ಕಲೆ ಸಾಹಿತ್ಯ

ಕಲೆ ಸಾಹಿತ್ಯ, ಪ್ರಾದೇಶಿಕ ವಾರ್ತೆಗಳು

ನಾ ಕಂಡ ಉಪೇಂದ್ರ. ‘ಎ’ಯಿಂದ U. I. ತನಕ

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.ಮಂಗಳೂರು:1998ರಲ್ಲಿ ಉಪೇಂದ್ರ ಚಿತ್ರದ ಚಿತ್ರೀಕರಣ ಬ್ರಹ್ಮರಕೂಟ್ಲು ಸಮೀಪದ ತುಂಬೆ ರಾಮಲ್‌ಕಟ್ಟೆ ಆಲದ ಮರದ ಸುತ್ತ ನಡೆಯುತ್ತಿತ್ತು. ಆಗ ನಾನು ಉಪೇಂದ್ರರವರನ್ನು ಭೇಟಿಯಾಗಿ ಈ ಚಿತ್ರದ ಹೀರೋ ಯಾರು ಎಂದು ಕೇಳಿದೆ.  ಉಪೇಂದ್ರರವರು ‘ನಾನು’ ಅಂತ ಹೇಳಿದರು. ಆದರ ನಂತರ ವಿಲನ್ ಯಾರು ಎಂದು ಕೇಳಿದೆ. ಆಗ ಉಪೇಂದ್ರರವರು ‘ನಾನು’ ಎಂದು ಹೇಳಿದರು.  ಯಾವುದೇ ಪ್ರಶ್ನೆಯನ್ನು ಕೇಳಿದರೂ ಉಪೇಂದ್ರರವರು ನಾನು, ನಾನು ಎನ್ನುತ್ತಲೇ ಇದ್ದರು. ನನಗೆ ಏನೆಂದೇ ಅರ್ಥವಾಗಲಿಲ್ಲ. ಉಪೇಂದ್ರ ಚಿತ್ರ ನೋಡಿದ ಮೇಲೆ ಉಪೇಂದ್ರರವರು ಮನುಷ್ಯನ ಒಳಗಿರುವ ‘ನಾನು ‘ಎಂಬ ಅಹಂಕಾರದ ಬಗ್ಗೆ ಕಥೆ ಹೆಣೆದು ಚಿತ್ರ ಸಂದೇಶ ನೀಡಿದ್ದರು. ಉಪೇಂದ್ರರವರ ಎಲ್ಲಾ ಚಿತ್ರಗಳು ‘ಎ ’ ಯಿಂದ ಆರಂಭಿಸಿ ವಿಶಿಷ್ಟ ಡೈಲಾಗ್ ಮತ್ತು ಮ್ಯಾನರೀಸಂನಿಂದ ಪ್ರೇಕ್ಷಕರನ್ನು ತಲುಪುತ್ತವೆ.ಪ್ರಸ್ತುತ ಉಪೇಂದ್ರರವರ ‘U.I’ ಐದು ಭಾಷೆಗಳಲ್ಲಿ ತಯಾರಾಗಿದ್ದು,ಡಿಸೆಂಬರ್ 20ರಂದು ರಾಜ್ಯಾದಾದ್ಯಂತ ಬಿಡುಗಡೆಗೊಳ್ಳಲಿದೆ.ಉಪೇಂದ್ರರವರು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದಾಗ ಭಾಗವಹಿಸಿ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದೆ.