ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ನಳಿನ್ ಕುಮಾರ್ ಕಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿ ಆತ್ಮೀಯ ಸನ್ಮಾನ ಸ್ವೀಕರಿಸಿದ ಕೇಂದ್ರ ಸಚಿವ ವಿ. ಸೋಮಣ್ಣ

ಮಂಗಳೂರಿಗೆ ಆಗಮಿಸಿದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆಗಳ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರ ನಿವಾಸಕ್ಕೆ ಇಂದು ಬೆಳಿಗ್ಗೆಆಗಮಿಸಿ ಆತ್ಮೀಯ ಆತಿಥ್ಯ ಸ್ವೀಕರಿಸಿದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಮತ್ತು ಜಲಶಕ್ತಿ ಯೋಜನೆಗಳಿಗೆ ಅವರಿಂದ ಇನ್ನಷ್ಟು ವೇಗ ಮತ್ತು ಆಗಬೇಕಿರುವ ಹೊಸ ಯೋಜನೆಗಳಿಗೆ ತುಂಬು ಹೃದಯದ ಸಹಕಾರ ದೊರಕುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಸಂಸದರಾದ ಕ್ಯಾ| ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಮೇಯರ್ ಸುದೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಜಿಲ್ಲಾ ಅದ್ಯಕ್ಷರಾದ ಸತೀಶ್ ಕುಂಪಲ, ಪ್ರಮುಖರಾದ ಸಂಜೀವ ಮಠಂದೂರು,ಕಿಶೋರ್ ಕುಮಾರ್ ,ದಿವಾಕರ ಪಾಂಡೇಶ್ವರ,ರಮೇಶ್ ಕಂಡೆಟ್ಟು, ಗಣೀಶ್ ಕುಲಾಲ್, ರಾಹುಲ್ ಶೆಟ್ಟಿ, ಗೌತಮ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಖ್ಯಾತ ಹೋಟೆಲ್ ಉದ್ಯಮಿ, ಸಮಾಜ ಸೇವಕ ರಾಜೇಂದ್ರ ವಿ. ಶೆಟ್ಟಿ ಅವರಿಗೆ ಕರುನಾಡ ರತ್ನ ರಾಜ್ಯ ಪ್ರಶಸ್ತಿ. ಇವರ ಅನನ್ಯ ಸಾಧನೆಯನ್ನು ಪರಿಗಣಿಸಿ ಡಾ.ಅಶೋಕ್ ಶೆಟ್ಟಿ ಬಿ. ಎನ್. ಸಾರಥ್ಯದ Mp mla’s tv 24×7 ನ್ಯೂಸ್ ಪೋರ್ಟಲ್ ಮತ್ತು Mp mla’s news ಪತ್ರಿಕೆಯು ಅಕ್ಟೋಬರ್ 13 ರಂದು ಆದಿತ್ಯವಾರ ಸಂಜೆ 5 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯುವ 13ನೇ ಸೌಹಾರ್ದ ಸಂಗಮದಲ್ಲಿ ಕರುನಾಡ ರತ್ನ ರಾಜ್ಯ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಿದೆ.ಈ ಬಗ್ಗೆ ರಾಜೇಂದ್ರ ವಿ. ಶೆಟ್ಟಿ ಅವರ ಸಾಧನಶೀಲ ಬದುಕಿನ ಯಶೋಗಾಥೆ.

