ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಅಭಾಸಾಪ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷರಾಗಿ ಗಣರಾಜ ಕುಂಬ್ಳೆ

ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷರಾಗಿ ಗಣರಾಜ ಕುಂಬ್ಳೆಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಡಾ.ಶ್ರೀಪತಿ ಕಲ್ಲೂರಾಯ, ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್ ದ್ವಾರಕ ,ಕಾರ್ಯದರ್ಶಿಯಾಗಿ ಚೇತನ್ ಮೊಗ್ರಾಲ್ , ಕೋಶಾಧಿಕಾರಿಯಾಗಿ ಅವಿನಾಶ ಕೊಡೆಂಕಿರಿ , ಜತೆ ಕಾರ್ಯದರ್ಶಿಯಾಗಿಸ್ವಪ್ನ ಉದಯ ಕುಮಾರ , ಮಾಧ್ಯಮ ಪ್ರಮುಖ್ ಆಗಿ ನವೀನ ಕೃಷ್ಣ ಉಪ್ಪಿನಂಗಡಿ ,ಸಮಿತಿ ಸದಸ್ಯರಾಗಿ ಕುಮಾರ ಪೆರ್ನಾಜೆ ,ಬಾಬು ನಾಯ್ಕ ದೇವಸ್ಯ ಆಯ್ಕೆಯಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ವಿ.ಟಿ.ರಾಜಶೇಖರ್, ಅಸಾದಿ, ಡೇಸಾ ಒಂದು ಕಾಲಕ್ಕೆ ಜನಮನ ತಟ್ಟಿದವರು: ಡಾ. ಇಸ್ಮಾಯೀಲ್