ಮೊದಲನೆಯದು, ‘U.I’ ಚಿತ್ರ ಡಿಸೆಂಬರ್ 20ಕ್ಕೆ ಬಿಡುಗಡೆಯಾಗುತ್ತದೆ. ಇದರ ಬೆನ್ನಲ್ಲೇ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರ ಡಿಸೆಂಬರ್ 25ಕ್ಕೆ ಬಿಡುಗಡೆಯಾಗುತ್ತದೆ. ಬೆನ್ನು ಬೆನ್ನಿಗೆ ದೊಡ್ಡ ಬಜೆಟ್‌ನ ಚಿತ್ರಗಳು ಬಿಡುಗಡೆಗೊಂಡರೆ ಸಮಸ್ಯೆಯಾಗುವುದಿಲ್ಲವೇ ಎಂದು ಕೇಳಿದಾಗ, ಉಪೇಂದ್ರರವರು ನನ್ನ ಚಿತ್ರದ ಪ್ರೇಕ್ಷಕರು ನನ್ನ ಚಿತ್ರವನ್ನು ನೋಡುತ್ತಾರೆ. ಇದರಿಂದ ನಮಗೇನೂ ಸಮಸ್ಯೆ ಇಲ್ಲ ಎಂದರು. ಎರಡನೆಯದಾಗಿ, ‘ಎ ’ ಚಿತ್ರದ ಉಪೇಂದ್ರನಿಗೂ ‘U.I’ ಚಿತ್ರದ ಉಪೇಂದ್ರನಿಗೂ ಇರುವ ವ್ಯತ್ಯಾಸ ಏನೆಂದು ಕೇಳಿದೆ. ಆಗ ಅವರು ನೀವು ‘U.I’ ಚಿತ್ರವನ್ನು ನೋಡಿ ಗೊತ್ತಾಗುತ್ತದೆ ಎಂದರು.ಮೂರನೆಯದಾಗಿ, ಈಗ ಥಿಯೇಟರುಗಳಿಗೆ ಬಂದು ಚಿತ್ರ ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆಯಲ್ಲವೇ ಎಂದು ಕೇಳಿದೆ. ಆಗ ಉಪೇಂದ್ರರವರು ಉತ್ತಮ ಗುಣಮಟ್ಟದ ಸ್ವಾರಸ್ಯಕರ ಕಥೆಯಿರುವ ಚಿತ್ರವನ್ನು ಪ್ರೇಕ್ಷಕರು ಖಂಡಿತಾ ಥಿಯೇಟರಿಗೆ ಬಂದು ನೋಡುತ್ತಾರೆ. ಕನ್ನಡ ಚಿತ್ರ ಪ್ರೇಮಿಗಳು ಎಂದಿಗೂ ಕನ್ನಡ ಚಿತ್ರವನ್ನು ಸೋಲಲು ಬಿಡುವುದಿಲ್ಲವೆಂದರು.ನಾಲ್ಕನೇಯದಾಗಿ, ನೀವು ಪ್ರಜಾಕೀಯ ರಾಜಕೀಯದ ಮೂಲಕ ರಾಜಕೀಯ ಪಕ್ಷ ಕಟ್ಟಿದವರು. ಅದು ಈಗ ಯಾವ ಹಂತದಲ್ಲಿದೆ. ಎಂದು ಕೇಳಿದೆ. ಆಗ ಉಪೇಂದ್ರರವರು ನಾನು ಯಾವುದೇ ರಾಜಕೀಯ ಪಕ್ಷ ಕಟ್ಟಿಲ್ಲ. ಅದು ನನ್ನ ರಾಜಕೀಯ ಚಿಂತನೆ ಸಿದ್ಧಾಂತಗಳಷ್ಟೇ. ಯಾವುದಕ್ಕೂ ‘U.I’ ಪಿಕ್ಚರ್ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದರು.ಉಪೇಂದ್ರರವರ ‘U.I’ ಬಹು ಭಾಷಾ ಚಿತ್ರ ಯಶಸ್ವಿಯಾಗಲೆಂದು Mp mla’s ನ್ಯೂಸ್ ಶುಭ ಹಾರೈಸುತ್ತದೆ.ಚಿತ್ರಗಳು: ಸತೀಶ್ ಕಾಪಿಕಾಡ್, ಸುರೇಶ್ ಪಂಡಿತ್ ಮತ್ತು ರಾಜೇಶ್ ಅಮೀನ್ ಮುಲ್ಕಿ