ಹುಬ್ಬಳ್ಳಿ : ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಬಡ ಕುಟುಂಬವೊಂದರಲ್ಲಿ ಜನಿಸಿದ ರಾಜೇಂದ್ರ ಶೆಟ್ಟಿ ಬಾಲ್ಯದಲ್ಲೇ ಬಡತನದ ಬೇಗೆ ಅನುಭವಿಸಿದವರು. ಅವರ ತಂದೆ ತಾಯಿ ಕುಟುಂಬದೊಂದಿಗೆ ಉಡುಪಿಯಿಂದ ಹುಬ್ಬಳ್ಳಿಗೆ ವಲಸೆ ಬಂದಾಗ ರಾಜೇಂದ್ರ ಶೆಟ್ಟಿಯವರು ಬಾಲಕನಾಗಿದ್ದರು. ಹೇಗೋ ಕಷ್ಟಪಟ್ಟು 8ನೇ ತರಗತಿಯವರೆಗೆ ಓದಿದರು. ಆದರೆ, ಫೇಲ್ ಆದರು. ಮುಂದೆ,ಅವರು ಉದ್ಯೋಗಕ್ಕಾಗಿ ಮನೆಯಲ್ಲಿ ಯಾರಿಗೂ ಹೇಳದೆ ರೈಲು ಹತ್ತಿದರು. ಅದು ಹೋಗಿ ನಿಂತದ್ದು ಮುಂಬೈಯಲ್ಲಿ, ಅಲ್ಲಿ ರೈಲ್ವೇ ಸ್ಟೇಷನ್ ಅಕ್ಕಪಕ್ಕದಲ್ಲಿ ಚಹಾ ಮಾರುವ ಕೆಲಸ ಮಾಡಿದರು. ಆರಂಭದಲ್ಲಿ ಬೀದಿ ಬದಿಯಲ್ಲಿ ಮಲಗಿ ಕೆಲಸ ಹುಡುಕುತ್ತಾ ಅಲ್ಲಿನ ಹೊಟೇಲ್‌ಗಳಿಗೆ ಕೆಲಸಕ್ಕಾಗಿ ಅಲೆದಾಡಿದರು. ಮುಂದೆ, ಅವರಿಗೆ ಹೊಟೇಲ್‌ನಲ್ಲಿ ಕ್ಲೀನರ್ ಕೆಲಸ ಸಿಗುತ್ತದೆ. ವಿವಿಧ ಹೋಟೆಲ್‌ಗಳಲ್ಲಿ ಅಡುಗೆ ಮನೆಯ ಕೆಲಸ, ಕ್ಲೀನರ್, ವೇಟರ್, ಕ್ಯಾಪ್ಟನ್ ನಂತಹ ನಾನಾ ತರಹದ ಕೆಲಸಗಳನ್ನು ಮಾಡಿದರು. ಆ ಬಳಿಕ ದೇವತಾ ಮನುಷ್ಯರಂಥ ಮಾಲಕರೊಬ್ಬರು ಸಿಕ್ಕಿದ್ದರಿಂದ ಅವರ ಹೊಟೇಲ್‌ನಲ್ಲಿ 12 ವರ್ಷಗಳ ಕಾಲ ಮೆನೇಜರ್ ಆಗಿ ದುಡಿದರು. ಮುಂಬೈಗೆ ಬಂದಾಗ ಅವರಿಗೆ 13 ರಿಂದ 14 ವರ್ಷ ಆಗಿತ್ತು. ಅಲ್ಲಿ 18 ವರ್ಷಗಳ ತನಕ ಒಟ್ಟು 45 ಹೊಟೇಲ್‌ಗಳಲ್ಲಿ ದುಡಿದರು. ಅಪಾರ ಅನುಭವ ಗಳಿಸಿದರು.ತದನಂತರ, ಅವರು ತಾಯಿಯವರಿಗೆ ಫೋನ್ ಮಾಡಿ ಮುಂಬೈಯಲ್ಲಿ ಮನೆ ಮಾಡುತ್ತೇನೆ. ಬಂದು ನೆಲೆಸಿ ಎಂದಾಗ ಅವರ ತಾಯಿಯವರು ತಾನು ಸತ್ತರೂ ಬರೋಲ್ಲ ಎಂದರು. ತಾಯಿ ಲೀಲಾವತಿ ಅವರ ಮೇಲೆ ರಾಜೇಂದ್ರ ಶೆಟ್ಟಿಯವರಿಗೆ ಅತೀವ ಪ್ರೀತಿ. ತಾಯಿಯೆಂದರೆ ಪಂಚಪ್ರಾಣ. ಅವರ ಪಾಲಿಗೆ ಪ್ರತ್ಯಕ್ಷ ದೇವರು. ಈ ಕಾರಣಕ್ಕಾಗಿಯೇ ತನ್ನ ತಾಯಿಗಾಗಿ ಮುಂಬೈ ಬಿಟ್ಟು ಅಲ್ಲಿನ ಅಸಂಖ್ಯಾತ ಸ್ನೇಹಿತರ ಫ್ರೆಂಡ್ಸ್ ಸರ್ಕಲ್ ತೊರೆದರು. ಹುಬ್ಬಳ್ಳಿಯಲ್ಲಿಯೇ ಹೊಟೇಲ್ ಉದ್ಯಮ ಆರಂಭಿಸಿದ ಅವರು ನವೀನ್ ಕಾಮತ್ ಅವರು ಕೊಟ್ಟ 5೦ ಸಾವಿರ ರೂಪಾಯಿ ಹಣವನ್ನು ಹೊಟೇಲ್ ಉದ್ಯಮಕ್ಕೆ ತೊಡಗಿಸಿಕೊಂಡರು. ಇಂದು ಅದು ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತದೆ. ಮನೆ ದೇವರ ಹೆಸರಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾಂ, ದಾವಣಗೆರೆ ಯಲ್ಲಿ ಶ್ರೀಪಂಜುರ್ಲಿ ಗ್ರೂಪ್ ಆಪ್ ಹೊಟೇಲ್’ ಮತ್ತು ತಾಯಿ ಲೀಲಾವತಿ ಯವರ ಹೆಸರಲ್ಲಿಹೊಟೇಲ್ ಲೀಲಾವತಿ ಪ್ಯಾಲೇಸ್’ ಮತ್ತು ಪೂಜ್ಯ ತಂದೆಯವರ ಹೆಸರಲ್ಲಿ ಪುಣೆಯಲ್ಲಿ ವಿಶ್ವನಾಥ್ ಪ್ಯಾಲೇಸ್ ಸೇರಿದಂತೆ ಒಟ್ಟು 9 ಹೊಟೇಲ್‌ಗಳನ್ನು ಆರಂಭಿಸಿದರು. ದಾವಣಗೆರೆಯಲ್ಲಿ ಒಂದು ಸುಸಜ್ಜಿತ ಕಲ್ಯಾಣ ಮಂಟಪವನ್ನು ಸ್ಥಾಪಿಸಿದರು.ಇಂದು ಅದು ರಾಜ್ಯ, ರಾಷ್ಟ್ರ,ಅಂತರಾಷ್ಟೀಯ ಮಟ್ಟದಲ್ಲಿಯೇ ಖ್ಯಾತಿ ಯನ್ನು ಪಡೆದು ಗ್ರಾಹಕರ ಶ್ಲಾಘನೆಗೆ ಪಾತ್ರವಾಗಿದೆ. ತಾನೊಬ್ಬನೇ ಬೆಳೆಯ ಬೇಕು, ತಾನೊಬ್ಬನೇ ದುಡ್ಡು ಗಳಿಸಬೇಕೆಂಬ ದುರಾಸೆಗೆ ಬೀಳದೆ 2೦ ವರ್ಷಗಳ ಕಾಲ ವಿವಿಧ ಹೊಟೇಲ್‌ಗಳಲ್ಲಿ ಕೆಲಸ ಮಾಡುವಾಗ ತನ್ನ ಜೊತೆಯಲ್ಲಿ ಕೆಲಸ ಮಾಡಿದ, ಸಹಾಯ, ಸಹಕಾರ ನೀಡಿದ, ಅರ್ಹ ಹಾಗೂ ಪ್ರಾಮಾಣಿಕ, ಆತ್ಮೀಯ ಗೆಳೆಯರನ್ನು ಕರೆದು ತನ್ನ ಹೊಟೇಲ್‌ಗಳ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಟ್ಟರು. ಅವರು ಕೂಡಾ ತನ್ನೊಟ್ಟಿಗೆ ಬೆಳೆದು ತಮ್ಮ ಸುಂದರ ಬದುಕು ಕಟ್ಟಿಕೊಳ್ಳಲು ಕಾರಣರಾದರು. ಹೀಗೇ ತನ್ನ ಹೊಟೇಲ್‌ನ ಕಾರ್ಮಿಕರನ್ನೇ ಮಾಲಕರಾಗಿಸಿ ಹಿರಿತನ ಮೆರೆದರು. ಇಂದು ಪಂಜುರ್ಲಿ ಗ್ರೂಪ್ ಆಪ್ ಹೊಟೇಲ್ ಮೂಲಕ ನಾನಾ ಸಂಸ್ಥೆಗಳನ್ನು ಆರಂಭಿಸಿ ಉದ್ಯಮದಲ್ಲಿ ಬಂದ ಹಣದಲ್ಲಿ ಸಮಾಜಸೇವೆಯನ್ನು ಮಾಡುತ್ತಿದ್ದಾರೆ. ಅವರ ತಂದೆಯವರು ತನ್ನ ಮಗ ದಾನಶೂರ ಕರ್ಣನಾಗುತ್ತಾನೆ ಎನ್ನುತ್ತಿದ್ದರು. ಕೊಡುವುದೆಂದರೆ ರಾಜೇಂದ್ರ ಶೆಟ್ಟಿಯವರಿಗೆ ಎಲ್ಲಿಲ್ಲದ ಪ್ರೀತಿ, ಅವರು ಕೊಡುಗೈದಾನಿ, ಬಡವರ ಬಂಧು. ತಾಳ್ಮೆ ಮತ್ತು ಶ್ರದ್ಧೆಯೊಂದಿದ್ದರೆ ಯಶಸ್ಸು ಸಾಧಿಸಬಹುದೆಂಬುವುದಕ್ಕೆ ರಾಜೇಂದ್ರ ಶೆಟ್ಟಿಯವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಯಾವುದೇ ದುರಾಭ್ಯಾಸಗಳಿಲ್ಲದ ರಾಜೇಂದ್ರ ಶೆಟ್ಟಿಯವರು ಸದ್ಗುಣಗಳ ಸಂಪನ್ನ. ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಅಪೂರ್ವ ಸಾಧಕ. ಅವರ ಸಾಧನೆಯ ಹಿಂದೆ ಕಷ್ಟಗಳ ನೆರಳಿದೆ. ಹಠ, ಛಲ, ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠುರತೆ, ಅನುಭವ, ಮಾತೃ ವಾತ್ಸಲ್ಯ ಸೇರಿದಂತೆ ನಂಬಿಕೆ, ವಿಶ್ವಾಸದ ಗುಣವಿದೆ. ಅದೇ ಅವರನ್ನು ಹೊಟೇಲ್ ಉದ್ಯಮದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆಸಿದೆ. ತಾಯಿ, ಮಗಳು, ಹೆಂಡತಿ, ಪ್ರಾಮಾಣಿಕತೆ ಎಂಬ ನಾಲ್ಕು ಸಿದ್ಧಾಂತಗಳೇ ಅವರ ಯಶಸ್ಸಿನ ಬೆನ್ನೆಲುಬುಗಳು. ಹುಬ್ಬಳ್ಳಿ-ಧಾರವಾಡದಲ್ಲಿ ಹೊಟೇಲ್ ಎಂದರೆ ಹಸಿದವನಿಗೆ ಅನ್ನ ಹಾಕುವ ಮನೆಯಿದ್ದಂತೆ. ರಾಜೇಂದ್ರ ಶೆಟ್ಟಿಯವರು ಶ್ರೀ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್, ಹೊಟೇಲ್, ಲೀಲಾವತಿ ಪ್ಯಾಲೇಸ್ ಮೂಲಕ ಹೊಟೇಲ್ ಉದ್ಯಮದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಬಡವರ ಬಂಧುವಾಗಿ ಸಾವಿರಾರು ಜನರ ಹಸಿವು ನೀಗಿಸಿದ್ದಾರೆ. 37 ವರ್ಷಗಳ ಹೊಟೇಲ್ ಉದ್ಯಮದ ಅನುಭವವಿರುವ ಅವರು ಇಂದು ಸಾವಿರಾರು ಉದ್ಯೋಗಿಗಳಿಗೆ ಅನ್ನದಾತ. ಅವರ ಸಾಧನೆ, ಜೀವನ ಶೈಲಿ ಯುವಜನತೆಗೆ ಸ್ಪೂರ್ತಿ. ಅವರು ಕರ್ನಾಟಕದ ಹೆಮ್ಮೆಯ ಸುಪುತ್ರರಾಗಿದ್ದಾರೆ. ಸಾಧನೆಗಳ ಸರದಾರ ರಾಜೇಂದ್ರ ಶೆಟ್ಟಿ:ರಾಜೇಂದ್ರ ಶೆಟ್ಟಿಯವರು ನವೆಂಬರ್ 2೦, 1973 ರಂದು ಉಡುಪಿ ಜಿಲ್ಲೆಯ ಮೂಡುಬೆಟ್ಟು ಮಣಿಪುರ ಗ್ರಾಮದ ದೆಂದೂರುನಲ್ಲಿ ಜನಿಸಿದರು. ಅವರ ತಂದೆ ದಿ. ವಿಶ್ವನಾಥ ಶೆಟ್ಟಿ ಮತ್ತು ತಾಯಿ ಲೀಲಾವತಿ. ಹರೀಶ್ ಮತ್ತು ಅಜಯ್ ಅವರು ರಾಜೇಂದ್ರ ಶೆಟ್ಟಿಯವರ ಸಹೋದರರಾಗಿದ್ದು, ದೀಪಾ ಮತ್ತು ವಿದ್ಯಾ ಸಹೋದರಿಯರು.ರಾಜೇಂದ್ರ ಶೆಟ್ಟಿಯವರ ಧರ್ಮಪತ್ನಿ ಹರಿಣಿ. ಕುಮಾರಿ ವೈಷ್ಣವಿ ಮತ್ತು ಕುಮಾರಿ ವೈಭವಿ ಇವರ ಸುಪುತ್ರಿಯರು.ಹುಬ್ಬಳ್ಳಿ-ಧಾರವಾಡ-ಬೆಳಗಾವಿ-ದಾವಣಗೆರೆ, ಪುಣೆ ಗಳಲ್ಲಿ ಒಟ್ಟು 9 ಹೊಟೇಲ್‌ಗಳನ್ನು ಹೊಂದಿರುವ ಅವರು ದಾವಣಗೆರೆಯಲ್ಲಿ ಸುಸಜ್ಜಿತ ಕಲ್ಯಾಣ ಮಂಟಪವನ್ನು ಹೊಂದಿದ್ದಾರೆ. ಒಟ್ಟು 1೦೦೦ ಮಂದಿ ಉದ್ಯೊಗಿಗಳಿಗೆ ಇವರು ಅನ್ನದಾತರಾಗಿದ್ದಾರೆ. 2005 ರಲ್ಲಿ ಧಾರವಾಡದ ಟೋಲ್ ನಾಕಾದಲ್ಲಿ ಹೊಟೇಲ್ ಶ್ರೀ ಪಂಜುರ್ಲಿ, 2009ರಲ್ಲಿ ಹುಬ್ಬಳ್ಳಿ ಕೋರ್ಟು ಸರ್ಕಲ್‌ನ ಹತ್ತಿರ ಹೊಟೇಲ್ ಶ್ರೀ ಪಂಜುರ್ಲಿ, 2011ರಲ್ಲಿ ಹುಬ್ಬಳ್ಳಿ ವಿದ್ಯಾನಗರದ ಬಿ.ವಿ.ಬಿ. ಎದುರು ಹೊಟೇಲ್ ಶ್ರೀ ಪಂಜುರ್ಲಿ, 2012ರಲ್ಲಿ ಧಾರವಾಡ ಕೆ.ಸಿ. ಪಾರ್ಕು ಎದುರು ಹೊಟೇಲ್ ಶ್ರೀ ಪಂಜುರ್ಲಿ, 2015 ರಲ್ಲಿ ಹುಬ್ಬಳ್ಳಿ ಗೋಕುಲ್ ರಸ್ತೆಯ ನೆಹರು ನಗರದಲ್ಲಿ ಹೊಟೇಲ್ ಶ್ರೀ ಪಂಜುರ್ಲಿ, 2015 ರಲ್ಲಿ ಹುಬ್ಬಳ್ಳಿ ಗೋಕುಲ ರಸ್ತೆ ಓಯಾಸಿಸ್ ಮಾಲ್ ಎದುರು ಹೊಟೇಲ್ ಲೀಲಾವತಿ ಪ್ಯಾಲೇಸ್, 2020 ರಲ್ಲಿ ಬೆಳಗಾವಿಯ ಖಾನಾಪುರ ರಸ್ತೆಯ 3ನೇ ರೈಲ್ವೇ ಗೇಟ್ ಬಳಿ ಶ್ರೀ ಪಂಜುರ್ಲಿ ಫೈನ್ ಡೈನ್, 2022 ರಲ್ಲಿ ದಾವಣಗೆರೆ ಹಳೇ ಬಸ್ ನಿಲ್ದಾಣದ ಹತ್ತಿರ ಹೊಟೇಲ್ ಶ್ರೀ ಪಂಜುರ್ಲಿ ಪ್ಯಾಲೇಸ್, ದಾವಣಗೆರೆ ಹಳೇ ಬಸ್ ನಿಲ್ದಾಣದ ಹತ್ತಿರ 2022 ರಲ್ಲಿ ಲೀಲಾವತಿ ಕಲ್ಯಾಣ ಮಂಟಪವನ್ನು ಸ್ಥಾಪಿಸಿದ್ದಾರೆ.2023 ರಲ್ಲಿ ಪುಣೆಯಲ್ಲಿ ಹೋಟೆಲ್ ವಿಶ್ವನಾಥ್ ಪ್ಯಾಲೇಸ್ ನ್ನು ಆರಂಭಿಸಿದ್ದಾರೆ. ಹುಬ್ಬಳ್ಳಿ ಹೊಟೇಲ್ ಸಂಘದ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಹಾರ ಮಂದಿರಗಳ ಸಂಘ, ಬೆಂಗಳೂರು ಇದರ ಧಾರವಾಡ ಜಿಲ್ಲಾ ಪ್ರತಿನಿಧಿ ಸದಸ್ಯ, ಹುಬ್ಬಳ್ಳಿ-ಧಾರವಾಡ ಬಂಟರ ಸಂಘ, ಹುಬ್ಬಳ್ಳಿ ಇದರ ಸಹ ಕಾರ್ಯದರ್ಶಿ, ವಿಶ್ವ ಬಂಟರ ಸಂಘ ಮುಂಬಯಿ ಇದರ ನಿರ್ದೇಶಕರು, ಧಾರವಾಡ ಹೋಟೆಲ್ ಸಂಘ, ಬೆಳಗಾವಿ ಹೋಟೆಲ್ ಸಂಘ, ದಾವಣಗೆರೆ ಹೋಟೆಲ್ ಸಂಘ, ಪುಣೆ ಹೋಟೆಲ್ ಸಂಘ, ಹುಬ್ಬಳ್ಳಿ ರೋಟರಿ ಕ್ಲಬ್, ಹುಬ್ಬಳ್ಳಿ ಶಿರೂರ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಕಮಿಟಿ ಇವುಗಳಲ್ಲಿ ಸಮಿತಿ ಸದಸ್ಯರಾಗಿ ಗುರುತಿಸಿದ್ದಾರೆ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಹುಬ್ಬಳ್ಳಿ ಇದರ ಗೌರವ ಅಧ್ಯಕ್ಷರಾಗಿದ್ದಾರೆ. ಧಾರವಾಡ ಜಿಲ್ಲಾ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಹುಬ್ಬಳ್ಳಿ ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೋಟೆಲ್ ಉದ್ಯಮದಲ್ಲಿ ಸಾಧಿಸಿದ ಸಾಧನೆಗೆ ಮತ್ತು ಇವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಮಾಧ್ಯಮಗಳು ಇವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಿವೆ. ಬೆಂಗಳೂರಿನ ಕರ್ನಾಟಕ ಸಿರಿ ಸಂಘಟನೆಯು ಕರ್ನಾಟಕ ಉದ್ಯಮ ರತ್ನ ಪ್ರಶಸ್ತಿ ನೀಡಿದೆ.2015 ರಲ್ಲಿ ಹೊನ್ನಾವರದ ಹೊನ್ನಾವರ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ, 2016 ರಲ್ಲಿ ಹುಬ್ಬಳ್ಳಿಯ ಹುಬ್ಬಳ್ಳಿ ಹೊಟೇಲ್ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಪ್ರಶಸ್ತಿ, 2018 ರಲ್ಲಿ ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ ಆವೃತ್ತಿಯಿಂದ 2018ರಲ್ಲಿ ಅಚೀವರ್ಸ್ ಆಫ್ ಕರ್ನಾಟಕ ಪ್ರಶಸ್ತಿ, 2018 ರಲ್ಲಿ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಟಾನ ಟ್ರಸ್ಟ್ ನಿಂದ ವಿಶ್ವೇಶ್ವರಯ್ಯ ರಾಷ್ಟೀಯ ಸದ್ಭಾವನಾ ಪ್ರಶಸ್ತಿ, 2021 ರಲ್ಲಿ ಮದರ್ ಥೆರೇಸಾ ಮೆಮೋರಿಯಲ್ ನ್ಯಾಷನಲ್ ಅವಾರ್ಡ್ ನ್ನು ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಬೆಂಗಳೂರು ಇವರಿಂದ ಪಡೆದಿದ್ದಾರೆ. 2021ರಲ್ಲಿ ಕರ್ನಾಟಕ ಮಾದ್ಯಮ ಸಹಕಾರ ಮತ್ತು ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. 2021ರಲ್ಲಿ ರೆಡ್ ಎಫ್.ಎಂ. ರೇಡಿಯೋದಿಂದ ಬಿಸಿನೆಸ್ ಬ್ರಿಲಿಯನ್ಸ್ ಅವಾರ್ಡ್, 2022 ರಲ್ಲಿ ಸುವರ್ಣ ನ್ಯೂಸ್ ಟಿ.ವಿ. ಚಾನೆಲ್ ಮತ್ತು ಕನ್ನಡ ಪ್ರಭ ದಿನಪತ್ರಿಕೆಯಿಂದ ಉತ್ತರ ಕರ್ನಾಟಕ ಸಾಧಕರು ಪ್ರಶಸ್ತಿ, 2022 ರಲ್ಲಿ ಇಂದು ಸಂಜೆ ಪತ್ರಿಕೆಯಿಂದ ಉದ್ಯೋಗ ರತ್ನ ಪ್ರಶಸ್ತಿ, 2022 ರಲ್ಲಿ ರಾಜ್ ನ್ಯೂಸ್ ಟಿ.ವಿ.ಯಿಂದ ಗುರು ಅನುಗ್ರಹ ಪುರಸ್ಕಾರ, 2022 ರಲ್ಲಿ ಸರ್ಕಾಳ ಮರಾಠಿ ದಿನಪತ್ರಿಕೆಯಿಂದ ಐಡಲ್ಸ್ ಆಫ್ ಬೆಳಗಾವ, 2022 ರಲ್ಲಿ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಇವರಿಂದ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, 2023 ರಲ್ಲಿ ವಿಸ್ತಾರ ಟಿವಿಯಿಂದ ಬಿಜಿನೆಸ್ ಎಕ್ಸಲೆನ್ಸ್ ಅವಾರ್ಡ್,2023 ರಲ್ಲಿ ಪಬ್ಲಿಕ್ ನೆಸ್ಟ್ ಇಂಟರ್‌ನ್ಯಾಷನಲ್ ನ್ಯೂಸ್‌ನಿಂದ ಪಂಚರತ್ನ ಪ್ರಶಸ್ತಿ, 2023 ರಲ್ಲಿ ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸ್ ನ್ಯೂಸ್ ಫಸ್ಟ್ ಟಿವಿ ಮೊದಲಾದ ಹಲವಾರು ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳು ದೊರೆಕಿವೆ.ಇವರು ಹೊಟೇಲ್ ಉದ್ಯಮದಲ್ಲಿ ಸಾಧಿಸಿದ ಸಾಧನೆಯ ಬಗ್ಗೆ 2021ರಲ್ಲಿ ಪವರ್ ಟಿವಿಯ ‘ಹೊಟೇಲ್ ಹೀರೋ’ ಕಾರ್ಯಕ್ರಮ, 2022 ರಲ್ಲಿ ನ್ಯೂಸ್ ಫಸ್ಟ್ ಟಿವಿಯಿಂದ ‘ನಾನು ನನ್ನ ಸಾಧನೆ ಕಾರ್ಯಕ್ರಮ’, 2023 ರಲ್ಲಿ ಟಿವಿ 5 ‘ನಮ್ಮ ಬಾಹುಬಲಿ’ ಕಾರ್ಯಕ್ರಮ ಮೂಲಕ ಸುದ್ಧಿ ಬಿತ್ತರಗೊಂಡಿವೆ. ಇದು ಖ್ಯಾತ ಹೋಟೆಲ್ ಉದ್ಯಮಿ, ಸಮಾಜ ಸೇವಕ ರಾಜೇಂದ್ರ ವಿ. ಶೆಟ್ಟಿ ಅವರ ಯಶೋಗಾಥೆ. ಇವರ ಅನನ್ಯ ಸಾಧನೆಯನ್ನು ಪರಿಗಣಿಸಿ ಡಾ.ಅಶೋಕ್ ಶೆಟ್ಟಿ ಬಿ. ಎನ್. ಸಾರಥ್ಯದ Mp mla’s tv 24×7 ನ್ಯೂಸ್ ಪೋರ್ಟಲ್ ಮತ್ತು Mp mla’s news ಪತ್ರಿಕೆಯು ಅಕ್ಟೋಬರ್ 13 ರಂದು ಆದಿತ್ಯವಾರ ಸಂಜೆ 5 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯುವ 13ನೇ ಸೌಹಾರ್ದ ಸಂಗಮದಲ್ಲಿ ಕರುನಾಡ ರತ್ನ ರಾಜ್ಯ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಿದೆ.

