ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಆಸ್ಪತ್ರೆಯತ್ತ ಬಸ್ ಚಾಲನೆ ಮಾಡಿ ವಿದ್ಯಾರ್ಥಿ‌ನಿಯ ಜೀವ ರಕ್ಷಣೆ ಮಾಡಿದ ಚಾಲಕ ನಿರ್ವಾಹಕರಿಗೆ ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆ ನೇತೃತ್ವದಲ್ಲಿ ಚಿಲಿಂಬಿ ಆದರ್ಶನಗರದಲ್ಲಿ ಸನ್ಮಾನ

ಮಂಗಳೂರು : ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಎದೆನೋವು ಕಾಣಿಸಿಕೊಂಡಾಗ ತಕ್ಷಣ ಎಚ್ಚೆತ್ತ ಬಸ್‌ನ‌‌ ಚಾಲಕ ಮತ್ತು‌ ನಿರ್ವಾಹಕ ಪ್ರಯಾಣಿಕರಿದ್ದ ಬಸ್ ಅನ್ನು ಆಂಬುಲೆನ್ಸ್ ನಂತೆ ಚಲಾಯಿಸಿ ಕೇವಲ ಆರು ನಿಮಿಷದಲ್ಲಿ ಆಸ್ಪತ್ರೆ ಬಾಗಿಲಿಗೆ ತೆಗೆದುಕೊಂಡು ಹೋಗಿ ವಿದ್ಯಾರ್ಥಿನಿ ಯ ಪ್ರಾಣ ರಕ್ಷಣೆ ಮಾಡಿದ ಬಸ್ ಚಾಲಕ ನಿರ್ವಾಕರಾದ ಗಜೇಂದ್ರ ಕುಂದರ್ ಮತ್ತು ಮಹೇಶ್ ಪೂಜಾರಿಯವರನ್ನು ಕಾರ್ಪೊರೇಟರ್ ಎಂ. ಶಶಿಧರ ಹೆಗ್ಡೆಯವರ ನೇತೃತ್ವದಲ್ಲಿ ಚಿಲಿಂಬಿ ಆದರ್ಶನಗರದ ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್ ವಠಾರದಲ್ಲಿ ಸನ್ಮಾನಿಸಲಾಯಿತು.ಎಂ.ಶಶಿಧರ ಹೆಗ್ಡೆಯವರು ಮಾತನಾಡಿ, 13F ರೂಟ್ ನಂಬರ್ ಕೃಷ್ಣ ಪ್ರಸಾದ್ ಬಸ್ ನಲ್ಲಿ ಪ್ರಯಾಣಿಸುತಿದ್ದ ಕಾಲೇಜು ವಿದ್ಯಾರ್ಥಿನಿ ಯೊಬ್ಬರಿಗೆ ಎದೆ ನೋವು ಕಾಣಿಸಿಕೊಂಡಿತು. ಹೃದಯಾಘಾತದ ಸೂಚನೆ ಅರಿತ ಬಸ್ ಚಾಲಕ ನಿರ್ವಾಹಕರಾದ ಗಜೇಂದ್ರ ಕುಂದರ್ ಮತ್ತು ಮಹೇಶ್ ಪೂಜಾರಿ,ಸುರೇಶ್ ಬಜ್ಪೆ, ಇವರು ಪ್ರಯಾಣಿಕರಿದ್ದ ಬಸ್ ಅನ್ನು ಆಸ್ಪತ್ರೆ ಕಡೆಗೆ ಚಲಾಯಿಸಿ ಮಾನವೀಯ ಕಾರ್ಯ ಮಾಡಿದ್ದಾರೆ. ಬಸ್ಸು ಚಾಲಕ ನಿರ್ವಾಹಕರ ಕಾರ್ಯ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುವುದಕ್ಕೆ ಪ್ರತಿಯೊಬ್ಬರಿಗೂ ಸ್ಫೂರ್ತಿ ಎಂದರು. ಕಾರ್ಯಕ್ರಮದಲ್ಲಿ ಬಸ್ಸು ಮಾಲಕರ ಸಂಘದ ಅಧ್ಯಕ್ಷರಾದ ಜಯಶೀಲ ಅಡ್ಯಂತಾಯ, ಮೈಕಲ್ ಡಿಸಿಲ್ವ, ರಾಜೇಂದ್ರ ಚಿಲಿಂಬಿ, ಪ್ರವೀಣ್ ದಡ್ಡಲ್ ಕಾಡ್, ಚಂದ್ರಹಾಸ ಶೆಟ್ಟಿ ಕೊಟ್ಟಾರ ಕ್ರಾಸ್, ಅಶೋಕ್ ಕೋಟ್ಯಾನ್, ಮಿಥುನ್ ಗೌತಮ್, ಹರೀಶ್, ಅಜಿತ ವಸಂತ್, ಶುಭಾ ರಾಜೇಂದ್ರ, ಸಂದೇಶ್ ಕೊಟ್ಟಾರ ಕ್ರಾಸ್,ಅದ್ದು ಸುರತ್ಕಲ್, ಭಾಸ್ಕರ್ ಯು ಮುಂತಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಬೀದಿಬದಿ ವ್ಯಾಪಾರಿಗಳ ವಿರುದ್ದ ನಡೆಸಿದ ಟೈಗರ್ ಕಾರ‍್ಯಾಚರಣೆಗೆ ಮೇಯರ್ ಸುಧೀರ್ ಶೆಟ್ಟಿ ಕ್ರಮಕ್ಕೆ ಶ್ಲಾಘಿಸಿದ ಮಂಗಳೂರು ಜನ ಏನಂದರು ಗೊತ್ತಾ? ಅರ್ಹ ಬಡಪಾಯಿ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಿ ಅನರ್ಹ ಬೀದಿಬದಿ ವ್ಯಾಪಾರಿಗಳ ಮಾಫಿಯಾವನ್ನು ಮಟ್ಟ ಹಾಕಿರೆಂದರು ಜನ.