ಮಂಗಳೂರು, ಫೆ.25: ನಮ್ಮನ್ನಗಲಿದ ಹಿರಿಯ ಪತ್ರಕರ್ತ ವಿ.ಟಿ.ರಾಜಶೇಖರ ಶೆಟ್ಟಿ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಮುಝಫ್ಫರ್ ಅಸಾದಿ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದ ಪಿ.ಬಿ.ಡೇಸಾ ಒಂದು ಕಾಲಕ್ಕೆ ಜನಸಾಮಾನ್ಯರ ಜನಮನ ತಟ್ಟಿದವರು ಮತ್ತು ಯುವಕರನ್ನು ಒಟ್ಟುಗೂಡಿಸಿದವರು ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ(ರಿ) ಕಾರ್ಯದರ್ಶಿ ಡಾ. ಇಸ್ಮಾಯೀಲ್ ಎನ್ ಹೇಳಿದ್ದಾರೆ. ದಲಿತ್ ವಾಯ್ಸ ‘ಸಂಪಾದಕ ವಿ.ಟಿ.ರಾಜಶೇಖರ , ಪ್ರೊ. ಮುಝಫ್ಫರ್ ಅ ಸ್ಸಾದಿ ಮತ್ತು ಪಿ.ಬಿ.ಡೇಸಾ ಇವರಿಗೆ ಮಂಗಳವಾರ ನಗರದ ಖಾಸಾಗಿ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.ಮೂವರು ಬೇರೆ ಬೇರೆ ಸಮುದಾಯದಿಂದ ಬಂದವರಾಗಿದ್ದರೂ ಇವರ ಚಿಂತನೆ ಒಂದೇ ಆಗಿತ್ತು ಎಂದರು.ಮೈಸೂರು ವಿವಿಯಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಆ ವಿಭಾಗಕ್ಕೆ ದೊಡ್ಡ ಕೊಡುಗೆಯನ್ನು ಅವರು ನೀಡಿದ್ದರು. ಧೀಮಂತ ಅಧ್ಯಾಪಕರಾಗಿ ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ತೆರೆದ ಕಣ್ಣುಗಳಿಂದ ಸಮಾಜವನ್ನು ನೋಡಿದವರು. ತನಗೆ ಬೇಕಾಗಿ ಸಂಘಟನೆ ಕಟ್ಟಿಕೊಂಡಿರಲಿಲ್ಲ. ಹೀಗಾಗಿ ಅವರಿಗೆ ವಿವಿ ಉಪಕುಲಪತಿಯಾಗಿ ಅವಕಾಶ ಸಿಗಲಿಲ್ಲ ಎಂದರು.ಡೇಸಾ ಅವರು ತನ್ನ ಬಗ್ಗೆ ಚಿಂತನೆ ನಡೆಸುವುದಕ್ಕಿಂತ ಇನ್ನೊಬ್ಬರ ಬಗ್ಗೆ ಚಿಂತನೆ ನಡೆಸಿದವರು ಎಂದರು. ಆಧುನಿಕ ಅಂಬೇಡ್ಕರ್ ವಿ.ಟಿ .ರಾಜಶೇಖರ್: ವಿ.ಟಿ .ರಾಜಶೇಖರ್ ಅವರ ಪುತ್ರ ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಮಾಜಿ ಪ್ರಧಾನ ಕಾರ್ಯದರ್ಶಿಸಲೀಲ್ ಶೆಟ್ಟಿ ಮಾತನಾಡಿ ದಲಿತರಿಗಾಗಿ ಶ್ರಮಿಸಿದ ಆಧುನಿಕ ಅಂಬೇಡ್ಕರ್ ಆಗಿದ್ದರು ಎಂದು ಹೇಳಿದರು.ಅವರು ಬರೆದದ್ದು ಇಂಗ್ಲಿಷ್‌ನಲ್ಲಿ ಜಾಸ್ತಿ. ಅದು ದಲಿತರಿಗೆ ಹೆಚ್ಚು ಮುಟ್ಟಲಿಲ್ಲ. ಅವರ ಚಿಂತನೆಗಳು ಎಂದೆಂದಿಗೂ ಸಕಾಲಿಕವಾಗಿದೆ ಎಂದರು.ಪಿ.ಬಿ .ಡೇಸಾ ಅವರ ಪುತ್ರಿ ಪ್ರೀತಿಕಾ ಅವರು ಮಾತನಾಡಿ ತನ್ನ ತಂದೆಯ ಜೀವನ ಸರಳವಾಗಿತ್ತು. ನಾನಾ ಸವಾಲುಗಳು ಅವರ ಬದುಕಿನಲ್ಲಿ ಎದುರಾಗಿದ್ದರೂ ಅವೆಲ್ಲವನ್ನು ಬದಿಗೊತ್ತಿ ಇತರಿಗಾಗಿ ದುಡಿದರು ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟು ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಮಾತನಾಡಿದರು.ಮಂಗಳೂರು ವಿವಿ ಪ್ರಾಧ್ಯಾಪಕ ಎಂ.ಪಿ.ಉಮೇಶ್‌ಚಂದ್ರ, ವಕೀಲರಾದ ಬಿ.ಎ. ಮೊಹಮ್ಮದ್ ಹನೀಫ್, ಪ್ರಮುಖರಾದ ಎನ್.ಜಿ. ಮೋಹನ್, ಖಾಲಿದ್ ತಣ್ಣೀರುಬಾವಿ, ಜೋಶಿ ಸತ್ಯಾನಂದ್, ವಿಕ್ಟರ್ ಕ್ರಾಸ್ತಾ, ರೆನ್ನಿ ಡಿ ಸೋಜ, ಭರತೇಶ್ ಬಜಾಲ್, ಯೂಸುಫ್ ವಕ್ತಾರ್, ಬಾವಾ ಪದರಂಗಿ, ಯೋಗೀಶ್ ಜೆಪ್ಪು, ಕಾಂತಪ್ಪ ಆಲಂಗಾರು, ಸದಾಶಿವ ಸಾಲ್ಯಾನ್, ಸೋಮಪ್ಪ ಆಲಂಗಾರು, ಯಾದವ್ ಶೆಟ್ಟಿ, ಡಾ.ಹರೀದಾಸ್ ರೈ, ಶಾಹಿದಾ, ದಿಲ್‌ಶಾದ್, ಶಾಹಿನ್ ಮತ್ತಿತರರು ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಇಚ್ಛಾಶಕ್ತಿ ಇದ್ದರೆ ಮಾತ್ರ ಜೀವನದಲ್ಲಿ ಸಾಧನೆ ಸಾಧ್ಯ. ಕಣಚೂರು ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ.ಯು.ಕೆ.ಮೋನು ಅಭಿಪ್ರಾಯ