ಪ್ರಾದೇಶಿಕ ವಾರ್ತೆಗಳು

ಅವಕಾಶ ವಂಚಿತ ಮಕ್ಕಳಿಗೆ ಆಸರೆ ಪುಣ್ಯದ ಕಾರ್ಯ-ಮೋಹನ್‌ದಾಸ್ ಕಾಮತ್ ಮಂಜೇಶ್ವರ

ಮಂಗಳೂರು : ಮಕ್ಕಳಲ್ಲಿ ದೇವರನ್ನು ಕಾಣುವ ಶ್ರೇಷ್ಠ ಸಂಪ್ರದಾಯ ಭಾರತೀಯರಲ್ಲಿದೆ. ಅವಕಾಶ ವಂಚಿತ ಮಕ್ಕಳಿಗೆ ಆಸರೆ ನೀಡಿ ಅವರ ಶಿಕ್ಷಣಕ್ಕೆ ನೆರವಾಗುವುದು ದೇವತಾ ಸೇವೆಗೆ ಸಮನಾದ ಪುಣ್ಯದ ಕಾರ್ಯ ಎಂದು ಅನಿವಾಸಿ ಭಾರತೀಯ, ಸಮಾಜ ಸೇವಕ ಮೋಹನ್‌ದಾಸ್ ಕಾಮತ್ ಮಂಜೇಶ್ವರ ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ಜೆಪ್ಪುವಿನ ಭಗಿನಿ ಸಮಾಜದ ಮಕ್ಕಳಿಗೆ ಏರ್ಪಡಿಸಿದ ಸಹಭೋಜನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ‘ ಮಂಗಳೂರಿನ ಭಗಿನ ಸಮಾಜ ಕಳೆದ ಹಲವು ದಶಕದಿಂದ ಕೈಗೊಂಡಿರುವ ಮಾನವೀಯ ಸೇವೆ ಸಮಾಜಕ್ಕೆ ಮಾದರಿಯಾಗಿದೆ’ ಎಂದರು.ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ‘ಮಕ್ಕಳು ನಾಳಿನ ರೂವಾರಿಗಳಾಗಿದ್ದು ಅವರ ಭವಿಷ್ಯ ಉಜ್ವಲಗೊಳಿಸುವುದು ಸಮಾಜದ ಜವಾಬ್ದಾರಿ ’ಎಂದರು.ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕಾರ್ಯಕಾರಿ ಸಮಿತಿ ಸದಸ್ಯ ಸತೀಶ್ ಇರಾ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಬಂಟರ ಯಾನೆ ನಾಡವರ ಮಾತೃಸಂಘ, ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಪ್ರತಿಭಾ ಪುರಸ್ಕಾರ

ಮಂಗಳೂರು: ಅವಿಭಜಿತ ಮಂಗಳೂರು ತಾಲೂಕು ವ್ಯಾಪ್ತಿಯ, 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿಯಲ್ಲಿ 95% ಮತ್ತು ಅಧಿಕ ಅಂಕಗಳನ್ನು ಪಡೆದ ಬಂಟ ಸಮಾಜದ ವಿದ್ಯಾರ್ಥಿಗಳನ್ನು ಬಂಟರ ಯಾನೆ ನಾಡವರ ಮಾತೃಸಂಘ, ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಗೌರವ ಪುರಸ್ಕಾರವನ್ನು ಅಗೋಸ್ತು ತಿಂಗಳ 15ನೇ ತಾರೀಕಿನಂದು ಬೆಳಗ್ಗೆ 10.30 ಗಂಟೆಗೆ ಬಂಟರ ಯಾನೆ ನಾಡವರ ಮಾತೃಸಂಘದ ಅಮೃತೋತ್ಸವ ಕಟ್ಟಡದ ಸಭಾಭವನದಲ್ಲಿ ನೆರವೇರಿಸುವುದೆಂದು ತೀರ್ಮಾನಿಸಲಾಗಿದೆ.ಈ ಬಗ್ಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಅಂಕಪಟ್ಟಿ, ಆಧಾರ್ ಕಾರ್ಡ್‌ನ ಪ್ರತಿ ಮತ್ತು ಒಂದು ಭಾವಚಿತ್ರ ಸಮೇತ ಬಂಟರ ಯಾನೆ ನಾಡವರ ಮಾತೃಸಂಘದ ಕಛೇರಿ, ಒಂದನೇ ಮಹಡಿ, ಅಮೃತೋತ್ಸವ ಕಟ್ಟಡ ಮಂಗಳೂರು, ಇಲ್ಲಿ ಜುಲೈ ತಿಂಗಳ 31ನೇ ತಾರೀಕಿನೊಳಗೆ ಸಲ್ಲಿಸಲು ವಿನಂತಿಸಲಾಗಿದೆ.ಹೆಚ್ಚಿನ ವಿವರಗಳಿಗೆ ಕೃಷ್ಣಪ್ರಸಾದ್ ರೈಯವರನ್ನು 9480015895 ಸಂಪರ್ಕಿಸಬಹುದು.

ಪ್ರಾದೇಶಿಕ ವಾರ್ತೆಗಳು

ಎಂಆರ್ ಪಿಎಲ್ ನ 4 ನೇ ಹಂತದ ನಿರ್ವಸಿತರ ಕುಟುಂಬಗಳ ಉದ್ಯೋಗ ಹಾಗೂ ಪುನರ್ವಸತಿ ಬೇಡಿಕೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ

ಮಂಗಳೂರು: ಎಂಆರ್ ಪಿಎಲ್ 4ನೇ ಹಂತದ ಭೂ ನಿರ್ವಸಿತರಾಗುವ ಕುತ್ತೆತೂರು ಪೆರ್ಮುದೆ ಎಕ್ತಾರು ಗ್ರಾಮದ ನಿವಾಸಿಗಳಿಗೆ ಸಿಗಬೇಕಾದ ಪುನರ್ವಸತಿ ಹಾಗೂ ಉದ್ಯೋಗ ಮತ್ತಿತ್ತರ ಬೇಡಿಕೆಗಳ ಈಡೇರಿಸುವ ಕುರಿತಂತೆ ದ.ಕ ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.ದ.ಕ ಜಿಲ್ಲಾ ಸಂಸದರು ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಸ್ಥಳೀಯ ಶಾಸಕರಾದ ಉಮಾನಾಥ ಕೋಟ್ಯಾನ್, ವಿಶೇಷ ಭೂಸ್ವಾದಿನಾಧಿಕಾರಿ, ಎಂಅಸರ್ ಪಿಎಲ್ ನ ಅಧಿಕಾರಿಗಳ ಮತ್ತು ಭೂ ನಿರ್ವಸಿತರ ಹಿತರಕ್ಷಣ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಸ್ಥಳೀಯ ಶಾಸಕರು ಮತ್ತು ದ.ಕ ಜಿಲ್ಲಾ ಸಂಸದರು ಮಾತಾನಾಡಿ ಎಂಆರ್ ಪಿಎಲ್ ನ ವಿಸ್ತರಣೆಗಾಗಿ ಸ್ಥಳಿಯರು ಭೂಮಿಯನ್ನು ತ್ಯಾಗ ಮಾಡುತ್ತಿದ್ದು ಅವರಿಗೆ ದೊರಕಬೇಕಾದ `ಸವಲತ್ತುಗಳನ್ನು ಯಾವುದೇ ನಿಬಂದನೆಗಳಿಲ್ಲದೆ ಅಧಿಸೂಚನೆಗೆ ಮೊದಲು ಇದ್ದ ಎಲ್ಲಾ ಮನೆಗಳಿಗೆ ಸೂಕ್ತ ಪುನರ್ವಸತಿ ಮತ್ತು ಉದ್ಯೋಗವನ್ನು ವಿಳಂಬ ಮಾಡದೆ ಶೀಘ್ರವಾಗಿ ಕಲ್ಪಿಸುವ ಬಗ್ಗೆ ಸಭೆಯಲ್ಲಿ ಆಗ್ರಹಿಸಲಾಯಿತು,ಸುಧೀರ್ಘ ನಡೆದ ಸಭೆಯಲ್ಲಿ ಕೊನೆಗೆ ಜಿಲ್ಲಾಧಿಕಾರಿಗಳು ಮತ್ತು ಎಂಆರ್ ಪಿಎಲ್ ನ ಅಧಿಕಾರಿಗಳು ಎಲ್ಲಾ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದರು.ಇವರಿಂದ ಹರ್ಷಗೊಂಡ ಭೂ ನಿರ್ವಸಿತರ ಹಿತರಕ್ಷಣಾ ಸಮಿತಿಹಲಾವರು ವರ್ಷಗಳಿಂದ ಬಾಕಿ ಉಳಿದ್ದಿದ್ದ ಎಂಆರ್ ಪಿಎಲ್ ನ 4 ನೇ ಹಂತದ ಭೂಸ್ವಾದಿನತೆ ಬಗ್ಗೆ ಇದ್ದ ಉದ್ಯೋಗ ಹಾಗೂ ಪುನರ್‌ ವಸತಿಯ ಬೇಡಿಕೆಗೆ ಸ್ಪಂದಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಶಾಸಕ ಉಮಾನಾಥ ಕೊಟ್ಯನ್ ಅವರಿಗೆ ಅದೇ ರೀತಿ ದ.ಕ.ಜಿಲ್ಲಾಧಿಕಾರಿ ಹಾಗೂ ಎಂಆರ್ ಪಿಎಲ್ ಅಧಿಕಾರಿಗಳಿಗೆ ಭೂ ನಿರ್ವಸಿತರ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ತರು ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