ಪ್ರತ್ಯಕ್ಷ ವರದಿ: ಕೃತ್ತಿಕಾಬ್ರಹ್ಮಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಟೈಗರ್ ಕಾರ‍್ಯಾಚರಣೆ ಮೂಲಕ ಬೀದಿಬದಿ ವ್ಯಾಪಾರಿಗಳ ಅನಧೀಕೃತ ಗೂಡಂಗಡಿಗಳನ್ನು ತೆರವುಗೊಳಿಸಿರುವ ಮೇಯರ್ ಸುಧೀರ್ ಶೆಟ್ಟಿಯವರ ಕ್ರಮಕ್ಕೆ ವ್ಯಾಪಕ ಜನಶ್ಲಾಘನೆ ವ್ಯಕ್ತವಾಗಿದೆ.ಬೀದಿಬದಿಯ ವ್ಯಾಪಾರಿಗಳ ಸೋಗಿನಲ್ಲಿ ಒಂದೊಂದು ಮನೆಯಿಂದ ನಾಲ್ಕೈದು ಮಂದಿಗಳಿದ್ದು , ಒಬ್ಬೊಬ್ಬರಿಗೆ ಒಂದರಿಂದ ಹತ್ತರ ತನಕ ಬೀದಿಬದಿ ವ್ಯಾಪಾರ ವಹಿವಾಟುವಿರುವುದು ಬೆಳಕಿಗೆ ಬಂದಿದೆ. ಮಂಗಳೂರು ಮಹಾನಗರಪಾಲಿಕೆಯ ಕೆಲವು ಅಧಿಕಾರಿಗಳಿಗೆ, ಕೆಲವು ಕಾರ್ಪೊರೇಟರ್‌ಗಳಿಗೆ ತಿಂಗಳು ತಿಂಗಳು ಮಾಮೂಲು (ಹಪ್ತ) ಕೊಟ್ಟು ವ್ಯಾಪಾರ ನಡೆಸುವ ಬೀದಿಬದಿಯ ಕೆಲವು ವ್ಯಾಪಾರಿಗಳು ನಗರದ ಸೌಂದರ್ಯವನ್ನು, ಆರೋಗ್ಯವನ್ನು ಹದಗೆಡಿಸುತ್ತಿದ್ದಾರೆಂಬ ದೂರುಗಳು ಮೊದಲಿನಿಂದಲೂ ಇತ್ತು.ಅವಧಿ ಮೀರಿದ ಆಹಾರ ವಸ್ತುಗಳನ್ನು, ತರಕಾರಿಗಳನ್ನು ಅಂಗಡಿಗಿಂತ ದುಪಟ್ಟು ಬೆಲೆಗೆ ಮಾರುವ ಬೀದಿ ಬದಿ ವ್ಯಾಪಾರಿಗಳು ಹಿಂದೂಗಳ ಹಬ್ಬ ಹರಿದಿನ ಸಂದರ್ಭದಲ್ಲಿ ಹರಿವೆ ಸೊಪ್ಪುವೊಂದಕ್ಕೆ 1೦೦ ರೂ.ಗೆ ಮಾರುತ್ತಾರೆಂದು ಹೇಳಿದರೆ ಬೀದಿ ವ್ಯಾಪಾರಿಗಳ ರೇಟ್ ಮಾಫಿಯಾವನ್ನು ನೀವೇ ಊಹಿಸಿ.ಟೈಗರ್ ಕಾರ‍್ಯಾಚರಣೆ ವೇಳೆ ಕೆಲವು ಬೀದಿಬದಿಯ ವ್ಯಾಪಾರಿಗಳ ಗೂಡಂಗಡಿಯಲ್ಲಿ ನಿಷೇಧಗೊಳಗಾದ ಟೆಸ್ಟ್ ಪೌಡರ್‌ಗಳು ಪತ್ತೆಯಾದದ್ದನ್ನು ಗಮನಿಸಿದರೆ ಇವರಿಂದ ಜನರಿಗೆ, ಮಂಗಳೂರು ನಗರಕ್ಕೆ ಎಷ್ಟು ಅಪಾಯವಿದೆ ಎಂದು ನೀವೇ ಲೆಕ್ಕ ಹಾಕಿ. ಪ್ರತೀ ಬಾರಿ ಬೀದಿಬದಿಯ ವ್ಯಾಪಾರಿಗಳ ಅಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದಾಗಲೂ ಹೋರಾಡುವ ಇದರ ಸಂಘಟನೆ ಅರ್ಹ ಬಡಪಾಯಿ ವ್ಯಾಪಾರಿಗಳಿಗೆ ನ್ಯಾಯ ಕೊಡಿಸಬೇಕೇ ವಿನಾಃ ಕೆಲವು ಅಬ್ಬೇಪಾರಿ ಬೀದಿಬದಿ ವ್ಯಾಪಾರಿ ಮಾಫಿಯಾಗಳಿಗಲ್ಲ ಎಂಬುವುದನ್ನು ಇದರ ಅಧ್ಯಕ್ಷರು ಮೊದಲು ತಿಳಿದುಕೊಳ್ಳಬೇಕಾಗಿದೆ.ಅಂಗವಿಕಲರು ಯಾರಾದರೂ ವ್ಯಾಪಾರ ನಡೆಸಲು ಪಾಲಿಕೆಗೆ ಪರವಾನಿಗೆಗೆ ಅರ್ಜಿ ಸಲ್ಲಿಸಿದರೆ ವರ್ಷಗಟ್ಟಲೆ ಲೈಸನ್ಸ್ ಕೊಡದೆ ಅಲೆದಾಡಿಸಿ ಸತಾಯಿಸುವ ಪಾಲಿಕೆ ಬೀದಿಬದಿಯ ವ್ಯಾಪಾರಿಗಳ ಅಡ್ಡಾದಿಡ್ಡಿ ವ್ಯಾಪಾರ ವಹಿವಾಟುಗಳಿಗೆ ಎಲ್ಲೆಂದರಲ್ಲಿ ಇಲ್ಲಿ ತನಕ ಆಸ್ಪದ ನೀಡಿದ್ದೇ ತಪ್ಪಾಯಿತು. ಇನ್ನು ಮುಂದೆಯಾದರೂ ಅರ್ಹ ಬೀದಿಬದಿ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕೊಟ್ಟು ಅಬ್ಬೇಪಾರಿ ಬೀದಿಬದಿ ವ್ಯಾಪಾರಿಗಳನ್ನು ಮಟ್ಟ ಹಾಕಿ ಒದ್ದು ಓಡಿಸುವ ಕೆಲಸವನ್ನು ಪಾಲಿಕೆ ಮಾಡಬೇಕಾಗಿದೆಂದು ಜನ ಒತ್ತಾಯಿಸಿದ್ದಾರೆ. ವಿಪರ್ಯಾಸವೆಂದರೆ, ಟೈಗರ್ ಕಾರ್ಯಾಚರಣೆ ನಡೆಸಿದ ಮರುದಿವಸವೇ ಕೆಲವು ಪ್ರಭಾವಿ ವಸೂಲಿಬಾಜಿ ವ್ಯಾಪಾರಿಗಳು ಮತ್ತೆ ಅದೇ ಜಾಗದಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಹಾಗಾದರೆ ಟೈಗರ್ ಕಾರ್ಯಾಚರಣೆ ಯಾಕೆ ನಡೆಸಿದ್ದು? ಇದು ಸಾರ್ವಜನಿಕರ ಕಣ್ಣೆಗೆ ಮಣ್ಣೆರೆಚುವ ನಾಟಕವೇ?

ಪ್ರಾದೇಶಿಕ ವಾರ್ತೆಗಳು

ತುಂಬೆ ಬಳಿ ಗೆಲ್ ಇಂಡಿಯಾ ಕನ್ಸ್ಟ್ರಕ್ಷನ್ (ಗೆಲ್ ಗ್ಯಾಸ್ ಕಂಪೆನಿ)ಯವರ ಬೇಜವಾಬ್ದಾರಿ ಪೈಪ್ ಲೈನ್ ಅಗೆತದಿಂದ ಮಂಗಳೂರಿಗೆ ಇನ್ನು ಕೆಲವು ದಿನ ನೀರಿಲ್ಲ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಜನಪರ ಕಾರ್ಪೊರೇಟರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ.

