ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಸರಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ -ಕೆ.ವಿ.ಪ್ರಭಾಕರ್

ಬೆಳ್ತಂಗಡಿ:ರಾಜ್ಯದ ಸರಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಗಮನಹರಿಸುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಹೇಳಿದರು.ತಾಲೂಕಿನ ಕುತ್ಲೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮತ್ತು ಸನಿಹದ ಮಂಜುಶ್ರೀ ಸಭಾಭನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಶೈಕ್ಷಣಿಕ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.ಸರಕಾರಿ ಶಾಲೆಯಲ್ಲಿ ಓದಿದವರೇ ಆಗಿದ್ದಾರೆ.ಸರಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಸ್ಥಳೀಯರ ಸಹಭಾಗಿತ್ವದ ಅಗತ್ಯವಿದೆ.ಹೀಗಾಗಿ ಸರಕಾರಿ ಶಾಲೆಗಳನ್ನು ಕಡೆಗೆಣಿಸಬಾರದು ಎಂದರು.ಮನುಷ್ಯರ ನಡುವಿನ ಪ್ರೀತಿ, ಸಾಮರಸ್ಯ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಕರ ಜವಾಬ್ದಾರಿಯುತ ನಡವಳಿಕೆಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ. ವಿದ್ಯಾರ್ಥಿಗಳು ತಂದೆ, ತಾಯಿ, ಗುರುಗಳಿಗೆ ಗೌರವ ಕೊಡುವಂತಾಗಬೇಕು ಟೀಕೆಗಳು ಬರುತ್ತವೆ. ಸಾಯುತ್ತವೆ. ನಾವು ದೊಡ್ಡವ್ಯಕ್ತಿಗಳಾಗುವುದಕ್ಕಿಂತ ಸಮಾಜಕ್ಕೆ ನಾವು ಏನು ನೀಡಿದ್ದೇವೆ ಎಂಬುದು ಮುಖ್ಯವಾಗುತ್ತದೆಎಂದು ಆಶಿಸಿದರು. ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ.ಡಿ.ಆರ್.ಡಿ.ಪಿ.ಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಎಂ.ಆರ್.ಪಿ.ಎಲ್.ನ ಸಿ.ಎಸ್.ಆರ್. ಪ್ರಬಂಧಕ ಹರೀಶ್, ಕ್ವಾಯರ್ ಬೋರ್ಡ್ ಅಧ್ಯಕ್ಷ ನಟರಾಜ್, ಸೇವಾ ಭಾರತಿ ಅಧ್ಯಕ್ಷ ವಿನಾಯಕ್ ರಾವ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ,ಸದಸ್ಯ ರಾಜೇಶ್, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ರೈ, ನಾರಾವಿ ಗ್ರಾ.ಪಂ.ಅಧ್ಯಕ್ಷ ರಾಜರತ್ನ ಜೈನ್, ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ಉಮಾಕಾಂತ ಅರಿಗ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಮಿತ್ ಜೈನ್, ಹಿರಿಯರಾದ ಡಾಕಯ್ಯ ಪೂಜಾರಿ, ಗುತ್ತಿಗೆದಾರ ವಿನಯಕುಮಾರ್, ಉಪಾಧ್ಯಕ್ಷೆ ಶ್ವೇತಾ ಇದ್ದರು. ಕಾಮಗಾರಿಗಳನ್ನು ನಿರ್ವಹಿದವನ್ನು ಸಮ್ಮಾನಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಸ್ವಾಗತಿಸಿದರು. ಶಿಕ್ಷಕಿ ರೂಪಾ ವಂದಿಸಿದರು. ಶಿಕ್ಷಕ ಅಜಿತ್‌ಕುಮಾರ್ ನಿರ್ವಹಿಸಿದರು. *ಸರಕಾರಿ ಶಾಲೆಯಲ್ಲಿ ಕಲಿತ ಪಾಠ,ಪ್ರೀತಿ, ಶಿಸ್ತು ಇಂದು ನನ್ನನ್ನು ಇಲ್ಲಿವರೆಗೆ ತಂದು ನಿಲ್ಲಿಸಿದೆ. ಹೀಗಾಗಿ ನನಗೆ ಸರಕಾರಿ ಶಾಲೆಯೆಂದರೆ ವಿಶೇಷ ಅಭಿಮಾನ. ಕುತ್ಲೂರು ಶಾಲೆಗೆ ಕೆಲ ದಿನಗಳಲ್ಲಿ ಮಿನಿ ಬಸ್ ನೀಡಲಿದ್ದೇನೆ ಹಾಗೂ ಇಲ್ಲಿ ಆಂಗ್ಲ ಮಾಧ್ಯಮ ಕಲಿಕೆಗೆ ಸರಕಾರದ ಮಟ್ಟದಲ್ಲಿ ಅನುಮತಿ ಕೊಡಿಸುತ್ತೇನೆ. ಒಟ್ಟಿನಲ್ಲಿ ಶಾಲೆ ರಾಜ್ಯಕ್ಕೇ‌ ಮಾದರಿ ಯಾಗಬೇಕು ಎಂದು ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.*ಇದೇ ಸಂದರ್ಭದಲ್ಲಿ ಅವರು ಶಾಲಾ ಎಸ್.ಡಿ.ಎಂ.ಸಿ ನೇತೃತ್ವದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಶಾಲಾ ಫಲಕ, ಕೊಳವೆ ಬಾವಿ, ಚಿತ್ರಗಳುಳ್ಳ ಶಾಲಾ ಕೊಠಡಿ, ವಿದ್ಯುದೀಕರಣ, ಶೌಚಾಲಯ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೀಡಿದ ಕಂಪ್ಯೂಟರ್ ‌ನ್ನು ಕೆ.ವಿ.ಪ್ರಭಾಕರ ಅವರು ಉದ್ಘಾಟಿಸಿದರು. ಶಾಲಾ ಆವರಣದಲ್ಲಿ ಗಿಡ ನೆಟ್ಟು ಶಾಲೆಯ ತರಕಾರಿ, ಅಡಕೆ ತೋಟವನ್ನು ವೀಕ್ಷಿಸಿದರು.

