಾನದ ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್ ಅವರು ಆಶೀರ್ವಾದ ನೀಡಿ, ಜನಜಾಗೃತಿ ಮೂಡಿಸುವಂತಹ ಕಥಾವಸ್ತುವಿನ ಸಿನಿಮಾಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಮೂಡುತ್ತದೆ. ಉತ್ತಮ ಸಧಭಿರುಚಿಯ ಧಾರಾವಾಹಿಗಳು ನಿರಂತರವಾಗಿ ಪ್ರಸಾರ ಆಗಬೇಕು, ಜನರ ಮೂಡನಂಬಿಕೆಗಳನ್ನು ದೂರ ಮಾಡುವ ಕೆಲಸ ಆಗಬೇಕು ಎಂದರು.ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಜನಪ್ರಿಯತೆಯೊಂದಿಗೆ ಸಮಾಜದಲ್ಲಿ ಉತ್ತಮ ಸಂದೇಶ ನೀಡುವ ಧಾರಾವಾಹಿಯಾಗಿ ಗಲಾಟೆ ಸಂಸಾರ ಮೂಡಿಬರಲಿ, ಸಾಮಾಜಿಕ ಜಾಲತಾಣದಲ್ಲಿನ ಉತ್ತಮ ಅವಕಾಶವನ್ನು ಪಡೆದುಕೊಂಡು ಈ ಧಾರಾವಾಹಿ ಜನರ ಮೆಚ್ಚುಗೆಯನ್ನುಗಳಿಸಲಿ ಎಂದು ಹೇಳಿದರು.ಕಿನ್ನಿಗೋಳಿಯ ಯುಗಪುರುಷದ ಕೆ. ಭುವನಾಭಿರಾಮ ಉಡುಪ ಅವರು ಪ್ರಥಮ ದೃಶ್ಯಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.ಸಮಾಜ ಸೇವಕಿ ಶಾಂಭವಿ ಶಿವರಾಂ ಶೆಟ್ಟಿ ಮುಚ್ಚೂರು ಕ್ಯಾಮರಾಗೆ ಚಾಲನೆ ನೀಡಿದರು.ಕಿನ್ನಿಗೋಳಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಸ್ವರಾಜ್ ಶೆಟ್ಟಿ ಅವರು ಕಲಾವಿದರಾದ ನಯನ ಪಡುಬಿದ್ರಿ, ಸುರೇಶ್ ಶೆಟ್ಟಿಗಾರ್ ಕೆರೆಕಾಡು, ಪೂರ್ಣೀಮಾ ಸುರತ್ಕಲ್ ಅವರನ್ನು ವಿಶೇಷವಾಗಿ ಸನ್ಮಾನಿಸಿದರು.ಕಿನ್ನಿಗೋಳಿ ಲಯನ್ಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷೆ ಹಿಲ್ಡಾ ಡಿಸೋಜಾ ಹಾಗೂ ಕಿನ್ನಿಗೋಳಿ ವಿಜಯ ಕಲಾವಿದರ ತಂಡದ ಅಧ್ಯಕ್ಷ ಶರತ್ ಶೆಟ್ಟಿ ಅವರು ಎರಡು ಕುಟುಂಬಕ್ಕೆ ಉಚಿತ ಪಡಿತರವನ್ನು ವಿತರಿಸಿದರು.ಹಿರಿಯ ರಂಗಕರ್ಮಿ ಸುರೇಶ್ ವರ್ಕಾಡಿ, ಪತ್ರಕರ್ತ ರೋಶನ್ ಡಿಕ್ರೂಸ್, ಸಿನಿಮಾ ನಿರ್ಮಾಪಕ ಲಾನ್ಸಿ ಕುವೆಲ್ಲೋ, ಕಲಾವಿದರಾದ ನಾಗರಾಜ್ ಪೂಜಾರಿ ಬಪ್ಪನಾಡು, ವಿಲ್ಫ್ರೆಡ್ ಕೊಲ್ಲೂರು, ಧರ್ಮಾನಂದ ಶೆಟ್ಟಿಗಾರ್ ತೋಕೂರು, ಕಾವ್ಯ ಕೊಡೆತ್ತೂರು ಮತ್ತಿತರರು ಉಪಸ್ಥಿತರಿದ್ದರು.ಧಾರಾವಾಹಿಯ ನಿರ್ದೇಶಕ ದೇವಿಪ್ರಕಾಶ್ ಮಂಗಳೂರು ಸ್ವಾಗತಿಸಿದರು, ಛಾಯಾಗ್ರಾಹಕ ಹರೀಶ್ ಪಿ. ಕೋಟ್ಯಾನ್ ಪಡುಪಣಂಬೂರು ವಂದಿಸಿದರು, ಕಲಾವಿದ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಸೋನೆ ಮಳೆ- ಹಸಿರು ಇಳೆ ಕವಿಗೋಷ್ಠಿ. ‘ಪರರಿಗೆ ನೆರಳಾಗುವ ಬದುಕು ನಮ್ಮದಾಗಲಿ’ ವಿದ್ಯಾರತ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಆಶಯ.