ವಿಶೇಷ ವರದಿ: ಅಶೋಕ್ ಶೆಟ್ಟಿ ಬಿ.ಎನ್.ಮಂಗಳೂರು : ಗೆಲ್ ಇಂಡಿಯಾ ಕನ್ಸ್ಟ್ರಕ್ಷನ್( ಗೆಲ್ ಗ್ಯಾಸ್ ಕಂಪೆನಿ)ಯವರು ಮಂಗಳೂರು ಮಹಾನಗರಪಾಲಿಕೆ ಇಂಜಿನಿಯರ್ ಗಳ ಗಮನಕ್ಕೆ ತರದೆ ಏಕಾಏಕಿ ಸರ್ವಾಧಿಕಾರಿ ಧೋರಣೆಯಿಂದ ತುಂಬೆ ಅಹ್ಮದ್ ಹಾಜಿ ಬಳಿ ಪೈಪ್ ಲೈನ್ ಅಗೆದಿದ್ದು,ಇದರಿಂದ ಮಂಗಳೂರಿಗೆ ನೀರು ಸರಬರಾಜು ಆಗುವ ಮೈನ್ ಪೈಪ್ ಲೈನ್ ತುಂಡಾಗಿದ್ದು,ಇನ್ನು ಕೆಲವು ದಿನಗಳ ಕಾಲ ಮಂಗಳೂರಿಗೆ ತುಂಬೆಯಿಂದ ನೀರು ಸರಬರಾಜು ಆಗುವುದು ಅಸಾಧ್ಯವೆಂದು ವರದಿಯಾಗಿದೆ. ಗೆಲ್ ಗ್ಯಾಸ್ ಕಂಪೆನಿಯವರು ಗ್ಯಾಸ್ ಲೈನ್ ಹಾಕುವ ಭರದಲ್ಲಿ ಪಾಲಿಕೆ ಇಂಜಿನಿಯರ್ ಗಳನ್ನು ಗಣನೆಗೆ ತೆಗೆದುಕೊಳ್ಳದೆ, ನಿರ್ಲಕ್ಷಿಸಿ ತಾವೇ ಮನಬಂದಂತೆ ಅಗೆಯಲು ಶುರು ಮಾಡಿದ್ದರಿಂದ ಮಂಗಳೂರಿಗೆ ನೀರು ಸರಬರಾಜು ಮಾಡುವ ಮೈನ್ ಪೈಪ್ ಲೈನ್ ಡ್ಯಾಮೇಜ್ ಆಯಿತು. ಇದು ಸರಿಯಾಗಲು ಕನಿಷ್ಠ ಒಂದು ವಾರವಾದರೂ ಬೇಕು. ಶಶಿಧರ ಹೆಗ್ಡೆ ಈ ರೀತಿಯ ಗೆಲ್ ಗ್ಯಾಸ್ ಕಂಪೆನಿಯವರ ಬೇಜವಾಬ್ದಾರಿ ವರ್ತನೆಗೆ ಮಂಗಳೂರು ಕಂಡ ಹಿರಿಯ ಜನಪರ ಕಾರ್ಪೊರೇಟರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆಯವರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಗೆಲ್ ಗ್ಯಾಸ್ ಕಂಪೆನಿಯವರು ಈ ರೀತಿ ನಿರ್ಲಕ್ಷ ವಹಿಸಿ ಮೈನ್ ಪೈಪ್ ಲೈನ್ ಬ್ರೆಕ್ ಮಾಡಿದ್ದರಿಂದ ಮಂಗಳೂರಿನ ಜನ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ. ಇದು ಖಂಡನಿಯ, ಜನ ವಿರೋಧಿ ಕೆಲಸವಾಗಿದೆ. ಪಾಲಿಕೆ ಗಮನಕ್ಕೆತರದೆ ಈ ರೀತಿ ಯಾವುದೇ ಕೆಲಸ ಕಾರ್ಯಗಳು ಮುಂದಿನ ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯಕೂಡದೆಂದು ಶಶಿಧರ್ ಹೆಗ್ಡೆಯವರು ಎಚ್ಚರಿಸಿದ್ದಾರೆ. ಈ ಮಧ್ಯೆ ಮಂಗಳೂರು ಮಹಾನಗರಪಾಲಿಕೆ ಕಮೀಷನರ್ ಸಿ. ಎಲ್. ಆನಂದ್ ಅವರು ತುಂಬೆಯಿಂದ ಪಡೀಲ್ ಗೆ ನೀರು ಸರಬರಾಜು ಮಾಡುವ 1100 ಎಂ ಎಂ ಪೈಪ್ ಲೈನ್ ತುಂಬೆ ಬಳಿ ಡ್ಯಾಮೇಜ್ ಆಗಿದೆ. ಈ ಪೈಪ್ ಲೈನ್ ರಸ್ತೆಯಿಂದ 20 ಅಡಿ ಕೆಳಗಿದೆ. ಈ ಬಗ್ಗೆ ಪಾಲಿಕೆ ಇಂಜಿನಿಯರ್ ಗಳು ಇದರ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದು, ಅದನ್ನು ಆದಷ್ಟು ಬೇಗ ಸರಿಪಡಿಸಲಿದ್ದಾರೆಂದು ತಿಳಿಸಿದ್ದಾರೆ. ತುಂಬೆ ಪೈಪ್ ಲೈನ್ ಡ್ಯಾಮೇಜ್ ನ್ನು ಸ್ಥಳಕ್ಕೆ ಭೇಟಿ ನೀಡಿ ಮಂಗಳೂರು ಮಹಾನಗರ ಪಾಲಿಕೆಯ ಪ್ರತಿ ಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಹಿರಿಯ ಕಾರ್ಪೊರೇಟರ್ ಗಳಾದ ಶಶಿಧರ್ ಹೆಗ್ಡೆ, ಲಾನ್ಸಿ ಲಾಟ್ ಪಿಂಟೋ, ನವೀನ್ ಡಿ’ಸೋಜ, ಅಬ್ದುಲ್ ರವೂಫ್ ಮತ್ತು ಪಾಲಿಕೆ ಇಂಜಿನಿಯರ್ ಗಳು, ಅಧಿಕಾರಿಗಳು ವೀಕ್ಷಿಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಿ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

‘ಸೇನೆಗೆ ಸೇರಲು ಎನ್‌ಸಿಸಿ ಪ್ರೇರಣೆ. ಭಾರತೀಯ ಸೇನೆಯ ಸೇವೆ ವಿಶಿಷ್ಟ ಅನುಭವ’ ವಾಯು ಸೇನೆಯ ನಿವೃತ್ತ ಗ್ರೂಪ್ ಕ್ಯಾ.ಸುಧೀರ್ ಜಿ. ಅಮೀನ್ ಹೇಳಿಕೆ

