ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

‘ಸಂಗೀತದ ಆಕರ್ಷಣೆಯಿಂದ ಬದಲಾದ ಬದುಕು’ – ಸಂಗೀತ ನಿರ್ದೇಶಕ ಡಾ.ಗುರುಕಿರಣ್ ಅಭಿಮತ

ಮಂಗಳೂರು : ವೈದ್ಯನಾಗಬೇಕೆಂದು ಹೆತ್ತವರು ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿಸಿದ್ದರು. ವೈದ್ಯಕೀಯ ಕಾಲೇಜುಆರಂಭಕ್ಕೆ ಸ್ವಲ್ಪ ಸಮಯವಿದೆ ಎಂದು ಸಮಯ ಕಳೆಯಲು ಮಂಗಳೂರಿನ ಸರ್ಕಾರಿ ಕಾಲೇಜಿಗೆ ಸೇರಿದೆ. ಅಲ್ಲಿ ಕಲಾ ಕ್ಷೇತ್ರ ಆಕರ್ಷಿಸಿತು. ಹಾಡುಗಾರನಾದೆ, ನಟನಾದೆ, ಸಂಗೀತ ನಿರ್ದೇಶಕನಾದೆ. ಸಂಗೀತದ ಆಕರ್ಷಣೆಯಿಂದ ಬದುಕೇ ಬದಲಾಯಿತು ಎಂದು ಸಂಗೀತ ನಿರ್ದೇಶಕ, ಬೆಂಗಳೂರು ವಿ.ವಿ. ಗೌರವ ಡಾಕ್ಟರೇಟ್ ಪುರಸ್ಕೃತರಾದ ಗುರುಕಿರಣ್ ತಮ್ಮ ಸಾಧನೆಯ ಹಾದಿಯನ್ನು ತೆರೆದಿಟ್ಟರು.ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ ನಮ್ಮ ಬದುಕನ್ನು ನಾವೇ ವಿನ್ಯಾಸಗೊಳಿಸಬೇಕು. ಕನಸು ಕಟ್ಟುವ ಬದಲು ಇಷ್ಟವಾದ ಕೆಲಸವನ್ನು ಮಾಡುತ್ತಾ ಹೋಗಬೇಕು. ಸಂಗೀತವೇ ನನ್ನ ಮನಸ್ಸಿಗೆ ಖುಷಿ ನೀಡುವ ಕೆಲಸ. ಅದನ್ನು ನಿಷ್ಠೆಯಿಂದ ಮಾಡಿದ ಕಾರಣ ಯಶಸ್ಸು ಸಾಧ್ಯವಾಯಿತು ಎಂದರು.ಸರ್ಕಾರಿ ಕಾಲೇಜಿನಲ್ಲಿ ಕಲಿತ ಕಾರಣ ಎಲ್ಲರೊಂದಿಗೆ ಬೆರೆಯುವ ಗುಣ ಹಾಗೂ ಬದುಕಿನ ಸವಾಲುಗಳನ್ನು ಎದುರಿಸುವ ಛಲ ಬೆಳೆಯಿತು. ನನ್ನದೇ ಆದ ಸಂಗೀತ ತಂಡ ಕಟ್ಟಿ ರಸಮಂಜರಿ ಕಾರ್ಯಕ್ರಮ ನಡೆಸುತಿದ್ದೆ. ಮಾವನ ಹೋಟೆಲ್‌ನ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ದೊರೆತ ಕಾರಣ ಸಂಗೀತದ ಎಲ್ಲ ಉಪಕರಣಗಳನ್ನು ನುಡಿಸಲು ಅಭ್ಯಾಸ ನಡೆಸಿದೆ. ಅಲ್ಲಿಂದ ಸಂಗೀತವನ್ನೇ ವೃತ್ತಿಯಾಗಿಸುವ ಬಯಕೆ ಮೂಡಿತು. ನಾನು ಸಂಗೀತದ ಶಿಕ್ಷಣ ಪಡೆದವನಲ್ಲ. ಸಂಗೀತದ ಪಯಣದಲ್ಲಿ ಹಂತಹಂತವಾಗಿ ಕಲಿಯುತ್ತಾ ಬಂದವನು. ನಾನು ಗಾಯಕ ಆಗಲು ಹೋದೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಮುಂದೆ ಬದುಕು ಅರಿಸಿ ಬೆಂಗಳೂರಿಗೆ ಬಂದಾಗ ವಿ.ಮನೋಹರ್, ಉಪೇಂದ್ರ ಮುಂತಾದವರು ಗೆಳೆಯರಾದರು. ನನ್ನೊಳಗಿನ ಸಂಗೀತಗಾರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು ಎಂದು ಗುರುಕಿರಣ್ ಹೇಳಿದರು.