ಮಂಗಳೂರು : ನಮ್ಮ ದೇಶದಲ್ಲಿ ಸಾಧನೆ ಮಾಡಲು ವಿಪುಲ ಅವಕಾಶವಿದೆ. ಎಲ್ಲ ವರ್ಗದ ಜನರಿಗೆ ಇಲ್ಲಿ ಬೆಳೆಯಲು ಅವಕಾಶವಿದೆ. ಆದರೆ ಇಚ್ಛಾಶಕ್ತಿ ಬೇಕು. ಹಾಗಿದ್ದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಕಣಚೂರು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ.ಯು.ಕೆ.ಮೋನು ಹೇಳಿದರು. ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಬುಧವಾರ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ ಕೆಲಸ ಮಾಡಬೇಕೆಂಬ ಛಲವಿತ್ತು. ಹಾಗಾಗಿ ವಿದ್ಯಾಭ್ಯಾಸ ಕಡಿಮೆ ಇದ್ದರೂ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.ಕೆಲಸ ಮಾಡಬೇಕು, ಸಂಬಳ ಪಡೆಯಬೇಕೆಂಬ ಛಲ ಬಾಲ್ಯದಲ್ಲಿಯೇ ಇತ್ತು. ಆದರೆ ಶಿಕ್ಷಣ 3ನೇ ತರಗತಿಗೆ ಸೀಮಿತವಾಯಿತು.ತಂದೆ ಬ್ರಿಟಿಷ್ ಸರ್ಕಾರದಲ್ಲಿ ನೌಕರನಾಗಿದ್ದರು. ಅನಿವಾರ್ಯ ಸ್ಥಿತಿಯಿಂದ ಬಡತನ ಅನುಭವಿಸಿದ್ದೆವು. ಬಾಲ್ಯದಲ್ಲಿ ಅಡಕೆ ಹೆಕ್ಕುವ ಕೆಲಸ, ಮೂಟೆ ಹೊರುವ ಕೆಲಸ ಸೇರಿದಂತೆ ಹಲವು ರೀತಿಯ ಕೂಲಿ ಕೆಲಸ ಮಾಡಿದ್ದೆ. ಇದ್ದಿಲು ಮಾಡುವ ಕೆಲಸ ಕೂಡ ಮಾಡಿದ್ದೆ,ಹದಿ ಹರೆಯದಲ್ಲೇ ವ್ಯವಹಾರ ಕ್ಷೇತ್ರಕ್ಕೆ ಇಳಿದೆ. ಟಿಂಬರ್ ವ್ಯಾಪಾರದಲ್ಲಿ ಯಶಸ್ಸು ಕಂಡೆ. ಕೆಲವೇ ವರ್ಷದಲ್ಲಿ ರಾಜ್ಯದಲ್ಲೇ ಮುಂಚೂಣಿಯ ಟಿಂಬರ್ ವ್ಯಾಪಾರಿಯಾಗಿ ಗುರುತಿಸಿಕೊಂಡೆ ಎಂದು ಅವರು ಸಾಗಿ ಬಂದ ಹಾದಿಯನ್ನು ಸ್ಮರಿಸಿಕೊಂಡರು.ಈ ನೆಲದ ಕಾನೂನು ಗೌರವಿಸಿ ಪ್ರಾಮಾಣಿಕವಾಗಿ ವ್ಯವಹಾರ ನಡೆಸುತ್ತಾ ಬಂದೆ. ಮಲೇಶ್ಯಾ ,ಸಿಂಗಾಪುರ ಸಹಿತವಿದೇಶಗಳಲ್ಲಿಯೂ ವ್ಯವಹಾರ ಸಂಸ್ಥೆ ಆರಂಭಿಸಿದೆ. ಮೂರನೇ ಕ್ಲಾಸ್ ಕಲಿತರೂ ಇಂಗ್ಲಿಷ್, ಹಿಂದಿ, ಗುಜರಾತಿ, ತಮಿಳು ಸೇರಿದಂತೆ ಹತ್ತಾರು ಭಾಷೆಗಳನ್ನು ಕಲಿತೆ . ಹತ್ತಾರು ದೇಶ ಸುತ್ತಿದ್ದೇನೆ. ನನ್ನ ಮಕ್ಕಳು ಶಿಕ್ಷಣ ಪಡೆಯುವ ಸಂದರ್ಭ ಉತ್ತಮ ಶಿಕ್ಷಣ ಸಿಗಲು ಇರುವ ಹಲವು ತೊಡಕುಗಳನ್ನು ಸ್ವತಃ ಅನುಭವಿಸಿದೆ. ಇದೇ ನೋವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಕಾರಣವಾಯಿತು. ಹುಟ್ಟೂರಿನಲ್ಲಿಯೇ ಹಂತಹಂತವಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದೆ. ಮೆಡಿಕಲ್ ಕಾಲೇಜು ಸ್ಥಾಪಿಸುವ ಬಹುಕಾಲದ ಕನಸು ಕೂಡಾ ನನಸಾಯಿತುಮುಂದೆ ಇಂಜಿನಿಯರಿಂಗ್ ಹಾಗೂ ಡೆಂಟಲ್ ಕಾಲೇಜು ಸ್ಥಾಪಿಸುವ ಯೋಜನೆ ಇದೆ ಎಂದು ಯು.ಕೆ.ಮೋನು ತಿಳಿಸಿದರು.ರಾಜಕೀಯ ಆಸಕ್ತಿ ಇತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎಂಎಲ್‌ಎ ಆಗುವ ಕನಸಿತ್ತು. ಪೂರಕ ವಾತಾವರಣವೂ ಇತ್ತು. ಶಾಸಕರಾಗಿದ್ದ ಯು.ಟಿ ರೀದ್ ಅವರ ನಿಧನದಿಂದಾಗಿ ಪುತ್ರ ಯು.ಟಿ.ಖಾದರ್ ಅವಕಾಶ ಪಡೆದರು. ಶಾಸಕನಾಗಿ ಆಯ್ಕೆಯಾದ ಮೊದಲ ಅವಧಿಯಲ್ಲಿ ಖಾದರ್ ಅವರ ಕಾರ್ಯವೈಖರಿಯನ್ನು ಮೆಚ್ಚಿ ಮುಂದೆ ಅವರ ಸೀಟಿಗೆ ಪ್ರಯತ್ನ ಮಾಡಬಾರದೆಂದು ನಿರ್ಧಸಿದೆ. ಖಾದರ್ ರಾಜಕೀಯ ಕ್ಷೇತ್ರದಲ್ಲಿ ನಮ್ಮ ಸಮಾಜಕ್ಕೆ ಗೌರವ ತಂದುಕೊಟ್ಟಿದ್ದಾರೆ ಎಂದು ಅವರು ಹೇಳಿದರು.ಹಿರಿಯ ಪತ್ರಕರ್ತ ಹಿಲರಿ ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಪ್ರೆಸ್‌ಕ್ಲಬ್ ಪ್ರಧಾನಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.ಚಿತ್ರಗಳು: ಪ್ರೆಸ್ ಕ್ಲಬ್ ಮತ್ತು ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತೋತ್ಸವ ಕಾರ್ಯಕ್ರಮ