ಮಂಗಳೂರು : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದು ಒಂದು ವಿಶಿಷ್ಟ ಅನುಭವ. ಸೇನೆಗೆ ಸೇರ ಬಯಸುವ ಯುವಕರು ದೇಶಪ್ರೇಮ, ಸೇವಾ ಮನೋಭಾವನೆ ಹಾಗೂ ದೃಢವಾದ ಮಾನಸಿಕ ಸಿದ್ಧತೆ ಹೊಂದಿರುವುದು ಅಗತ್ಯ ಎಂದು ಭಾರತೀಯ ವಾಯು ಸೇನೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಸುಧೀರ್ ಜಿ. ಅಮೀನ್ ಹೇಳಿದರು.ಮಂಗಳವಾರ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ ಪುರಸ್ಕಾರ ಸ್ವೀಕರಿಸಿ ಸ್ವೀಕರಿಸಿ ಮಾತನಾಡಿದ ಅವರು ಭಾರತೀಯ ವಾಯು ಸೇನೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸುವ ಅವಕಾಶ ಲಭಿಸಿದ್ದು, ಅದರ ಅನುಭವ ವಿಭಿನ್ನ . ಸೇನಾ ಸಮವಸ್ತ್ರದ ಮೇಲಿನ ಗೌರವ ಮತ್ತು ಸೇವಾ ಮನೋಭಾವ ಸೇನೆಗೆ ಸೇರುವಂತೆ ಆಕರ್ಷಿಸಿತು. ಕಾಲೇಜು ದಿನಗಳಲ್ಲಿ ಎನ್‌ಸಿಸಿ ಸೇರಿದ್ದು ಮತ್ತಷ್ಟು ಪ್ರೇರಣೆ ದೊರೆಯಿತು. ಪದವಿ ಮುಗಿದು ಪರೀಕ್ಷೆ ಫಲಿತಾಂಶ ಬರುವ ಮೊದಲೇ ವಾಯು ಸೇನೆಗೆ ಆಯ್ಕೆಯಾಗಿದ್ದೆ ಎಂದರು.ವಾಯು ಸೇನೆಯ ತರಬೇತಿಯ ನಂತರ ಗೌಹಾಟಿಯಲ್ಲಿ ವೃತ್ತಿ ಜೀವನ ಆರಂಭಗೊಂಡಿತು. ವಿವಿಧ ಕರ್ತವ್ಯಗಳನ್ನು ನಿರ್ವಹಿಸಿ ಹಂತಹಂತವಾಗಿ ಭಡ್ತಿ ಪಡೆದು ಗ್ರೂಪ್ ಕ್ಯಾಪ್ಟನ್ ಆಗಿ ನಿವೃತ್ತಿಯಾದೆ. ವಿಶ್ವದ ಅತಿ ದೊಡ್ಡ ಹೆಲಿಕಾಪ್ಟರ್‌ನಲ್ಲಿ ಕೆಲಸ ಮಾಡುವ ಅವಕಾಶ ದೊರಕಿತ್ತು. ಈ ಹೆಲಿಕಾಪ್ಟರ್‌ನಲ್ಲಿ ಬುಲ್ಡೋಜರ್ ಕೊಂಡೊಯ್ದು ಈಶಾನ್ಯ ಭಾರತದ ಕೆಲವು ದುರ್ಗಮ ಪ್ರದೇಶಗಳಲ್ಲಿ ರಸ್ತೆ ಮಾಡಲು ಸಾಧ್ಯವಾಯಿತು. ಅಸ್ಸಾಂ, ಅರುಣಾಚಲ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಪ್ರವಾಹ ಬಂದಾಗ ಜನರನ್ನು ರಕ್ಷಣೆ ಮಾಡಿದ್ದೆವು. ಈ ಸಂದರ್ಭ ಸಂತ್ರಸ್ತರಿಂದ ಸಿಗುತ್ತಿದ್ದ ಪ್ರಶಂಸೆ ವೃತ್ತಿ ಜೀವನನದ ಮರೆಯಲಾಗದ ಕ್ಷಣಗಳು ಎಂದು ಅವರು ವಿವರಿಸಿದರು.ಭಾರತೀಯ ಸೇನೆ ಈಗ ಸದೃಢವಾಗಿದೆ. ಯಾವುದೇ ಶತ್ರು ರಾಷ್ಟ್ರವನ್ನು ಬಗ್ಗು ಬಡಿಯುವ ಶಕ್ತಿ ನಮ್ಮ ಸೇನೆಗೆ ಇದೆ. ಅಗ್ನಿಪಥ್ಉತ್ತಮ ಯೋಜನೆಯಾಗಿದೆ. ರಾಜಕೀಯ ಕಾರಣಕ್ಕಾಗಿ ಕೆಲವರ ವಿರೋಧ ಇರಬಹುದು ಎಂದು ಅವರು ಅಭಿಪ್ರಾಯ ಪಟ್ಟರು.ಹಿರಿಯ ಪತ್ರಕರ್ತ ಪರಮಾನಂದ ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ಆರ್. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ ವಂದಿಸಿದರು. ಕೋಶಾಧಿಕಾತಿ ವಿಜಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.ರಾಷ್ಟ್ರಪತಿ, ಪ್ರಧಾನಿಗಳ ಬೆಂಗಾವಲುರಾಷ್ಟ್ರಪತಿಗಳಾಗಿದ್ದ ಕೆ.ಆರ್.ನಾರಾಯಣ್, ಶಂಕರದಯಾಳ್ ಶರ್ಮ, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಪ್ರಧಾನ ಮಂತ್ರಿಗಳಾಗಿ ವಾಜಪೇಯಿ, ದೇವೇ ಗೌಡ, ಐ.ಕೆ. ಗುಜ್ರಾಲ್, ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್, ಮುಲಾಯಂ ಸಿಂಗ್ ಯಾದವ್, ಸಂಸದೆಯಾಗಿದ್ದ ಪೂಲನ್ ದೇವಿ ಮುಂತಾದವರನ್ನು ಸೇನಾ ಹೆಲಿಕಾಪ್ಟರ್‌ಗಳಲ್ಲಿ ಕರೆದೊಯ್ಯುವ ಸಂದರ್ಭ ಅವರ ಜತೆ ಬೆರೆಯುಬ ಅವಕಾಶ ಲಭಿಸಿತ್ತು. ಪೂಲನ್ ದೇವಿಯವರಿಂದ ಪಡೆದ ಆಟೋಗ್ರಾಫ್ ಈಗಲೂ ಮನೆಯಲ್ಲಿದೆ ಎಂದು ಸುಧೀರ್ ಜಿ. ಅಮೀನ್ ನೆನಪಿಸಿಕೊಂಡರು.

ಪ್ರಾದೇಶಿಕ ವಾರ್ತೆಗಳು

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರಿಂದ “ನೀ ಹಿಂಗೇ ನೋಡ ಬ್ಯಾಡ ನನ್ನ” ಜನ ಮೆಚ್ಚಿದ ಹಾಡು. ಶಾಸಕರ ಗಾನ ಪ್ರತಿಭೆಗೆ ವ್ಯಾಪಕ ಜನ ಶ್ಲಾಘನೆ. ಶಾಸಕರ ಹಾಡು ಸಕತ್ತ್ ವೈರಲ್.

