ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

7ನೇ ವಾರ್ಷಿಕ ಹಬ್ಬ

ಮಂಗಳೂರು: ಆಂಜೆಲೊರ್ ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭೆಯ ಸದಸ್ಯರು ಅಕ್ಟೋಬರ್ 5ರಂದು ಸಂಜೆ ತಮ್ಮ ಸಭೆಯ 7 ನೇ ವಾರ್ಷಿಕ ಹಬ್ಬವನ್ನು ಆಚರಿಸಿದರು. ದೇವರಿಗೆ ಸ್ತುತಿ ಸಲ್ಲಿಸಿ ಪವಿತ್ರಾ ಪೂಜಾ ಬಲಿದಾನ ಅರ್ಪಿಸಿ ಚರ್ಚ್ ಸಭಾ ಮಂದಿರದಲ್ಲಿ ಚಿಕ್ಕ ಕಾರ್ಯಕ್ರಮ ನಡೆಸಿದರು. ಆಂಜೆಲೊರ್ ಚರ್ಚಿನ ಪ್ರಧಾನ ಗುರು ವಂದನೀಯ ಫೆಡ್ರಿಕ್ ಮೊಂತೆರೊರವರು ಅಧ್ಯಕ್ಷತೆ ವಹಿಸಿದರು. ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭೆಯ ಪ್ರಾಂತೀಯಾ ಸಹಾಯಕರಾದ ವಂದನೀಯ ಪ್ರಕಾಶ್ ಲೋಬೊ ಹಾಗೂ ಚರ್ಚಿನ ಸಹಾಯಕ ಗುರು ವಂದನೀಯ ಸ್ಟೇನಿ ಲೋಬೊ, ಆಂಜೆಲೊರ್ ಚರ್ಚಿನ ಉಪಾಧ್ಯಕ್ಷ ಸಹೋದರ ಪಾವ್ಲ್ ರೊಡ್ರಿಗಸ್, ಕಾರ್ಯದರ್ಶಿ ಸಹೋದರಿ ಲೋಲಿನಾ ಡಿ’ಸೋಜ , 21 ಆಯೋಗಗಳ ಸಂಚಾಲಕಿ ಸಹೋದರಿ ರೆನಿಟಾ ಮಿನೇಜಸ್, ಪ್ರಾಂತೀಯ ಖಜಾಂಚಿ ಸಹೋದರ ಆಲ್ವಿನ್ ಮೊಂತೆರೊ ಹಾಗೂ ಪ್ರತಿನಿಧಿ ಅತಿಥಿಗಳಾಗಿದ್ದರು.ಅಧ್ಯಕ್ಷೆ ಸಹೋದರಿ ಸಿಂತಿಯಾ ರುಜಾರಿಯೊ ಸ್ವಾಗತಿಸಿದರು. ಕರ್ಯದರ್ಶಿ ಸಹೋದರಿ ಸುನೀತಾ ಡಿ’ಸೋಜ ವಾರ್ಷಿಕ ವರದಿ ವಾಚಿಸಿದರು. ಮನೋರಂಜನ ಕಾರ್ಯಕ್ರಮದೊಡನೆ ದೇವರನ್ನು ಹರಸಿ ಕಾರ್ಯಕ್ರಮ ಕೊನೆಗೊಂಡಿತು. ಸಹೋದರಿ ಸವಿತಾ ಫೆಲ್ಸಿ ರೊಡ್ರಿಗಸ್ ಕಾರ್ಯ ನಿಯೋಜಿಸಿದರು. ಸಹೋದರ ಡೆನಿಸ್ ಡಿ’ಸೋಜ ಧನ್ಯವಾದ ಸಮರ್ಪಿಸಿದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಬೋಳೂರಿನ ಮಾತಾ ಅಮೃತಾನಂದಮಯಿ ಮಠದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಜನಪ್ರಿಯ ಗಾಯಕ ಶ್ರೀ ಅಜಯ್ ವಾರಿಯರ್

ಮಂಗಳೂರು ನಗರದ ಬೋಳೂರಿನಲ್ಲಿರುವಶ್ರೀ ಬ್ರಹ್ಮಸ್ಥಾನ ಕ್ಷೇತ್ರಕ್ಕೆ ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕ ಅಜಯ್ ವಾರಿಯರ್ ಭೇಟಿ ನೀಡಿದರು.ಶ್ರೀ ಬ್ರಹ್ಮಸ್ಥಾನ ಕ್ಷೇತ್ರಾಭಿವೃದ್ಧಿ ಸಮಿತಿ ವತಿಯಿಂದ ಅವರನ್ನು ಸ್ವಾಗತಿಸಲಾಯಿತು. ಶ್ರೀ ಕ್ಷೇತ್ರದ ಪೂಜೆಯಲ್ಲಿ ಭಾಗವಹಿಸಿ “ಕೀರ್ತನ ಸೇವೆ”ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ವತಿಯಿಂದ ಅಧ್ಯಕ್ಷರಾದ ಸುರೇಶ್ ಅಮೀನ್ ಸನ್ಮಾನಿಸಿದರು.ಅಮೃತ ವಿದ್ಯಾಲಯಂ ಪ್ರಾಂಶುಪಾಲೆ ಅಕ್ಷತಾ ಶೆಣೈ ನಿರೂಪಣೆ ಮಾಡಿದರು. ಕ್ಯಾಂಪಸ್ ಡೈರೆಕ್ಟರ್ ಯತೀಶ್ ಬೈಕಂಪಾಡಿ,ದಿಲೀಪ್ ಕುಮಾರ್ ಹಾಗೂ ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಚಿತ್ರಗಳು: ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಸಂಪಿಗೆದಡಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ. ‘ಭಾರತೀಯ ಲಲಿತ ಕಲೆಗಳಿಗೆ ದೇಗುಲಗಳೇ ಆಸರೆ’: ಭಾಸ್ಕರ ರೈ ಕುಕ್ಕುವಳ್ಳಿ