ಪ್ರತಿಭೆ ಇದ್ದವರಿಗೆ ಸಂಗೀತ ಕ್ಷೇತ್ರದಲ್ಲಿ ಭವಿಷ್ಯ ಇದೆ. ಮಂಗಳೂರಿನ ಪ್ರತಿಭೆಗಳು ಸೇರಿದಂತೆ 16ಕ್ಕೂ ಅಧಿಕ ಹೊಸ ಗಾಯಕ, ಗಾಯಕಿಯರನ್ನು ರನ್ನು ಸಿನಿಮಾಕ್ಕೆ ಪರಿಚಯಿಸಿದ್ದೇನೆ. ಅತ್ಯಾಧುನಿಕ ತಂತ್ರಜ್ಞಾನ ಬಂದ ಬಳಿಕ ಸಿನಿಮಾ ಹಾಗೂ ಹಿನ್ನೆಲೆ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹೊಸತನಕ್ಕೆ ನಮ್ಮನ್ನು ತೆರೆದುಕೊಳ್ಳಬೇಕು. ದೊರೆತ ಅವಕಾಶವನ್ನು ಬಳಸಿ ಯಶಸ್ಸಿನ ಹಾದಿಯಲ್ಲಿ ಸಾಗಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.ಸಿನಿಮಾದಲ್ಲಿ ಶೋಷಣೆ ತಡೆಯಲು ಕೇರಳ ಮಾದರಿ ಸಮಿತಿ ರಚಿಸ ಬೇಕು ಎನ್ನುವ ಆಗ್ರಹ ಇರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ ಶೋಷಣೆ ಎಲ್ಲ ರಂಗದಲ್ಲೂ ಇದೆ. ಸಿನಿಮಾಕ್ಕೆ ಮಾತ್ರ ಸಮಿತಿ ರಚಿಸುವುದರಲ್ಲಿ ಅರ್ಥವಿಲ್ಲ.ಪ್ರತಿಯೊಂದಕ್ಕೂ ಕಮಿಟಿ ಮಾಡಿದ್ರೆ ಕೆಲಸ ಮಾಡೋಕ್ಕೆ ಆಗಲ್ಲ. ಅಲ್ಲಿಂದ ಸಮಸ್ಯೆಗಳು ಶುರುವಾಗುತ್ತೆ. ಭ್ರಷ್ಟಾಚಾರ ಜಾಸ್ತಿ ಆಗುತ್ತೆ ಅಷ್ಟೇ. ಕೆಲಸ ಇದ್ದವರು ಯಾರೂ ಇಂತಹ ಒತ್ತಾಯ ಮಾಡಲ್ಲ ಎಂದರು.ಹಿರಿಯ ಛಾಯಾಗ್ರಾಹಕ ಯಜ್ಞ ಮಂಗಳೂರು ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್‌ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ .ಆರ್., ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು. ಖಜಾಂಜಿ ಪುಷ್ಪರಾಜ್.ಬಿ.ಎನ್. ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ಅಂಬೇಡ್ಕರ್ ಪ್ರತಿಮೆಯೊಂದಿಗೆ ಅಂಬೇಡ್ಕರ್ ವೃತ್ತ ನಿರ್ಮಾಣ ಯೋಜನೆಗೆ ಚಾಲನೆ

ಮಂಗಳೂರು,ಸೆ.20: ಸ್ಫೂರ್ತಿದಾಯಕವಾದ ಡಾ ಅಂಬೇಡ್ಕರ್ ಪ್ರತಿಮೆಯೊಂದಿಗೆ ಆಕರ್ಷಕ ಅಂಬೇಡ್ಕರ್ ವೃತ್ತ ನಿರ್ಮಾಣದ ನಕ್ಷೆ – ವಿನ್ಯಾಸವನ್ನು ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಅವರು ಈ ಯೋಜನೆಯ ಪ್ರಾಯೋಜಕತ್ವ ವಹಿಸಿಕೊಂಡಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ ಮಣಿಮೇಖಲಾಯ್ ಅವರಿಗೆ ನೀಡಿ, ಈ ಯೋಜನೆಯನ್ನು ಅತೀ ಶೀಘ್ರದಲ್ಲಿ ಅನುಷ್ಠಾನ ಮಾಡಿ ಡಿ ,6,.2024 ಉದ್ಘಾಟನೆ ಮಾಡಲು ಅನುವು ಮಾಡಿ ಕೊಡಬೇಕು ಎಂದು ಕೋರಿದರು.ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಉಪ ಮೇಯರ್ ಸುನೀತಾ, ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಸ್ಥಳೀಯ ಕಾರ್ಪೋರೇಟರ್ ಎ ಸಿ ವಿನಯಚಂದ್ರ, ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಭರತ್ ಕುಮಾರ್, ಯೂನಿಯನ್ ಬ್ಯಾಂಕ್ ಒಫ್ ಇಂಡಿಯಾ ಮಂಗಳೂರು ವಲಯ ಮುಖ್ಯಸ್ತೆ ಶ್ರೀಮತಿ ರೇನು ನಾಯರ್,ಡಿ ಜಿ ಎಂ, ಎ ರಾಜಮಣಿ, ಎ ಜಿ ಎಂ, ಎನ್ ಗೋಪಿನಾಥ್, ಕಾರ್ಪೋರೇಟರ್ ಮನೋಜ್, ಅಂಬೇಡ್ಕರ್ ವೃತ್ತದ ನಕ್ಷೆ – ವಿನ್ಯಾಸ ಸಿದ್ಧ ಪಡಿಸಿರುವ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ – ಸಂಸ್ಥೆಗಳ ಮಹಾಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ನಗರದ ನಾಗರಿಕ ಸಂಘಟನೆಗಳ ಮುಖಂಡರಾದ ಯೋಗೀಶ್ ಶೆಟ್ಟಿ ಜೆಪ್ಪು, ಮೋಹನಾಂಗಯ್ಯ ಸ್ವಾಮಿ, ರಘು ಎಕ್ಕಾರ್, ಲಕ್ಷ್ಮಣ್ ಕಾಂಚನ್, ಕಾಂಗ್ರೆಸ್ ನಾಯಕರಾದ ಪಿ ವಿ ಮೋಹನ್, ಮಾಜಿ ಶಾಸಕ ಜೆ ಆರ್ ಲೋಬೊ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಕಲ್ಜಿಗ ಸಿನಿಮಾ ನೋಡಿ ಮೆಚ್ಚಿದ ರಿಷಬ್ ಶೆಟ್ಟಿ

ಮಂಗಳೂರು: ಕಾಂತಾರ ಸಿನಿಮಾ ಖ್ಯಾತಿಯ ನಟ ರಿಷಬ್ ಶೆಟ್ಟಿ ಅರ್ಜುನ್ ಕಾಪಿಕಾಡ್ ಅಭಿನಯದ ಕಲ್ಜಿಗ ಸಿನಿಮಾವನ್ನು ಥಿಯೇಟರ್ ನಲ್ಲಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗೆ ರಿಷಬ್ ಶೆಟ್ಟಿ ಅವರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಲ್ಜಿಗ ಸಿನಿಮಾವನ್ನು ವೀಕ್ಷಿಸಿದರು. ಕಲ್ಜಿಗ ಸಿನಿಮಾದಲ್ಲಿ ಬಡ ಕುಟುಂಬವೊಂದು ಕೊರಗಜ್ಜನನ್ನು ಆರಾಧಿಸಿಕೊಂಡು ಬರುವ ಕತೆ, ಮತ್ತು ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗ ಕುಟುಂಬದ ಬೆನ್ನಿಗೆ ನಿಲ್ಲುವ ಕೊರಗಜ್ಜ, ಅಧರ್ಮದಲ್ಲಿ ನಡೆಯುವವರನ್ನು ಶಿಕ್ಷಿಸುವ ಕತೆ ರಿಷಬ್ ಶೆಟ್ಟಿ ಅವರಿಗೆ ತುಂಬಾ ಇಷ್ಟವಾಯಿತು. ಸಿನಿಮಾದ ಕ್ಯಾಮರಾ ವಕ್೯, ಹಿನ್ನಲೆ ಸಂಗೀತವನ್ನು ರಿಷಬ್ ಮೆಚ್ಚಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ಪ್ರಗತಿ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಶನಿಲ್ ಗುರು, ನಟ ಅರ್ಜುನ್ ಕಾಪಿಕಾಡ್, ನಿರ್ಮಾಪಕ ಶರತ್ ಕುಮಾರ್ , ನಿರ್ದೇಶಕ ಸುಮನ್ ಸುವರ್ಣ, ಸಿನಿಮಾ ವಿತರಕ ಸಚಿನ್ ಉಪ್ಪಿನಂಗಡಿ, ಶ್ಲಾಘ ಸಾಲಿಗ್ರಾಮ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಮಹಾನಗರ ಪಾಲಿಕೆಯ ಮುಂದಿನ ಅವಧಿಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ ಬಿಜೆಪಿ.