“ಬೀಚ್ ಫೆಸ್ಟಿವಲ್ ನಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ”-ಮೇಯರ್ ಸುಧೀರ್ ಶೆಟ್ಟಿ. ಮಂಗಳೂರು ಟ್ರಿಯಾಥ್ಲನ್‌, ಬೀಚ್‌ ಫೆಸ್ಟಿವಲ್‌ ಉದ್ಘಾಟನೆ

ಮಂಗಳೂರು: “ತಪಸ್ಯ ಫೌಂಡೇಶನ್” ವತಿಯಿಂದ ನಡೆಯಲಿರುವ ಮಂಗಳೂರು ಟ್ರಿಯಾಥ್ಲನ್‌, ಬೀಚ್‌ ಫೆಸ್ಟಿವಲ್‌ ಉದ್ಘಾಟನೆ ಕಾರ್ಯಕ್ರಮ ಆದಿತ್ಯವಾರ ಸಂಜೆ ನಗರದ ಟಿಎಂಎ ಪೈ ಸ್ಟಾರ್‌ ಕಾನ್ಫರೆನ್ಸ್ ಹಾಲ್‌ನಲ್ಲಿ ಜರುಗಿತು. ಅತಿಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತಾಡಿದ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು, “ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಮಂಗಳೂರು ಟ್ರಿಯಾಥ್ಲನ್ ಹಾಗೂ ಮಂಗಳೂರು ಬೀಚ್ ಫೆಸ್ಟಿವಲ್ ಕಾರ್ಯಕ್ರಮ ಆಯೋಜನೆಯಾಗಿದೆ. ಮಕ್ಕಳಲ್ಲಿ ಕ್ಯಾನ್ಸರ್ ರೋಗದ ಕುರಿತು ಜಾಗೃತಿ ಮೂಡಿಸುತ್ತಿರುವ ತಪಸ್ಯ ಫೌಂಡೇಶನ್ ಸಾರ್ಥಕ ಕೆಲಸವನ್ನು ಮಾಡುತ್ತಿದೆ. ಸಂಘಟನೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಮಂಗಳೂರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಕ್ಯಾನ್ಸರ್ ಪೀಡಿತ ಮಕ್ಕಳ ಆರೈಕೆಗೆ 100 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸುತ್ತಿರುವ ಸಂಘಟನೆಯ ಜೊತೆಗೆ ಮಹಾನಗರ ಪಾಲಿಕೆ ನಿರಂತರ ಸಹಕಾರ ನೀಡಲಿದೆ” ಎಂದರು.ಮಂಗಳೂರು ಸಂಸದ ಕ್ಯಾ. ಬೃಜೇಶ್ ಚೌಟ ಮಾತಾಡಿ, “ತಪಸ್ಯ ಫೌಂಡೇಶನ್ ಮಾಡುತ್ತಿರುವ ಕಾರ್ಯ ನಿಜವಾದ ತಪಸ್ಸು. ನೀವು ಮಾಡುತ್ತಿರುವ ಕೆಲಸ ದೇವರ ಕೆಲಸವಾಗಿದೆ. ಸಂಘಟನೆ ಮಾಡುವ ಈ ಕಾರ್ಯದಲ್ಲಿ ಇಡೀ ಮಂಗಳೂರಿನ ಜನರು ಪಾಲ್ಗೊಳ್ಳಬೇಕು. ತುಳುನಾಡಿನಲ್ಲಿ ಒಳ್ಳೆಯ ಕೆಲಸ ಮಾಡಿದರೆ ದೈವ ದೇವರ ಸಹಕಾರ ಖಂಡಿತ ಇದ್ದೇ ಇರುತ್ತದೆ. ನಾನು ನಿಮ್ಮ ಎಲ್ಲ ಪ್ರಯತ್ನಗಳಿಗೆ ಜೊತೆಗೂಡಿ ಸಹಕಾರ ನೀಡುತ್ತೇನೆ“ ಎಂದರು. ಡಾ.ವಿಜಯ್ ಕುಮಾರ್ ಮಾತನಾಡಿ, “ತಪಸ್ಯ ಫೌಂಡೇಶನ್ ಸಮಾಜದಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ಕ್ಯಾನ್ಸರ್ ರೋಗಿಗಳ ಆರೈಕೆಯಲ್ಲಿ ತೊಡಗಿಕೊಂಡಿರುವ ಫೌಂಡೇಶನ್ ಗೆ ಯೇನಪೋಯ ಆಸ್ಪತ್ರೆ ಸಹಕಾರ ನೀಡುತ್ತಾ ಬಂದಿದೆ. ಮುಂದೆಯೂ ಇದೇ ರೀತಿ ಸಂಘಟನೆಯ ಜೊತೆ ಕೆಲಸ ಮಾಡಲಿದೆ. ಕ್ಯಾನ್ಸರ್ ರೋಗಿಗಳ ಆರೈಕೆಗಾಗಿ ಪ್ಯಾಲೇಟಿವ್ ಕೇರ್ ಇಂದಿನ ಕಾಲದಲ್ಲಿ ಅಗತ್ಯವಿದೆ. ಇದರಲ್ಲಿ ನಿರತ ಸಂಘಟನೆಯ ಎಲ್ಲರಿಗೂ ಅಭಿನಂದನೆಗಳು“ ಎಂದರು.ಇದೇ ಸಂದರ್ಭದಲ್ಲಿ 52ನೇ ವಯಸ್ಸಿನಲ್ಲಿ ಮೌಂಟ್ ಏವರೆಸ್ಟ್ ಶಿಖರ ಏರಿರುವ ಕರ್ನಾಟಕದ ಮೊದಲ ಮಹಿಳೆ ಡಾ. ಉಷಾ ಹೆಗ್ಡೆ ಅವರನ್ನು ಅತಿಥಿಗಳು ಸನ್ಮಾನಿಸಿದರು.ಕಾರ್ಯಕ್ರಮದ ಟಿ ಶರ್ಟ್, ಮೆಡಲ್, ಬ್ಯಾಡ್ಜ್ ಅನಾವರಣಗೊಳಿಸಿದರು.ವೇದಿಕೆಯಲ್ಲಿ ಮಂಗಳೂರು ಸಂಸದ ಬೃಜೇಶ್ ಚೌಟ, ಐಡಿಎಫ್‌ಸಿ ಬ್ಯಾಂಕಿನ ರೀಜನಲ್ ಹೆಡ್ ಶರಣ್ ರಜನಿ, ಎನ್ ಐಟಿಕೆ ಡೀನ್ ಎ.ಸಿ. ಹೆಗ್ಡೆ, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಯೇನಪೋಯ ವಿವಿಯ ವೈಸ್‌ ಚಾನ್ಸೆಲರ್‌ ಡಾ। ವಿಜಯ ಕುಮಾರ್, ಇಂಡಿಯನ್ ಟ್ರಿಯಾಥ್ಲನ್ ಫೆಡರೇಷನ್ ಅಭಿವೃದ್ಧಿ ಅಧಿಕಾರಿ ಹರೀಶ್ ಪ್ರಸಾದ್, ರಾಜ್ಯ ರಸ್ಲಿಂಗ್ ಫೆಡರೇಷನ್ ಅಧ್ಯಕ್ಷ ಗುಣರಂಜನ್ ಶೆಟ್ಟಿ, ಶರಣ್ ರಜನಿ, ಸಂದೇಶ್ ಹೆಗ್ಡೆ, ನರಸಿಂಹ ಹೆಗ್ಡೆ, ಕೆಎಂಸಿ ಆಸ್ಪತ್ರೆಯ ಹರ್ಷ ಪ್ರಸಾದ್‌ ಮತ್ತಿತರರು ಉಪಸ್ಥಿತರಿದ್ದರು.ತಪಸ್ಯ ಫೌಂಡೇಶನ್ ಮೆನೇಜಿಂಗ್ ಟ್ರಸ್ಟಿ ಸಬಿತಾ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.–ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಕದ್ರಿ ಪಾರ್ಕ್‌ನಲ್ಲಿ ವನಮಹೋತ್ಸವ. ‘ಪರಿಸರ ಸಂರಕ್ಷಣೆ ಸಾಮಾಜಿಕ ಹೊಣೆಗಾರಿಕೆಯ ಪ್ರತೀಕ.’ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್