ಕಾಪು : ಉಡುಪಿ ಕೋಸ್ಟಲ್ ಸ್ಟಾರ್ ಪ್ರೋಗ್ರಾಮ್ ನಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಹಾಡಿದ” ನೀ ಹಿಂಗೇ ನೋಡಬ್ಯಾಡ ನನ್ನ”ಜನಪ್ರಿಯ ಜಾನಪದ ಹಾಡು ಸಕತ್ತ್ ವೈರಲ್ ಆಗಿದೆ. ಶಾಸಕರ ಹಾಡಿಗೆ ಜನ ತಲೆ ದೂಗಿದ್ದಾರೆ. ಈ ಹಾಡನ್ನು ಕೆಳಗಿನ ಲಿಂಕ್ ಬಳಸಿ ಕೇಳಬಹುದಾಗಿದೆ. https://drive.google.com/file/d/1h6HuhY2nSRe5DgHDhsaaiIzR3ykBfa8f/view?usp=sharing

ಪ್ರಾದೇಶಿಕ ವಾರ್ತೆಗಳು

ಕೆರೆಕಾಡು ಅಕ್ಷಯ ಮಹಿಳಾ ಮಂಡಳಿ, ಸುರತ್ಕಲ್ ಸೌತ್‌ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನಿಂದ “ಆಟಿಡೊಂಜಿ ದಿನ” : ತುಳುವರಿಗೆ ಆಟಿ ತಿಂಗಳು ಶ್ರೇಷ್ಠ ತಿಂಗಳು : ಮಾಧವ ಶೆಟ್ಟಿಗಾರ್

ಮೂಲ್ಕಿ : ಹಿಂದಿನ ಕಾಲದಲ್ಲಿ ಆಟಿ ತಿಂಗಳು ಕಷ್ಟಕರವಾಗಿತ್ತು. ತುಳುವರಿಗೆ ಆಟಿ ತಿಂಗಳು ಶ್ರೇಷ್ಠ ತಿಂಗಳು. ಅದಕ್ಕೆ ತನ್ನದೇ ಆದ ವೈಜ್ಞಾನಿಕ ಮಹತ್ವ ಹಾಗೂ ಅರ್ಥವಿದೆ. ತುಳು ಸಂಸ್ಕೃತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಆಟಿ ಕಾರ್ಯಕ್ರಮ ಸಹಕಾರಿ ಎಂದು ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಆಡಳಿತ ನಿರ್ದೇಶಕ ಮಾಧವ ಶೆಟ್ಟಿಗಾರ್ ಕೆರೆಕಾಡು ಹೇಳಿದರು.ಅವರು ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಕೆರೆಕಾಡು ಅಕ್ಷಯ ಮಹಿಳಾ ಮಂಡಳಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನ ಸುರತ್ಕಲ್ ವಲಯ ಇವರ ಜಂಟಿ ಆಶ್ರಯದಲ್ಲಿ ನಡೆದ ”ಆಟಿಡೊಂಜಿ ದಿನ”ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪಡುಪಣಂಬೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಕುಸುಮ ಚಂದ್ರಶೇಖರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಇದರ ನಿರ್ದೇಶಕರಾದ ಎಸ್ ದೇವರಾಜ ಶೆಟ್ಟಿ, ಮೂಲ್ಕಿ ಎಲ್‌ಐಸಿ ಮ್ಯಾನೇಜರ್ ಪ್ರಕಾಶ್ ಆಚಾರ್ಯ ಇವರು ಆಟಿ ತಿಂಗಳ ಮಹತ್ವದ ಬಗ್ಗೆ ತಿಳಿಸಿದರು.ಕಿಲ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ದಮಯಂತಿ ಶೆಟ್ಟಿಗಾರ್, ಸುರತ್ಕಲ್ ವಲಯದ ಸೌತ್ ಕೆನರಾ ಫೋಟೋಗ್ರಾಫರ್ಸ್‌ಅಸೋಸಿಯೇಷನ್‌ನ ಅಧ್ಯಕ್ಷ ಅನಂತ ಪದ್ಮನಾಭ, ಅಕ್ಷಯ ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಭಾರತಿ ಯೋಗಾನಂದ ಉಪಸ್ಥಿತರಿದ್ದರು.ಬಾಲಗೋಕುಲದ ಮಕ್ಕಳು ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಹಿರಿಯ ನಾಟಿ ವೈದ್ಯೆ ಪದ್ಮಾವತಿ ಶೆಟ್ಟಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ರತ್ನ ಶಿವಾನಂದ ಕೋಟ್ಯಾನ್ ವಂದಿಸಿದರು. ಉಷಾ ನರೇಂದ್ರ ಕೆರೆಕಾಡು ಮತ್ತು ಪಿ.ಆರ್.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಸಾರ್ವಜನಿಕರಿಗೆ ಆಟಿ ತಿಂಗಳ ಮಹತ್ವ ಸಾರುವ ವಿವಿಧ ರೀತಿಯ ವಿಶೇಷ ಪಲ್ಯ, ಚಟ್ನಿ ಸಾಂಬಾರ್ ಒಳಗೊಂಡ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.

ಪ್ರಾದೇಶಿಕ ವಾರ್ತೆಗಳು

“ತುಳುವರ ಸಂಸ್ಕೃತಿ, ಆಚಾರ ವಿಚಾರ ವೈಶಿಷ್ಟ್ಯ ಪೂರ್ಣವಾದದ್ದು”- ಕರುಣಾಕರ ಎಂ.ಶೆಟ್ಟಿ. ಸುರತ್ಕಲ್ ಬಂಟರ ಸಂಘದಿಂದ “ಆಟಿದ ಪೊರ್ಲು“, ಅಭಿನಂದನಾ ಕಾರ್ಯಕ್ರಮ