ಕಲೆ ಸಾಹಿತ್ಯ

ತುಳು ರಂಗಭೂಮಿಗೆ ಒಂದು ಹೊಸತನದ ನಾಟಕ “ಶನಿ ಮಹಾತ್ಮೆ”

ಅದೊಂದು ಭಿನ್ನ ನಾಟಕ. ಶನಿಯ ಕಥೆಯಲ್ಲಿ ಎಷ್ಟೋ ನಾಟಕ, ಯಕ್ಷಗಾನಗಳು ಬಂದಿರಬಹುದು. ಆದರೆ ಲ। ಕಿಶೋರ್‌ ಡಿ. ಶೆಟ್ಟಿ ನೇತೃತ್ವದ ಶ್ರೀಲಲಿತೆ ತಂಡದವರು ಕದ್ರಿ ನವನೀತ ಶೆಟ್ಟಿ ರಚನೆಯಲ್ಲಿ ಜೀವನ್ ಉಳ್ಳಾಲ್ ನಿರ್ದೇಶನದಲ್ಲಿ ನ.10ರಂದು ಸುರತ್ಕಲ್‌ನಲ್ಲಿ ಚೊಚ್ಚಲ ಪ್ರದರ್ಶನ ನೀಡಿರುವ ಶನಿ ಮಹಾತ್ಮೆ ತುಳು ನಾಟಕವು ಈ ಹಿಂದಿನ ಶನಿ ಕಥೆಯಾಧಾರಿತ ಎಲ್ಲ ನಾಟಕ, ಯಕ್ಷಗಾನಗಳಿಗಿಂತಲೂ ಭಿನ್ನವಾಗಿದೆ. ರಂಗಚಾವಡಿ ವಾರ್ಷಿಕ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತುಂಬಿ ತುಳುಕುತ್ತಿದ್ದ ಸುರತ್ಕಲ್‌ನ ಬಂಟರ ಭವನದಲ್ಲಿ ನ. 10ರಂದು ಪ್ರದರ್ಶನಗೊಂಡ ಈ ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲಿರುವ ಹರಿಶ್ಚಂದ್ರ – ಚಂದ್ರಮತಿಯ ದೃಶ್ಯವಂತೂ ಪ್ರೇಕ್ಷಕರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಅಂಥ ಅಭಿನಯ ನೀಡಿರುವ ಚಂದ್ರಮತಿ ಮತ್ತು ಹರಿಶ್ಚಂದ್ರ ಪಾತ್ರಧಾರಿಗಳಿಗೆ ದೊಡ್ಡ ಶಹಬ್ಬಾಸ್‌ ಹೇಳಲೇಬೇಕಾಗಿದೆ.ಈ ನಾಟಕದಲ್ಲಿ ಶನಿ ಕಾಟದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಹಲವಾರು ಪುರಾಣ ಪುರುಷರ ಕಥೆಗಳನ್ನು ಒಪ್ಪ ಓರಣವಾಗಿ ಪ್ರೇಕ್ಷಕರ ಮುಂದೆ ಕಟ್ಟಿ ಕೊಡಲಾಗಿದೆ. ಕದ್ರಿ ನವನೀತ್‌ ಶೆಟ್ಟಿ ರಚನೆಯ ಈ ನಾಟಕದಲ್ಲಿ ಸೂರ್ಯದೇವ, ದೇವಗುರು ಬೃಹಸ್ಪತಿ, ಪರಮೇಶ್ವರ, ನಳ ಮಹಾರಾಜ, ವಿಕ್ರಮಾದಿತ್ಯ, ಹರಿಶ್ಚಂದ್ರ ಮುಂತಾದವರು ಶನಿ ಪ್ರಭಾವದಿಂದ ಪಡುವ ಕಷ್ಟವನ್ನು ಮನಸ್ಪರ್ಶಿಯಾಗಿ ಕಟ್ಟಿ ಕೊಡಲಾಗಿದೆ. ಬೇರೆ ಬೇರೆ ಯುಗದ ಕಥೆಗಳನ್ನು ಹೆಕ್ಕಿ ಒಂದೇ ನಾಟಕದಲ್ಲಿ ತೋರಿಸಿರುವುದು ಈ ನಾಟಕದ ಒಂದು ವಿಶೇಷತೆಯಾಗಿದೆ. ಶನಿಯ ಪಾತ್ರವಂತೂ ಅದ್ಭುತವಾಗಿತ್ತು. ಅಜಾನುಬಾಹು ದೇಹದ ಶನಿಯ ಅಟ್ಟಹಾಸ ಪ್ರೇಕ್ಷಕರಲ್ಲಿ ಒಂದು ರೀತಿಯ ಭಯಭಕ್ತಿ ಮೂಡುವಂತೆ ಮಾಡಿತ್ತು.ಈ ನಾಟಕದ ಇನ್ನೊಂದು ಪ್ರಮುಖ ಅಂಶವೆಂದರೆ ಅತ್ಯಾಕರ್ಷಕ ರಂಗಾಲಂಕಾರ. ಕಾಗೆಯನ್ನೇರಿ ಶನಿ ಸಂಚರಿಸುವುದು, ರಥದಲ್ಲಿ ಸೂರ್ಯನ ಸಂಚಾರ, ಗೋಡೆಯಲ್ಲಿ ತೂಗಿ ಹಾಕಲಾಗಿದ್ದ ಹಂಸದ ಚಿತ್ರಪಟ ಮುತ್ತಿನ ಹಾರವನ್ನು ನುಂಗುವುದು ಮುಂತಾದ ಕೆಲವು ದೃಶ್ಯಗಳು ಅತ್ಯುದ್ಭುತವಾಗಿದ್ದವು. ನಂದಿಶ್ರೇಷ್ಠಿಯ ಪುತ್ರಿಯ ನೃತ್ಯವೂ ಆಕರ್ಷಕವಾಗಿತ್ತು. ವಿಕ್ರಮಾದಿತ್ಯ, ಹನುಮಂತನ ಪಾತ್ರವೂ ಮನಸ್ಪರ್ಶಿಯಾಗಿತ್ತು. ನಾಟಕದಲ್ಲಿ ಕೆಲವು ಹಾಡುಗಳಿದ್ದು, ಅವು ಕಿವಿಗೆ ಇಂಪು ನೀಡುವಲ್ಲಿ ಸಫಲವಾಗಿವೆ. ಜತೆಗೆ ಬಹುತೇಕ ದೃಶ್ಯಗಳಲ್ಲಿ ಆಕರ್ಷಕ ಸಂಗೀತವೂ ಇದ್ದುದರಿಂದ ಇದೊಂದು ಸಂಗೀತಮಯ ನಾಟಕದ ರೂಪದಲ್ಲೂ ಇತ್ತು. ಅದು ಕೂಡ ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ. ಸಂಭಾಷಣೆಯನ್ನು ಧ್ವನಿ ಮುದ್ರಿಸಿಕೊಳ್ಳಲಾಗಿದ್ದರೂ ಎಲ್ಲೂ ಹಾಗೆ ಅನಿಸಲೇ ಇಲ್ಲ. ಎಲ್ಲವೂ ಪಾತ್ರಧಾರಿಗಳು ಮಾತನಾಡುವಂತೆಯೇ ನೈಜವಾಗಿತ್ತು. ಕಿವಿಗೆ ಬಡಿಯುವಂತೆ ಅಟ್ಟಹಾಸ, ಅತಿಯಾದ ಏರು ಸ್ವರದ ಕಿರಿಕಿರಿ ಇಲ್ಲದಿರುವುದು ಕೂಡ ಒಂದು ಪ್ಲಸ ಪಾಯಿಂಟ್‌. ರಂಗಾಲಂಕಾರದ ಜತೆಗೆ ಬೆಳಕಿನ ವ್ಯವಸ್ಥೆಯೂ ಅತ್ಯುತ್ತಮವಾಗಿತ್ತು.ನಾಟಕಕ್ಕೆ ಜೀವನ್‌ ಉಳ್ಳಾಲ್‌ ಅವರು ನಿರ್ದೇಶನ ನೀಡಿದ್ದು, ವಸಂತ್ರಲಂಕಾರ ಲಲಿತ ಅವರದ್ದಾಗಿದೆ. ಪಟ್ಲ ಸತೀಶ್ ಶೆಟ್ರ “ರುದ್ರ ರೂಪದ ಭದ್ರ ಕಾಯೊದ ಛಾಯಾಪುತ್ರೆ ಶನಿರಾಜೆ” ಹಾಡು ನಾಟಕದ ಹೈಲೈಟ್ಸ್ ಆಗಿದೆ.ನಾಟಕದ ಬಹುತೇಕ ಎಲ್ಲ ಪಾತ್ರಗಳಿಗೂ ಕಲಾವಿದರು ಅತ್ಯಂತ ಸೂಕ್ತ ರೀತಿಯಲ್ಲಿ ನ್ಯಾಯ ನೀಡಿದ್ದು, ಯಾರದ್ದೂ ಕಳಪೆ ಎನ್ನುವಂಥ ಪ್ರದರ್ಶನ ಇರಲೇ ಇಲ್ಲ. ಚೊಚ್ಚಲ ಪ್ರದರ್ಶನವಾಗಿದ್ದರೂ ಎಲ್ಲೂ ಮೊದಲ ಪ್ರದರ್ಶನ ಎಂದು ಅನಿಸಲೇ ಇಲ್ಲ. ಇದು ಇನ್ನಷ್ಟು ಪ್ರದರ್ಶನ ನೀಡಿದ ಬಳಿಕ ಮತ್ತಷ್ಟು ಉತ್ತಮವಾಗಿ ಒಂದು ಅತ್ಯಂತ ಶ್ರೇಷ್ಠ ಮಟ್ಟದ ನಾಟಕವಾಗಿ ತುಳು ರಂಗಭೂಮಿಗೆ ಒಂದು ದೊಡ್ಡ ಕೊಡುಗೆ ನೀಡುವುದರಲ್ಲಿ ಸಂದೇಹವೇ ಇಲ್ಲ.