ಮಂಗಳೂರು: ‘ನಮ್ಮ ಸಂಸ್ಕೃತಿ ಮತ್ತು ಜನಜೀವನದೊಂದಿಗೆ ಹಾಸು ಹೊಕ್ಕಾಗಿರುವುದು ಭಾರತೀಯ ಲಲಿತ ಕಲೆಗಳು. ಪ್ರಾಚೀನ ಕಾಲದಿಂದಲೂ ಅವುಗಳಿಗೆ ಆಸರೆಯಾಗಿರುವುದು ಇಲ್ಲಿನ ದೇಗುಲಗಳು. ವಿಶೇಷ ಪರ್ವಕಾಲಗಳಲ್ಲಿ ಸಂಗೀತ, ನೃತ್ಯ, ಯಕ್ಷಗಾನಗಳು ನಡೆಯದಿರುವ ದೈವ ಸಾನಿಧ್ಯಗಳೇ ನಮ್ಮಲ್ಲಿಲ್ಲ. ಅದರಲ್ಲೂ ಯಕ್ಷಗಾನ ತಾಳಮದ್ದಳೆ, ಪುರಾಣ ಪ್ರವಚನ ಮತ್ತು ಬಯಲಾಟಗಳು ಆರಂಭಗೊಂಡಿರುವುದು ಈ ದೇವಸ್ಥಾನಗಳಿಂದಲೇ’ ಎಂದು ಖ್ಯಾತ ಯಕ್ಷಗಾನ ಅರ್ಥಧಾರಿ ಮತ್ತು ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ  ಹೇಳಿದ್ದಾರೆ.       ಹರೇಕಳ ಗ್ರಾಮದ ಸಂಪಿಗೆದಡಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಯಕ್ಷಗಾನ ತಾಳಮದ್ದಳೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಶುಭಾಶಂಸನೆಗೈದರು. ಮುಂಬೈ ಉದ್ಯಮಿ ಜಗದೀಶ ಪೂಜಾರಿ ಇರಾ ಆಚೆಬೈಲು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.         ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ದಾಸ್ ರೈ ದೆಬ್ಬೇಲಿ ಗುತ್ತು ಅವರ ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಮಹಾಬಲ ಹೆಗ್ಡೆ ದೆಬ್ಬೇಲಿ; ಪ್ರಮುಖರಾದ ಕಡೆಂಜ ಜಗಜೀವನ್ ದಾಸ್ ಶೆಟ್ಟಿ, ಶಾಂತಾರಾಮ ರೈ ಎಲಿಯಾರ್, ಪದ್ಮನಾಭ ಶೆಟ್ಟಿ ದೋಟ, ಭಾಸ್ಕರ ರೈ ಸಂಪಿಗೆದಡಿ ಉಪಸ್ಥಿತರಿದ್ದರು.       ತಾಳಮದ್ದಳೆಯ ಸಂಘಟಕ ಪ್ರವೀಣ್ ರೈ ಎಲಿಯಾರ್ ಸ್ವಾಗತಿಸಿದರು. ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು. ಹರೀಶ್ ಆಚಾರ್ಯ ಮತ್ತು ವಾಮನ್ ರಾಜ್ ಪಾವೂರು ಸಹಕರಿಸಿದರು. ಸದಾಶಿವ ಆಚಾರ್ಯ ಹರೇಕಳ ಕಾರ್ಯಕ್ರಮ ನಿರೂಪಿಸಿದರು. *ಯಾಗ ಸಂಕಲ್ಪ – ಮಾಗಧ ವಧೆ:*        ಉತ್ಸವದ ಅಂಗವಾಗಿ ಪ್ರಸಿದ್ಧ ಕಲಾವಿದರಿಂದ ‘ಯಾಗ ಸಂಕಲ್ಪ – ಮಾಗಧ ವಧೆ’ ಯಕ್ಷಗಾನ ತಾಳಮದ್ದಳೆ ಜರಗಿತು. ಶಂಭು ಶರ್ಮ ವಿಟ್ಲ, ಭಾಸ್ಕರ ರೈ ಕುಕ್ಕುವಳ್ಳಿ, ಪ್ರಭಾಕರ ಶೆಟ್ಟಿ ಕುತ್ತಾರು ಗುತ್ತು, ಗಣೇಶ ಕಾವ ಅಂಡಾಲ ಬೀಡು, ವಿಶ್ವನಾಥ ಆಳ್ವ ನಾಡಾಜೆ, ಪ್ರವೀಣ ರೈ ಎಲಿಯಾರ್ ಅರ್ಥಧಾರಿಗಳಾಗಿದ್ದರು. ರಾಜಾರಾಮ ಹೊಳ್ಳ ಕೈರಂಗಳ ಮತ್ತು ಶಿಶಿರ್ ಕೃಷ್ಣ ಬಲ್ಲಾಳ್ ಚಿಪ್ಪಾರು ಅವರ ಭಾಗವತಿಗೆ ಕೃಷ್ಣಪ್ಪ ಕಿನ್ಯಾ, ರಾಜಾರಾಮ್ ಬಳ್ಳಾಲ್ ಚಿಪ್ಪಾರು,ರಾಜೇಶ್ ಆಚಾರ್ಯ ಕಂಡಿಲ ಮತ್ತು ಪ್ರಕಾಶ್ ಕಿನ್ಯಾ ಹಿಮ್ಮೇಳದಲ್ಲಿ  ಸಹಕರಿಸಿದರು.