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ, ಬಂಟರ ಸಂಘ ಸುರತ್ಕಲ್ ಇದರ ಸಹಯೋಗದಲ್ಲಿ”ಆಟಿದ ಪೊರ್ಲು ಮತ್ತು ಅಭಿನಂದನಾ ಸಮಾರಂಭ” ಭಾನುವಾರ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಸುರತ್ಕಲ್ ಬಂಟರ ಸಂಘದ ಕಟ್ಟಡ ಸಮಿತಿಯ ಚೇರ್ ಮ್ಯಾನ್  ವಿಕೆ ಸಮೂಹ ಸಂಸ್ಥೆಯ ಅಧ್ಯಕ್ಷ, ಉದ್ಯಮಿ ಕರುಣಾಕರ ಎಂ.ಶೆಟ್ಟಿ ಮಧ್ಯಗುತ್ತು ಅವರು ಬಿತ್ತನೆಯಾದ ಗದ್ದೆಯ ಭತ್ತದ ಪೈರುಗಳಿಗೆ ಯಾರ ದೃಷ್ಟಿಯೂ ಬೀಳದಿರಲಿ, ಕಳೆರೋಗ ಬಾರದಿರಲಿ ಎಂದು ಗದ್ದೆಗೆ ಕಾಪು ಇಟ್ಟು  ಪಾಡ್ದನದ ಜೊತೆಗೆ ನೇಜಿಯನ್ನು ಹಾರಿಸುವ ಮೂಲಕ ಉದ್ಘಾಟಿಸಲಾಯಿತು.ಬಳಿಕ ಮಾತಾಡಿದ ಅವರು, “ನಾವು ಸಣ್ಣವರಿದ್ದಾಗ ಆಟಿ ತಿಂಗಳಲ್ಲಿ ಹಲಸಿನ ಬೀಜ, ನೈಸರ್ಗಿಕವಾಗಿ ಸಿಗುವ ಸೊಪ್ಪು ತರಕಾರಿ ತಿಂದು ಜೀವನ ಸಾಗಿಸುತ್ತಿದ್ದೆವು. ಆಗ ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ನಾವು ಇದನ್ನು ಮರೆಯಬಾರದು. ಆಟಿ ದಿನದ ಪರಿಕಲ್ಪನೆ ಜೀವನ ಪದ್ಧತಿ ಅಂದಿನ ದಿನಕ್ಕೆ ವಾತಾವರಣಕ್ಕೆ ಅನುಗುಣವಾಗಿ ಅಳವಡಿಸಿಕೊಂಡಿದ್ದರು. ಅರೋಗ್ಯಪೂರ್ಣ ಜೀವನಕ್ಕೆ ಮಳೆಗಾಲದ ಆಟಿ ಜೀವನ ಪೂರಕವಾಗಿತ್ತು. ನಮ್ಮ ಮುಂದಿನ ಪೀಳಿಗೆಗೆ ತುಳುವರ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತಿಳಿಸಬೇಕಾಗಿದೆ. ತುಳುನಾಡಿನ ಆಚಾರ ವಿಚಾರ ವೈಶಿಷ್ಟ್ಯಪೂರ್ಣವಾಗಿದ್ದು ಇಂತಹ ಕಾರ್ಯಕ್ರಮ ಹೀಗೆಯೇ ನಡೆಯುತ್ತಿರಲಿ“ ಎಂದು ಶುಭ ಹಾರೈಸಿದರು.*ಆಟಿ ತುಳುವರಿಗೆ ವಿಶೇಷ ತಿಂಗಳು : ಐಕಳ*ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ,“ಸುರತ್ಕಲ್ ಬಂಟರ ಸಂಘ ಯಾವುದೇ ಕಾರ್ಯಕ್ರಮದಲ್ಲಿ ಸದಾ ಮೊದಲು. ಇವತ್ತು ಇಂತಹ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದೆ. ಆಟಿ ತುಳುವರಿಗೆ ವಿಶೇಷ ತಿಂಗಳು. ಹಿಂದಿನ ಕಾಲದಲ್ಲಿ ಆಟಿ ತಿಂಗಳೆಂದರೆ ತುಳುವರ ಕಷ್ಟಕಾಲವಾಗಿತ್ತು. ಆದರೆ ಇಂದು ನಾವು ಆಟಿ ಆಚರಣೆಯನ್ನು ಮರೆಯುತ್ತಿದ್ದೇವೆ. ಮುಂದಿನ ನಮ್ಮ ಪೀಳಿಗೆಗೂ ನೆನಪಲ್ಲಿ ಉಳಿಯುವಂತಹ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಲಿ“ ಎಂದು ಶುಭ ಹಾರೈಸಿದರು.ದಿಕ್ಸೂಚಿ ಭಾಷಣ ಮಾಡಿದ ಅಭಿಮತ ಟಿವಿಯ ಆಡಳಿತ ನಿರ್ದೇಶಕಿ ಡಾ.ಮಮತಾ ಪಿ.ಶೆಟ್ಟಿ ಅವರು, “ಆಟಿ ತಿಂಗಳಲ್ಲಿ ಪ್ರಕೃತಿದತ್ತವಾಗಿ ಸಿಗುವ ಸೊಪ್ಪು ತರಕಾರಿಗಳಲ್ಲಿ ಅರೋಗ್ಯ ಕಾಪಾಡುವ ಶಕ್ತಿಯಿದೆ, ರೋಗ ನಿರೋಧಕ ಶಕ್ತಿಯನ್ನು ನಮ್ಮಲ್ಲಿ ಹೆಚ್ಚಿಸುವ ಔಷಧಿ ಗುಣಗಳಿವೆ, ಹೀಗಾಗಿ ನಾವೆಲ್ಲರೂ ಆಷಾಢ ಮಾಸದ ಈ ವಿಶೇಷ ಆಚರಣೆಯನ್ನು ನಮ್ಮ ಮಕ್ಕಳಿಗೂ ಕಲಿಸಿ ಕೊಡೋಣ“ ಎಂದರು.ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಚಂದ್ರಿಕಾ ಹರೀಶ್ ಶೆಟ್ಟಿ,  ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಸಚ್ಚಿದಾನಂದ ರೈ, ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ, ಮಹಿಳಾ ವೇದಿಕೆಯ ಅಧ್ಯೆಕ್ಷೆ ಭವ್ಯ ಎ.ಶೆಟ್ಟಿ,  ಉಪಾಧ್ಯಕ್ಷೆ ಸರೋಜ ತಾರಾನಾಥ್ ಶೆಟ್ಟಿ, ಕೋಶಾಧಿಕಾರಿ ಜ್ಯೋತಿ ಪ್ರವೀಣ್ ಶೆಟ್ಟಿ,  ಸಂಘದ ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಮಾಜಿ ಅಧ್ಯಕ್ಷ ಸುಧಾಕರ್ ಎಸ್. ಪೂಂಜಾ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶ್ವನಾಥ ಶೆಟ್ಟಿ ಕಟ್ಲ ಬಾಳಿಕೆ (ಕೃಷಿ) ಉಮೇಶ್ ದೇವಾಡಿಗ (ಸಮಾಜ ಸೇವೆ), ಅನ್ನು ಪಡ್ರೆ (ಪೌರ ಕಾರ್ಮಿಕ), ಸೇಸಮ್ಮ ಸುಭಾಷಿತ ನಗರ (ನಾಟಿ ವೈದ್ಯೆ)ಅವರನ್ನು ಸನ್ಮಾನಿಸಲಾಯಿತು.ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು.  ಸುಧಾಚಂದ್ರಶೇಖರ  ಶೆಟ್ಟಿ, ಸವಿತಾಭವಾನಿಶಂಕರ್   ಶೆಟ್ಟಿ, ಅನೂಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಶಾ ಶೆಟ್ಟಿ ಶಿಬರೂರು ಪ್ರಾರ್ಥನೆಗೈದರು. ಮಹಿಳಾ ವೇದಿಕೆಯ ಕಾರ್ಯದರ್ಶಿ ಸುಜಾತ ಶೆಟ್ಟಿ ಕೃಷ್ಣಾಪುರ ಧನ್ಯವಾದ ಸಮರ್ಪಿಸಿದರು.ಬಳಿಕ ಸಂಘದ ಮಹಿಳಾ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ‌ ನಡೆಯಿತು.