ಮಂಗಳೂರು: ಮಹಾನಗರ ಪಾಲಿಕೆಯ ಮುಂದಿನ ಅವಧಿಗೆ ಮೇಯರ್ ಅಭ್ಯರ್ಥಿತನಕ್ಕೆ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 17 ಮನಪಾ ಸದಸ್ಯರಾಗಿರುವ ಮನೋಜ್ ಹಾಗೂ ಉಪಮೇಯರ್ ಅಭ್ಯರ್ಥಿತನಕ್ಕೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 58ರ ಮನಪಾ ಸದಸ್ಯರಾಗಿರುವ ಶ್ರೀಮತಿ ಭಾನುಮತಿ ಪಿ.ಎಸ್. ಅವರನ್ನು ಭಾರತೀಯ ಜನತಾ ಪಾರ್ಟಿಯ ಕಡೆಯಿಂದ ಆಯ್ಕೆಮಾಡಲಾಗಿದೆ. ಈ ಆಯ್ಕೆ ಪ್ರಕ್ರಿಯೆಯು ದ.ಕ. ಜಿಲ್ಲಾ ಕಛೇರಿಯಲ್ಲಿ ಸಭೆಯಲ್ಲಿ ನಡೆಯಿತು ಎಂದು ದ. ಕ. ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ.ಶೇಟ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ವಾಮಂಜೂರು ಶಾರದಾ ಮಹೋತ್ಸವದ ಕಾರ್ಯಾಲಯ ಉದ್ಘಾಟನೆ

ಮಂಗಳೂರು: ಶ್ರೀ ರಕ್ತೇಶ್ವರಿ ಮತ್ತು ‌ಪಂಚದೇವತಾ ಸಾನಿಧ್ಯ ಶ್ರೀರಾಮನಗರ,ವಾಮಂಜೂರು‌ ಹಾಗೂ ವಾಮಂಜೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ‌ ಸಮಿತಿ(ರಿ)ವತಿಯಿಂದ ಅಕ್ಟೋಬರ್ 9‌ರಿಂದ 13‌ರವರೆಗೆ ವಾಮಂಜೂರಿನ‌ ಕೇಂದ್ರ ಮೈದಾನದಲ್ಲಿ “ವಾಮಂಜೂರು ಶಾರದಾ ಮಹೋತ್ಸವ” ನಡೆಯಲಿದ್ದು,ಇದರ‌ ಕಾರ್ಯಾಲಯವನ್ನ ವಾಮಾಂಜೂರಿನ‌ ಬಾವ ಬಿಲ್ಡರ್ಸ್ ನ ಕಟ್ಟಡದಲ್ಲಿ ಇಂದು(ಸೆ.17) ಉದ್ಘಾಟಿಸಲಾಯಿತು.ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿ ಪ್ರಮುಖರಾದ ಚಂದ್ರಶೇಖರ ರಾಮನಗರ,ಸದಾನಂದ ಪೂಜಾರಿ,ಮೋಹನ್ ಪಚ್ಚನಾಡಿ,ರಾಕೇಶ್ ಶೆಟ್ಟಿ ಅಮೃತನಗರ,ಅಜಯ್ ಮಂಗಳನಗರ,ಬಿಪಿನ್ ವಾಮಂಜೂರು,ಗೋಪಾಲ್ ದೇವಿನಗರ, ಸುರೇಂದ್ರ ಗುರುಪುರ, ನವೀನ್ ಅಮೃತ ನಗರ,ವೆಂಕಪ್ಪ‌ ಅಮೃತ ನಗರ,ನವೀನ್‌ ಶೆಟ್ಟಿ ಸಂತೋಷ್ ನಗರ ಹಾಗೂ ಸಮಿತಿ‌ ಸದಸ್ಯರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಕರುಣಾಕರ ಶೆಟ್ಟಿ ಮಧ್ಯಗುತ್ತು ಅವರಿಗೆ ಕೈಗಾರಿಕಾ ಉದ್ಯಮಿ ಪುರಸ್ಕಾರ