ಪ್ರಾದೇಶಿಕ ವಾರ್ತೆಗಳು

ಅಂಚೆ ಇಲಾಖೆಯಿಂದ ರಫ್ತು ಚಟುವಟಿಕೆ ಉತ್ತೇಜಿಸಲು ಡಾಕ್ ನಿರ್ಯಾತ್ ಕೇಂದ್ರ -ಸುಧಾಕರ ಮಲ್ಯ

ಮಂಗಳೂರು, ಅ.9;ಅಂಚೆ ಇಲಾಖೆಯಿಂದ ರಫ್ತು ಚಟುವಟಿಕೆ ಉತ್ತೇಜಿಸಲು ದೇಶಾದ್ಯಂತ 1000ಡಾಕ್ ನಿರ್ಯಾತ್ ಕೇಂದ್ರಗಳಿವೆ. ಈ ಪೈಕಿ ಮಂಗಳೂರು ಅಂಚೆ ವಿಭಾಗದಲ್ಲಿ ಮೂರು ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎಂ.ಸುಧಾಕರ ಮಲ್ಯ ತಿಳಿಸಿದ್ದಾರೆ.ಅವರು ಇಂದು ಅಂಚೆ ಇಲಾಖೆಯ ವತಿಯಿಂದ ವಿಶ್ವ ಅಂಚೆ ದಿನದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.ಮಂಗಳೂರು ಅಂಚೆ ವಿಭಾಗದ ಪ್ರಧಾನ ಅಂಚೆ ಕಚೇರಿ ಇರುವ ಪಾಂಡೇಶ್ವರ, ಹಂಪನಕಟ್ಟೆ ಮತ್ತು ಸುರತ್ಕಲ್ ಅಂಚೆ ಕಚೇರಿಗಳು ಡಾಕ್ ನಿರ್ಯಾತ್ ಕೇಂದ್ರಗ ಳಾಗಿ ವಿದೇಶಗಳಿಗೆ ಗ್ರಾಹಕರ ಉತ್ಪನ್ನಗಳನ್ನು ರಫ್ತು ಮಾಡಲು ನೆರವು ನೀಡುತ್ತಿವೆ. ಪ್ರಪಂಚ ದಾದ್ಯಂತದ ವಿವಿಧ ದೇಶಗಳಿಗೆ ಗ್ರಾಹಕರು ಉತ್ಪನ್ನ ಗಳನ್ನು ರಫ್ತು ಮಾಡುವ ಚಟುವಟಿಕೆ ಗಳಿಗೆ ಈ ಕೇಂದ್ರಗಳ ಮೂಲಕ ಸಹಾಯ ಮಾಡಲಾಗುತ್ತದೆ ಎಂದು ಸುಧಾಕರ ಮಲ್ಯ ತಿಳಿಸಿದ್ದಾರೆ.ಅಂಚೆ ಇಲಾಖೆಯ ಮೂಲಕ ಅಂಚೆ ಬ್ಯಾಂಕ್ ಆರಂಭಿಸಿ ಗ್ರಾಹಕರ ಮನೆ ಬಾಗಿಲಿಗೆ ಡಿಜಿಟಲ್ ಮೂಲಕ ಬ್ಯಾಂಕಿಂಗ್ ಸೌಲಭ್ಯ ನೀಡುತ್ತಿದೆ.ಆಧಾರ ನೊಂದಣಿ, ತಿದ್ದುಪಡಿ ಜೊತೆಗೆ ಜೀವನ ಪ್ರಮಾಣ ಪತ್ರ,ಜನನ,ಮರಣ ಪ್ರಮಾಣ ಪತ್ರ ,ಅಪಘಾತ ವಿಮೆ, ಆರೋಗ್ಯ ವಿಮಾ ಸೌಲಭ್ಯ ,ಪೌರತ್ವ ಅರ್ಜಿ ಸೇರಿದಂತೆ ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ .ಪೋಸ್ಟಲ್ ಬ್ಯಾಂಕಿಂಗ್ ಮೂಲಕ ಸಾಲ ನೀಡುವ ಯೋಜನೆಯೂ ಇದೆ ಎಂದರು. 1854 ದಲ್ಲಿ ಭಾರತದಲ್ಲಿ ಆರಂಭಗೊಂಡ ಅಂಚೆ ಸೇವೆ ಇಂದು ವಿವಿಧ ರೀತಿಯ ಸೇವಾ ಸೌಲಭ್ಯಗಳನ್ನು ನೀಡುವ ಅತ್ಯಂತ ದೊಡ್ಡ ಜಾಲವನ್ನು ಹೊಂದಿದೆ.ದೇಶಾದ್ಯಂತ 164,972 ಅಂಚೆ ಕಚೇರಿಗಳನ್ನು ಹೊಂದಿದ್ದು,4, ಲಕ್ಷ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿ ದ್ದಾರೆ. ಈ ಪೈಕಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸೇವೆ ನೀಡುತ್ತಿವೆ ಎಂದರು‌.ದಕ್ಷಿಣ ಕನ್ನಡ ಜಿಲ್ಲೆ ಅಂಚೆ ಇಲಾಖೆ 150ನೇ ವರ್ಷಾಚರಣೆಯ ಸಂದರ್ಭದಲ್ಲಿದೆ. ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.ಅಂಚೆ ಇಲಾಖೆ ತನ್ನ ಹಿಂದಿನ ಸೇವೆಗಳ ಜೊತೆ ಭಾರತದ ಇತಿಹಾಸ,ಸಂಸ್ಕೃತಿ ತಿಳಿಸುವ ಅಂಚೆ ಚೀಟಿ ಕಾಲಕಾಲಕ್ಕೆ ಬಿಡುಗಡೆ ಮಾಡುತ್ತಿದೆ ಜೊತೆಗೆ ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡುತ್ತಿದೆ ಎಂದರು.ಸಂವಾದ ಗೋಷ್ಠಿಯಲ್ಲಿ ಮಂಗಳೂರು ಅಂಚೆ ವಿಭಾಗದ ಉಪ ಅಧೀಕ್ಷಕ ದಿನೇಶ್ ಪಿ, ಯಾಂತ್ರಿಕ ವಿಭಾಗದ ಮುಖ್ಯಸ್ಥ ವಿಲ್ಸನ್ ಸೆಲ್ವಿನ್ ಡಿ ಸೋಜ,ಮಂಗಳೂರು ವಿಭಾಗದ ಅಂಚೆ ವಿಮಾ ಅಭಿವೃದ್ಧಿ ಅಧಿಕಾರಿ ಯತಿನ್ ಕುಮಾರ್,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ,ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರುದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿ,ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ರಾಜ್ಯ ಮಾಸ್ಟರ್ -2 ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ 93 ಕೆಜಿ ದೇಹ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಶಿವೆ ಶಿವಾನಿ ತುಳುವೆ ಪ್ರಕಾಶ್ ಶೆಟ್ಟಿ ಗಂಡೊಟ್ಟು ಕೆಂಜಾರ್.

ಕುಂದಾಪುರ: ಸಾಲಿಗ್ರಾಮದಲ್ಲಿ ಸೆ. 13,14ಮತ್ತು15-09-2024 ರಂದು ರೊ ಫ಼ಿಟ್ನೆಸ್ಸ್* ಮತ್ತು ಕರ್ನಾಟಕ ರಾಜ್ಯ ಪವರ್ ಲಿಫ಼್ಟಿಂಗ್ ಎಸೋಶಿಯೇಶನ್ ಸಹಯೋಗದೊಂದಿಗೆ ಜರಗಿದ ರಾಜ್ಯ ಮಾಸ್ಟರ್-2 ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ 93ಕೆಜಿ ದೇಹತೂಕ ವಿಭಾಗದಲ್ಲಿ ಶಿವೆಶಿವಾನಿ ತುಲುವೆ ಪ್ರಕಾಶ್ ಶೆಟ್ಟಿ ಗಂಡೊಟ್ಟು ಕೆಂಜಾರ್ ಅವರು ಕಂಚಿನ ಪದಕ ಜಯಿಸಿದರು. ಅವರು ವಾಣಿಜ್ಯ ತೆರಿಗೆ ಇಲಾಖೆಯ ಉದ್ಯೋಗಿಯಾಗಿದ್ದು, ಮಂಗಳೂರು ಬಾಲಾಂಜನೇಯ ಜಿಮ್ ನಲ್ಲಿ ಮಾಜಿ ಅಂತರಾಷ್ಟ್ರೀಯ ಪವರ್ ಲಿಫ್ಟರ್ ದೇವದಾಸ್ ಕೂಳೂರು ಅವರಿಂದ ತರಬೇತಿ ಪಡೆಯುತಿದ್ದಾರೆ.