ಕಲೆ ಸಾಹಿತ್ಯ

“90 ಎಮ್ ಎಲ್” ತುಳು ಸಿನಿಮಾಕ್ಕೆ ಶರವು ದೇವಸ್ಥಾನದಲ್ಲಿ ಮುಹೂರ್ತ

ಮಂಗಳೂರು: ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ರಂಜಿತ್ ಸಿ ಬಜಾಲ್ ನಿರ್ದೇಶನದಲ್ಲಿ ಡೋಲ್ಪಿ ಡಿ ಸೋಜ ನಿರ್ಮಾಣದಲ್ಲಿ ತಯಾರಾಗುತ್ತಿರುವ “90 ಎಮ್ ಎಲ್” ತುಳು ಚಲನ ಚಿತ್ರದ ಮುಹೂರ್ತ ಸಮಾರಂಭವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.ಶರವು ರಾಘವೇಂದ್ರ ಶಾಸ್ತ್ರಿ ಸಿನಿಮಾಕ್ಕೆ ಕ್ಲಾಪ್ ಮಾಡಿದರು. ನಟ ವಿನೀತ್ ಕುಮಾರ್, ನಟಿ ರುಹಾನಿ ಶೆಟ್ಟಿ, ರೋಶನ್ ಶೆಟ್ಟಿ, ಪುಷ್ಪರಾಜ್ ಬೊಳ್ಳೂರು, ನಿರ್ದೇಶಕ ರಂಜಿತ್ ಸಿ ಬಜಾಲ್, ನಿರ್ಮಾಪಕ ಡೋಲ್ಪಿ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.ವಿನೀತ್ ಕುಮಾರ್ ಅಭಿನಯದ 90 ಎಮ್ ಎಲ್ ಸಿನಿಮಾದಲ್ಲಿ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಉಮೇಶ್ ಮಿಜಾರ್, ಪುಷ್ಪರಾಜ್ ಬೊಳ್ಳೂರು ಅಭಿನಯಿಸಲಿದ್ದಾರೆ. ರಂಜಿತ್ ಸಿ ಬಜಾಲ್ ಚಿತ್ರಕತೆ, ನಿರ್ದೇಶನ, ಸಂಭಾಷಣೆ ತುಳಸಿದಾಸ್ ಮಂಜೇಶ್ವರ್, ಛಾಯಾಗ್ರಾಹಣ ಅರ್ಜುನ್ ಎಂವಿ, ಸಂಗೀತ ಸೃಜನ್ ಕುಮಾರ್ ತೋನ್ಸೆ, ಸಂಕಲನ ವಿಶಾಲ್ ದೇವಾಡಿಗ, ಪಿಆರ್ ಒ ಬಾಳ ಜಗನ್ನಾಥ ಶೆಟ್ಟಿ, ಡಿಸೈನ್ ಆಚಾರ್ಯ ಗುರು. ಮಂಗಳೂರು ಸುತ್ತ ಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಸಿನಿಮಾ ನಿರ್ದೇಶಕ ರಂಜಿತ್ ಸಿ ಬಜಾಲ್ ತಿಳಿಸಿದ್ದಾರೆ.

ಕಲೆ ಸಾಹಿತ್ಯ

ಕಿಚ್ಚ ಸುದೀಪ್‌ಗೆ ಪ್ರಶ್ನೆಗಳ ಸುರಿಮಳೆ! ವರ್ಷಕ್ಕೆ 2 ಸಿನಿಮಾ ಎಲ್ಲಿ ಅಂತ ಪ್ರಶ್ನಿಸಿದ ಫ್ಯಾನ್ಸ್