ಮಂಗಳೂರು: ಲಾಲ್‌ಭಾಗ್‌ನಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯ ಮತ್ತು ಶಾಂಭವಿ ಭವನದ ಹಾಸ್ಟೆಲ್‌ ಡೇ ಕಾರ್ಯಕ್ರಮ ಮತ್ತು ಅಮೃತೋತ್ಸವ ಕಾರ್ಯಕ್ರಮವು ವಿದ್ಯಾರ್ಥಿನಿ ಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಚೆಯರ್ ಮೆನ್ ಡಾ| ಎಂ. ಮೋಹನ ಆಳ್ವ ದೀಪ ಬೆಳಗಿಸಿ ಉದ್ಘಾಟಿಸಿದರು.‌ 80 ವರ್ಷಗಳ ಇತಿಹಾಸ ಇರುವ ಬಂಟರ ಮಾತೃ ಸಂಘದ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದಿಂದ ಬಹಳಷ್ಟು ಮಂದಿ ಹೆಣ್ಮಕ್ಕಳಿಗೆ ಇಲ್ಲಿ ಪ್ರಯೋಜವಾಗಿದೆ. ಪ್ರತೀ ವರ್ಷ ಹಾಸ್ಟೇಲ್ ಡೇ ಆಚರಿಸುವ ಮೂಲಕ ವಿದ್ಯಾರ್ಥಿನಿ ನಿಲಯದಲ್ಲಿ ಇಲ್ಲಿದ್ದ ಮಹಿಳೆಯರು ಮತ್ತೆ ಒಟ್ಟು ಸೇರುವ ಅವಕಾಶ ದೊರೆತಿದೆ ಎಂದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದಲ್ಲಿ ಸಂಸ್ಕೃತಿ ಆಚಾರ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಹಾಗಾಗಿ ಇಲ್ಲಿಯ ಮಕ್ಕಳಲ್ಲಿ ಶಿಸ್ತು, ಸಮಯ ಪ್ರಜ್ನೆಯನ್ನು ಕಾಣಲು ಸಾಧ್ಯವಿದೆ ಎಂದರು. ಅಮೃತಸಿರಿ ಸ್ಮರಣ ಸಂಚಿಕೆಯನ್ನು ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಅನಾವರಣಗೊಳಿಸುವರು. ಮುಖ್ಯ ಅತಿಥಿಗಳಾಗಿ ಮುಂಬಯಿಯ ಅರ್ಗಾನಿಕ್‌ ಇಂಡಸ್ಟ್ರೀಸ್‌ನ ಶಶಿರೇಖಾ ಆನಂದ ಶೆಟ್ಟಿ, ಸೆಲೆಬ್ರಿಟಿ ಚೆಪ್‌ ಶ್ರೀಯಾ ಶೆಟ್ಟಿ, ಅಮತ ಬಿಲ್ಡ್‌ ಕೇರ್‌ ಸೊಲ್ಯೂಷನ್‌ ಪಾಲುದಾರರಾದ ಸಮೀಕ್ಷಾ ಶೆಟ್ಟಿ, ಕೊರಿಯೋಗ್ರಾಫ‌ರ್‌ ಪ್ರಮೋದ್‌ ಆಳ್ವ, ಬಂಟರ ಮಾತೃ ಸಂಘದ ಕೋಶಾಧಿಕಾರಿ ರಾಮ್ ಮೋಹನ್ ರೈ, ಜತೆ ಕಾರ್ಯದರ್ಶಿ ಸಂಪಿಗೆದಡಿ ಸಂಜೀವ ಶೆಟ್ಟಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ನಿಲಯದ ಸಂಚಾಲಕಿ ಶಾಲಿನಿ ಶೆಟ್ಟಿ, ಕಾರ್ಯದರ್ಶಿ ಸಾರಿಕಾ ಭಂಡಾರಿ, ಕೋಶಾಧಿಕಾರಿ ಸವಿತಾ ಚೌಟ, ಜತೆ ಕಾರ್ಯದರ್ಶಿ ಶರ್ಮಿಳಾ ಶೆಟ್ಟಿ, ಸುಜಯ ರೈ, ಉಷಾ ಬಲ್ಲಾಲ್, ಡಾ ಆಶಾ ಜ್ಯೋತಿ ರೈ ಉಪಸ್ಥಿತರಿದ್ದರು.ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆರು ಮಂದಿಯನ್ನು ಸನ್ಮಾನಿಸಲಾಯಿತು.‌ ಸಮಾರಂಭದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಕಳೆದು ಹೋದ ಸವಿನೆನಪುಗಳನ್ನು ಮೆಲುಕು ಹಾಕಿದರು.ಹಾಸ್ಟೇಲ್ ನ ಸಂಚಾಲಕಿ ಶಾಲಿನಿ ಶೆಟ್ಟಿ ಸ್ವಾಗತಿಸಿದರು. ಜಯಂತಿ ಶೆಟ್ಟಿ ವರದಿ ವಾಚಿಸಿದರು. ವೀಣಾ ಶೆಟ್ಟಿ ವಂದಿಸಿದರು. ಆರ್ ಜೆ ನಯನಾ ಶೆಟ್ಟಿ ಮತ್ತು ಸುನಿಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಅರ್ಪಿತ ಮತ್ತು ವಿಭಾ ನಿರ್ವಹಿಸಿ, ಆಶಾಲತಾ ಶೆಟ್ಟಿ ವಂದಿಸಿದರು.ಚಿತ್ರಗಳು: ಸತೀಶ್ ಕಾಪಿಕಾಡ್