ಪ್ರಾದೇಶಿಕ ವಾರ್ತೆಗಳು

ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಉತ್ತಮ ಬದಲಾವಣೆ ಸಾಧ್ಯ-ಶ್ರೀನಿವಾಸ ನಾಯಕ್ ಇಂದಾಜೆ : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ.

ಮಡಿಕೇರಿ: ಉತ್ತಮ ಮಾಧ್ಯಮಗಳಿಂದ ಮತ್ತು ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಉತ್ತಮ ಬದಲಾವಣೆ ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಹೇಳಿದ್ದಾರೆ.ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಡಿಕೇರಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.ಮಾಧ್ಯಮದ ಪ್ರಭಾವ ಸಮಾಜದ ಮೇಲೆ ಇಲ್ಲದಿದ್ದರೆ ವ್ಯವಸ್ಥೆ ಹಳ್ಳ ಹಿಡಿಯುತಿತ್ತು ಎಂದು ವ್ಯಾಖ್ಯಾನಿಸಿದ ಅವರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನಡೆಸಿದ ಗ್ರಾಮ ವಾಸ್ತವ್ಯ, ಬ್ರಾಂಡ್ ಮಂಗಳೂರು ಕಾರ್ಯಕ್ರಮದಂತಹಾ ಸಮಾಜಮುಖಿ ಕಾರ್ಯಕ್ರಮಗಳು ಜನ ಮನ್ನಣೆ ಗಳಿಸಿದೆ ಎಂದರು.ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ದೊಡ್ಡದಿದೆ. ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಬೇಕು. ಪಠ್ಯೇತರ ಚಟುವಟಿಕೆ ಬಗ್ಗೆ ಆಸಕ್ತಿ ಬೆಳಸಿ ಸಂಸ್ಕೃತಿ, ಕಲೆ ಅಭಿರುಚಿಯನ್ನು ಪ್ರೇರಪಿಸಬೇಕು. ಪುಸ್ತಕ, ಪತ್ರಿಕೆ ಓದುವ ಅಭ್ಯಾಸದೆಡೆಗೆ ಮಕ್ಕಳನ್ನು ಪ್ರೇರೇಪಿಸಬೇಕು ಎಂದರು.ಸಮಾರಂಭವನ್ನು ಉದ್ಘಾಟಿಸಿದ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿವಿನಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಮಹತ್ತರ ಎಂದು ಹೇಳಿದರು.ಪತ್ರಿಕಾರಂಗ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದೆ. ಪತ್ರಿಕಾ ರಂಗ ಉಳಿದರೆ ಪ್ರಜಾಪ್ರಭುತ್ವ ಸದೃಢವಾಗಿರುತ್ತದೆ.ಕರ್ತವ್ಯ ನಿಷ್ಠರಾಗಿ, ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಪ್ರತ್ರಕರ್ತರು ಸಮಾಜದ ಪ್ರತಿಬಿಂಬ ಎಂದು ಬಣ್ಣಿಸಿದರು.ಮುಖ್ಯ ಅತಿಥಿಯಾಗಿದ್ದ ಲಿಟಲ್ ಸ್ಕಾಲರ್ ಅಕಾಡೆಮಿ ಅಧ್ಯಕ್ಷೆ ಪೂಜಾ ರವೀಂದ್ರ ಮಾತನಾಡಿ ಇಂದು ನಾನಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಲು ವಿಪುಲ ಅವಕಾಶಗಳು ಸೃಷ್ಟಿಯಾಗಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಸನ್ಮಾನ ಸ್ವೀಕರಿಸಿದ ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್ ಮಾತನಾಡಿದರು.ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ,ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿದರು.ಕಾರ್ಯಕ್ರಮ ಸಂಚಾಲಕ ಟಿ.ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.ಶೇ 80ಕ್ಕಿಂತ ಹೆಚ್ಚು ಅಂಕ ಗಳಿಸಿ ಶೈಕ್ಷಣಿಕವಾಗಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.ಕಳೆದ 50 ವರ್ಷಗಳಿಂದ ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿರುವ ಸುಂಟಿಕೊಪ್ಪದ ಮುಕ್ಕಾಟೀರ ಎ ವಸಂತ್, 30 ವರ್ಷಗಳಿಂದ ಪತ್ರಿಕೆ ವಿತರಣೆ ಮಾಡುತ್ತಿರುವ ವೀರಾಜಪೇಟೆಯ ದೀಪಕ್ ದಾಸ್, 15 ವರ್ಷಗಳಿಂದ ಪತ್ರಿಕಾ ವಿತರಕರಾಗಿರುವ ಚೆಟ್ಟಳ್ಳಿಯ ಟಿ.ಎನ್. ಧನಲಕ್ಷ್ಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಮೃದ್ಧಿ ವಾಸು ಪ್ರಾರ್ಥಿಸಿ, ಹೆಚ್.ಜೆ. ರಾಕೇಶ್ ಸ್ವಾಗತಿಸಿ, ಚನ್ನನಾಯಕ ನಿರೂಪಿಸಿ, ಶಿವರಾಜು ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಮೂಲ್ಕಿ ಯುವವಾಹಿನಿ ಘಟಕದಿಂದ ಭಾನುವಾರ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಕರು ಬಾವಿಯಿಂದ ನೀರು ಸೇದುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿದರು. ಮೂಲ್ಕಿಯಲ್ಲಿ ಆರಂಭಗೊಂಡ ಆಟಿಡೊಂಜಿ ದಿನ ವಿಶ್ವವ್ಯಾಪ್ತಿಯಾಗಿದೆ : ಸೂರ್ಯಕಾಂತ್