ಕಿಚ್ಚ ಸುದೀಪ್ ವರ್ಷಕ್ಕೆ ಒಂದೇ ಸಿನಿಮಾ ಮಾಡ್ತಿದ್ದಾರೆ. ಬಿಗ್ ಬಾಸ್, ಸಿಸಿಎಲ್ ಅಂತ ಬ್ಯುಸಿ ನಡುವೆ ಒಂದೊಂದು ಸಿನಿಮಾ ಮಾಡಿಕೊಡ್ತಿದ್ದಾರೆ. ಇದರಿಂದ ಬೇಸರಗೊಂಡ ಅಭಿಮಾನಿಗಳು ವಿಕ್ರಾಂತ್ ರೋಣ ಆದ್ಮೇಲೆ ಸಿನಿಮಾನೇ ಮಾಡಿಲ್ಲ ಅಂತಲೂ ಪ್ರಶ್ನೆ ಮಾಡಿದ್ದರು. ಅಭಿಮಾನಿಗಳ ಈ ಒಂದು ಪ್ರಶ್ನೆಗೆ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದರು. ಒಂದರ ಮೇಲೆ ಒಂದು ಅನ್ನುವ ಹಾಗೆ ವರ್ಷಕ್ಕೆ ಎರಡು ಇಲ್ವೇ ಮೂರು ಸಿನಿಮಾ ಮಾಡ್ತೀನಿ ಅಂತಲೇ ತಿಳಿಸಿದ್ದರು. ಹಾಗಾಗಿಯೇ ಮ್ಯಾಕ್ಸ್ ಸಿನಿಮಾ ಮೊದಲು ಅನೌನ್ಸ್ ಆಗಿತ್ತು ನೋಡಿ. ಕಿಚ್ಚ ಸುದೀಪ್ 10 ನಿಮಿಷದ ಟ್ವಿಟರ್ ಸೆಷನ್ ಮಾಡಿದ್ದಾರೆ. ಇದರಲ್ಲಿ ಅನೇಕ ಅಭಿಮಾನಿಗಳು ಹತ್ತಾರು ಪ್ರಶ್ನೆ ಕೇಳಿದ್ದಾರೆ. ಅದರಲ್ಲಿ ಒಬ್ಬ ಅಭಿಮಾನಿ ನೇರವಾಗಿಯೇ ಒಂದು ಪ್ರಶ್ನೆ ಕೇಳಿದ್ದಾರೆ. ಆ ಪ್ರಶ್ನೆ ಸುದೀಪ್ ಸಿನಿಮಾಗೆ ಸಂಬಂಧಿಸಿದ್ದೇ ಆಗಿದೆ. ಆ ಪ್ರಶ್ನೆಯ ವಿವರ ಹೀಗಿದೆ. ಸುದೀಪ್ ಈ ಹಿಂದೆ ವರ್ಷಕ್ಕೆ ಎರಡು ಸಿನಿಮಾ ಮಾಡ್ತೀನಿ ಅಂತ ಹೇಳಿದ್ದರು. ಆ ಒಂದು ಹೇಳಿಕೆಯನ್ನ ಪ್ರಶ್ನೆಯಾಗಿಸಿರೋ ಅಭಿಮಾನಿ “ವರ್ಷಕ್ಕೆ ಎರಡು ಸಿನಿಮಾ” ಅಂತಲೇ ಹೇಳಿದ್ದೀರಿ. ಆದರೆ ಎಲ್ಲಿ ಎರಡು ಸಿನಿಮಾ ಅಣ್ಣ ಅಂತಲೇ ಅಭಿಮಾನಿ ಕೇಳಿದ್ದದಾರೆ. ಕಿಚ್ಚ ಸುದೀಪ್ ತಮ್ಮ ಅಭಿಮಾನಿ ಸ್ನೇಹಿತರು ಕೇಳುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಅದು ತುಂಬಾನೆ ಇಂಟ್ರಸ್ಟಿಂಗ್ ಆಗಿದೆ. ಟ್ವಿಟರ್ ಸೆಷಲ್‌ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರೋ ಕಿಚ್ಚ ಸುದೀಪ್, ಇಂಗ್ಲೀಷ್‌ನಲ್ಲಿಯೇ ಹೀಗೆ ಉತ್ತರಿಸಿದ್ದಾರೆ. ಅದು ಹೀಗಿದೆ ಓದಿ. ಸತತ ಪ್ರಯತ್ನ ಮಾಡುತ್ತಿದ್ದೇನೆ. ಅಭಿಮಾನಿಗಳ ಈ ಪ್ರಶ್ನೆಯನ್ನ ನಮ್ಮ ಟೀಮ್ ಕೂಡ ನೋಡಿದೆ ಅಂತ ಭಾವಿಸುತ್ತೇನೆ. ಒಂದು ವೇಳೆ ವರ್ಷಕ್ಕೆ ಎರಡು ಸಿನಿಮಾ ಮಾಡದೇ ಹೋದ್ರೆ, ನನ್ನ ಈ ಅಭಿಮಾನಿ ಸ್ನೇಹಿತರು ಕೊಂದೇ ಬಿಡ್ತಾರೆ ಅಂತಲೇ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. ಕಿಚ್ಚ ಸುದೀಪ್ ಹೀಗೆ ತಮ್ಮ ಅಭಿಮಾನಿಗಳಿಂದ ಹಲವಾರು ಪ್ರಶ್ನೆಗಳನ್ನ ಎದುರಿಸಿದ್ದಾರೆ. ಅದಕ್ಕೆ ಸೂಕ್ತ ಅನಿಸೋ ಉತ್ತರವನ್ನೂ ಕೊಟ್ಟಿದ್ದಾರೆ ಅಂತಲೂ ಹೇಳಬಹುದು.

Scroll to Top