ಪ್ರಾದೇಶಿಕ ವಾರ್ತೆಗಳು

ಅಭಾಸಾಪ ಮಂಗಳೂರು ತಾಲೂಕುಸಮಿತಿ ಅಧ್ಯಕ್ಷರಾಗಿ ಡಾ. ಮೀನಾಕ್ಷಿ ರಾಮಚಂದ್ರ

ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷರಾಗಿ ಡಾ. ಮೀನಾಕ್ಷಿ ರಾಮಚಂದ್ರ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನರಸಿಂಹ ಶೆಟ್ಟಿ ತುಪ್ಪೆಕಲ್ಲು, ಚಂದ್ರಪ್ರಭಾ ದಿವಾಕರ್, ಕಾರ್ಯದರ್ಶಿಯಾಗಿ ಯಶೋದಾ ಕುಮಾರಿ ಜತೆ ಕಾರ್ಯದರ್ಶಿಯಾಗಿ ರವಿಕಲಾ ಸುಂದರ್, ಕೋಶಾಧಿಕಾರಿಯಾಗಿ ಬೀನಾ , ಸಮಿತಿ ಸದಸ್ಯರಾಗಿ ಉಷಾ ಅಮೃತ ಕುಮಾರ್,ಸಂಧ್ಯಾ ಆಳ್ವ , ಕವಿತಾ, ಮಮತಾ, ಗಾಯತ್ರಿ , ಪ್ರೊ.ಗಿರಿಯಪ್ಪ , ಲಾವಣ್ಯ ಸುಧಾಕರ್, ಶೈಲಜಾ ಪುದುಕೋಳಿ, ಪ್ರೊ.ವಿಶಾಲ ಆಯ್ಕೆಯಾಗಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಫೆ.26ರಂದು ಡಾ.ಯು.ಕೆ.ಮೋನು. ಪ್ರೆಸ್ ಕ್ಲಬ್ ಗೌರವ ಅತಿಥಿ

ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಫೆ.26ರಂದು ಬೆಳಗ್ಗೆ 11.30 ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಕಣಚೂರು ಸಮೂಹ ಸಂಸ್ಥೆಗಳ ಸ್ಥಾಪಕ ಚೇರ್ಮನ್ ಡಾ.ಯು.ಕೆ.ಮೋನು ಭಾಗವಹಿಸಿ ಸಂವಾದ ನಡೆಸಲಿದ್ದಾರೆ. ಹಿರಿಯ ಪತ್ರಕರ್ತ ಹಿಲರಿ ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ , ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ.ಆರ್.ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬಹುಮುಖೀ ಸಾಂಸ್ಕೃತಿಕ ಸಕ್ರಿಯನ ಪುಷ್ಪವೃಷ್ಟಿ