ಮಂಗಳೂರು : ಮರಗಳು ಬಿಸಿಲಿಗೆ ಬಾಡಿದರೂ ತಂಪಾದ ನೆರಳು ನೀಡುತ್ತವೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾನವ ಬದುಕಿಗೆ ನೆರವಾಗುತ್ತಿರುವ ಪ್ರಕೃತಿಯಿಂದ ನಾವು ಪ್ರೇರಣೆ ಪಡೆಯಬೇಕು. ಪರರಿಗೆ ನೆರಳಾಗುವ ಬದುಕು ನಮ್ಮದಾಗಬೇಕು ಎಂದು ದೇರಳಕಟ್ಟೆಯ ವಿದ್ಯಾರತ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದ.ಕ.ಜಿಲ್ಲಾ ಸಮಿತಿ ವತಿಯಿಂದ ಅರಣ್ಯ ಇಲಾಖೆ ಮತ್ತು ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಸಹಯೋಗದಲ್ಲಿ ನಗರದ ಲಾಲ್‌ಬಾಗ್‌ನ ಇಂದಿರಾ ಪ್ರಿಯದರ್ಶಿನಿ ಪಾರ್ಕ್‌ನಲ್ಲಿ ಬುಧವಾರ ನಡೆದ ವನಮಹೋತ್ಸವ ಹಾಗೂ ಸೋನೆ ಮಳೆ-ಹಸಿರು ಇಳೆ ಪರಿಸರ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ವನಮಹೋತ್ಸವಕ್ಕೆ ಚಾಲನೆ ನೀಡಿದ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ್ ಶೆಟ್ಟಿ ಮಾತನಾಡಿ ‘ ಮಾನವ ಸ್ವಾರ್ಥದಿಂದ ಪ್ರಕೃತಿ ನಾಶವಾಗುವುದನ್ನು ತಡೆಯಲು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರ ನಡೆಯಬೇಕಾಗಿದೆ ಎಂದರು. ಅಭಾಸಾಪ ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಕವಿಗಳಿಗೆ ಅಭಿನಂದನಾ ಪತ್ರ ವಿತರಿಸಿದರು. ಮಂಂಗಳೂರು ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಕಾರ್ಪೋರೇಟರ್ ಸಂಧ್ಯಾ ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ಅಭಾಸಾಪ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷೆ ಮೀನಾಕ್ಷಿ ರಾಮಚಂದ್ರ, ಪರಿಸರವಾದಿ ಕೃಷ್ಣಪ್ಪ ಉಪಸ್ಥಿತರಿದ್ದರು. ಅಭಾಸಾಪ ಜಿಲ್ಲಾ ಕೋಶಾಧಿಕಾರಿ ಭಾಸ್ಕರ ರೈ ಕಟ್ಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ ಕಾರ್ಯಕ್ರಮ ನಿರೂಪಿಸಿದರು.ಹಿರಿಯ ಕವಿ ಗುಣಾಜೆ ರಾಮಚಂದ್ರ ಭಟ್ ಕವಿಗೋಷ್ಠಿಗೆ ಚಾಲನೆ ನೀಡಿದರು. ಡಾ.ಸುರೇಶ್ ನೆಗಳಗುಳಿ ಗೋಷ್ಠಿಯಅಧ್ಯಕ್ಷತೆ ವಹಿಸಿದ್ದರು. ರೇಖಾ ಸುದೇಶ್ ರಾವ್ ನಿರೂಪಿಸಿದರು.**ಸೋನೆ ಮಳೆ- ಹಸಿರು ಇಳೆಕವಿಗೋಷ್ಠಿಯಲ್ಲಿ ಸುಮನಾ ಘಾಟೆ, ರೇಣುಕಾ ಸುಧೀರ್, ಗೀತಾ ಲಕ್ಷ್ಮೀಶ, ವಿದ್ಯಾಶ್ರೀ ಅಡೂರು, ಅರುಣಾ ನಾಗರಾಜ್, ದಿವ್ಯಾ .ಎ ಗಿರೀಶ್, ಚಂದನಾ ಕಾರ್ತಟ್ಟು, ಕೊಳ್ಚಪ್ಪೆ ಗೋವಿಂದ ಭಟ್, ರೇಖಾ ಸುದೇಶ ರಾವ್, ನಿಶಾನ್ ಅಂಚನ್, ಮನ್ಸೂರ್ ಮೂಲ್ಕಿ, ವೆಂಕಟೇಶ ಗಟ್ಟಿ, ಉಮೇಶ ಕಾರಂತ, ರಾಣಿ ಪುಷ್ಪಲತಾ ದೇವಿ,ಅನುರಾಧಾ ರಾಜೀವ್, ಸುಲೋಚನಾ ನವೀನ್, ದೀಪಾ ಜಿ .ಎಂ.,ಅನಿತಾ ಶೆಣೈ , ರೇಖಾ ಸುದೇಶ್ ರಾವ್ ಇವರುಗಳು ಸ್ವರಚಿತ ಕವನ ವಾಚಿಸಿದರು.**ಹಸಿರು ಮಂಗಳೂರುಮೇಯರ್ ಆಶಯಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ ಮಂಗಳೂರಿನ ಜನತೆಗೆ ಸ್ವಚ್ಛ ಹಾಗೂ ಹಸುರಿನಿಂದ ಕೂಡಿದ ಪರಿಸರ ಲಭಿಸಲು ಮಂಗಳೂರು ಮಹಾ ನಗರ ಪಾಲಿಕೆ ವಿಶೇಷ ಆದ್ಯತೆ ನೀಡಿದೆ. ಜನತೆಯ ಸಹಕಾರದಿಂದ ಹಸಿರು ಮಂಗಳೂರು ಸಾಕಾರವಾಗಲಿದೆ ಎಂದರು.

Scroll to Top