ಪ್ರಾದೇಶಿಕ ವಾರ್ತೆಗಳು

‘ಸಾಲ ಕೇಳ್ತಾ ಇಲ್ಲ.. ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ.’ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಒಕ್ಕೊರಲ ಆಗ್ರಹ

ಮಂಗಳೂರು: ಹಿರಿಯ ನಾಗರಿಕರ ದಿನಾಚರಣೆಯ ದಿನದಂದು ನಿವೃತ್ತ ಸರಕಾರಿ ನೌಕರರು ಪ್ರತಿಭಟನೆಗೆ ಇಳಿಸುವುದು ಸರಿಯಲ್ಲ. ಸಾಲ ನಾವೇನೂ ಕೇಳ್ತಾ ಇಲ್ಲ… ಸುದೀರ್ಘ ವರ್ಷಗಳ ಕಾಲ ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಬೇಕು. ಇನ್ನಾದರೂ ಹಿರಿಯರಾದ ನಮ್ಮನ್ನು ಬೀದಿಗೆ ಇಳಿಯುವಂತೆ ಮಾಡಬೇಡಿ ಎನ್ನುವುದು ನಮ್ಮ ಆಗ್ರಹವಾಗಿದೆ ಎಂದವರು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆ ದ.ಕ. ಜಿಲ್ಲಾ ಪ್ರಧಾನ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ. ಅವರು ಮಂಗಳವಾರ ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ವೇದಿಕೆಯ ವತಿಯಿಂದ ಜು.1,2022ರಿಂದ ಜು.31, 2024ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಡಿ.ಸಿ.ಆರ್.ಜಿ, ಕಮ್ಯೂಟೇಶನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೇ ವೇತನ ಆಯೋಗದ ಲೆಕ್ಕಚಾರದಲ್ಲಿ ನೀಡಬೇಕು ಹಾಗೂ ಪರಿಷ್ಕøತ ಆದೇಶ ನೀಡಬೇಕು ಎಂದು ಆಗ್ರಹಿಸಿ ನಿವೃತ್ತ ಸರಕಾರಿ ನೌಕರರು ಕಪ್ಪು ಪಟ್ಟಿ ಧರಿಸಿಕೊಂಡು ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಕೋವಿಡ್ ಸಮಯದಲ್ಲಿ ಸರಕಾರ ತುರ್ತು ಸೇವೆಗಳನ್ನು ಮಾಡಿದವರು ಸರಕಾರಿ ನೌಕರರು ಈಗಾಗಲೇ ನಮ್ಮ ಬೇಡಿಕೆಗಳನ್ನು ತಹಸೀಲ್ದಾರ್‍ನ ಮೂಲಕ ಆರ್ಥಿಕ ಇಲಾಖೆಯ ವರೆಗೂ ಗಮನ ಸೆಳೆಯುವ ಕೆಲಸ ಮಾಡಿದ್ದೇವೆ. ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯ ವ್ಯಾಪಿ ಇಂದು ಹಿರಿಯ ನಿವೃತ್ತ ನೌಕರರು ಬೀದಿಗೆ ಇಳಿದು ಪ್ರತಿಭಟನೆ ನಡೆಸುವ ಸ್ಥಿತಿ ನಿರ್ಮಾಣ ಮಾಡಿದೆ. ಇದು ಮುಂದುವರಿಯದೇ ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದರು. ಜಿಲ್ಲಾ ಸಂಚಾಲಕ ಸ್ಟ್ಯಾನಿ ತಾವ್ರೋ ಮಾತನಾಡಿ, ನಿವೃತ್ತ ಸರಕಾರಿ ನೌಕರರ ಬೀದಿಗೆ ಇಳಿದು ಪ್ರತಿಭಟನೆ ಮಾಡುವಂತದ್ದು ವಿಷಾದನೀಯ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಕೊಡಬೇಕು ಎಂದರು.ನಿವೃತ್ತ ಹಿರಿಯ ಸರಕಾರಿ ನೌಕರರ ವಿಠಲ ಶೆಟ್ಟಿಗಾರ್ ಮಾತನಾಡಿ, ನಾನು ನಿವೃತ್ತನಾಗಿ ಬಹಳ ವರ್ಷಗಳು ಆಗಿದೆ. ಆದರೆ ನಿವೃತ್ತ ಸರಕಾರಿ ನೌಕರರಿಗೆ ಅನ್ಯಾಯವಾಗುತ್ತಿರುವುದನ್ನು ನೋಡಿ ಸುಮ್ಮನೆ ಇರಲು ಸಾಧವಾಗದೇ ಪ್ರತಿಭಟನೆಗೆ ಬಂದಿದ್ದೇನೆ ಎಂದರು. ಜಿಲ್ಲಾ ಸಂಚಾಲಕ ನಾರಾಯಣ ಪೂಜಾರಿ ಮಾತನಾಡಿ, ಸರಕಾರಕ್ಕೆ ಇದು ಶೋಭೆ ತರುವ ಕೆಲಸವಲ್ಲ. ನವೇನೂ ಹೆಚ್ಚುವರಿ ಬೇಕು ಅನ್ನುತ್ತಿಲ್ಲ. ಹಕ್ಕಿನಲ್ಲಿ ಇರುವ ಸವಲತ್ತನ್ನು ನ್ಯಾಯಯುತವಾಗಿ ನೀಡಿ ಎನ್ನುವುದು ನಮ್ಮ ಮನವಿ. ಸರಕಾರದ ಯೋಜನೆಗಳನ್ನು ಜಾರಿಗೊಳಿಸುವ ಬಹಳಷ್ಟು ಕೆಲಸಗಳಲ್ಲಿ ನಮ್ಮ ಪಾತ್ರವಿದೆ ಆದರೆ ನಮ್ಮನ್ನು ಕಡೆಗಣಿಸುವುದು ಸರಿಯಲ್ಲ. ಸಮಸ್ಯೆಗೆ ಪರಿಹಾರ ನೀಡಲು ತಕ್ಷಣವೇ ಆದೇಶ ಮಾಡಬೇಕು. ಸಂಧ್ಯಾ ಕಾಲದಲ್ಲಿ ನಮಗೆ ಪ್ರತಿಭಟನೆಗೆ ಇಳಿಸುವುದು ಸರಿಯಲ್ಲ ಎಂದರು.ಸಂಚಾಲಕರಾದ ಮಂಜುಳಾ ಜೀ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯ ಬಳಿಕ ಸಂಚಾಲಕರು ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಅವರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಹಿರಿಯ ಸರಕಾರಿ ನೌಕರರಾದ ವಿಜಯ ಪೈ, ಮೋಹನ ಬಂಗೇರ, ಎನ್. ಆನಂದ ನಾಯ್ಕ್, ಹೇಮನಾಥ, ಜೆರಾಲ್ಡ್, ಭಾರತಿ ಪಿ.ವಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಶನಿ ಮಹಾತ್ಮೆ ನಾಟಕದ ಟೀಸರ್, ಪೋಸ್ಟರ್ ಬಿಡುಗಡೆ. ‘ಪೌರಾಣಿಕ ನಾಟಕಗಳಿಂದ ಪ್ರೇಕ್ಷಕರಿಗೆ ಭಕ್ತಿಯ ಸಂದೇಶ’ : ಪಟ್ಲ ಸತೀಶ್ ಶೆಟ್ಟಿ.

ಮಂಗಳೂರು; ಶ್ರೀ ಲಲಿತೆ ಕಲಾವಿದರು (ರಿ) ಮಂಗಳೂರು ಇವರ ನೂತನ ಕಲಾಕೃತಿ ಕದ್ರಿ ನವನೀತ ಶೆಟ್ಟಿಯವರು ರಚಿಸಿರುವ ಜೀವನ್ ಉಳ್ಳಾಲ್ ನಿರ್ದೇಶನ, ಲಯನ್ ಕಿಶೋರ್ ಡಿ ಶೆಟ್ಟಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಶನಿ ಮಹಾತ್ಮೆ ತುಳು ಕನ್ನಡ ಪೌರಾಣಿಕ ನಾಟಕದ ಟೀಸರ್ ಮತ್ತು ಪೋಸ್ಟರ್ ಬಿಡುಗಡೆ ಕದ್ರಿ ಮಲ್ಲಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ನಾಟಕದ ಟೀಸರ್ ಬಿಡುಗಡೆಗೊಳಿಸಿದರು.ಶ್ರೀ ಲಲಿತೆ ಕಲಾವಿದರು ಕಟೀಲ್ದಪ್ಪೆ, ಗರುಡ ಪಂಚಮಿಯಂತಹ ಪೌರಾಣಿಕ, ಚಾರಿತ್ರಿಕ ನಾಟಕಗಳನ್ನು ಪ್ರದರ್ಶಿಸುವ ಮೂಲಕ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದವರು. ಸಾಮಾಜಿಕ ನಾಟಕಗಳ ಮಧ್ಯೆ ಇಂತಹ ಪೌರಾಣಿಕ ನಾಟಕಗಳಿಂದ ಪ್ರೇಕ್ಷಕರಿಗೆ ಭಕ್ತಿಯ ಸಂದೇಶ ತಿಳಿಸಲು ಸಾಧ್ಯವಾಗುತ್ತದೆ ಎಂದು ಅವರು ಶುಭ ಹಾರೈಸಿದರು.ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ ಪೋಸ್ಟರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.ತುಳು ಕನ್ನಡದಲ್ಲಿ ಪ್ರದರ್ಶನಗೊಳ್ಳುವ ಶನಿ ಮಹಾತ್ಮೆ ನಾಟಕವನ್ನು ಕದ್ರಿ ನವನೀತ ಶೆಟ್ಟಿ ರಚಿಸಿ, ಸಾಹಿತ್ಯ ಬರೆದಿದ್ದಾರೆ. ಜೀವನ್ ಉಳ್ಳಾಲ್ ನಾಟಕ ನಿರ್ದೇಶಿಸಿದ್ದಾರೆ.ಸಮಾರಂಭದಲ್ಲಿ ತಂಡದ ವ್ಯವಸ್ಥಾಪಕ ಲಯನ್ ಕಿಶೋರ್ ಡಿ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಮೋಹನ್ ಕೊಪ್ಪಳ ಕದ್ರಿ ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ಶ್ರೀ ಶನೀಶ್ವರನ ಮಹಿಮೆಯ ನವರಸ ಕಥಾವಾಹಿನಿಯಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ, ರಮೇಶ್ಚಂದ್ರ, ಗುರುರಾಜ್, ರವೀಂದ್ರಪ್ರಭು ಪಲ್ಲವಿಪ್ರಭು ಸ್ವರಮಾಧುರ್ಯವಿದೆ.ಶನಿ ಮಾಹಾತ್ಮೆ ಪೌರಾಣಿಕ ನಾಟಕದ ಮೊದಲ ಪ್ರದರ್ಶನ ನವಂಬರ್ 10 ಭಾನುವಾರ ಸಂಜೆ 4.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯುವ ರಂಗಚಾವಡಿ ವರ್ಷದ ಹಬ್ಬ ಕಾರ್ಯಕ್ರಮದಲ್ಲಿ ಉಚಿತ ಪ್ರದರ್ಶನಗೊಳ್ಳಲಿದೆ. ಶನಿ ಮಹಾತ್ಮೆ ನಾಟಕಕ್ಕೆ ಗುರುರಾಜ್ ಎಂ. ಬಿ. ಅವರು ಸಂಗೀತ ಸಾರಥ್ಯ ನೀಡಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಅ.9 ರಿಂದ 13ರವರೆಗೆ ವಾಮಂಜೂರು ಶಾರದಾ ಮಹೋತ್ಸವ