ಮಂಗಳೂರು: ಸ್ಟೇಟ್ ಬ್ಯಾಂಕ್ ಅಪ್ ಇಂಡಿಯಾ ಲೈಪ್ ಇನ್ ವಸ್ಟ್ ಮೆಂಟ್ ಪ್ಲಾನ್ ವಿಭಾಗ ಮಂಗಳೂರು ಇದರ ವತಿಯಿಂದ ಉತ್ತಮ ಕೈಗಾರಿಕಾ ಉದ್ಯಮಿ ಎಂಬ ಪುರಸ್ಕಾರವನ್ನು ಮುಂಬಯಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಅವರಿಗೆ ಉಡುಪಿ ಕಚೇರಿಯಲ್ಲಿ ನೀಡಲಾಯಿತು. ಎಸ್ ಬಿ ಐ ಲೈಪ್ ಕರ್ನಾಟಕ ವಲಯ ಬೆಂಗಳೂರು ಕೇಂದ್ರ ಕಚೇರಿ ರಿಜನಲ್ ಮ್ಯಾನೇಜರ್ ಪ್ರಕಾಸ್ ದುರ್ಗದ ಮಠ್, ಮಂಗಳೂರು ಕೇಂದ್ರ ಕಚೇರಿ ಡಿವಿಜನಲ್ ಮ್ಯಾನೇಜರ್ ಪ್ರಕಾಸ್ ಅಚಾರ್ಯ, ಎಲ್ ಎನ್ ಡಿ ಮ್ಯಾನೇಜರ್ ವನಿತಾ ರಾವ್, ವಿವೇಕ್ ಅಧಿಕಾರಿ ಆನಂದ್ , ಅಶ್ವಿನಿ ಪಿ ಶೆಟ್ಟಿ ಮಧ್ಯ, ಪುಷ್ಷರಾಜ್ ಶೆಟ್ಟಿ ಮಧ್ಯ ಮುಂತಾದವರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ವಸತಿ ರಹಿತರಿಗೆ ನಿವೇಶನ ಒದಗಿಸಲು ಪ್ರಥಮ ಆದ್ಯತೆ – ಸದಾಶಿವ ಉಳ್ಳಾಲ್

ಮಂಗಳೂರು,ಸೆ.17; ನಿವೇಶನ ಮತ್ತು ವಸತಿ ರಹಿತರಿಗೆ ಕಾನೂನು ರೀತಿಯಲ್ಲಿ ನಿವೇಶನ ಒದಗಿಸಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಆದ್ಯತೆ ಮತ್ತು ಎಲ್ಲಾ ರೀತಿಯ ನೆರವು ನೀಡುವುದಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.ಅವರು ಮಂಗಳೂರು ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ದ ಸದಸ್ಯರಿಗೆ ಷೇರು ಪತ್ರ ವಿತರಿಸಿ ಮಾತನಾಡಿದರು.ಮೂಡಾ ಕಚೇರಿಯಲ್ಲಿ ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ನನ್ನ ಗಮನಕ್ಕೆ ತರಬಹುದಾಗಿದೆ. ಅದನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಪತ್ರಕರ್ತರು ಶ್ರಮ ಜೀವಿಗಳಾಗಿದ್ದು, ಅವರ ನಿವೇಶನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಪೂರಕ ವಾಗಿ ಸ್ಪಂದಿಸಲಾಗುವುದು ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ರೋಟರಿ ಗವರ್ನರ್, ಉದ್ಯಮಿ ಹಾಗೂ ಸಮಾಜ ಸೇವಕ ಪ್ರಕಾಶ್ ಕಾರಂತ್ ಮಾತನಾಡಿ ನಾನು ಹಲವಾರು ಸಂಘ ಸಂಸ್ಥೆಗಳ ಸಾಮಾಜಿಕ ಸೇವೆಯನ್ನು ಗುರುತಿಸಿ ಅವರಿಗೆ ನಿವೇಶನಗಳನ್ನು ನೀಡಿದ್ದೇನೆ. ಆರ್ಥಿಕವಾಗಿ ಹಿಂದುಳಿದ ಹಿರಿಯ ಪತ್ರಕರ್ತರಿಗೂ ಸಹಕಾರಿ ಸಂಘದ ಮೂಲಕ ನಿವೇಶನ ನೀಡಲು ಸಹಕರಿ ಸುವುದಾಗಿ ಅವರು ತಿಳಿಸಿದರು. ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರ್ಹ ಪತ್ರಕರ್ತರಿಗೆ ಸರಕಾರದ ನೆರವಿನಿಂದ ಸಹಕಾರ ಸಂಘದ ಮೂಲಕ ನಿವೇಶನವನ್ನು ಪಡೆಯಲು ಪ್ರಯತ್ನಿಸುವುದಾಗಿ ಹೇಳಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಾಂಡುರಂಗ ಆಚಾರ್ಯ ಉಪಸ್ಥಿತರಿದ್ದರು. ಸಹಕಾರ ಸಂಘದ ನಿರ್ದೇಶಕ ಪುಷ್ಪರಾಜ್ ಬಿ.ಎನ್. ವಂದಿ ಸಿದರು. ಉಪಾಧ್ಯಕ್ಷ ಭಾಸ್ಕರ್ ರೈ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಸೆ.20 ರಂದು ಡಾ.ಗುರುಕಿರಣ್ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಸೆ. 20ರಂದು ಬೆಳಗ್ಗೆ 11ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ, ಬೆಂಗಳೂರು ವಿ.ವಿ. ಗೌರವ ಡಾಕ್ಟರೇಟ್ ಪುರಸ್ಕೃತರಾದ ಗುರುಕಿರಣ್ ಭಾಗವಹಿಸಿ ಸಂವಾದ ನಡೆಸಲಿದ್ದಾರೆ.ಹಿರಿಯ ಛಾಯಾಗ್ರಾಹಕ ಯಜ್ಞ ಮಂಗಳೂರು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸುವರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ .ಆರ್. ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಜಂಪಿಂಗ್ ಸ್ಟಾರ್ ಅರವಿಂದ್ ಬೋಳಾರ್‌ಗೆ ಮಾಧ್ಯಮದವರೆಂದರೆ ‘ಡೋಂಟ್‌ಕೇರ್

ಮಂಗಳೂರು: ತನ್ನನ್ನು ತುಳು ಚಿತ್ರರಂಗದ ನಂ.1 ಸ್ಟಾರ್ ವ್ಯಾಲ್ಯೂವಿರುವ ಹಾಸ್ಯ ನಟನೆಂದುಕೊಂಡಿರುವ ಅರವಿಂದ ಬೋಳಾರ್ ಅವರು ‘ಚಾ ಪರ‍್ಕ’ದ ಮೂಲಕ ದೇವದಾಸ್ ಕಾಪಿಕಾಡ್ ಅವರ ಕಾರಣದಿಂದ ರಂಗಭೂಮಿಯಲ್ಲಿ ಮಿಂಚಿ ಬೆಳಕಿಗೆ ಬಂದರು. ‘ಚಾ ಪರ‍್ಕ’ದ ನಂತರ ‘ಕಲಾಸಂಗಮ’ದ ವಿಜಯಕುಮಾರ್ ಕೊಡಿಯಾಲ್‌ಬೈಲ್ ಜೊತೆ ಸೇರಿದ ಅರವಿಂದ ಬೋಳಾರ್, ನಂತರ ಲ| ಕಿಶೋರ್ ಡಿ. ಶೆಟ್ಟಿಯವರ ‘ಲಕುಮಿ’ ತಂಡ ಸೇರಿದರು.ಅಲ್ಲಿಂದ ನಂತರ ಮತ್ತೆ ‘ಚಾ ಪರ‍್ಕ’ಕ್ಕೆ ಬಂದ ಈ ಜಪ್ಪಿಂಗ್ ಸ್ಟಾರ್‌ನ್ನು ಇದೀಗ ‘ಲಕುಮಿ’ ತಂಡಕ್ಕೆ ಬರಮಾಡಿಕೊಳ್ಳುವಲ್ಲಿ ಕಿಶೋರ್ ಡಿ.ಶೆಟ್ಟಿಯವರು ಯಶಸ್ವಿಯಾಗಿದ್ದಾರೆ.ಹಾಸ್ಯ ಲೋಕದಲ್ಲಿ ಇವರ ನಟನೆಗೆ ನಗದವರೇ ಇಲ್ಲ. ಅದನ್ನೇ ತನ್ನ ಸ್ಟಾರ್ ವ್ಯಾಲ್ಯೂ ಎಂದು ತಿಳಿದುಕೊಂಡಿರುವ ಅರವಿಂದ ಬೋಳಾರ್ ಈ ಹಂತಕ್ಕೆ ಬರಲು ಮಾಧ್ಯಮದವರೇ ಕಾರಣ.