ಸೃಷ್ಟಿ ಸಿರಿಯಲಿ ಪುಷ್ಪ ವೃಷ್ಟಿ.ಪ್ರಾ.ಭಾಸ್ಕರ ರೈ ಕುಕ್ಕುವಳ್ಳಿ.ಪುಟ 136.ರಾಜ್ ಪ್ರಕಾಶನ ಮೈಸೂರು.2024ರೂ 150.ತುಳು ಕನ್ನಡ ಲೇಖಕ, ಕವಿ – ಅರ್ಥದಾರಿ, ಅಧ್ಯಾಪಕ, ವಾಗ್ಮಿ. ಗ್ರಂಥ ಸಂಪಾದಕ, ವಾಹಿನಿ ನಿರ್ವಾಹಕ, ನಿರೂಪಕ, ನಟ, ಪ್ರಾ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಈ ಕವಿತಾ ಸಂಕಲನವು ವೈವಿಧ್ಯ ಯುತ ಗುಚ್ಛ; ಸೃಷ್ಟಿಯ ಸಿರಿಯ ಸ್ಪಂದನ. ಇದರಲ್ಲಿ ಕಾವ್ಯ ಸಿರಿ, ಭಾವ ಸಿರಿ, ಭಕ್ತಿ ಸಿರಿ ಎಂಬ ಮೂರು ವಿಭಾಗಗಳಲ್ಲಿ 80 ಕ್ಕೂ ಮಿಕ್ಕಿ ಕವಿತೆಗಳಿವೆ.ವಿಸ್ತಾರ ವ್ಯಾಪ್ತಿ ಮತ್ತು ಉದಾರ ನಿಲುವಿನ, ಭಾವದೊಳ್ ಒಳಗೊಂಬ ಕವಿತ್ವದ ಕುಕ್ಕುವಳ್ಳಿ ಮನನ ಗಾಯನ ಎರಡಕ್ಕೂ ಒದಗುವ ರಚನೆಗಳನ್ನು ನೀಡಿದ್ದಾರೆ. ಮಾವಿನ ಮರಗಳು ಹೂ ಬಿಡುವ ಕಾಲದಲ್ಲಿ ಈ ಪುಷ್ಪ ವೃಷ್ಟಿ ಸಂಕಲನ ಹೊರಬರುತ್ತಿವುದು ಅಭಿನಂದನೀಯ. ಚೆಲುವು,ಜಾಗ್ರತಿ, ಆಶಯ, ಆರಾಧನೆ, ಭಾವ ಸೂಕ್ಷ್ಮ, ಪುರಾಣ ರೂಪಕ, ಸಮಾಜ ಪರತೆ, ಪ್ರೀತಿ , ದೈವ ಚಿಂತನ ತುಂಬಿರುವ ಹಲವು ಕವಿತೆಗಳಿವೆ.ಅಗಸ್ತ್ಯ ಕೋಪ, ನಗುಚೆಲ್ಲಿ ಹೋಯ್ತೆಲ್ಲಿ, ಅಷ್ಟಾವಂಕನ ಅಳಲು, ವಿದ್ಯಾರಣ್ಯ ಸ್ಫೂರ್ತಿ, ಚಿಟ್ಟೆ ಹಿಡಿಯುವ ಹುಡುಗಿ, ವೀರಯತಿ ವಿವೇಕಾನಂದ, ಭಾಗ್ಯದ, ದುಗುಡವಿದೇತಕೆ, ರಾಮನಾಗು, ನಾಗಬ್ರಹ್ಮನೆ ಮೊದಲಾದ ಕವನಗಳು ವಿಶಿಷ್ಟ ವಾಗಿವೆ. ಪ್ರತಿಭೆಯ ಸಮ್ರೃದ್ಧಿ, ಭಾವ, ಅನುಭಾವ ವೈವಿಧ್ಯ ಇರುವ, ಕವಿ ಕುಕ್ಕುವಳ್ಳಿ ಈಗಾಗಲೇ ತುಳು ಕವಿತಾ ಸಂಕಲನ ‘ಸೀಯನ’ ತಂದಿದ್ದಾರೆ.. 30 ಕ್ಕೂ ಮಿಕ್ಕಿದ ಗದ್ಯ ಪದ್ಯ ನಾಟಕಾದಿ ಕೃತಿಗಳ ಕರ್ತೃ, ರೈಗಳ ಬಾಲ್ಯೊ ಟ್ಟು ಗುತ್ತು ದೈವ ಸಿರಿ ಸಿಹಿಯಾನ ಪಸರಿಸಿ ಮಾಧುರ್ಯ ನೀಡುತ್ತಿರಲಿ..

ಕರಾವಳಿ ಸುದ್ದಿ, ಪ್ರಾದೇಶಿಕ ವಾರ್ತೆಗಳು

ಭಾಸ್ಕರ ರೈ ಕುಕ್ಕುವಳ್ಳಿಯವರ ‘ಸೃಷ್ಟಿಸಿರಿಯಲಿ ಪುಷ್ಪವೃಷ್ಠಿ’ ಕೃತಿ ಬಿಡುಗಡೆ. ಕಾವ್ಯ ರಚನೆಯೂ ಒಂದು ಸೃಷ್ಟಿ ಕಾರ್ಯ: ಕೊಡಿಯಾಲಬೈಲ್