ಮಂಗಳೂರು: ಶ್ರೀ ರಕ್ತೇಶ್ವರೀ ಮತ್ತು ಪಂಚದೇವತಾ ಸಾನಿಧ್ಯ ಶ್ರೀ ರಾಮನಗರ ವಾಮಂಜೂರು ಇದರ ವತಿಯಿಂದ ವಾಮಂಜೂರು ಕೇಂದ್ರ ಮೈದಾನದಲ್ಲಿ ಅ.9‌ರಿಂದ 13 ರವರೆಗೆ ಸಾರ್ವಜನಿಕ ವಾಮಂಜೂರು ಶಾರದಾ ಮಹೋತ್ಸವ ನಡೆಯಲಿದೆ.ಅ.9‌ರ‌ ಬೆಳಿಗ್ಗೆ 9 ಗಂಟೆಗೆ ಶಾರದಾ ಮಾತೆಯ ಪ್ರತಿಷ್ಠೆ ನಡೆಯಲಿದ್ದು ಶಾರದಾ ಮಹೋತ್ಸವವನ್ನ ಮಂಗಳೂರಿನ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಎಸ್.ಗಣೇಶ್ ರಾವ್ ಉದ್ಘಾಟಿಸಲಿದ್ದಾರೆ.ಶಾಸಕ ಡಾ.ವೈ.ಭರತ್ ಶೆಟ್ಟಿ ಅವರಿಂದ ಗೋಪೂಜೆ ನಡೆಯಲಿದೆ.ಐದು‌ ದಿನಗಳ‌ ಕಾಲ‌ ಗೋಪೂಜೆ,ಶಾರದಾ ಮಾತೆಗೆ ವಿಶೇಷ ಪೂಜೆ,ವಿವಿಧ ಮಂಡಳಿಗಳಿಂದ ಭಜನೆ, ಧಾರ್ಮಿಕ ಸಭೆ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಪ್ರತಿದಿನ ಮಧ್ಯಾಹ್ನ ಪ್ರಸಾದ ರೂಪವಾಗಿ‌ ಅನ್ನಸಂತರ್ಪಣೆ ನಡೆಯಲಿದೆ.ಅ.12‌ರಂದು ಬೆಳಗ್ಗೆ 8 ರಿಂದ ಅಕ್ಷರಾಭ್ಯಾಸ,ಬೆಳಿಗ್ಗೆ 10 ಗಂಟೆಗೆ ದುರ್ಗಾ ಹೋಮ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅ.9 ರಂದು ರಾತ್ರಿ 7.45‌ರಿಂದ ಪೊಳಲಿ ಅಡ್ಡೂರಿನ ಸಿಂಚನ‌ ಮತ್ತು ತಂಡದಿಂದ ಭಕ್ತಿಭಾವ ಸಂಗಮ,ಅ.10‌ರ‌ ರಾತ್ರಿ 7.45 ರಿಂದ ವಾಮಂಜೂರಿನ ಅಂಕಿತ ಅಮೀನ್ ಮತ್ತು ಬಳಗದಿಂದ ಭರತನಾಟ್ಯಂ,ರಾತ್ರಿ‌8.45 ರಿಂದ ರ್ಯಾಪ್ ಟ್ರ್ಯಾಕ್ ಮೆಲೋಡಿಸ್ ಕುಡ್ಲ ಇವರಿಂದ ಸಂಗೀತ ರಸ ಸಂಜೆ ನಡೆಯಲಿದೆ.ಅ.11ರಂದು ರಾತ್ರಿ‌ 7.45‌ಕ್ಕೆ ವಿದುಷಿ ರಕ್ಷಿತಾ ಎಲ್‌ ಭಟ್ ತಂಡದಿಂದ ಶ್ರೀ ದೇವಿ ತುಳಸಿ ಪಾರಮ್ಯ‌ ಪೌರಾಣಿಕ ಗೀತಾ ರೂಪಕ,ರಾತ್ರಿ 8.45 ರಿಂದ ಕದ್ರಿಯ ನೃತ್ಯ ಭಾರತಿ‌ ಸಂಸ್ಥೆಯಿಂದ ನೃತ್ಯ ಉಲ್ಲಾಸ‌ ನಡೆಯಲಿದೆ.ಅ.12 ರ ರಾತ್ರಿ‌8.45 ರಿಂದ ವಾಮಂಜೂರು ಫ್ರೆಂಡ್ಸ್ ವಾಮಂಜೂರು ಹುಲಿ ಪ್ರಯೋಜಿಸುವ ವಿಧಾತ್ರಿ ಕಲಾವಿದೆರ್ ಕೈಕಂಬ ಕುಡ್ಲ ಇವರಿಂದ ದೈವರಾಜೆ ಶ್ರೀ ಬಬ್ಬುಸ್ವಾಮಿ ಭಕ್ತಿ ಪ್ರಧಾನ ತುಳು‌ ನಾಟಕ ಪ್ರದರ್ಶನಗೊಳ್ಳಲಿದೆ. ಅ.13‌ರಂದು ಸಂಜೆ 6 ರಿಂದ ನೃತ್ಯ ಶಿವಂ ಡ್ಯಾನ್ಸ್ ಸ್ಟುಡಿಯೋ ವಾವಂಜೂರು ಇವರಿಂದ ನೃತ್ಯ ವೈಭವ ನಡೆಯಲಿದೆ.ಬಳಿಕ ಸಂಜೆ 6 .30ಕ್ಕೆ ಉತ್ಸವ ಮಂಟಪದಿಂದ ವಿವಿಧ ವಾದ್ಯಗೋಷ್ಟಿ,ಆಕರ್ಷಕ ಟ್ಯಾಬ್ಲೋಗಳು,ಭಜನೆಯೊಂದಿಗೆ ಶ್ರೀ ಶಾರದಾ ಮಾತೆಯ ಬೃಹತ್ ಶೋಭಾಯಾತ್ರೆ ಹೊರಟು ವಾಮಂಜೂರಿನ ಮಂಗಳ ಜ್ಯೋತಿವರೆಗೆ ತೆರಳಿ ಅಲ್ಲಿಂದ ಹಿಂತಿರುಗಿ ಬಂದು ಗುರುಪುರ ಫಲ್ಗುಣಿ ನದಿಯಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹ ವಿಸರ್ಜನೆ ಮಾಡಲಾಗುವುದು ಎಂದು ಶಾರದಾ ಮಹೋತ್ಸವದ ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿ ಪ್ರತಿಕಾ ಪ್ರಕಟನೆಯಲ್ಲಿ ತಿಳಿದಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಮ್ತಾಜ್ ಅಲಿ ನಿಧನಕ್ಕೆ ಕೆ. ಎಂ. ಮುಸ್ತಫ ತೀವ್ರ ಸಂತಾಪ