ಆದರೆ, ಮಾಧ್ಯಮದವರು ಎದುರಿಗೆ ಸಿಕ್ಕಿ ನಮಸ್ಕರಿಸಿದರೂ ‘ಡೋಂಟ್‌ಕೇರ್’ ಎನ್ನುತ್ತಿರುವ ಅರವಿಂದ ಬೋಳಾರ್ ತಾನು ನಡೆದು ಬಂದ ದಾರಿಯನ್ನು ಸಂಪೂರ್ಣ ಮರೆತಂತಿದೆ. ಅರವಿಂದ ಬೋಳಾರ್‌ರನ್ನು ರಂಗಭೂಮಿಗೆ ಪರಿಚಯಿಸಿದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಅವರಿಗೆ ಮಾಧ್ಯಮದವರೆಂದರೆ ಪಂಚಪ್ರಾಣ. ಆದರೆ, ‘ಜಂಪಿಂಗ್ ಸ್ಟಾರ್’ ಅರವಿಂದ ಬೋಳಾರ್‌ ಇದಕ್ಕೆ ತದ್ವಿರುದ್ಧ. ಮಾಧ್ಯಮದವರೆಂದರೆ ನಿರ್ಲಕ್ಷ್ಯ, ತಾತ್ಸಾರ ಮನೋಭಾವನೆ. ಯಾಕೆ ಅಂತ ಗೊತ್ತಿಲ್ಲ. ಈ ರೀತಿಯ ಅವರ ಅಸಡ್ಡೆ ವರ್ತನೆ ಮುಂದಿನ ದಿನಗಳಲ್ಲಿ ಅವರಿಗೆ ತಕ್ಕಪಾಠ ಕಲಿಸಲಿದೆ. ಕಾಲ ಒಂದೇ ರೀತಿ ಇರುವುದಿಲ್ಲ. ಆರಕ್ಕೇರಿದವನೂ ಮೂರಕ್ಕೇ ಇಳಿಯಲೇ ಬೇಕು ಅಲ್ಲವೇ?

ಪ್ರಾದೇಶಿಕ ವಾರ್ತೆಗಳು

“ಕಲ್ಜಿಗ“ ಸಿನಿಮಾ ನೋಡಿ ಆಮೇಲೆ ಮಾತಾಡಿ! – ವಿರೋಧಿಸುವವರಿಗೆ ಚಿತ್ರತಂಡ ಮನವಿ

ಮಂಗಳೂರು: “ದಕ್ಷಿಣ ಕನ್ನಡ ಉಡುಪಿಯಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದಾರೆ. ಸಿನಿಮಾ ನೋಡಿದವರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹೊರಗಿನಿಂದ ಒಂದಷ್ಟು ಭಿನ್ನ ಅಭಿಪ್ರಾಯ ಬರುತ್ತಿದೆ ಆದರೆ ನಮಗೆ ಜನರ ಅಭಿಪ್ರಾಯ ಮುಖ್ಯ. ನಮಗೆ ಭಕ್ತಿ ಪ್ರಧಾನ ಸಿನಿಮಾ ಮಾಡುವ ಹಂಬಲ ಇತ್ತು ಅದು ನೆರವೇರಿದೆ ಇನ್ನೂ ಹಲವರು ಸಿನಿಮಾ ನೋಡಿಲ್ಲ ಅವರೆಲ್ಲರೂ ಸಿನಿಮಾ ನೋಡಬೇಕು“ ಎಂದು ಕಲ್ಜಿಗ ಸಿನಿಮಾ ನಿರ್ದೇಶಕ ಸುಮನ್ ಸುವರ್ಣ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.”ಸಿನಿಮಾ ನೋಡಿದವರು ಇಂತಹ ಸಿನಿಮಾ ಇನ್ನಷ್ಟು ಬರಬೇಕು, ಇಂದಿನ ಯುವಜನತೆಗೆ ಇನ್ನಷ್ಟು ಭಯ ಭಕ್ತಿ ಬರುತ್ತೆ, ಸಿನಿಮಾದಲ್ಲಿ ದೈವ ಅಪಚಾರ ನಡೆದಿಲ್ಲ ಇದನ್ನು ಸಿನಿಮಾ ನೋಡದೆ ಇರುವವರು ಮಾಡುತ್ತಿದ್ದಾರೆ ಅವರು ಸಿನಿಮಾ ನೋಡಿ ಆಮೇಲೆ ಮಾತಾಡಬೇಕು“ ಎಂದವರು ಹೇಳಿದರು. ಚಿತ್ರದ ನಿರ್ಮಾಪಕ ಶರತ್ ಕುಮಾರ್ ಎ.