ಮೂಲ್ಕಿ: ಕಳೆದ 22 ವರ್ಷದ ಹಿಂದೆ ಮೂಲ್ಕಿಯಲ್ಲಿ ಯುವವಾಹಿನಿ ಸಂಸ್ಥೆಯ ಮೂಲಕ ಆರಂಭಗೊಂಡ ಆಟಿಡೊಂಜಿ ದಿನ ಎಂಬ ಪರಿಕಲ್ಪನೆಯ ಕಾರ್ಯಕ್ರಮ ಇಂದು ವಿಶ್ವವ್ಯಾಪ್ತಿಯಾಗಿದ್ದು ವಿಶೇಷವಾಗಿದೆ. ಕೃಷಿ ಬದುಕನ್ನು ತೆರೆದ ಪುಸ್ತಕದಂತೆ ಕಾರ್ಯಕ್ರಮ ನಡೆಯಬೇಕು, ಮುಂದಿನ ಪೀಳಿಗೆಗೆ ಕೃಷಿ, ಗ್ರಾಮೀಣ ಭಾಗದ ಪರಂಪರೆಯನ್ನು ವಿಸ್ತರಿಸುವ ಕೆಲಸ ಮಾಡಬೇಕು ಎಂದು ಭಾರತ್ ಬ್ಯಾಂಕ್ನ ಅಧ್ಯಕ್ಷ ಸೂರ್ಯಕಾಂತ್ ಸುವರ್ಣ ಹೇಳಿದರು.ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮೂಲ್ಕಿ ಯುವವಾಹಿನಿ ಘಟಕದಿಂದ ಭಾನುವಾರ ಇಪ್ಪತ್ತೆರಡನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ವೇದಿಕೆಯಲ್ಲಿ ನಿರ್ಮಿಸಿದ ಬಾವಿಯಿಂದ ನೀರು ಸೇದುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿ ಮಾತನಾಡಿದರು. ಮೂಲ್ಕಿ ಯುವವಾಹಿನಿ ಅಧ್ಯಕ್ಷ ರಿತೇಶ್ ಅಧ್ಯಕ್ಷತೆಯನ್ನು ವಹಿಸಿದ್ದರು.ಪ್ರಗತಿಪರ ಕೃಷಿಕ ಪಿ.ಕೆ.ಸದಾನಂದ ಪಡುಬಿದ್ರಿ ಅವರನ್ನು ಸನ್ಮಾನಿಸಲಾಯಿತು.ಮೂಡಬಿದಿರೆಯ ಆಳ್ವಾಸ್ನ ಉಪನ್ಯಾಸಕ ಯೋಗೀಶ್ ಕೈರೋಡಿ ಸಂಪನ್ಮೂಲ ವ್ಯಕ್ತಿಯಾಗಿದ್ದರು.ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಕೊಡಪದವು, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಉದ್ಯಮಿ ಲೋಕೇಶ್ ಅಮೀನ್, ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ, ನಿರ್ದೇಶಕಿ ರಾಜೇಶ್ವರೀ, ಕಾರ್ಯದರ್ಶಿ ಲತೀಶ್ ಕಾರ್ನಾಡ್, ಉದಯ ಅಮೀನ್, ನರೇಂದ್ರ, ಜಯಕುಮಾರ್ ಮತ್ತಿತರರು ಇದ್ದರು.ತುಳುನಾಡಿನ ವಿವಿಧ ಖಾದ್ಯಗಳನ್ನು ಸುಮಾರು 1200 ಮಂದಿ ಸವಿದರು.

ಪ್ರಾದೇಶಿಕ ವಾರ್ತೆಗಳು

ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದಿಂದ “ತೈತತಕತ” ಯಕ್ಷಗಾನ ಕಾರ್ಯಕ್ರಮಕ್ಕೆ ಚಾಲನೆ : ಯಕ್ಷಗಾನ ಕಲೆಯ ಆರಾಧನೆಯೊಂದಿಗೆ ಪೋಷಣೆ ನಿರಂತರವಾಗಿರಲಿ : ಭುವನಾಭಿರಾಮ ಉಡುಪ

ಮೂಲ್ಕಿ: ಯಕ್ಷಗಾನ ಕಲೆಯ ಆರಾಧನೆಯೊಂದಿಗೆ ಪೋಷಣೆ ನಿರಂತರವಾಗಿರಲಿ, ವಿನಾಯಕ ಮೇಳಕ್ಕೆ ರಾಜ್ಯ ಪುರಸ್ಕಾರ ಸಿಗಲಿ ಎಂದು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.ಅವರು ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದ ಸಂಯೋಜನೆಯಲ್ಲಿ ಎರಡು ದಿನಗಳ “ತೈತತಕತ” ಯಕ್ಷಗಾನ ವಿಶೇಷ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಶ್ರೀ ಕ್ಷೇತ್ರ ಕಾರಿಂಜದ ಆಡಳಿತಾಧಿಕಾರಿ ಚಂದ್ರಶೇಖರ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು.ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆಯನ್ನು ವಹಿಸಿ, ಶುಭಹಾರೈಸಿದರು.ಮುಖ್ಯ ಅತಿಥಿಗಳಾಗಿ ಬಪ್ಪನಾಡು ಲಯನ್ಸ್ ಬಪ್ಪನಾಡು ಇನ್ಸ್ ಪೈರ್ ನ ಉಪಾಧ್ಯಕ್ಷ ಪುಷ್ಪರಾಜ್ ಚೌಟ, ಇನ್ ಪೋಸಿಸ್ ನ ನರೇಂದ್ರ ಪ್ರಭು ಮಂಗಳೂರು, ಕಿನ್ನಿಗೋಳಿ ವಿಜಯಾ ಕಲಾವಿದರು ತಂಡದ ಅಧ್ಯಕ್ಷ ಶರತ್ ಶೆಟ್ಟಿ ಸಂಕಲಕರಿಯ, ಚಾಮರಾ ಫೌಂಡೇಶನ್ ನ ರಚನಾ, ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಅನಂತ ಪದ್ಮನಾಭ,ಮೂಲ್ಕಿ ಎಲ್ ಐಸಿಯ ಪ್ರಬಂಧಕ ಪ್ರಕಾಶ್ ಆಚಾರ್ಯ, ಮೇಳದ ಅಜಿತ್, ಪ್ರೇಮಲತಾ, ಅನ್ವಿತಾ, ರೇಷ್ಮಾ ಜಿ. ಬಂಗೇರ, ಶ್ರೇಯಸ್, ಧನಂಜಯ ಶೆಟ್ಟಿಗಾರ್, ದುರ್ಗಾ ಪ್ರಸಾದ್, ಲೋಹಿತ್, ಯಶೋದಾ, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.ಶ್ರೀ ವಿನಾಯಕ ಯಕ್ಷಕಲಾ ತಂಡದ ಅಧ್ಯಕ್ಷ ಜಯಂತ್ ಅಮೀನ್ ಸ್ವಾಗತಿಸಿ, ಪ್ರಸ್ತಾವನೆಗೈದರು.ಈ ಸಂದರ್ಭದಲ್ಲಿ ಶ್ರೀ ವಿನಾಯಕ ಯಕ್ಷಕಲಾ ರತ್ನ ಪ್ರಶಸ್ತಿಯನ್ನು ಮೆಸ್ಕಾಂನ ಹಿರಿಯ ಇಂಜಿನಿಯರ್ ಬಿ. ರಾಜೇಶ್ ಹಾಗೂ ಬೆಂಗಳೂರಿನ ಕರ್ನಾಟಕ ವಿದ್ಯುತ್ ನೌಕರರ ಸಂಘದ ಉಪಾಧ್ಯಕ್ಷ ಎಚ್.ಎಸ್.ಗುರುಮೂರ್ತಿಅವರಿಗೆ ನೀಡಿ ಗೌರವಿಸಲಾಯಿತು. ಕಲಾವಿದರಿಂದ ಸತ್ವಶೈಥಿಲ್ಯ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.ಅಭಿಜಿತ್ ಹಾಗೂ ವಾಣಿ ಪರಿಚಯಿಸಿದರು.ಮಾಲತಿ ಕೃಷ್ಣಮೂರ್ತಿ ವಂದಿಸಿದರು.ಉಷಾ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Scroll to Top