ಸುಳ್ಯ :ನಗುಮಖದ ಕ್ರಿಯಾಶೀಲ ನಾಯಕನನ್ನು ಕಳೆದುಕೊಂಡು ಸಮಾಜಕ್ಕೆ ತುಂಬಲರಾದ ನಷ್ಟ, ವಿವಿಧ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾವಿರಾರು ಬಡ ಕುಟುಂಬಗಳಿಗೆ ಬದುಕು ಕಟ್ಟಿ ಕೊಡಲು ಸಹಕಾರಿಯಾದ ಮಂಗಳೂರಿನ ಖ್ಯಾತ ಉದ್ಯಮಿ ಸಾಮಾಜಿಕ ಸೇವಾ ಮುಖಂಡ ಮಮ್ತಾಜ್ ಅಲಿಯವರ ಹಠಾತ್ ಅಗಲುವಿಕೆ ನಮ್ಮೆಲ್ಲರನ್ನು ದಿಗ್ಭ್ರಮೆ ಗೊಳಿಸಿದೆ, ಓರ್ವ ಆತ್ಮೀಯ ಮಿತ್ರನನ್ನು ಕಳೆದುಕೊಂಡ ನನಗೆ ಇದರಿಂದ ತೀವ್ರ ಅಘಾತವಾಗಿದೆ ಎಂದು ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಕೆ ಎಂ. ಮುಸ್ತಫ ಶೋಕ ಸಂದೇಶದಲ್ಲಿ ತಿಳಿಸಿರುತ್ತಾರೆ.ಅವರ ಕುಟುಂಬ ಬಂಧು ಮಿತ್ರಾದಿಗಳಿಗೆ ಅವರ ಆಗಲುವಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕ ಉದ್ಘಾಟನೆ