ಕೆ. ಮಾತನಾಡಿ, ”ಸಿನಿಮಾದಲ್ಲಿ ಕೊರಗಜ್ಜನ ದೃಶ್ಯ ಬೇಡ ಎಂದು ದೈವಾರಾಧನಾ ರಕ್ಷಣಾ ಸಮಿತಿ ಮನವಿ ಮಾಡಿದೆ. ಆದರೆ ಇದನ್ನು ನಾನೊಬ್ಬನೇ ನಿರ್ಣಯ ಮಾಡಲು ಆಗುವುದಿಲ್ಲ. ಈ ಕುರಿತು ಸಿನಿಮಾ ತಂಡದ ಜೊತೆ ಕೂತು ನಿರ್ಣಯ ಮಾಡಬೇಕಿದೆ. ವಿರೋಧ ಮಾಡುವವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಆದರೆ ಅದೊಂದು ದೃಶ್ಯ ಬೇಡ ಎಂದಷ್ಟೇ ಹೇಳಿದ್ದಾರೆ. ನಾನು ಇಲ್ಲಿಯವನು ಅಲ್ಲದೆ ಇರಬಹುದು ಆದರೆ ನಿರ್ದೇಶಕ ಸುಮನ್ ಸುವರ್ಣ ಇಲ್ಲೇ ಹುಟ್ಟಿ ಬೆಳೆದವರು. ಹೀಗಾಗಿ ನಮಗೂ ಇಲ್ಲಿನ ದೈವಾರಾಧನೆ ಬಗ್ಗೆ ತಿಳಿದಿದೆ, ಕಳೆದ ಮೂರು ದಿನಗಳಲ್ಲಿ 15000ಕ್ಕೂ ಹೆಚ್ಚು ಮಂದಿ ಸಿನಿಮಾ ನೋಡಿದ್ದಾರೆ. ಅವರಿಗೆ ಬೇಸರ ಆಗಿಲ್ಲ ಮಾತಾಡುವವರು ಸಿನಿಮಾದ ಒಂದು ದೃಶ್ಯ ನೋಡಿ ಮಾತಾಡುತ್ತಿದ್ದಾರೆ ಅವರು ಪೂರ್ತಿ ಸಿನಿಮಾ ನೋಡಲಿ. ಬೇಕಾದರೆ ಅವರಿಗೆ ಒಂದು ಶೋ ವ್ಯವಸ್ಥೆ ಮಾಡುತ್ತೇವೆ ವೀಕ್ಷಿಸಿ ಅಭಿಪ್ರಾಯ ಹೇಳಲಿ“ ಎಂದರು.ನಾಯಕನಟ ಅರ್ಜುನ್ ಕಾಪಿಕಾಡ್ ಮಾತಾಡಿ, ”ಸಿನಿಮಾಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಕಲ್ಜಿಗ ಸಿನಿಮಾವನ್ನು ಒಮ್ಮೆ ನೋಡಿದವರು ಮತ್ತೆ ಮತ್ತೆ ನೋಡುತ್ತಿದ್ದಾರೆ. ಇದು ಖುಷಿಯ ವಿಚಾರ. ಎಲ್ಲರೂ ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿ“ ಎಂದರು.ನಟ ಶೋಭರಾಜ್ ಪಾವೂರು ಮಾತಾಡಿ, ”ನಡೆಯುತ್ತಿರುವ ವಿದ್ಯಾಮಾನಗಳೆಲ್ಲ ಸಾಮಾನ್ಯವಾದುದು. ಆದರೆ ಸಿನಿಮಾ ನೋಡಿದ ಜನರು ಮೆಚ್ಚಿಕೊಂಡಿದ್ದಾರೆ ಅದು ನಮ್ಮಲ್ಲಿ ಹುಮ್ಮಸ್ಸು ತುಂಬಿದೆ. ಒಬ್ಬ ಕಲಾವಿದನಿಗೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ನಾವೆಲ್ಲರೂ ತುಳುವರು ನಮ್ಮ ಸಂಸ್ಕೃತಿಗೆ ಅಪಚಾರವಾದರೆ ನಾವೆಲ್ಲರೂ ಒಟ್ಟಿಗೆ ನಿಂತು ಹೊರಾಡೋಣ. ಆದರೆ ಒಳ್ಳೆಯ ಪ್ರಯತ್ನವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸೋಣ“ ಎಂದರು.ವೇದಿಕೆಯಲ್ಲಿ ನಟ ರಂಜನ್ ಬೋಳೂರು, ಜ್ಯೋತಿಷ್ ಶೆಟ್ಟಿ, ಚಿತ್ರ ಹಂಚಿಕೆದಾರ ಸಚಿನ್ ಎ.ಎಸ್. ಉಪ್ಪಿನಂಗಡಿ, ರಕ್ಷಿತ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.ಚಿತ್ರಗಳು: ಸತೀಶ್ ಕಾಪಿಕಾಡ್

Scroll to Top