ಪ್ರಾದೇಶಿಕ ವಾರ್ತೆಗಳು

ಕ.ವಿ.ಪ್ರ,ನಿ.ನೌ.ಸಂಘ ಮೆಸ್ಕಾಂ ಉಪಾಧ್ಯಕ್ಷ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ

ಮಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ (ರಿ,) ನಂ.659, ಕೇಂದ್ರ ಸಮಿತಿ, ಸ್ಥಳೀಯ ಸಮಿತಿ ಮತ್ತು ಎಲ್ಲಾ ಪ್ರಾರ್ಥಮಿಕ ಸಮಿತಿಗಳ ಸಹಯೋಗದೊಂದಿಗೆ ಕ.ವಿ.ಪ್ರ,ನಿ.ನೌ.ಸಂಘ ಮೆಸ್ಕಾಂ, ಮಂಗಳೂರು ಇದರ ಉಪಾಧ್ಯಕ್ಷರು ಹಾಗೂ (ವಿ), ಎಲ್.ಟಿ.ರೇಟಿಂಗ್ ಉಪವಿಭಾಗ ಅತ್ತಾವರ ಮಂಗಳೂರು ಇದರ ಕಿರಿಯ ಇಂಜಿನಿಯರ್ ಹೆಚ್. ಎಸ್. ಗುರುಮೂರ್ತಿ ಇವರ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ನಗರದ ಬೊಂದೆಲ್‌ನಲ್ಲಿರುವ ಕ.ವಿ.ಪ್ರ,ನಿ.ನೌಕರರ ಸಮುದಾಯ ಭವನದಲ್ಲಿ ಜರಗಿತು.ಕ.ವಿ.ಪ್ರ,ನಿ.ನೌ.ಸಂಘದ ಅಧ್ಯಕ್ಷರು ಹಾಗೂ ಕ.ವಿ.ಪ್ರ,ನಿ ಮತ್ತು ಎಲ್ಲಾ ಎಸ್ಕಾಂಗಳು ಬೆಂಗಳೂರು, ಇದರ ನಿರ್ದೇಶರಾದ ಕೆ. ಬಲರಾಂ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಮೆಸ್ಕಾಂನ ಪ್ರಧಾನ ವ್ಯವಸ್ಥಾಪಕರಾದ ಡಾ. ಮಂಜುನಾಥ ಸ್ವಾಮಿ ಬಿ.ಎಸ್ ಹಾಗೂ ಮಂಗಳೂರು ಬಿಜೈ ಮೆಸ್ಕಾಂನ ನಿರ್ದೇಶಕ (ತಾಂತ್ರಿಕ)ರಾದ ಮಹಾದೇವ ಸ್ವಾಮಿ ಪ್ರಸನ್ನ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ.ವಿ.ಪ್ರ,ನಿ.ನೌ.ಸಂಘ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಶಿವರಾಂ, ಕ.ವಿ.ಪ್ರ,ನಿ.ನೌ.ಸಂಘ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಕೆ.ಶಂಕರ ಪ್ರಕಾಶ, ಹಿರಿಯ ಕಾರ್ಮಿಕ ಮುಖಂಡ ಕೆ. ಶಶೀಂದ್ರ, ಇ. ಚೆನ್ನೆಶ್, ಕಾರ್ಯದರ್ಶಿ, ಪ್ರಾ.ಸ. ಮಂಗಳೂರು ಮುಂತಾದವರು ಪಾಲ್ಗೊಂಡಿದ್ದರು.ಕ.ವಿ.ಪ್ರ,ನಿ.ನೌ.ಸಂಘ ಕಾವೂರು ಇದರ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಷಣ್ಮುಖಪ್ಪ ಬಾವಿ ಕಾರ್ಯಕ್ರಮ ನಿರೂಪಿಸಿದರು.News By: Sathish kapikad.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಲೋಕಾಯುಕ್ತ ನಿರೀಕ್ಷಕರಿಗೆ ಲಂಚದ ಆಮಿಷ ಒಡ್ಡಿದ ಸರಕಾರಿ ಅಧಿಕಾರಿ ಗಜೇಂದ್ರ ವಿ ಎಡಕೆ ಬಂಧನ