ಮಂಗಳೂರು: ‘ಕವಿತೆ ಕಟ್ಟುವುದು ಸುಲಭದ ಮಾತಲ್ಲ. ನಮ್ಮ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕಿಸುವ ಚಿಕಿತ್ಸಕ ಬುದ್ಧಿಯೊಂದಿಗೆ ಭಾಷೆಯ ಮೇಲಿನ ಪ್ರಭುತ್ವವೂ ಬೇಕಾಗುತ್ತದೆ. ಈ ದೃಷ್ಟಿಯಿಂದ ಕಾವ್ಯ ರಚನೆ ಎಂಬುದು ಒಂದು ಅದ್ಭುತ ಸೃಷ್ಟಿ ಕಾರ್ಯವೇ. ವಿವಿಧ ಮಾದರಿಯ ಕವಿತಾ ರಚನೆಯ ಮೂಲಕ ಕುಕ್ಕುವಳ್ಳಿ ಅವರು ಅದನ್ನು ಸಾಧಿಸಿದ್ದಾರೆ’ ಎಂದು ಖ್ಯಾತ ರಂಗಭೂಮಿ ಮತ್ತು ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಹೇಳಿದ್ದಾರೆ. ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಫೆಬ್ರವರಿ 14ರಂದು ನಗರದ ಪುರ ಭವನದಲ್ಲಿ ಜರಗಿದ ಪುಸ್ತಕ ಪ್ರೇಮಿಗಳ ದಿನಾಚರಣೆಯಲ್ಲಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಸೃಷ್ಟಿಸಿರಿಯಲಿ ಪುಷ್ಪವೃಷ್ಟಿ’ ಭಾವ – ಅನುಭಾವ ಗೀತೆಗಳ ಗುಚ್ಛವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಗುಲ್ಬರ್ಗ ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ಅಧಿಕಾರಿ ಡಾ. ಸದಾನಂದ ಪೆರ್ಲ ಕೃತಿಯ ಬಗ್ಗೆ ಮಾತನಾಡಿ ‘ವೃಕ್ಷರಾಜಿಗಳೆಲ್ಲ ಹೂ ಬಿಡುವ ಭೂಮಿಯ ಫಲವಂತಿಕೆಯ ಕಾಲದಲ್ಲಿ ಕೃತಿ ಹೊರಬರುತ್ತಿದೆ.ಅದಕ್ಕನುಗುಣವಾಗಿ ಕೃತಿಯ ಶೀರ್ಷಿಕೆ ಹೊಂದಿಕೆಯಾಗುವುದೊಂದು ಯೋಗಾಯೋಗ ‘ ಎಂದರು. ಪುಷ್ಪ ವೃಷ್ಟಿ ವ್ಯರ್ಥವಲ್ಲ:ಕೃತಿಕಾರ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ಪ್ರಕೃತಿಯಲ್ಲಾಗುವ ಪುಷ್ಪ ವೃಷ್ಟಿ ಯಾವತ್ತೂ ವ್ಯರ್ಥವಲ್ಲ. ಎಲ್ಲಾ ಹೂಗಳು ಸುಗಂಧ ಬೀರದಿದ್ದರೂ ಔಷಧಿ ಅಥವಾ ಅಲಂಕಾರಕ್ಕಾಗಿಯಾದರೂ ಉಪಯೋಗವಾಗುತ್ತವೆ. ಅದಕ್ಕಾಗಿ ಸಂಕಲನದಲ್ಲಿರುವ ಕವಿತೆಗಳನ್ನು ಕಾವ್ಯಸಿರಿ, ಭಾವಸಿರಿ ಮತ್ತು ಭಕ್ತಿಸಿರಿ ಎಂಬ ಮೂರು ವಿಭಾಗಗಳಲ್ಲಿ ಪ್ರಕಟಿಸಲಾಗಿದೆ’ ಎಂದು ನುಡಿದರು.ಇದೇ ಸಂದರ್ಭದಲ್ಲಿ ಕೃತಿಕಾರರನ್ನು ರಂಗ ಸಂಗಾತಿ ವತಿಯಿಂದ ಸನ್ಮಾನಿಸಲಾಯಿತು.ಲೇಖಕಿ ಅಕ್ಷಯ ಆರ್ .ಶೆಟ್ಟಿ ಕವಿ ಪರಿಚಯ ನೀಡಿದರು. ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಶಶಿರಾಜ್ ರಾವ್ ಕಾವೂರು ಸ್ವಾಗತಿಸಿದರು. ಡಾ. ಮಂಜುಳಾ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಪದವು ಫ್ರೆಂಡ್ಸ್ ಕ್ಲಬ್ 50ನೇ ವರ್ಷಾಚರಣೆಯ ಲಾಂಛನ – ಗೀತೆ ಬಿಡುಗಡೆ