ಅಕ್ಟೊಬರ್ 3, ಜರ್ಮನಿಯು ಏಕೀ ಕರಣವಾದ ದಿನ. ಮ್ಯೂನಿಕ್ ನಗರದಲ್ಲಿ ಅಕ್ಟೊಬರ್ ಫೆಸ್ಟ್ ನೋಡಲೆಂದು ಜನಸಾಗರ. ಈಸಂಭ್ರಮದ ಮಧ್ಯವೇ ಇತ್ತಕಡೆಯಲ್ಲಿ ಐನೇವೆಲ್ಟ್ ಹೌಸ್ ನಲ್ಲಿರುವ ಒಂದು ರಂಗಮಂದಿರದಲ್ಲಿ ಸುಮಾರು ಜನ ಕಿಕ್ಕಿರಿದು ತುಂಬಿದ್ದರು. ಎಲ್ಲರಲ್ಲೂ ಕಾರ್ಯ ಕ್ರಮದ ಬಗ್ಗೆ ಕುತೂಹಲ. ಯಕ್ಷಧ್ರುವ ಪಟ್ಲ ಫೌಂಡೇಷನ್ ಇದರ ಯುರೋಪ್ ಘಟಕ ಸ್ಥಾಪಿಸಿಔಪಚಾರಿಕವಾಗಿ ಘೋಷಣೆ ಮಾಡುವ ದಿನ.ಮುಖ್ಯ ಅತಿಥಿಗಳಾಗಿ ಭಾರತೀಯ ರಾಯಭಾರ ಕಚೇರಿಯಲ್ಲಿ ಸಾಂಸ್ಕೃತಿಕ ಅಧಿಕಾರಿಗಳಾಗಿರುವ ಶ್ರೀ ರಾಜೀವ್ ಚಿತ್ಕಾರ,ಮ್ಯೂನಿಕ್ ನಗರದ ಎಲ್ಎಂಯೂ ವಿಶ್ವವಿದ್ಯಾ ಲಯ ಇಂಡಾಲಜಿ ವಿಭಾಗದ ಪ್ರಸಿದ್ಧ ನಿವೃತ್ತ ಪ್ರಾಧ್ಯಾಪಕ ಡಾ. ರಾಬರ್ಟ್ಜೈಡನ್ಬೊಸ್ ಹಾಗೂ ಸನಾತನ ಅಕಾಡಮಿಯ ಶ್ರೀಮತಿ ಅನೂಷಾ ಶಾಸ್ತ್ರಿ , ಸಿರಿಗನ್ನಡಕೂಟ ಮ್ಯೂನಿಕ್ ಅಧ್ಯಕ್ಷ ಶ್ರೀ ಶ್ರೀಧರಲಕ್ಷ್ಮಾಪುರ ಹಾಗೂ ಫ್ರಾಂಕ್ಫರ್ಟ್ ರೈನ್ ಮೈನ್ ಕನ್ನಡ ಸಂಘದ ಅಧ್ಯಕ್ಷ ಶ್ರೀ ವೇದಮೂರ್ತಿ ಅವರು ಆಗಮಿಸಿದ್ದರು.ಮುಖ್ಯ ಅತಿಥಿಗಳು ದೀಪ ಹಚ್ಚಿ ಸಾಂಕೇತಿಕವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕ ಉದ್ಘಾಟನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರಾಜೀವ್ ಚಿತ್ಕಾರರು ಯಕ್ಷಗಾನ ಈ ಮೊದಲು ನೋಡಿರಲಿಲ್ಲ ಇದು ನಮ್ಮ ಭಾರತದ ಅದ್ಭುತ ಕಲೆ ಎಂಬುದು ನಮಗೆ ಹೆಮ್ಮೆ, ಇಂತಹ ಪ್ರಾಚೀನ ಕಲೆಯನ್ನ ಪಾರಂಪರಿಕವಾಗಿ ಪ್ರಪಂಚಕ್ಕೆ ಪರಿಚಯಿಸುವಲ್ಲಿಈ ಯಕ್ಷಧ್ರುವ ಸಂಸ್ಥೆಯು ಯಶಸ್ವೀ ಆಗಲೆಂದು ಆಶಿಸಿದರು.ಡಾ. ಜೈಡನ್ಬೋಸ್ ಅವರು ಅಚ್ಚ ಕನ್ನಡದಲ್ಲಿ ಮಾತನಾಡಿಇಪ್ಪತ್ತು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿನ ಒಂದು ಸಣ್ಣಹಳ್ಳಿಯಲ್ಲಿ ಯಕ್ಷಗಾನ ಬಯಲಾಟ ನೋಡಿದ ನೆನಪು ಮಾಡಿಕೊಂಡು, ತಾಯ್ನಾಡಿನಿಂದ ದೂರ ಬಂದಿರುವ ನೀವೆಲ್ಲ ಈ ಯಕ್ಷಗಾನವನ್ನು ಇಲ್ಲಿ ಸಹ ಪರಿಚಯ ಮಾಡುವ ಪ್ರಯತ್ನ ನನಗೆ ಬಹಳ ಸಂತಸ ತಂದಿದೆ. ನಿಮ್ಮ ಪ್ರಯತ್ನ ಸಫಲವಾಗಲಿ ಎಂದು ಆಶೀರ್ವದಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಅಧ್ಯಕ್ಷರಾದ ಶ್ರೀನರೇಂದ್ರ ಶೆಣೈ ರವರು ಮಾತನಾಡಿ ತಮ್ಮ ಹಲವು ವರ್ಷಗಳ ಮಹಾದಾಶಯ ಇಂದು ಕಾರ್ಯಗತ ಆಯ್ತು, ಬಹಳ ಸಂತಸದ ದಿನ, ಮುಂದಿನ ದಿನಗಳಲ್ಲಿ ಯಕ್ಷಗಾನ ಗುರು ಅಜಿತ್ ಪ್ರಭು ರವರ ಸಾರತ್ಯದಲ್ಲಿ ಯುರೋಪ್ ಆದ್ಯಂತ ಯಕ್ಷಗಾನ ಪ್ರದರ್ಶನ ಹಾಗೂ ಮುಖ್ಯವಾಗಿ ನಮ್ಮ ಮುಂದಿನ ಪೀಳಿಗೆಗೆ ಈ ಕಲೆಯನ್ನು ಧಾರೆ ಎರೆಯುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.ಈ ಸುದಿನದಂದು ಸಂಸ್ಥೆಯ ಕಾರ್ಯದರ್ಶಿ ಹಾಗೂ ಜರ್ಮನಿಯ ಯಕ್ಷಗಾನ ಕಲಾವಿದರು ಮತ್ತು ಗುರು ಶ್ರೀ ಅಜೀತ್ ಪ್ರಭು ಕಳೆದ ಒಂದು ವರ್ಷದಿಂದ ಜರ್ಮನಿಯ ಮ್ಯೂನಿಕ್, ಪ್ರಾಂಕ್ಪರ್ಟ್, ನೂರೆನ್ಬರ್ಗ್, ಮತ್ತು ಬೆಲ್ಜಿಯಂ ನ ಬ್ರುಸ್ಸೇಲ್ಸ್ ನಗರಗಳಿಂದ ಯಕ್ಷಗಾನ ಕಲಿಯುತ್ತಿದ್ದ ತಮ್ಮ ವಿದ್ಯಾರ್ಥಿಗಳೊಡನೆ ಯಕ್ಷಗಾನ ಕಲೆಯನ್ನ ಸಂಪ್ರದಾಯಿಕವಾಗಿ ಪರಿಚಯಿಸುವ ಉದ್ದೇಶದಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಹೆಜ್ಜೆ ಕಲಿತು ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಗುರುಗಳು ಬಹಳ ವಿಭಿನ್ನವಾಗಿ ಚೌಕಿ ಪೂಜೆಯನ್ನ ರಂಗದಮೇಲೆ ನಡೆಸಿಕೊಟ್ಟು , ಬಾಲಗೋಪಾಲ, ಪೀಠಿಕೆ ಸ್ತ್ರೀವೇಷ , ತೆರೆ ಒಡ್ಡೋಲಗ , ಪ್ರಯಾಣ ಕುಣಿತ , ಅಭಿಮನ್ಯು ಸುಭದ್ರೆ ಸಂವಾದ ಈ ಎಲ್ಲ ವಿಭಾಗಗಳನ್ನ ವಿದ್ಯಾರ್ಥಿ ಗಳೊಂದಿಗೆ ಸಂಪ್ರದಾಯಿಕವಾಗಿ ಪ್ರದರ್ಶಿಸಿ ಪರಿಚಯ ಮಾಡಿಕೊಟ್ಟರು.ತದನಂತರ ಯಕ್ಷಗಾನ ವಿದ್ಯಾರ್ಥಿಗಳಿಂದ ಕೋಟ ಶಿವರಾಮ ಕಾರಂತರು ಪರಿಚಯಿಸಿದ ಯಕ್ಷಗಾನ ಬ್ಯಾಲೆ ರೂಪದಲ್ಲಿ ಪ್ರದರ್ಶನಗೊಂಡ ಚಿಕ್ಕ ಮಕ್ಕಳ”ಮಾಯಾಮೃಗ” (ಸೀತಾಪಹರಣ) ಯಕ್ಷಗಾನ ರೂಪಕ ಪ್ರೇಕ್ಷಕರನ್ನ ಮಂತ್ರಮುಗ್ಧ ಗೊಳಿಸಿತು.ವಿಶೇಷವೆಂದರೆ ಕಾರ್ಯಕ್ರಮ ವೀಕ್ಷಿಸಿದವರಲ್ಲಿ ಶೇಖಡಾ 20 ರಷ್ಟು ಕನ್ನಡೇತರ / ಜರ್ಮನ್ ನಾಗರಿಕರಿದ್ದರು. ಕಾರ್ಯಕ್ರಮದ ವೀಕ್ಷಿಸಿ ಯಕ್ಷಗಾನ ಪ್ರಾತ್ಯಕ್ಷಿಕೆ ಮತ್ತು ಮಕ್ಕಳ ಯಕ್ಷಗಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಕಲೆಗಾಗಿ ಕಲಾವಿದರಿಗಾಗಿಯೇ ಪಟ್ಲ ಫೌಂಡೇಶನ್ ಮಾಡುತ್ತಿರುವ ಕೆಲಸವನ್ನ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಮಕ್ಕಳ ಯಕ್ಷಗಾನ ವೀಕ್ಷಿಸಿದ ಬಹಳಷ್ಟು ಪೋಷಕರು ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳಿಗೆ ಯಕ್ಷಗಾನವನ್ನ ಕಲಿಸುವ ಆಸಕ್ತಿಯನ್ನ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಯಕ್ಷಗಾನ ಕಲೆಯನ್ನ ಉಳಿಸಿ ಬೆಳೆಸಿ ಯುರೋಪಿನಾದ್ಯಂತ ಪಸರಿಸುವ ನಮ್ಮ ಯಕ್ಷಧ್ರುವ ಫೌಂಡೇಶನ್ ನ ಮುಂಬರುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿ ಆಗುವುದೆನ್ನಲು ಇದೊಂದು ಅತಿದೊಡ್ಡ ಸೂಚನೆ ಎನ್ನಬಹುದು.

Scroll to Top