ಮಂಗಳೂರು-ಫಿರ್ಯಾದಿದಾರರಾದ ಪೊಲೀಸ್ ನಿರೀಕ್ಷಕರು ಕರ್ನಾಟಕ ಲೋಕಾಯುಕ್ತ ಮಂಗಳೂರುರವರು ದಿನಾಂಕ 30-06-2025 ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿರುವ ಸಮಯ ಬೆಳಿಗ್ಗೆ 11.15 ಗಂಟೆಯ ಸುಮಾರಿಗೆ ಪ್ರವೀಣ್ ನಾಯ್ಕ್ ಮಾಲಿಕರು, ಪ್ರಶಾಂತ್ ಆಯಿಲ್ ಇಂಡಸ್ಟ್ರಿಸ್, ಕೋಟೆಕಣಿ, ಮಂಗಳೂರುರವರು ಮತ್ತು ಗಜೇಂದ್ರ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಬಂದು ಫಿರ್ಯಾದಿದಾರರಾದ ಪೊಲೀಸ್ ನಿರೀಕ್ಷಕರಿಗೆ ಮಾಹಿತಿ ನೀಡಬೇಕು ಎಂಬುದಾಗಿ ಠಾಣೆಯ ಸಿಬ್ಬಂದಿಯವರಲ್ಲಿ ತಿಳಿಸಿ, ನಂತರ ಗಜೇಂದ್ರ, ಸಹಾಯಕ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ, ಮಂಗಳೂರುರವರು ಫಿರ್ಯಾದಿದಾರರಾದ ಪೊಲೀಸ್ ನಿರೀಕ್ಷಕರವರಲ್ಲಿ ಮಾತನಾಡುತ್ತಾ ತನ್ನ ವಿರುದ್ಧ ಹಾಗೂ ತನ್ನ ಇಲಾಖೆಯ ವಿರುದ್ಧ ಲೋಕಾಯುಕ್ತ ಸಂಸ್ಥೆಯಿಂದ ಯಾವುದೇ ಪ್ರಕರಣ ದಾಖಲಿಸಬಾರದು ಅಥವಾ ದಾಳಿ ಮಾಡಬಾರದು ಎಂಬುದಾಗಿ ತಿಳಿಸಿ ತಾನು 3 ತಿಂಗಳಿಗೊಮ್ಮೆ 25,000/- ಹಣವನ್ನು ಲಂಚವಾಗಿ ಮಂಗಳೂರು ಲೋಕಾಯುಕ್ತ ಠಾಣೆಗೆ ನೀಡುವುದಾಗಿ ಫಿರ್ಯಾದಿದಾರರಿಗೆ ಲಂಚದ ಅಮಿಷ ಒಡ್ಡಿರುತ್ತಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಗಜೇಂದ್ರ, ಸಹಾಯಕ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ, ಮಂಗಳೂರುರವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. 30.05.2025ರಂದು ಮಂಗಳೂರು ಲೋಕಾಯುಕ್ತ ಠಾಣೆಯ ಠಾಣಾಧಿಕಾರಿಯವರಿಗೆ ಲಂಚ ಹಣ ನೀಡುವುದಾಗಿ ಆಮೀಷ ಒಡ್ಡಿದ ಸರಕಾರಿ ಅಧಿಕಾರಿಯಾದ ಗಜೇಂದ್ರ ವಿ ಎಡಕೆ, ಸಹಾಯಕ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ, ಮಂಗಳೂರುರವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.ಈ ಕಾರ್ಯಾಚರಣೆಯಲ್ಲಿ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ರವರು ಸಿಬ್ಬಂದಿಗಳ ಜೊತೆ ಕಾನೂನು ಕ್ರಮ ಕೈಗೊಂಡಿರುತ್ತಾರೆ.