ಮಂಗಳೂರು: ಶಕ್ತಿನಗರ ಕಾನಡ್ಕದ ಪದವು ಫ್ರೆಂಡ್ಸ್ ಕ್ಲಬ್ ನ 49ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ನಾಲ್ಯಪದವು ಶಾಲಾ ರಂಗಮಂದಿರದಲ್ಲಿ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ಸಂಸ್ಥೆ 50ನೇ ವರ್ಷಕ್ಕೆ ಕಾಲಿಟ್ಟ ಸಲುವಾಗಿ ಸುವರ್ಣ ಸಂಭ್ರಮಾಚರಣೆಗೆ ಚಾಲನೆ ನೀಡಲಾಯಿತು.ಯಕ್ಷಿಣಿಗಾರ ರಾಜೇಶ್ ಮಳಿ ಹಾಗೂ ಅವರ ಪುತ್ರಿಯರಾದ ಅಂಜನಾ ಮತ್ತು ಅಪೂರ್ವ ಮಳಿ ವಿಶಿಷ್ಟ ರೀತಿಯಲ್ಲಿ ಜಾದೂ ದಂಡ ಪ್ರಯೋಗಿಸಿ ಸುವರ್ಣ ಮಹೋತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿದರು. ‘ಬಂಗಾರ್ ಪರ್ಬಯೇ…’ ಶೀರ್ಷಿಕೆ ಗೀತೆ:ಇದೇ ಸಂದರ್ಭದಲ್ಲಿ ಕವಿ – ಜಾನಪದ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಬರೆದ ‘ಬಂಗಾರ್ ಪರ್ಬಯೇ..’ ತುಳು ಶೀರ್ಷಿಕೆ ಗೀತೆಯನ್ನು ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ್ ಕುಮಾರ್ ಗುಂಡಿ ಅದುಮಿ ಬಿಡುಗಡೆಗೊಳಿಸಿದರು. ಬಳಿಕ ಧ್ವನಿವರ್ಧಕದಲ್ಲಿ ಅದನ್ನು ಸಾರ್ವಜನಿಕವಾಗಿ ಕೇಳಿಸಲಾಯ್ತು.ಪ್ರಶಸ್ತಿ ಪ್ರದಾನ – ಸಮ್ಮಾನ:ಹಿರಿಯ ರಂಗಕರ್ಮಿ ಜಿ.ಎಸ್.ಆಚಾರ್ ಅವರಿಗೆ ಕ್ಲಬ್ಬಿನ ಹಿರಿಯ ಸದಸ್ಯ, ಹಾಸ್ಯ ಚಕ್ರವರ್ತಿ ದಿ| ಮಾಧವ ಕೆ. ಶಕ್ತಿನಗರ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಶಾಲಾ ನಾಯಕತ್ವ ಸಮಾವೇಶಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಪ್ರಾಥಮಿಕ ಶಾಲೆ ಶಕ್ತಿನಗರದ ನಾಲ್ಯಪದವು ಸರಕಾರಿ ಶಾಲಾ ಮುಖ್ಯ ಶಿಕ್ಷಕಿ ದಾಕ್ಷಾಯಿಣಿ ವೀರೇಶ್, ಪದವಿಪೂರ್ವ ಕಾಲೇಜಿಗೆ ಹೊಸಕಟ್ಟಡ ದೊರಕಲು ಸಹಕರಿಸಿದ ಪ್ರಾಂಶುಪಾಲ ಜಯಾನಂದ.ಎಲ್ ಸುವರ್ಣ ಹಾಗೂ ಪ್ರೌಢಶಾಲೆಯ ನೂತನ ಮುಖ್ಯಶಿಕ್ಷಕ ಪ್ರಶಾಂತ್ ಕುಮಾರ್ ಕೆ.ಎಸ್. ಅವರನ್ನು ಸನ್ಮಾನಿಸಲಾಯಿತು.ಮಂಗಳೂರು ದಕ್ಷಿಣದ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಋತ್ವಿಕ್ ಕದ್ರಿ, ಮನಪಾ ಸದಸ್ಯೆ ವನಿತಾ ಪ್ರಸಾದ್, ಗೀತೆ ರಚನೆಕಾರ ಪ್ರೊ‌.ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಗಣ್ಯರು ಉಪಸ್ಥಿತರಿದ್ದರು. ಆಂತರಿಕ ಲೆಕ್ಕಪರಿಶೋಧಕ ರವೀಂದ್ರ ರೈ ಸ್ವಾಗತಿಸಿದರು. ರಕ್ಷಕ್ ಪೂಜಾರಿ ವಂದಿಸಿದರು. ಹರೀಶ್ ಕುಮಾರ್ ಜೋಗಿ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಯುನಿವರ್ಸಲ್ ಮೀಡಿಯಾ ಅವಾರ್ಡ್

ಮಂಗಳೂರು, ಫೆ. 21,ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಯುನಿವರ್ಸಲ್ ಮೀಡಿಯಾ ಅವಾರ್ಡ್ 2025 ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು ಭಾಜನರಾಗಿದ್ದಾರೆ. ಮಾಧ್ಯಮ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.ದುಬೈ ನಲ್ಲಿ ಫೆಬ್ರವರಿ 24 ರಂದು ನಡೆಯುವ 47 ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಹಾಗೂ ಸಾಂಸ್ಕೃತಿಕ ವಿನಿಮಯ ಸಮ್ಮೇಳನ ದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.ದುಬೈ ಆಲ್ ಹಜ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಮೊಹಮ್ಮದ ಇಬ್ರಾಹಿಂ ಅಲ್ ಹಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಶ್ರೀನಿವಾಸ ನಾಯಕ್ ಇಂದಾಜೆ ಅವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ,, ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಳಿಕ ಪತ್ರಕರ್ತರ ಗ್ರಾಮ ವಾಸ್ತವ್ಯ, ಬ್ರ್ಯಾಂಡ್ ಮಂಗಳೂರು ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕುತ್ಲುರು ಸರಕಾರಿ ಶಾಲೆ, ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಶ್ರಮಿಸಿದ್ದರು.

Scroll to Top