ಮಂಗಳೂರು : ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮಾಜಿಕ ಹೊಣೆಗಾರಿಕೆಯ ಪ್ರತೀಕವಾಗಿದೆ. ಪತ್ರಕರ್ತರ ಸಂಘಟನೆಗಳು ನಿರ್ದಿಷ್ಟ ಚಟುವಟಿಕೆಗಳಿಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನತೆಗೆ ನೆರವಾಗಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರೆಸ್‌ಕ್ಲಬ್ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ನಗರದ ಕದ್ರಿ ಪಾರ್ಕ್‌ನಲ್ಲಿ ಶನಿವಾರ ನಡೆದ ಹಸಿರೇ ಉಸಿರು ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಗ್ರಾಮವಾಸ್ತವ್ಯ, ಬ್ರಾೃಂಡ್ ಮಂಗಳೂರಿನಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ‘ ಪತ್ರಕರ್ತರು ಪರಿಸರದ ಬಗ್ಗೆ ಕಾಳಜಿ ವಹಿಸಿ ಗಿಡಗಳನ್ನು ನೆಟ್ಟಿರುವುದು ಶ್ಲಾಘನೀಯ ಎಂದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ದ.ಕ.ವಾರ್ತಾ ಇಲಾಖೆಯ ಉಪ ನಿರ್ದೇಶಕ ಖಾದರ್ ಶಾ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಮಂಗಳೂರು ಮಹಾ ನಗರ ಪಾಲಿಕೆಯ ಜಂಟಿ ಅಯುಕ್ತ ಚಂದ್ರಶೇಖರಯ್ಯ, ಕಲಬುರಗಿ ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಸದಾನಂದ ಪೆರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ,ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ, ಹಿರಿಯ ಪತ್ರಕರ್ತರಾದ ರಮೇಶ್ ಪೆರ್ಲ ,ಪದ್ಮನಾಭ ಗಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ನಾಳೆ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರಿಂದ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಮತ್ತು ಅಪೌಷ್ಟಿಕತೆ ನಿವಾರಣೆ ಶಿಬಿರ.

ಮಂಗಳೂರು : ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಖ್ಯಾತ ಮಕ್ಕಳ ತಜ್ಞ, ದ.ಕ.ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಹಾಗೂ ಹೊರನಾಡ ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತ ಡಾ‌.ಸುಧಾಕರ ಶೆಟ್ಟಿ ಅವರಿಂದ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಮತ್ತು ಅಪೌಷ್ಟಿಕತೆ ನಿವಾರಣಾ ಶಿಬಿರವು ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಅಕ್ಷಯಧಾಮದಲ್ಲಿ ನಾಳೆ  ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ12 ರ ವರೆಗೆ ನಡೆಯಲಿರುವ ಈ ಶಿಬಿರದ ಪ್ರಯೋಜನವನ್ನು ಕಲ್ಲಬೆಟ್ಟು ಮತ್ತು ಆಸುಪಾಸಿನ ಗ್ರಾಮಗಳ ಮಕ್ಕಳು ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಸುರೇಶ್ ಕೋಟ್ಯಾನ್, ಉಪಾಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಆರ್.ಶೆಟ್ಟಿ ಅವರು ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಪ್ರಾಮಾಣಿಕವಾಗಿ ಯೋಧನ ಹಾಗೆ ಸಮರ್ಪಣಾ ಮನೋಭಾವದಿಂದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಾರ್ಯ ನಿರ್ವಹಿಸಲಿದ್ದಾರೆ. ಸಂಸದರ ಕಚೇರಿ ಉದ್ಘಾಟಿಸಿ ಶುಭ ಹಾರೈಸಿದ ಡಾ. ಕಲ್ಲಡ್ಕ ಪ್ರಭಾಕರ್ ಭಟ್

ಮಂಗಳೂರು: ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೂತನ ಕಚೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಎರಡನೇ ಮಹಡಿಯಲ್ಲಿ ಶುಕ್ರವಾರ ಶುಭಾರಂಭಗೊಂಡಿತು.ಆರ್‌ಎಸ್‌ಎಸ್ ಹಿರಿಯ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಚೇರಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ದೇವರ ಹಾಗೂ ಜನರ ಆಶೀರ್ವಾದದಿಂದ ದಕ್ಷಿಣ ಕನ್ನಡ ಕ್ಷೇತ್ರಕ್ಕೆ ಓರ್ವ ನಿವೃತ್ತ ಯೋಧ ಸಂಸದರಾಗಿ ಆಯ್ಕೆಯಾಗಿದ್ದಾರೆ. ಯೋಧ ರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಿದಂತೆ ಬ್ರಿಜೇಶ್ ಚೌಟ ಅವರು ಕ್ಷೇತ್ರದ ಅಭಿವೃದ್ಧಿಗೆ, ಜನರ ಕಷ್ಟ, ನೋವು, ದುಖಃಗಳ ಪರಿಹಾರಕ್ಕಾಗಿ ಕ್ಷೇತ್ರದ ಪ್ರತಿನಿಧಿಯಾಗಿ ಸಂಸತ್‌ನಲ್ಲಿ ಧ್ವನಿ ಎತ್ತಲಿದ್ದಾರೆ. ಎಲ್ಲರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ನೂತನ ಕಚೇರಿ ಕೆಲಸ ಮಾಡಲಿ. ಪ್ರಾಮಾಣಿಕವಾಗಿ ಯೋಧನ ಹಾಗೆ ಸಮರ್ಪಣಾ ಭಾವದಿಂದ ಬ್ರಿಜೇಶ್ ಚೌಟ ಅವರು ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.ಸಂಸದ ಬ್ರಿಜೇಶ್ ಚೌಟ ಮಾತನಾಡಿ, ನೂತನ ಕಚೇರಿ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಲಾಗುವುದು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸುವ, ಅವಕಾಶ ಕಲ್ಪಿಸುವ ಕೆಲಸವನ್ನು ಪಕ್ಷ ಮಾಡಿಕೊಂಡು ಬಂದಿದೆ. ಅದನ್ನೇ ನಾನು ಮುಂದುವರೆಸುತ್ತೇನೆ. ಕಾರ್ಯಕರ್ತರ, ಹಿಂದುತ್ವದ ಧ್ವನಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಹಿಂದುತ್ವಕ್ಕೆ ಬದ್ದತೆ, ಅಭಿವೃದ್ಧಿಗೆ ಆದ್ಯತೆ ನೀಡಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕೆ ಪೂರಕವಾಗಿ ವಿಕಸಿತ ದಕ್ಷಿಣ ಕನ್ನಡ ನಿರ್ಮಾಣಕ್ಕೆ ಎಲ್ಲರ ಸಹಕಾರ ಪಡೆದು ಕೆಲಸ ಮಾಡಲಾಗುವುದು ಎಂದರು.ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕಳೆದ ಮೂರು ದಶಕಗಳಿಂದ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಸಂಸದರು ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಬ್ರಿಜೇಶ್ ಚೌಟ ಅವರೂ ನೂತನ ಕಚೇರಿ ಮೂಲಕ ಜಿಲ್ಲೆಯ ಜನತೆ, ಕಾರ್ಯಕರ್ತರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವ ವಿಶ್ವಾಸವಿದೆ. ಕ್ರಿಯಾಶೀಲರಾಗಿರುವ ನೂತನ ಸಂಸದರಿಂದ ಜಿಲ್ಲೆಯ ಅಭಿವೃದ್ಧಿ ಮತ್ತಷ್ಟು ವೇಗ ಪಡೆಯಲಿ ಎಂದರು.ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ನೂತನ ಕಚೇರಿ ಮೂಲಕ ಜಿಲ್ಲೆಯ ಜನರ ಕುಂದುಕೊರತೆಗೆ ಪರಿಹಾರ ದೊರೆಯಲಿ. ಇನ್ನಷ್ಟು ಒಂದಾಗಿ ಜಿಲ್ಲೆಯ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಲಿದ್ದೇವೆ. ಬಿಜೆಪಿಯನ್ನು ಸಂಘಟಿತವಾಗಿ ಇನ್ನಷ್ಟು ಬಲಗೊಳಿಸಲು ಬದ್ದರಿದ್ದೇವೆ. ಇದಕ್ಕಾಗಿ ನೂತನ ಸಂಸದರಿಗೆ ಎಲ್ಲರ ಸಹಕಾರ ದೊರೆಯಲಿ ಎಂದು ಹೇಳಿದರು.ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, ಜಿಲ್ಲೆಯ ಅವಕಾಶ ವಂಚಿತರಿಗೆ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ದ.ಕ. ಕ್ಷೇತ್ರದ ಯುವ ಸಂಸದರು ಯಶಸ್ವಿಯಾಗಿ ಕೆಲಸ ನಿರ್ವಹಿಸಲಿ. ಸಾರ್ವಜನಿಕರು ನೂತನ ಕಚೇರಿಯ ಸದುಪಯೋಗ ಪಡೆದುಕೊಳ್ಳಿ ಎಂದರು.ಶಾಸಕರಾದ ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಪ್ರತಾಪ ಸಿಂಹ ನಾಯಕ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ, ಮಾಜಿ ಶಾಸಕರಾದ ಯೋಗೀಶ್ ಭಟ್, ಮಲ್ಲಿಕಾ ಪ್ರಸಾದ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಾಲಕೃಷ್ಣ ಭಟ್, ಮೋನಪ್ಪ ಭಂಡಾರಿ, ಕ್ಯಾ. ಗಣೇಶ್ ಕಾರ್ಣಿಕ್, ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ದಿವಾಕರ್ ಪಾಂಡೇಶ್ವರ, ಜಯಾನಂದ ಅಂಚನ್, ಪಕ್ಷದ ಪದಾಧಿಕಾರಿಗಳು, ಮನಪಾ ಸದಸ್ಯರು, ಕಾರ್ಯಕರ್ತರು ಶುಭ ಹಾರೈಸಿದರು.