ಪ್ರಾದೇಶಿಕ ವಾರ್ತೆಗಳು

ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ಕೇಂದ್ರ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ ಇದರ ಮೂರನೇ ವರುಷದ ಸಮಾಲೋಚನ ಸಭೆ

ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ಕೇಂದ್ರ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ ಇದರ ಮೂರನೇ ವರುಷದ ಸಮಾಲೋಚನ ಸಭೆಯು ಬಿ. ಸಿ ರೋಡಿನಲ್ಲಿ ನಡೆಯಿತು. ಮಳೆಗಾಲದಲ್ಲಿ ವೃತ್ತಿಪರ ಯಕ್ಷಗಾನ ಕಲಾವಿದರು ಜೀವನೋಪಾಯಕ್ಕಾಗಿ ಪರಂಪರೆಯಿಂದ ನಡೆದು ಬಂದ ಮಾರ್ಗವೇ ಮನೆಮನೆ ಯಕ್ಷಗಾನ ಇದು ವ್ಯಾಪಾರಿಕರಣವಾಗದೆ ದೇವರ ಸೇವೆ ಎಂಬ ಮನೋಭಾವನೆ ಯೊಂದಿಗೆ ಕಲಾಭಿಮಾನಿಗಳ ಮನಸಿಗೆ ಹಿತವಾಗುವ ಸಭ್ಯತೆಯ ಪ್ರದರ್ಶನವನ್ನು ನೀಡುವುದರೊಂದಿಗೆ ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸಲಹೆ ನೀಡಿದರು.. ಚಿಕ್ಕ ಮೇಳದಲ್ಲಿ ದುಡಿಯುತ್ತಿದ್ದ ಕಲಾಮಾತೆಯ ಮಡಿಲು ಸೇರಿದ ಪ್ರವೀತ್ ಆಚಾರ್ಯ ಗುರುವಾಯನಕೆರೆ ಮತ್ತು ಸತೀಶ್ ಆಚಾರ್ಯ ವೇಣೂರು, ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಂದಿನ ಮಳೆಗಾಲದ ತಿರುಗಾಟವನ್ನು ತಳಕಲ ಕಾಶಿ ಶ್ರೀವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಜೂನ್ 5ನೇ ತಾರೀಕಿನಂದು ಗಣ್ಯರ ಉಪಸ್ಥಿತಿಯಲ್ಲಿ ಆರಂಭಿಸುವುದೆಂದು ತೀರ್ಮಾನಿಸಲಾಯಿತು. ಉಪಾಧ್ಯಕ್ಷರುಗಳಾದ ಭಾಗವತರಾದ ಮೋಹನ್ ಕಲಂಬಾಡಿ, ರಮೇಶ್ ಕುಲಶೇಖರ, ಕೋಶಾಧಿಕಾರಿ ದಿವಾಕರದಾಸ್ ಕಾವಲ್ ಕಟ್ಟೆ, ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೇಮಾರ್ , ಪದಾಧಿಕಾರಿಗಳು ಮತ್ತು ತೆಂಕುತಿಟ್ಟು ಚಿಕ್ಕ ಮೇಳಗಳ ಸಂಚಾಲಕರು, ಮತ್ತು ಕಲಾವಿದರು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಯಕ್ಷಬೊಳ್ಳಿ ಕಡಬ ದಿನೇಶ್ ರೈ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.

ಪ್ರಾದೇಶಿಕ ವಾರ್ತೆಗಳು

ನೂತನ ಪೊಲೀಸ್ ಕಮಿಷನರ್ ಅಧಿಕಾರ ಸ್ವೀಕಾರ

ಮಂಗಳೂರು – ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ಸುಧೀರ್ ರೆಡ್ಡಿಯವರು ಇಂದು ಅಧಿಕಾರ ಸ್ವೀಕರಿಸಿದರು. ಈ ಹಿಂದಿನ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಅವರು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುಧೀರ್ ರೆಡ್ಡಿಯವರಿಗೆ ಅಧಿಕಾರ ಹಸ್ತಾಂತರಿಸಿದರು

ಪ್ರಾದೇಶಿಕ ವಾರ್ತೆಗಳು

ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರು ಗಣಿ ಇಲಾಖೆ ಉಪನಿರ್ದೇಶಕಿ, ಚಾಲಕ ಸಹಿತ ಇನ್ನೊಬ್ಬ ಸಿಬ್ಬಂದಿ.

ಮಂಗಳೂರು: ಮನೆ ನಿರ್ಮಿಸುವುದಕ್ಕೆ ಭೂಮಿಯ ಕಲ್ಲು ತೆರವು ಮಾಡಿ ಸಮತಟ್ಟು ಮಾಡಲು ಅಗತ್ಯ ಅನುಮತಿ ನೀಡುವುದಕ್ಕೆ 50 ಸಾವಿರ ರೂ. ಲಂಚ ಬೇಡಿಕೆ ಇರಿಸಿದ ಮಂಗಳೂರು ಗಣಿ ಇಲಾಖೆ ಉಪನಿರ್ದೇಶಕಿ ಮತ್ತು ಚಾಲಕ ಸಹಿತ ಇನ್ನೊಬ್ಬ ಸಿಬ್ಬಂದಿ ಮಂಗಳೂರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಕೃಷ್ಣವೇಣಿ, ಸಿಬ್ಬಂದಿ ಪ್ರದೀಪ್ ಹಾಗೂ ಉಪನಿರ್ದೇಶಕರ ಚಾಲಕ ಮಧು ಭ್ರಷ್ಟಾಚಾರ ಆರೋಪ ಸಂಬಂಧ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದವರು. ವ್ಯಕ್ತಿಯೊಬ್ಬರು ತನ್ನ ಪರಿಚಯದವರ ಹೆಸರಿನಲ್ಲಿ ಇರುವ ಉಳ್ಳಾಲ ತಾಲೂಕು ಇರಾ ಗ್ರಾಮದ ಸರ್ವೆ ನಂಬ್ರ 279/5ರಲ್ಲಿ 1.39 ಎಕ್ರೆ ವಿಸ್ತೀರ್ಣದ ಜಮೀನಿನ ಪೈಕಿ 0.35 ಎಕರೆ ಪ್ರದೇಶದಲ್ಲಿ ಮನೆಯನ್ನು ಕಟ್ಟಲು ಕಟ್ಟಡ ಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ಕೋರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಕಳೆದ ವರ್ಷ ಅ. 28ರಂದು ಅರ್ಜಿ ಸಲ್ಲಿಸಿದ್ದರು. ಉಳ್ಳಾಲ ತಹಶೀಲ್ದಾರರು ಜಮೀನಿನಲ್ಲಿ ಲಭ್ಯವಿರುವ ಕಟ್ಟಡ ಕಲ್ಲು ತೆಗೆಯಲು ಪ್ರಮಾಣ ಪತ್ರ/ದೃಢೀಕರಣ ಪತ್ರ ನೀಡಬಹುದು ಎಂದು 2025ರ ಮಾರ್ಚ್ 21ರಂದು ವರದಿ ಸಲ್ಲಿಸಿದ್ದರು. ಆದರೂ ಕೂಡ ಗಣಿ ಇಲಾಖೆಯಿಂದ ಅನುಮತಿ ನೀಡಿರಲಿಲ್ಲ.ಈ ಬಗ್ಗೆ ವಿಚಾರಿಸಲು ದೂರುದಾರರು ಗಣಿ ಇಲಾಖೆ ಕಚೇರಿಗೆ ತೆರಳಿದ್ದು ಉಪನಿರ್ದೇಶಕಿ ಕೃಷ್ಣವೇಣಿ ಅವರು ಸಿಬ್ಬಂದಿ ಪ್ರದೀಪ್ ಎಂಬವರನ್ನು ಕರೆಯಿಸಿ ಫೈಲಿಗೆ 50 ಸಾವಿರ ರೂ. ತೆಗೆದುಕೊಳ್ಳಿ. ಅನಂತರ ಸಹಿ ಮಾಡುವ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕರಾದ ಕೃಷ್ಣವೇಣಿ ಮತ್ತು ಸಿಬ್ಬಂದಿ ಪ್ರದೀಪ್ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.ಬುಧವಾರ ಉಪನಿರ್ದೇಶಕಿ ಕೃಷ್ಣವೇಣಿ ಅವರು ಚಾಲಕ ಮಧು ಎಂಬವರ ಮೂಲಕ 50,000 ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪ್ರಭಾರ ಎಸ್.ಪಿ. ಕುಮಾರಚಂದ್ರ, ಡಿವೈಎಸ್‌ಪಿ ಡಾ| ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್. ಹಾಗೂ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಮಂಜುನಾಥ, ರಾಜೇಂದ್ರ ನಾಯ್ಕ ಮತ್ತಿತರರು ಭಾಗವಹಿಸಿದ್ದರು.