ಪ್ರಾದೇಶಿಕ ವಾರ್ತೆಗಳು

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಪತ್ರಕ್ಕೆ ಸ್ಪಂದಿಸಿ ದಕ್ಷಿಣ ಕನ್ನಡದಲ್ಲಿನ ರೈಲ್ವೆ ಸಮಸ್ಯೆಗಳ ಕುರಿತು ಸಭೆ ನಡೆಸಲು ಒಪ್ಪಿಗೆ ನೀಡಿದ ಮಾನ್ಯ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ಶ್ರೀ ವಿ. ಸೋಮಣ್ಣ

ದಕ್ಷಿಣ ಕನ್ನಡದ ರೈಲು ಪ್ರಯಾಣಿಕರ ಪರವಾಗಿ ಮತ್ತು ಸಾಮಾನ್ಯ ನಾಗರಿಕರ ಪರವಾಗಿ ಸಂಸದರು ಕೋರಿದ ಮನವಿ ಮೇರೆಗೆ, ಮಾನ್ಯ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ಶ್ರೀ ವಿ. ಸೋಮಣ್ಣ ಅವರು ದಿನಾಂಕ 17.07.2024 ರಂದು ಮಂಗಳೂರಿಗೆ ಆಗಮಿಸಿ ಸಭೆ ನಡೆಸಲು ಒಪ್ಪಿಗೆ ನೀಡಿದ್ದಾರೆ.ಬೆಳಿಗ್ಗೆ 09.00 ರಿಂದ 09.45 ರ ವರೆಗೆ ಮಂಗಳೂರು ಸೆಂಟ್ರಲ್ ರೇಲ್ವೆ ನಿಲ್ದಾಣದ ವೀಕ್ಷಣ, 10.00 ರಿಂದ 10.45 ರ ವರೆಗೆ ಮಂಗಳೂರು ಜಂಕ್ಷನ್ ರೇಲ್ವೆ ನಿಲ್ದಾಣದ ವೀಕ್ಷಣೆ ಹಾಗೂ 11.00 ರಿಂದ ಮಧ್ಯಾಹ್ನ 02.00 ರ ವರೆಗೆ ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಮಂಗಳೂರು ವ್ಯಾಪ್ತಿಯ ರೇಲ್ವೆ ವಿವಿಧ ಬೇಡಿಕೆಗಳು, ಸಮಸ್ಯೆಗಳು ಹಾಗೂ ಅಭಿವೃದ್ಧಿಯ ವಿಚಾರಗಳ ಕುರಿತು ಸಭೆ ನಡೆಸಲಿದ್ದಾರೆ.ವಿಶೇಷವಾಗಿ ಕೊಂಕಣ ಭಾಗದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಬಹುಕಾಲದ ಬೇಡಿಕೆಯಾದ ಕೊಂಕಣ ರೈಲ್ವೆ ಮತ್ತು ಭಾರತೀಯ ರೈಲ್ವೆಯ ವಿಲೀನ, ಈ ವಿಲೀನದಿಂದ ರೈಲ್ವೆ ಮೂಲಸೌಕರ್ಯಗಳ ಸುಧಾರಣೆ ಮತ್ತು ಪ್ರಯಾಣಿಕರ ಅನುಕೂಲ ಸುಗಮವಾಗಲಿದೆ. ಮಂಗಳೂರು-ಬೆಂಗಳೂರು ರೈಲ್ವೆ ಮಾರ್ಗದ ಉನ್ನತೀಕರಣ: ಶಿರಾಡಿ ಘಾಟ್ ಭಾಗದ ಕಾರ್ಯಯೋಜನಾ ಅಧ್ಯಯನ ಮತ್ತು ಸುಬ್ರಹ್ಮಣ್ಯ-ಸಕಲೇಶಪುರ ಘಾಟ್ ಭಾಗದ ಸಾಮರ್ಥ್ಯ ವೃದ್ಧಿಯ ಪ್ರಸ್ತಾಪಗಳ ಕುರಿತು ಕರಾವಳಿ ಭಾಗದ ಶಾಸಕರು, ಜನಪ್ರತಿನಿಧಿಗಳು, ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳ ಉಪಸ್ಥಿತಿಯಲ್ಲಿ ಚರ್ಚೆ ನಡೆಯಲಿದೆ.ಈ ಸಭೆಯು ದಕ್ಷಿಣ ಕನ್ನಡದ ರೈಲ್ವೆ ಪ್ರಯಾಣಿಕರು ಮತ್ತು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ, ಅವುಗಳಿಗೆ ಪರಿಹಾರ ಕೊಂಡುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ.ಈ ಮಹತ್ವದ ಸಭೆಯು ದಕ್ಷಿಣ ಕನ್ನಡದ ರೈಲು ಸೇವೆಗಳ ಸುಧಾರಣೆ ಮತ್ತು ಭವಿಷ್ಯದ ಅಭಿವೃದ್ಧಿಗೆ ಮೈಲುಗಲ್ಲಾಗಲಿದೆ.

Scroll to Top