ಪ್ರಾದೇಶಿಕ ವಾರ್ತೆಗಳು

ಬಹು ನಿರೀಕ್ಷಿತ ಮಕ್ಕಳ ಚಿತ್ರ “ಸ್ಕೂಲ್ ಲೀಡರ್” ರಾಜ್ಯಾದ್ಯಂತ ಬಿಡುಗಡೆ

ಮಂಗಳೂರು: ಸನ್ ಮ್ಯಾಟ್ರಿಕ್ಸ್ ಸಿನಿಮಾಸ್ ಮತ್ತು ಫಿಲ್ಮ್ ವೀಲ್ ಸ್ಟುಡಿಯೋಸ್ ಅರ್ಪಿಸುವ “ಸ್ಕೂಲ್ ಲೀಡರ್” ಸಿನಿಮಾ ನಗರದ ಬಿಗ್ ಸಿನಿಮಾಸ್ ನಲ್ಲಿ ಬಿಡುಗಡೆಯಾಯಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಸಿಎ ಎಸ್ ಎಸ್ ನಾಯಕ್ ಅವರು, “ಇದು ನಿರ್ಮಾಪಕ ಸತ್ಯೇಂದ್ರ ಪೈ ಅವರ ಮೂರನೇ ಸಿನಿಮಾ. ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಒತ್ತಡದಿಂದ ಹೊರಬಂದು ಹೇಗೆ ಜೀವನದಲ್ಲಿ ಸಾಧನೆ ಮಾಡಬಹುದು ಅನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕನ್ನಡ ಶಾಲೆಗಳ ಇಂದಿನ ಪರಿಸ್ಥಿತಿಯನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಎಲ್ಲರೂ ಸಿನಿಮಾ ನೋಡಿ ಮಕ್ಕಳನ್ನು ಪ್ರೋತ್ಸಾಹಿಸಿ“ ಎಂದರು.ಬಳಿಕ ಪ್ರಕಾಶ್ ಪಾಂಡೇಶ್ವರ್ ಮಾತಾಡಿ, ”ಸ್ಕೂಲ್ ಲೀಡರ್ ಹೈಸ್ಕೂಲ್ ಜೀವನದ ಕಥೆ ಎಲ್ಲರಿಗೂ ಈ ಸಿನಿಮಾ ಖಂಡಿತ ಇಷ್ಟವಾಗುತ್ತದೆ, ಎಲ್ಲರೂ ಸಿನಿಮಾ ನೋಡಿ“ ಎಂದು ಶುಭ ಹಾರೈಸಿದರು. ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, ”ಪೆನ್ಸಿಲ್ ಬಾಕ್ಸ್ ಕೊಟ್ಟಿದ್ದ ಚಿತ್ರ ನಿರ್ದೇಶಕ ರಝಾಕ್ ಪುತ್ತೂರು ಈಗ ಸ್ಕೂಲ್ ಲೀಡರ್ ನಂತಹ ಉತ್ತಮ ಗುಣಮಟ್ಟದ ಸಿನಿಮಾ ಕೊಟ್ಟಿದ್ದಾರೆ. ಇಂತಹ ಇನ್ನಷ್ಟು ಸಿನಿಮಾಗಳು ಬರಲಿ, ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ“ ಎಂದರು.ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಭರತ್ ಮಾತಾಡಿ, ”ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ ಸರಕಾರಿ ಶಾಲೆಗಳಲ್ಲಿ ಮಕ್ಕಳನ್ನು ಯಾವ ರೀತಿ ಬೆಳೆಸುತ್ತಾರೆ ಅನ್ನುವುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಸಿನಿಮಾ ನೂರು ದಿನ ಪೂರೈಸಲಿ“ ಎಂದರು.ಸಮಾರಂಭದಲ್ಲಿ ನಿರ್ಮಾಪಕ ಸತ್ಯೇಂದ್ರ ಪೈ, ನಿರ್ದೇಶಕ ರಝಾಕ್ ಪುತ್ತೂರು, ವಾಲ್ಟರ್ ನಂದಳಿಕೆ, ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ಚಿತ್ರ ನಿರ್ದೇಶಕ ರಜಾಕ್ ಪುತ್ತೂರು, ಭೋಜರಾಜ್ ವಾಮಂಜೂರ್, ಪ್ರಸನ್ನ ಶೆಟ್ಟಿ, ವಾಮನ ಕಾಮತ್, ಸುಚಿತ್ರ ನಾಯಕ್, ತ್ರಿಶುಲ್ ಶೆಟ್ಟಿ, ಮಯೂರ್ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ, ಬಿ ರವೀಂದ್ರ ಶೆಟ್ಟಿ, ಸುದರ್ಶನ್ ಶಂಕರ್, ರಮೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಕುಮಾರ್ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.

ಪ್ರಾದೇಶಿಕ ವಾರ್ತೆಗಳು

“ಪಿಲಿ ಪಂಜ” ಸಿನಿಮಾದ ಟೀಸರ್ ಬಿಡುಗಡೆ. ನವಂಬರ್ 7 ರಂದು ಸಿನಿಮಾ ತೆರೆಗೆ

ಮಂಗಳೂರು: ಯಸ್ ಬಿ ಗ್ರೂಪ್ಸ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿ ತಯಾರಾದ ಬಹು ನಿರೀಕ್ಷಿತ “ಪಿಲಿಪಂಜ” ತುಳು ಸಿನಿಮಾದ ಟೀಸರ್ ನ್ನು ನಿರ್ದೇಶಕ ದೇವದಾಸ ಕಾಪಿಕಾಡ್ ಬಿಡುಗಡೆಗೊಳಿಸಿದರು. ಟೀಸರ್ ನ್ನು ವೀಕ್ಷಿಸಿದ ದೇವದಾಸ್ ಕಾಪಿಕಾಡ್ ಅವರು ತುಳುವಿನಲ್ಲಿ ಮತ್ತೊಂದು ಸದಭಿರುಚಿಯ ಸಿನಿಮಾವನ್ನು ಪಿಲಿಪಂಜದ ಮೂಲಕ ನೋಡಲು ಸಾಧ್ಯವಿದೆ ಎಂದರು. ಸಿನಿಮಾ ತಂಡಕ್ಕೆ ಶುಭ ಹಾರೈಸಿದರು.ತುಳು ಸಿನಿಮಾರಂಗದಲ್ಲಿ ವಿಭಿನ್ನ ತಂತ್ರಜ್ಞಾನದಿಂದ ತಯಾರಾದ “ಪಿಲಿಪಂಜ” ಸಿನಿಮಾ ನವೆಂಬರ್ 7ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ, ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದೆ, ಟೀಸರ್ ನಮ್ಮನ್ನು ಇನ್ನಷ್ಟು ಕುತೂಹಲ ಮೂಡಿಸವಂತೆ ಮಾಡಿದೆ, ಸಿನಿಮಾ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ. ತುಳು ಕಲಾಭಿಮಾನಿಗಳು ನವೆಂಬರ್ 7ರಂದು ಬಿಡುಗಡೆಯಾಗುವ ಈ ಸಿನಿಮಾವನ್ನು ನೋಡಿ ಚಿತ್ರತಂಡವನ್ನು ಬೆಂಬಲಿಸಬೇಕೆಂದು ಚಿತ್ರತಂಡ ವಿನಂತಿಸಿದೆಈ ಸಂದರ್ಭದಲ್ಲಿ ನಿರ್ಮಾಪಕ ಪ್ರತೀಕ್ ಯು ಪೂಜಾರಿ ಕಾವೂರು , ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಹಾಗೂ ಕಲಾವಿದ ರಮೇಶ್ ರೈ ಕುಕ್ಕುವಳ್ಳಿ ಉಪಸ್ಥಿತರಿದ್ದರು..

ಪ್ರಾದೇಶಿಕ ವಾರ್ತೆಗಳು

‘ಗಂಭೀರ ಕಥಾವಸ್ತು ಇರುವ ತುಳು ಸಿನಿಮಾಗಳನ್ನು ಪ್ರೋತ್ಸಾಹಿಸಿ’ ನಟ ನವೀನ್ ಡಿ.ಪಡೀಲ್ ಮನವಿ

ಮಂಗಳೂರು : ತುಳುನಾಡಿನ ಪ್ರೇಕ್ಷಕರು ನಾಟಕ ಮತ್ತು ಸಿನಿಮಾದಲ್ಲಿ ಹೆಚ್ಚಾಗಿ ಹಾಸ್ಯವನ್ನು ಬಯಸುತ್ತಾರೆ. ಕೇವಲ ಹಾಸ್ಯದಿಂದ ತುಳು ಚಿತ್ರರಂಗ ಬೆಳೆಯಲು ಸಾಧ್ಯವಿಲ್ಲ. ಹಾಸ್ಯದ ಜತೆಗೆ ಗಂಭೀರ ಕಥಾವಸ್ತು ಇರುವ ಸಿನಿಮಾಗಳನ್ನು ಪ್ರೋತ್ಸಾಹಿಸ ಬೇಕು ಎಂದು ಜನಪ್ರಿಯ ನಟ ನವೀನ್ ಡಿ.ಪಡೀಲ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಅವರು ‘ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ’ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು ತುಳು ಸಿನಿಮಾದಲ್ಲಿ ಇತ್ತೀಚೆಗೆ ಹೊಸಬರು ಹಾಸ್ಯದ ಜತೆಗೆ ಉತ್ತಮ ಕಥಾವಸ್ತು ಕೂಡ ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಹಾಸ್ಯದ ಜತೆಗೆ ಒಂದು ಗಂಭೀರ ವಸ್ತು ವಿಷಯಕ್ಕೆ ಆದ್ಯತೆ ನೀಡಿರುವ ಕಾರಣಕ್ಕೆ ಮಲಯಾಳಂನ ಚಿತ್ರಗಳು ಅತೀ ಹೆಚ್ಚು ಪ್ರೇಕ್ಷಕರನ್ನು ಹೊಂದಿದೆ ಎಂದರು.ಇತ್ತೀಚಿನ ರಿಯಾಲಿಟಿ ಶೋ, ಚಲನಚಿತ್ರಗಳಲ್ಲಿ ನೈಜ ಹಾಸ್ಯಕ್ಕೆ ಬೆಲೆ ಇಲ್ಲ. ಗಂಭೀರ ವಸ್ತು ವಿಷಯದ ಸಂದರ್ಭದಲ್ಲಿ ಹಾಸ್ಯ ಮಾಡಲೇಬಾರದು. ಇದುವರೆಗೂ ಆ ನಿಯಮ ಪಾಲಿಸಿಕೊಂಡು ಬಂದಿದ್ದೇನೆ. ಇತ್ತೀಚೆಗೆ ನಾನು ಪೋಷಕ ಪಾತ್ರಗಳನ್ನು ಹೆಚ್ಚಾಗಿ ಮಾಡುತ್ತಿದ್ದು ಅದಕ್ಕೆ ನಾಡಿನ ಹಿರಿಯ ಕಲಾವಿದರಿಂದ ಮೆಚ್ಚುಗೆ ಸಿಗುತ್ತಿದೆ. ಮತ್ತೆ ಹಾಸ್ಯ ಪಾತ್ರಗಳನ್ನೇ ಮಾಡಬೇಕೆ ಎಂಬ ಗೊಂದಲ ನನ್ನಲ್ಲಿದೆ ಎಂದರು.ನಮ್ಮಲ್ಲಿ ಸೌಹಾರ್ದತೆ, ಹೊಂದಾಣಿಕೆ ಬೇಕು. ಇದೇ ವಿಷಯವನ್ನಿಟ್ಟುಕೊಂಡು ‘ನಿರೆಕರೆ’ ಸಿನೆಮಾ ಮಾಡುತ್ತಿದ್ದೇವೆ. ಸಿನೆಮಾದಲ್ಲಿ ದೈವರಾಧನೆ ತೋರಿಸುವುದು ತಪ್ಪಲ್ಲ. ಆದರೆ ಅದನ್ನು ಇದ್ದ ಹಾಗೆ ತೋರಿಸಬೇಕು. ವಿಕ್ಕೃತವಾಗಿ ತೋರಿಸಬಾರದು. ‘ಕಾಂತಾರ’ ಸಿನೆಮಾದಲ್ಲಿ ದೈವಾರಾಧನೆ ತೋರಿಸಿದ ಬಗ್ಗೆ ಕೆಲವರು ಟ್ರೋಲ್ ಮಾಡಿರಬಹುದು. ಆದರೆ ‘ಕಾಂತಾರ’ದಿಂದಾಗಿ ದೈವಾರಾಧನೆಯಶಕ್ತಿ ಏನೆಂಬುದು ಎಲ್ಲರಿಗೂ ಗೊತ್ತಾಗಿದೆ ಎಂದು ಪಡೀಲ್ ಹೇಳಿದರು.ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸದ್ಯ ಜಗನ್ನಾಥ ಶೆಟ್ಟಿ ಬಾಳ ಕಾರ್ಯಕ್ರಮ, ಉದ್ಘಾಟಿಸಿದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಮಾಜಿ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿದ್ದರು. ಪುಷ್ಪರಾಜ್ ಬಿ.ಎನ್. ವಂದಿಸಿದರು. ಪತ್ರಕರ್ತರ ಸಂಘದ ಪ್ರಧಾನಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.

Scroll to Top